ಗಂಗೊಳ್ಳಿ ದಾಕುಹಿತ್ಲು ಉತ್ತನಮನೆ ಕುಟುಂಬಸ್ಥರ ಚಿಣಿಕಾರನ ದೋಣಿ ಬಿಡುವ ಅಪೂರ್ವ ಧಾರ್ಮಿಕ ಆಚರಣೆ

ಕುಂದಾಪುರ ತಾಲೂಕಿನ ಗಂಗೊಳ್ಳಿಯ ದಾಕುಹಿತ್ಲುವಿನಲ್ಲಿ ಉತ್ತನಮನೆ ಕುಟುಂಬಸ್ಥರು ಪರಿಸರದ ಜನರ ಸಹಯೋಗದಿಂದ ಚಿಣಿಕಾರನ ದೋಣಿ ಬಿಡುವುದು ಎಂಬ ವೈಶಿಷ್ಟ್ಯಪೂರ್ಣ ಜನಪದ ಸೊಗಡಿನ ಧಾರ್ಮಿಕ ವಿಧಿ ವಿಧಾನಗಳನ್ನು ಬಹಳ ಶ್ರದ್ಧೆ ಭಕ್ತಿಯಿಂದ ಆಚರಿಸುತ್ತಾರೆ.

ಸ್ಥಳೀಯ ಕೊಂಕಣಿ ಖಾರ್ವಿ ಮೀನುಗಾರರ ಸಾಂಗತ್ಯದಲ್ಲಿ ಆಚರಿಸಲ್ಪಡುವ ಈ ಧಾರ್ಮಿಕ ಆಚರಣೆ ಶ್ರೀ ಚಕ್ರೇಶ್ವರಿ ದೇವಿಯ ಸನ್ನಿಧಿಯಲ್ಲಿ ಸಂಪನ್ನಗೊಳ್ಳುತ್ತದೆ.ಉತ್ತನಮನೆ ಕುಟುಂಬಸ್ಥರು ಈ ವೈಶಿಷ್ಟ್ಯಪೂರ್ಣ ಆಚರಣೆಯನ್ನು ಪ್ರತಿವರ್ಷ ಬಹಳ ಶ್ರದ್ಧೆ ಭಕ್ತಿಯಿಂದ ಆಚರಿಸಿಕೊಂಡು ಬಂದಿದ್ದು ಇದಕ್ಕೆ ಗತಕಾಲದ ಇತಿಹಾಸವಿದೆ.ಉತ್ತನಮನೆ ಕುಟುಂಬದ ಹಿರಿಯರ ತಲೆಮಾರುಗಳಿಂದ ಈ ಆಚರಣೆ ನಡೆಯುತ್ತಾ ಬಂದಿದೆ.

ಅನಾದಿಕಾಲದಿಂದಲೂ ಉತ್ತನಮನೆ ಕುಟುಂಬದವರು ನಡೆಸಿಕೊಂಡು ಬಂದಿರುವ ಈ ಆಚರಣೆಯ ಹಿಂದೆ ಮೈನವಿರೇಳಿಸುವ ಕಥೆ ಇದೆ.ದೈವ ಸಂಪ್ರೀತಿಯ ಸ್ವಾರಸ್ಯಕರ ಕಥನವಿದೆ.ಪುಳಕಿತಗೊಳಿಸುವ ಇತಿಹಾಸವಿದೆ. ನದಿ ಮತ್ತು ಸಮುದ್ರ ತೀರಗಳಲ್ಲಿ ಬದುಕನ್ನು ಕಟ್ಟಿಕೊಂಡು ತಮ್ಮ ಜನಪದ ಸಂಸ್ಕೃತಿಯನ್ನು ಬೆಳೆಸಿಕೊಂಡು ಬಂದ ಕೊಂಕಣಿ ಖಾರ್ವಿ ಸಮಾಜದ ಜನಪದ ಧಾರ್ಮಿಕ ನಂಬಿಕೆಗಳಲ್ಲಿ ಚಿಣಿಕಾರರ ಕಥೆ ಜನಜನಿತವಾಗಿದೆ..

ಆಷಾಢ ಮಾಸದಲ್ಲಿ ಕುಂಭದ್ರೋಣ ಮಳೆಯಾಗಿ ನದಿ ಸಮುದ್ರಗಳು ಘನಘೋರ ಸ್ವರೂಪ ಪಡೆಯುತ್ತಿದ್ದ ಆ ದಿನಗಳಲ್ಲಿ ಚಿಣಿಕಾರರು ಭೂಮಿಗೆ ಇಳಿದು ಕುಂದಾಪುರ ಪಂಚಗಂಗಾವಳಿಯ ದ್ವೀಪ ಪ್ರದೇಶವಾದ ಬಬ್ಬುಕುದ್ರುವಿನಲ್ಲಿ ವಾಸ್ತ್ಯವ ಮಾಡುತ್ತಿದ್ದರು ಮತ್ತು ಆಷಾಢ ಮುಗಿದ ಬಳಿಕ ಆಕಾಶ ಮಾರ್ಗವಾಗಿ ಹೊರಟು ಹೋಗುತ್ತಿದ್ದರು ಎಂಬ ಉಲ್ಲೇಖ ಕೊಂಕಣಿ ಖಾರ್ವಿ ಸಮಾಜದ ಜನಪದ ಕಥನಗಳಲ್ಲಿ ಅಡಕವಾಗಿದೆ. ಆಷಾಢ ಮಾಸದ ಆ ಸಮಯದಲ್ಲಿ ಉತ್ತನಮನೆ ಕುಟುಂಬದವರಿಗೆ ತುಂಬಾ ಬಡತನವಿತ್ತು.ಜೀವನ ನಡೆಸಲು ತುಂಬಾ ತೊಂದರೆಯಿತ್ತು.ಹೀಗಾಗಿ ಉತ್ತನಮನೆ ಕುಟುಂಬದ ಹಿರಿಯರು ಚಿಣಿಕಾರರ ಬಳಿ ನಮಗೆ ಸಂಕಷ್ಟ ದೂರವಾದರೆ ಪ್ರತಿವರ್ಷವೂ ನಿಮಗೆ ನೈವೇದ್ಯವನ್ನು ದೋಣಿಯ ಮೂಲಕ ಸಮರ್ಪಿಸುತ್ತೇವೆ ಎಂದು ಹರಕೆ ಹೇಳಿಕೊಳ್ಳುತ್ತಾರೆ.ಬಳಿಕ ಉತ್ತನಮನೆ ಕುಟುಂಬಸ್ಥರ ಸಂಕಷ್ಟಗಳೆಲ್ಲವೂ ದೂರವಾಗುತ್ತದೆ. ಅದರಂತೆ ಅನಾದಿಕಾಲದಿಂದಲೂ ಉತ್ತನಮನೆ ಕುಟುಂಬಸ್ಥರು ಚಿಣಿಕಾರನ ದೋಣಿ ಬಿಡುವ ಈ ವೈಶಿಷ್ಟ್ಯಪೂರ್ಣ ಆಚರಣೆಯನ್ನು ಮಾಡುತ್ತಾ ಬಂದಿದ್ದು ಜೀವನದಲ್ಲಿ ಒಳಿತನ್ನು ಕಂಡಿದ್ದಾರೆ.ಒಮ್ಮೆ ಕಾರಾಣಾಂತರಗಳಿಂದ ಈ ಆಚರಣೆ ನಿಂತು ಹೋದಾಗ ಕುಟುಂಬಸ್ಥರು ಬಹಳ ಕಷ್ಟ ಪಟ್ಟಿದ್ದರು ಎಂದು ಉತ್ತನಮನೆ ಕುಟುಂಬದ ಉತ್ತನಮನೆ ಚಂದ್ರ ಖಾರ್ವಿ ಹೇಳುತ್ತಾರೆ. .

ಆಷಾಢ ಮಾಸ ಮುಗಿದ ಬಳಿಕ ಶ್ರಾವಣ ಮಾಸದ ಸಂಕ್ರಾಂತಿಯ ಮರುದಿನ ಪಂಚಗಂಗಾವಳಿ ನದಿಯಲ್ಲಿ ಚಿಣಿಕಾರ ದೋಣಿಯನ್ನು ಬಿಡುತ್ತಾರೆ.ಈ ಚಿಣಿಕಾರನ ದೋಣಿಯನ್ನು ತೆಂಗಿನಮರದ ಕಾಯಿಕೊಂತದಿಂದ ತಯಾರಿಸಲಾಗುತ್ತದೆ.ಕಾಯಿ ಕೊಂತವನ್ನು ಕೊಂಕಣಿಯಲ್ಲಿ ಕುಂತಳಿಕೆ ಎಂದು ಕರೆಯುತ್ತಾರೆ.ಈ ಕಾಯಿಕೊಂತವನ್ನು ಎರಡು ಮೂರು ದಿನಗಳ ಮೊದಲೇ ಹದ ಮಾಡಲು ಬಾವಿಗೆ ಹಾಕುತ್ತಾರೆ.ಬಳಿಕ ಅದನ್ನು ಬಿಸಿಲಿನಲ್ಲಿ ಒಣಗಿಸಲಾಗುತ್ತದೆ.ಈ ಪ್ರಕ್ರಿಯೆ ಮುಗಿದ ಬಳಿಕ ಕಾಯಿಕೊಂತ ದೋಣಿ ರೂಪದಲ್ಲಿ ಪರಿವರ್ತನೆಯಾಗುತ್ತದೆ.ಅದರಲ್ಲಿ ಅವಲಕ್ಕಿ,ಉದುಬತ್ತಿ ಬಹಿಣ ಸಾಹಿತ್ಯದಂತ ಪೂಜಾ ಸಾಮಾಗ್ರಿಗಳನ್ನು ಹಾಕಿ ಶ್ರೀ ಚಕ್ರೇಶ್ವರಿ ಅಮ್ಮನವರ ಎದುರಲ್ಲಿ ಪೂಜೆ ಮಾಡುತ್ತಾರೆ.ಅಂತಿಮವಾಗಿ ಈ ಚಿಣಿಕಾರನ ದೋಣಿಗೆ ನಾಲ್ಕು ಬದಿಗಳಲ್ಲಿ ಬಟ್ಟೆಯ ದೊಂದಿ ಮಾಡಿ ಪಂಚಗಂಗಾವಳಿ ನದಿಯ ಮಧ್ಯಭಾಗದಲ್ಲಿ ಬಿಡುತ್ತಾರೆ.ಹೀಗೆ ಈ ವೈಶಿಷ್ಟ್ಯಪೂರ್ಣ ಧಾರ್ಮಿಕ ಆಚರಣೆ ಸಂಪನ್ನಗೊಳ್ಳುತ್ತದೆ.

ದೋಣಿಯಲ್ಲಿ ನೈವೇದ್ಯ ಮತ್ತು ಇತರ ಪೂಜೆ ಸಾಮಾಗ್ರಿಗಳನ್ನು ಊರಿನ ಜನರು ಹರಕೆಯ ರೂಪದಲ್ಲಿ ತರುವುದು ಉಂಟು. ಶ್ರೀ ಚಕ್ರೇಶ್ವರಿ ಅಮ್ಮನವರು ದಾಕುಹಿತ್ಲುವಿನ ಪೂರ್ವದಿಕ್ಕಿನಲ್ಲಿರುವ ಉಪ್ಪಿನಕುದ್ರು ಬೊಬ್ಬರ್ಯ ದೇವರ ಸನ್ನಿಧಿಯಿಂದ ಪಂಚಗಂಗಾವಳಿ ನದಿಯಲ್ಲಿ ಹಾಯಿದೋಣಿಯಲ್ಲಿ ದಾಕುಹಿತ್ಲುವಿಗೆ ಬಂದು ನೆಲೆ ನಿಂತಿದ್ದಾರೆ ಎಂಬ ಅಂಶ ಈ ದೇಗುಲ ಪುನರ್ ನಿರ್ಮಾಣ ಕಾರ್ಯ ಮಾಡುವಾಗ ಹಾಕಲಾದ ಆರೂಢ ಪ್ರಶ್ನಾ ಮಾರ್ಗದಲ್ಲಿ ತಿಳಿದು ಬಂತು ಮತ್ತು ಚಿಣಿಕಾರನ ದೋಣಿ ಬಿಡುವಾಗ ಸ್ವಾತಿಕ ರೂಪದ ಸಾಹಿತ್ಯ ಪರಿಕರಗಳನ್ನು ದೋಣಿಯಲ್ಲಿ ಹಾಕಬೇಕು ಎಂಬ ಉತ್ತರವೂ ತೋರಿ ಬಂತು. ಅದರ ಪ್ರಕಾರ ಉತ್ತನಮನೆ ಕುಟುಂಬಸ್ಥರು ಶಾಸ್ತ್ರ ಸಂಪ್ರದಾಯಗಳಿನುಗುಣವಾಗಿ ಪರಿಸರದ ಜನರ ಸಹಯೋಗದಲ್ಲಿ ಶ್ರದ್ದಾಭಕ್ತಿಯಿಂದ ಚಿಣಿಕಾರನ ದೋಣಿ ಬಿಡುವ ಆಚರಣೆಯನ್ನು ಮಾಡುತ್ತಾ ಬಂದಿರುತ್ತಾರೆ.

ಶ್ರೀ ಚಕ್ರೇಶ್ವರಿ ಅಮ್ಮನವರ ದೇಗುಲದಲ್ಲಿ ಪ್ರತಿ ಮಂಗಳವಾರ ಮತ್ತು ಶುಕ್ರವಾರ ವಿಶೇಷ ಪೂಜೆ ಇರುತ್ತದೆ ಮತ್ತು ನವರಾತ್ರಿ ಸಮಯದಲ್ಲಿ ಒಂಬತ್ತು ದಿನವೂ ವಿಶೇಷ ಪೂಜೆ ಇರುತ್ತದೆ.ಇಲ್ಲಿ ಪ್ರತಿವರ್ಷವೂ ಮಾರಿಜಾತ್ರೆಯು ನಡೆಯುತ್ತದೆ.ಸಮೀಪದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಾರಿಪೂಜೆ ನಡೆದ ಬಳಿಕ ಚಕ್ರೇಶ್ವರಿ ದೇಗುಲದಲ್ಲಿ ಮಾರಿಪೂಜೆ ನಡೆಯುತ್ತದೆ.ಶಕ್ತಿಸ್ವರೂಪಿಣಿಯ ದಿವ್ಯ ಸನ್ನಿಧಿಯಲ್ಲಿ ಪೂಜಾ ಕೈಂಕರ್ಯಗಳು ನಂಬಿದ ಭಕ್ತಾದಿಗಳು ಮತ್ತು ಪರಿಸರದ ಜನರ ಸಹಯೋಗದಲ್ಲಿ ಅತ್ಯಂತ ಶ್ರದ್ಧಾಭಕ್ತಿಯಿಂದ ನೇರವೇರುತ್ತದೆ. ಚಿಣಿಕಾರನ ದೋಣಿ ಬಿಡುವ ಆಚರಣೆಯಲ್ಲಿ ದೋಣಿಯ ಮಾಧ್ಯಮದ ಮೂಲಕ ಅಲೌಕಿಕ ಜಗತ್ತಿನಲ್ಲಿ ಅಗೋಚರವಾದ ಶಕ್ತಿಯನ್ನು ಆರಾಧಿಸಿ ಕಣ್ಣಿಗೆ ಕಾಣುವಂತೆ ಅನಾವರಣಗೊಳಿಸುವ ಕ್ರಿಯೆ ಇಲ್ಲಿ ಗಮನ ಸೆಳೆಯುತ್ತದೆ.ದೋಣಿ ಬಿಡುವ ಸಂದರ್ಭದಲ್ಲಿ ಹೇಳುವ ವಿಶಿಷ್ಟ ಶಬ್ದ ವಿನ್ಯಾಸದ ಘೋಷ ವಾಕ್ಯಗಳಿಗೆ ಇಲ್ಲಿ ವಿಶೇಷ ಅರ್ಥವಿದೆ.ಜನಪದ ನೆಲೆಗಟ್ಟಿನ ಧಾರ್ಮಿಕ ಸಂಸ್ಕೃತಿಯ ಮೌಖಿಕ ಸಾಹಿತ್ಯ,ಭೌತಿಕ ಪರಿಕರಗಳು,ಆಚರಣೆಗಳು,ಆರಾಧನೆಗಳು ಚಾರಿತ್ರಿಕ ಕಾಲಘಟ್ಟಗಳ ಸಾಮಾಜಿಕ ಮತ್ತು ಧಾರ್ಮಿಕ ಬದುಕಿನ ಶ್ರೇಷ್ಠ ಸಂಪ್ರದಾಯಗಳು ಎಂಬುದನ್ನು ನಾವಿಲ್ಲಿ ಮರೆಯಬಾರದು.

ಈ ಹಿನ್ನೆಲೆಯಲ್ಲಿ ಕೊಂಕಣಿ ಖಾರ್ವಿ ಸಮಾಜದ ಗಂಗೊಳ್ಳಿ ದಾಕುಹಿತ್ಲುವಿನ ಉತ್ತನಮನೆ ಕುಟುಂಬಸ್ಥರು ಅನಾದಿಕಾಲದಿಂದಲೂ ಆರಾಧಿಸಿಕೊಂಡು ಬಂದಿರುವ ಈ ಚಿಣಿಕಾರನ ದೋಣಿ ಬಿಡುವ ಧಾರ್ಮಿಕ ಆಚರಣೆಯು ಅತ್ಯಂತ ವೈಶಿಷ್ಟ್ಯಪೂರ್ಣವಾಗಿದೆ ಮತ್ತು ಇದರಲ್ಲಿ ಕೊಂಕಣಿ ಖಾರ್ವಿ ಸಮಾಜದ ಸಮೃದ್ಧ ಜನಪದ ಸಂಸ್ಕೃತಿಯ ಧಾರ್ಮಿಕ ಮುಖಗಳ ದರ್ಶನವಾಗುತ್ತದೆ. ಚಿಣಿಕಾರನ ದೋಣಿಯ ಬಗೆಗಿನ ಈ ಅಧ್ಯಯನದಲ್ಲಿ ನಮಗೆ ಸಂಪೂರ್ಣ ಮಾಹಿತಿ ಕೊಟ್ಟು ಸಹಕರಿಸಿದ ಗಂಗೊಳ್ಳಿ ದಾಕುಹಿತ್ಲು ಉತ್ತನಮನೆಯ ಉತ್ತ ಚಂದ್ರ ಖಾರ್ವಿ,ದೃಶ್ಯಾವಳಿಗಳನ್ನು ಕೊಟ್ಟು ಸಹಕರಿಸಿದ ಅಶ್ವತ್ಥ್ ಖಾರ್ವಿ ದಾಕುಹಿತ್ಲು ಮತ್ತು ಈ ಪರಿಸರದ ಪ್ರಸಿದ್ಧ ಯೂಟ್ಯೂಬ್ ರ್ ನಿಶು short ವೀಡಿಯೊದ ರಾಘವೇಂದ್ರ ಖಾರ್ವಿ ಬೀಡಾ ಅಂಗಡಿ ಮನೆ ಇವರೆಲ್ಲರಿಗೂ ಅನಂತ ಧನ್ಯವಾದಗಳು.

ಉಮಾಕಾಂತ ಖಾರ್ವಿ ಕುಂದಾಪುರ

2 thoughts on “ಗಂಗೊಳ್ಳಿ ದಾಕುಹಿತ್ಲು ಉತ್ತನಮನೆ ಕುಟುಂಬಸ್ಥರ ಚಿಣಿಕಾರನ ದೋಣಿ ಬಿಡುವ ಅಪೂರ್ವ ಧಾರ್ಮಿಕ ಆಚರಣೆ

  1. ವಿಜ್ಞಾನದಲ್ಲಿ ಈ ಪ್ರಪಂಚದಲ್ಲಿನ ಅನೇಕ ಪ್ರಶ್ನೆಗಳಿಗೆ ಉತ್ತರ ಇಲ್ಲ, ಆದರೆ ಹೇಗೋ ಅಂತಹ ಅಂಶಗಳು ನಮ್ಮ ಸುಂದರ ಮತ್ತು ಕುತೂಹಲಕಾರಿ ಜಾನಪದ ಸಂಪ್ರದಾಯಗಳ ಹಾಸುಹೊಕ್ಕಾಗಿ ಬಿಟ್ಟಿದವೆ …. ಈ ಸಾಲುಗಳೇ ನೋಡಿ…
    ಆಷಾಢ ಮಾಸದಲ್ಲಿ ಕುಂಭದ್ರೋಣ ಮಳೆಯಾಗಿ ನದಿ ಸಮುದ್ರಗಳು ಘನಘೋರ ಸ್ವರೂಪ ಪಡೆಯುತ್ತಿದ್ದ ಆ ದಿನಗಳಲ್ಲಿ ಚಿಣಿಕಾರರು ಭೂಮಿಗೆ ಇಳಿದು ಕುಂದಾಪುರ ಪಂಚಗಂಗಾವಳಿಯ ದ್ವೀಪ ಪ್ರದೇಶವಾದ ಬಬ್ಬುಕುದ್ರುವಿನಲ್ಲಿ ವಾಸ್ತ್ಯವ ಮಾಡುತ್ತಿದ್ದರು ಮತ್ತು ಆಷಾಢ ಮುಗಿದ ಬಳಿಕ ಆಕಾಶ ಮಾರ್ಗವಾಗಿ ಹೊರಟು ಹೋಗುತ್ತಿದ್ದರು ಎಂಬ ಉಲ್ಲೇಖ ಕೊಂಕಣಿ ಖಾರ್ವಿ ಸಮಾಜದ ಜನಪದ ಕಥನಗಳಲ್ಲಿ ಅಡಕವಾಗಿದೆ.
    ಪಾಲ್ ಡೇವಿಸ್ ಅವರ ಪುಸ್ತಕವನ್ನು ನನಗೆ ನೆನಪಿಸುತ್ತದೆ… Are We Alone here? Philosophical Implications of the Discovery of Extraterrestrial Life
    ( ನಾವು (ಮನುಷ್ಯರು) ಇಲ್ಲಿ (ವಿಶ್ವದಲ್ಲಿ) ಒಬ್ಬರೇ? ಅನ್ಯಗ್ರಹದ ಜೀವಿಗಳಳ ಅನ್ವೇಷಣೆಯ ತಾತ್ವಿಕ ಪರಿಣಾಮಗಳು)

  2. ತಮ್ಮ ಹೃದಯಸ್ಪರ್ಶಿ ಮತ್ತು ಜ್ಞಾನಭರಿತವಾದ ಅಮೂಲ್ಯ ಪ್ರತಿಕ್ರಿಯೆಗೆ ತುಂಬು ಹೃದಯದ ಧನ್ಯವಾದಗಳು ಸರ್ 🙏🙏🙏🙏🙏

Leave a Reply

Your email address will not be published. Required fields are marked *