ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಹೆಸರು ಅಜರಾಮರ. ಬ್ರಿಟಿಷರ ವಿರುದ್ಧ ಕೆಚ್ಚೆದೆಯ ಹೋರಾಟ ನಡೆಸಿ ತಾಯ್ನಾಡಿನ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ಈ ಕ್ರಾಂತಿವೀರನ ಶೌರ್ಯ ಪರಾಕ್ರಮಗಳ ಕಥನ ಕೇಳಿದರೆ ಮೈನವಿರೇಳಿಸುತ್ತದೆ.
ಕರಾವಳಿ ಕರ್ನಾಟಕಕ್ಕೂ ಸಂಗೊಳ್ಳಿ ರಾಯಣ್ಣನಿಗೂ ಅವಿನಾಭಾವ ಸಂಬಂಧವಿದ್ದು ಕುಂದಾಪುರ ತಾಲೂಕಿನ ಗಂಗೊಳ್ಳಿ ಲೈಟ್ ಹೌಸ್ ಸಮೀಪದ ಪಾಂಡವರ ಗುಹೆಯಲ್ಲಿ ರಾಯಣ್ಣ ತನ್ನ ಸಹಚರರೊಂದಿಗೆ ಕೆಲವು ದಿನ ತಂಗಿದ್ದ ಎಂಬ ಐತಿಹ್ಯಗಳು ಜನಜನಿತವಾಗಿದೆ. 1824 ರ ದಂಗೆಯಲ್ಲಿ ಬ್ರಿಟಿಷರು ಸಂಗೊಳ್ಳಿ ರಾಯಣ್ಣನನ್ನು ಬಂಧಿಸಿ ಬಳಿಕ ಬಿಡುಗಡೆ ಮಾಡುತ್ತಾರೆ. ಇದಾದ ಬಳಿಕ ಬ್ರಿಟಿಷರ ವಿರುದ್ಧ ಗೆರಿಲ್ಲಾ ಮಾದರಿಯ ಯುದ್ಧ ತಂತ್ರವನ್ನು ತೀವ್ರಗೊಳಿಸುವ ರಾಯಣ್ಣ ಸೈನ್ಯವನ್ನು ಸಂಘಟಿಸಲು ಕರಾವಳಿಯತ್ತ ಬರುತ್ತಾನೆ. ಹಾಗೆ ಬಂದ ರಾಯಣ್ಣ ಮತ್ತು ಅವನ ಸಹಚರರು ಲೈಟ್ ಹೌಸ್ ಸಮೀಪದ ಪಾಂಡವರ ಗುಹೆಯಲ್ಲಿ ಗುಪ್ತಸಭೆ ನಡೆಸುತ್ತಾರೆ. ಈ ಗುಹೆಯೊಳಗೆ ಪಿರಮಿಡ್ ಆಕೃತಿಯ ಪ್ರಾಂಗಣವಿದ್ದು ಸುಮಾರು ನೂರೈವತ್ತು ಜನರಿಗೆ ಕುಳಿತುಕೊಳ್ಳುವಷ್ಟು ಸ್ಥಳಾವಕಾಶ ಇದೆ ಎಂದು ಹಿರಿಯರು ಹೇಳುತ್ತಾರೆ. ಇದಕ್ಕೂ ಮುನ್ನ ಮಹಾಭಾರತ ಕಾಲದಲ್ಲಿ ಪಾಂಡವರು ಈ ಗುಹೆಯೊಳಗೆ ಕೆಲವು ಕಾಲ ತಂಗಿದ್ದರು ಎಂಬ ಐತಿಹ್ಯದ ಕಥನವೂ ಇದೆ.
ಪೌರಾಣಿಕ ಇತಿಹಾಸಕ್ಕೂ ಸಾಕ್ಷಿಯಾದ ಈ ಪಾಂಡವರ ಗುಹೆ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಸಂಗೊಳ್ಳಿ ರಾಯಣ್ಣ ಸಭೆ ನಡೆಸಿದ್ದ ಐತಿಹಾಸಿಕ ಗಳಿಗೆಗೂ ಸಾಕ್ಷಿಯಾಗಿದೆ. ನಿಜವಾಗಿ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಸಂಗ್ರಾಮ ಪ್ರಾರಂಭಗೊಂಡಿದ್ದು ಸಂಗೊಳ್ಳಿ ರಾಯಣ್ಣ ಕಾಲದಲ್ಲಿ. ಕಿತ್ತೂರು ರಾಣಿ ಚೆನ್ನಮ್ಮನ ಆಳ್ವಿಕೆಯಲ್ಲಿ ಈ ಸಂಗ್ರಾಮಕ್ಕೆ ಮುನ್ನುಡಿ ಬರೆಯಲಾಗಿತ್ತು. ಅಂದರೆ ಹದಿನೇಳನೇ ಶತಮಾನ ಸ್ವಾತಂತ್ರ್ಯ ಸಂಗ್ರಾಮದ ಪರ್ವಕಾಲ ಆದರೆ ಇತಿಹಾಸಕಾರರು 1857 ರ ಸಿಪಾಯಿ ದಂಗೆಯನ್ನು ಭಾರತದ ಸ್ವಾತಂತ್ರ್ಯ ಸಂಗ್ರಾಮ ಎಂದು ದಾಖಲಿಸುತ್ತಾರೆ.
ಆಗಸ್ಟ್ ಹದಿನೈದು ನಮ್ಮ ದೇಶ ಸ್ವಾತಂತ್ರ್ಯ ಪಡೆದ ಪರಮ ಪುಣ್ಯ ದಿನ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜನ್ಮ ದಿನಾಂಕವೂ ಆಗಸ್ಟ್ ಹದಿನೈದು ಆದರೆ ರಾಯಣ್ಣ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ದಿನ ಜನವರಿ 26. ಆ ದಿನ ನಮ್ಮ ದೇಶದ ಗಣರಾಜ್ಯೋತ್ಸವ ದಿನವಾಗಿರುತ್ತದೆ. ಪ್ರಸ್ತುತ ನಮ್ಮ ದೇಶದಲ್ಲಿ ಸ್ವಾತಂತ್ರ್ಯೋತ್ಸವದ ಅಮೃತೋತ್ಸವ ವೈಭವಪೂರ್ಣವಾಗಿ ನಡೆಯುತ್ತಿದೆ. ಮನೆಮನೆಗಳಲ್ಲಿ ಹರ್ ಘರ್ ತಿರಂಗ ಉತ್ಸವ ಜೋರಾಗಿ ನಡೆಯುತ್ತಿದೆ.ಈ ಸಂದರ್ಭದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪಾದಸ್ಪರ್ಶಕ್ಕೆ ಸಾಕ್ಷಿಯಾದ ಗಂಗೊಳ್ಳಿ ಲೈಟ್ ಹೌಸ್ ಬಳಿಯ ಪಾಂಡವರ ಗುಹೆಯ ಬಗ್ಗೆ ಮೆಲುಕು ಹಾಕುವುದೆಂದರೆ ಅದೊಂದು ಇತಿಹಾಸಕ್ಕೆ ಬೆಳೆಸಿದ ಮೈನವಿರೇಳಿಸುವ ಪಯಣವಾಗುತ್ತದೆ. ಅದು ಭಾರತ ಮಾತ್ರವಲ್ಲ ಜಗತ್ತಿನ ಮೂಲೆ ಮೂಲೆಗೂ ಭಾರತದ ಸ್ವಾತಂತ್ರ್ಯ ಸಂಗ್ರಾಮದ ವೀರಸೇನಾನಿಗಳ ಕಥನವನ್ನು ಕೊಂಡೊಯ್ಯುತ್ತದೆ. ನಮ್ಮ ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುವ ಶುಭ ಸಂದರ್ಭದಲ್ಲಿ ಸರ್ವರಿಗೂ ಶುಭವನ್ನು ಕೋರುತ್ತೇನೆ.
ಉಮಾಕಾಂತ ಖಾರ್ವಿ ಕುಂದಾಪುರ