ಸಮುದ್ರ ಮುಂದೆ ಮುಂದೆ ಬರುತ್ತಿದೆಯೇ?

ನಾಗಚಂದ್ರ ತನ್ನ ಜೈನ ರಾಮಾಯಣದಲ್ಲಿ “ಸಮುದ್ರವೂ ಒಮ್ಮೊಮ್ಮೆ ತನ್ನ ಗಡಿ ದಾಟುತ್ತದೆ” ಎಂದು ಹೇಳುತ್ತಾನೆ. 2004 ರಲ್ಲಿ ಸುನಾಮಿ ಬಂದಾಗ ಜಗತ್ತಿಗೆ ಈ ವಿಷಯ ಹೌದೆಂದು ಮನದಟ್ಟಾಯಿತು. ಆದರೆ ಕರಾವಳಿಯಲ್ಲಿ ವಾಸ ಮಾಡುವವರಿಗೆ ಪ್ರತಿವರ್ಷದ ಮಳೆಗಾಲದ ಅವಧಿಯಲ್ಲಿ ಇದರ ಅರಿವು ಆಗಿಯೇ ಆಗುತ್ತದೆ. ಉಳಿದ ಎಲ್ಲಾ ಸಮಯದಲ್ಲಿ ಸಮುದ್ರ ತಾನಾಯಿತು, ತನ್ನ ಕೆಲಸವಾಯಿತು ಎಂಬಂತೆ ಇದ್ದರೂ, ಮಳೆಗಾಲದಲ್ಲಿ ತನ್ನ ಅಸ್ತಿತ್ವವನ್ನು, ಸ್ವಭಾವವನ್ನು, ಪೌರುಷವನ್ನು, ಬಲಾಢ್ಯತೆಯನ್ನು ಮುದ್ರೆ ಒತ್ತಿದಂತೆ ಹೇಳುತ್ತದೆ. ಭೂಮಿಯ ಮೇಲಿನ ಸಕಲ ಮಾನವ ಜನಾಂಗ ಇದನ್ನು ಒಪ್ಪಿಕೊಳ್ಳಲೇಬೇಕು‌. ಆದರೆ ಸಮುದ್ರದ ಈ ಕ್ಷಿಪ್ರ ಬದಲಾವಣೆಗೆ, ಆವೇಶಭರಿತ‌‌ ಸ್ವಭಾವದ ಜೊತೆ ಜೊತೆಗೆ ಸಂಭವಿಸುವ ಅವಘಡಗಳಿಗೆ ನಾವೇ ಕಾರಣ ಎಂಬುವುದನ್ನು ಮರೆಯಲೇಬಾರದು.

ಈಗೀಗ ಹೆಚ್ಚಿನವರು ಹೇಳುವ ವಿಚಾರವೆಂದರೆ ಸಮುದ್ರ ಮುಂದೆ ಮುಂದೆ ಬರುತ್ತಿದೆ ಎಂದು. ನಿಜವಾಗಿಯೂ ಸಮುದ್ರ ಮುಂದೆ ಬರುತ್ತಿದೆಯೇ? ಅಥವಾ ನಾವೇ ಸಮುದ್ರವನ್ನು ಮುಂದೆ ಬರುವಂತೆ ಪ್ರಚೋದಿಸುತ್ತ ಇದ್ದೇವೆಯೇ? ಎಂಬ ಪ್ರಶ್ನೆ ಕಾಡುತ್ತದೆ. ಮರವಂತೆ ಮತ್ತು ತ್ರಾಸಿ ಬೀಚ್ ವಿಶ್ವ ಪ್ರಸಿದ್ಧ ಎಂಬುದು ನಿಮಗೆ ತಿಳಿದೇ ಇದೆ. ರಾಷ್ಟ್ರೀಯ ಹೆದ್ದಾರಿ ಎರಡು ಬದಿಗಳಲ್ಲಿ ಸಮುದ್ರ ಮತ್ತು ನದಿ ಇರುವ ಕಾರಣಕ್ಕಾಗಿಯೇ ಇದು ಲೋಕಪ್ರಸಿದ್ಧ. ಅಪೂರ್ವವಾದ ಈ ಸ್ಥಳವನ್ನು ನೋಡಲು ದೇಶದ ಮೂಲೆಮೂಲೆಗಳಿಂದ ಜನರು ಆಗಮಿಸುತ್ತಾರೆ. ಕಿರಿದಾಗಿದ್ದ ಇಲ್ಲಿನ ರಾಷ್ಟ್ರೀಯ ಹೆದ್ದಾರಿಯನ್ನು ಇತ್ತೀಚಿಗೆ ಚತುಷ್ಪಥ ಮಾಡಲಾಯಿತು. ಆ ಕಾರಣದಿಂದ ಈ ಸ್ಥಳವನ್ನು ಉಳಿಸಿಕೊಳ್ಳಲೇ‍ಬೇಕಾದ ಅನಿವಾರ್ಯತೆ ಉಂಟಾಯಿತು. ಅದಕ್ಕಾಗಿ ಸುಮಾರು ಎರಡು-ಮೂರು ಕಿ.ಮೀ.ದೂರದವರೆಗೆ ಟಿ(ಗ್ರೋವನ್)ಮಾದರಿಯಲ್ಲಿ ತಡೆಗೋಡೆ ನಿರ್ಮಿಸಲಾಯಿತು. ಮೇಲ್ನೋಟಕ್ಕೆ ನೋಡಿದಾಗ ಇದೊಂದು ಅತ್ಯುತ್ತಮ ಯೋಜನೆಯೇ ಸರಿ. ಯೋಜಕರು ಅಂದುಕೊಂಡಂತೆ ಮೂರ್ನಾಲ್ಕು ವರ್ಷಗಳಲ್ಲಿ ಈ ತಡೆಗೋಡೆಯ ಬಳಿ ದೊಡ್ಡ ಪ್ರಮಾಣದಲ್ಲಿ ಮರಳು ಸಂಗ್ರಹಣೆಯಾಯಿತು. ಆದರೆ ಯಾವಾಗ ತ್ರಾಸಿ ಮರವಂತೆ ಸುರಕ್ಷಿತವಾಯಿತೋ ಅಲ್ಲಿಂದ ಅಕ್ಕಪಕ್ಕದ ಊರುಗಳಲ್ಲಿ ಕಡಲ್ಕೊರೆತದ ಸಮಸ್ಯೆ ಉಲ್ಬಣವಾಯಿತು. ಕಂಚುಗೋಡು, ಮರವಂತೆಯ ಉತ್ತರ ಭಾಗದ ಜನವಸತಿ ಸ್ಥಳ, ಹೊಸಪೇಟೆ, ಮಡಿ ಬೆಣ್ಗೇರಿ, ಗಂಗೊಳ್ಳಿಗಳಲ್ಲಿ ಹಿಂದೆಂದಿಗಿಂತಲೂ ಸಮುದ್ರ ಮುಂದೆ ಮುಂದೆ ಬರತೊಡಗಿತು. ಸಾಮಾನ್ಯವಾಗಿ ಈ ಸ್ಥಳಗಳಲ್ಲಿ ಮಳೆಗಾಲದಲ್ಲಿ ಸ್ವಲ್ಪ ಮಟ್ಟಿಗೆ ಕಡಲ್ಕೊರೆತ ಉಂಟಾಗಿ, ಒಂದೆರಡು ತಿಂಗಳಲ್ಲಿ ಯಥಾಸ್ಥಿತಿಗೆ ಬರುತ್ತಿತ್ತು. ಆದರೆ ಈಗೀಗ ವರ್ಷವಿಡೀ ಕಾದರೂ ಮರಳು ಮರಳಿ ಬಂದು ಸಂಚಯನವಾಗುವುದಿಲ್ಲ. ಅದರ ಪರಿಣಾಮವೆಂಬಂತೆ ಮರಳಲ್ಲಿ ಹೂತಿದ್ದು, ಚಿಕ್ಕದಾಗಿ ಗೋಚರಿಸುತ್ತಿದ್ದ ಬಂಡೆಗಳು, ಮರಳಿನ ಸವಕಳಿಯಿಂದ ಬೃಹದಾಕಾರದಲ್ಲಿ ಕಾಣುತ್ತಿವೆ. ಒಂದಿಡೀ ಪರಿಸರವನ್ನು ತನಗೆ ಬೇಕಾದಂತೆ ಬದಲಾಯಿಸುತ್ತೇನೆ ಎಂದು ಮನುಷ್ಯ ಹೊರಟಾಗ ಪ್ರಕೃತಿಯು ತನ್ನ ಇರುವಿಕೆಯನ್ನು ತೋರಿಸಿಯೇ ತೋರಿಸುತ್ತದೆ‌. ಯಾವುದೋ‌ ಒಂದು ಸ್ಥಳದಲ್ಲಿ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರುವ ಅವಸರದಲ್ಲಿ, ಇನ್ಯಾವುದೋ ಸ್ಥಳ ಬಲಿಪಶುವಾಗುವುದು ಇದೇ ಮೊದಲಲ್ಲ. ಸಮುದ್ರದ ನೀರಿಗೂ ಒಂದು ಸಮತೋಲನವಿದೆ. ಅದಕ್ಕೆ ಒಂದು ಕಡೆಯಲ್ಲಿ ಒತ್ತಡ ಹಾಕಿದರೆ, ಇನ್ನೊಂದು ಕಡೆಯಲ್ಲಿ ಪ್ರಕಟಗೊಳ್ಳುತ್ತದೆ. ಒಂದು ಕಡೆಯಲ್ಲಿ ನಿರ್ಮಾಣ ಮಾಡುವ ತಡೆಗೋಡೆ, ಬಂದರು, ಅತಿಯಾದ ಮರಳುಗಾರಿಕೆಯಿಂದ ಇನ್ನೊಂದು ಕಡೆ ಕಡಲ್ಕೊರೆತದ ಸಮಸ್ಯೆ ಉಲ್ಬಣವಾಗುತ್ತಿದೆ.

ನೆಲದ ಮೇಲಿನ ಪರಿಸರಕ್ಕೂ, ಕಡಲ್ಕೊರೆತಕ್ಕೂ ಸಂಬಂಧ ಇದೆಯೇ ಎಂದು ನಿಮಗೆ ಅನ್ನಿಸಬಹುದು. ಖಂಡಿತಾ ಇದೆ; ಅತಿಯಾದ ಕಾಡುಗಳ ನಾಶದಿಂದಾಗಿ ವಾತಾವರಣದ ಉಷ್ಣತೆ ಹೆಚ್ಚಾಗುತ್ತಿದೆ. ಧ್ರುವ ಪ್ರದೇಶಗಳ‌ ಹಿಮ ಕರಗುತ್ತಿದೆ. ಆ ನೀರು ನೇರವಾಗಿ ಸಮುದ್ರ‌ಸೇರಿ, ಸಮುದ್ರ ಸಮುದ್ರಗಳು ಪರಸ್ಪರ ತಾಗಿಕೊಂಡಿರುವ ಕಾರಣ ಎಲ್ಲಾ ಸಮುದ್ರಕ್ಕೂ ಸಮವಾಗಿ ಹಂಚಿಕೆಯಾಗುತ್ತದೆ. ನಾವು ಬಾಲ್ಯದಲ್ಲಿ ನಮ್ಮೂರಿನ ಕಡಲದಂಡೆಯಲ್ಲಿ ಆಡುತ್ತಿದ್ದ ವಿಶಾಲವಾದ ಜಾಗ, ಈಗ ಇಲ್ಲವೇ ಇಲ್ಲ. ಎಲ್ಲಾ ಮರಳು ಸಮುದ್ರದಲ್ಲಿ ಕೊಚ್ಚಿಕೊಂಡು ಹೋಗಿದೆ. ಈ ಮರಳು ಇನ್ಯಾವತ್ತೂ ಮರಳಿ ಬರುವುದಿಲ್ಲ, ಎಂಬ ಸತ್ಯದ ಅರಿವು ನಮ್ಮೂರಿನ ಜನತೆಗೆ ಆಗಿದೆ.

ಹಿಂದೆಲ್ಲ ಸಮುದ್ರ ಸ್ವಲ್ಪ ಮುಂದಕ್ಕೆ ಬರಬಹುದೆಂದು ಮೊದಲೇ ಗ್ರಹಿಸಿ, ಸಮುದ್ರ ಕಿನಾರೆಯಿಂದ ತುಸು ಅಂತರದಲ್ಲಿ ಮನೆಗಳನ್ನು ಕಟ್ಟುತ್ತಿದ್ದರು. ಕ್ರಮೇಣ ಕುಟುಂಬಗಳ ಸಂಖ್ಯೆ ಹೆಚ್ಚಾದಂತೆ ಸಮುದ್ರದ ಹತ್ತಿರ ಮನೆಗಳನ್ನು ನಿರ್ಮಿಸತೊಡಗಿದರು. ಆದರೂ ಸಮುದ್ರ ಮನೆಯವರೆಗೆ ಬರಬಹುದೆಂಬ ಸಂದೇಹ ಇಟ್ಟುಕೊಂಡೇ ತಳಪಾಯ ಗಟ್ಟಿಯಾಗಿ ಕಟ್ಟಿದರು; ಕಾಂಕ್ರೀಟ್ ಕಂಬಗಳನ್ನು ಭೂಮಿಯ ಆಳಕ್ಕೆ ಇಳಿಸಿದರು. ಮನೆಯ ಸುತ್ತಲು ಅಭೇದ್ಯವಾದ ಒಂದು ಸುತ್ತಿನ ಕೋಟೆ ಕಟ್ಟಿದರು. ಮನೆಯೊಳಗೆ ಬೆಚ್ಚಗೆ ಕೂತರು. ಒಂದಿಷ್ಟು ವರ್ಷಗಳು ಸಮುದ್ರ‌ ಏನೂ ಮಾಡದ್ದನ್ನು ನೋಡಿ ಹಿರಿ ಹಿರಿ ಹಿಗ್ಗಿದರು. ಸಮುದ್ರಕ್ಕೆ ಸಡ್ಡು ಹೊಡೆದು ನಿಂತೆ ಎಂದು ಒಳಗೊಳಗೆ ಬೀಗಿದರು. ಇದೇ ರೀತಿಯಲ್ಲಿ ಹಲವಾರು ಹೋಟೆಲ್‌ಗಳು, ರೆಸಾರ್ಟ್‌ಗಳು, ಲಾಡ್ಜ್‌ಗಳು ಸಮುದ್ರದಂಡೆಯಲ್ಲಿ ತಲೆಯೆತ್ತಿದವು. ಅದ್ಯಾವುದೋ ಚಂಡಮಾರುತದ ಪ್ರಭಾವವೋ; ಸುನಾಮಿಯೋ, ಉಬ್ಬರವಿಳಿತವೋ, ಗ್ರಹಣವೋ, ಗ್ರಹಚಾರವೋ ಒಮ್ಮೊಮ್ಮೆ ಸಮುದ್ರ ಮುನ್ನುಗ್ಗಿಕೊಂಡು ಮುಂದೆ ಬರುತ್ತದೆ. ತುಂಬಾ ಆಸೆಯಿಂದ, ಆಸ್ಥೆಯಿಂದ ಕಟ್ಟಿದ ಕನಸಿನ ಸೌಧ ಒಂದೆರಡು ಗಂಟೆಗಳಲ್ಲಿ ಸಮುದ್ರ ಪಾಲಾಗುತ್ತದೆ. ಹಾಗೆಂದು ಕೇವಲ ಸಿರಿವಂತಿಕೆಯ ಸೌಧಗಳು ಮಾತ್ರ ಸಮುದ್ರ ಪಾಲಾಗುವುದೆಂದು ಭಾವಿಸಬೇಡಿ. ಬಡವನ ಗುಡಿಸಲನ್ನೂ ಸಹ ಯಾವ ತಾರತಮ್ಯವಿಲ್ಲದೆ, ಸಮುದ್ರ ತನ್ನೊಡಲೊಳಗೆ ಸೇರಿಸಿಕೊಂಡು ಬಿಡುತ್ತದೆ. ಸಮುದ್ರದ ಗಡಿಗಳನ್ನು ನಾವು ದಾಟಿದಾಗ, ಸಮುದ್ರದ ಗಡಿ ಎಷ್ಟಿದೆ ಎಂದು ಸಮುದ್ರವೇ ನಮಗೆ ಪಾಠ ಕಲಿಸುತ್ತಿರುತ್ತದೆ. ಆದರೂ ನಾವು ಬುದ್ಧಿಕಲಿಯಲಾರೆವು. ವಿಘಟನೆಯಾಗುವ ಮತ್ತು ವಿಘಟನೆಯಾಗದ ಎಲ್ಲಾ ತ್ಯಾಜ್ಯಗಳನ್ನು ಸುರಿಯಲು ನಮಗೆ ಸಮದ್ರವೇ ಬೇಕು. ಚಿಕ್ಕ ಪುಟ್ಟ ಕಾರ್ಖಾನೆಗಳಿಂದ ಹಿಡಿದು ಕೈಗಾರಿಕೆಗಳಿಂದ ಹೊರಬರುವ ಕೊಳಕು ತ್ಯಾಜ್ಯ ನೀರನ್ನು ಸೇರಿಸಲು ಸಮುದ್ರವೇ ಬೇಕು. ಸಮುದ್ರಕ್ಕೆ ಸೇರಿದ ವಿಷಪೂರಿತ ನೀರು, ರಾಸಾಯನಿಕ ಅವಶೇಷಗಳು ಸಮುದ್ರದೊಳಗೆ ತಣ್ಣನೆ ತನ್ನ ಕಾರ್ಯ ಆರಂಭಿಸುತ್ತವೆ. ಸಮುದ್ರದೊಳಗಿನ ಬಂಡೆಯ ಮೇಲಿನ ಅಷ್ಟು ಜೀವ ಜಗತ್ತನ್ನು ನಾಶ ಮಾಡಿದೆ. ಪಚ್ಚಿಲೆಯಂತಹ ಚಿಪ್ಪುಮೀನುಗಳಿಂದ ಮೊದಲ್ಗೊಂಡು, ಬಂಡೆಯ ಮೇಲೆ ಬೆಳೆಯುವ ಪಾಚಿ, ಚಿಕ್ಕಪುಟ್ಟ ಸಸ್ಯವರ್ಗಗಳು ನಾಶವಾಗಿ ಹೋಗಿದೆ. ಕೊನೆಗೆ ಬೋಳು ಬಂಡೆಗಳು ಮಾತ್ರ ಸಮುದ್ರದ ತಳದಲ್ಲಿ ಉಳಿದಿವೆ. ನಮ್ಮೂರಿನ ಯುವಕರಲ್ಲಿ “ಪಚ್ಚಿಲೆ ತೆಗೆಯಲು ಏಕೆ ಹೋಗುವುದಿಲ್ಲ?” ಎಂದು ಕೇಳಿದರೆ ಅವರು ಬಂಡೆ ಬೋಳಾಗಿದೆ ಎಂದು ಹೇಳುತ್ತಾರೆ. “ಹೇಗೆ?” ಎಂದು ಕೇಳಿದರೆ “ವಿಪರೀತವಾದ ಪಚ್ಚಿಲೆ‌ ತೆಗೆದ ಪರಿಣಾಮ” ಎಂದು ಹೇಳುತ್ತಾರೆ. ಕೇವಲ ಅದೊಂದೇ ಕಾರಣವಲ್ಲವೆಂದು ಅವರಿಗೂ ತಿಳಿದಿಲ್ಲ. ಆದರೆ ಈ ಸಮುಸ್ಯೆಗೆ ಪರಿಹಾರವೂ ಅವರಿಗೆ ತಿಳಿದಿಲ್ಲ. ನೀರಿನ ಆಂತರಿಕ ಅಲೆಗಳನ್ನು ನೀರಿನ ಅಡಿಭಾಗದಲ್ಲಿದ್ದ ಬಂಡೆಗಳು ತಡೆಯುತ್ತಿದ್ದವು. ಆದರೆ ಅಡಿಭಾಗದ ಬಂಡೆಗಳು ಬೋಳುಬೋಳಾಗಿ ಅದರ ಮೇಲಿನ ಎಲ್ಲಾ ಜೀವರಾಶಿಗಳು ಹೋಗಿವೆ. ಈ ಕಾರಣದಿಂದ ಸಹ ಸಮುದ್ರದ ಅಲೆಗಳ ಬಲ ಹೆಚ್ಚಾಗಿದೆ. ಕೆಲವು ಸಮುದ್ರಗಳಲ್ಲಿರುವ ಹವಳದ ಬಂಡೆಗಳು ಸಮುದ್ರದಲ್ಲಿ ಏಳುವ ಬೃಹತ್ ತೆರೆಗಳನ್ನು ತಡೆಯುವ ಶಕ್ತಿ ಹೊಂದಿರುವುದು ನಮಗೆ ಗೊತ್ತೇ ಇದೆ. ಹವಳದ ದಿಬ್ಬ ರಚನೆಯಾಗುವುದು ಒಂದು ಸೂಕ್ಷ್ಮ ಜೀವಿಯಿಂದ. ಸಮುದ್ರದ ವಿಪರೀತ ರಾಸಾಯನಿಕ ಮಾಲಿನ್ಯದಿಂದ ಇವುಗಳು ಬದುಕಲಾರವು. ಪರಿಣಾಮ ಹವಳದ ದಂಡೆಗಳು ನಾಶವಾಗುತ್ತದೆ. ಸುನಾಮಿಯನ್ನೂ ಶಾಂತಗೊಳಿಸಬಲ್ಲ ಹವಳದ ದಂಡೆಗಳು ಮುಂದೊಂದು ದಿನ ನಾಶವಾಗುವುದಂತು ಸತ್ಯ. ನಮ್ಮ ಪೂರ್ವ ಸಮುದ್ರದಲ್ಲೂ ಇಂತಹ ಹವಳದ ದಂಡೆಗಳು ಸಾಕಷ್ಟಿವೆ. ಸಮುದ್ರ ಶುದ್ಧವಾಗಿರುವಷ್ಟು ಸಮಯ ಅವುಗಳಿಗೆ ಅಸ್ತಿತ್ವ ಇದೆ.

ಅದೇನೇ ಇರಲಿ, ನಮ್ಮ ಜೀವನ ಶೈಲಿ ಬದಲಾಗದೆ ಸಮುದ್ರ ಬದಲಾಗದು. ನಾವು ಹಿಂದೆ ಸರಿಯದೆ ಸಮುದ್ರ ಹಿಂದೆ ಸರಿಯದು. ನಾವು ಹಿಂದೆ ಸರಿಯಲು ಸಾಧ್ಯವಿಲ್ಲದಷ್ಟು ಮುಂದೆ ಸಾಗಿಯಾಗಿದೆ. ಇನ್ನೇನಿದ್ದರೂ ಸಮುದ್ರ ತೋರಿಸುವ ಕೋಪವನ್ನು ನಾವು ಶಾಂತರಾಗಿ ಸ್ವೀಕರಿಸಬೇಕು. ಇಲ್ಲದಿದ್ದರೆ ಸಮುದ್ರದ ಯಾವ ತೀರವನ್ನು ಬಿಡದೆ ತಡೆಗೋಡೆ ಕಟ್ಟಬೇಕು. ಒಂದಿಂಚು ಜಾಗ ಸಮುದ್ರ ಕಬಳಿಸದಂತೆ ಇನ್ನೂ ಎತ್ತರದ, ಇನ್ನೂ ಬಲಿಷ್ಠವಾದ, ಇನ್ನೂ ಅಗಲವಾದ ತಡೆಗೋಡೆ ನಿರ್ಮಾಣ ಮಾಡಲೇಬೇಕು‌. ದೇವರು ಕೊಟ್ಟ ಅತ್ಯದ್ಭುತವಾದ, ವಿಶೇಷವಾದ ಸಮುದ್ರವನ್ನು ಅಷ್ಟದಿಕ್ಕುಗಳಿಂದಲೂ ಬಂಧಿಸಿ ನಾವು ಸುಂದರ ಜೀವನ ನಡೆಸುವ ಕನಸು ಕಾಣಲು ಸಾಧ್ಯವೇ? ಇಡೀ ಭೂಮಿಯನ್ನು ನುಂಗಿ, ಮುನ್ನುಗ್ಗುತ್ತಿರುವ ಮನುಷ್ಯ ಮುಂದೊಂದು ದಿನ ಸಮುದ್ರವನ್ನು ಈ ರೀತಿಯಲ್ಲಿ ದಿಗ್ಬಂಧನ ವಿಧಿಸುವುದರಲ್ಲಿ ಸಂದೇಹವೇ ಇಲ್ಲ.

ನಾಗರಾಜ ಖಾರ್ವಿ ಕಂಚುಗೋಡು

One thought on “ಸಮುದ್ರ ಮುಂದೆ ಮುಂದೆ ಬರುತ್ತಿದೆಯೇ?

  1. ಅಬ್ಬಾ… ನಿಜಕ್ಕೂ ಭಯಾನಕ ಸಂಗತಿಗಳು… ಪ್ರಕೃತಿಗೆ ಕನಿಷ್ಠ ಪ್ರಾಮುಖ್ಯತೆಯನ್ನು ನೀಡುವ ಇಂತಹ ಕೆಲವು ಕುರುಡು ಅವೈಜ್ಞಾನಿಕ ಪ್ರಗತಿಯ ಹೆಸರಿನಡಿ ಆಗುವ projectಗಳಿಂದ ಮಾನವೀಯತೆ ಎಲ್ಲಿಗೆ ಹೋಗುತ್ತಿದೆ ಎಂದು ನಾನು ಆಶ್ಚರ್ಯ ಪಡುತ್ತೇನೆ… ಮತ್ತು ಮುಂಬರುವ ವರ್ಷಗಳಲ್ಲಿ ಈ ಕಡಲತೀರಗಳಲ್ಲಿ ವಾಸಿಸುವ ಜನರು ಮಳೆಗಾಲದಲ್ಲಿ ಹೇಗೆ ಇರುತ್ತಾರೆ ಎಂಬುದರ ಬಗ್ಗೆ ಯೋಚಿಸಲು ನನ್ನಗೆ ಹೆದರಿಕೆಯಾಗುತದೆ. ನಾಗರಾಜ್ ಸರ್ ಅವರು ಬರೆದಿರುವ ಒಂದು ತಿಳಿವಳಿಕೆ ಬರಿತ ಲೇಖನ

Leave a Reply

Your email address will not be published. Required fields are marked *