ಗಂಗೊಳ್ಳಿಯ ಆಪತ್ಭಾಂಧವ ಮುಳುಗು ತಜ್ಞ ದಿನೇಶ್ ಖಾರ್ವಿ ಬೇಕಾಗಿದೆ ಜೀವರಕ್ಷಕ ಸಾಧನ
ಕರಾವಳಿ ಮಾತ್ರವಲ್ಲ,ರಾಜ್ಯದ ನಾನಾಕಡೆಗಳಲ್ಲಿ ನದಿ ಸಮುದ್ರ ಮತ್ತು ಇನ್ನಿತರ ಕಾರಣಗಳಿಂದ ಆಪತ್ತಿನಲ್ಲಿ ಸಿಲುಕಿದವರನ್ನು ರಕ್ಷಣೆ ಮಾಡಲು ಧಾವಿಸುವ ಗಂಗೊಳ್ಳಿ ಲೈಟ್ ಹೌಸ್ ಬಳಿಯ ನಿವಾಸಿ ದಿನೇಶ್ ಖಾರ್ವಿಯವರ ಸಾಮಾಜಿಕ ಕಾಳಜಿಯ ಸೇವಾಮನೋಭಾವನೆ ಎಲ್ಲರಿಗೂ ಆದರ್ಶಪ್ರಾಯವಾಗಿದೆ.
ಕಳೆದ 22 ವರ್ಷಗಳಿಂದ ಅವರು ಈ ಮಾನವೀಯ ಕೈಂಕರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡ್ಡಿದಾರೆ.ನೀರಿನಲ್ಲಿ ಮುಳುಗಿ ಮೃತಪಟ್ಟ 40 ಕ್ಕೂ ಹೆಚ್ಚು ಮೃತದೇಹಗಳನ್ನು ಹೊರತೆಗೆದಿದ್ದಾರೆ ಮತ್ತು ನೀರಿನಲ್ಲಿ ಅಪಾಯಕ್ಕೆ ಸಿಲುಕಿದ ಹಲವರ ಪ್ರಾಣ ರಕ್ಷಣೆ ಮಾಡಿದ್ದಾರೆ.
ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಸದ್ದಿಲ್ಲದೇ ಅವರು ಈ ಮಾನವೀಯ ಕಾರ್ಯದಲ್ಲಿ ತನ್ನನ್ನು ಸಮರ್ಪಿಸಿಕೊಂಡಿದ್ದಾರೆ. ಕೊಂಕಣಿ ಖಾರ್ವಿ ಮೀನುಗಾರ ಸಮಾಜದವರಾಗಿರುವ ದಿನೇಶ್ ಖಾರ್ವಿಯವರ ತಂದೆ ಹೆಸರು ಸಂಜೀವ ಮತ್ತು ತಾಯಿ ಕಮಲ.ಪತ್ನಿ ಮತ್ತು 3 ಮಕ್ಕಳು. ಜೀವನೋಪಾಯಕ್ಕಾಗಿ ಬೋಟ್ ಗಳಿಗೆ ಕಣ್ಣಿ ಹಾಕುವ ಉದ್ಯೋಗ ಮಾಡುತ್ತಿರುವ ಇವರಿಗೆ ಸಮುದ್ರದ ಅಲೆಗಳಲ್ಲಿ ಸಿಲುಕಿಕೊಳ್ಳುವ ದೋಣಿಗಳ ರಕ್ಷಣೆ ಮಾಡುವ ನೈಪುಣ್ಯತೆ ಕೂಡಾ ಇದೆ. ಪರ್ಸಿನ್ ಬೋಟ್ ಗಳು, ನಾಡದೋಣಿಗಳು,ಸಮುದ್ರದಲ್ಲಿ ತಾಂತ್ರಿಕ ಕಾರಣಗಳಿಂದಾಗಿ ಕೆಟ್ಟು ನಿಂತರೆ ಆಳದ ನೀರಿನಲ್ಲಿ ಮುಳುಗಿ ಯಂತ್ರದ ಎಂಜಿನ್ ನ ಫ್ಯಾನ್ ಗಳನ್ನು ಬಿಚ್ಚಿ ಮರು ಜೋಡಿಸುವ ಕಾರ್ಯವನ್ನು ಮಾಡುತ್ತಾರೆ.
ಬೈಂದೂರಿನಲ್ಲಿ 23 ಅಡಿ ಬಾವಿಯಿಂದ 25 ವರ್ಷಗಳ ಹಿಂದೆ ಹುಡುಗಿದ್ದ ನಾಗಶಿಲೆಯನ್ನು ಮೇಲಕ್ಕೆತ್ತಿ ದ್ದಾರೆ.
ಕಳೆದ ಜುಲೈ 3 ರಂದು ಮರವಂತೆ ಬೀಚ್ ನಲ್ಲಿ ಕಾರೊಂದು ಉರುಳಿ ಇಬ್ಬರು ಮೃತಪಟ್ಟಿದ್ದರು.ಈ ಘಟನೆಯಲ್ಲಿ ಕಾರನ್ನು ಸಮುದ್ರದಿಂದ ಮೇಲಕ್ಕೆ ತರಲು ದಿನೇಶ್ ಖಾರ್ವಿಯವರು ಬಹಳ ಶ್ರಮಪಟ್ಟಿದ್ದರು.ಮೊನ್ನೆಯಷ್ಟೇ ಬೈಂದೂರಿನ ಕಾಲ್ತೋಡಿನಲ್ಲಿ ಏಳು ವರ್ಷದ ಶಾಲಾ ಬಾಲಕಿಯೊಬ್ಬಳು ಕಾಲುಸಂಕದಿಂದ ಆಯ ತಪ್ಪಿ ಬಿದ್ದು ಮೃತಪಟ್ಟಿದ್ದಳು.ಬಾಲಕಿಯ ಮೃತದೇಹವನ್ನು ಹೊರತೆಗೆದ ತಂಡದಲ್ಲಿ ದಿನೇಶ್ ಖಾರ್ವಿಯವರು ಪ್ರಮುಖರಾಗಿದ್ದಾರೆ.
ನೀರಿನೊಂದಿಗೆ ಅಪಾಯಕಾರಿ ಬದುಕನ್ನು ಕಟ್ಟಿಕೊಂಡಿರುವ ದಿನೇಶ್ ಖಾರ್ವಿಯವರು ನಿಜವಾದ ಬಾಹುಬಲಿ.ತನ್ನ ಜೀವವನ್ನೇ ಪಣವಾಗಿಸಿಕೊಂಡು ಆಪತ್ತಿನಲ್ಲಿ ಸಿಲುಕಿರುವವರ ಜೀವ ಉಳಿಸುವ ದಿನೇಶ್ ಖಾರ್ವಿಯವರನ್ನು ಸಮಾಜ ಸರಿಯಾಗಿ ಗುರುತಿಸಿಲ್ಲ ಎಂಬ ಬೇಸರವಿದೆ. ಅವರ ಸಾಮಾಜಿಕ ಸೇವೆಯನ್ನು ಸರ್ಕಾರ ಗುರುತಿಸಬೇಕಾಗಿದೆ. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಈ ಶುಭಗಳಿಗೆಯಲ್ಲಿ ಸರ್ಕಾರ ಅವರ ಜೀವನದ ಭದ್ರತೆಗಾಗಿ ಸೂಕ್ತ ಉದ್ಯೋಗವನ್ನು ಕಲ್ಪಿಸಿಕೊಡಬೇಕಾಗಿದೆ. ಅವರಲ್ಲಿ ಜೀವರಕ್ಷಕ ಪರಿಕರಗಳ ಕೊರತೆಯಿದೆ.ಈ ಕೊರತೆಯನ್ನು ನೀಗಿಸಲು ಸಂಘ ಸಂಸ್ಥೆಗಳು ಅವರಿಗೆ ಜೀವರಕ್ಷಕ ಪರಿಕರಗಳನ್ನು ಒದಗಿಸಿ ಕೊಡಬೇಕಾಗಿದೆ.ಗಂಗೊಳ್ಳಿ ಕರಾವಳಿ ಪೋಲೀಸ್ ಕಾವಲು ಪಡೆಯವರೊಂದಿಗೆ ಕ್ರಿಯಾಶೀಲರಾಗಿ ಸೇವೆ ಸಲ್ಲಿಸುತ್ತಿರುವ ದಿನೇಶ್ ಖಾರ್ವಿಯವರ ಬದುಕಿಗೆ ಭದ್ರತೆ ಬೇಕಾಗಿದೆ.
ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಅಪಾಯದಲ್ಲಿ ಸಿಲುಕಿರುವವರ ರಕ್ಷಣೆ ಮತ್ತು ನೀರಿನಲ್ಲಿ ಮೃತಪಟ್ಟ ದೇಹಗಳನ್ನು ಹೊರತೆಗೆಯುವ ಮಾನವೀಯ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ದಿನೇಶ್ ಖಾರ್ವಿಯವರು ನಮ್ಮ ಸಮಾಜದ ನಿಜವಾದ ಬಾಹುಬಲಿ. ಈ ಆಪತ್ಭಾಂಧವನ ಕನಸುಗಳು ಶೀಘ್ರದಲ್ಲೇ ನನಸಾಗಲಿ ಮತ್ತು ಅವರ ಬದುಕು ಸಂಪನ್ನಗೊಳ್ಳಲ್ಲಿ ಎಂದು ಖಾರ್ವಿ ಆನ್ಲೈನ್ ಶುಭ ಹಾರೈಸುತ್ತದೆ.
ಸುಧಾಕರ್ ಖಾರ್ವಿ
Editor
www.kharvionline.com
ಸಮಾಜ ಸೇವೆ ಅಥವಾ ಸಾಮಾಜಿಕ ಕಾರ್ಯವು ವ್ಯಕ್ತಿಗಳು ಅಥವಾ ಸಮುದಾಯಗಳ ಅಗತ್ಯತೆಗಳಿಗೆ ಸ್ಪಂದಿಸುವ ಮತ್ತು ಬೆಂಬಲಿಸುವ ಒಂದು ಪುಣ್ಯದ ಕೆಲಸ. ಅಂತಹ ಕೆಲಸಕ್ಕೆ ಭಗವಂತನ ನಿಜವಾದ ಆಶೀರ್ವದ ಪಡೆದವರಿಂದ ಮಾಡಲು ಮಾತ್ರ ಸಾಧ್ಯ .
ಸಮಾಜ ಸೇವೆ ಹಣದ ರೂಪದಲ್ಲಿರಬೇಕಿಲ್ಲ, ಅದಕ್ಕೆ ಪದವಿ ಬೇಕಾಗಿಲ್ಲ, ಅಥವಾ ಸಮಾಜ ಸೇವಾ ಸಂಸ್ಥೆಗಳು ಆಗಿರಬೇಕಿಂದಿಲ್ಲ … ಮಾನವೀಯತೆಯ ಬಗ್ಗೆ ಕಾಳಜಿ ಮತ್ತು ಇತರರ ಕಷ್ಟಗಳಿಗೆ ಸ್ಪಂದಿಸುವ ನಿಸ್ವಾರ್ಥಮನೋಭಾವ ಇದ್ದರೆ ಸಾಕು.
ಅಂತಹ ನಿಸ್ವಾರ್ಥ ವ್ಯಕ್ತಿ ಜಾತಿ, ಧರ್ಮ, ಆರ್ಥಿಕ ಸ್ಥಿತಿ ಅಥವಾ ಸ್ಥಳದ ಬಗ್ಗೆ ತಲೆಕೆಡಿಸಿಕೊಳ್ಳದೆ ತಮ್ಮ ಸೇವೆಯನ್ನು ಸಲ್ಲಿಸುತ್ತಾರೆ … ಬಹುಶಃ ನಾವು ಮೂಲತಃ ಕ್ಷತ್ರಿಯರಾಗಿರುವುದರಿಂದ ನಮ್ಮ ಸಮಾಜದವರು ಅಂತಹ ಗುಣವನ್ನು ನಮ್ಮ ರಕ್ತದಲ್ಲಿ ಪಡೆದುಕೊಂಡಿವೆ.
ನಮ್ಮ ಸಮುದಾಯದ ಅಂತಹ ನಿಸ್ವಾರ್ಥ ಪುಣ್ಯದ ಕೆಲಸ ಮಾಡುತ್ತಿರುವ ಒಂದು ರತ್ನವೆಂದರೆ ನಮ್ಮ ದಿನೇಶ್ ಖಾರ್ವಿ ಸರ್. ಭಗವಂತನು ಅವರಿಗೆ ಮತ್ತು ಅವರ ಕುಟುಂಬಕ್ಕೆ ಉತ್ತಮ ಆರೋಗ್ಯ ಮತ್ತು ಸಮೃದ್ಧಿಯನ್ನು ದಯಪಾಲಿಸಲಿ.
ಅಲ್ಲದೆ, ಅವರು ನಿಸ್ವಾರ್ಥತೆಯಿಂದ ಸೇವೆ ಸಲ್ಲಿಸಿದ ಜನರ ಶುಭ ಹಾರೈಕೆಗಳು ಸದಾ ಅವರ ಮೇಲೆ ಇದ್ದೆ ಇರುತ್ತದೆ.
ಧನ್ಯವಾದಗಳು ದಿನೇಶ್ ಸರ್… ನಿಮಗೆ ಹೃತ್ಪೂರ್ವಕ ನಮನಗಳು.