ಮಾರಮ್ಮಾ ಯಾನೆ ದಂಡಿನ ದುರ್ಗಾಂಬೆ
ದುರ್ಗಾ ಅನ್ನುವುದು ಆದಿಶಕ್ತಿ ಸ್ವರೂಪ ವಿಶ್ವೋತ್ಪತ್ತಿಯ ಮೂಲವೆಂದು ವೇದಾದಿಗಳಲ್ಲಿ ವರ್ಣಿತಗೊಂಡಿದೆ. ಅಂತಹ ಆದಿಶಕ್ತಿಯ ಆರಾಧನೆಯಿಂದ ಮಾನವ ಜನ್ಮ ಸಾರ್ಥಕಗೊಳ್ಳುತ್ತದೆ. ಧರ್ಮಾರ್ಥಕಾಮ ಮೋಕ್ಷಗಳು ಸಿದ್ಧಿಸುತ್ತವೆನ್ನವುದು ಭಾವುಕ ಭಕ್ತರ ನಂಬಿಕೆ. ಎಲ್ಲ ನಂಬಿಕೆಗಳೂ ‘ಮೂಢ’ ಅಲ್ಲ. ಶ್ರದ್ಧಾಪೂರ್ವಕ ನಂಬಿಕೆ ಫಲಕೊಡುವುದನ್ನು ನಾವು ಅನೇಕ ಸಂದರ್ಭಗಳಲ್ಲಿ ಅನುಭವಿಸುತ್ತೇವೆ. ಅಂತಹ ಅನುಭವಗಳೇ ನಂಬಿಕೆಗಳ ಮೂಲವಾದ್ದರಿಂದ ಅವು ಮೂಢನಂಬಿಕೆಗಳಲ್ಲ. ಈ ಹಿನ್ನೆಲೆಯಲ್ಲಿಯೇ ಅನೇಕ ಶಕ್ತಿಸ್ಥಳಗಳು ಭಕ್ತಿಸ್ಥಳಗಳಾಗಿಭಜಕರ ಶ್ರದ್ಧಾಕೇಂದ್ರಗಳಾಗಿ ರೂಪುಗೊಂಡಿವೆ. ಅವುಗಳ ಹಿಂದೆ ಚರಿತ್ರೆಗಳೋ, ಇತಿಹಾಸಗಳೋ, ಪುರಾಣಗಳೋ, ದಂತ ಕಥೆಗಳೋ ಹುಟ್ಟಿಕೊಂಡಿವೆ. ಅವುಗಳನ್ನು ಅರಿತು ಓದುವಂತಾಗಬೇಕು. ತಾಯಿ ದುರ್ಗಾಂಬೆಯ ಚರಿತ್ರೆಯ ಜೊತೆ ಆ ಕಾಲದ ಇತಿಹಾಸವಿದೆ. ಪುರಾಣೋಕ್ತ ಶಕ್ತಿ ಸ್ವರೂಪ ದರ್ಶನವಿದೆ. ಪವಾಡಗಳ ದಂತ ಕಥೆಗಳಿವೆ. ಅವುಗಳನ್ನು ಓದುವುದರಿಂದ ಕೂಡ ನಮ್ಮ ಅನೇಕ ಮನಕ್ಲೇಶಗಳು ದೂರವಾಗುತ್ತವೆ. ಸಾಮಾನ್ಯನಂತಹ ಎಲ್ಲ ರೋಗ ಮೂಲಗಳಾದ ಮನಕ್ಲೇಶಗಳ ಪರಿಗಾರದಿಂದ ನಮಗೆ ದೀರ್ಘಾಯುಷ್ಯ ಉಂಟಾಗುತ್ತದೆ. ಈ ಎಲ್ಲಾ ಕಾರಣಗಳಿಂದಲೇ ಜಗಜ್ಜನನಿ ಸ್ವರ್ಣಪುರ ನಿವಾಸಿನಿ ದುರ್ಗಾಮಾತೆಯ ಚರಿತ್ರೆಯನ್ನು ಇಲ್ಲಿ ನಿರೂಪಿಸುತ್ತಿದ್ದೇನೆ.
ಐತಿಹಾಸಿಕ ಹಿನ್ನಲೆ
ಹೊನ್ನಾವರ ಹಲವು ಆಳರಸರ ತೆಕ್ಕೆಗೊಳಪಟ್ಟು ಇತಿಹಾಸ ಪುಟ ಸೇರಿದೆ. ಇಸ್ವಿ ಸನ್ 1059 ರಲ್ಲಿ ಕದಂಬ ವಂಶದ ಅರಸು ಜಯಕೇಶಿ ಗೋವಾದಿಂದ ಹೊನ್ನಾವರ-ನಗರ ಬಸ್ತಿಕೇರಿ-ನವಿಲುದುರ್ಗ (ಈಗಿನ ಬಸವರಾಜದುರ್ಗ) ಒಳಗೊಂಡ ಪ್ರದೇಶವನ್ನು ಆಳಿದ ಬಗ್ಗೆ ಇತಿಹಾಸವಿದೆ. ಆತನು ಚಡಮ ಎಂಬ ಆಡಳಿತಾಧಿಕಾರಿಯನ್ನು ಈ ಪ್ರದೇಶಕ್ಕೆ ನೇಮಿಸಿದ್ದನು. ಹೊನ್ನಾವರ ಉತ್ತಮ ಬಂದರವೂ, ವ್ಯಾಪಾರ ಕೇಂದ್ರವೂ ಆಗಿ ಸುವರ್ಣ ನಗರಿಯೇ ಆಗಿತ್ತು. ಅದೇ ಹೊನ್ನ ಊರು ಹೊನ್ನಾವರದೆಂದು ಹೆಸರಾಯಿತು. ವಿಜಯನಗರ ಅರಸರ ಕಾಲದಲ್ಲಿ ಇಲ್ಲಿ ಆಳರಸರ ರಾಜ್ಯಭಾರದ ಠಾಣ್ಯ (ಕಛೇರಿ) ಕೂಡ ಇದಾಗಿತ್ತು 1488 ರಲ್ಲಿ ವಾಸ್ಕೋಡಿಗಾಮಾ ತಂಗಿದ್ದ ಅಂಜದೀವ ನಡುಗಡ್ಡೆಯ ಮೇಲೆ
ವಿಜಯನಗರ ಅರಸರ ರಾಜ ಪ್ರತಿನಿಧಿ ತಿಮ್ಮಯ್ಯ ಎಂಬವನು ಈ ಹೊನ್ನಾವರ ಬಂದರದ ಮೂಲಕ ತನ್ನ ಸೇನೆಯನ್ನು ಒಯ್ದು ದಾಳಿ ನಡೆಸಿದ್ದಾನೆ. 1817 ರಿಂದ 1862ರ ವರೆಗೆ ಬ್ರಿಟಿಷ ಕಲೆಕ್ಟರರಿಂದ ಆಡಳಿತ ನಡೆದಿತ್ತು. ಮುಂದೆ ಮುಂಬಯಿ-ಮದ್ರಾಸ್ ಪ್ರಾಂತ ವಿಂಗಡಣೆಯ ಸಂದರ್ಭ ಕಾರವಾರ ಮತ್ತು ಮಂಗಳೂರು ಜಿಲ್ಲಾ ಕೇಂದ್ರಗಳಾದವು.
ಈ ಎಲ್ಲಾ ಆಡಳಿತಗಳ ಹೊಯ್ದಾಟಗಳ ನಡುವೆ ಸಮುದ್ರ ಮಧ್ಯದ ನವಿಲದುರ್ಗ ಅಂದರೆ ಈಗಿನ ಬಸವರಾಜ ದುರ್ಗ ಏರಿಳಿತ ಕಂಡದ್ದು ಸಹಜ. ದೈವಭಕ್ತರಾದ ಕದಂಬರ ಆಡಳಿತದಲ್ಲಿ ನವಿಲದುರ್ಗದಲ್ಲಿ ಆದಿಶಕ್ತಿ, ಶಿವಲಿಂಗ ಮುಂತಾದ ದೇವ ಮಂದಿರಗಳನ್ನು ನಿರ್ಮಿಸಿ ಪೂಜಿಸಿದರು. ನವಿಲದುರ್ಗ ಕೋಟೆ ಕೊತ್ತಳಗಳು ದಾಳಿಕೋರರ ಮತ್ತು ಸಮುದ್ರಗಳ್ಳರ ಹಾವಳಿಗಳಿಂದ ನಲುಗಿದಾಗ ಜನ ಅಲ್ಲಿಂದ ವಲಸೆ ಹೋದರು. ಹೊನ್ನಾವರದ ತೀರ ಪ್ರದೇಶಗಳಲ್ಲಿ ವಾಸಿಸಿದ ಇವರು ತಮ್ಮ ಮೂಲ ಶ್ರದ್ಧಾ ಕೇಂದ್ರಗಳಿಗೆ ಆಗಾಗ ಹೋಗಿ ಪೂಜೆ-ಪುನಸ್ಕಾರ ಸಲ್ಲಿಸುತ್ತ ಬಂದಿದ್ದಾರೆ. ಈಗಲೂ ಸಹ ಮೂರ್ತಿಗಳು ಇಲ್ಲದಿದ್ದರೂ ಸಂಕ್ರಾಂತಿ ಮುಂತಾದ ವಿಶೇಷ ಪರ್ವ ದಿನಗಳಲ್ಲಿ ಆಯಾ ಸ್ಥಳಗಳನ್ನೇ ಪೂಜಿಸುತ್ತ ಬಂದಿದ್ದಾರೆ. ಈ ಸ್ಥಳಗಳಲ್ಲಿದ್ದ ಪುರಾತನ ಮೂರ್ತಿಗಳನ್ನು ಒಯ್ದು ದೇವಸ್ಥಾನ ನಿರ್ಮಿಸಿ ಈಗಲೂ ಪೂಜಿಸುತ್ತಿದ್ದ ಸಂಗತಿ ಗಮನಿಸಬಹುದು. ಇಲ್ಲಯ ಗಣಪತಿ ವಿಗ್ರಹ ಅಗ್ರಹಾರದಲ್ಲಿ ಸ್ಥಾಪಿತಗೊಂಡು ಪುಜಿಸಲ್ಪಡುತ್ತಿದೆ. ಕರ್ಕಿಯ ಚನ್ನಕೇಶವ ವಿಗ್ರಹ ಕೂಡ ಮೂಲತಹಃ ಈ ನವಿಲದುರ್ಗದ್ದೆಂಬ ಹೇಳಿಕೆ ಇದೆ.
ದುರ್ಗಾಂಬೆಯ ಮೂಲ:
ಕ್ರ.ಶ. 1513ರ ಸುಮಾರಿಗೆ ಅಂದರೆ ಶ್ರೀ ಶಾಲಿವಾಹನ ಶಕೆ 1435 ರಲ್ಲಿ ವಿಜನಗರದ ಕೃಷ್ಣದೇವರಾಯನು ಇಡೀ ದಕ್ಷಿಣ ಭಾರತವಲ್ಲದೆ ಉತ್ತರದ ಓಡಿಸಾವರೆಗೂ ರಾಜ್ಯವನ್ನು ವಿಸ್ತರಿಸಿದನು. ಅವನ ದಿಗ್ವಿಜಯದ ಶ್ರೇಯಸ್ಸಿಗೆ ಕಾರಣವಾದ ತಮ್ಮ ಆರಾಧ್ಯ ದೇವಿ ಕುಲಸ್ವಾಮಿನಿ ಆದಿಶಕ್ತಿ ದುರ್ಗಾಮಾತೆಯನ್ನು ಪ್ರತಿಷ್ಠಾಪಿಸಿದಲ್ಲದೆ ತಮ್ಮ ಸಾಮಂತರಿಗೂ ಸೇನೆಯ ಪ್ರಮುಖರಿಗೂ ದುರ್ಗಾದೇವಿಯನ್ನು ಪ್ರತಿಷ್ಠಾಪಿಸಿ ನವರಾತ್ರಿಯಿಂದ ವಿಜಯದಶಮಿಯ ತನಕ ನಾಡಹಬ್ಬವನ್ನಾಗಿ ಆಚರಿಸಬೇಕೆಂದು ಆದೇಶಿಸಿದನು. ಈ ಆದೇಶಾನುಗುಣವಾಗಿ ನವಿಲದುರ್ಗದ ರಕ್ಷಣಾಪಡೆಯ ದಂಡಿನವರು ಜನರು ಆರಾಧಿಸುತ್ತಿದ್ದ ಆದಿಶಕ್ತಿ ಸ್ಥಳದಲ್ಲೇ ವಿಜಯದ ಸಂಕೇತವಾಗಿ ದುರ್ಗಾದೇವಿಯ ಮೂರ್ತಿಯನ್ನು ನವರಾತ್ರಿಯ ಶುಭ ಮುಹೂರ್ತದಲ್ಲಿ ಪ್ರತಿಷ್ಠಾಪಿಸಿದರು. ದಂಡಿನವರಿ೦ದ ಸ್ಥಾಪಿಸಲ್ಪಟ್ಟ ಈ ದುರ್ಗಾಂಬೆಯನ್ನು ಜನ ದಂಡಿನ ದುರ್ಗಾದೇವಿಯೆಂದೇ ಕರೆದರು. ಪುರಾತನ ದಾಖಲೆಗಳಲ್ಲಿ ಕೂಡ, “ಮಾರಮ್ಮಾ ಯಾನೆ ದುರ್ಗಾದಂಡಿನ ದೇವಿ” ಎಂದು ಉಲ್ಲೇಖಿಸಲ್ಪಟ್ಟಿದೆ. ಈ ದಂಡಿನ ದುರ್ಗಾದೇವಿ ಮುಂದೆ ‘ಮಾರಮ್ಮಾ’ ಎಂಬ ಹೆಸರಿಗೆ ಕಾರಣವಾದ ಸಂಗತಿ ಮುಂದೆ ಚರಿತ್ರೆಗೊಂಡಿದೆ.
ನವಿಲುದುರ್ಗದ ಈ ದಂಡಿನ ದುರ್ಗೆಯು ಮುಂದೆ ನಿರಂತರ ಸೇನಾಧಿಕಾರಿಯ ನಿಷ್ಠೆಯ ಆರಾಧನಾ ಸ್ಥಳವಾಗಿ ರೂಪುಗೊಂಡಿತು. ಕ್ರಿ.ಶ. 1565 ರ ಬಳಿಕ ಇಂತಹ ಸೇನಾಧಿಕಾರಿಯೊಬ್ಬ ದುರ್ಗೆಯ ಆರಾಧಕನಾಗಿ ಸಾಧನೆಗೆ ತೊಡಗಿದ. ಪ್ರತಿದಿನ ನಿಯಮಿತವಾಗಿ, ಶುಚಿರ್ಭೂತನಾಗಿ ದೇವಿಯ ಅನುಷ್ಠಾನದಲ್ಲಿ ಮಗ್ನನಾಗಿರುತ್ತಿದ್ದ. ಅಂತಹ ಅನುಷ್ಟಾನದಲ್ಲಿರುವಾಗ ಆತ ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಎಂತಹ ಸಂದರ್ಭದಲ್ಲೂ ಸ್ಥಳಬಿಟ್ಟು ಏಳುತ್ತಿರಲಿಲ್ಲ. ಒಮ್ಮೆ ಈ ದುರ್ಗಕ್ಕೆ ಬಂದ ಹಿಮಾಲಯದ ಸನ್ಯಾಸಿ ಈ ಸೇನಾನಿಯ ನಿಷ್ಠೆಯನ್ನು ಕಂಡು ಸಂತಸಗೊಂಡನು. ಸೇನಾನಿ ಆ ಸನ್ಯಾಸಿಯನ್ನು ಉಪಚರಿಸಿದನು. ಅವನ ಶ್ರದ್ದಾ ಭಕ್ತಿಗೆ ಮೆಚ್ಚಿ ತನ್ನ ಬಳಿ ಇರುವ ಅಮೂಲ್ಯ ರುದ್ರಾಕ್ಷಿಯೊಂದನ್ನು ಮಂತ್ರಿಸಿಕೊಟ್ಟನು. ಈ ರುದ್ರಾಕ್ಷಿ ನಿನ್ನ ಬಳಿ ಇರುವ ತನಕ ನಿನ್ನ ಸಕಲ ಕಾರ್ಯದಲ್ಲಿ ಜಯ ಸಿಗುವುದು. ನೀನು ಸದಾ ಐಶ್ವರ್ಯ, ವಜಯ ಸಂಪನ್ನನಾಗಿರುವೆ. ನೀನು ನಿನ್ನ ನಿತ್ಯ ನೇಮ-ನಿಷ್ಠೆಗಳನ್ನು ಯಥಾವತ್ತಾಗಿ ಮುಂದುವರಿಸು ಎಂದು ಹೇಳಿ ಹೊರಟು ಹೋದನು. ಅದರಂತೆ ಸನ್ಯಾಸಿಕೊಟ್ಟ ರುದ್ರಾಕ್ಷಿ ಧರಿಸಿ ತನ್ನ ನಿತ್ಯ ಅನುಷ್ಠಾನಗಳನ್ನು ನಡೆಸುತ್ತ ಸುಖೀ-ಸಂಪನ್ನನಾಗಿದ್ದನು.
ಕ್ರಿ.ಶ 1595 ರಲ್ಲಿ ಪೋರ್ತುಗೀಜರ ಪ್ರಾಬಲ್ಯ ಬೆಳೆಯುತ್ತಿತ್ತು. ಅವರು ಒಮ್ಮೆ ನವಿಲುದುರ್ಗದ ಮೇಲೆ ದಾಳಿ ಆರಂಭಿಸಿದರು. ಆ ಸಮಯ ಈ ಸೇನಾಧಿಕಾರಿ ನಿತ್ಯಾನುಷ್ಠಾನದಲ್ಲಿ ಮಿರತನಾಗಿದ್ದರಿಂದ ಏಳುವಂತಿರಲಿಲ್ಲ.. ಅವನ ಒಬ್ಬನೇ ಮಗ ಸೈನ್ಯದ ನೇತೃತ್ವವ ವಹಿಸಿ ದಾಳಿಯನ್ನು ಎದುರಿಸಿ ಪೋರ್ಚುಗೀಸರನ್ನು ಹಿಮ್ಮೆಟ್ಟಿಸಿದನು. ಈ ಸಂದರ್ಭ ಪೋರ್ಚುಗೀಸ ನಾವಿಕನೊಬ್ಬ ಹಾರಿಸಿದ ಗುಂಡು ಅವನಿಗೆ ತಗುಲಿತ್ತು. ಜಯಶಾಲಿಯಾಗಿ ಮರುಳುತ್ತಿದ್ದಾಗಲೇ ಆತ ದಾರಿಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ. ಈ ಘಟನೆಯಿಂದ ಸೇನಾಧಿಕಾರಿಗೆ ಭಾರೀ ಆಘಾತ ಉಂಟಾಯಿತು. ಒಬ್ಬನೇ ಮಗನೂ ಗತಿಸಿ ಹೋದ ಮೇಲೆ ತನಗೆ ಈ ಸಂಪತ್ತು, ರಾಜ್ಯ ಎಲ್ಲ ಯಾಕೆ ಬೇಕು ಎಂಬ ವೈರಾಗ್ಯ ಭಾವವುಂಟಾಯಿತು. ಇಷ್ಟೊಂದು ಐಶ್ವರ್ಯಕ್ಕೆ ಕಾರಣವಾದ ಈ ರುದ್ರಾಕ್ಷಿಯಾದರೂ ಯಾಕೆ? ಇದು ನನ್ನ ಹತ್ತಿರ ಇದ್ದು ಪ್ರಯೋಜನವಾದರೂ ಏನು ಎಂದು ಚಿಂತಿಸಿ ಅದನ್ನು ಸಮುದ್ರ ರಾಜನಿಗೆ ಅರ್ಪಿಸಲು ನಿರ್ಧರಿಸಿದನು. ಅಂದು ಮಿಂದು ಶುಚಿರ್ಭೂತನಾಗಿ ಆ ರುದ್ರಾಕ್ಷಿಯನ್ನು ಅರ್ಚಿಸಿ ಧ್ಯಾನಮಗ್ನನಾಗಿ, “ಸಂಪತ್ತು ಸ್ಥಿರವಾಗಿ ಒಂದು ಕಡೆ ನಿಲ್ಲಲಾರದು. ಲಕ್ಷ್ಮಿ ಚಂಚಲೆ. ಆ ತಾಯಿ ಯಾವುದೇ ಮನೆಯನ್ನು ಪ್ರವೇಶಿಸುವಾಗ ಹೊರಹೋಗುವ ಬಾಗಿಲನ್ನು ಮೊದಲು ಪರೀಕ್ಷಿಸುತ್ತಾಳೆಂಬ ಮಾತಿದೆ. ಹಾಗಾಗಿ ಸಂಪತ್ತಿಗೆ ಕಾರಣವಾದ ಈ ರುದ್ರಾಕ್ಷಿಯನ್ನು ಇರಿಸಿಕೊಳ್ಳುವುದರಿಂದ ಇಂತಹ ಕಷ್ಟಗಳನ್ನು ಎದುರಿಸಬೇಕಾದೀತು. ಆದ್ದರಿಂದ ನಾನು ಇಂದು ನಿನ್ನನ್ನು ಸಮುದ್ರರಾಜನಿಗೆ ಅರ್ಪಿಸುತ್ತಿದ್ದೇನೆ. ನೀನು ಅಲ್ಲಿ ಸ್ವಚ್ಛಂದವಾಗಿ ಇರು” ಎಂದು ಪ್ರಾರ್ಥಿಸಿದನು ಮತ್ತು ಆ ಶುಭಗಳಿಗೆಯಲ್ಲಿ ಶರಾವತಿ-ಬಡಗಣಿ ಹೊಳೆಗಳು ಸಂಗಮಿಸಿ ಸಮುದ್ರ ಸೇರುವ ‘ಅಳಿವೆ ಮುಖ’ ದಲ್ಲಿ ಭಕ್ತಿ-ವಿನಯಪೂರ್ವಕ ವಿಸರ್ಜಿಸಿದನು ಮತ್ತು ತಾನು ಸನ್ಯಾಸವನ್ನು ಸ್ವೀಕರಿಸಿದನು.
ಇತ್ತ ‘ಅಳಿವೆ’ ಸೇರಿದ ರುದ್ರಾಕ್ಷಿ ಮನಬಂದಂತೆ ದಕ್ಷಿಣೋತ್ತರ ಉರುಳುತ್ತ ಸಾಗುತ್ತಿದ್ದಂತೆ ಶರಾವತಿ ಮುಖದ ಅಳಿವೆ ಕೂಡ ಚಲಿಸತೊಡಗುತ್ತದೆ. ಇದರಿಂದ ಸುಮಾರು ನೂರು-ನೂರಿಪ್ಪತ್ತು ವರ್ಷಗಳಿಗೊಮ್ಮೆ ಈ ಸಮುದ್ರ ಸಂಗಮ ಬದಲಾಗುತ್ತಿರುತ್ತದೆ. ಬಹಳ ವರ್ಚಗಳ ಹಿಂದೆ ಈ ಶರಾವತಿ ಸಮುದ್ರ ಸೇರುವ ಮುಖ ಈಗಿನ ಸಹಕಾರೀ ಹಂಚಿನ ಕಾರ್ಖಾನೆ ಇರುವಲ್ಲಿತ್ತು. ಅದು ಈಗ ಉತ್ತರಕ್ಕೆ ಸರಿದು ಪಾವಿನಕುರ್ವಾವನ್ನು ಕಬಳಿಸಿ ಕರ್ಕಿಯ ತಾರೀ ಬಾಗಿಲತ್ತ ಸಾಗಿದೆ. ಈ ಹಿಂದೆ ಅಲ್ಲಿಯೇ ಸಂಗಮ ಸ್ಥಳ ಇತ್ತೆಂಬ ಐತಿಹ್ಯವಿದೆ. ಹೀಗೆ ಮುಖಜ ಪ್ರದೇಶ ಸರಿದಾಡಲು ಕಾರಣ ಆ ರುದ್ರಾಕ್ಷಿಯ ಉರುಳಾಟವೇ ಕಾರಣವೆಂದು ಭಾವುಕರು ನಂಬುತ್ತಾರೆ. ಕ್ರಿ.ಶ 1585 ರಿಂದ ನವಿಲದುರ್ಗವು ಮೈಸೂರು ಅರಸರ ಅಧಿಪತ್ಯಕ್ಕೆ ಸೇರಿ ಅವರ ಸಾಮಂತರಾದ ಕೆಳದಿ ಅರಸರ ಆಳ್ವಿಕೆಗೆ ಒಳಪಟ್ಟಿತ್ತು. ಕೆಳದಿ ಅರಸ ಶಿವಪ್ಪ ನಾಯಕನ ಕಾಲದಲ್ಲಿ ಶಿಥಿಲಗೊಂಡ ‘ತಟಬಂಧ’ (ಸಮುದ್ರ ಕಿನಾರೆ)ವನ್ನು ಸರಿಪಡಿಸಿ ಕೋಟೆಯನ್ನು ಭದ್ರಗೊಳಿಸಿದನು. 1665 ರಲ್ಲಿ ಶಿವಾಜಿ ಮಹಾರಾಜನು ಈಗಿನ ದಕ್ಷಿಣ ಕನ್ನಡದ ಬಸ್ರೂರಿನ ಮೇಲೆ ದಾಳಿ ಮಾಡಿ ಹೇರಳ ಸಂಪತ್ತಿನೊoದಿಗೆ ಮರಳುವಾಗ ಈ ನವಿಲದುರ್ಗವನ್ನು ಲಕ್ಷಿಸಿದನು. ಅತ್ಯಂತ ಸುರಕ್ಷಿತ ಆಯಕಟ್ಟಿನ ಈ ಕೋಟೆಯನ್ನು ವಶಪಡಿಸಿಕೊಳ್ಳಬೇಕೆಂದು ಯೋಚಿಸಿದನು. ಪ್ರತಿಕೂಲ ಹವಾಮಾನದ ಕಾರಣ ಮತ್ತು ಜೊತೆಗೆ ಹೇರಳ ಸಂಪತ್ತು ಇತ್ತಾದ್ದರಿಂದ ಗೋಕರ್ಣದ ಮಹಾಬಲೇಶ್ವರನ ದರ್ಶನ ಪಡೆದು ಕಾರವಾರದ ಮಾರ್ಗವಾಗಿ ರಾಯಗಡಕ್ಕೆ ಹೋದನು. ನಂತರ 1675 ಮೇ 18ಕ್ಕೆ ತನ್ನ ಸೇನಾನಿ ಕನೋಜಿ ಅಂಗರೆಯನ್ನು ಸೇನಾ ಅಮೇತ ಕಳಿಸಿ ಕಾರವಾರ, ಕದ್ರಾ, ಅಂಕೋಲಾ, ಸಿದ್ಧೇಶ್ವರಗಳನ್ನು ವಶಪಡಿಸಿಕೊಂಡು ನವಿಲುಗುರ್ಗದ ಮೇಲೆ ದಾಳಿ ಮಾಡಿದನು. ಆಗ ಕೆಳದಿ ಅರಸರ ಪರವಾಗಿ ಸೇನಾನಿ ಚನ್ನ ಬಸವಪ್ಪ ನಾಯಕನು ಮರಾಠಾ ಸೈನ್ಯವನ್ನು ಹಿಮ್ಮೆಟ್ಟಿಸಿದನು. ಅದೇ ರೀತಿ ಮೈಸೂರು ಅರಸರ ಪರವಾಗಿ ಹೈದರಾಲಿ ಕೂಡ ಈ ದುರ್ಗವನ್ನು ಪುನಃ ಮೈಸೂರು ಆಡಳಿತಕ್ಕೆ ಒಳಪಡಿಸುವ ಸಲುವಾಗಿ ನವಿಲುದುರ್ಗದ ಮೇಲೆ ದಾಳಿ ಮಾಡಿದರೂ ಸಹಿತ ಕೋಟೆಯನ್ನು ಭೇದಿಸಲಾಗಲಿಲ್ಲ. ಕೆಳದಿ ರಾಣೆ ಚನ್ನಮ್ಮಾಜಿಯ ಹಿರಿಯ ಮಗ ಬಸಪ್ಪ ನಾಯಕನ (1690) ಕಾಲದಲ್ಲಿ ಈ ನವಿಲದುರ್ಗವು “ಬಸವರಾಜದುರ್ಗ” ಎಂಬ ಹೆಸರನ್ನು ಹೊಂದಿ ಪ್ರಸಿದ್ಧವಾಯಿತು. ಮತ್ತು ಕೆಳದಿ ಅರಸರು ತಳವಾರರನ್ನು ಕಾವಲಿರಿಸಿ ಆಳಿದರು.ಕ್ರಿ.ಶ 1789 ರಲ್ಲಿ ಈ ಬಸವರಾಜ ದುರ್ಗವು ಬ್ರಟಿಷರ ವಶವಾಯಿತು. ಆಡಳಿತ ವ್ಯವಸ್ಥೆಯಾಗಲೀ ಯಾರದ್ದೇ ರಕ್ಷಣೆಯಾಗಲೀ ಇಲ್ಲದ ಕಾರಣ ಈ ದುರ್ಗವು ಮುಂದೆ ನಿರ್ಜನ ಪ್ರದೇಶವಾಯಿತು. ಇಲ್ಲಿಯ ಪೂಜಾ ಸ್ಥಳಗಳು ಜೀರ್ಣಗೊಂಡವು. ದುರ್ಗದ ಪ್ರಮುಖ ದೇವತೆಯಾದ ದುರ್ಗಾಂಬೆಯು ಈಗ ಮೌನ ಮುರಿದಳು.
ದುರ್ಗದಿಂದ ದುರ್ಗಾಧ್ವನಿ
ಈ ದಂಡಿನ ದುರ್ಗಾದೇವಿ ಹೊನ್ನಾವರಕ್ಕೆ ಬಂದ ಕಥೆ ತುಂಬಾ ರೋಚಕವಾಗಿದೆ. ಒಂದು ಕಾಲ ಖಂಡದಲ್ಲಿ ಈಗಿನ ಬಾಂದೇಹಳ್ಳದ ದಡದಲ್ಲಿ ಜೈನರ ಪೂಜಾ ಸ್ಥಳವೊಂದಿದೆ. ಅಲ್ಲಿ ಜಟ್ಟಿಗದೇವ, ನಾಗಬನವಿದೆ. ಆ ಸ್ಥಳದಲ್ಲಿ ದೀಪ ಹಚ್ಚಿ ಪೂಜೆ ಮಾಡುತ್ತ ಉದರ ಪೋಷಣೆಗೆ ಸಮುದ್ರದಲ್ಲಿ ಮೀನು ಹಿಡಿದು ಮಾರಿ ಬದುಕುವ ಮಂಜು ಸಾರಂಗ ಎಂಬವನಿಗೆ ವೆಂಕಟ ಎಂಬ ಮಗ. ವೆಂಕಟನಿಗೆ ತಾಯಿ ಇರಲಿಲ್ಲ. ಅವನ ಮಗ ಮಾಳಪ್ಪ ಮತ್ತು ಅವಳಿ ಹೆಣ್ಣು ಮಕ್ಕಳು. ಇವರು ಹುಟ್ಟಿದ ಕೆಲವೇ ವರ್ಷಗಳಲ್ಲಿ ಅವರ ತಾಯಿ ತೀರಿಕೊಂಡಳು. ವೆಂಕಟನು ಕೂಡ ಮೀನು ಹಿಡಿಯುವ ಕಾರ್ಯವನ್ನೇ ಮುಂದುವರಿಸಿದನು. ಅವನ ಕೊತೆ ಮಾಳಪ್ಪ ಸಹಾಯಕನಾಗಿ ಸಮುದ್ರಕ್ಕೆ ಹೋಗುತ್ತಿದ್ದನು. ಅವರು ಹಿಡಿದು ತಂದ ಮೀನುಗಳನ್ನು ಈ ಅವಳಿ ಹೆಣ್ಣು ಮಕ್ಕಳು ಮಾರಿ ಬರುತ್ತಿದ್ದರು. ಅಜ್ಜನು ಅಡಿಗೆ ಬೇಯಿಸುತ್ತಿದ್ದನು. ಇದು ಆ ಕುಟುಂಬದ ನಿತ್ಯದ ಬದುಕಾಗಿತ್ತು. ಈ ರೀತಿ ಮೀನು ಹಿಡಿಯಲು ಹೋಗುವ ಸಂದರ್ಭ ಬಸವರಾಜ ದುರ್ಗದ ಹತ್ತಿರ ಬರುವಾಗೆಲ್ಲ ಅಲ್ಲಿಂದ ಒಂದು ಸ್ತ್ರೀ ಸ್ವರ ಒಮ್ಮಿಂದೊಮ್ಮೆಲೇ “ನಾನು ಬರಲೆ?” ಎಂದು ಕೇಳಿ ಬಂತು. ಇದೇ ರೀತಿ ಎರಡು-ಮೂರು ದಿವಸ ಕೇಳಿ ಬಂದರೂ ಗಮನಿಸಲೇ ಇಲ್ಲ. ದಿನಂ ಪ್ರತಿಯಂತೆ ಒಂದು ದಿನ ಸಾಗುತ್ತಿದ್ದಂತೆ ದುರ್ಗದಿಂದ ಒಂದು ತರಹ ಪ್ರಕಾಶ ಮಿಂಚಿದoತಾಗಿ ವೆಂಕಟನು ದೋಣಿಯೊಳಗೇ ಪ್ರಾಣ ಬಿಟ್ಟನು. ಮಾಳಪ್ಪನು ಹೆದರಿ ತಂದೆಯ ಶವದೊಂದಿಗೆ ದಡ ಸೇರಿದನು. ಈ ನಾವೆ ದಡ ಸೇರುತ್ತಿದಂತೆ ಅವಳಿಗಳಾದ ಗಂಗಾ-ಗೌರಿಯರಿಬ್ಬರಿಗೂ ಮೈಮೇಲೆ ಆವೇಶ ಶಕ್ತಿ ಕಾಣಿಸಿಕೊಂಡಿತು. ಆ ಶವಕ್ಕೆ ಅಂತ್ಯಸಂಸ್ಕಾರ ಮಾಡಬೇಡಿರೆಂದು ಹೇಳಿತು. ಆತನನ್ನು ಬದುಕಿಸುತ್ತೇನೆಂದು ಹೇಳಿದರೂ ಸೇರಿದ ಜನ ಅದನ್ನು ಒಪ್ಪಲಿಲ್ಲ. ಕಾರಣ ಸತ್ತವನು ಬದುಕಿ ಬಂದರೆ ಅವನ ಮುಖ ನೋಡಬಾರದೆಂಬ ಒಂದು ನಂಬಿಕೆ ಇರುವುದೇ ಅವರ ನಿರಾಕರಣೆಗೆ ಕಾರಣವಾಗಿತ್ತು. ‘ತನ್ನ ಮಾತನ್ನು ಅಲಕ್ಷಿಸಿದ ಕಾರಣ ಹೀಗೆ ಮಾಡಿದೆ’ ಎಂದು ಹೇಳಿದ. ಈ ‘ಆವೇಶ’ದ ಹೆಣ್ಣುಗಳು ಒಂದು ಕೋಳಿಯನ್ನು ಹಿಡಿದು ಕೊಂದಾಗ ಆ ಶವ ಅಲುಗಾಡಿ ಜೀವಂತವಾಯಿತು. ಆದರೂ ಜನರು ಒಪ್ಪದೇ ಹೆದರಿ ಸಾಯುವಾಗ ಆತ ಹೆದರಿ ವಾಂತಿ-ಭ್ರಾಂತಿ ಮಾಡಿಕೊಂಡಿದ್ದರಿಂದ ಅಂತಹ ಮಾರಿಕಾ ಸಾವಿಗೆ ದಹನದ ಬದಲು ದಫನ ಮಾಡುವದೇ ಸರಿಯೆಂದು ತೊಪ್ಪಲಕೇರಿಯ ಜೋಗಿನಕಟ್ಟೆ ಎಂಬಲ್ಲಿ ಹುಗಿದರು. ಅನಂತರ ಪ್ರತಿ ಹೋಳಿ ಹಬ್ಬದ ಸಮಯದಲ್ಲಿ ಜೋಗಿನಕಟ್ಟೆಯಿಂದ ಆತನ ಅಸ್ತಿಯನ್ನು ಗದ್ದಿಗೆಯ ತನಕ ತಂದು ಬಳಿಕ ಅದೇ ಸ್ಥಳದಲ್ಲಿ ಹೂತಿಡುವ ಒಂದು ಕ್ರಮ ನಡೆದು ಬಂದು ಕೊನೆಗೆ ಅದು ನಿಂತಿತು. 1940 ರ ಸುಮಾರಿಗೆ ಚನ್ನಮ್ಮ ಎಂಬ ಹೆಂಗಸಿನ ಮೇಲೆ ಶಕ್ತಿ ಆಹ್ವಾನಗೊಂಡು ಈ ಕ್ರಮ ಕೈಬಿಟ್ಟು ಹೋದದ್ದು ಸರಿಯಲ್ಲವೆಂದೂ ಈ ಅಸ್ತಿ ಸ್ವಶಕ್ತಿಯಿಂದ ಚಲಿಸುವದನ್ನು ಪ್ರಸ್ತಾಪಿಸಿದಂತೆ ನಡೆಯುವುದನ್ನು ಅನೇಕರು ಪ್ರತ್ಯಕ್ಷ ಕಂಡಿದ್ದಾರೆ ಈ ಎಲ್ಲ ದಾಖಲೆಗಳ ಸಂಗ್ರಹಕ ಗಣಪತಿ ಜನಾರ್ಧನ ಸಾಗರ ಕೂಡ ಕಂಡಿರುವುದನ್ನು ಪ್ರಸ್ತಾಪಿಸಿದ್ದಾರೆ.
ವೆಂಕಟನ ಮರಣದ ನಂತರ ಅವನ ಮಗ ಮಾಳಪ್ಪನು ಮೀನು ಹಿಡಿಯಲು ಸಮುದ್ರಕ್ಕೆ ಹೋಗುತ್ತಿದ್ದನು. ಅವನ ಅವಳಿ ಸಹೋದರಿಯಾದ ಗಂಗಾ-ಗೌರಿಯರು ಅಣ್ಣ ಮಾಳಪ್ಪನು ತಿರುಗಿ ಬರುವ ಸಮಯಕ್ಕೆ ಮುಂಚೆ ಸಮುದ್ರ ತಟದಲ್ಲಿ ಅವನಿಗಾಗಿ ಕಾದಿರುತ್ತಿದ್ದರು. ಹೀಗೆ ನಿಂತಿರುವಾಗ ಒಮ್ಮೊಮ್ಮೆ ಮೈಮೇಲೆ ಶಕ್ತಿ ಆವೇಶಗೊಂಡು ಬಸವರಾಜ ದುರ್ಗದ ಕಡೆಗೆ ಮುಖಮಾಡಿ ದೇವಿಯ ಹೆಸರು ಕರೆದು ಏನೇನೋ ಮಾತಾಡುತ್ತಿದ್ದುದನ್ನು ಜನ ಗಮನಿಸುತ್ತಿದ್ದರು. ಅವರ ಮಾತುಗಳು ಅರ್ಥವಾಗದ ಕಾರಣ ಯಾರೂ ಅದಕ್ಕೆ ಅಷ್ಟು ಮಹತ್ವವನ್ನೇ ಕೊಡಲಿಲ್ಲ. ಮುಂದೆ ಕೆಲದಿನಗಳಲ್ಲೇ ದುರ್ಗದಿಂದ “ನಾನು ಬರಲೇ” ಎಂಬ ಮೊದಲಿನ ಸ್ತ್ರೀ ಧ್ವನಿಯೊಂದು ಕೇಳಿ ಬರತೊಡಗಿತು. ಆದರೆ ಆ ಕುರಿತು ಅಜ್ಜನೊಂದಿಗೆ ವಿಚಾರಿಸೋಣವೆಂದಕೊಂಡರು. ಮನೆಗೆ ಬಂದಾಗ ಅದರ ನೆನಪೇ ಅಗುತ್ತಿರಲಿಲ್ಲ. ಮತ್ತೆ ಮತ್ತೆ ಈ ಸ್ವರ ಕೇಳಿಬರತೊಡಗಿದಾಗ ಸ್ವರ ಬಂದ ತಕ್ಷಣ ನೆನಪಿಗಾಗಿ ತಮ್ಮ ಕೂದಲಿಗೆ ಒಂದು ಗಂಟನ್ನು ಹಾಕಿಕೊಂಡರು. ಮರುದಿನ ಕೂದಲು ಸರಿ ಮಾಡಿಕೊಳ್ಳುವಾಗ ಈ ಕೂದಲ ಗಂಟು ಕೈಗೆ ತಾಗಿತು. ಇಬ್ಬರಿಗೂ ವಿಷಯ ನೆನಪಾಯಿತು. “ಅಜ್ಜಾ, ನಾವು ಅಣ್ಣನಿಗಾಗಿ ಕಾಯುತ್ತ ದಂಡೆಯ ಮೇಲೆ ನಿಂತಾಗ ದೂರದ ನವಿಲದುರ್ಗದಿಂದ ಹೆಂಗಸೊಬ್ಬಳು “ನಾನು ಬರಲೇ” ಎಂದು ಕೂಗಿ ಹೇಳಿದಂತೆ ಧ್ವನಿ ಬರುತ್ತದೆ. ಇದಕ್ಕೆ ಏನು ಉತ್ತರ ಕೊಡಬೇಕೆಂಬ ಬಗ್ಗೆ ನಿಮ್ಮಲ್ಲಿ ಕೇಳಬೇಕೆಂದುಕೊಂಡರು ಅದು ಮರೆತು ಹೋಗುತ್ತಿತ್ತು. ಇಂದು ಅದಕ್ಕೆ ನಾವು ನೆನಪಿಗಾಗಿ ನಮ್ಮ ಕೂದಲಿಗೆ ಗಂಟು ಹಾಕಿಕೊಂಡಿದ್ದೆವು ಎಂದು ಸಂಗತಿಯನ್ನು ಕುತೂಹಲ ಭರಿತರಾಗಿ ಅಜ್ಜನಲ್ಲಿ ಸವಿಸ್ತಾರವಾಗಿ ಹೇಳಿದರು. ಅಜ್ಜನು ಕೆಲಕಾಲ ಯೋಚಿಸಿ ಮಕ್ಕಳಲ್ಲಿ ಹೇಳಿದನು. “ಸರಿ ಬರಲು ಹೇಳಿ, ಆದರೆ ಯಾವಾಗ ಬರುವಿ ಮತ್ತು ಹೇಗೆ ಬರುವಿ ಅನ್ನುವುದನ್ನು ತಿಳಿಸು” ಎಂದು ನೀವು ಉತ್ತರಿಸಿ ಎಂದು ಹೆಳಿದನು. ಅದೇ ರೀತಿ ಮರುದಿನ ಗಂಗಾ-ಗೌರಿಯರು ಅಣ್ಣನ ಬರುವಿಕೆಗಾಗಿ ಕಾದು ಕುಳಿತ್ತಿದ್ದಾಗ, “ನಾನು ಬರಲೇ-ನಾನು ಬರಲೇ” ಎಂಬ ಸ್ತ್ರೀ ಧ್ವನಿ ಸಮುದ್ರದ ಅಲೆಗಳಂತೆ ಗಾಳಿಯಲ್ಲಿ ತೇಲಿಬಂತು. ಅಜ್ಜ ಹೇಳಿದ ಮಾತು ನೆನಪಾಗಿ, “ಬರುವಿಯಾದರೆ ಬಾ, ಆದರೆ ಯಾವಾಗ, ಎಲ್ಲಿ, ಹೇಗೆ ಬರುವಿ ಅನ್ನುವುದನ್ನು ತಿಳಿಸಲು ಅಜ್ಜ ಹೇಳಿದ್ದಾನೆ ಎಂದು ಆ ಹೆಣ್ಣುಮಕ್ಕಳು ಉತ್ತರಿಸಿದರು. “ಬಾಂದೇಹಳ್ಳದ ಜಟ್ಟಿಗನ ಸ್ಥಳದ ಸಮೀಪ ನೀರು ತುಂಬಿದ ಭರತಿ ಸಮಯ ನಾಳೆ ಹನ್ನೆರಡು ಗಂಟೆಗೆ ನಾನಿಲ್ಲಿ ಬಂದಿದ್ದೇನೆ0ದು ಸೂಚನೆ ಕೊಡುತ್ತೇನೆ” ಎಂದು ಹೇಳಿದ್ದು ಕೇಳಿಸಿತು. ಗಂಗಾ-ಗೌರಿಯರು ಮನೆಗೆ ಬಂದಾಗ ಈ ವಿಷಯ ಪ್ರಸ್ತಾಪಿಸಿದರು. ಅಜ್ಜನಿಗೆ ಏನೋ ಒಂದು ರೀತಿ ಒಳಾನಂದ ಉಕ್ಕುವಂತೆ ಭಾಸವಾಗುತ್ತಿತ್ತು. ಮರುದಿನ ಮುಂಜಾನೆ ಎದ್ದವನೇ ತನ್ನ ಎಲ್ಲ ಕೆಲಸಕಾರ್ಯಗಳನ್ನು ಲಗುಬಗೆಯಿಂದ ಮುಗಿಸಿ ಸ್ನಾನ ಮಾಡಿ ಜಟ್ಟಿಗನ ಸ್ಥಳದ ಸಮೀಪ ಬಾಂದೇಹಳ್ಳದ ದಂಡೆಯಲ್ಲಿ ಧ್ವನಿ ಬರುವುದನ್ನೇ ಕಾಯುತ್ತ ಕುಳಿತನು. ಹಳ್ಳದಲ್ಲಿ ಭರತಿಯ ಸಮಯ ನೀರು ನುಗ್ಗಿ ಏರುತ್ತಲೇ ಇತ್ತು. ಸರಿಯಾಗಿ ಸೂರ್ಯ ನಡುನೆತ್ತಿಗೆ ಏರಿ ಹೊಳೆಯ ನೀರು ಕಾಂತಿಯುತವಾಗಿ ಹೊಳೆಯುತ್ತಿತ್ತು. ಮುದಿ ಮಂಜನು ಕಾದಿರುವಂತೆಯೇ ನೀರೊಳಗೆ ಯಾರೋ ಮುಳುಗಿ ಚಲಿಸುವ ಸದ್ದು, ನೀರಿನ ಗುಳ್ಳೆಗಳು ಇದ್ದಕ್ಕಿದ್ದಂತೆ ಧ್ವನಿ ಅಲೆಯೊಡೆದು ಬರತೊಡಗಿತು. ನಾನು ದುರ್ಗಾಂಬೆ ನನ್ನ ಖಡ್ಗ ಸಮೇತ ಬಂದಿದ್ದೇನೆ. ನನ್ನನ್ನು ಎತ್ತಿ ಆ ಜಟ್ಟಿಗ ಸ್ಥಳದಲ್ಲಿರಿಸಿ ನೀರು ಹಾಕು. ಅಷ್ಟೇ ಸಾಕು. ನಂತರ ನನ್ನ ಗುಡಿ ಇತ್ಯಾದಿ ವ್ಯವಸ್ಥೆ ನಾನೇ ಮಾಡಿಸಿಕೊಳ್ಳುವೆ, ಎಂದು ಹೇಳಿದಂತೆ ಕೇಳಿಸುತ್ತಿದ್ದಂತೆ ಅವನು ಹಳ್ಳದ ಆಳಕ್ಕೆ ಜಿಗಿದನು. ಶ್ರೀ ದೇವಿಯ ಸಾಧಾರಣ ಮೂರು ಇಂಚಿನ ಪಂಚಲೋಹದ ಮೂರ್ತಿ ಕೈಗೆ ಸಿಕ್ಕಿತು. ಹಳೆಯದಾದ ಖಡ್ಗ ಕೈಗೆ ತಗುಲಿತು. ಅವುಗಳನ್ನು ಎತ್ತಿಕೊಂಡು ಮೇಲಕ್ಕೆ ಬಂದನು. ಮೂರ್ತಿ ಪ್ರಭಾವಳಿ ಆಸನಸಮೇತವಾಗಿತ್ತು. ಅದನ್ನು ಅಪ್ಪಣೆಯಂತೆ ಜಟಕನ ಆ ನಾಗರ ಬನದಲ್ಲಿರಿಸಿ ಬಾವಿಯಿಂದ ಶುದ್ಧ ನೀರನ್ನು ತಂದು ಅಭಿಷೇಕ ಮಾಡಿ ಪೂಜಿಸಿದನು.
ನವಿಲದುರ್ಗದಿಂದ ಬಂದ ಈ ಮೂರ್ತಿಯು ಚತುರ್ಭುಜವಾಗಿದ್ದು, ಅದರ ಸವೆತವನ್ನು ಗಮನಿಸಿದರೆ ಬಹು ಪುರಾತನದ್ದೆಂದು ಕಂಡು ಬರುತ್ತದೆ. ಸಂಶೋಧಕ ಕೆಳದಿಯ ಗುಂಡಾ ಜೋಯಿಸರು ಈ ಮೂರ್ತಿಯ ಪೀಠದ ಮೇಲೆ ಮತ್ತು ಖಡ್ಗದ ಮೇಲೆ ಹಳೆಯ ಬರಹಗಳು ಕಾಣುತ್ತವೆಯೆಂದಾದರೆ ಅವುಗಳ ವಿವರ ತಿಳಿಸಲು ಹೇಳಿದ್ದರು. ಆದರೆ ಅವೆಲ್ಲ ಹಳತಾಗಿ ಸವೆದ ಕಾರಣ ಮತ್ತು ಖಡ್ಗಗಳು ತುಕ್ಕು ಹಿಡಿದ ಕಾರಣ ಬರಹಗಳನ್ನು ಗುರುತಿಸುವುದು ಕಷ್ಟ. ಮೂರ್ತಿಯ ಕಾಲುಗಳ ಹಿಂದೆ ಏನೋ ಬರಹದ ತರಹ ಕಂಡು ಬಂದರೂ ಅದರ ಸವೆತದಿಂದಾಗಿ ಗುರುತಿಸುವುದು ಕಠಿಣ ಸಾಧ್ಯವಾಗಿದೆ. ಖಡ್ಗಗಳು ಹಿಂದಿನ ಕಾಲದ ರಾಜರುಗಳು ಉಪಯೋಗಿಸಿದ್ದು ಅನ್ನುವುದು ಕಂಡುಬರುತ್ತದೆ. ಈ ಎಲ್ಲ ವಿದ್ಯಮಾನಗಳಿಂದ ಇದು ದಂಡಿನವರು ಸ್ಥಾಪಿಸಿ ಪೂಜಿಸುತ್ತಿದ್ದ ದುರ್ಗೆ ಅನ್ನುವುದು ಅರ್ಥವತ್ತಾಗುತ್ತದೆ.
ಇಷ್ಟೆಲ್ಲ ಸಂಗತಿಗಳ ನಡುವೆಯೂ ದಂಡಿನ ದುರ್ಗಾಂಬೆಯ ನವಿಲದುರ್ಗದಿಂದ ಹೊನ್ನಾವರಕ್ಕೆ ಬಂದ ನಿಖರವಾದ ಕಾಲವನ್ನು ಗುರುತಿಸುವುದು ಕಷ್ಟಸಾಧ್ಯ. ಹೊನ್ನಾವರದ ಶ್ರೀ ವೆಂಕಟ್ರಮಣ ದೇವಸ್ಥಾನದಂತೆ ಬಹುಪುರಾತನದ್ದೆಂದು ದಂಡಿನದುರ್ಗಾ ದೇವಿಯ ಖ್ಯಾತಿ ಇದೆ. ಇದೇನಿದ್ದರೂ ನಿರ್ಜನ ನೆಲೆಯಾದ ನವಿಲುದುರ್ಗವನ್ನು ಬಿಟ್ಟು ಬಂದ ಆದಿಶಕ್ತಿ ಸ್ವರೂಪಿ ದುರ್ಗಾಂಬೆ ತನ್ನ ಶಕ್ತಿಯಿಂದಲೇ ಭಜಕರನ್ನು ಸೆಳೆದುಕೊಳ್ಳುತ್ತ ದಿನದಿಂದ ದಿನಕ್ಕೆ ವರ್ಧಮಾನ ಹೊಂದುತ್ತ ನೆಲೆಗೊಳ್ಳತೊಡಗಿದಳು. ಪ್ರತಿ ಶುಕ್ರವಾರ, ಮಂಗಳವಾರ ಸುಮಂಗಲೆಯರ ಮೈಮೇಲೆ ಆವೇಶಗೊಂಡು ಭಕ್ತಿಯಿಂದ ಬರುವ ಭಾವುಕ ಭಜಕರ ಮನೋಕ್ಲೇಶಗಳನ್ನು ಪರಿಹರಿಸಿ ಮಾರ್ಗದರ್ಶನ ಮಾಡುತ್ತ, ಅವರ ಅಭೀಷ್ಟಗಳನ್ನು ಪೂರೈಸುತ್ತ ದಂಡಿನದುರ್ಗೆ ಸ್ವರ್ಣಪುರದ ಮಹಾದೇವಿಯಾಗಿ, ಮಹಾಶಕ್ತಿಯಾಗಿ ನೆಲೆಗೊಂಡಳು. ಶ್ರೀ ದುರ್ಗಾಂಬೆ ನೆಲೆಗೊಂಡ ಹೊನ್ನಾವರ ಈ ಬಹುವಿಸ್ತಾರದ ಪ್ರದೇಶವು ದುರ್ಗಾಕೇರಿಯೆಂದೇ ಹೆಸರುಗೊಂಡಿತು. ಇದು ಹೊನ್ನಾವರದ ಉತ್ತರ ದಿಕ್ಕಿನ ಅಗಸೆಯೇ ಆಗಿತ್ತು.