ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ ಎಂಬ ಕುವೆಂಪುರವರ ಕವಿವಾಣಿಯಂತೆ ಕುಂದಗನ್ನಡಿಗ ರಿಷಬ್ ಶೆಟ್ಟಿಯೆಂಬ ಹೃದಯ ಶಿವ ಕಾಂತಾರ ಚಿತ್ರದ ಮೂಲಕ ಜಗತ್ತಿನಾದ್ಯಂತ ಸಿರಿಗನ್ನಡದ ಡಿಂಡಿಮವನ್ನು ಬಾರಿಸಿದ್ದಾರೆ. ಕಾಂತಾರ ಚಿತ್ರ ಹೊಸ ಇತಿಹಾಸ ಸೃಷ್ಟಿಸಿದ್ದು ಸೃಜನಶೀಲ ಮನಸ್ಸುಗಳ ಶಕ್ತ ಅಭಿವ್ಯಕ್ತಿಯಾಗಿ ಬೆಳ್ಳಿತೆರೆಯಲ್ಲಿ ರಾರಾಜಿಸುತ್ತಿದೆ. ಜಗತ್ತಿನಾದ್ಯಂತ ಜನರು ಭಾಷೆಯ ಹಂಗಿಲ್ಲದೇ ಕನ್ನಡದಲ್ಲೇ ನೋಡಿ ಸಂಭ್ರಮಿಸಿದ, ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ ಏಕೈಕ ಕನ್ನಡ ಚಿತ್ರವೆಂದರೆ ಅದು ಕಾಂತಾರ ಚಿತ್ರ. ಸಿನಿಜಗತ್ತಿನಲ್ಲಿ ಐತಿಹಾಸಿಕ ಮೈಲಿಗಲ್ಲಾಗಿ, ಹೊಸ ಇತಿಹಾಸವನ್ನು ಸೃಷ್ಟಿಸಿದ ಈ ಅದ್ಬುತ ಚಿತ್ರ ಜನಮಾನಸದಲ್ಲಿ ಅಭೂತಪೂರ್ವ ಸಂಚಲನವನ್ನು ಸೃಷ್ಟಿಸಿದೆ.
ಕನ್ನಡ ಚಿತ್ರವನ್ನು ಜಗತ್ತಿನಾದ್ಯಂತ ಜನರು ಕನ್ನಡದಲ್ಲೇ ನೋಡಿ ಸಂಭ್ರಮಿಸುವುದೇ ನಿಜವಾದ ಪ್ಯಾನ್ ಇಂಡಿಯಾ ಎಂಬ ರಿಷಭ್ ಶೆಟ್ಟಿಯವರ ಚೇತೋಹಾರಿ ಮಾತುಗಳು ಕನ್ನಡಿಗರ ಸಮೃದ್ಧ ಸಾಂಸ್ಕೃತಿಕ ಪರಂಪರೆಯ ದ್ಯೋತಕವಾಗಿದೆ. ಪ್ರಕೃತಿಯೊಡನೆ ಮನುಷ್ಯರ ಸಂಘರ್ಷ, ಅರಣ್ಯ ರಕ್ಷಣೆಯ ಜವಾಬ್ದಾರಿ, ಭೂಮಾಲೀಕರ ದೌರ್ಜನ್ಯದ ಪರಿಯೊಂದಿಗೆ ಕರಾವಳಿ ಕರ್ನಾಟಕದ ಜನರ ನಂಬಿಕೆಯ ನೆಲೆಯಾದ ದೈವರಾಧನೆಯು ಕಾರಣಿಕವಾಗಿ ಪ್ರಸ್ತುತಗೊಳ್ಳುವ ವೈಖರಿ ಕಾಂತಾರ ಚಿತ್ರದಲ್ಲಿ ಅದ್ಬುತವಾಗಿ ಮೂಡಿ ಬಂದಿದೆ. ಕರಾವಳಿ ಭಾಗದಲ್ಲಿ ಸಂಪನ್ನಗೊಳ್ಳುವ ದೈವರಾಧನೆ, ಕೋಲಸೇವೆಗಳಲ್ಲಿ ಜನರ ಇತಿಹಾಸವೇ ಅಡಕವಾಗಿರುವುದರಿಂದ ಜನಮಾನಸದಲ್ಲಿ ಶಾಶ್ವತ ಸ್ಥಾನ ಪಡೆದುಕೊಂಡಿದೆ.
ಈ ಚಿತ್ರದಲ್ಲಿ ದೈವರಾಧನೆಯ ಪ್ರಧಾನ ಭೂಮಿಕೆಯಲ್ಲಿ ಪ್ರಮುಖ ಸ್ಥಾನ ಪಡೆದಿರುವ ದೈವವೆಂದರೆ ಅದು ಪಂಜುರ್ಲಿ ದೈವ. ಈ ಪಂಜುರ್ಲಿ ದೈವಕ್ಕೆ 31 ಬೇರೆ ಬೇರೆ ಹೆಸರುಗಳಿವೆ. ಪ್ರದೇಶದಿಂದ ಪ್ರದೇಶಕ್ಕೆ ಪಂಜುರ್ಲಿ ದೈವ ಹೊಂದುವ ಆರಾಧನಾ ಪ್ರಕ್ರಿಯೆಗಳು ವೈಶಿಷ್ಟ್ಯತೆಗಳಿಂದ ಕೂಡಿರುತ್ತದೆ. ಅತ್ಯಂತ ಸಂಕೀರ್ಣ ಆರಾಧನಾ ಪ್ರಕ್ರಿಯೆಯೊಂದಿಗೆ ಪಂಜುರ್ಲಿ ದೈವಗಳ ಸಾಂಸ್ಕೃತಿಕ ಸ್ವರೂಪಗಳು ನಮ್ಮೆದುರು ಅನಾವರಣಗೊಳ್ಳುತ್ತದೆ. ಕುಂದಾಪುರ ತಾಲೂಕಿನ ಕಟ್ ಬೆಲ್ತೂರ್ ಶ್ರೀ ಭದ್ರ ಮಹಾಂಕಾಳಿ ದೇವಸ್ಥಾನ, ಹೊಳ್ಮೆಗೆ ಹೋರ್ ಬೊಬ್ಬರ್ಯ ದೈವಸ್ಥಾನ, ಬಾಳಿಕೆರೆ ಬೊಬ್ಬರ್ಯ ಪಂಜುರ್ಲಿ ದೇವಸ್ಥಾನ ಮುಂತಾದ ಕಡೆ ದೈವರಾಧನೆ, ಕೋಲಸೇವೆ ವಿಜೃಂಭಣೆಯಿಂದ ಜರುಗುತ್ತದೆ.
ಈ ಕೋಲಸೇವೆಯ ಹಾಡುಗಳು ಮತ್ತು ದೈವನರ್ತನ ಸಂಪೂರ್ಣವಾಗಿ ಕುಂದಗನ್ನಡದಲ್ಲಿ ಜರುಗುತ್ತದೆ. ಈ ಕೋಲಸೇವೆಯ ಧಾರ್ಮಿಕ ಕಾರ್ಯಕ್ರಮವನ್ನು ಕುಂದಾಪುರ ಅಂಪಾರು ವಾಲ್ತೂರಿನ ಪಾಣಾರ ಜನಾಂಗದ ಕುಟುಂಬವೊಂದು ನಡೆಸಿಕೊಡುತ್ತಾರೆ. ಪಂಜುರ್ಲಿ ದೈವ ಇಲ್ಲಿ ಪ್ರಧಾನ ದೈವವಾಗಿ ಕಾಣಿಸಿಕೊಳ್ಳುತ್ತದೆ. ಇಲ್ಲಿ ಪ್ರಸ್ತುತ ಪಡಿಸುವ ಹಾಡುಗಳು ಸಂಪೂರ್ಣವಾಗಿ ಕುಂದಾಪುರ ಕನ್ನಡದಲ್ಲಿ ಇರುತ್ತದೆ. ದೈವರಾಧನೆಯ ದೈವಪಾತ್ರಿಯ ನರ್ತನದೊಂದಿಗೆ ಲೌಕಿಕ ಪಾತ್ರಗಳಿರುವ ನಾಟಕೀಯ ಪ್ರಹಸನವು ಇದರಲ್ಲಿ ಪ್ರದರ್ಶಿತಗೊಳ್ಳುತ್ತದೆ. ಕಾಂತಾರದಲ್ಲಿ ಅಂಪಾರು ವಾಲ್ತೂರಿನ ಪಾಣಾರ ಕಲಾವಿದರ ಹಾಡು ಮತ್ತು ನರ್ತನ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ರಿಷಬ್ ಶೆಟ್ಟಿಯವರು ಈ ದೃಶ್ಯಗಳನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ. ಅವರು ಸಣ್ಣಪುಟ್ಟ ದೃಶ್ಯಗಳಿಗೂ ಹೆಚ್ಚಿನ ಮಹತ್ವ ನೀಡುತ್ತಾರೆ. ಚಿತ್ರದ ನಾಯಕಿ ಮೀನು ಕೊಚ್ಚುವ ದೃಶ್ಯ ನೈಜವಾಗಿ ಮೂಡಿ ಬರಲು ಮೀನು ಕೊಚ್ಚುವುದನ್ನು ಕಲಿಯಲು ನಾಯಕಿಯನ್ನು ಚಿತ್ರದ ಸ್ಥಿರ ಛಾಯಾಗ್ರಾಹಕರಾದ ಕುಂದಾಪುರದ ವಿಜೇತ್ ಖಾರ್ವಿಯವರ ಮನೆಗೆ ಕಳುಹಿಸಿಕೊಟ್ಟಿದ್ದರು. ಅಲ್ಲಿ ವೀಜೇತ್ ಖಾರ್ವಿಯವರ ತಾಯಿ ಅಮೃತಾ ನಾಯಕಿ ಸಪ್ತಮಿಗೆ ಮೀನು ಕೊಚ್ಚುವುದನ್ನು ಕಲಿಸಿ ಕೊಟ್ಟಿದ್ದರು.
ದೈವರಾಧನೆಯು ಮೂಲಭೂತವಾಗಿ ಜನಪದರ ಭಾವನಾ ಪ್ರಪಂಚಕ್ಕೆ ಸೇರಿದ ಧಾರ್ಮಿಕ ಆಚರಣೆಯಾಗಿದೆ. ದೈವರಾಧನೆಯಲ್ಲಿ ತಮ್ಮ ಇಷ್ಟ ದೈವವನ್ನು , ವ್ಯಕ್ತಿ ಮಾಧ್ಯಮದ ಮೂಲಕ ವಿಶಿಷ್ಟ ಸಂದರ್ಭದಲ್ಲಿ ಗೋಚರವಾಗುವಂತೆ ಬರಮಾಡಿಕೊಂಡು ಹರಕೆ ಸಲ್ಲಿಸಿ ಕೃತಾರ್ಥರಾಗುತ್ತಾರೆ ಮತ್ತು ದೈವ ಹರಕೆಯಿಂದ ಸಂತೃಪ್ತವಾಗಿ ಜನರಿಗೆ ಅಭಯದ ನುಡಿಯನ್ನು ನೀಡುತ್ತದೆ. ಪಂಜುರ್ಲಿಯು ಕರಾವಳಿಯ ಜನಪ್ರಿಯ ಮತ್ತು ಕಾರಣಿಕವೂ ಆದ ದೈವವಾಗಿದೆ. ಈ ದೈವದ ದರ್ಶನ ಪಾತ್ರಿಯು ವಿಶೇಷವಾಗಿ ಕೆಂಪು ಬಣ್ಣವನ್ನು ಬಳಸುತ್ತಾರೆ. ಪಂಜುರ್ಲಿಯ ಮುಖವರ್ಣಿಕೆಯ ವಿನ್ಯಾಸವನ್ನು ಹಂದಿಯ ಮುಖದ ಕಲ್ಪನೆ ಇಟ್ಟುಕೊಂಡು ರಚಿಸುತ್ತಾರೆ. ಕೆಂಪು ಬಿಳಿಯ ರೇಖೆಗಳು ಮತ್ತು ಚುಕ್ಕಿಗಳ ವಿನ್ಯಾಸದಲ್ಲಿ ಹಂದಿಯ ಮುಖದ ಪರಿಕಲ್ಪನೆ ಇಲ್ಲಿ ಸಾಕಾರಗೊಳ್ಳುತ್ತದೆ. ಪಂಜುರ್ಲಿ ದೈವ ದುಷ್ಟರನ್ನು ಶಿಕ್ಷಿಸಿ ಶಿಷ್ಟರನ್ನು ಪೊರೆಯುತ್ತಾನೆ ಎಂಬ ಅಪಾರ ನಂಬಿಕೆ ನಮ್ಮ ಜನಪದರಲ್ಲಿ ಇರುವುದರಿಂದ ಪಂಜುರ್ಲಿ ಕರಾವಳಿಯ ಜನಪ್ರಿಯ ದೈವವಾಗಿ ಆರಾಧಿಸಲ್ಪಡುತ್ತಾರೆ.
ಚಿತ್ರವೊಂದು ಯಶಸ್ವಿಯಾಗಲು ಹಲವಾರು ಸಿದ್ಧ ಸೂತ್ರಗಳಿರುತ್ತದೆ. ಆದರೆ ಕಾಂತಾರ ಚಿತ್ರ ಈ ಪರಿಯಲ್ಲಿ ಪ್ರಚಂಡ ಯಶಸ್ಸು ಕಾಣಲು ಇಲ್ಲೊಂದು ದೈವ ಪ್ರೇರಣೆಯಿಂದ ಜನಮಾನಸದ ಪವಾಡ ಸಂಭವಿಸಿದೆ. ಜನರೇ ಸ್ವಯಂಪ್ರೇರಿತರಾಗಿ ಕಾಂತಾರ ಚಿತ್ರಕ್ಕೆ ಪ್ರಮೋಷನ್ ಕೊಟ್ಟಿದ್ದಾರೆ. ಜನಪ್ರಿಯತೆಯ ಉತ್ತುಂಗಕ್ಕೆ ಏರಿಸಿದ್ದಾರೆ. ತಮ್ಮ ತಮ್ಮ ವಾಟ್ಸಾಪ್ ಸ್ಟೇಟಸ್ ಗಳಲ್ಲಿ, Facebook ಗಳಲ್ಲಿ ವ್ಯಾಪಕವಾದ ಪ್ರಚಾರ ನೀಡಿದ್ದಾರೆ. ಯೂಟ್ಯೂಬ್ ಸೇರಿದಂತೆ ಹತ್ತು ಹಲವು ಸಾಮಾಜಿಕ ಜಾಲತಾಣಗಳ ವಿವಿಧ ವಿಭಾಗದಲ್ಲಿ ಕಾಂತಾರ ಚಿತ್ರಕ್ಕೆ ಜನರೇ ದಂಗು ಬಡಿಸುವಂತ ವ್ಯಾಪಕ ಪ್ರಚಾರ ನೀಡಿ ಗೆಲ್ಲಿಸಿದ್ದಾರೆ. ಅದೂ ಕೂಡಾ ದೇಶ, ಭಾಷೆ ಧರ್ಮಗಳ ಗಡಿ ದಾಟಿ ಜನರು ಕಾಂತಾರ ಚಿತ್ರವನ್ನು ಗೆಲ್ಲಿಸಿದ್ದಾರೆ. ಇದು ನಿಜವಾಗಿಯೂ ಸಂಭ್ರಮದ ಹೊಸ ಇತಿಹಾಸವನ್ನು ಸೃಷ್ಟಿಸಿದೆ. ಚಿತ್ರದ ರೀವ್ಯೂ ಕೂಡಾ ಇಲ್ಲಿ ಚಿತ್ರದ ಅಭೂತಪೂರ್ವ ಯಶಸ್ವಿಗೆ ತನ್ನ ಕೊಡುಗೆಯನ್ನು ಸಲ್ಲಿಸಿದೆ. ಭಾಷೆ ಯಾವುದಾದರೇನು ಚಿತ್ರ ಚೆನ್ನಾಗಿದೆ, ತಮಗೆ ತುಂಬಾ ಇಷ್ಟವಾಯಿತು. ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ರಿಷಬ್ ಶೆಟ್ಟಿಯವರ ಮನೋಜ್ಞ ಅಭಿನಯದಿಂದ ತಾವು ಭಾವಪರವಶರಾಗಿದ್ದೇವೆ ಎಂದು ಕೇರಳದಲ್ಲಿ ಕಾಂತಾರ ನೋಡಿದ ಪ್ರೇಕ್ಷಕರು ಉದ್ಗರಿಸಿದ್ದಾರೆ. ಚಿತ್ರವೊಂದು ಜನರಿಗೆ ಆಪ್ತವಾಗಿ ಸೃಜನಶೀಲತೆಯಿಂದ ಕೂಡಿದರೆ ಅದರ ಯಶಸ್ಸಿಗೆ ಸಿನಿಮಾ ತಂಡ ಯಾವ ಪ್ರಚಾರ, ಪ್ರಮೋಷನ್ ಕೈಗೊಳ್ಳಬೇಕಿಲ್ಲ. ಚಿತ್ರವನ್ನು ಯಶಸ್ಸಿನ ಉತ್ತುಂಗಕ್ಕೆ ಏರಿಸಲು ಜನರೇ ಸಾಕು ಎಂಬುದಕ್ಕೆ ಕಾಂತಾರ ಚಿತ್ರದ ಅಭೂತಪೂರ್ವ ಯಶಸ್ಸೇ ಜ್ವಲಂತ ನಿದರ್ಶನವಾಗಿದೆ
ಇದೇ ನೆಲೆಗಟ್ಟಿನ ಐತಿಹ್ಯಗಳ ಆಧಾರದ ಪಂಜುರ್ಲಿಯ ಕಾರಣಿಕದ ಅಂಶಗಳು ಕಾಂತಾರ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಅತ್ಯಂತ ರೋಮಾಂಚಕಾರಿಯಾಗಿ ಮೂಡಿ ಬಂದಿದ್ದು ಕೊನೆಯ ಇಪ್ಪತ್ತು ನಿಮಿಷಗಳು ಸಿನಿ ಪ್ರೇಕ್ಷಕರನ್ನು ನಿಬ್ಬೆರಗಾಗಿಸುತ್ತದೆ. ಕಾಂತಾರ ಚಿತ್ರ ಇಂದು ದೇಶ, ಪ್ರಾಂತ್ಯ, ಭಾಷೆ ಧರ್ಮಗಳ ಎಲ್ಲೆ ಮೀರಿ ಜಗತ್ತಿನ ತುಂಬಾ ಬ್ಲಾಕ್ ಬಸ್ಟರ್ ಪ್ರದರ್ಶನ ಕಾಣುತ್ತಿದೆ. ಯಾರೂ ನಿರೀಕ್ಷಿಸಿದ ಮಟ್ಟದಲ್ಲಿ ಈ ಚಿತ್ರ ಎಲ್ಲೆಡೆ ಸದ್ದು ಮಾಡುತ್ತಿದೆ. ಕರಾವಳಿ ಕರ್ನಾಟಕದ ದೈವರಾಧನೆಯನ್ನು ಜಾಗತಿಕ ಮಟ್ಟದಲ್ಲಿ ಪ್ರಜ್ವಲಿಸಿದ ಚಿತ್ರದ ನಿರ್ದೇಶಕ ನಟ ರಿಷಬ್ ಶೆಟ್ಟಿಯವರಿಗೆ ತುಂಬು ಹೃದಯದ ಅಭಿನಂದನೆಗಳು. ಇಂತಹ ಅಪರೂಪದ ಶ್ರೇಷ್ಠ ಚಿತ್ರಗಳು ಮತ್ತಷ್ಟು ಬರಲಿ. ಅಂತರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕ ಕೀರ್ತಿಯನ್ನು,ಕನ್ನಡ ಭಾಷೆಯ ಹಿರಿಮೆಯನ್ನು ಮೊಳಗಿಸಿದ ರಿಷಬ್ ಶೆಟ್ಟಿಯವರಿಗೆ ಮತ್ತೊಮ್ಮೆ ಅಭಿನಂದನೆಗಳು.
ಉಮಾಕಾಂತ ಖಾರ್ವಿ ಕುಂದಾಪುರ
ಹಲವು ವರ್ಷಗಳಿಂದ ಕರಾವಳಿ ಕರ್ನಾಟಕದ ಅದರಲ್ಲೂ ದಕ್ಷಿಣ ಕನ್ನಡದಲ್ಲಿ ದೈವಾರಾಧನೆಯ ಈ ದೈವಿಕ ರಹಸ್ಯವು ನನ್ನಲ್ಲಿ ಕುತೂಹಲ ಮೂಡಿಸಿದೆ. ಒಂದೇ ದೈವ ಹಲವು ಹೆಸರುಗಳೂ ಹಲವು ರೂಪಗಳಿರುವುದನ್ನು ಗಮನಿಸಿದ್ದೇನೆ. ಅಲ್ಲದೆ ಸಹಜವಾಗಿ ಸ್ತ್ರೀ ಮತ್ತು ಪುರುಷ ರೂಪಗಳಲ್ಲಿ ಮತ್ತು ಕೆಲವೊಮ್ಮೆ ಪ್ರಾಣಿಗಳು ಮತ್ತು ಕಲ್ಲುಗಳಲ್ಲಿ ಅನೇಕ ದೈವಗಳಿವೆ. ಕಾಂತಾರ ಚಲನಚಿತ್ರದಿಂದ ನಮ್ಮ ಸಂಸ್ಕೃತಿಯ ಅರಿವಿನ ಮನಸ್ಥಿತಿ ಮತ್ತು ವಿಶೇಷವಾಗಿ ಅವಿಭಾಜ್ಯ ದಕ್ಷಿಣ ಕನ್ನಡ ಬೇರೂರಿರುವ ಈ ಸಂಸ್ಕೃತಿಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಉತ್ಸುಕತೆಯನ್ನು ಪ್ರಚೋದಿಸಿದ್ದಾರೆ. ವಿವಿಧ ದೈವಗಳ ಕಥೆಗಳು ಮತ್ತು ಅವರ ಪೂಜಾ ವಿಧಾನಗಳ ಬಗ್ಗೆ ವಿವರವಿರುವ ಯಾವುದೇ ಮೂಲವಿದೆಯೇ? ಇದ್ದರೆ ದಯವಿಟ್ಟು ಹಂಚಿಕೊಳ್ಳಿ.