ಕಾರ್ಗಿಲ್ ನ ವೀರಯೋಧ ಬಸ್ರೂರು ಗಣಪತಿ ಖಾರ್ವಿ

ಸಮಸ್ತ ಭಾರತೀಯ ಪ್ರಜೆಗಳು ಸದಾಕಾಲವೂ ನೆನಪಿನಲ್ಲಿರಿಸಿಕೊಳ್ಳಬೇಕಾದ ಅವಿಸ್ಮರಣೀಯ ದಿನವೇ ಕಾರ್ಗಿಲ್ ವಿಜಯ ದಿವಸ್. ಕಾರ್ಗಿಲ್ ನತ್ತ ನುಸುಳಿ ಬಂದ ಪಾಪಿ ಪಾಕ್ ಸೈನಿಕರನ್ನು ಮತ್ತು ಜಿಹಾದಿ ಉಗ್ರಗಾಮಿಗಳನ್ನು ಭಾರತೀಯ ಸೈನಿಕರು ಸದೆಬಡಿದು ವಿಜಯದುಂಧುಬಿ ಮೊಳಗಿಸಿದ ನೆನಪಿಗಾಗಿ ಪ್ರತಿವರ್ಷ ಜುಲೈ 26 ರಂದು ಕಾರ್ಗಿಲ್ ದಿನವನ್ನು ಭಾರತೀಯರು ಸಂಭ್ರಮದಿಂದ ಆಚರಿಸುತ್ತಾರೆ. ಮೋಸದಿಂದ ನಮ್ಮ ದೇಶದೊಳಗೆ ನುಸುಳಿ ಬಂದ ಪಾಕಿಗಳನ್ನು ಎರಡುವರೆ ತಿಂಗಳು ಕಾಲ ತಮ್ಮ ಪ್ರಾಣವನ್ನು ಲೆಕ್ಕಿಸದೇ ಹೋರಾಡಿ ಭಾರತೀಯ ಸೈನಿಕರು ಸದೆಬಡಿದು ಅಪ್ರತಿಮ ಸಾಧನೆಗೈದ ಕಾರ್ಗಿಲ್ ಯುದ್ಧ ಜಗತ್ತಿನ ಇತಿಹಾಸದಲ್ಲಿ ಅಚ್ಚಳಿಯದ ಅಪ್ರತಿಮ ದಾಖಲೆಯಾಗಿ ಉಳಿದಿದೆ.

ಭಾರತೀಯ ಸೈನಿಕರ ಶೌರ್ಯ ಪರಾಕ್ರಮಗಳ ಐತಿಹಾಸಿಕ ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿ ತಾಯ್ನಾಡಿನ ರಕ್ಷಣೆಗಾಗಿ ಮುಂಚೂಣಿಯಲ್ಲಿ ನಿಂತ ವೀರಯೋಧನ ಸಾಹಸಗಾಥೆಯನ್ನು ತಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇನೆ. ಕುಂದಾಪುರದ ಬಸ್ರೂರಿನ ಕೃಷ್ಣ ಖಾರ್ವಿ ಮತ್ತು ಮಂಜಿ ಖಾರ್ವಿ ದಂಪತಿಗಳ ಪುತ್ರನಾದ ಗಣಪತಿ ಖಾರ್ವಿ ಕಾರ್ಗಿಲ್ ಯುದ್ಧದ ಮಹಾನ್ ಯೋಧ. ಬಸ್ರೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ಗಣಪತಿ ಖಾರ್ವಿಗೆ ಬಾಲ್ಯದಿಂದಲೂ ಸೈನಿಕನಾಗಬೇಕೆಂಬ ಉತ್ಕಟವಾದ ಆಸೆ ಇತ್ತು. ಮಗನ ಆಸೆಗೆ ತಂದೆ ತಾಯಿಗಳು ಪ್ರೋತ್ಸಾಹ ನೀಡಿದರು. 1993 ರಲ್ಲಿ ಗಡಿಭದ್ರತಾ ಪಡೆಗೆ ನೇಮಕಾತಿ ಆಗುವ ಮೂಲಕ ಗಣಪತಿ ಖಾರ್ವಿಯವರು ತಮ್ಮ ಆಸೆಯನ್ನು ಪೂರೈಸಿಕೊಂಡರು.

ಇವರಿಗೆ ಸೈನಿಕರ ತರಬೇತಿ ಕಾರ್ಯವು ಕಾಶ್ಮೀರದ ಹಿಮಚಳಿಯಲ್ಲಿ ಒಂದು ವರ್ಷಗಳ ಕಾಲ ನಡೆಯಿತು. ಸೈನಿಕನಾಗಿ ದೇಶಸೇವೆ ಮಾಡಬೇಕೆಂಬ ಗಣಪತಿ ಖಾರ್ವಿ ದೃಡಸಂಕಲ್ಪ, ಉತ್ಕಟವಾದ ದೇಶಪ್ರೇಮದ ಮುಂದೆ ಹಿಮಚಳಿಯ ಕಠಿಣ ತರಬೇತಿ ನಗಣ್ಯವಾಯಿತು. ಒಂದು ವರ್ಷ ತರಬೇತಿ ಮುಗಿಸಿ ತಮ್ಮ ಸೇವೆಯನ್ನು ಆರಂಭಿಸಿದ ಗಣಪತಿ ಖಾರ್ವಿಯವರು ಮೊದಲಿಗೆ ಜಮ್ಮು ಕಾಶ್ಮೀರದಲ್ಲಿ ಮೂರು ವರ್ಷ ಸೇವೆ ಸಲ್ಲಿಸಿದರು. ಪಂಜಾಬ್ ಪಠಾಣ್ಕೋಟ್ ಇಂಡೋ ಪಾಕ್ ಗಡಿಯಲ್ಲಿ ನಾಲ್ಕು ವರ್ಷ, ಅಲ್ಲಿಂದ ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ ಮೂರು ವರ್ಷ ಸೇವೆ ಸಲ್ಲಿಸಿದರು. ಭಾರತದ ಪಾಲಿಗೆ ಉರಿ ಸೆಕ್ಟರ್ ಅತ್ಯಂತ ಆಯಕಟ್ಟಿನ ಸ್ಥಳವಾಗಿದ್ದು ಈ ಗಡಿ ಪ್ರದೇಶ 15000 ಅಡಿ ಎತ್ತರದಲ್ಲಿದೆ.

ಇಲ್ಲಿ 18 ಡಿಗ್ರಿ ತಾಪಮಾನವಿರುತ್ತದೆ. ಇಂತಹ ಕಠಿಣವಾದ ಹವಾಮಾನದ ಪರಿಸ್ಥಿತಿಯಲ್ಲೂ ದೇಶಸೇವೆಗೈಯುವ ನಮ್ಮ ಸೈನಿಕರ ಮನೋಸ್ಥೈರ್ಯ ಅಪ್ರತಿಮವಾದ್ದುದು. ಅಲ್ಲದೇ ಕಲ್ಕತ್ತಾ ಬಾಂಗ್ಲಾ ಗಡಿಯಲ್ಲಿ 2 ವರ್ಷ ಸೇವೆ ಸಲ್ಲಿಸಿದರು.ಅದೇ ಸಮಯದಲ್ಲಿ 1999 ರಲ್ಲಿ ಕಾರ್ಗಿಲ್ ಯುದ್ಧ ಪ್ರಾರಂಭಗೊಂಡಿತು. ಈ ಸಮಯದಲ್ಲಿ ಗಣಪತಿ ಖಾರ್ವಿಯವರು ತನ್ನ ತಂಗಿಯ ಮದುವೆಗೋಸ್ಕರ ಊರಿಗೆ ಬಂದಿದ್ದರು.ತಂಗಿಯ ಮದುವೆಯ ಸಂಭ್ರಮದಲ್ಲಿದ್ದರು.ಮದುವೆ ಮುಗಿದ ಬೆನ್ನಿಗೆ ಕಾರ್ಗಿಲ್ ಯುದ್ಧ ಘೋಷಣೆಯಾಗಿದೆ ಕೂಡಲೇ ಹೊರಟು ಬನ್ನಿ ಎಂಬ ಸಂದೇಶ ಸೈನ್ಯದ ಮೇಲಾಧಿಕಾರಿಗಳಿಂದ ಬಂತು.ಸದಾಕಾಲವೂ ದೇಶಸೇವೆಯ ತುಡಿತದಲ್ಲಿದ್ದ ಗಣಪತಿ ಖಾರ್ವಿಯವರು ತಡಮಾಡದೇ ಕಾರ್ಗಿಲ್ ರಣರಂಗಕ್ಕೆ ಧುಮುಕಿಯೇ ಬಿಟ್ಟರು.

ಇವರ 172 ನೇ ಬೆಟಾಲಿಯನ್ ನ್ನು ಕಾರ್ಗಿಲ್ ನ ಸೈನಿಕ್ ಕುಂಡ್ ನಲ್ಲಿ ನಿಯೋಜಿಸಲಾಗಿತ್ತು. ನೇರವಾಗಿ, ಎತ್ತರದಲ್ಲಿರುವ ಗುಡ್ಡವನ್ನು ಹತ್ತುವಾಗ ಗಣಪತಿ ಖಾರ್ವಿಯವರ ಕಾಲಿಗೆ ಗಾಯವಾಗಿತ್ತು. ಗಾಯದಿಂದ ರಕ್ತ ಸುರಿಯುತ್ತಿದ್ದರೂ ಲೆಕ್ಕಿಸದೇ ಶತ್ರುಗಳತ್ತ ನುಗ್ಗಿ ಹೋದರು. ಇವರ ಬಂದೂಕಿನ ಗುಂಡುಗಳಿಗೆ ಸಿಲುಕಿ ಅದೇಷ್ಟೋ ಮಂದಿ ಶತ್ರುಗಳು ಹತರಾದರು. ಶತ್ರುಪಡೆ ಇವರ ವಿದ್ವಂಸಕ ಧಾಳಿಗೆ ಸಿಲುಕಿ ತರೆಗೆಲೆಗಳಂತೆ ಉದುರಿ ಹೋದರು. ಅಪರೇಷನ್ ವಿಜಯ್ ಎಂಬ ಹೆಸರಿನಲ್ಲಿ ಮೂಂಚೂಣಿಯಲ್ಲಿ ನಿಂತು ಸೆಣೆಸಾಡಿದ ಗಣಪತಿ ಖಾರ್ವಿಯವರ ಅಪ್ರತಿಮ ಪರಾಕ್ರಮಕ್ಕೆ ಅಪರೇಷನ್ ವಿಜಯ್ ಬಿರುದು ಸಿಕ್ಕಿತ್ತು

ಉಗ್ರಗಾಮಿ ಪೀಡಿತ ಪ್ರದೇಶವಾದ ಕಾಶ್ಮೀರದ ಬಾರಾಮುಲ್ಲಾ ಮತ್ತು ಪ್ರಸಿದ್ಧ ಯಾತ್ರಾಸ್ಥಳವಾದ ಅಮರನಾಥ್ ನಲ್ಲಿ ಸೇವೆ ಸಲ್ಲಿಸಿದ ಗಣಪತಿ ಖಾರ್ವಿಯವರು ತಮ್ಮ ಬೆಟಾಲಿಯನ್ ನೊಂದಿಗೆ ಹತ್ತುಹಲವು ಉಗ್ರಗಾಮಿ ದಮನ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ಮತ್ತು ಉಗ್ರಗಾಮಿಗಳಿಂದ ಅಪಾರ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಮದ್ದುಗುಂಡುಗಳನ್ನು ವಶಪಡಿಸಿಕೊಂಡರು.ಈ ಕಾರಣಕ್ಕಾಗಿ ಇವರಿಗೆ ಅನೇಕ ಬಿರುದುಗಳು ಪ್ರಾಪ್ತಿಯಾಯಿತು.ಅತಿ ಹೆಚ್ಚು ಉಗ್ರಗಾಮಿಗಳನ್ನು ಪರಲೋಕಕ್ಕೆ ಅಟ್ಟಿದ ಕಾರಣಕ್ಕಾಗಿ ಇವರಿಗೆ ಡಿ.ಜಿ.ಬ್ಯಾನರ್ ಬಿರುದು ಕೂಡಾ ಸಿಕ್ಕಿತು. ತದನಂತರ ರಾಜಸ್ಥಾನದಲ್ಲಿ 5 ವರ್ಷ,ರಾಯ್ ಪುರ ಛತ್ತೀಸ್ ಗಢ ನಕ್ಸಲ್ ಪೀಡಿತ ಪ್ರದೇಶದಲ್ಲಿ 3 ವರ್ಷ,ಪಶ್ಚಿಮ ಬಂಗಾಳದಲ್ಲಿ 2 ವರ್ಷ ಸೇವೆ ಸಲ್ಲಿಸಿದರು.ಎಲ್ಲವೂ ಅದ್ವಿತೀಯ ಸೇವೆಯ ಮರೆಯಲಾಗದ ಅದ್ಬುತ ಅನುಭವಗಳು ಗಣಪತಿ ಖಾರ್ವಿಯವರ ಬದುಕಿನ ಜೋಳಿಗೆಯಲ್ಲಿ ಭದ್ರವಾಗಿದೆ. ಸುಮಾರು 25 ವರ್ಷ 4 ತಿಂಗಳುಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಗಣಪತಿ ಖಾರ್ವಿಯವರು ಸ್ವಯಂ ನಿವೃತ್ತಿ ಪಡೆದುಕೊಂಡರು.

25 ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದುಕೊಂಡ ಕಾರ್ಗಿಲ್ ವೀರ, ಭಾರತಾಂಬೆಯ ವೀರಪುತ್ರ ಗಣಪತಿ ಖಾರ್ವಿಯವರನ್ನು ಹುಟ್ಟೂರು ಮತ್ತು ಪರವೂರಿನಲ್ಲೂ ಅನೇಕ ಸಂಘ ಸಂಸ್ಥೆಗಳು ಗೌರವಿಸಿ ಸನ್ಮಾನಿಸಿದರು.ಈ ಸಂದರ್ಭದಲ್ಲಿ ತಮ್ಮ ಸೇವಾವಧಿಯಲ್ಲಿ ನಡೆದ ಅನೇಕ ಘಟಾನಾವಳಿಗಳ ಅಪೂರ್ವ ಮಾಹಿತಿಗಳನ್ನು ಮತ್ತು ಭಾರತೀಯ ಸೈನ್ಯದ ಶೌರ್ಯ ಪರಾಕ್ರಮಗಳ ವೀರಪರಂಪರೆಯನ್ನು ವೇದಿಕೆಯಲ್ಲಿ ಪ್ರಸ್ತುತ ಪಡಿಸಿ ಸೈನ್ಯ ಸೇರುವಂತೆ ಯುವಕರನ್ನು ಹುರಿದುಂಬಿಸಿದರು.

ಕುಂದಾಪುರದ ಇತಿಹಾಸದಲ್ಲಿ ಬಸ್ರೂರಿಗೆ ಅಜರಾಮರ ಸ್ಥಾನವಿದೆ.ಇಲ್ಲಿನ ಕಲ್ಲು ಕಲ್ಲುಗಳು ಇತಿಹಾಸವನ್ನು ಸಾರಿ ಸಾರಿ ಹೇಳುತ್ತದೆ.ಆ ಕಾಲದಲ್ಲಿ ಬಸ್ರೂರು ಪ್ರಮುಖ ಬಂದರು ಪ್ರದೇಶವಾಗಿತ್ತು. ಇದರ ಮೇಲೆ ದಕ್ಷಿಣಕನ್ನಡವನ್ನು ಆಳುತ್ತಿದ್ದ ರಾಜಮನೆತನವಾದ ಸುರಾಲಿನ ತೊಳಹರು ಹಿಡಿತವನ್ನು ಸಾಧಿಸಿದ್ದರು. ಈ ಬಂದರನ್ನು ವಶಪಡಿಸಿಕೊಳ್ಳಲು 1569 ರಲ್ಲಿ ಪೋರ್ಚುಗೀಸರು ತೊಳಹರ ಅರಸನು ಕಟ್ಟಿದ ಕೋಟೆಯ ಮೇಲೆ ಒಳಸಂಚು ನಡೆಸಿ ದಾಳಿ ನಡೆಸಿ ಕೊಳ್ಳೆ ಹೊಡೆದರು.ಇದನ್ನು ತಿಳಿದ ತೊಳಹ ಅರಸರು ಬಸ್ರೂರಿನ ನದಿತೀರದಲ್ಲಿ ವಾಸಿಸುತ್ತಿದ್ದ ಕೊಂಕಣಿ ಖಾರ್ವಿ ಸಮಾಜದ ಮೀನುಗಾರರ ಸಹಕಾರದಿಂದ ಪೋರ್ಚುಗೀಸರ ವಿರುದ್ಧ ವೀರಾವೇಶದಿಂದ ಹೋರಾಡಿ ಪುನಃ ಬಸ್ರೂರು ಕೋಟೆಯನ್ನು ವಶಪಡಿಸಿಕೊಂಡನು.ಆ ಸಮಯದಲ್ಲಿ ಕೊಂಕಣಿ ಖಾರ್ವಿ ಸಮಾಜ ಮೀನುಗಾರರು ದೊಡ್ಡ ದೊಡ್ಡ ಹಡಗುಗಳನ್ನು ನಡೆಸುವ ಪ್ರಾವೀಣ್ಯತೆಯನ್ನು ಹೊಂದಿದ್ದರು.ಮೀನುಗಾರರ ಈ ನೈಪುಣ್ಯತೆಯನ್ನು ಬಳಸಿಕೊಂಡ ತೊಳಹ ಅರಸನು ಯುದ್ಧದಲ್ಲಿ ಜಯಶಾಲಿಯಾದನು.

ಮಹಾರಾಷ್ಟ್ರದ ಕೊಂಕಣ ಪ್ರದೇಶದ ಕೇಂದ್ರ ಸ್ಥಾನ ಮತ್ತು ಛತ್ರಪತಿ ಶಿವಾಜಿಯ ಪರಾಕ್ರಮಕ್ಕೆ ಸಾಕ್ಷಿಯಾಗಿರುವ ಮಾಲ್ವನದ ಜಲದುರ್ಗವಾದ ಐತಿಹಾಸಿಕ ಸಿಂಧೂ ದುರ್ಗದ ಕಾವಲುಪಡೆಯಲ್ಲಿ ಬಸ್ರೂರಿನ ಹಲವು ಮಂದಿ ಕೊಂಕಣಿ ಖಾರ್ವಿ ಸಮಾಜದ ಮೀನುಗಾರರು ಸೈನಿಕರಾಗಿ ಕೆಲಸ ಮಾಡುತ್ತಿದ್ದರು.ಪರಕೀಯರ ದಾಳಿಯನ್ನು ತಡೆಯಲು ಶಿವಾಜಿಯು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಬಂಡೆಗಳೇ ತುಂಬಿಕೊಂಡಿರುವ ಕುರ್ಟೆ ದ್ವೀಪ ಪ್ರದೇಶದಲ್ಲಿ ಕೋಟೆ ನಿರ್ಮಿಸಿ ಸುಮಾರು ಐದು ಸಾವಿರ ಸೈನಿಕರನ್ನು ಕಾವಲಿಗೆ ನಿಯೋಜಿಸಿದನು.ಈ ಸೈನಿಕರಲ್ಲಿ ಬಸ್ರೂರಿನ ಕೊಂಕಣಿ ಖಾರ್ವಿ ಸಮಾಜದ ಮಿನುಗಾರರು ಇದ್ದರು ಎಂಬುದು ಇಲ್ಲಿ ಉಲ್ಲೇಖನೀಯ ಸಂಗತಿ.

ಇಂತಹ ವೀರಪರಂಪರೆಯ ಊರಾದ ಬಸ್ರೂರಿನಲ್ಲಿ ಗಣಪತಿ ಖಾರ್ವಿಯವರಂತಹ ವೀರಯೋಧರು ಜನ್ಮ ತಾಳಿದ್ದು ಕೊಂಕಣಿ ಖಾರ್ವಿ ಸಮಾಜದ ವೀರಪರಂಪರೆಯ ದ್ಯೋತಕವಾಗಿದೆ. ಕಾರ್ಗಿಲ್ ಯುದ್ಧದಲ್ಲಿ ಸುಮಾರು 527 ಮಂದಿ ಭಾರತೀಯ ವೀರಯೋಧರು ತಾಯಿನಾಡಿಗಾಗಿ ತಮ್ಮ ಪ್ರಾಣವನ್ನು ಸಮರ್ಪಿಸಿದ್ದಾರೆ. ಅನೇಕ ಮಂದಿ ಗಾಯಾಳುವಾಗಿದ್ದಾರೆ. ತಮ್ಮ ಕೆಚ್ಚೆದೆಯ ಹೋರಾಟದಿಂದ ಅವರೆಲ್ಲರೂ ನಮಗೆ ಪ್ರಾತಃಸ್ಮರಣೀಯರಾಗಿದ್ದಾರೆ.ತಮ್ಮ ಪ್ರಾಣವನ್ನು ಲೆಕ್ಕಿಸದೇ ದೇಶ ಕಾಯುವ ವೀರ ಸೈನಿಕರರಿಗೆ ನಮ್ಮದೊಂದು ಗೌರವಪೂರ್ಣ ನಮನಗಳು.ಇಂದು ನಾವೆಲ್ಲ ನೆಮ್ಮದಿಯಿಂದ ಇದ್ದೇವೆ ಎಂದು ಹೇಳಲು ಗಡಿಯಲ್ಲಿ ದೇಶ ಕಾಯುವ ವೀರಯೋಧರೇ ಮುಖ್ಯ ಕಾರಣರಾಗಿದ್ದಾರೆ.

ಸುಧೀರ್ಘ ಕಾಲ ಭಾರತೀಯ ಸೈನ್ಯದಲ್ಲಿ ಕೆಚ್ಚೆದೆಯ ಸೇವೆ ಸಲ್ಲಿಸಿದ ಗಣಪತಿ ಖಾರ್ವಿಯವರ ಶೌರ್ಯ ಪರಾಕ್ರಮಗಳು ನಮಗೆಲ್ಲರಿಗೂ ಮೇಲ್ಪಂಕ್ತಿಯಾಗಿದೆ. ಕಾರ್ಗಿಲ್ ವಿಜಯ ದಿನದ ಈ ಶೌರ್ಯ ಪರಾಕ್ರಮಗಳ ಶುಭ ದಿನದಂದು ಅವರಿಗೆ ಶುಭವನ್ನು ಹಾರೈಸುತ್ತೇನೆ.

ಸುಧಾಕರ್ ಖಾರ್ವಿ
Editor
www.kharvionline.com

2 thoughts on “ಕಾರ್ಗಿಲ್ ನ ವೀರಯೋಧ ಬಸ್ರೂರು ಗಣಪತಿ ಖಾರ್ವಿ

  1. ನಮ್ಮ ಸಮಾಜದ ನಿವೃತ್ತ ಸೈನಿಕನ ಮನದಾಳದ ಆಲೋಚನೆಗಳು ಮತ್ತು ಅನುಭವಗಳ ಈ ಲೇಖನದಲ್ಲಿ ಉತ್ತಮವಾಗಿ ಪ್ರಸ್ತುತಪಡಿಸಲಾಗಿದೆ. ಆಗ ನನಗೆ ನೆನಪಿದೆ, ಗಣಪತಿ ಅಣ್ಣ ರಜಾ ದಿನಗಳಲ್ಲಿ ಊರಿಗೆ ಬಂದಿದಾರೆ ಎಂದು ತಿಳಿದಾಗ ಅವರು ಬೆಂಗಳೂರಿನ ನಮ್ಮ ಮನೆಗೆ ಬರುತ್ತಾರೆ ಎಂದು ನಾವು ಕಾಯುತ್ತಿದ್ದೆವು ಆ ವಯಸಿನಲ್ಲಿ ನಮ್ಮ ಕುತೂಹಲವೇನೆಂದರೆ ಅವರು ಶತ್ರುಗಳ ಮುಖಾಮುಖಿಯಾದಾಗ ಅವರ ಅನುಭವಗಳನ್ನು ತಿಳಿದುಕೊಳ್ಳವುದು.

    ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ ಅವರಂತಹ ನಿವೃತ್ತ ಸೈನಿಕರಿಗೆ ಕನಿಷ್ಠ ಯಾವುದಾದರೂ ಸರ್ಕಾರಿ ಸಂಸ್ಥೆಯಲ್ಲಿ ಅಥವಾ ಸಾರ್ವಜನಿಕ ಲಿಮಿಟೆಡ್ ಉದ್ಯಮದಲ್ಲಿ ಉದ್ಯೋಗ ಸಿಗುತ್ತದೆ ಎಂದು ನಾನು ನಿರೀಕ್ಷಿಸಿದ್ದೆ ಆದರೆ ದುರದೃಷ್ಟವಶಾತ್ ಅವರಿಗೆ ಅದು ಇನ್ನು ಸಹ ಸಿಗಲಿಲ್ಲ.
    ಈ ವರ್ಷ ನಾವು ನಮ್ಮ ದೇಶದ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವಾಗ ಐತಿಹಾಸಿಕ ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿ ತಾಯ್ನಾಡಿನ ರಕ್ಷಣೆಗಾಗಿ ಮುಂಚೂಣಿಯಲ್ಲಿ ನಿಂತ ಅವರಂತಹ ಸೈನಿಕರ ಬಗ್ಗೆ ಸರ್ಕಾರವು ಏನಾದರೂ ಅನುಕೂಲ ಮಾಡುತ್ತದೆ ಎಂದು ಭಾವಿಸುತ್ತೇನೆ.

Leave a Reply

Your email address will not be published. Required fields are marked *