ಮಡಿ ಮೀನುಗಾರಿಕೆ ಎಂಬ ಕೌತುಕ ಸಂಭ್ರಮ

ಸಮುದ್ರ ಪರಿಸರ ವ್ಯವಸ್ಥೆಗಳು ಸ್ವ ನಿಯಂತ್ರಣದ ಸಾಮರ್ಥ್ಯ ಹೊಂದಿರುತ್ತವೆ. ಸಮತೋಲನ (equilibrium) ಸ್ಥಿತಿಗೆ ತಲುಪುವ ಪ್ರಕ್ರಿಯೆಯನ್ನು ಸಂತುಲನ homoeostasis ಎನ್ನಲಾಗುತ್ತದೆ.ಇಂತಹ ನಿಯಂತ್ರಣವನ್ನು ಹಿನ್ನುಣಿಸುವ ಕ್ರಿಯಾವಿಧಾನ (feedback mechanism) ದ ಮೂಲಕ ಸಮುದ್ರ ತನ್ನ ಪರಿಸರ ವ್ಯವಸ್ಥೆಯ ಸ್ಥಿರತೆಯನ್ನು ಕಾಯ್ದುಕೊಳ್ಳುತ್ತದೆ ಮತ್ತು ಸಮೃದ್ಧವಾದ ಜಲಚರ ಜೀವಿಗಳ ಆಶ್ರಯತಾಣವಾಗುತ್ತದೆ. ಈ ಎಲ್ಲಾ ಗುಣಲಕ್ಷಣಗಳನ್ನು ಹೊಂದಿರುವ, ಮಳೆಗಾಲದಲ್ಲೂ ಸಾಂಪ್ರದಾಯಿಕ ಮೀನುಗಾರಿಕೆಗೆ ಅನುಕೂಲವಾಗಿರುವ ವೈಶಿಷ್ಟ್ಯಮಯ ಮತ್ತು ಕೌತುಕಮಯ ಕಡಲತೀರವೇ ಗಂಗೊಳ್ಳಿ ಲೈಟ್ ಹೌಸ್ ಬಳಿಯ ಮಡಿ ಕಡಲತೀರ.

ಜನಸಾಮಾನ್ಯರ ಬಾಯಲ್ಲಿ ಮಡಿ ಎಂದು ಕರೆಯಲ್ಪಡುವ ಈ ಕಡಲತೀರ ಅದ್ಬುತಗಳ ಆಗರ. ಸಮೃದ್ಧತೆಯ ಭಂಡಾರ ಮಡಿ ಎಂಬ ಶಬ್ದಕ್ಕೆ ವಿಶಿಷ್ಟ ಅರ್ಥವಿದ್ದು, ಇದು ಹುಟ್ಟಿಕೊಂಡ ಪರಿ ಅನನ್ಯವಾಗಿದೆ. ಈ ಸಮುದ್ರತೀರ ಬೇರೆ ಸಮುದ್ರ ತೀರಕ್ಕಿಂತ ತುಂಬಾ ಸುರಕ್ಷಿತ ಮಗುವಿಗೆ ತಾಯಿಯ ಮಡಿಲು ಹೇಗೆ ಸುರಕ್ಷಿತವೋ ಹಾಗೆ ಮೀನುಗಾರರ ಪಾಲಿಗೆ ಮೀನುಗಾರಿಕೆಗೆ ತೆರಳಲು ಅತ್ಯಂತ ಸುರಕ್ಷಿತ ತಾಣ ಅಷ್ಟರ ಮಟ್ಟಿಗೆ ಸಮುದ್ರ ಇಲ್ಲಿ ಶಾಂತವಾಗಿರುತ್ತದೆ ಇದರ ಸುತ್ತಮುತ್ತ ಪ್ರದೇಶದ ಕಡಲಿನ ಅಲೆಗಳ ತೀವ್ರತೆ ತುಂಬಾ ಪ್ರಮಾಣದಲ್ಲಿದ್ದರೂ ಮಡಿ ಸಮುದ್ರ ತೀರದಲ್ಲಿ ಅಲೆಗಳು ಶಾಂತವಾಗಿರುತ್ತದೆ ಹಾಗಾಗಿ ಈ ಕಡಲತೀರ ಮೀನುಗಾರರ ಪಾಲಿಗೆ ತಾಯಿಯ ಮಡಿಲು ಇದ್ದಂತೆ ಸಾಗರಮಾತೆ ತನ್ನ ಮಕ್ಕಳಾದ ಮೀನುಗಾರರನ್ನು ಬಲು ಜತನದಿಂದ ಕಾಪಾಡುತ್ತದೆ ಇಡೀ ಕರ್ನಾಟಕದಲ್ಲಿ ಇಷ್ಟೊಂದು ಶಾಂತತೆಯ ಸಮುದ್ರ ಪರಿಸರ ಎಲ್ಲೂ ಕಾಣ ಸಿಗುವುದಿಲ್ಲ ಹಾಗಾಗಿ ಮೀನುಗಾರರು ಈ ಸಮುದ್ರತೀರವನ್ನು ತಾಯಿಯ ಮಡಿಲು ಎಂದು ಕರೆದರು ಈ ಶಬ್ದ ಕಾಲಕ್ರಮೇಣ ಜನರ ಬಾಯಲ್ಲಿ ಮಡಿ ಎಂದು ಸಂಕ್ಷಿಪ್ತವಾಗಿ ಪರಿವರ್ತನೆಗೊಂಡಿತು.

ಇಲ್ಲಿ ROCKY BELT ಬಂಡೆಗಲ್ಲುಗಳ ಸಮೂಹವೇ ಇದೆ ಈ ಬಂಡೆಗಲ್ಲುಗಳ ಸಮೂಹವು ಕಡಲಿನ ಅಲೆಗಳ ತೀವ್ರತೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಬಂಡೆಗಲ್ಲುಗಳ ಸಮೂಹಗಳನ್ನು ದಾಟಿ ಬರುವಾಗ ಕಡಲಲೆಗಳು ತಮ್ಮ ತೀವ್ರತೆಯನ್ನು ಕಳೆದುಕೊಂಡು ದುರ್ಬಲವಾಗಿರುತ್ತದೆ ಹೀಗಾಗಿ ಸಾಂಪ್ರದಾಯಿಕ ನಾಡದೋಣಿಗಳು ಈ ಪ್ರದೇಶದ ಮೂಲಕ ಸಾಗಲು ಅನುಕೂಲವಾಗುತ್ತದೆ. ಸಮುದ್ರದ ಅಲೆಗಳ ನಿರಂತರ ಬಡಿತವಿದ್ದರೂ,ಈ ಕಡಲತೀರ ಬಂಡೆಗಲ್ಲುಗಳ ನಿಯಂತ್ರಕ ವ್ಯವಸ್ಥೆಯನ್ನು ಹೊಂದಿರುವುದರಿಂದ ತನ್ನದೇ ಆದ ಭೌಗೋಳಿಕ ಸ್ವರೂಪಗಳ ಶ್ರೇಣಿಯನ್ನು ಪಡೆದುಕೊಂಡಿದೆ.

ಇಲ್ಲಿ ತೆರೆದ ಭೂಶಿರ ಪ್ರದೇಶವಿಲ್ಲ ಪ್ರಾಕೃತಿಕ ಶಿಲಾಬಂಡೆಗಳಿವೆ ಸಹಸ್ರಾರು ವರ್ಷಗಳ ಹಿಂದೆ ಜ್ವಾಲಾಮುಖಿಯಿಂದ ಮೇಲೆದ್ದು ಬಂದ ಅಗ್ನಿಶಿಲೆಗಳು ಇಲ್ಲಿ ಬಂಡೆಗಳಾಗಿ ರೂಪಾಂತರಗೊಂಡಿವೆ ಕಡಲಿನ ಅಲೆಗಳು ವಿಭಿನ್ನಕೋನದಲ್ಲಿ ಕಡಲತೀರಕ್ಕೆ ಬಡಿಯುತ್ತದೆ ಹಾಗೆ ಬಡಿದಾಗ ಮರಳು ಕಡಲತೀರದುದ್ದಕ್ಕೂ ಚಲಿಸುತ್ತದೆ ಇದು ಕಡಲತೀರದ ವಿಮುಖ ಪಥಚ್ಯುತಿ ಎಂದು ಕರೆಯಲ್ಪಡುತ್ತದೆ. ಸಾಗರವೆಲ್ಲವೂ ಸದಾ ಕಾಲದಲ್ಲೂ ತುದಿಯಿಂದ ಬುಡದವರೆಗೆ ದಿನ ಒಂದಕ್ಕೆ ಅಂಗುಲದ ಒಂದು ಭಾಗದಷ್ಟು ತಿರುಗುತ್ತಿದೆಯೆಂದು ವಿಜ್ಞಾನಿಗಳ ಅಧ್ಯಯನ ತಿಳಿಸಿದೆ. ಮೇಲ್ಭಾಗದ ನೀರು ಆಮ್ಲಜನಕವನ್ನು ಕರಗಿಸಿಕೊಳ್ಳುತ್ತದೆಯೆಂದೂ, ಅದು ಮುಳುಗುತ್ತಾ ಹೋದಂತೆ ಅದನ್ನು ಕಳೆದುಕೊಳ್ಳುತ್ತದೆಯೆಂದು ವಿಜ್ಞಾನಿಗಳ ಅಭಿಮತ. ಇದೇ ಸಂದರ್ಭದಲ್ಲಿ ವಾತಾವರಣದಲ್ಲಿನ ಹೆಚ್ಚಳಗೊಂಡ ಇಂಗಾಲದ ಡೈ ಆಕ್ಸೈಡ್ ಅನ್ನು ಸಮುದ್ರಗಳಲ್ಲಿನ ಕಾರ್ಬೋನೇಟ್ ವ್ಯವಸ್ಥೆಗಳು ಹೀರಿಕೊಳ್ಳುತ್ತವೆ.

ಮಳೆಗಾಲದಲ್ಲಿ ಯಾಂತ್ರಿಕ ದೋಣಿಗಳ ಮೀನುಗಾರಿಕೆಗೆ ನಿಷೇಧವಿರುತ್ತದೆ. ಈ ಸಮಯದಲ್ಲಿ ಸಾಂಪ್ರದಾಯಿಕ ದೋಣಿಗಳಗಷ್ಟೇ ಅವಕಾಶವಿರುತ್ತದೆ. ಉದರ ಪೋಷಣೆಗಾಗಿ ಸಾಂಪ್ರದಾಯಿಕ ಮೀನುಗಾರರು ಕಡಲು ಶಾಂತವಾಗುವುದನ್ನೇ ಕಾಯುತ್ತಿರುತ್ತಾರೆ. ಸಾಮಾನ್ಯವಾಗಿ ಜುಲೈ ತಿಂಗಳ ಕೊನೆಯ ವಾರದಲ್ಲಿ ಮಡಿ ಕಡಲತೀರದಲ್ಲಿ ಮಡಿ ಬೀಳುತ್ತದೆ. ಈ ಶುಭ ಸಂದರ್ಭಕ್ಕಾಗಿಯೇ ಕಡಲಮಕ್ಕಳು ಕಾತುರದಿಂದ ಕಾಯುತ್ತಿರುತ್ತಾರೆ. ಕಡಲು ಶಾಂತವಾಗಿ ಮೀನುಗಾರಿಕೆಗೆ ಅನುಕೂಲವಾಗುವ ಪ್ರಕ್ರಿಯೆಯನ್ನು ಮಡಿ ಬೀಳುವುದು ಎಂದು ಕರೆಯುತ್ತಾರೆ.

ಮಡಿ ಬೀಳುವ ಪ್ರಕ್ರಿಯೆ ಈ ಕಡಲತೀರದಲ್ಲಿ ಹಬ್ಬದ ಸಂಭ್ರಮ ಸೃಷ್ಟಿ ಮಾಡುತ್ತದೆ. ಇಲ್ಲಿ ನಿರಂತರ ಒಂದು ತಿಂಗಳು ಮೀನುಗಾರಿಕೆ ಚಟುವಟಿಕೆಗಳು ನಡೆಯುತ್ತದೆ. ಸಹಸ್ರಾರು ಮೀನುಗಾರರಿಗೆ ಉದರ ಪೋಷಣೆಯ ಕಾಯಕವಾದರೆ, ಈ ಉದ್ಯೋಗವನ್ನು ಅವಲಂಬಿಸಿದವರಿಗೆ ಮತ್ತುಅಪರೋಕ್ಷವಾಗಿ ನೂರಾರು ಜನರಿಗೆ ಉದ್ಯೋಗ ದೊರಕುತ್ತದೆ. ಚಾ ತಿಂಡಿ ಹೋಟೆಲ್ ಗಳು, ಊಟದ ಹೋಟೆಲ್ ಗಳು ಇಲ್ಲಿ ತಲೆಯೆತ್ತುತ್ತದೆ. ಕಡಲಮಕ್ಕಳ ಕಠಿಣ ಪರಿಶ್ರಮದ ಚಟುವಟಿಕೆಗಳು ಈ ಪರಿಸರವನ್ನು ಕ್ರಿಯಾಶೀಲವನ್ನಾಗಿ ಮಾಡುತ್ತದೆ. ಸಮುದ್ರ ಸೃಷ್ಟಿಸುವ ಅಭೂತಪೂರ್ವ ನೈಸರ್ಗಿಕ ವಿದ್ಯಮಾನಗಳು ಇಲ್ಲಿ ಕೌತುಕಪೂರ್ಣ ವಾತಾವರಣವನ್ನು ಸೃಷ್ಟಿಸುತ್ತದೆ .ಮಡಿ ಬೀಳುವ ಈ ವಿಶಿಷ್ಟ ಪ್ರಕ್ರಿಯೆ ಕೂತೂಹಲವನ್ನು ಉಂಟು ಮಾಡುತ್ತದೆ. ಪ್ರತಿವರ್ಷ ಜರುಗುವ ಈ ಪ್ರಕ್ರಿಯೆಯಲ್ಲಿ ಸಮೃದ್ಧ ಮೀನುಗಾರಿಕೆ ನಡೆಯುತ್ತದೆ ಕಡಲು ತಂಪಾದಂತೆ ಮೀನುಗಳು ತೀರ ಪ್ರದೇಶಕ್ಕೆ ಬರುತ್ತದೆ ಇಲ್ಲಿ ಮೀನುಗಾರಿಕೆ ನಡೆಸಲು ಮರವಂತೆ, ಕೋಡೇರಿ, ಕೋಡಿ, ಬೈಂದೂರು ಪ್ರದೇಶದಿಂದಲೂ ಮೀನುಗಾರರು ಆಗಮಿಸುತ್ತಾರೆ ಪ್ರಸ್ತುತ ಇಲ್ಲಿ ಮೂನ್ನೂರಕ್ಕೂ ಹೆಚ್ಚು ಸಾಂಪ್ರದಾಯಿಕ ನಾಡದೋಣಿಗಳು ಮತ್ತು ಪಾತಿದೋಣಿಗಳಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾರೆ.

ಪ್ರಸ್ತುತ ಈ ಪ್ರದೇಶದಲ್ಲಿ ಮೀನುಗಾರರಿಗೆ ರಸ್ತೆ ಸಂಚಾರದ ಮೂಲಭೂತ ಸಮಸ್ಯೆ ಕಾಡುತ್ತಿದೆ ಈಗಿರುವ ರಸ್ತೆ ತೀರಾ ಇಕ್ಕಟ್ಟಾಗಿ, ಕೆಸರು ನೀರಿನ ರೂಪ ಪಡೆದುಕೊಂಡಿದೆ.ಇಲ್ಲಿ ವಾಹನ ಸಂಚಾರ ದುಸ್ತರವಾಗಿರುವುದರಿಂದ ಮೀನುಗಳನ್ನು ಸಾಗಿಸಲು ಈ ಕಡಲತೀರದಲ್ಲಿ ಸಮರ್ಪಕವಾದ ರಸ್ತೆಯ ಅವಶ್ಯಕತೆ ಇರುತ್ತದೆ. ಇಲ್ಲಿ ಸುವ್ಯವಸ್ಥಿತವಾದ ರಸ್ತೆ ನಿರ್ಮಾಣ ಮಾಡಲು ಕುಂದಾಪುರ ಮತ್ತು ಬೈಂದೂರು ಶಾಸಕರು ತಮ್ಮ ಅನುದಾನವನ್ನು ನೀಡಲು ಬದ್ಧರಾಗಿದ್ದು,ರಸ್ತೆ ನಿರ್ಮಾಣ ಮಾಡಲು ಖಾಸಗಿ ಜಮೀನು ಮಾಲೀಕರ ಸ್ವಲ್ಪ ತಕರಾರು ಇರುವುದರಿಂದ ವಿಳಂಭವಾಗಿದೆ ಎಂದು ಸ್ಥಳೀಯ ಮೀನುಗಾರರು ಹಾಗೂ ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀನಿವಾಸ ಖಾರ್ವಿ ಪರಿಸ್ಥಿತಿಯನ್ನು ವಿವರಿಸುತ್ತಾರೆ. ಕಂಚುಗೋಡಿನ ನಾಡದೋಣಿ ಮೀನುಗಾರ ನಾಗೇಶ್ ಖಾರ್ವಿಯವರು ಹಾಗೂ ಪಾತಿದೋಣಿ ಮೀನುಗಾರರಾದ ನಿತಿನ್ ಖಾರ್ವಿ ಮತ್ತು ಹೃತಿಕ್ ಖಾರ್ವಿ ಮಡಿ ಕಡಲತೀರದ ಗುಣಲಕ್ಷಣಗಳನ್ನು ಮತ್ತು ಮೀನುಗಾರಿಕೆಗೆ ಸಂಬಂಧಪಟ್ಟಂತೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಮತ್ತು ಗಂಗೊಳ್ಳಿ ಗ್ರಾಮಪಂಚಾಯತ್ ಅಧ್ಯಕ್ಷರಾದ ಶ್ರೀನಿವಾಸ ಖಾರ್ವಿಯವರು ಈ ಕಡಲತೀರದ ಇತಿಹಾಸ ಮತ್ತು ಇತರ ವಿಷಯಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.ಅವರಿಗೆ ಧನ್ಯವಾದಗಳನ್ನು ಸಮರ್ಪಿಸುತ್ತೇನೆ.

ಹಿಂದೂ ಮಹಾಸಾಗರವು ಭೂಮಿಯ ಹೊರಮೈ ಶೇಕಡಾ 14 ರಷ್ಟು ಭಾಗವಾಗಿರುತ್ತದೆ. ಹಿಂದೂ ಮಹಾಸಾಗರವು ಪ್ರತಿವರ್ಷವೂ ತನ್ನ ಸಾಗರ ಪ್ರವಾಹಗಳನ್ನು ಎರಡಾವರ್ತಿ ಬದಲಾಯಿಸುತ್ತಿರುವುದು ಕೂತೂಹಲಕಾರಿ ವಿಷಯವಾಗಿದೆ. ಪ್ರತಿ ಪರಿಸರ ವ್ಯವಸ್ಥೆಯೂ ಅನೇಕ ಮೂಲಭೂತ ಗುಣಲಕ್ಷಣಗಳನ್ನು ಹೊಂದಿದ್ದು,ಇವು ಅದರ ಘಟಕಗಳ ನಡುವಿನ ಪರಸ್ಪರ ಕ್ರಿಯೆಗಳ ಪರಿಣಾಮವಾದದ್ದು ಈ ಗುಣಲಕ್ಷಣಗಳನ್ನು ಅರ್ಥ ಮಾಡಿಕೊಳ್ಳಲು ಇಡೀ ಪರಿಸರ ವ್ಯವಸ್ಥೆಯನ್ನೇ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಕಾಲಕಾಲಕ್ಕೆ ಪ್ರಕೃತಿ ಆಯಾ ಋತುಚಕ್ರಗಳಿಗೆ ಅನುಗುಣವಾಗಿ ಮನುಷ್ಯರ ಬದುಕಿಗೆ ಆಧಾರವಾದ ಸಂಪನ್ಮೂಲಗಳನ್ನು ಒದಗಿಸುತ್ತಲೇ ಬಂದಿದೆ ಅಭೂತಪೂರ್ವವೂ, ವೈಶಿಷ್ಟ್ಯಪೂರ್ಣವೂ ಆದ ನೈಸರ್ಗಿಕ ಕೊಡುಗೆಯನ್ನು ನಾವು ದೈವಿಸ್ವರೂಪದಲ್ಲಿ ಆರಾಧನೆ ಮಾಡಿದರೆ ಬದುಕು ಸಂಪನ್ನಗೊಳ್ಳುತ್ತದೆ ನೈಸರ್ಗಿಕ ಅದ್ಬುತ ತಾಣವಾಗಿ ಮೀನುಗಾರರನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡು ಸುರಕ್ಷಿತವಾಗಿ ಕಾಪಾಡುತ್ತಿರುವ ಗಂಗೊಳ್ಳಿ ಮಡಿ ಕಡಲತೀರದಲ್ಲಿ ಮತ್ಸ್ಯ ಸಂಪತ್ತು ಸಮೃದ್ಧವಾಗಲಿ ಕಡಲಮಕ್ಕಳ ಪರಿಶ್ರಮದ ಬದುಕಿಗೆ ಈ ಕಡಲತೀರ ನಿರಂತರ ಆಸರೆ ನೀಡಲಿ ಎಂದು ಆಶಿಸುತ್ತೇನೆ.

ಸುಧಾಕರ್ ಖಾರ್ವಿ
Editor
www.kharvionline.com

One thought on “ಮಡಿ ಮೀನುಗಾರಿಕೆ ಎಂಬ ಕೌತುಕ ಸಂಭ್ರಮ

  1. ತು೦ಬಾ ಖುಷಿ ಆಯ್ತಾ ನಮ್ಮ ಊರ ಹತ್ತಿರ ಊರು ನೋಡಿ. Thank you 👏🙏💐💐👍👌

Leave a Reply

Your email address will not be published. Required fields are marked *