ಕೊಂಕಣಿ ಖಾರ್ವಿ ಸಮಾಜ ಇವರಿಂದ ಶೃಂಗೇರಿ ಶ್ರೀ ಶಾರದಾಪೀಠದಲ್ಲಿ ಗುರುವಂದನೆ ಕಾರ್ಯಕ್ರಮ

ಗುರುವಂದನ ಸಮಿತಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಕೊಂಕಣಿ ಖಾರ್ವಿ ಸಮಾಜ ಇವರಿಂದ ಶೃಂಗೇರಿ ಶ್ರೀ ಶಾರದಾಪೀಠದಲ್ಲಿ ಚಾತುರ್ಮಾಸ್ಯ ಗುರುವಂದನೆ ಕಾರ್ಯಕ್ರಮ

(ಶನಿವಾರ, ಜುಲೈ 16. 2022)

|| ಶ್ರೀ ಶಾರದಾ ಗುರುಭ್ಯೋ ನಮಃ ||

ಗುರುವಂದನ ಸಮಿತಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಇವರ ಮುಂದಾಳತ್ವದಲ್ಲಿ ಸಮಾಜದ ಹಿರಿಯರು, ಪಟೇಲರು ಹಾಗೂ ಉಭಯ ಜಿಲ್ಲೆಯ ಕೊಂಕಣಿ ಖಾರ್ವಿ ಸಮಾಜದ ಆಡಳಿತಕ್ಕೆ ಒಳಪಟ್ಟ ದೇವಸ್ಥಾನಗಳ ಮೊಕ್ತೇಸರರು ಮತ್ತು ಪ್ರಾದೇಶಿಕ ಸಮುದಾಯ ಹಾಗೂ ಸಂಘ ಸಂಸ್ಥೆಗಳ ಮುಖಂಡರ ಸಂಘಟನೆಯಲ್ಲಿ ಮತ್ತು ಗುರು ಪೀಠದ ಪ್ರಾಂತೀಯ ಧರ್ಮಾಧಿಕಾರಿಯವರ ದಕ್ಷ ಮಾರ್ಗದರ್ಶನದಲ್ಲಿ, ಶ್ರೀ ದೇವರ ಪ್ರೇರಣೆ ಮತ್ತು ಪರಮಪೂಜ್ಯನೀಯ ಶೃಂಗೇರಿ ಶಾರದಾಪೀಠದ ಯತಿವರ್ಯರಾದ ಶ್ರೀ ಶ್ರೀ ಭಾರತೀ ತೀರ್ಥ ಮಹಾ ಸ್ವಾಮೀಜಿಯವರು ಮತ್ತು ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳರವರ ಆಶೀರ್ವಾದದಿಂದ ಚಾತುರ್ಮಾಸ್ಯದ ಶುಭ ಸಂದರ್ಭದಲ್ಲಿ ನಮಗೆ ತಾಯಿ ಶಾರದೆಯ ಪವಿತ್ರ ದರ್ಶನದೊಂದಿಗೆ ಗುರುಗಳ ಆಶೀರ್ವಾದ ಮತ್ತು ಅನುಗ್ರಹ ಸಾಮೂಹಿಕ ಗುರುವಂದನಾ ಕಾರ್ಯಕ್ರಮದ ಮೂಲಕ ದೊರಕಿದ್ದು ನಮ್ಮ ಪುಣ್ಯವೇ ಸರಿ.

ಉತ್ತರದ ಶಿರೂರಿನಿಂದ ದಕ್ಷಿಣದ ಮಂಗಳೂರು ವ್ಯಾಪ್ತಿಯ ಸಮಸ್ತ ಕೊಂಕಣಿ ಖಾರ್ವಿ ಸಮುದಾಯದ ಬಾಂಧವರು ಶೃದ್ಧೆಯಿಂದ ಚಾತುರ್ಮಾಸ್ಯ ಯಾತ್ರೆಯನ್ನು ಕೈಗೊಂಡಿದ್ದು ತಮ್ಮ ವಾಹನವನ್ನು ಭಗವದ್ವಜಗಳಿಂದ ಮತ್ತು ಗುರುವಂದನಾ ಕುರಿತಾದ ಯಾತ್ರೆಯ ಬ್ಯಾನರನ್ನು ಅಳವಡಿಸಿಕೊಂಡು ಶುಭ್ರವಸ್ತ್ರಧಾರಿಯಾಗಿ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟು ವಿಶೇಷವಾಗಿ ಪುರುಷರು ಬಿಳಿ ಪಂಚೆ , ಬಿಳಿ ಅಂಗಿ, ಬಿಳಿ ಶಾಲು ಹಾಗೂ ಸ್ತ್ರೀಯರು ಸಾಂಪ್ರದಾಯಿಕ ಸಮವಸ್ತ್ರವನ್ನು ಧರಿಸಿಕೊಂಡು ಬರುವ ವೈಭವದಲ್ಲೇ ಧಾರ್ಮಿಕತೆ ಎದ್ದು ಕಾಣುತ್ತಿತ್ತು.

ಈ ಬಾರಿ ಸುರಿದ ಜಡಿ ಮಳೆಯ ಕಾರಣದಿಂದ ಆಗುಂಬೆ ಮಾರ್ಗದಲ್ಲಿ ಘನ ವಾಹನ ನಿಷೇಧವಿರುವುದರಿಂದ ಕಾರ್ಕಳ ಮಾರ್ಗ ಮತ್ತು ಮಾಸ್ತಿಕಟ್ಟೆ ಮಾರ್ಗವಾಗಿ ಸುತ್ತುವರಿದು ಸಂಚಾರಮಾಡಿಕೊಂಡು ಬರಬೇಕಾಗಿರುವುದರಿಂದ ಯಾತ್ರಾರ್ಥಿಗಳಿಗೆ ಸ್ವಲ್ಪ ಸುಸ್ತು ಮತ್ತು ಪ್ರಯಾಣಕ್ಕೆ ಒಂದು ತಾಸು ವಿಳಂಬವಾಗಿ ಗೊಂದಲವಾದ್ರೂ, ಶ್ರೀ ಕ್ಷೇತ್ರ ಶೃಂಗೇರಿಯ ಪುಣ್ಯಭೂಮಿಯಲ್ಲಿ ಪಾದಸ್ಪರ್ಶಮಾಡಿದಾಗ ಆಯಾಸವೆಲ್ಲ ಪರಿಹಾರವಾದಂತೆ ಭಾಸವಾಯ್ತು. ಕ್ಷೇತ್ರದ ಪ್ರಾಕೃತಿಕ ಮತ್ತು ಪೌರಾಣಿಕ ಸೊಬಗು ಮತ್ತು ತಾಯಿ ಶಾರದೆಯ ದರ್ಶನದಿಂದ ಮತ್ತು ವಿಶಿಷ್ಠವಾದ ತೇಜಸ್ಸಿನಿಂದ ಬಂದ ಪ್ರಭೆಯಿಂದ ಬಂದಂತ ಎಲ್ಲಾ ಆಸ್ತಿಕ ಬಂದುಗಳು ಪುನೀತರಾದರು ಹಾಗೇಯೇ ಗುರುದರ್ಶನಕ್ಕಾಗಿ, ಗುರುಗಳ ಆಶೀರ್ವಾದ ಮತ್ತು ಅನುಗ್ರಹ ಪಡೆಯಲು ಗುರುಭವನಕ್ಕೆ ಭಕ್ತಿ ಭಾವರಿಂದ ದೌಡಾಯಿಸಿದರು. ನಾವು 800 ಸಂಖ್ಯೆ ಗುರುದರ್ಶನಕ್ಕೆ ಆಗಬಹುದು ಎಂದು ಅಂದಾಜಿಸಿ ಮಠಕ್ಕೆ ತಿಳಿಸಿದ್ರೂ ಪ್ರಾರಂಭದಲ್ಲಿ ಸಂಖ್ಯೆಯ ಕೊರತೆ ಕಂಡಿದ್ದು ನಿಜ ಆಮೇಲೆ ನಾವು ಎಣಿಸಿದ್ದಕಿಂತಲೂ ಹೆಚ್ಚಿನ ಬಂಧುಗಳು ತಂಡೋಪತಂಡವಾಗಿ ಗುರುಭವನದಲ್ಲಿ ಶೃದ್ಧೆಯಿಂದ ಭಕ್ತಿ-ಭಾವದೊಂದಿಗೆ ಪಾಲ್ಗೊಂಡ ಸಂಖ್ಯೆ 1000ಕ್ಕೂ ಮೀರಿರುವುದು ನೋಡಿದ್ರೆ ನಮ್ಮ ಸಮಾಜ ಬಂಧುಗಳಿಗೆ ಗುರುಗಳ ಮೇಲಿನ ಪ್ರೀತಿ,ಭಕ್ತಿ, ಶ್ರದ್ಧೆ ವ್ಯಕ್ತವಾಗುತ್ತಿತ್ತು.

ಗುರುಭವನದ ವೇದಿಕೆಯ ಎಡ ಬದಿಯಲ್ಲಿ ಹಿರಿಯ ಸ್ವಾಮೀಜಿಯವರ ಪೀಠದಲ್ಲಿ ಸಾಕ್ಷಾತ್ ಮಹಾಸ್ವಾಮೀಜಿಯವರೇ ವಿರಾಜಮಾನರಾದಂತೆ ಅಲ್ಲಿ ಇರಿಸಿದ ಆಳೆತ್ತೆರದ ಕುಳಿತ ಭಂಗಿಯ ಭಾವಚಿತ್ರದಿಂದ ವ್ಯಕ್ತವಾಗುತ್ತಿತ್ತು ಇಂದಿನ ಧರ್ಮ ಸಭೆಯಲ್ಲಿ ನಮ್ಮ ಸಮಾಜದ ಆರಾಧ್ಯ ಗುರುಗಳಾದ ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮೀಜಿಯವರು ಗೈರು ಇರುತ್ತಾರೆ ಎಂದು ಆದರೆ ಕ್ಷಣ ಮಾತ್ರದಲ್ಲೇ ಎಲ್ಲೂ ಶಿಷ್ಯರ ಮನಸ್ಸಿನಲ್ಲಿ ಸ್ವಲ್ಪವೂ ಬೇಸರವಾಗದ ರೀತಿಯಲ್ಲಿ ಸರ‍್ಯನಂತೆ ತೇಜಸ್ಸಿನಿಂದ ಕೂಡಿದ ವಿಶೇಷ-ವಿಶಿಷ್ಠ ಕಾಂತಿಯಿಂದ ಪ್ರಕಾಶಮಾನರಾಗಿರುವ ಕಿರಿಯ ಸ್ವಾಮೀಜಿಯವರಾದ ಶ್ರೀ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಯವರ ಪ್ರವೇಶ ಬಂದಂತಹ ಎಲ್ಲಾ ಶಿಷ್ಯ ವರ್ಗದವರನ್ನು ಮಂತ್ರ ಮುಗ್ಧರನ್ನಾಗಿ ಮಾಡಿತು. ಅಭಿನವ ಭಾರತೀ ತೀರ್ಥ ಮಹಾಸ್ವಾಮೀಜಿಯವರಂತೆ ಕಾಣುತ್ತಿದ್ದರು ಶ್ರೀ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಯವರು. ಪೀಠದ ಕುಂದಾಪುರ ಪ್ರಾಂತೀಯ ಧರ್ಮಾಧಿಕಾರಿಯವರಾದ ವೆ|| ಮೂ|| ಲೋಕೇಶ ಅಡಿಗರು ಗುರುವಂದನಾ ಕಾರ್ಯಕ್ರಮವನ್ನು ಗುರು ಶ್ಲೋಕದೊಂದಿಗೆ ನಿರೂಪಿಸಿದರು. ಉಡುಪಿ ಪ್ರಾಂತೀಯ ಧರ್ಮಾಧಿಕಾರಿಯವರಾದ ವೆ|| ಮೂ|| ವಾಗೀಶ ಶಾಸ್ತ್ರೀಯವರು ಮತ್ತು ವಿಪ್ರ ಶ್ರೇಷ್ಠರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಪ್ರಾರಂಭಗೊಂಡಿತು.

ನೆರೆದ ಸಮಸ್ತ ಸಮಾಜ ಬಂಧುಗಳ ಪರವಾಗಿ ಗುರುವಂದನಾ ಸಮಿತಿಯ ಅಧ್ಯಕ್ಷರಾದ ಶ್ರೀ ಮಾಧವ ಖಾರ್ವಿಯವರು ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಕುಂದಾಪುರ ನಾರಾಯಣ ಖಾರ್ವಿಯವರು ಗುರುಗಳ ಮುಂದೆ ಸಮಾಜದ ಒಳಿತಿಗಾಗಿ ಹಿರಿಯರ ಆದೇಶದಂತೆ ಒಂದು ವಿಚಾರವನ್ನು ಮಂಡಿಸಬೇಕು ಅದು ಗುರುಗಳ ಅಮೃತ ಉಕ್ತಿಯಲ್ಲಿ ಶಿಷ್ಯವೃಂದಕ್ಕೆ ತಲುಪಬೇಕೆಂದು ಸೂಚಿಸಿದರು. ಶ್ರೀ ಕು. ನಾರಾಯಣ ಖಾರ್ವಿಯವರು ಸೇರಿದ ಸಮಸ್ತ ಸಮಾಜ ಬಾಂಧವರ ಪರವಾಗಿ ಸಾಷ್ಟಾಂಗ ಪ್ರಣಾಮಮಾಡಿ ನಮ್ಮ ಸಮಾಜ ಮತ್ತು ಗುರುಪರಂಪರೆಯೊಂದಿಗಿನ ನಮ್ಮ ಬಾಂಧವ್ಯವನ್ನು ವಿವರಿಸಿದರು. ಮದುವೆ ಮತ್ತು ಇನ್ನಿತರ ಶುಭ ಕರ‍್ಯದಲ್ಲಿ ಇದುವರೆಗೂ ಎಲ್ಲಿಯೂ ಸಂಪ್ರದಾಯವನ್ನು ಮೀರಿ ಸನಾತನ ಹಿಂದೂ ಸಾತ್ವಿಕ ಆಹಾರ ಪದ್ದತಿಯನ್ನೇ ಸ್ವೀಕಾರ ಮಾಡುತ್ತಿದ್ದರು. ಆದರೆ ಇತ್ತೀಚಿನ ಪಾಶ್ಚತ್ಯ ಶೈಲಿಯ ಪ್ರಭಾವದಿಂದ ಅಲ್ಲೋ ಇಲ್ಲೋ ಸ್ವಲ್ಪ ಕಡೆ ಮದುವೆ ಕಾರ್ಯದಲ್ಲಿ ಮಾಂಸಹಾರವನ್ನು ಮಾಡಿದ್ದು ಹಿರಿಯರ ಗಮನಕ್ಕೆ ಬಂದಿರುತ್ತದೆ. ಅದು ನಮಗೆ ಶೋಭೆಯಲ್ಲ ಅದು ಮುಂದುವರಿಯಬಾರದು. ಮುಂದುವರಿಯಿತು ಅಂತಾದರೆ ನಮ್ಮ ಸಂಸ್ಕೃತಿಗೆ ದಕ್ಕೆಯಾಗುತ್ತದೆ ಮತ್ತು ಆರ್ಥಿಕವಾಗಿ ಸದೃಢವಾಗದವರಿಗೆ ಸಾಲದ ಮೇಲೆ ಭರೆ ಬಿದ್ದಾಂತಾಗುತ್ತದೆ ಎಂದು ಹೇಳಿ ಸ್ವಾಮೀಜಿಯವರು ಸೂಕ್ತವಾದ ಮಾರ್ಗದರ್ಶನವನ್ನು ನೀಡಬೇಕೆಂದು ಕೇಳಿಕೊಂಡರು.

ಸ್ವಾಮೀಜಿಯವರು ಅನುಗ್ರಹ ಪೂರ್ವಕ ಆಶೀರ್ವಚನ ಭಾಷಣ ಶುರುಮಾಡಿದಾಗ ಶಿಷ್ಯವರ್ಗವೆಲ್ಲ ಭಕ್ತಿ-ಭಾವದಿಂದ ಪರವ

ಸ್ವಾಮೀಜಿಯವರ ಸಂದೇಶ : ಒಂದು ವ್ಯಕ್ತಿಯ ಬೆಳವಣಿಗೆಗೆ ಮತ್ತು ಅಭಿವೃದ್ದಿಯಾಗಬೇಕಾದಲ್ಲಿ ಗುರುಗಳ ಆಶೀರ್ವಾದ ಅತ್ಯಗತ್ಯ. ಮನುಷ್ಯನ ಜೀವನದಲ್ಲಿ ಎರಡು ಮಜಲುಗಳು. ಒಂದು ಲೌಕಿಕ ಜೀವನ ಇನ್ನೊಂದು ಧಾರ್ಮಿಕ ಜೀವನ. ಇವೆರಡೂ ಒಂದಕ್ಕೊಂದು ಪೂರಕ. ಒಬ್ಬ ವ್ಯಕ್ತಿ ಧಾರ್ಮಿಕ, ಧರ್ಮಿಷ್ಠನಾಗಬೇಕಾದರೆ, ಅವನ ಜೀವನ ಸಫಲತೆಯನ್ನು ಹೊಂದಬೇಕಾದರೆ ಗುರುಗಳ ಸಂಪೂರ್ಣ ಅನುಗ್ರಹ ಮತ್ತು ಮಾರ್ಗದರ್ಶನವಿರಬೇಕು, ದೇವರ ಆಶೀರ್ವಾದ ಲಭಿಸಬೇಕು. ಸಂತೊಷದಾಯಕ ಸಮೃದ್ಧಿಯ ಲೌಕಿಕ ಜೀವನ ಹೊಂದಬೇಕಾದರೆ ಅವನು ಧಾರ್ಮಿಕ ಜೀವನದಲ್ಲಿ ಸಫಲತೆ ಹೊಂದಬೇಕು. ಹೀಗೆ ಜೀವನ ಎರಡೂ ವಿಭಾಗದಲ್ಲಿ ಸಮತೋಲನವಿರಬೇಕು. ಹೀಗಾದಲ್ಲಿ ಮಾತ್ರ ಸಂತೋಷ, ಆಯುಷ್ಯ, ಆರೋಗ್ಯ, ಸಂಪತ್ತು ಸತ್‌ಕೀರ್ತಿ ಪ್ರಾಪ್ತವಾಗುತ್ತದೆ. ಆದುದರಿಂದ ಪ್ರತಿಯೊಬ್ಬರೂ ಧಾರ್ಮಿಕರಾಗಬೇಕು, ಗುರುಗಳಲ್ಲಿ ಹಾಗೂ ದೇವರಲ್ಲಿ ವಿಶೇಷವಾದ ಭಕ್ತಿ-ಭಾವವನ್ನು ಹೊಂದಬೇಕು. ಲೌಕಿಕ ಜೀವನದಲ್ಲಿ ತಮ್ಮ ತಮ್ಮ ವೃತ್ತಿಯಲ್ಲಿ ಸಾಧನೆಮಾಡಿ ಸಮೃದ್ಧಿ, ಕೀರ್ತಿಗಳಿಸಬೇಕಾದರೆ ವಿಶೇಷವಾಗಿ ತಮ್ಮ ವೃತ್ತಿಯಲ್ಲಿ ಪ್ರೀತಿ ಇರಬೇಕು, ತಮ್ಮ ವೃತ್ತಿ ಧರ್ಮವನ್ನು ಅನುಸರಿಸಬೇಕು. ಎಲ್ಲಾ ಕ್ಷೇತ್ರದಲ್ಲೂ ಪ್ರಾರಂಭದಲ್ಲಿ ಸೋಲು ಬರುವುದು ಸ್ವಾಭಾವಿಕ. ಎಲ್ಲೂ ದೃತಿಗೆಡಬಾರದು. ಸಮಸ್ಯೆಯನ್ನು ಸವಾಲಾಗಿ ಪರಿವರ್ತಿಸಬೇಕು. ಸಮಸ್ಯೆ ಬಂತೆಂದರೆ ದೇವರು ಅಲ್ಲೊಂದು ಪರಿಹಾರವನ್ನು ಇಟ್ಟೆ ಇಡುತ್ತಾನೆ. ಎಲ್ಲೂ ತಮ್ಮ ಅಚಲವಾದ ಗುರಿ ಮತ್ತು ನಿರ್ಧಾರದಿಂದ ಹಿಂದೆ ಸರಿಯಬಾರದು. ಹಾಗೆಯೇ ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಿ ಗೆಲುವು ನಿಮ್ಮದಾಗುತ್ತದೆ. ಎಲ್ಲರಿಗೂ ಒಳಿತನ್ನು ಬಯಸಿ, ನಿಮಗೂ ಒಳಿತೇ ಆಗುತ್ತದೆ ಎಂದು ಜೀವನದ ಆಖ್ಯಾನವನ್ನು ವಿವರಿಸಿದರು.

ಮದುವೆ ಎನ್ನುವುದು ಒಂದು ಧಾರ್ಮಿಕ ಆಚರಣೆ. ನಮ್ಮ ಹಿಂದೂ ವಿವಾಹ ಪದ್ಧತಿಯಲ್ಲಿ ನಾವು ಹಲವಾರು ವಿಧಿ ವಿಧಾನಗಳನ್ನು ಅನುಸರಿಸುತ್ತೇವೆ. ಮದುವೆಯ ಈ ಪವಿತ್ರ ಬಂಧನದಲ್ಲಿ ಪ್ರತಿಯೊಂದು ಶಾಸ್ತ್ರ ಸಂಪ್ರದಾಯಗಳಿಗೂ ಅದರದ್ದೇ ಆದ ಮೌಲ್ಯವಿದ್ದು ಈ ಮೌಲ್ಯವು ವಿವಾಹದ ಪ್ರಮುಖ ಸೂತ್ರವಾಗಿದೆ. ಹಿಂದೂ ಮದುವೆಗಳ ಪ್ರಮುಖ ಸಾಕ್ಷಿ ಎಂದರೆ ಅಗ್ನಿ-ದೇವ, ಹೋಮದ ಮುಖೇನ ದೇವಾನು ದೇವತೆಗಳನ್ನು ಆಹ್ವಾನಿಸಿ ಅಗ್ನಿ ಸಾಕ್ಷಿಯಾಗಿ , ಸಪ್ತಪದಿ ತುಳಿಯದೇ ಮದುವೆ ನೆರವೇರದು. ದಂಪತಿಗಳನ್ನು ಸಾಕ್ಷತ್ ಶಿವ- ಪಾರ್ವತಿ ಮತ್ತು ಲಕ್ಷ್ಮೀ- ನಾರಾಯಣರಂತೆ ಮದುವೆ ಹಸೆಮಣೆಯಲ್ಲಿ ನೋಡುತ್ತಾರೆ. ದಂಪತಿಗಳು ಗ್ರಹಸ್ಥಾಶ್ರಮ ಪ್ರವೇಶಿಸುವಾಗ ಅವರಿಗೆ ವಿಶೇಷವಾಗಿ ಕೆಲವೊಂದು ಧಾರ್ಮಿಕ ಕಾರ್ಯಗಳನ್ನು ಮಾಡಲು ಅರ್ಹತೆ ಬರುತ್ತದೆ, ಹಾಗಾಗಿ ಈ ಧಾರ್ಮಿಕ ಕರ‍್ಯಕ್ರಮದಲ್ಲಿ ಎಲ್ಲರೂ ಸನಾತನ ಹಿಂದೂ ಆಹಾರ ಪದ್ದತಿಯನ್ನೇ ಅನುಸರಿಸಿ ಶುದ್ಧ ಸಾತ್ವಿಕ ಆಹಾರವನ್ನೇ ಸ್ವೀಕರಿಸಬೇಕೆಂದು ಸ್ವಾಮೀಜಿಯವರು ಆದೇಶಿಸಿದರು. ಇದನ್ನು ಅಲ್ಲಿ ಕುಳಿತ ಎಲ್ಲಾ ಸಮಾಜ ಬಾಂಧವರು ಭಕ್ತಿ ಭಾವದಿಂದ ಆಲಿಸುವುದರ ಮುಖೇನ ಸಮ್ಮತಿ ಸೂಚಿಸಿದರು. ನಮ್ಮದು ಶ್ರೇಷ್ಠವಾದ ಋಷಿ ಪರಂಪರೆಯ ಸನಾತನ ಧರ್ಮ, ಈಗ ಹಿಂದೂ ಧರ್ಮವೆಂತಲೂ ನಾವು ಕರೆಯುತ್ತೇವೆ. ಎಲ್ಲರೂ ಸನಾತನವಾದ ನಮ್ಮ ಸಂಸ್ಕೃತಿಯನ್ನು ಆಚರಿಸಬೇಕು. ಸಂಸ್ಕಾರ-ಸಂಸ್ಕೃತಿಯನ್ನು ನಿತ್ಯನಿರಂತರವಾಗಿ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆ ಜೀವನ ಕ್ರಮವೇ ಹಿಂದೂ ಧರ್ಮ.

ನಿಮ್ಮ ಏಳ್ಗೆಯನ್ನು ಉನ್ನತಿಯನ್ನು ಬಯಸುವ ನಾವು ನಿಮಗೆ ಅತೀ ಸರಳವಾದ ೬ ಅಕ್ಷರದ ಮಂತ್ರೋಚ್ಚರಣೆಯನ್ನು ಹೇಳುತ್ತೇನೆ ಅದನ್ನು ನೀವು ನಿತ್ಯ ಬೆಳಿಗ್ಗೆ ಸ್ನಾನ ಆದಮೇಲೆ ದೇವರನ್ನು ಪ್ರಾರ್ಥಿಸುವಾಗ ನಂತರ ಸರಳ ಸುಖಾಸನದಲ್ಲಿ ಕುಳಿತು ಓಂಕಾರದೊಂದಿಗೆ ಪ್ರಾರಂಭಿಸಿ “ನಮಃ ಶಂಕರಾಯ” ಎಂದು 108 ಸಾರಿ ಪಠಿಸಬೇಕು ತನ್ಮೂಲಕ ನಿಮ್ಮ ಜೀವನ ಯಶಸ್ಸಿನ ಪಥದಲ್ಲಿ ಸಾಗುತ್ತದೆ ಮತ್ತು ನಿಮ್ಮ ದಿನ ನಿತ್ಯದ ಕಾರ್ಯ ಸಾಂಗವಾಗಿ ನೆರವೇರುತ್ತದೆ ಎಂದು ಮೂರು ಬಾರಿ ಅವರು ಪಠಸಿ ನಮ್ಮಲ್ಲಿ ಮಂತ್ರೋಚ್ಛರಣೆ ಮಾಡಿದ ಕ್ಷಣ ಅದೊಂದು ಅಧ್ಬುತ. ಹೆಚ್ಚಿನವರು ಅಲ್ಲೇ ಮನಸ್ಸಿನಲ್ಲೇ ಸಂಕಲ್ಪ ಮಾಡಿದರು. ನಿತ್ಯ ನಿರಂತರವಾಗಿ ಈ ಮಂತ್ರೋಚ್ಛರಣೆ ಮಾಡುವುದಾಗಿ.

ಗುರುಪೀಠವನ್ನು ಬಹಳ ಶೃದ್ಧೆಯಿಂದ ಆರಾಧಿಸಿಕೊಂಡು ಬಂದಂತ ಕೊಂಕಣಿಖಾರ್ವಿ ಸಮುದಾಯದವರಿಗೆ ಶ್ರೀ ಚಂದ್ರ ಮೌಳೀಶ್ವರ, ಶ್ರೀ ಶಾರದಾ ಮಾತೆಯ ಸಂಪೂರ್ಣ ಅನುಗ್ರಹ ಪ್ರಾಪ್ತಿಯಾಗಲಿ ನಮ್ಮ ಹಾಗೂ ನಮ್ಮ ಗುರುಗಳ ಸಂಪೂರ್ಣ ಅನುಗ್ರಹ ನಿಮ್ಮ ಸಮಾಜದ ಮೇಲೆ ಇದೆ ಎಂದು ಆಶೀರ್ವಚಿಸಿದರು. ಮಂತ್ರಾಕ್ಷತೆ ಮತ್ತು ಫಲವನ್ನು ನೀಡುವಾಗ ವೈಯಕ್ತಿಕವಾಗಿ ಸಮಾಜದ ಜನರ ಸಮಸ್ಯೆ ಆಲಿಸಿ ಹರಸಿದರು. ಪಟೇಲರು ಮತ್ತು ಹಿರಿಯವರನ್ನು ಗೌರವಿಸಿದರು ವಿಶಿಷ್ಠವಾಗಿ ಸಾಧನೆಮಾಡಿದ ಸಾಧಕರನ್ನು ಗೌರವಿಸಿ ಅನುಗ್ರಹಿಸಿದರು. ಆಯಾಯ ಊರಿನ ದೇವಸ್ಥಾನದಿಂದ ಸಮಾಜ ಸಭಾದಿಂದ ಬಂದಂತ ಸಮಷ್ಠೀ ಬಿಕ್ಷಾವಂದನೆಯನ್ನು ಸ್ವೀಕರಿಸಿ ಅನುಗ್ರಹಿಸಿದರು ಮತ್ತು ಆಯಾಯ ಊರಿನ ಕೋಕಣಿ ಖಾರ್ವಿ ಸಮಾಜಕ್ಕೊಳಪಟ್ಟಂತ ದೇಗುಲದ ಅಭಿವೃದ್ದಿಯ ಕುರಿತಾದ ಮನವಿಯನ್ನು ಸ್ವೀಕರಿಸಿ ಸರಿಯಾದ ಮಾರ್ಗದರ್ಶನ ನೀಡಿದರು.

ಗುರುವಂದನಾ ಕಾರ್ಯಕ್ರಮದ ಯಶಸ್ಸಿಗೇ ಎಲ್ಲರೂ ಸಮನಾದ ಕಾರಣರು ನಿಮ್ಮೆಲ್ಲರ ಧರ್ಮ ನಿಷ್ಠೆ, ಸ್ವಾಮಿ ನಿಷ್ಠೆಯಿಂದ ಈ ಒಂದು ಧಾರ್ಮಿಕ ಕಾರ್ಯಕ್ರಮ ಬಹಳ ಯಶಸ್ವಿಯಾಗಿ ಸಂಪನ್ನಗೊಂಡಿತು. ವಿಶೇಷವಾಗಿ ಎಲ್ಲಾ ಊರಿನ ದೇವಸ್ಥಾನದ ಅಧ್ಯಕ್ಷರು, ಪದಾಧಿಕಾರಿಗಳು, ಮೊಕ್ತೇಸರರು, ಪಟೇಲರು ಮತ್ತು ಹೋಳಿ ಪಂಗಡದ ಪ್ರಮುಖರು ಮತ್ತು ಎಲ್ಲಾ ಸಂಘ ಸಂಸ್ಥೆಯ ಅಧ್ಯಕ್ಷರು ಪದಾಧಿಕಾರಿಗಳಿಗೂ, ಯಾತ್ರೆಯಲ್ಲಿ ಪಾಲ್ಗೊಂಡ ಚಂಡೆ ವಾದನ ಕಲಾವಿದರಿಗೂ, ಯಾತ್ರೆಯಲ್ಲಿ ಪಾಲ್ಗೊಂಡ ಸಮಾಜದ ಮಹನಿಯರಿಗೂ ಮತ್ತು ಮಾತೆಯರಿಗೂ , ತರುಣ ತರುಣಿಯರಿಗೂ ಗುರುವಂದನಾ ಸಮಿತಿಯ ಪರವಾಗಿ ತುಂಬು ಹೃದಯದ ವಂದನೆಗಳು. ವಿಶೇಷವಾಗಿ ನಮ್ಮೀ ಗುರುವಂದನಾ ಕಾರ್ಯಕ್ರಮವನ್ನು ಸಂಘಟಿಸುವಲ್ಲಿ ಮತ್ತು ಗುರುಭವನದಲ್ಲಿ ಅಯೋಜಿಸುವಲ್ಲಿ ಮಾರ್ಗದರ್ಶನ ಮಾಡಿದ ಕುಂದಾಪುರ ಪ್ರಾಂತ್ಯದ ಪ್ರಾಂತೀಯ ಧರ್ಮಾಧಿಕಾರಿ ವೆ| ಮೂ| ಲೋಕೇಶ ಅಡಿಗರು ಮತ್ತು ಸಹೋದರರಿಗೂ, ಉಡುಪಿ ಪ್ರಾಂತ್ಯದ ಪ್ರಾಂತೀಯ ಧರ್ಮಾಧಿಕಾರಿ ವೆ| ಮೂ| ವಾಗೀಶ ಶಾಸ್ತ್ರೀಯವರಿಗೂ ಮತ್ತು ಶೃಂಗೇರಿ ಶಾರದಾ ಪೀಠದ ಆಡಳಿತ ವರ್ಗದವರಿಗೂ ತುಂಬು ಹೃದಯದ ಕೃತಜ್ಞತೆಗಳು.

ವಂದನೆಗಳೊಂದಿಗೆ..,,

ಅಧ್ಯಕ್ಷರು ಹಾಗೂ ಸರ್ವ ಸದಸ್ಯರು,
ಗುರುವಂದನ ಸಮಿತಿ
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ

Leave a Reply

Your email address will not be published. Required fields are marked *