ಉಡುಪಿ ಜಿಲ್ಲೆಯ ಕುಂದಾಪುರದ ಐತಿಹಾಸಿಕ ಗಂಗೊಳ್ಳಿ ಬಂದರು ಎರಡು ತಿಂಗಳು ಅವಧಿಯಲ್ಲಿ ಎರಡೆರಡು ಕಳವಳಕಾರಿ ವಿದ್ಯಮಾನಗಳಿಗೆ ಸಾಕ್ಷಿಯಾಗಿದೆ ಸಾಗರಮಾಲಾ ಯೋಜನೆಯಡಿಯಲ್ಲಿ ಗಂಗೊಳ್ಳಿ ಬಂದರನ್ನು ವಾಣಿಜ್ಯ ಬಂದರನ್ನಾಗಿ ಪರಿವರ್ತಿಸುವ ಕೋಸ್ಟಲ್ ಬರ್ತ್ ಪ್ರಕ್ರಿಯೆಗೆ ಸರ್ಕಾರ ಮುಂದಾಗಿದೆ ಎಂಬ ಸುದ್ದಿ ಆಗಸ್ಟ್ ತಿಂಗಳಲ್ಲಿ ಹರಡಿ ಮೀನುಗಾರರು ಕಳವಳಗೊಂಡಿದ್ದರು ಇದರ ಬೆನ್ನಲ್ಲೇ ಇದೀಗ ನಿರ್ಮಾಣ ಹಂತದಲ್ಲಿದ್ದ ಬಂದರಿನ ಹೊಸ ಜೆಟ್ಟಿ ಕುಸಿದು ಸಮುದ್ರ ಪಾಲಾಗಿದೆ ಕಳಪೆ ಮತ್ತು ಅವೈಜ್ಞಾನಿಕ ಕಾಮಗಾರಿಯಿಂದ ಕಾಂಕ್ರೀಟ್ ಹಾಸು ಕುಸಿದು ಮೀನುಗಾರಿಕಾ ಚಟುವಟಿಕೆಗಳಿಗೆ ತೀವ್ರ ತೊಂದರೆಯಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ಕಡಲತೀರವನ್ನು ವಾಣಿಜ್ಯಕರಣಗೊಳಿಸಿ ಮೀನುಗಾರರ ಬದುಕಿಗೆ ಬೆಂಕಿ ಇಡುವ ಕೊಳ್ಳಿದೆವ್ವಗಳ ಪಾತಾಳಗರಡಿಯ ಗೃಧ್ರ ದೃಷ್ಟಿ ಗಂಗೊಳ್ಳಿ ಮೀನುಗಾರಿಕಾ ಬಂದರಿನ ಮೇಲೆ ಬಿದ್ದಿದೆ ಜೀವನದಿ ಪಂಚಗಂಗಾವಳಿಯ ಬಸಿರನ್ನು ಬಗೆದು ಗಂಗೊಳ್ಳಿ , ಕುಂದಾಪುರ ಮತ್ತು ಕೋಡಿಯನ್ನು ಸರ್ವನಾಶ ಮಾಡುವ ಸಾಗರಾಮಾಲಾ ಯೋಜನೆಯ ಬಾಧಕಗಳು, ಕಳಪೆ ಕಾಮಗಾರಿ ಮತ್ತು ಅವೈಜ್ಞಾನಿಕ ವಿಧಾನದಿಂದ ಕುಸಿದಿರುವ ಮೀನುಗಾರರ ಜೆಟ್ಟಿಯ ವಿದ್ಯಮಾನಗಳ ವಿಶ್ಲೇಷಣೆಯೊಂದಿಗೆ ಗಂಗೊಳ್ಳಿಯ ಮೀನುಗಾರಿಕಾ ಬಂದರಿನ ಇತಿಹಾಸ ಮತ್ತು ಮಹತ್ವವನ್ನು ಅವಲೋಕಿಸೋಣ.
ಪೋರ್ಚುಗೀಸರ ಪ್ರಭಾವ ಕ್ಷೀಣಿಸಿದ ಬಳಿಕ ಹಾಗೂ ಕೆಳದಿಯ ಅರಸರ ಆಳ್ವಿಕೆ ಕೊನೆಗೊಂಡಾಗ ಬಸ್ರೂರು ಬಂದರು ತನ್ನ ವ್ಯಾಪಾರಿ ಮಹತ್ವವನ್ನು ಕಳೆದುಕೊಂಡಿತ್ತು ಆ ವೇಳೆಗಾಗಲೇ ಬಸ್ರೂರು ಧಕ್ಕೆಯಲ್ಲಿ ಮರಳು ತುಂಬಿ, ನೀರಿನ ಆಳ ಕಡಿಮೆಯಾಗಿ ಹಡಗುಗಳು ತಂಗಲು ಅಸಾಧ್ಯವಾದರಿಂದ ಸಂಪೂರ್ಣ ವ್ಯಾಪಾರ ವಹಿವಾಟು ಗಂಗೊಳ್ಳಿ ಬಂದರಿಗೆ ವರ್ಗಾವಣೆಗೊಂಡಿತ್ತು. ಪಂಚಗಂಗಾವಳಿ ನದಿಯ ನೀರಿನ ಆಳ ದೋಣಿಗಳಿಗೆ ಲಂಗರು ಹಾಕಲು ಪ್ರಶಸ್ತವಾದ ತೀರ ನದಿ ಸಮುದ್ರಗಳ ಆಳಿವೆಯ ವಿಶಾಲ ಹರವು ಇವೆಲ್ಲವೂ ಆ ಕಾಲದಲ್ಲಿ ಗಂಗೊಳ್ಳಿ ಬಂದರನ್ನು ಪ್ರವೇಶಿಸಲು ಮಚ್ವೆ, ಪತ್ತೆಮಾರು, ಮಂಜಿ ಮುಂತಾದ ದೊಡ್ಡ ದೋಣಿಗಳು ಸುರಕ್ಷಿತವಾಗಿ ಪ್ರವೇಶಿಸಲು ಹಾಗೂ ತಂಗಲು ನಿಸರ್ಗವೇ ಅನುಕೂಲ ಮಾಡಿ ಕೊಟ್ಟಂತಿತ್ತು. ಪಂಚಗಂಗಾವಳಿ ಆ ಕಾಲಘಟ್ಟದಲ್ಲಿ ಸಮೃದ್ಧವಾಗಿ ಹರಿಯುತ್ತಿದ್ದರಿಂದ ತಾಲೂಕಿನ ಒಳನಾಡಿನ ಪ್ರದೇಶಗಳಿಗೆ ಜಲಸಂಪರ್ಕ ಸುಲಭವಾಗಿತ್ತು ಸರಕು ಸಾಗಾಟ ಒಳ ಪ್ರದೇಶಗಳಿಂದ ಗಂಗೊಳ್ಳಿಗೂ, ಗಂಗೊಳ್ಳಿಯಿಂದ ಒಳ ಪ್ರದೇಶಗಳಿಗೂ ಸಾಧ್ಯವಾಗಿತ್ತು. ಜುಲೈ 1923 ರಲ್ಲಿ ಪಂಚಗಂಗಾವಳಿಯಲ್ಲಿ ಭೀಕರ ಪ್ರವಾಹದ ಪರಿಣಾಮವಾಗಿ ಗಂಗೊಳ್ಳಿಯ ಅಳಿವೆ ಇನ್ನಷ್ಟು ಅಗಲಗೊಂಡಿತ್ತು. ಹೀಗೆ ಪ್ರಕೃತಿಯೂ ಒಲಿದ ಕಾರಣ ಗಂಗೊಳ್ಳಿ ಬಂದರು ಮಂಗಳೂರಿನ ನಂತರದ ಎರಡನೇ ಸ್ಥಾನ ಪಡೆಯಿತು.
ಕೆಳದಿ ಅರಸರ ಸಾಗರೋತ್ತರ ವ್ಯಾಪಾರಗಳನ್ನು ಖಾರ್ವಿ ಸಮುದಾಯದವರು ವಾಸ್ತವಿಕವಾಗಿ ನಿಯಂತ್ರಿಸುತ್ತಿದ್ದರು. ಕೊಂಕಣಿ ಖಾರ್ವಿ ಮೀನುಗಾರರು ಪೋರ್ಚುಗೀಸ್ ನಾವಿಕರಿಂದ ಸಾಗರೋತ್ತರ ವ್ಯಾಪಾರದ ಹೆಚ್ಚಿನ ತರಬೇತಿ ಪಡೆದುಕೊಂಡಿದ್ದರು.
ಕುಂದಾಪುರ ಮತ್ತು ಬೈಂದೂರು ತಾಲೂಕಿನ ಏಳು ನದಿಗಳು ಹಾಗೂ ಹಲವಾರು ಹೀನ್ನೀರುಗಳ ಮೂಲಕ ವ್ಯಾಪಾರ ವಹಿವಾಟುಗಳು ನಡೆಯುತ್ತಿದ್ದವು. ಇಲ್ಲಿನ ನದಿ ಹಾಗೂ ಹಿನ್ನೀರುಗಳ ಅಗಲವಾದ ಹರವುಗಳು, ಭೌಗೋಳಿಕ ಲಕ್ಷಣಗಳು, ಪೂರ್ವ ಮತ್ತು ಉತ್ತರದ ಬಹುಭಾಗವನ್ನು ಆವರಿಸಿರುವ ಕಾಡುಗಳು ಹಾಗೂ ಪಶ್ಚಿಮ ಘಟ್ಟಗಳ ಕೊರಕಲು ಹಾದಿ , ಎತ್ತಿನ ಬಂಡಿಗಳ ಓಡಾಟಕ್ಕೆ ರಸ್ತೆಗಳ ಕೊರತೆ ಇವೆಲ್ಲ ಜಲಮಾರ್ಗ ಅನಿವಾರ್ಯ ಸಂಪರ್ಕ ಸಾಧನವಾಗುವಂತೆ ಮಾಡಿದ್ದವು. ಇತಿಹಾಸದ ಕಾಲದಿಂದಲೂ ಗಂಗೊಳ್ಳಿ ಬಂದರು ತನ್ನದೇ ಆದ ಸ್ಥಾನಮಾನಗಳಿಂದ ಮೆರೆದಿತ್ತು. ಈಗಲೂ ಮಂಗಳೂರು ನಂತರ ಎರಡನೇ ಸ್ಥಾನದಲ್ಲಿ ಗಂಗೊಳ್ಳಿ ಬಂದರು ಇದ್ದರೂ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿ ಶಾಪಗ್ರಸ್ಥವಾಗಿದೆ. ಜನರ ನಿರ್ಲಿಪ್ತತೆ ಹಾಗೂ ರಾಜಕೀಯ ಇಚ್ಛಾಶಕ್ತಿಯ ಕೊರತೆ ಇಲ್ಲಿ ಎದ್ದು ಕಾಣುತ್ತಿದೆ. ಪ್ರಸ್ತುತ ಇಲ್ಲಿ ನಿರ್ಮಾಣ ಹಂತದಲ್ಲಿರುವ ಹೊಸ ಜೆಟ್ಟಿ ಕಳಪೆ ಕಾಮಗಾರಿ ಮತ್ತು ಅವೈಜ್ಞಾನಿಕ ಕಾರಣದಿಂದ ಕುಸಿದು ನೀರು ಪಾಲಾಗಿದೆ. ಕಳೆದ ಒಂದು ತಿಂಗಳ ಹಿಂದೆಯೇ ಹೊಸ ಜೆಟ್ಟಿಯ ಹೊರಭಾಗದ ಫಿಲ್ಲರ್ ಗಳು ಕುಸಿದು ಜೆಟ್ಟಿ ನಿರ್ಮಾಣದ ಗುಣಮಟ್ಟದ ಸೂಚನೆ ನೀಡಿತ್ತು. ಇದೀಗ ಒಳಭಾಗದ ಕಾಂಕ್ರೀಟ್ ಹಾಸಿನ ಸಮೇತ ಜೆಟ್ಟಿ ಕುಸಿದು ಬಿದ್ದು ಆತಂಕ ಸೃಷ್ಟಿಸಿದ್ದು ಮೀನುಗಾರರು ಇರುವ ಸ್ವಲ್ಪ ಜಾಗದಲ್ಲಿ ಮೀನುಗಾರಿಕಾ ಚಟುವಟಿಕೆಗಳನ್ನು ನಡೆಸುತ್ತಿರುವಾಗಲೇ ದೊಡ್ಡ ಶಬ್ದದೊಂದಿಗೆ ಜೆಟ್ಟಿ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಮೀನುಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸುಮಾರು 12 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಹೊಸ ಜೆಟ್ಟಿಯ ಕಾಮಗಾರಿಯ ಟೆಂಡರ್ ಮೊತ್ತದಲ್ಲಿ 10 ಕೋಟಿ ರೂ ಈಗಾಗಲೇ ಬಿಡುಗಡೆಯಾಗಿದೆ ಎಂಬ ಮಾಹಿತಿಯಿದ್ದು ಇಲ್ಲಿ ನೋಡಿದರೆ 20 ಶೇಕಡಾ ಕೆಲಸ ಕೂಡಾ ಆಗಿಲ್ಲ. ಮಾಡಿದ ಸ್ವಲ್ಪ ಕೆಲಸ ಕಳಪೆ ಕಾಮಗಾರಿಯಿಂದ ಕಡಲಿನ ಪಾಲಾಗಿದೆ. ಸಂಬಂಧಪಟ್ಟ ಇಂಜಿನಿಯರ್ ಗಳಿಗೆ ಗುತ್ತಿಗೆಗಾರರಿಗೆ ಇಲ್ಲಿ ಜೆಟ್ಟಿ ನಿರ್ಮಾಣ ಮಾಡುವಾಗ ಅನುಸರಿಸಬೇಕಾದ ಕಾರ್ಯವಿಧಾನಗಳ ಬಗ್ಗೆ ಸ್ವಲ್ಪವಾದರೂ ಪರಿಜ್ಞಾನವಿರಬೇಕಿತ್ತಲ್ಲವೇ ಎಂದು ಮೀನುಗಾರರು ಪ್ರಶ್ನಿಸುತ್ತಿದ್ದಾರೆ.
ಗಂಗೊಳ್ಳಿ ಬಂದರನ್ನು ಅಭಿವೃದ್ಧಿ ಪಡಿಸಿ ಸಂಪೂರ್ಣ ಮೀನುಗಾರಿಕೆಗೆ ಮೀಸಲಾಗಿಸುವುದನ್ನು ಬಿಟ್ಟು ಸರ್ಕಾರ ಇಲ್ಲಿ ಖಾಸಗಿ ವಾಣಿಜ್ಯ ಬಂದರನ್ನು ಮಾಡಲೊರಟಿದೆ ಎಂಬ ಸುದ್ದಿಯು ಮೀನುಗಾರರನ್ನು ಆತಂಕಕ್ಕೆ ದೂಡಿದೆ. ಇಲ್ಲಿ ಬಂಡವಾಳಶಾಹಿಗಳ ಜೇಬು ತುಂಬಿಸುವ ಖಾಸಗಿ ವಾಣಿಜ್ಯ ಬಂದರು ನಿರ್ಮಾಣದ ಪ್ರಥಮ ಹಂತವಾಗಿ ಕೋಸ್ಟಲ್ ಬರ್ತ್ ನಿರ್ಮಾಣದ ಪ್ರಕ್ರಿಯೆ ಆರಂಭಿಸಲು ಸಿದ್ಧತೆ ನಡೆಸಲಾಗಿದ್ದು ಮೀನುಗಾರರು ಇದಕ್ಕೆ ತೀವ್ರ ಪ್ರತಿರೋಧ ಒಡ್ಡಿದಾರೆ. ಐತಿಹಾಸಿಕ ಗಂಗೊಳ್ಳಿ ಬಂದರನ್ನು ಮೀನುಗಾರಿಕಾ ಚಟುವಟಿಕೆಗಳಿಗೆ ಮಾತ್ರವೇ ಮೀಸಲಾಗಿರಸಬೇಕು ಎಂಬ ದೃಡವಾದ ಬೇಡಿಕೆಯನ್ನು ಮೀನುಗಾರರು ಗಟ್ಟಿ ನಿಲುವಿನಲ್ಲಿ ಹೇಳುತ್ತಿದ್ದಾರೆ.
ಇಲ್ಲಿ ವಾಣಿಜ್ಯ ಬಂದರು ನಿರ್ಮಾಣವಾದರೆ ಮೀನುಗಾರಿಕೆ ಸಂಪೂರ್ಣ ನಾಶವಾಗುತ್ತದೆ. ಮುಖ್ಯವಾಗಿ ಇಲ್ಲಿ ಕಲ್ಲಿದ್ದಲು ರಪ್ತು ಮಾಡುವುದರಿಂದ ಅದರ ತ್ಯಾಜ್ಯಗಳು ನದಿ ಮತ್ತು ಸಮುದ್ರಗಳಿಗೆ ಸೇರಿ ಮತ್ಸ್ಯ ಸಂತತಿ ಸಂಪೂರ್ಣ ನಾಶವಾಗಲಿದೆ. ಗೋವಾದಲ್ಲಿ ಇದರ ದುಷ್ಪರಿಣಾಮ ಭಯಾನಕ ಸ್ವರೂಪದಲ್ಲಿ ಉಂಟಾಗಿದೆ. ಈ ಮೊದಲು ಗೋವಾದ ಮೀನುಗಾರರಿಗೆ ಕಡಲತಡಿಯ ಕೆಲವೇ ಮೀಟರ್ ಅಂತರದಲ್ಲಿ ಸಮೃದ್ಧ ಮೀನು ಸಿಗುತ್ತಿತ್ತು. ಆದರೆ ವಾಣಿಜ್ಯ ಬಂದರಿನ ಕಾರ್ಯ ಚಟುವಟಿಕೆಗಳು ಪ್ರಾರಂಭಗೊಂಡ ನಂತರ ಮೀನುಗಾರರು ಮತ್ಸ್ಯಕ್ಷಾಮದಿಂದ ನಲುಗುತ್ತಿದ್ದಾರೆ. ಅವರು ಮೀನಿಗಾಗಿ ಕಡಲಿನಲ್ಲಿ ಎಷ್ಟೋ ನಾಟಿಕಲ್ ದೂರ ಕ್ರಮಿಸಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ. ಗಂಗೊಳ್ಳಿಯಲ್ಲಿ ವಾಣಿಜ್ಯ ಬಂದರು ನಿರ್ಮಾಣವಾದರೆ ಗೋವಾದ ಪರಿಸ್ಥಿತಿ ಬರುತ್ತದೆ. ಸಂಪೂರ್ಣವಾಗಿ ಮೀನುಗಾರಿಕೆ ಸರ್ವನಾಶವಾಗಲಿದೆ.
ಪಂಚಗಂಗಾವಳಿ ನದಿಯ ಸಮೃದ್ಧ ಮತ್ಸ ಸಂಪತ್ತು ಕಲ್ಲಿದ್ದಲು ತ್ಯಾಜ್ಯದಿಂದ ನಶಿಸಿ ಹೋಗಲಿದೆ. ಸಮುದ್ರ ಕಲುಷಿತಗೊಂಡು ಮತ್ಸ್ಯಸಂಪತ್ತು ನಾಶವಾಗಲಿದೆ ವಾಣಿಜ್ಯ ಬಂದರು ನಿರ್ಮಾಣದ ಬಳಿಕ ಮೀನುಗಾರಿಕಾ ಬೋಟ್ ಗಳಿಗೆ, ದೋಣಿಗಳಿಗೆ ಸ್ಥಳಾವಕಾಶವೇ ಇರುವುದಿಲ್ಲ ದೊಡ್ಡ ದೊಡ್ಡ ಹಡಗುಗಳು ಇಡೀ ಬಂದರನ್ನು ಆಕ್ರಮಿಸಿಕೊಳ್ಳುತ್ತವೆ. ಮೀನುಗಾರಿಕೆ ಸಂಪೂರ್ಣ ಸ್ಥಬ್ದವಾಗಿ ಮೀನುಗಾರರ ಬದುಕು ಬೀದಿಗೆ ಬೀಳುವುದು ಖಂಡಿತಾ ಗಂಗೊಳ್ಳಿಯಲ್ಲಿ ವಾಣಿಜ್ಯ ಬಂದರು ತೂಗುಕತ್ತಿ ನೇತಾಡುತ್ತಿದ್ದು ಯಾವುದೇ ಸಂದರ್ಭದಲ್ಲಿ ಮೀನುಗಾರರನ್ನು ಬಲಿ ತೆಗೆದುಕೊಳ್ಳಬಹುದು ಹೊನ್ನಾವರ ಕಾಸರಕೋಡು ಟೊಂಕ ಕಡಲತೀರದ ಅಭಿವೃದ್ಧಿ ನಿಷೇಧಿತ ಸೂಕ್ಷ್ಮ ಪ್ರದೇಶದಲ್ಲಿ ಖಾಸಗಿ ವಾಣಿಜ್ಯ ಬಂದರು ನಿರ್ಮಾಣ ಪ್ರಕ್ರಿಯೆಯನ್ನು ವಿರೋಧಿಸಿ ಸ್ಥಳೀಯ ಮೀನುಗಾರರು ನಿರಂತರವಾಗಿ ಹೋರಾಟ ನಡೆಸುತ್ತಾ ಬಂದಿದ್ದಾರೆ ಅದರ ಪರಿಣಾಮವಾಗಿ ಕಾನೂನು ಬಾಹಿರವಾಗಿ ನಿರ್ಮಾಣ ಮಾಡುತ್ತಿದ್ದ ಖಾಸಗಿ ವಾಣಿಜ್ಯ ಬಂದರು ಪ್ರಕ್ರಿಯೆಗೆ ರಾಷ್ಟ್ರೀಯ ಹಸಿರು ಪೀಠ ತಡೆಯಾಜ್ಞೆ ನೀಡಿ ಕಾಮಗಾರಿ ನಿಲ್ಲಿಸಿದೆ ಅದೇ ಹೋರಾಟದ ಮಾದರಿಯಲ್ಲಿ ಗಂಗೊಳ್ಳಿ ಮೀನುಗಾರರು ಪ್ರಾರಂಭಿಕ ಹಂತದಲ್ಲಿಯೇ ಈ ವಾಣಿಜ್ಯ ಬಂದರು ಪ್ರಕ್ರಿಯೆಯನ್ನು ನಿಲ್ಲಿಸಬೇಕಾಗಿದೆ. ಇಲ್ಲದಿದ್ದರೆ ಮೀನುಗಾರಿಕೆಯನ್ನೇ ನಂಬಿ ಬದುಕುತ್ತಿರುವ ಸಹಸ್ರಾರು ಕುಟುಂಬಗಳ ಬದುಕು ಮೂರಾಬಟ್ಟೆಯಾಗಲಿದೆ.
ಗಂಗೊಳ್ಳಿಯಲ್ಲಿ ಪ್ರಸ್ತುತ 40 ಪರ್ಸಿನ್ ಬೋಟ್ ಗಳು, 50 ರ ಸಂಖ್ಯೆಯಲ್ಲಿ 370 ನಾಮಾಂಕಿತ ಬೋಟ್ಗಳಿವೆ ನೂರು single troll ಬೋಟ್ ಗಳಿವೆ 300 out board ದೋಣಿಗಳಿವೆ. ನೂರಕ್ಕೂ ಹೆಚ್ಚು ನಾಡದೋಣಿಗಳು ಇವೆ ಮತ್ತು ಮೀನುಗಾರಿಕೆಯನ್ನೆ ನಂಬಿಕೊಂಡು ಸಹಸ್ರಾರು ಜನ ಬದುಕು ಕಟ್ಟಿಕೊಂಡಿದ್ದಾರೆ.
ಈ ಹೋರಾಟದ ಪ್ರಥಮ ಹಂತವಾಗಿ ಗಂಗೊಳ್ಳಿಯ ಮೀನುಗಾರ ಮುಖಂಡರಾದ ರಾಮಪ್ಪ ಖಾರ್ವಿ, ಹಸಿಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷರಾದ ಗಾಳಿ ಜನಾರ್ಧನ ಖಾರ್ವಿ, ಕಾರ್ಯದರ್ಶಿಗಳಾದ ರವಿಶಂಕರ್ ಖಾರ್ವಿಯವರ ನೇತೃತ್ವದಲ್ಲಿ ಮೀನುಗಾರರು ಪ್ರಬಲ ಹೋರಾಟಕ್ಕೆ ಮುನ್ನುಡಿ ಬರೆದಿದ್ದು, ಈಗಾಗಲೇ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಸುಕುಮಾರ್ ಶೆಟ್ಟಿಯವರಿಗೆ ವಾಣಿಜ್ಯ ಬಂದರು ವಿರೋಧಿಸಿ ಮನವಿ ನೀಡಲಾಗಿದೆ. ಯಾವುದೇ ಕಾರಣಕ್ಕೂ ಇಲ್ಲಿ ವಾಣಿಜ್ಯ ಬಂದರು ನಿರ್ಮಾಣ ಮಾಡದೇ ಕೇವಲ ಮೀನುಗಾರಿಕಾ ಚಟುವಟಿಕೆಗಳಿಗಷ್ಟೇ ಮೀಸಲಾಗಿಡಬೇಕೆಂದು ಮೀನುಗಾರರು ಆಗ್ರಹಿಸಿದ್ದಾರೆ. ಮೇಲ್ಕಾಣಿಸಿದ ಮೀನುಗಾರ ಮುಖಂಡರು ಇಲ್ಲಿ ನಿರ್ಮಾಣ ಹಂತದ ಹೊಸಜೆಟ್ಟಿ ಹಳೆಜೆಟ್ಟಿಯನ್ನು ಕೂಡಾ ತನ್ನ ತೆಕ್ಕೆಗೆ ತೆಗೆದುಕೊಂಡು ಕುಸಿದ ಘಟನೆಗೆ ಸಂಬಂಧಿಸಿದಂತೆ ಜೆಟ್ಟಿ ನಿರ್ಮಾಣದ ಅವೈಜ್ಞಾನಿಕ ಮತ್ತು ಕಳಪೆ ಕಾಮಗಾರಿಯ ಬಗ್ಗೆ ಜನಜಾಗೃತಿ ಮೂಡಿಸಿದ್ದಾರೆ. ಸಾರ್ವಜನಿಕರ ತೆರಿಗೆಯ ಹಣವನ್ನು ನೀರು ಪಾಲು ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸರಕಾರವನ್ನು ಆಗ್ರಹಿಸಿದ್ದಾರೆ.
ವರದಿ: ಸುಧಾಕರ್ ಖಾರ್ವಿ
Editor
www.kharvionline.com