ಹೊನ್ನಾವರ ಕಾಸರಕೋಡ ಬಂದರು ರಸ್ತೆ ನಿರ್ಮಾಣಕ್ಕೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ತಡೆ. ಪರಿಸರ ನಿಯಮ ಉಲ್ಲಂಘಿಸಿ ರಸ್ತೆ ನಿರ್ಮಾಣ ಯತ್ನದ ಆರೋಪ. ಪರಿಸರ ಅನುಮತಿ ರದ್ಧತಿ ಸಹಿತ ಯೋಜನೆ ಪ್ರವರ್ತಕರ ವಿರುದ್ಧ ಕ್ರಮ ಕೈಗೊಳ್ಳುವದಾಗಿ ಗ್ರೀನ್ ಟ್ರಿಬ್ಯನಲ್ ಮುಂದೆ ಹೇಳಿಕೆ ನೀಡಿದ ಕರಾವಳಿ ನಿಯಂತ್ರಣ ಪ್ರಾಧಿಕಾರಗಳ ವಕೀಲರು.
ಉತ್ತರ ಕನ್ನಡ ಜಿಲ್ಲೆಯ ಕಾಸರಕೋಡು ಟೊಂಕ ಗ್ರಾಮದಲ್ಲಿರುವ ಹೊನ್ನಾವರ ಬಂದರು ಯೋಜನಾ ಪ್ರದೇಶ ಹಾಗೂ ರಾಷ್ಟ್ರೀಯ ಹೆದ್ದಾರಿ 66 ಗೆ ಸಂಪರ್ಕ ಕಲ್ಪಿಸುವ ಉದ್ದೇಶಿತ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಚೆನ್ನೈ ಪೀಠವು ತಡೆ ಹೇರಿ ಆದೇಶ ಮಾಡಿದೆ. ಈ ಹಿಂದೆ ವಾಣಿಜ್ಯ ಬಂದರು ಯೋಜನೆಗೆ ನೀಡಲಾದ ಪರಿಸರ ಅನುಮತಿ ಅಥವಾ ಅದರ ಉಲ್ಲಂಘನೆ ನಡೆಸಿ, ಅಲ್ಲಿ ಇನ್ನು ಯಾವುದೇ ಕಾಮಗಾರಿಗೆ ಅವಕಾಶ ನೀಡಬಾರದು ಎಂದು ಜಸ್ಟಿಸ್ ಪುಷ್ಪನಾರಾಯಣ ಮತ್ತು ತಜ್ಞ ಸದಸ್ಯ ಡಾ. ಸತ್ಯಗೋಪಾಲ್ ಕೊರ್ಲಪತಿ ಅವರಿರುವ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಚೆನ್ನೈನ ಹಸಿರು ಪೀಠ ಹೇಳಿದೆ .
ಹಸಿರು ಪೀಠದ ಮುಂದೆ ದಮಯಂತಿ ಸುಬ್ರಾಯ ಮೇಸ್ತ ಎಂಬ ಮೀನುಗಾರ ಮಹಿಳೆ ಸಲ್ಲಿಸಿದ ದೂರು ಅರ್ಜಿಗೆ ಸಂಬಂಧಿಸಿ ಅರ್ಜಿದಾರರ ಪರವಾದ ಮಂಡಿಸಿದ ವಕೀಲೆ ಶ್ರೀಜಾ ಚಕ್ರವರ್ತಿ, ಈ ರಸ್ತೆಯ ಒಂದು ಭಾಗವನ್ನು ಅರಣ್ಯ ಭೂಮಿಯಲ್ಲಿ ಹಾಗೂ ರಸ್ತೆಯ ದೊಡ್ಡ ಭಾಗವನ್ನು ಕಾಸರಕೋಡು ಬಂದರಿಗೆ ಸಂಪರ್ಕ ಕಲ್ಪಿಸಲು ಅಲ್ಲಿಯ ಅಭಿವೃದ್ಧಿ ನಿಷೇಧಿತ ವಲಯ ಮೂರರ CRZ ವ್ಯಾಪ್ತಿಯ ಸಮುದ್ರ ತೀರದಲ್ಲಿ ನಿರ್ಮಿಸಲಾಗುತ್ತಿದೆ, ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿದರು. ಈ ನೂತನ ಬಂದರು ಪ್ರದೇಶವು ಗ್ರಾಮದ ಉತ್ತರ ಭಾಗದಲ್ಲಿದೆ ಹಾಗೂ ಇದು ಕರಾವಳಿ ನಿಯಂತ್ರಣ ವಲಯ ಮೂರರ ಭಾಗವಾಗಿದೆ ಹಾಗೂ ಇಲ್ಲಿ ಯಾವುದೇ ಅಭಿವೃದ್ಧಿಗೆ ಆಸ್ಪದವಿಲ್ಲ ಎಂದು ಅರ್ಜಿದಾರರ ಪರ ವಕೀಲರು ಹೇಳಿರುವುದನ್ನು ನ್ಯಾಯಾಧೀಕರಣ ಗಣನೆಗೆ ತೆಗೆದುಕೊಂಡಿದೆ.
ವಾಣಿಜ್ಯ ಬಂದರು ಯೋಜನೆಗೆ ನೀಡಲಾದ ಪರಿಸರ ಅನುಮತಿಯನ್ನು ಸ್ಪಷ್ಟವಾಗಿ ಉಲ್ಲಂಘಿಸಲಾಗಿದೆ ಎಂದು ಸ್ಥಳೀಯರು ದೂರುತ್ತಿದ್ದಾರೆ. ಈ ಬಂದರನ್ನು ಹೊನ್ನಾವರ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ನಿರ್ಮಿಸುತ್ತಿದೆ. ರಸ್ತೆ ನಿರ್ಮಿಸಲಾಗುತ್ತಿರುವ ಪ್ರದೇಶವು ಅಲಿವ್ ರಿಡ್ಲೆಕಡಲಮೆಗಳು ಮೊಟ್ಟೆಗಳನ್ನು ಇಡುವ ಸ್ಥಳವಾಗಿದೆ ಹಾಗೂ ಬಂದರನ್ನು ಸವಕಳಿ ಉಂಟಾಗುವ ಮರಳು ತೀರದಲ್ಲಿ ನಿರ್ಮಿಸಲಾಗುತ್ತಿದೆ ಎಂದು ದೂರು ಕೂಡ ಇದೆ. ರಾಜ್ಯ ಪರಿಸರ ಪರಿಣಾಮ ಮೌಲ್ಯಮಾಪನ ಪ್ರಾಧಿಕಾರ ಮತ್ತು ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರವು ಇಲ್ಲಿ ರಸ್ತೆ ನಿರ್ಮಾಣಕ್ಕೆ ಅನುಮತಿ ನೀಡಲಾಗಿಲ್ಲ ಎನ್ನುವುದನ್ನು ಸ್ಪಷ್ಟವಾಗಿ ಹೇಳಿರುವುದನ್ನು ಹಸಿರು ಪೀಠ ಗಣನೆಗೆ ತೆಗೆದುಕೊಂಡಿದೆ.
ಬಂದರು ಪ್ರದೇಶಕ್ಕೆ ತೆರಳಲು ಮೊದಲು ಮೇಲ್ ಸೇತುವೆ ನಿರ್ಮಾಣದ ಪ್ರಸ್ತಾವನೆ ಇತ್ತಾದರೂ ಈಗ ರಸ್ತೆನಿರ್ಮಾಣಕ್ಕೆ ಪ್ರಯತ್ನಿಸಲಾಗುತ್ತಿದೆ. ಆದರೆ ಇಲ್ಲಿ ರಸ್ತೆ ನಿರ್ಮಿಸುವುದು ಪರಿಸರ ಅನುಮತಿ ಸಂದರ್ಭದಲ್ಲಿ ವಿಧಿಸಲಾದ ಶರತ್ತುಗಳಿಗೆ ವಿರುದ್ಧವಾಗಿದೆ ಎಂದು ನ್ಯಾಯಾಧೀಕರಣವು ಹೇಳಿದೆ. ಪ್ರಾಧಿಕಾರಿಗಳ ಪರ ಹಾಜರಿದ್ದ ವಕೀಲರು ನ್ಯಾಯಾಧಿಕರಣದ ಮುಂದೆ ಮಾಹಿತಿ ನೀಡಿ ಪರಿಸರ ಅನುಮತಿ ರದ್ದತಿ ಸಹಿತ ಯೋಜನೆ ಪ್ರವರ್ತಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿಕೆ ನೀಡಿದ್ದಾರೆ. ನೋಟಿಸ್ ನೀಡಿದ ಹೊರತಾಗಿಯೂ ಹೊನ್ನಾವರ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಪ್ರತಿನಿಧಿಗಳು ಹಸಿರು ಪೀಠದ ಮುಂದೆ ಶುಕ್ರವಾರದ ವಿಚಾರಣೆ ವೇಳೆ ಹಾಜರಾಗಿರಲಿಲ್ಲ.