ಪಾಂಡವರ ಕಾಲದ ಕಂಚುಗೋಡಿನ ಶ್ರೀ ಪಾರ್ಥೇಶ್ವರ

ಪಡುವಣ ಕಡಲಿನ ತೀರದಲ್ಲಿ ಪವಡಿಸಿರುವ ಕಂಚಗೋಡು ಪ್ರಾಕೃತಿಕ ಸೌಂದರ್ಯದ ನೆಲೆವೀಡು. ಹತ್ತು ಹಲವು ವಿಶೇಷತೆಗಳಿಂದ ಮೈದುಂಬಿಕೊಂಡು ಶೋಭಾಯಮಾನವಾಗಿರುವ ಕಂಚಗೋಡಿನಲ್ಲಿ ಪ್ರಾಚೀನ ಧಾರ್ಮಿಕ ಪರಂಪರೆಯ ದ್ಯೋತಕವಾಗಿ ಪಾಂಡವರಿಂದ ಪ್ರತಿಷ್ಠಾಪಿಸಲ್ಪಟ್ಟ ಪರಶಿವನ ದೇಗುಲವಿರುವುದು ಹೊರಜಗತ್ತಿಗೆ ಹೆಚ್ಚಾಗಿ ಗೊತ್ತಿಲ್ಲ. ಈ ಪುರಾಣ ಪ್ರಸಿದ್ಧ ಕ್ಷೇತ್ರವೇ ಪಾರ್ಥೇಶ್ವರ ದೇವಸ್ಥಾನ.

ಸಂಪೂರ್ಣ ಶಿಲಾಮಯ ಗರ್ಭಗುಡಿ ಹೊಂದಿರುವ ಪಾರ್ಥೇಶ್ವರ ದೇಗುಲದಲ್ಲಿ ಸುದೃಡವಾದ ಪಾಣಿಪೀಠದಲ್ಲಿ ಮಧ್ಯಮ ಪಾಂಡವ ಅರ್ಜುನನಿಂದ ಮಹಾಭಾರತ ಕಾಲದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಅಪೂರ್ವ ಶಿವಲಿಂಗವಿದೆ. ಗಾತ್ರದಲ್ಲಿ ಸಣ್ಣದಾದರೂ ಆಕರ್ಷಣೀಯವಾಗಿದೆ ಶಿವಲಿಂಗದ ಜೊತೆಗೆ ಸಾಲಿಗ್ರಾಮವೂ ಇದೆ ಗರ್ಭಗುಡಿಯ ಹೊರಭಾಗದಲ್ಲಿ ದ್ವಾರಪಾಲಕರ ಕೆತ್ತನೆಯೂ ಸೊಗಸಾಗಿದೆ ನೆಲಹಾಸಿನ ಗೋಡೆಗೆ ಚಾಚಿ ಇಟ್ಟಿರುವ ವೀರಗಲ್ಲು ಗತಕಾಲದ ಇತಿಹಾಸವನ್ನು ಸಾಕ್ಷೀಕರಿಸುವಂತಿದೆ. ದೇಗುಲದ ಬಲಭಾಗದ ಉತ್ತರ ದಿಕ್ಕಿನಲ್ಲಿ ಬಾವಿಯಿದ್ದು ವರ್ಷದ ಹನ್ನೆರಡು ತಿಂಗಳು ಜಲಸಮೃದ್ದಿಯಾಗಿರುತ್ತದೆ ಎಂದು ದೇಗುಲದ ಅರ್ಚಕರಾದ ಶ್ರೀ ರವಿ ಕಾರಂತರು ನುಡಿಯುತ್ತಾರೆ.

ಈ ಗರ್ಭಗುಡಿಯನ್ನು ಆಗಿನ ಕಾಲಘಟ್ಟದಲ್ಲಿ ವಿಶಿಷ್ಟ ವಿನ್ಯಾಸದಿಂದ ನಿರ್ಮಾಣ ಮಾಡಲಾಗಿದ್ದು, ಮಳೆಗಾಲದಲ್ಲಿ ಈ ಗರ್ಭಗುಡಿಯ ಒಳಗೆ ಬೆಚ್ಚಗಿನ ವಾತಾವರಣವಿರುತ್ತದೆ ಮತ್ತು ಬೇಸಿಗೆಯ ಪ್ರಖರತೆಯಲ್ಲೂ ತಂಪಾದ ವಾತಾವರಣವಿರುತ್ತದೆ ಎಂದು ಅರ್ಚಕರಾದ ರವಿ ಕಾರಂತರು ಹೇಳುತ್ತಾರೆ. ಇವರು ಹಲವು ವರ್ಷಗಳಿಂದ ನಿರಂತರವಾಗಿ ಬ್ರಾಹ್ಮಿಮೂಹೂರ್ತದಲ್ಲಿ ಶ್ರೀ ಪಾರ್ಥೇಶ್ವರನ ಪೂಜಾಕೈಂಕರ್ಯ ನಡೆಸಿಕೊಂಡು ಬಂದಿದ್ದು, ನಂತರ ಉಳಿದ ಸಮಯದಲ್ಲಿ ಅರ್ಚಕರ ಸಂಬಂಧಿಕರೊಬ್ಬರು ಪೂಜೆ ಮಾಡುತ್ತಾರೆ.

ಪ್ರತಿಫಲಾಪೇಕ್ಷೆಯಿಲ್ಲದೇ ಹಲವಾರು ವರ್ಷಗಳಿಂದ ಈ ದೇಗುಲದಲ್ಲಿ ಪೂಜೆ ಮಾಡಿಕೊಂಡು ಬಂದಿರುವ ಅರ್ಚಕರಾದ ರವಿ ಕಾರಂತರು ಶ್ರೀ ಪಾರ್ಥೇಶ್ವರನ ಕೃಪೆಯಿಂದ ತನ್ನ ಬದುಕು ಸಂಪನ್ನಗೊಂಡಿದೆ ಎಂದು ಆತ್ಮತೃಪ್ತಿಯಿಂದ ನುಡಿಯುತ್ತಾರೆ. ಧಾರ್ಮಿಕ ದತ್ತಿ ಇಲಾಖೆಯ ಸುಪರ್ದಿಯಲ್ಲಿರುವ ಶ್ರೀ ಪಾರ್ಥೇಶ್ವರ ದೇಗುಲಕ್ಕೆ ಸರ್ಕಾರದಿಂದ ತಸ್ವೀಕ್ ಬರುವುದು ಬಿಟ್ಟರೆ ಮತ್ತೇನೂ ಸೌಲಭ್ಯ ಸಿಗುವುದಿಲ್ಲ.ಈ ತಸ್ವೀಕ್ ದೇಗುಲದ ಮೊಕ್ತೇಸರರಿಗೆ ಸಲ್ಲಲ್ಪಡುತ್ತದೆ ಎನ್ನಲಾಗಿದೆ.

ಪ್ರಸ್ತುತ ಅರ್ಚಕರಾದ ರವಿ ಕಾರಂತರು ದೇಗುಲದ ಖರ್ಚುವೆಚ್ಚಗಳನ್ನು ಭರಿಸುತ್ತಿದ್ದಾರೆ ಎಂದು ಹೇಳುತ್ತಾರೆ. ಕಂಚಗೋಡಿನ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರ ಆರಾಧ್ಯ ದೇವರಾದ ಶ್ರೀ ಪಾರ್ಥೇಶ್ವರ ಸನ್ನಿಧಿಯಲ್ಲಿ ವಿಶೇಷವಾಗಿ ಪೂಜೆ ಪುರಸ್ಕಾರಗಳು ಸೋಮವಾರ ನಡೆಯುತ್ತದೆ. ಉಳಿದಂತೆ ಕಾರ್ತಿಕ ಮಾಸದಲ್ಲಿ ದೀಪೋತ್ಸವ ಕಾರ್ಯಕ್ರಮ ಮತ್ತು ಶಿವರಾತ್ರಿಯಂದು ವಿಶೇಷವಾಗಿ ಭಕ್ತಾದಿಗಳು ಪೂಜೆ ಸಲ್ಲಿಸುತ್ತಾರೆ. ಇಲ್ಲಿನ ಸ್ಥಳೀಯ ಕೊಂಕಣಿ ಖಾರ್ವಿ ಸಮಾಜದ ಮೀನುಗಾರರು ಕಡಲಿಗೆ ಇಳಿಯುವ ಮುನ್ನ ಶ್ರೀ ಪಾರ್ಥೇಶ್ವರನಿಗೆ ಪೂಜೆ ಸಲ್ಲಿಸಿ ಮತ್ಸ್ಯ ಸಮೃದ್ಧಿಗಾಗಿ ಪ್ರಾರ್ಥಸಿಕೊಳ್ಳುತ್ತಾರೆ. ಇಲ್ಲಿ ತಮ್ಮ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯುವಂತಾಗಲು ಪ್ರಸಾದವನ್ನು ಕೂಡಾ ಕೇಳುತ್ತಾರೆ. ಅಪಾರ ಕಾರಣಿಕ ಶಕ್ತಿಯಿರುವ ಶ್ರೀ ಪಾರ್ಥೇಶ್ವರನು ಭಕ್ತಾದಿಗಳನ್ನು ಮಮತೆಯಿಂದ ಪೊರೆಯುತಿದ್ದಾನೆ.

ಶ್ರೀ ಪಾರ್ಥೇಶ್ವರನ ಮಹಿಮೆ ಅಗಾಧವಾದುದೆಂದು ಭಕ್ತಾದಿಗಳು ಹೇಳುತ್ತಾರೆ. ಪಾರ್ಥೇಶ್ವರ ಸ್ವಾಮಿಯ ಬಗ್ಗೆ ಜನರ ನಂಬಿಕೆಯೂ ಕೂಡಾ ಭಾವಾನಾತ್ಮಕವಾದುದು ಮತ್ತು ಶ್ರದ್ಧಾಭಕ್ತಿಯಿಂದ ಕೂಡಿದೆ. ಧರ್ಮ ಅಧರ್ಮಗಳ ನಡುವಿನ ಸಂಘರ್ಷ ಎನ್ನುವ ಸರಳೀಕೃತ ವ್ಯಾಖ್ಯಾನ ಹೊಂದಿರುವ ಮಹಾಭಾರತ ಕಾಲದಲ್ಲಿ ಪಾಂಡವರು ಕೌರವರ ಕಪಟ ಪಗಡೆಯಾಟದಲ್ಲಿ ಸೋತು ಅಜ್ಞಾತವಾಸ ಅನುಭವಿಸಲು ಸಮಗ್ರ ಭಾರತವನ್ನು ಸುತ್ತುತ್ತಾರೆ. ಹಾಗೆ ಸುತ್ತುವಾಗ ಕರ್ನಾಟಕಕ್ಕೂ ಬರುತ್ತಾರೆ. ಸಾಗರದ ಬಳಿಯಲ್ಲಿ ಭೀಮೇಶ್ವರನನ್ನು ಪ್ರತಿಷ್ಠಾಪಿಸಿದ ಬಳಿಕ ಪಾಂಡವರು ನೇರವಾಗಿ ಕರಾವಳಿಗೆ ಪ್ರವೇಶಿಸುತ್ತಾರೆ. ಕಡಲತಡಿಯಲ್ಲಿ ಬಂಡೆಗಳಿಂದ ಆವೃತವಾಗಿದ್ದ ಈ ಪ್ರದೇಶದಲ್ಲಿ ತಾಯಿಯ ಸೂಚನೆಯಂತೆ ಅರ್ಜುನ ಪಶ್ಚಿಮಾಭಿಮುಖವಾಗಿ ಶಿವಲಿಂಗವನ್ನು ಪ್ರತಿಷ್ಠಾಪಿಸಿ ಪೂಜೆಗೈಯುತ್ತಾನೆ. ಈ ಕಾರಣದಿಂದ ಈ ದೇಗುಲ ಪಾರ್ಥೇಶ್ವರ ಎಂದು ಪ್ರಖ್ಯಾತವಾಗುತ್ತದೆ. ಅರ್ಜುನನ ಮತ್ತೊಂದು ಹೆಸರು ಪಾರ್ಥ ಇದು ಸ್ಥಳ ಪುರಾಣ ಬಳಿಕ ಇಲ್ಲಿಂದ ತೆರಳಿದ ಪಾಂಡವರು ಕಡಲತೀರದ ಮಾರ್ಗವಾಗಿ ಲೈಟ್ ಹೌಸ್ ಮಡಿ ಕಡಲತೀರಕ್ಕೆ ಬರುತ್ತಾರೆ ಲೈಟ್ ಹೌಸ್ ಬಳಿಯ ಗುಹೆಯಲ್ಲಿ ಪಾಂಡವರು ಕೆಲಕಾಲ ತಂಗುತ್ತಾರೆ ಇಲ್ಲಿ ಶಿಲೆಯ ಮೇಲೆ ದ್ರೌಪದಿ ಕೆತ್ತಿದ ಕಲಾಕೃತಿಗಳನ್ನು ಈಗಲೂ ಕಾಣಬಹುದಾಗಿದೆ ಮತ್ತು ಗುಹೆಯ ಒಳಗಡೆ ಶತಶತಮಾನಗಳ ಹಿಂದೆ ಪಾಂಡವರು ಉಪಯೋಗಿಸುತ್ತಿದ್ದ ಮಡಿಕೆ ಕುಡಿಕೆಗಳು ಇದ್ದವು ಎನ್ನಲಾಗಿದೆ. ಪ್ರಸ್ತುತ ಈ ಗುಹೆಯ ಶಿಲೆಗಳು ಶಿಥಿಲಗೊಂಡಿರುವುದರಿಂದ ಮತ್ತು ಸುತ್ತಮುತ್ತ ಗಿಡಕಂಟಿಗಳು ಬೆಳೆದಿದ್ದರಿಂದ ಈ ಗುಹೆ ಪ್ರವೇಶಿಸುವುದು ಅಸಾಧ್ಯದ ಮಾತಾಗಿದೆ.

ಕರ್ನಾಟಕದಲ್ಲಿ ಪ್ರಬಲವಾದ ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯ ಆರಂಭವಾಗಿ ಇತರ ರಾಜ ಮನೆತನಗಳ ಪ್ರಭಾವ ಕಡಿಮೆಯಾಯಿತು.ಕ್ರಿ.ಶ.1345 ರಲ್ಲಿ ಕರಾವಳಿಯ ಕೆಲವು ರಾಜಮನೆತನಗಳನ್ನು ವಿಜಯನಗರದ ಅರಸರು ತಮ್ಮ ಸಾಮ್ರಾಜ್ಯದ ಸಾಮಂತ ಒಕ್ಕೂಟ ವ್ಯವಸ್ಥೆಗೆ ಸೇರಿಸಿಕೊಂಡರು.ಈ ಸಾಮಂತ ರಾಜರ ಚಟುವಟಿಕೆಗಳನ್ನು ಎಚ್ಚರದಿಂದ ಗಮನಿಸಲು ರಾಜ್ಯಪಾಲರನ್ನು ನೇಮಿಸಲಾಯಿತು. ಸಾಮಂತ ರಾಜರುಗಳು ವಿಜಯನಗರದ ಅರಸರಿಗೆ ಸಾಮಂತಿಕೆಯ ಕಾಣಿಕೆಗಳನ್ನು ತಪ್ಪದೇ ಕೊಡಬೇಕಾಗಿತ್ತು. ಆದರೆ ಶ್ರೀ ಕೃಷ್ಣದೇವರಾಯನ ಮರಣಾನಂತರ ಕರಾವಳಿಯ ಮತ್ತು ಮಲೆನಾಡಿನ ಅನೇಕ ಸಾಮಂತ ರಾಜರುಗಳು ವಿಜಯನಗರ ಸಾಮ್ರಾಜ್ಯದ ಪ್ರಭುತ್ವವನ್ನು ತಿರಸ್ಕರಿಸಿ ಸ್ವತಂತ್ರರಾದರು.

ಪಾಂಡವರ ಕಾಲದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಶ್ರೀ ಪಾರ್ಥೇಶ್ವರ ದೇವಸ್ಥಾನ ಕಾಲಕ್ರಮೇಣ ಶಿಥಿಲಾವಸ್ಥೆಗೆ ತಲುಪಿತು ಶಿಥಿಲಾವಸ್ಥೆಗೆ ತಲುಪಿದ ಈ ದೇಗುಲವನ್ನು ಅನೇಕ ರಾಜಮನೆತನಗಳು ಕಾಲಕಾಲಕ್ಕೆ ಅಭಿವೃದ್ಧಿ ಪಡಿಸುತ್ತಾ ಬಂದವು ಸುಮಾರು 11 ರಿಂದ 14 ನೇ ಶತಮಾನದವರೆಗೆ ದಕ್ಷಿಣಕನ್ನಡದ ಇತಿಹಾಸದಲ್ಲೇ ಪ್ರಬುದ್ಧತೆಯನ್ನು ಸಾಧಿಸಿದ ಆಳುಪ ಅರಸರ ಆಳ್ವಿಕೆಯ ಕಾಲದಲ್ಲಿ ಈ ದೇಗುಲ ಉಚ್ಚ್ರಾಯ ಸ್ಥಿತಿಯಲ್ಲಿತ್ತು.ವಿಜಯನಗರ ಸಾಮ್ರಾಜ್ಯದ ಸಾಮಂತ ಆಳ್ವಿಕೆಯಿಂದ ಹೊರಬಂದು ಸ್ವತಂತ್ರರಾದ ಕೆಳದಿ ಅರಸರು 1554 ರಿಂದ ತಮ್ಮ ಆಳ್ವಿಕೆ ಆರಂಭಿಸಿದರು.ಕ್ರಿ.ಶ.1598 ರಲ್ಲಿ ಕೆಳದಿ ಅರಸರ ರಾಜಕೀಯ ಶಕ್ತಿ ಕುಂದಾಪುರ ತಾಲೂಕಿನಲ್ಲಿ ಪ್ರಬಲವಾಯಿತಲ್ಲದೇ ಇಲ್ಲಿ ಅವರ ಪ್ರತ್ಯಕ್ಷ ಆಡಳಿತವು ಪ್ರಾರಂಭವಾಯಿತು.

ಇದರಿಂದಾಗಿ ಕುಂದಾಪುರ ಪ್ರಾಂತ್ಯದಲ್ಲಿ ಆಳಿಕೊಂಡಿದ್ದ ವಿಜಯನಗರ ಸಾಮಂತ ಅರಸು ಮನೆತನದ ರಾಜಕೀಯ ಶಕ್ತಿ ಅಂತ್ಯಗೊಂಡಿತು.ಕ್ರಿ.ಶ.1630 ರಲ್ಲಿ ಕೆಳದಿ ವೆಂಕಟಪ್ಪ ನಾಯಕನ ನಿಧನದ ನಂತರ ಉಂಟಾದ ಗೊಂದಲದ ಲಾಭ ಪಡೆದುಕೊಂಡ ಪೋರ್ಚುಗೀಸರು ಗಂಗೊಳ್ಳಿಯನ್ನು ವಶಪಡಿಸಿಕೊಂಡರು. ಗಂಗೊಳ್ಳಿಯನ್ನು ತುಂಡರಿಸಿ, ದ್ವೀಪವನ್ನಾಗಿ ಮಾಡಲು ಪೋರ್ಚುಗೀಸರು ಪ್ರಯತ್ನಿಸಿದರೂ ಪ್ರಕೃತಿ ವಿಕೋಪದಿಂದ ಅದು ವಿಫಲವಾಯಿತು.ಇದೇ ಸಂದರ್ಭದಲ್ಲಿ ಕೆಳದಿ ವೀರಭದ್ರ ನಾಯಕನ ಮತ್ತು ಸ್ಥಳೀಯ ಜನರ ಪ್ರತಿರೋಧದ ನಡುವೆಯೂ ಗಂಗೊಳ್ಳಿ ಬಂದರು ಪ್ರದೇಶದಲ್ಲಿ ಕ್ರೈಸ್ತ ಜನರನ್ನು ನೆಲೆಯೂರುವಂತೆ ಮಾಡುವಲ್ಲಿ ಪೋರ್ಚುಗೀಸರು ಯಶಸ್ವಿಯಾದರು.

ವೀರಭದ್ರ ನಾಯಕನ ನಂತರ ಅಧಿಕಾರಕ್ಕೆ ಬಂದ ಶಿವಪ್ಪ ನಾಯಕ ಕುಂದಾಪುರದ ಇತಿಹಾಸದಲ್ಲೇ ಅಜರಾಮರನಾದನು.1653 ರಲ್ಲಿ ಪೋರ್ಚುಗೀಸರ ಮೇಲೆ ದಂಡೆತ್ತಿ ಹೋದ ಶಿವಪ್ಪ ನಾಯಕನು ಅವರನ್ನು ಸದೆಬಡಿದು ಅವರ ಕೋಟೆಗಳನ್ನು ದ್ವಂಸಗೊಳಿಸಿ ಗಂಗೊಳ್ಳಿಯನ್ನು ಪುನಃ ವಶಪಡಿಸಿಕೊಂಡನು ಇದೇ ಸಮಯದಲ್ಲಿ ಕುಂದಾಪುರ ತಾಲೂಕಿನ ಅನೇಕ ದೇಗುಲಗಳಿಗೆ ದಾನದತ್ತಿ ನೀಡಿದನು. ಅದರಲ್ಲಿ ಕಂಚಗೋಡು ಪಾರ್ಥೇಶ್ವರ ಮತ್ತು ಕುಂದಾಪುರದ ಕುಂದೇಶ್ವರ ದೇಗುಲಗಳು ಪ್ರಮುಖವಾಗಿದೆ.

ಇತಿಹಾಸ ಕಾಲದಲ್ಲಿ ವೈಭವಪೂರ್ಣವಾಗಿ ಮೆರೆದ ಶ್ರೀ ಪಾರ್ಥೇಶ್ವರ ದೇಗುಲ ಇಂದು ಅಭಿವೃದ್ಧಿ ಕಾರ್ಯಗಳು ನಡೆಯದೇ ಜೀರ್ಣಾವಸ್ಥೆಯಲ್ಲಿದೆ. ಬಂಡೆಗಲ್ಲಿನಿಂದ ಆವೃತಗೊಂಡಿದ್ದ ಈ ದೇಗುಲದ ಸುತ್ತಮುತ್ತಲ ಬಂಡೆಗಲ್ಲುಗಳ ಬಹುತೇಕ ಭಾಗಗಳನ್ನು ಸ್ಪೋಟಿಸಿ ಆರಾಟೆ ಸೇತುವೆ ನಿರ್ಮಾಣ ಕಾರ್ಯಕ್ಕೆ ಬಳಸಿಕೊಳ್ಳಲಾಯಿತು.ಬಂಡೆಗಲ್ಲುಗಳ ಕೆಲವೇ ಭಾಗವನ್ನು ದೇಗುಲದ ಹಿಂಭಾಗದಲ್ಲಿ ನಾವು ಕಾಣಬಹುದಾಗಿದೆ.ಪುರಾಣ ಪ್ರಸಿದ್ಧವಾದ ಪಾರ್ಥೇಶ್ವರನ ಈ ದೇಗುಲ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯದೇ ಜೀರ್ಣಾವಸ್ಥೆಯಲ್ಲಿದೆ.ಅಪಾರ ಕಾರಣಿಕ ಮಹಿಮೆಯ ಈ ದೇಗುಲ ಜೀರ್ಣೋದ್ಧಾರಗೊಂಡರೆ ಕುಂದಾಪುರ ತಾಲೂಕಿನ ಭವ್ಯ ದೇಗುಲವಾಗಿ ಮೆರೆಯುತ್ತದೆ.ಭವ್ಯವಾದ ಪೌರಾಣಿಕ ಇತಿಹಾಸವುಳ್ಳ ಪಾರ್ಥೇಶ್ವರ ದೇಗುಲದ ಅಭಿವೃದ್ಧಿ ಕಾರ್ಯಗಳಿಗೆ ಕಾಲ ಕೂಡಿ ಬರಬೇಕಾಗಿದೆ.ಪಶ್ಚಿಮಾಭಿಮುಖವಾಗಿ ಶಿವನು ನೆಲೆ ನಿಂತ ಗೋಕರ್ಣ,ಬೈಂದೂರಿನ ಸೋಮೇಶ್ವರ ದೇಗುಲದ ಸಾಲಿಗೆ ಕಂಚಗೋಡಿನ ಶ್ರೀ ಪಾರ್ಥೇಶ್ವರ ದೇಗುಲವೂ ಸೇರಿದೆ ಎಂಬುದು ಇಲ್ಲಿ ಉಲ್ಲೇಖನೀಯ ಸಂಗತಿಯಾಗಿದೆ.

ಉಮಾಕಾಂತ ಖಾರ್ವಿ
ಕುಂದಾಪುರ

One thought on “ಪಾಂಡವರ ಕಾಲದ ಕಂಚುಗೋಡಿನ ಶ್ರೀ ಪಾರ್ಥೇಶ್ವರ

  1. ಲೇಖನ ತುಂಬಾ ಚೆನ್ನಾಗಿದೆ. ಪಾರ್ಥೇಶ್ವರ ದೇಗುಲದ ಕುರಿತು ವಿಸ್ತ್ರತವಾದ ಮಾಹಿತಿ….

Leave a Reply

Your email address will not be published. Required fields are marked *