ಬಂಡೆಯ ಮೇಲೇರಿ ಜೀವ ಉಳಿಸಿಕೊಂಡರು

ಮಳೆಗಾಲದ ಮಹಾಮಂಥನದ ಬಳಿಕ ಸಮುದ್ರರಾಯ ಶಾಂತನಾಗುತ್ತಿದ್ದಾನೆ. ಆದರೂ ಅಲ್ಲೊಂದು ಇಲ್ಲೊಂದು ಅವಘಡಗಳು ಸಂಭವಿಸುತ್ತಲೇ ಇರುತ್ತವೆ. ಈ ಕಾರಣದಿಂದಲೇ ಸಮುದ್ರವನ್ನು ಯಾರೂ ಅಷ್ಟು ಸುಲಭವಾಗಿ ಅಂದಾಜು ಮಾಡಲಾರರು. ಕಾಪು ಸಮುದ್ರದಲ್ಲಿ ಈ ವಾರ ನಡೆದ ಅವಘಡದ ಒಂದೆರಡು ವಿಡಿಯೋಗಳು ವೈರಲ್ ಆಯಿತು. ಕಾಪು ಲೈಟ್‌ಹೌಸ್‌ನಿಂದ ಹದಿನೈದು ಕಿ.ಮೀ. ದೂರವಿರುವ ಕಾಪು ಪಾರ್ ಬಳಿ ದೋಣಿಯೊಂದು ಬಂಡೆಗೆ ಢಿಕ್ಕಿ ಹೊಡೆಯಿತು. ಬಡಿದ ರಭಸಕ್ಕೆ ದೋಣಿ ಒಡೆದು ಹೋಯಿತು. ದೋಣಿಯಲ್ಲಿದ್ದ ಐದು ಮಂದಿ ಮೀನುಗಾರರು ಅತಂತ್ರರಾದರು. ಅವರು ಈಜುತ್ತಾ ದಡ ಸೇರುವ ಬದಲು ಇನ್ನೊಂದು ಉಪಾಯ ಹೂಡಿದರು. ಯಾವ ಬಂಡೆಗೆ ದೋಣಿ ಬಡಿದಿದೆಯೋ ಅದೇ ಬಂಡೆಯೇರಿದರು. ಅವರ ಅದೃಷ್ಟವೋ ಎಂಬಂತೆ ಸ್ವಲ್ಪ ಹೊತ್ತಿನ ಬಳಿಕ ಇನ್ನೊಂದು ದೋಣಿಯವರು ಅವರನ್ನು ಬಂಡೆಯಿಂದ ದೋಣಿಗೆ ಹತ್ತಿಸಿಕೊಂಡು ಪ್ರಾಣ ಉಳಿಸಿದರು. ಈ ಘಟನೆಯಲ್ಲಿ ನಮಗೆ ವಿಭಿನ್ನವಾಗಿ ಗೋಚರಿಸುವುದು ಅವರು ಬಂಡೆಯೇರುವ ಸಾಹಸಕ್ಕೆ ಏಕೆ ಕೈ ಹಾಕಿದರು ಎಂಬುದು. ಈಜಿಕೊಂಡು ದಡ ಸೇರಬಹುದಿತ್ತಲ್ಲ. ಒಂದು ವೇಳೆ ಅವರು ಈಜಿಕೊಂಡು ದಡ ಸೇರುವ ಪ್ರಯತ್ನ ಕೈಗೊಂಡಿದ್ದರೆ ಅವರಲ್ಲಿ ಒಬ್ಬಿರಾದರೂ ಜೀವ ಕಳೆದುಕೊಳ್ಳುತ್ತಿದ್ದರು. ಕಾರಣ ಇಷ್ಟೇ, ವಿಶಾಲ ಸಮುದ್ರದಲ್ಲಿ ಈಜಿ ಜಯಿಸುತ್ತೇನೆಂದು ಈಜ ಹೊರಟರೆ ಒಂದಲ್ಲ ಒಂದು ಹಂತದಲ್ಲಿ ಕೈ ಸೋತು, ದೇಹ ಬಳಲಿ ಜಲಸಮಾಧಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅಂತಹ ‌ನೂರಾರು ಉದಾಹರಣೆಗಳು ನಮ್ಮ ನಡುವೆ ಇವೆ. ಹಾಗಾದರೆ ಬಂಡೆಯೇರುವುದೇ ಸುಲಭ ಎಂದು ಭಾವಿಸಬೇಡಿ. ನೆಲದಲ್ಲಿರುವ ಬಂಡೆಯನ್ನು ಸುಲಭವಾಗಿ ಏರಬಹುದು. ಸಮುದ್ರದ ಮಧ್ಯದಲ್ಲಿರುವ ಬಂಡೆಯೇರುವುದು ಅಷ್ಟು ಸುಲಭವಲ್ಲ. ಕಾಪು ಪಾರ್ ಬಳಿಯ ಬಂಡೆಯೂ ಅಷ್ಟೇ; ಅದು ಅತ್ಯಂತ ಕಡಿದಾದ ಬಂಡೆ. ಅದು ಬಂಡೆಯೇ ಹೊರತು ದ್ವೀಪವಲ್ಲ. ಉಬ್ಬರದ ಸಂದರ್ಭದಲ್ಲಿ ಈ ಬಂಡೆಯ ಕಾಲು ಭಾಗ ನೀರಿನಲ್ಲಿ ಮುಳುಗಿರುತ್ತದೆ. ಮುಳುಗಿದ ಅಷ್ಟು ಭಾಗದಲ್ಲಿ ಪಾಚಿ ಬೆಳೆದಿರುತ್ತದೆ. ಜಾರುವ ಬಂಡೆಯನ್ನು ಬರಿಗೈಯಲ್ಲಿ ಹಿಡಿಕೊಂಡು ಹತ್ತುವುದೆಂದರೆ ಹುಚ್ಚು ಸಾಹಸವೇ ಸರಿ‌. ಹಾಗಂತ ಬಂಡೆಯೇರದೆ ಉಪಾಯವಿಲ್ಲ. ಇಲ್ಲಿ ಸಾವು ಬದುಕಿನ ಪ್ರಶ್ನೆಯಿದೆ. ಕೇವಲ ಜಾರುವ ಬಂಡೆಯಾದರೆ ಜಾರಿ ಸಮುದ್ರದಕ್ಕೆ ಬಿದ್ದು, ಪುನಃ ಪುನಃ ಪ್ರಯತ್ನ ಪಟ್ಟು, ಕೊನೆಗೊಮ್ಮೆ ಜಯಿಸಬಹುದಿತ್ತು. ಆದರೆ ಇಂತಹ ಬಂಡೆಗಳ ಮೇಲೆ ಕಲ್ವ ಅಥವಾ ಕಲ್ಲು ಚಿಪ್ಪು ಎನ್ನುವ ಚಿಪ್ಪು ಬೆಳೆದಿರುತ್ತದೆ. ಅದರ ಬಾಯಿ ಕತ್ತಿಯಂತೆ ಹರಿತ. ಅದರ ಮೇಲೆ ಕಾಲು ಇರಿಸಿದರೆ ಸಿಗಿದು ಹೋಗಬಹುದು. ಕಾಲು ಜಾರಿ ಬಂಡೆಯ ಮೇಲೆ ಬಿದ್ದರೆ ಈ ಚಿಪ್ಪು ದೇಹದ ಯಾವುದೇ ಭಾಗವನ್ನು ಘಾಸಿಗೊಳಿಸಬಹುದು. ಬಂಡೆಯ ಮೇಲೆ ಬಿದ್ದು, ತಲೆ ಅಪ್ಪಳಿಸಿ ಜೀವವೂ ಹೋಗಬಹುದು. ಅಷ್ಟು ಅಪಾಯಕಾರಿಯೆಂದು ಗೊತ್ತಿದ್ದರೂ ಈ ಐದು ಮಂದಿ ಮೀನುಗಾರರು ಅದನ್ನೇ ಆಯ್ಕೆ ಮಾಡಿಕೊಂಡರು. ನಮ್ಮ ಕರಾವಳಿಯಲ್ಲಿ ಇಂತಹ ಸಾಹಸಗಳು ಸಾಮಾನ್ಯವಾಗಿ ನಡೆಯುತ್ತಲೇ ಇರುತ್ತದೆ. ಆದರೆ ಅದನ್ನು ಯಾರು ಪ್ರಚುರಪಡಿಸಲು ಹೋಗುವುದಿಲ್ಲ. ಮೀನುಗಾರ ಅದು ತನ್ನ ವೃತ್ತಿ ಎಂದು ಬಗೆಯುವ ಕಾರಣ ಉಪ್ಪು ಕಾರ ಸೇರಿಸಿ ಹೇಳಲಾರ.

ಮಳೆಗಾಲದ ಮಹಾಮಂಥನ ಮುಗಿದರೂ ಸಮುದ್ರ ಪೂರ್ಣ ಶಾಂತವಾಗಿಲ್ಲ. ನೀರಿನೊಳಗಿನ ಪ್ರವಾಹ ಇದ್ದೇ ಇರುತ್ತದೆ. ಈ ಮಹಾಮಂಥನದಿಂದ ಕದಡಿದ ನೀರು ದಪ್ಪ ಇರುತ್ತದೆ. ಇದರಲ್ಲಿ ಬಹುದೀರ್ಘ ಈಜಲು ಸುಲಭ ಸಾಧ್ಯವಲ್ಲ. ಈ ಕಾರಣಕ್ಕಾಗಿಯೇ ಅವರು ಬಂಡೆಯೇರಿದರು. ಅವರಲ್ಲಿ ಐದೂ ಮಂದಿ ಅದ್ಭುತ ಈಜುಗಾರರಲ್ಲ. ಈಜುತ್ತಾ ದಡದತ್ತ ಸಾಗುವಾಗ ಒಬ್ಬ ವ್ಯಕ್ತಿಯ ಕೈ ಸೋತರೂ ಉಳಿದವರ ಆತ್ಮವಿಶ್ವಾಸ ಕುಗ್ಗಿ ಹೋಗುತ್ತದೆ. ಈ ಕಾರಣಕ್ಕಾಗಿಯೇ ಅವರು ಕೈಗೊಂಡ ತೀರ್ಮಾನ ಸರಿಯಾಗಿದೆ. ಇನ್ನೊಂದು ವಿಚಾರವನ್ನೂ ಗಮನಿಸಬೇಕು. ನೀರಿನಿಂದ ಬಂಡೆಯೇರುವ ಮೊದಲು ಸ್ವಲ್ಪ ಮಟ್ಟಿಗೆ ಈಜಲೇಬೇಕು. ಏಕೆಂದರೆ ಈಜಲಿಕ್ಕೆ ಬಾರದವನಿಗೆ ಬಂಡೆಯವರೆಗೆ ಸಾಗಲಾರದು. ಈ ಕಾರಣಕ್ಕಾಗಿಯೇ ಹೇಳುವುದು, ನಾವು ಅತ್ಯುತ್ತಮ ಈಜುಪಟುಗಳಾಗದಿದ್ದರೂ ಪರವಾಗಿಲ್ಲ; ಸ್ವಲ್ಪಮಟ್ಟಿಗಾದರೂ ಈಜು ಕಲಿತಿರಬೇಕು. ಅದು ಜೀವನದ ಯಾವುದೋ ಒಂದು ವಿಷ ಗಳಿಗೆಯಲ್ಲಿ ಜೀವ ಉಳಿಸಬಲ್ಲದು.

ಕಾಪು ಕಡಲಿನಲ್ಲಿ ನಡೆದ ಈ ಘಟನೆಯಲ್ಲಿ ಈಜಿ, ಬಂಡೆಯೇರಿ ಕುಳಿತ ನಂತರವೂ ಬದುಕುವ ಸಾಧ್ಯತೆ ತೀರ ಕಡಿಮೆ ಇತ್ತು. ಏಕೆಂದರೆ ಅವರು ಏರಿದ್ದು ಕಿರುಬಂಡೆಯ ಮೇಲೆ. ಅದಕ್ಕೆ ಬಡಿದ ಸಮುದ್ರದ ಅಲೆಗಳ ನೀರು ಮೈಮೇಲೆ ಸಿಡಿಯುತ್ತದೆ. ರಭಸವಾಗಿ ಅಲೆಗಳು ಬಡಿದರೆ ಪುನಃ ಸಮುದ್ರಪಾಲಾಗುವ ಸಾಧ್ಯತೆಗಳಿರುತ್ತದೆ. ಆಧಾರಕ್ಕೆ ಯಾವುದೇ ಆವರಣಗಳಿಲ್ಲ. ಪ್ರತಿಯೊಂದು ಅಲೆ ಬಂದು ಬಡಿಯುವಾಗಲೂ ಜೀವ ಬಾಯಿಗೆ ಬಂದ ಹಾಗೆ ಆಗುತ್ತದೆ. ಅದೊಂದು ಅಗ್ನಿಪರೀಕ್ಷೆಯ ಕಾಲ. ಧೈರ್ಯ ಕಳೆದುಕೊಂಡರೆ ಏನೂ ಆಗಬಹುದು. ಸುತ್ತಮುತ್ತಲು ಸಮುದ್ರದ ಅಲೆಗಳ ಆರ್ಭಟ ಅತ್ಯಂತ ಸಮೀಪದಿಂದಲೇ ಕಣ್ಣಿಗೆ ಗೋಚರಿಸುತ್ತದೆ. ಕ್ಷಣಕ್ಷಣವೂ ಅಲೆಗಳ ರುದ್ರನರ್ತನ ಕಣ್ಣಿಗೆ ಕಾಣಿಸುತ್ತಿರುವಾಗ ಎಷ್ಟು ಧೈರ್ಯ ತಂದುಕೊಳ್ಳಬಹುದು. ಆ ರೀತಿಯಲ್ಲಿ ಎಷ್ಟು ಹೊತ್ತು ಕೂತಿರಬೇಕೆನ್ನುವ ಕಲ್ಪನೆಯೂ ಇರುವುದಿಲ್ಲ. ಯಮಲೋಕದ ಬಾಗಿಲಲ್ಲಿ ಕುಳಿತ ಅನುಭವ. ಸಮುದ್ರ ದಡದಲ್ಲಿ ನಿಂತು ಆಲಿಸುವವನಿಗೆ ತೆರೆಗಳ ಸದ್ದು ನಿನಾದದಂತೆ. ಆದರೆ ಇಂತಹ ಸಂದರ್ಭಗಳಲ್ಲಿ ಅದು ಕರ್ಕಶ; ಕರ್ಣ ಕಠೋರ. ಪ್ರತಿಯೊಂದು ಕ್ಷಣವೂ ಧೈರ್ಯದ ಮಾತುಗಳನ್ನಾಡುತ್ತಿರಬೇಕು. ಎಲ್ಲರಲ್ಲೂ ಒಂದೇ ಪ್ರಮಾಣದಲ್ಲಿ ಧೈರ್ಯ ಇರುವುದಿಲ್ಲ. ಒಬ್ಬಿಬ್ಬರು ಮಾನಸಿಕವಾಗಿ ಸೋತರೆ ಅದರ ಬೆಲೆಯನ್ನು ಎಲ್ಲರೂ ತೆರಬೇಕು. ಸಾವಿನ ದವಡೆಯಲ್ಲಿರುವವನಿಗೆ ಯಾವ ಉಪದೇಶವೂ ನಾಟುವುದಿಲ್ಲ. ಮನೆಯಲ್ಲಿ ತಮಗಾಗಿ ಕಾದು ಕುಳಿತ ಹೆಂಡತಿ, ಮಕ್ಕಳು, ಹೆತ್ತವರ ನೆನಪಾಗುತ್ತದೆ. ಕುಟುಂಬದಲ್ಲಿ ತನಗಿರುವ ಜವಾಬ್ದಾರಿಯನ್ನು ನೆನಪಾಗುವ ಹೊತ್ತದು. ಆಗ ಮೈ ನಿಧಾನವಾಗಿ ಕಂಪಿಸಲು ಆರಂಭವಾಗುತ್ತದೆ; ನಾಲಿಗೆ ಒಣಗಲಾರಂಭಿಸುತ್ತದೆ. ಬಾಯಿ ಒಣಗಿತೆಂದು ಸಮುದ್ರದ ನೀರು ಬಾಯಿಗೆ ಹಾಕಿಕೊಂಡರೆ ಉಪ್ಪು ಉಪ್ಪು. ದೂರದಲ್ಲಿರುವ ಇತರ ದೋಣಿಗಳನ್ನು ಕರೆಯೋಣವೆಂದರೆ ಬಂಡೆಯ ಮೇಲೆ‌ ಸರಿಯಾಗಿ ನಿಲ್ಲಲಾಗದು.

ಆದರೆ ಕೆಲವು ಬಾರಿ ಭಗವಂತನ ಇಚ್ಛೆ ಬೇರೆಯೇ ಇರುತ್ತದೆ. ಇವರ ಕೂಗು ದೇವರಿಗೆ ಕೇಳಿಸಿತು ಎಂದು ಕಾಣುತ್ತದೆ. ದೋಣಿಯೊಂದು ಇವರತ್ತ ಬಂತು. ಒಂದೆರಡು ಗಂಟೆಗಳ ಕಾರ್ಯಾಚರಣೆ ನಡೆಸಿ ತಮ್ಮ ದೋಣಿಯಲ್ಲಿ ಐವರನ್ನು ಹತ್ತಿಸಿಕೊಂಡರು. ಈ ರೀತಿಯಲ್ಲಿ ಸಹಾಯಕ್ಕೆ ಧಾವಿಸುವುದು ಅಷ್ಟು ಸುಲಭವಲ್ಲ. ಸಹಾಯಕ್ಕೆ ಬಂದವರ ದೋಣಿಯೇ ಬಂಡೆಗೆ ಅಪ್ಪಳಿಸಿ ಮುಳುಗಿದ ಉದಾಹರಣೆಗಳಿವೆ. ಜೀವ ಉಳಿಸ ಹೊರಟವರು ಅದ್ಯಾವುದನ್ನೂ ಲೆಕ್ಕಿಸಲಾರರು. ತಮಗೆ ಗೊತ್ತಿರುವ ಇನ್ನಷ್ಟು ವಿದ್ಯೆಯನ್ನು ಪ್ರಯೋಗಿಸಿ ಐವರ ಪ್ರಾಣ ಉಳಿಸಿ, ಐದು ಮನೆಯ ಬೆಳಕಾದರು.

ವಿಚಿತ್ರವೆಂದರೆ ಇಂತಹ ರೋಚಕ ಸಾಹಸಗಳು ಎಲ್ಲಿಯೂ ದಾಖಲೆಯಾಗುವುದಿಲ್ಲ. ಹೊರಗಿನ ಪ್ರಪಂಚಕ್ಕೆ ತಿಳಿಯುವುದಿಲ್ಲ. ಬದುಕಿದವರನ್ನೂ, ಬದುಕಿಸಿದವರನ್ನು ಯಾರು ಕರೆದು ಕೇಳುವುದಿಲ್ಲ. ಮೀನುಗಾರಿಕೆಯೆಂದರೆ ಹಾಗೆಯೇ ಜೀವ ಮತ್ತು ಜೀವನವನ್ನು ಒತ್ತೆಯಿಟ್ಟು ಮಾಡುವ ಮಹಾಯಜ್ಞ.

ನಾಗರಾಜ ಖಾರ್ವಿ ಕಂಚುಗೋಡು

Leave a Reply

Your email address will not be published. Required fields are marked *