ಸಮಾಜದ ಅಭುದ್ಯಯಕ್ಕೆ ಹೊಸ ಮನ್ವಂತರದ ಶುಭ ನಾಂದಿ, VISION 2030 ಐತಿಹಾಸಿಕ ಕಾರ್ಯಕ್ರಮ

ಕೊಂಕಣಿ ಖಾರ್ವಿ ಸಮಾಜದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಅಖಿಲ ಭಾರತ ಕೊಂಕಣಿ ಖಾರ್ವಿ ಮಹಾಜನಾ ಸಂಘ, ವಿಶ್ವಕೊಂಕಣಿ ಕೇಂದ್ರ ಮತ್ತು ಖಾರ್ವಿ ಆನ್ಲೈನ್ ಸಹಭಾಗಿತ್ವದಲ್ಲಿ ಸಮಾಜದ UPSC, IPS, IAS ಆಕಾಂಕ್ಷಿಗಳನ್ನು ಒಟ್ಟುಗೂಡಿಸಿ ಕೊಂಕಣಿ ಖಾರ್ವಿ ಸಭಾ ಭವನದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಅಖಿಲ ಭಾರತ ಕೊಂಕಣಿ ಖಾರ್ವಿ ಮಹಾಜನಾ ಸಭಾದ ಅಧ್ಯಕ್ಷರಾದ ಶ್ರೀ ಮೋಹನ್ ಬನಾವಳಿಕಾರ್, ಕಾರ್ಯದರ್ಶಿ ಕೃಷ್ಣ ತಾಂಡೇಲ್ರವರ ನೇತೃತ್ವದಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತ್ತು. ಉನ್ನತ ಉದ್ಯೋಗಾಂಕ್ಷಿಗಳಾದ ಉಭಯಜಿಲ್ಲೆಗಳ ನಮ್ಮ ಸಮಾಜದ ವಿದ್ಯಾರ್ಥಿಗಳು ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಅತ್ಯಂತ ಉಪಯುಕ್ತ ಮತ್ತು ಮಾರ್ಗದರ್ಶನ ನೀಡುವ ಈ ಕಾರ್ಯಕ್ರಮದಲ್ಲಿ ಭವಿಷ್ಯದ ವಿದ್ಯಾರ್ಥಿ ವೇತನ ಕಾರ್ಯಕ್ರಮಗಳು, ಯೋಜನೆ ಮತ್ತು ಇತರ ವೃತ್ತಿ ಆಧಾರಿತ ಮಾರ್ಗದರ್ಶನ ಕಾರ್ಯಕ್ರಮಗಳು, ಖಾರ್ವಿ ಸಮಾಜದ ವಿದ್ಯಾರ್ಥಿಗಳ ತಂತ್ರಾಂಶ ನೋಂದಣಿ ಕಾರ್ಯಕ್ರಮವನ್ನು ಕೂಡಾ ಹಮ್ಮಿಕೊಳ್ಳಲಾಗಿತ್ತು.

ಭವಿಷ್ಯದ ದೂರದೃಷ್ಟಿ ಚಿಂತನೆ ಮತ್ತು ಗುರಿಯನ್ನು ಇಟ್ಟುಕೊಂಡು ರೂಪಿಸಲಾದ ಯೋಜನೆಯಲ್ಲಿ ಮುಂದಿನ 2030 ರೊಳಗೆ ಖಾರ್ವಿ ಸಮಾಜದ 5 ರಿಂದ 10 ಜನ ವಿದ್ಯಾರ್ಥಿಗಳನ್ನು ಉನ್ನತ ಉದ್ಯೋಗದಲ್ಲಿ ನಿಯುಕ್ತಿಗೊಳಿಸುವ ಮಹತ್ವಾಕಾಂಕ್ಷಿ ಅಂಶಗಳಿವೆ. ಈ ಕಾರ್ಯಕ್ರಮದಲ್ಲಿ ಕಾರ್ಯದರ್ಶಿಗಳಾದ ಕೃಷ್ಣ ತಾಂಡೇಲ್ ರವರು ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ಕುಮಾರಿ ಸ್ಪೂರ್ತಿ ಆನಂದ ನಾಯ್ಕ್, ಖುಷಿ ಖಾರ್ವಿ ಯವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರಕಿತು. ಕುಮಾರಿ ಶೈವಿಕಾ ರಾಮ್ ಪ್ರಸನ್ನ ಖಾರ್ವಿಯವರ ಪ್ರಾರ್ಥನೆ ನೃತ್ಯವನ್ನು ಸಾದರ ಪಡಿಸಿದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಸಮಾಜದ ಪ್ರಸಿದ್ಧ ಕಡಲ ವಿಜ್ಞಾನಿ ಪ್ರಕಾಶ ಮೇಸ್ತಾ, ಭಟ್ಕಳದ ಪ್ರಾಂಶುಪಾಲೆ ರೂಪಾ ರಮೇಶ್ ಖಾರ್ವಿ, ಹೊನ್ನಾವರದ ಪ್ರಖ್ಯಾತ ವೈದ್ಯರಾದ ಬಾಲಚಂದ್ರ ಮೇಸ್ತಾ ಉಪಸ್ಥಿತರಿದ್ದು ವೈದ್ಯಕೀಯ ರಂಗದ ಅನುಭವ ಮತ್ತು ಮಾಹಿತಿಗಳನ್ನು ಹಂಚಿಕೊಂಡರು. . ಮುಂಬೈ ಉದ್ಯಮಿ ರವಿ ಟಿ ನಾಯ್ಕರವರು ತಮ್ಮ ಅನುಭವದ ಮಾತುಗಳನ್ನು ವಿದ್ಯಾರ್ಥಿಗಳ ಪೋಷಕರೊಂದಿಗೆ ಹಂಚಿಕೊಂಡರು. ಕೊಂಕಣಿ ಖಾರ್ವಿ ಮಹಾಜನಾ ಸಭಾದ ಅಧ್ಯಕ್ಷರು ಪ್ರಾಸ್ತಾವಿಕ ಭಾಷಣ ಮಾಡಿದರು. ಕೊಂಕಣಿ ಖಾರ್ವಿ ಸಮಾಜದ ವಿದ್ಯಾರ್ಥಿಗಳ ಭವ್ಯ ಬದುಕು ರೂಪಿಸಲು ಭದ್ರವಾದ ನೆಲೆಗಟ್ಟಿನ ಅತ್ಯುತ್ತಮ ಮತ್ತು ಅತ್ಯುಪಯುಕ್ತ ಕಾರ್ಯಕ್ರಮಗಳನ್ನು ಸಂಘಟಿಸಿ ಸಮಾಜಕ್ಕೆ ಕೊಡುಗೆ ನೀಡುತ್ತಿರುವ ಮೋಹನ್ ಬನವಾಳಿಕರ್ ರವರು ಸಮಾಜದ ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳ ಸದುಪಯೋಗ ಪಡೆಯಬೇಕೆಂದು ಅವರು ಈ ಸಂದರ್ಭದಲ್ಲಿ ಕರೆ ನೀಡಿದರು.

ಈ ಸಮಾಜಮುಖಿ ಕಾರ್ಯಕ್ರಮ ನಮ್ಮ ಸಮಾಜದ ಇತಿಹಾಸದಲ್ಲಿ ಹೊಸ ಮನ್ವಂತರವನ್ನು ಸೃಷ್ಟಿ ಮಾಡಿದ್ದು,ಸಮಾಜದ ಯುವ ಪೀಳಿಗೆಯ ಉತ್ಕರ್ಷದ ಹಾದಿಯಲ್ಲಿ ಅದಮ್ಯ ಗುರಿಯತ್ತ ಪಯಣಕ್ಕೆ ಅಭೂತಪೂರ್ವ ಮಾರ್ಗದರ್ಶನ ನೀಡಿದೆ ಮತ್ತು ಗಮ್ಯ ಸ್ಥಾನದತ್ತ ಚಿತೈಸಲು ಸುದೃಡವಾದ ಹೆಜ್ಜೆಯಿನ್ನಡಲು ಬಲ ನೀಡಿದೆ. ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳು, ಕುಂದಾಪುರ ಕೊಂಕಣಿ ಖಾರ್ವಿ ಸಮಾಜದ ಮೊಕ್ತೇಸರರಾದ ಆನಂದ ನಾಯ್ಕ, ಗಂಗೊಳ್ಳಿ ಮಹಾಂಕಾಳಿ ದೇವಸ್ಥಾನದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಕಂಚಗೋಡಿನ ನಾಗೇಶ್ ಖಾರ್ವಿ ಮತ್ತು ತಂಡವನ್ನು ಸ್ವಾಗತಿಸಲಾಯಿತು.

IAS ಆಕಾಂಕ್ಷಿಗಳಾದ ಗಣೇಶ್ ಕಾಮತ್ ರವರು IAS ಮತ್ತು UPSC ಬಗ್ಗೆ ವಿದ್ಯಾರ್ಥಿಗಳೊಂದಿಗೆ ಮತ್ತು ಪೋಷಕರೊಂದಿಗೆ ಮಾಹಿತಿಯನ್ನು ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಸಮಾಜದ ಆರು ಜನ IAS ಆಕಾಂಕ್ಷಿ ವಿದ್ಯಾರ್ಥಿಗಳಿಗೆ ಪುಸ್ತಕದ ಕಿಟ್ ನ್ನು ವಿತರಿಸಲಾಯಿತು.

ರಾಷ್ಟ್ರಮಟ್ಟದ CA ಪರೀಕ್ಷೆಯಲ್ಲಿ ಫೌಂಡೇಷನ್ ಹಂತದಲ್ಲಿ ಉತ್ತೀರ್ಣಳಾದ ಪ್ರಿಯಾ ಖಾರ್ವಿಯವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು. ಅಭಿನಂದನೆಗೆ ಭಾವಪೂರ್ಣವಾಗಿ ಮಾತನಾಡಿದ ಪ್ರಿಯಾರವರು ತಾವು ನಡೆದು ಬಂದ ದಾರಿ, ತಂದೆ ತಾಯಿಗಳ ಬೆಂಬಲ, ಬಂಧುಗಳ ಸಹಕಾರಗಳನ್ನು ಸ್ಮರಿಸಿಕೊಳ್ಳುತ್ತಾ ಆತ್ಮವಿಶ್ವಾಸ ಮತ್ತು ಸಾಧಿಸುವ ಛಲವಿದ್ದರೆ ಬದುಕಿನಲ್ಲಿ ಉನ್ನತ ಸ್ಥಾನಕ್ಕೆ ಏರಬಹುದು ಎಂದು ಹೇಳುತ್ತಾ ತನ್ನನ್ನು ಗುರುತಿಸಿ ಗೌರವಿಸಿದ್ದಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು. ವಿಶೇಷವಾಗಿ ಅಧ್ಯಕ್ಷರಾದ ಮೋಹನ್ ಬನಾವಳಿಕಾರ್ ರವರನ್ನು ಶ್ಲಾಘಿಸಿದರು. ವೆಂಕಟೇಶ ಮೇಸ್ತಾ ಮಂಕಿ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.

ಕೊಂಕಣಿ ಖಾರ್ವಿ ಸಮಾಜದ ಇತಿಹಾಸದಲ್ಲೇ ಅಭೂತಪೂರ್ವವಾಗಿ ನಡೆದ ಈ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿದ್ದು ಈ ಯಶಸ್ಸಿಗೆ ಕಾರಣಿಕರ್ತರಾದ ಎಲ್ಲರಿಗೂ ಖಾರ್ವಿ ಆನ್ಲೈನ್ ತುಂಬು ಹೃದಯದ ಧನ್ಯವಾದಗಳನ್ನು ಸಮರ್ಪಿಸುತ್ತದೆ.

www.kharvionline.com

Leave a Reply

Your email address will not be published. Required fields are marked *