ಕರಾವಳಿ ಭಾಗದಲ್ಲಿ ಮುಂದುವರಿದ ಮಳೆ: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಶಾಲೆ-ಕಾಲೇಜುಗಳಿಗೆ ರಜೆ ಮುಂದುವರಿಕೆ
ಮುಂದಿನ ಎರಡು ದಿನಗಳ ಕಾಲ ಕರಾವಳಿಯಲ್ಲಿ ಭಾರೀ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಸೂಚನೆ ಕೊಟ್ಟಿದ್ದು, ಸುಮಾರು 200 ಮಿ.ಮೀ. ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಜಿಲ್ಲೆಯಾದ್ಯಂತ ಸೋಮವಾರ ಸಂಜೆಯಿಂದಲೇ ವರುಣನ ಅಬ್ಬರ ಜೋರಾಗಿದ್ದು, ಇಡೀ ರಾತ್ರಿ ಭಾರಿ ಮಳೆ ಸುರಿದಿದೆ. ಮಳೆಯ ತೀವ್ರತೆ ಗಮನಿಸಿದ ಡಿಸಿ ಮಂಗಳವಾರ ಬೆಳಗ್ಗೆಯೇ ಉಡುಪಿ ಜಿಲ್ಲೆಯಾದ್ಯಂತ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಆದೇಶಿಸಿದ್ದಾರೆ.
ಕಳೆದ ಸುಮಾರು 18 ಗಂಟೆಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದ ಜಿಲ್ಲೆಯ ತಗ್ಗು ಪ್ರದೇಶಗಳೆಲ್ಲವೂ ನೀರಿನಿಂದ ಆವೃತ್ತವಾಗಿವೆ. ನಗರ ಪ್ರದೇಶಗಳಲ್ಲಿ, ರಾಷ್ಟ್ರೀಯ ಹೆದ್ದಾರಿ ಹಾಗೂ ಸರ್ವಿಸ್ ರಸ್ತೆಗಳ ಮೇಲೆ ನೀರು ಹರಿಯುತ್ತಿದ್ದು ಕೃತಕ ನೆರೆ ಕಾಣಿಸಿಕೊಂಡಿದೆ. ಇದರಿಂದಾಗಿ ಹೆಚ್ಚಿನ ಕಡೆ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಸತತ ಮಳೆಯಿಂದ ಜಿಲ್ಲೆಯ ನದಿಗಳಲ್ಲಿ ನೀರಿನ ಮಟ್ಟ ನಿಧಾನವಾಗಿ ಏರುತ್ತಿದೆ. ಮಳೆಯೊಂದಿಗೆ ಗಾಳಿ ಇಲ್ಲದ ಕಾರಣ ಸದ್ಯಕ್ಕೆ ಜಿಲ್ಲೆಯಲ್ಲಿ ನೆರೆ ಭೀತಿ ಎದುರಾಗಿಲ್ಲ.
ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚನೆ :
ಭಾರೀ ಮಳೆ ಹಾಗೂ ಜೋರಾದ ಗಾಳಿಯಿಂದಾಗಿ ಮೀನುಗಾರರಿಗೆ ತೊಂದರೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ. ಭಾರೀ ಮಳೆಯಿಂದಾಗಿ ಸಮುದ್ರದಲ್ಲಿ ದೊಡ್ಡ ಗಾತ್ರದ ಅಲೆಗಳು ಏಳುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ.
ಗಂಗೊಳ್ಳಿಯಿಂದ ಕಂಚಗೋಡು ತನಕ ಕಡಲು ಭಯಾನಕ ಪರಿಯಲ್ಲಿ ಪ್ರಕ್ಷುಬ್ದವಾಗಿದ್ದು ಕಡಲತೀರದಲ್ಲಿ ಕಡಲಕೊರೆತ ತೀವ್ರವಾಗಿದೆ. ಮೀನುಗಾರರ ಬದುಕು ಆಯೋಮಯವಾಗಿದ್ದು,ಎಡೆಬಿಡದೆ ಸುರಿಯುತ್ತಿರುವ ಕುಂಭದ್ರೋಣ ಮಳೆ ಕಡಲಿನ ಪ್ರಕ್ಷುಬ್ದತೆಯನ್ನು ಮತ್ತಷ್ಟೂ ತೀವ್ರಗೊಳಿಸಿದ್ದು,ಕಡಲತೀರ ವಾಸಿಗಳು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬದುಕುವ ದಾರುಣ ಪರಿಸ್ಥಿತಿ ಸೃಷ್ಟಿಯಾಗಿದೆ.ದೈತ್ಯಕಾರದ ಕಡಲಲೆಗಳು ಖಾರ್ವಿ ಸಮಾಜದ ಮೀನುಗಾರರ ಮನೆಬದುಕನ್ನು ಸರ್ವನಾಶಗೊಳಿಸುತ್ತಿದೆ.ಕಡಲಕೊರೆತದ ತೀವ್ರತೆಗೆ ಹಲವು ಮನೆಗಳು ಹಾನಿಗೊಳಗಾಗಿದೆ. ಮೀನುಬಲೆಗಳು ಕೊಚ್ಚಿಹೋಗಿದೆ.ತೆಂಗಿನಮರಗಳು ಕಡಲ ಪಾಲಾಗಿದ್ದು ಮೀನುಗಾರರ ಬದುಕು ದುಸ್ತರವಾಗಿದೆ.ಸರ್ಕಾರ ಕೂಡಲೇ ಮೀನುಗಾರರ ಸಂಕಷ್ಟಕ್ಕೆ ಸ್ಪಂದಿಸಬೇಕಾಗಿದೆ.ಪ್ರತಿ ಮಳೆಗಾಲದಲ್ಲಿ ಕಡಲಕೊರೆತ ತೀವ್ರತೆ ಕಾಣುತ್ತಿದ್ದು ಈ ಸಮಸ್ಯೆಗೆ ಸರ್ಕಾರ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಪ್ರಬಲವಾದ ತಡೆಗೋಡೆ ನಿರ್ಮಾಣ ಮಾಡಬೇಕು.
ಪ್ರಸ್ತುತ ಕಡಲಕೊರೆತ ಸಂತ್ರಸ್ತ ಮೀನುಗಾರರಿಗೆ ಸರ್ಕಾರ ಸಮರ್ಪಕವಾದ ಆರ್ಥಿಕ ನೆರವಿನ ಪರಿಹಾರ ಕಲ್ಪಿಸಬೇಕಾಗಿರುವುದು ತುರ್ತು ಅದ್ಯತೆಯಾಗಿರುತ್ತದೆ.
ವರದಿ: ಸುಧಾಕರ್ ಖಾರ್ವಿ
Editor
www.kharvionline.com