ಕಡಲ ಪ್ರಕೋಪ ಇದೊಂದು ಸ್ಯಾಂಪಲ್ಲು ಮಾತ್ರ ಮುಂದೆ ಇದೆ ಮಾರಿಹಬ್ಬ

ನಿಸರ್ಗವನ್ನು ತನ್ನಷ್ಟಕ್ಕೆ ಬಿಟ್ಟಾಗ ಅತ್ಯುತ್ತಮ ಸಮತೋಲನಕರ ಸ್ಥಿತಿಯನ್ನು ಅದು ಸಾಧಿಸುತ್ತದೆ. ಪರಿಸರಕ್ಕೆ ಒಂದು ಕ್ರಮವಿದೆ, ಸಮತೋಲನವಿದೆ ಮತ್ತು ಸಾಮರಸ್ಯವಿದೆ ಬೇರೆ ಎಲ್ಲ ಜೀವಿಗಳಂತೆ ಮಾನವರಿಗೆ ಈ ಕ್ರಮಬದ್ದತೆಯಲ್ಲಿ ಪ್ರಮುಖ ಪಾತ್ರವಿದೆ ಈ ಪ್ರಮುಖ ಪಾತ್ರವನ್ನು ಸರಿಯಾಗಿ ನಿಭಾಯಿಸದೇ ಪರಿಸರದ ಮೇಲೆ ಸವಾರಿ ಮಾಡಿದರೆ ಪರಿಸರ ಖಂಡಿತಾವಾಗಿ ಸೇಡು ತೀರಿಸಿಕೊಳ್ಳುತ್ತದೆ ಅದರ ಪ್ರತಿಕಾರ ಮಾತ್ರ ಅತ್ಯಂತ ಘೋರವಾಗಿರುತ್ತದೆ ಎಂಬುದನ್ನು ಅನೇಕ ನೈಸರ್ಗಿಕ ವಿಕೋಪಗಳನ್ನು ಗಮನಿಸಿದಾಗ ಮನದಟ್ಟಾಗುತ್ತದೆ ಇದಕ್ಕೆ ಜ್ವಲಂತ ಉದಾಹರಣೆಯಾಗಿ ಹೊನ್ನಾವರ ಕಾಸರಕೋಡು ಟೊಂಕಾ ಕಡಲತೀರದಲ್ಲಿ ಖಾಸಗಿ ವಾಣಿಜ್ಯ ಬಂದರು ಕಾಮಗಾರಿಗಾಗಿ ನಿರ್ಮಾಣ ಮಾಡಿದ ರಸ್ತೆಯು ಭಾರೀ ಮಳೆ ಮತ್ತು ಕಡಲಲೆಗಳಿಂದ ಕೊಚ್ಚಿ ಹೋದ ಘಟನೆಯು ನಮ್ಮೆದುರು ಅನಾವರಣಗೊಂಡಿದೆ.

ಮೀನುಗಾರರ ವಿರೋಧ ಮತ್ತು ಪ್ರತಿಭಟನೆಯ ನಡುವೆಯೂ ಅಭಿವೃದ್ಧಿ ನಿಷೇಧಿತ ಪರಿಸರ ಸೂಕ್ಷ್ಮ ಕಡಲತೀರವಾದ ಕಾಸರಕೋಡು ಟೊಂಕದಲ್ಲಿ CRZ ಕಾಯಿದೆಯನ್ನು ಉಲ್ಲಂಘಿಸಿ ಪೋಲೀಸ್ ಬಲ ಮತ್ತು ಗೂಂಡಾಬಲ ಪ್ರಯೋಗಿಸಿ ರಸ್ತೆ ನಿರ್ಮಿಸಲಾಗಿತ್ತು ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಮತ್ತು ಪ್ರಕ್ಷುಬ್ದ ಕಡಲಲೆಗಳ ತೀವ್ರತೆಗೆ ಈ ರಸ್ತೆ ಕೊಚ್ಚಿಕೊಂಡು ಹೋಗಿದೆ ರಸ್ತೆ ನಿರ್ಮಿಸಲು ಹಾಕಲಾದ ಕೆಂಪುಮಣ್ಣು, ಜಲ್ಲಿ, ಕಲ್ಲು ಡಾಂಬರ್ ಕಡಲಲೆಗಳ ರಭಸಕ್ಕೆ ಕುಸಿದಿದೆ ಮೀನುಗಾರರ ಹೋರಾಟಕ್ಕೆ ಖಾಸಗಿ ವಾಣಿಜ್ಯ ಬಂದರು ಯೋಜನೆಯ ಫಲಾನುಭವಿ ರಾಜಕಾರಣಿಗಳು ಕುಟಿಲ ತಂತ್ರಗಾರಿಕೆ ಮಾಡಿದರೂ, ಜಿಲ್ಲೆಯ ಪರಿಸರವಾದಿಗಳು ಮೂಕಪ್ರೇಕ್ಷಕರಾದರೂ ಪ್ರಕೃತಿ ಸಾಥ್ ನೀಡುವ ಮೂಲಕ ಮೀನುಗಾರರ ನೆರವಿಗೆ ಬಂದಿದೆ ಎಂಬ ಮಾತುಗಳು ಕೇಳಿ ಬಂದಿದೆ.

ಕಲ್ಲು, ಮಣ್ಣು, ಜಲ್ಲಿಕಲ್ಲುಗಳು, ಡಾಂಬರ್ ಸಮುದ್ರಕ್ಕೆ ಸೇರುತ್ತಿದೆ ಡಾಂಬರ್ ರಾಸಾಯನಿಕಗಳು ಸಮುದ್ರ ಜಲಚರಗಳ ಪಾಲಿಗೆ ಹಾನಿಕಾರಕವಾಗಿದ್ದು, ಜಲಮಾಲಿನ್ಯಕ್ಕೆ ಕಾರಣವಾಗಬಹುದು ಎಂಬ ಪರಿಜ್ಞಾನ ಈ ವಾಣಿಜ್ಯ ಬಂದರು ಕಾಮಗಾರಿಯ ಕಮಂಗಿಗಳಿಗೆ ಅರ್ಥವಾಗದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಪ್ರಾದೇಶಿಕವಾಗಿ ಮತ್ತು ರಾಷ್ಟ್ರೀಯವಾಗಿ ಬೆಂಗಳೂರು ಮತ್ತು ದೆಹಲಿಯಲ್ಲಿ ಕುಳಿತು ರೂಪಿಸುವ ಯೋಜನೆಗಳು ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ ಇಲ್ಲಿ ಮಧ್ಯವರ್ತಿಗಳು ಮತ್ತು ಅವಕಾಶವಾದಿಗಳು ತಮ್ಮ ಸ್ವಾರ್ಥ ಸಾಧಿಸಿಕೊಳ್ಳುತ್ತಾರೆ ಹಾಗಾಗಿ ನಿರ್ಧಾರವನ್ನು ತೆಗೆದುಕೊಳ್ಳುವವರು ಸ್ಥಳೀಯ ಪರಿಸರದ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳುವುದು ಅವಶ್ಯಕವಾಗಿದೆ. ಪರಿಸರ ಸೂಕ್ಷ್ಮವಾದ ಕಡಲತೀರದಲ್ಲಿ ರಸ್ತೆ ನಿರ್ಮಿಸಲು ಯೋಜನೆಯನ್ನು ರೂಪಿಸಿದ ಇಂಜಿನಿಯರ್ ಗಳಿಗೆ ಖಂಡಿತವಾಗಿ ನೊಬೆಲ್ ಪ್ರಶಸ್ತಿ ನೀಡಬೇಕು ಕಡಲಿನ ಅಲೆಗಳು ಅಪ್ಪಳಿಸುವ ಕೆಲವೇ ಅಡಿಗಳ ಅಂತರದಲ್ಲಿ ರಸ್ತೆ ನಿರ್ಮಿಸಲು ನಕ್ಷೆ ಸಿದ್ಧಪಡಿಸಿದ ಮೂರ್ಖ ಶಿಖಾಮಣಿಗಳಿಗೆ ಸ್ವಲ್ಪವಾದರೂ ಕಾಮನ್ ಸೆನ್ಸ್ ಇಲ್ಲವೇ ಎಂದು ಜನ ಪ್ರಶ್ನಿಸುತ್ತಿದ್ದಾರೆ.

ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆಯ ಕುರಿತೇ ಸಂವಿಧಾನದಲ್ಲೇ ಹೇಳುವ ಕೆಲವೇ ದೇಶಗಳಲ್ಲಿ ಭಾರತ ಸೇರಿದೆ ಆದರೆ ನಮ್ಮ ದೇಶದಲ್ಲಿ ನಡೆಯುತ್ತಿರುವ ಪರಿಸರ ವಿರೋಧಿ ಯೋಜನೆಗಳು ಸಂವಿಧಾನದ ಸ್ಪಷ್ಟ ಉಲ್ಲಂಘನೆಯಾಗಿದೆ. ಪರಿಸರದೆಡಗಿನ ಕಳಕಳಿ ಅಂತರಾಷ್ಟ್ರೀಯ ಕಳಕಳಿಯೂ ಆಗಿದೆ ವಾತಾವರಣ ಮತ್ತು ಸಮುದ್ರದ ಅಲೆಗಳು ಮಲಿನಕಾರಕಗಳನ್ನು ಪ್ರಪಂಚದ ಬೇರೆ ಬೇರೆ ಭಾಗಗಳಿಗೆ ಕೊಂಡೊಯ್ಯಬಲ್ಲವು. ನಿಚ್ಚಳವಾಗಿರುವ ಈ ಸತ್ಯ ಮತಿಗೇಡಿಗಳಿಗೆ ಯಾಕೆ ಅರ್ಥವಾಗುವುದಿಲ್ಲ ಎಂಬುದು ಯಕ್ಷಪ್ರಶ್ನೆಯಾಗಿದೆ. ಕಪ್ಪು ದೈತ್ಯರು ನಿರ್ಮಾಣ ಮಾಡಿದ ರಸ್ತೆಯನ್ನು ಕಡಲು ದ್ವಂಸಗೊಳಿಸಿದೆ ಇನ್ನಾದರೂ ಅವರು ಬುದ್ಧಿ ಕಲಿತರೆ ಒಳ್ಳೆಯದು ಆದರೆ ಮನುಷ್ಯರ ರಕ್ತದ ರುಚಿ ಕಂಡ ಕ್ರೂರ ಹುಲಿ ತನ್ನ ಚಾಳಿಯನ್ನು ಬಿಡುವುದು ಕಷ್ಟ ಅದು ವಾಮ ಮಾರ್ಗದಲ್ಲಿ ತನ್ನ ಕಾರ್ಯ ಸಾಧಿಸಲು ಹೊಂಚು ಹಾಕುತ್ತದೆ. ಕಾನೂನು ನಿಯಮಗಳನ್ನು ಉಲ್ಲಂಘಿಸಿ ನಡೆಸುತ್ತಿರುವ ವಾಣಿಜ್ಯ ಬಂದರು ಕಾಮಗಾರಿಯನ್ನು ಪ್ರತಿಭಟಿಸಿದ ಮೀನುಗಾರರ ಮೇಲೆ ಸುಳ್ಳುಕೇಸು ದಾಖಲಾಗಿದೆ ಅಮಾಯಕ ಬಡ ಮೀನುಗಾರರು ಕೋರ್ಟ್ ಕಚೇರಿ ಅಲೆದಾಡುತ್ತಿದ್ದಾರೆ ಕಪ್ಪುದೈತ್ಯರ ಎಂಜಲು ಕಾಸಿಗಾಗಿ ಕೈಯೊಡ್ಡುತ್ತಿರುವ ಕೆಲವು ಸಮಾಜದ್ರೋಹಿಗಳು ಇದರ ಹಿಂದೆ ಇರುವ ಸುದ್ದಿಗಳು ಹರಿದಾಡುತ್ತಿದೆ.

ಮೀನುಗಾರರ ಹೋರಾಟವನ್ನು ದಮನಿಸಿ ಶತಾಯಗತಾಯ ಖಾಸಗಿ ವಾಣಿಜ್ಯ ಬಂದರನ್ನು ನಿರ್ಮಾಣ ಮಾಡಲೇಬೇಕು ಎಂಬ ಹಠ ತೊಟ್ಟವರಿಗೆ ಪ್ರಕೃತಿ ಶಾಕ್ ಕೊಟ್ಟಿದೆ ಭೂಮಿಯ ನೈಸರ್ಗಿಕ ವ್ಯವಸ್ಥೆಗೆ ಧಕ್ಕೆ ಮಾಡಿದರೆ ಏನಾಗಬಹುದು ಎಂಬುದಕ್ಕೆ ಇದು ಆರಂಭಿಕ ಸ್ಯಾಂಪಲ್ಲು ಮಾತ್ರ.

ಉಮಾಕಾಂತ ಖಾರ್ವಿ ಕುಂದಾಪುರ

Leave a Reply

Your email address will not be published. Required fields are marked *