ಜಯಾನಂದ ಖಾರ್ವಿಯವರ ಸಾರಥ್ಯ ಅಭಿವೃದ್ಧಿಯ ಪಥದಲ್ಲಿ ಶ್ರೀ ಮಹಾಕಾಳಿ ದೇವಸ್ಥಾನ

ಸಮಾಜಮುಖಿ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುವವನೇ ಸಮಾಜದ ನಾಯಕನೆನಿಸಿಕೊಳ್ಳುತ್ತಾನೆ. ಈ ಸರ್ವವಿಧಿತ ಮಾತು ಕುಂದಾಪುರ ಖಾರ್ವಿಕೇರಿ ಶ್ರೀ ಮಹಾಕಾಳಿ ದೇವಸ್ಥಾನದ ಅಧ್ಯಕ್ಷರಾದ ಜಯಾನಂದ ಖಾರ್ವಿಯವರಿಗೆ ಚೆನ್ನಾಗಿ ಅನ್ವಯವಾಗುತ್ತದೆ. ಶ್ರೀಯುತರು ಶ್ರೀ ಮಹಾಕಾಳಿ ದೇವಸ್ಥಾನದ ಅಧ್ಯಕ್ಷರಾಗಿ ಕೈಗೊಂಡ ದೇವಸ್ಥಾನದ ಅಭೂತಪೂರ್ವ ಅಭಿವೃದ್ಧಿ ಕಾರ್ಯಗಳು ಜನಪ್ರೀತಿಗೆ ಪಾತ್ರವಾಗಿ 8 ವರ್ಷ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದು ನಿಜಕ್ಕೂ ಶ್ರೀ ಮಹಾಕಾಳಿ ಅಮ್ಮನವರ ಕೃಪಾಕಟಾಕ್ಷ ಎಂದು ಬಣ್ಣಿಸಲಾಗಿದೆ.

ವಿದ್ಯಾರ್ಥಿ ದೆಸೆಯಿಂದಲೇ ಸಾಮಾಜಿಕ ಕೈಂಕರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡ ಜಯಾನಂದ ಖಾರ್ವಿಯವರ ನಡೆಯಲ್ಲಿ ಸಮಾಜದ ಬಗ್ಗೆ ಕಳಕಳಿಯಿತ್ತು.1978 ರಲ್ಲಿ ನೆರೆಹಾವಳಿ ತಲೆದೋರಿದಾಗ ಜನರ ಸಂಕಷ್ಟದಲ್ಲಿ ಭಾಗಿಯಾದರು ಭಂಡಾರ್ಕರ್ ಕಾಲೇಜು ಇವರ ವಾಲಿಬಾಲ್ ಕ್ರೀಡಾ ಚಟುವಟಿಕೆಗಳಿಗೆ ಉತ್ತಮ ವೇದಿಕೆ ಕಲ್ಪಿಸಿಕೊಟ್ಟಿತ್ತು ಪದವಿ ಕಲಿಯುತ್ತಿರುವ ಸಂದರ್ಭದಲ್ಲಿ ಶ್ರೇಷ್ಠ ವಾಲಿಬಾಲ್ ಕ್ರೀಡಾಪಟುವಾಗಿ ಮಿಂಚಿದ ಜಯಾನಂದ ಖಾರ್ವಿ 1984 ರಲ್ಲಿ ಮಂಗಳೂರು ವಿಶ್ವವಿದ್ಯಾಲಯದ ವಾಲಿಬಾಲ್ ನಾಯಕರಾಗಿ ಆಯ್ಕೆಯಾಗಿ ರಾಜ್ಯ,ಹೊರರಾಜ್ಯಗಳಲ್ಲಿ ಹಲವಾರು ಪ್ರಶಸ್ತಿಗಳಿಂದ ಭಾಜನರಾದರು ತನ್ಮೂಲಕ ವಿಶ್ವವಿದ್ಯಾಲಯ ಮಟ್ಟದಲ್ಲಿ ALL INDIA BEST PLAYER ಪ್ರಶಸ್ತ್ರಿ ಪುರಸ್ಕೃತರಾದರು. ಖಾರ್ವಿಕೇರಿಯಲ್ಲಿ ಸ್ಥಾಪನೆಗೊಂಡ ಅಶೋಕ ಯೂತ್ ಕ್ಲಬ್ ಸದಸ್ಯರು ಸಂಜೆ ವೇಳೆಗೆ ವಾಲಿಬಾಲ್ ಪ್ರಾಕ್ಟೀಸ್ ಮಾಡುತ್ತಿದ್ದರು. ಅನೇಕ ಜನ ಇದನ್ನು ವೀಕ್ಷಿಸಲು ನೆರೆಯುತ್ತಿದ್ದರು ಈ ಸಮಯದಲ್ಲಿ ಸಮಾಜದವರೊಂದಿಗೆ ಮುಕ್ತವಾಗಿ ಬೆರೆಯುವ ಅವಕಾಶ ದೊರಕಿತ್ತು ಜನರ ವಾಲಿಬಾಲ್ ಕ್ರೀಡಾಭಿಮಾನ ಯಾವ ಪರಿಯಲ್ಲಿ ಇತ್ತಂದರೆ ಇವರ ತಂಡ ಕುಂದಾಪುರ ಮತ್ತು ಬೇರೆ ಬೇರೆ ಜಿಲ್ಲೆಗಳಲ್ಲಿ ಹೋದಾಗ ತಂಡದೊಂದಿಗೆ ಕನಿಷ್ಠ ಪಕ್ಷ 20 ಜನ ಅವರದ್ದೇ ಖರ್ಚಿನಲ್ಲಿ ಬರುತ್ತಿದ್ದರು ಮತ್ತು ವಾಲಿಬಾಲ್ ತಂಡದೊಂದಿಗೆ ವಾಪಸ್ ಬರುತ್ತಿದ್ದರು. ಇವರ ಅಮೋಘ ವಾಲಿಬಾಲ್ ಸಾಧನೆಯನ್ನು ಗುರುತಿಸಿ ವಿದ್ಯಾರಂಗ ಮಿತ್ರ ಮಂಡಳಿ ಮಾಡಿದ ಸನ್ಮಾನ ತನ್ನ ಜೀವನದ ಅವಿಸ್ಮರಣೀಯ ಕ್ಷಣಗಳು ಎಂದು ಜಯಾನಂದ ಖಾರ್ವಿ ನೆನಪಿಸಿಕೊಳ್ಳುತ್ತಾರೆ.

ವಿದ್ಯಾರಂಗ ಮಿತ್ರಮಂಡಳಿಯ ವಿದ್ಯಾನಿಧಿ ಯೋಜನೆಯ 25 ನೇ ವರ್ಷದ ಸಮಾರಂಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಗಡೆಯವರು ಮತ್ತು ಶ್ರೀ ಪೇಜಾವರ ಮಠಾಧೀಶರು ಭಾಗವಹಿಸಿದ್ದರು.ಈ ಕಾರ್ಯಕ್ರಮವನ್ನು ಸಂಘಟಿಸುವಲ್ಲಿ ಜಯಾನಂದ ಖಾರ್ವಿಯವರು ಪ್ರಮುಖ ಪಾತ್ರ ವಹಿಸಿದ್ದರು ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. ಗುಜರಾತ್ ನಲ್ಲಿ ಉದ್ಯೋಗದಲ್ಲಿದ್ದರೂ ಜಯಾನಂದ ಖಾರ್ವಿಯವರನ್ನು ಸಮಾಜ ಸೇವೆಯ ಕಳಕಳಿ ತವರಿಗೆ ಕರೆದುಕೊಂಡು ಬಂದಿತ್ತು. ನಮ್ಮ ಸಮಾಜದ ಅಧಿದೇವತೆ ಶ್ರೀ ಮಹಾಕಾಳಿ ಅಮ್ಮನವರ ಶಿಲಾವಿಗ್ರಹ ಪ್ರತಿಷ್ಠಾಪನಾ ಕಾರ್ಯಕ್ರಮ ಆಯೋಜಿಸಲ್ಪಟ್ಟಾಗ ಇವರು ಉತ್ಸವ ಸಮಿತಿಯ ತಾಂತ್ರಿಕ ವಿಭಾಗದ ಮುಖ್ಯಸ್ಥರಾಗಿ ಆಯ್ಕೆಯಾದರು ಅಪೂರ್ವ ಕೌಶಲ್ಯ ಮತ್ತು ಜಾಣ್ಮೆಯ ಸಂಘಟನಾ ಶೈಲಿಯಿಂದ ಸಮಾಜದ ಯುವಕರನ್ನು ಒಂದುಗೂಡಿಸಿ ತನಗೆ ವಹಿಸಿದ ಜವಾಬ್ದಾರಿಯನ್ನುಯಶಸ್ವಿಯಾಗಿ ನಿಭಾಯಿಸಿದರು.

ಶಿಲಾವಿಗ್ರಹ ಪ್ರತಿಷ್ಠಾಪನೆಯ ಈ ಅಭೂತಪೂರ್ವ ಕಾರ್ಯಕ್ರಮ ಖಾರ್ವಿ ಸಮಾಜದ ಮೈಲಿಗಲ್ಲಾಗಿ ದಾಖಲಾಗಿದ್ದು,ಸ್ಮರಣೀಯ ಅಂಶವಾಗಿದೆ. ಮುಂದೆ ಶ್ರೀ ಅಮ್ಮನವರ ಸಾನ್ನಿಧ್ಯದಲ್ಲಿ ಸೇವೆ ಮಾಡುವ ಅವಕಾಶವೂ ಕೂಡಿ ಬಂತು ಉಪಾಧ್ಯಕ್ಷರಾಗಿ ಆಯ್ಕೆಯಾದ ಜಯಾನಂದ ಖಾರ್ವಿಯವರ ಸೇವೆಯನ್ನು ಜನ ಮೆಚ್ಚಿಕೊಂಡು ಮುಂದಿನ ಅವಧಿಗೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರು ಈ ಅವಧಿಯಲ್ಲಿ ದೇಗುಲದ ಅಭಿವೃದ್ಧಿ ಕಾರ್ಯಗಳಿಗೆ ವಿಶೇಷ ಚಾಲನೆ ದೊರಕಿತು ಆ ಸಮಯದಲ್ಲಿ ದೇಗುಲದ ಹೊರಭಾಗದಲ್ಲಿ ಮೇಲ್ಚಾವಣಿ ವ್ಯವಸ್ಥೆ ಇರಲಿಲ್ಲ ಇಲ್ಲಿ ಗಣೇಶೋತ್ಸವ ಮತ್ತಿತರ ಸಮಾರಂಭಗಳು ನಡೆಯುತ್ತಿದ್ದರಿಂದ ಮಳೆ ಬರುವ ಸಂದರ್ಭದಲ್ಲಿ ತುಂಬಾ ತೊಂದರೆಯಾಗುತ್ತಿತ್ತು ಇದನ್ನು ಸೂಕ್ಷ್ಮವಾಗಿ ಗಮನಿಸಿದ ಜಯಾನಂದ ಖಾರ್ವಿಯವರು ಕೋಟ ಶ್ರೀನಿವಾಸ ಪೂಜಾರಿ ಯವರನ್ನು ಭೇಟಿ ಮಾಡಿ ಅವರ ಅನುದಾನದಲ್ಲಿ ದೇವಸ್ಥಾನದ ಹೊರಭಾಗದಲ್ಲಿ ರೂಫಿಂಗ್ ಮೇಲ್ಚಾವಣಿಯನ್ನು ತುಂಬಾ ಸುಂದರವಾಗಿ ನಿರ್ಮಾಣ ಮಾಡಿದರು ಇದು ಶಾಶ್ವತ ವ್ಯವಸ್ಥೆಯಾಗಿದ್ದು,ದೇಗುಲದ ಹೊರಭಾಗದಲ್ಲಿ ಗಣೇಶೋತ್ಸವ ಸಮಾರಂಭ ಮಾತ್ರವಲ್ಲ ಮದುವೆ ಮತ್ತಿತರ ಕಾರ್ಯಕ್ರಮ ನಡೆಸಲು ಕೂಡಾ ಬಹಳಷ್ಟು ಅನುಕೂಲವಾಗಿದೆ.

ಅವರು ಅಧ್ಯಕ್ಷಾವಧಿಯಲ್ಲಿ ಕೈಗೊಂಡ ಹಲವಾರು ಅಭಿವೃದ್ಧಿ ಕಾರ್ಯಗಳು ಜನಪ್ರೀತಿಗೆ ಪಾತ್ರವಾಗಿ ಎರಡನೇ ಬಾರಿಗೆ ಶ್ರೀ ಮಹಾಕಾಳಿ ದೇವಸ್ಥಾನದ ಅಧ್ಯಕ್ಷರನ್ನಾಗಿ ಜನ ಆಯ್ಕೆ ಮಾಡಿದ್ದು ಈಗ ಇತಿಹಾಸ. ದೇವರೊಂದಿಗೆ ಆಧ್ಯಾತ್ಮದ ಅನುಸಂಧಾನದ ಪಥದಲ್ಲಿ ತನ್ನನ್ನು ಸಮರ್ಪಿಸಿಕೊಳ್ಳುವ ಜಯಾನಂದ ಖಾರ್ವಿಯವರು ಆಧ್ಯಾತ್ಮ, ಜನರ ಭಕ್ತಿಯ ಮಾರ್ಗ ಮತ್ತು ದೇವರ ಮಧುರ ಅನೂಭೂತಿಯ ಸಾಕ್ಷಾತ್ಕಾರದ ಬಗ್ಗೆ ವಿಚಾರಭರಿತರಾಗಿ ಮನಮುಟ್ಟುವಂತೆ ಪ್ರಸ್ತುತ ಪಡಿಸುತ್ತಾರೆ. ಧಾರ್ಮಿಕತೆಯೊಂದಿಗೆ ಸಮಾಜಸೇವೆ ಎಂಬ ಪರಿಕಲ್ಪನೆಯೊಂದಿಗೆ ಶ್ರೀ ಮಹಾಕಾಳಿ ದೇವಸ್ಥಾನವನ್ನು ಅಭೂತಪೂರ್ವ ಶಕ್ತಿಕೇಂದ್ರವನ್ನಾಗಿ ರೂಪಿಸುವಲ್ಲಿ ಜಯಾನಂದ ಖಾರ್ವಿಯವರು ತನ್ನನ್ನು ಸಮರ್ಪಿಸಿಕೊಂಡಿದ್ದಾರೆ. ದೇವಸ್ಥಾನವನ್ನು ಕೇಂದ್ರವನ್ನಾಗಿಸಿಕೊಂಡು ಸಮಾಜಮುಖಿ ಕೈಂಕರ್ಯಗಳಿಗೆ ಇಂಬಾಗಬೇಕು ಎಂಬ ಅವರ ಮನದ ತುಡಿತ, ಅಪೂರ್ವ ಕಳಕಳಿ ನಿಜಕ್ಕೂ ಶ್ಲಾಘನೀಯ. ಹತ್ತು ಹಲವು ಸಂದರ್ಭಗಳಲ್ಲಿ ತಮ್ಮ ಖಾಸಗಿತನದ ಒತ್ತಡವನ್ನು ಲೆಕ್ಕಿಸದೇ ಜಯಾನಂದ ಖಾರ್ವಿಯವರು ಸಮಾಜಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ.

ಇದಕ್ಕೆ ಉದಾಹರಣೆಯಾಗಿ ಒಂದು ಘಟನೆಯನ್ನು ಇಲ್ಲಿ ಮೆಲುಕು ಹಾಕೋಣ ಅವರ ಮದುವೆ ಜರುಗಿದ ಮರುದಿನದ ಸಂದರ್ಭ ಖಾರ್ವಿಮೇಲ್ಕೇರಿಯ ಮಹಿಳೆಯೊಬ್ಬಳಿಗೆ ರಕ್ತ Bleeding ಆಗಿ ಜೀವನ್ಮರಣದ ಸ್ಥಿತಿಯಲ್ಲಿದ್ದಳು ಕರೆ ಬಂದ ತಕ್ಷಣ ತನ್ನ ಖಾಸಗಿತನವನ್ನು ಲೆಕ್ಕಿಸದೇ ಮಹಿಳೆಯನ್ನು ಮಣಿಪಾಲ ಆಸ್ಪತ್ರೆಗೆ ಸೇರಿಸಿ ಅಲ್ಲಿನ ಪರಿಚಿತ ವ್ಯಕ್ತಿಗಳ ಮೂಲಕ ರಕ್ತ ಮತ್ತಿತರ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸಿ ಜಯಾನಂದ ಖಾರ್ವಿಯವರು ಮಹಿಳೆಯ ಜೀವ ಉಳಿಸುವಲ್ಲಿ ನೆರವಾದರು. ಇಂತಹ ಹತ್ತು ಹಲವು ಸಮಾಜ ಸೇವೆಯ ಕಾರ್ಯಗಳಲ್ಲಿ ಜಯಾನಂದ ಖಾರ್ವಿಯವರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಧಾರ್ಮಿಕತೆಯೊಂದಿಗೆ ಸಾಮಾಜಿಕ ಸೇವೆಯ ಅವರ ಪರಿಕಲ್ಪನೆಯ ಸಮಾಜಮುಖಿ ಕಳಕಳಿ ಮತ್ತು ತುಡಿತ ಅವರನ್ನು ಸಾರ್ಥಕತ್ಯೆಯ ನೆರೆಯಲ್ಲಿ ತೇಲಾಡಿಸಿದೆ. ಅವರ ಬದುಕು ಈಶ ಸೇವೆ, ಸಮಾಜ ಸೇವೆಗಳ ಮೂಲಕ ಸಂಪನ್ನಗೊಂಡಿದೆ. ಕೆಲವರಿಗೆ ದೊಡ್ಡ ವೇದಿಕೆ ಸಿಕ್ಕಿದರೆ ಸಾಕು ತಮ್ಮ ಪ್ರತಿಷ್ಠೆಯನ್ನು ತೋರ್ಪಡಿಸಿಕೊಳ್ಳಲು ಸಮಾಜವನ್ನು ಕೆಟ್ಟದಾಗಿ ಬಿಂಬಿಸುತ್ತಾರೆ. ತಮ್ಮ ಹೆಚ್ಚುಗಾರಿಕೆಯ ಪ್ರದರ್ಶನ ಮಾಡುವ ಇಂತವರ ವರ್ತನೆಯನ್ನು ಜಯಾನಂದ ಖಾರ್ವಿಯವರು ಖಂಡಾತುಂಡವಾಗಿ ಖಂಡಿಸುತ್ತಾರೆ.

ಯಾವುದೇ ವೇದಿಕೆಯಲ್ಲಾಗಲಿ ಸಮಾಜದ ಬಗ್ಗೆ ಸಕರಾತ್ಮಕ ಮಾತುಗಳನ್ನು ಆಡಬೇಕು ಎಂದು ಅವರು ನುಡಿಯುತ್ತಾರೆ.ಇಲ್ಲದಿದ್ದರೆ ಇತರರು ನಮ್ಮ ಸಮಾಜವನ್ನು ನೋಡುವ ದೃಷ್ಟಿಕೋನ ಭಿನ್ನವಾಗಿರುತ್ತದೆ ಮತ್ತುತಪ್ಪುಕಲ್ಪನೆಯಿಂದ ಕೂಡಿರುತ್ತದೆ ಎಂದು ಅವರು ಎಚ್ಚರಿಸುತ್ತಾರೆ. ಕೊಂಕಣಿ ಖಾರ್ವಿ ಸಮಾಜದ ಪ್ರಮುಖ ಹಬ್ಬವಾದ ಹೋಳಿ ಹಬ್ಬಕ್ಕೆ ವಿನೂತನ ಪರಿಕಲ್ಪನೆಯ ಸ್ಪರ್ಶ ನೀಡಿದ ಜಯಾನಂದ ಖಾರ್ವಿಯವರು ಎಲ್ಲರೂ ತಿರುಗಿ ನೋಡುವಂತಹ ರೋಮಾಂಚಕತೆ ನೀಡಿದರು. ಹೋಳಿಹಬ್ಬದ ಸಂದರ್ಭದಲ್ಲಿ ಶಿಸ್ತುಬದ್ಧ ಸಮವಸ್ತ್ರ ಧಾರಣೆಯನ್ನು ಪಡಿಮೂಡಿಸಿದರು. ಹೋಳಿ ಬಣ್ಣ ಎರಚಿಕೊಳ್ಳುವ ಮುನ್ನ ಶ್ರೀ ಮಹಾಕಾಳಿ ಅಮ್ಮನವರಿಗೆ ಏಳು ಬಣ್ಣದ ರಂಗು ಲೇಪಿಸಿ ಪೂಜಾ ಕೈಂಕರ್ಯ ನಡೆಸಿ ಆಶೀರ್ವಾದ ಪಡೆಯುವ ನೂತನ ಸಂಪ್ರದಾಯಕ್ಕೆ ಅವರ ಅಧಿಕಾರವಾಧಿಯಲ್ಲಿ ಚಾಲನೆ ದೊರಕಿತು.

ಜಯಾನಂದ ಖಾರ್ವಿಯವರು ಧಾರ್ಮಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡ ಮೇಲೆ ಅದ್ಬುತ ವಿಚಾರಗಳ ಧಾರ್ಮಿಕ ಗ್ರಂಥಗಳ ಅಧ್ಯಯನ ನಡೆಸಿ ಬಹಳಷ್ಟು ವಿಚಾರಗಳನ್ನು ತಿಳಿದುಕೊಂಡರು.ಇದು ಮುಖ್ಯವಾಗಿ ಕೊಂಕಣಿ ಖಾರ್ವಿ ಸಮಾಜದ ಗುರುಪೀಠದೊಂದಿಗೆ ಪವಿತ್ರ ಅನುಬಂಧ ಹೊಂದುವಲ್ಲಿ ಸಹಕಾರಿಯಾಯಿತು. ಶ್ರೀ ಶಂಕರ ಸೇವಾ ಸಮಿತಿಯ ಜಿಲ್ಲಾ ಸಮಿತಿಯ ಸದಸ್ಯರಾಗಿ ಕೆಲಸ ಮಾಡಿದರು. ಈ ಸಮಿತಿ ಕಾಸರಗೋಡಿನಿಂದ ಬೈಂದೂರು ತನಕ ಶ್ರೀ ಶೃಂಗೇರಿ ಮಹಾಸ್ವಾಮಿಗಳ ಧಾರ್ಮಿಕ ಪ್ರವಾಸದ ಜೊತೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತದೆ. ಶ್ರೀ ಶೃಂಗೇರಿ ಪೀಠದ ಜಗದ್ಗುರುಗಳ ಉಡುಪಿ ಜಿಲ್ಲೆಯ ಸಮಗ್ರ ಮಾಹಿತಿ ಶ್ರೀ ಜಯಾನಂದ ಖಾರ್ವಿಯವರಿಗೆ ಈ ಸಮಿತಿಯಿಂದ ದೊರಕುತ್ತದೆ. ಗುರುಗಳು ಚಿತ್ಯೈಸಿದ ಸ್ಥಳಗಳಿಗೆ ಹೋಗಿ ಅವರು ತಮ್ಮ ಸೇವೆಯನ್ನು ಸಮರ್ಪಿಸುತ್ತಾರೆ. ನಮ್ಮ ಸಮಾಜದ ಏಕ ಮಾತ್ರ ಪ್ರತಿನಿಧಿಯಾಗಿ ಈ ಸಮಿತಿಯಲ್ಲಿ ಆಯ್ಕೆಗೊಂಡಿರುವ ಜಯಾನಂದ ಖಾರ್ವಿಯವರನ್ನು ಕುಂದೇಶ್ವರ ದೇವಸ್ಥಾನದ ಆಡಳಿತ ಮಂಡಳಿಯಲ್ಲೂ ಆಯ್ಕೆ ಮಾಡಲಾಯಿತು.

ಶ್ರೀ ಮಹಾಕಾಳಿ ದೇವಸ್ಥಾನದಲ್ಲಿ ನಡೆಯುವ ಶ್ರೀ ಗಣೇಶೋತ್ಸವ ಕಾರ್ಯಕ್ರಮಕ್ಕೆ ವಿಜೃಂಭಣೆಯ ಮತ್ತು ಸಾತ್ವಿಕತೆ ಸಂಪ್ರದಾಯದ ಹೊಸ ಸ್ವರೂಪ ನೀಡುವುದರ ಮೂಲಕ ಕುಂದಾಪುರದಲ್ಲಿಯೇ ಮಾದರಿ ಗಣೇಶೋತ್ಸವ ಆಚರಣೆಗೆ ನಾಂದಿ ಹಾಡಿದರು. ಕೊಂಕಣಿ ಖಾರ್ವಿ ಸಮಾಜ ಭಾಂಧವರು ತಲೆತಲಾಂತರಗಳಿಂದ ಶ್ರೀ ಶೃಂಗೇರಿ ಶಾರದಾ ಪೀಠವನ್ನು ಗುರುಪೀಠವನ್ನಾಗಿ ಆರಾಧಿಸಿಕೊಂಡು ಬಂದಿದ್ದು ಇದು ನಮ್ಮೆಲ್ಲರ ಸೌಭಾಗ್ಯವೆಂದು ಅವರ ಧನ್ಯತೆಯ ನುಡಿಗಳು. ಈ ಗುರು ಶಿಷ್ಯ ಪರಂಪರೆಗೆ ಪವಿತ್ರ ಇತಿಹಾಸವಿದೆ ಎಂದು ಹೇಳುತ್ತಾರೆ. ಅಷ್ಟಮಂಗಲ ಪ್ರಶ್ನೆಯಲ್ಲಿ ತೋರಿ ಬಂದಂತೆ ಸಮಾಜ ಬಾಂಧವರ ಶ್ರೇಯೋಭಿಲಾಷೆಯ ಹಿತದೃಷ್ಟಿಯಿಂದ ಬಂಡಿ ಕುರುದಿ ಪೂಜೆ ಮತ್ತು ಮಹಾ ಮೃತ್ಯುಂಜಯ ಹೋಮವನ್ನು ಸಮಾಜ ಭಾಂಧವರ ಸಹಕಾರದೊಂದಿಗೆ ಯಶಸ್ವಿಯಾಗಿ ನೇರವೇರಿಸಿದರು. ಧಾರ್ಮಿಕತೆಯೊಂದಿಗೆ ಸಾಮಾಜಿಕ ಸೇವೆಯೆಂಬ ಪರಿಕಲ್ಪನೆಯೊಂದಿಗೆ ರೂಪುಗೊಂಡ ಸೇವೆಗೆ ನಿದರ್ಶನವೆಂಬಂತೆ ಪ್ರಪ್ರಥಮ ಬಾರಿಗೆ ಕೊರಾನಾ ಚುಚ್ಚುಮದ್ದನ್ನು ಸಾರ್ವಜನಿಕರಿಗೆ ಉಚಿತವಾಗಿ ವಿತರಿಸಿದ ಹೆಗ್ಗಳಿಕೆಗೆ ಶ್ರೀ ಮಹಾಕಾಳಿ ದೇವಸ್ಥಾನ ಪಾತ್ರವಾಯಿತು.

ಇದರಲ್ಲಿ ತನ್ನದೇನು ಪಾತ್ರವಿಲ್ಲ ಎಲ್ಲವನ್ನೂ ಶ್ರೀ ಮಹಾಕಾಳಿ ಅಮ್ಮನವರೇ ಮಾಡಿಸಿಕೊಳ್ಳುತ್ತಾರೆ ಎಂದು ಜಯಾನಂದ ಖಾರ್ವಿಯವರು ವೀನೀತಾ ಭಾವದಿಂದ ನುಡಿಯುತ್ತಾರೆ. ಅಮ್ಮನವರು ಸರ್ವವಿಧದಿಂದಲೂ ತನ್ನನ್ನು ಪ್ರಭಾವಿಸಿದ್ದಾಳೆ ಎಂದು ಭಕ್ತಿಭಾವದಿಂದ ಹೇಳುತ್ತಾರೆ. ಪಂಚಗಂಗಾವಳಿಯ ತಟದಲ್ಲಿ ನೆಲೆನಿಂತು ಭಕ್ತರನ್ನು ಹರಸುತ್ತಿರುವ ಶ್ರೀ ಮಹಾಕಾಳಿ ಅಮ್ಮನವರ ಸಾನ್ನಿಧ್ಯ ಅತ್ಯಂತ ಕಾರಣಿಕವಾಗಿದೆ. ಈ ದಿವ್ಯ ಸಾನ್ನಿಧ್ಯ ಶ್ರೀ ಕ್ಷೇತ್ರವಾಗಿ ಮೆರೆಯಲು ಸಮಸ್ತ ಭಕ್ತಾದಿಗಳ ಸಹಕಾರ ಬೇಕಾಗಿದೆ ಎಂದು ಜಯಾನಂದ ಖಾರ್ವಿಯವರು ಹೇಳುತ್ತಾರೆ.

ಆರು ವರ್ಷಗಳ ಕಾಲ ಶ್ರೀ ಮಹಾಕಾಳಿ ದೇವಸ್ಥಾನದ ಅಧ್ಯಕ್ಷರಾಗಿ ದೇಗುಲದ ಅಭಿವೃದ್ಧಿ ಮತ್ತು ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಿದ ಜಯಾನಂದ ಖಾರ್ವಿಯವರು ಕಳೆದ ಎರಡು ವರ್ಷಗಳಿಂದ ಪುನರಪಿ ಅಧ್ಯಕ್ಷರಾಗಿ ಆಯ್ಕೆಗೊಂಡು ದೇಗುಲದ ಅಭೂತಪೂರ್ವ ಅಭಿವೃದ್ಧಿಯ ಕನಸು ಕಂಡಿದ್ದಾರೆ. ದೇಗುಲದ ಮತ್ತು ಸಮಾಜದ ಕಾರ್ಯಚಟುವಟಿಕೆಗಳನ್ನು ಸಾಂಗವಾಗಿ ನಡೆಸಲು ವಿಶಾಲವಾದ ಭೂಮಿಯನ್ನು ಪಡೆಯಲು ತೀವ್ರ ಪ್ರಯತ್ನ ಮಾಡುತ್ತಿದ್ದಾರೆ. ಇಂತಹ ದೂರದೃಷ್ಟಿ ನಿಲುವಿನ, ಪ್ರಾಮಾಣಿಕ ಸಮಾಜಸೇವೆಯ ಹೃದಯವಂತರು ಶ್ರೀ ಮಹಾಕಾಳಿ ದೇವಸ್ಥಾನದ ಅಧ್ಯಕ್ಷರಾಗಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಚಾರವಾಗಿದೆ. ಸಮಾಜಮುಖಿ ಸೇವಾ ಕೈಂಕರ್ಯಗಳನ್ನು ಸಾಧಿಸಲು ಜಯಾನಂದ ಖಾರ್ವಿಯವರಿಗೆ ಶಕ್ತಿಸ್ವರೂಪಿಣಿ ಶ್ರೀ ಮಹಾಕಾಳಿ ಅಮ್ಮನವರು ಹೆಚ್ಚಿನ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿಕೊಳ್ಳುತ್ತೇನೆ.

ಸುಧಾಕರ್ ಖಾರ್ವಿ
Editor
www.kharvionline.com

Leave a Reply

Your email address will not be published. Required fields are marked *