ಸ್ವತಃ ನಮ್ಮ ಅಥವಾ ನಮ್ಮವರ ಬಗ್ಗೆ ಬರೆಯುವುದು ಒಂದು ರೀತಿಯಲ್ಲಿ ಸಂಕೋಚ ತರುವ ಸಂಗತಿ. ಆದರೂ ತಂದೆಯವರ ಬಗ್ಗೆ ಬರೆಯುವುದು ಅನಿವಾರ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ಬರೆಯಲೇಬೇಕಾಗಿದೆ. ನಮಗೆ ಜನ್ಮ ಕೊಟ್ಟ, ಮೇಲಾಗಿ ಶಿಕ್ಷಣದ ಬೆಳಕನ್ನು ಕೊಟ್ಟ ಅವರ ಋಣವನ್ನು ತೀರಿಸಲಿಕ್ಕಾಗಿಯಾದರೂ ಅವರ ಜಾನಪದ ಸೊಗಡಿನ ಕೊಂಕಣಿ ಕವನಗಳನ್ನು ಹಾಗೂ ಬೆರಳೆಣಿಕೆಯ ಕನ್ನಡ ಕವನಗಳನ್ನು ದಾಖಲಿಸಬೇಕು ಎಂಬ ಹಂಬಲ ಅನೇಕ ವರ್ಷಗಳಿಂದ ನನ್ನನ್ನು ಕಾಡುತ್ತಿತ್ತು. ಇಂಥದ್ದೊAದು ಕೃತಿಗೆ ಅವರು ಅತ್ಯಂತ ಅರ್ಹರು. ಈ ಮೂಲಕವಾದರೂ ಅವರ ನೆನಪನ್ನು ಅಕ್ಷರ ರೂಪದಲ್ಲಿ ದಾಖಲಿಸುವುದು ಅಗತ್ಯ ಎಂದು ಭಾವಿಸಿದೆ.
ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು ಎನ್ನುವ ರೀತಿಯಲ್ಲಿ ಕೆಲಸ ಮಾಡಿ ಸಮಾಜ ಸೇವೆ ಅಥವಾ ಸಾಮಾಜಿಕ ಕಾರ್ಯಕ್ಕೆ ನಿಜವಾದ ಮೌಲ್ಯ ತರುವಂತೆ ಬಾಳಿ ಬದುಕಿದವರು ನನ್ನ ತಂದೆ ಕೆ.ವಾಸುದೇವ ನಾಯ್ಕ್ ಇವರು (11.02.1929-15.06.2009) ಆರ್ಥಿಕವಾಗಿ ಮಾತ್ರವಲ್ಲ ತಮ್ಮ ಜೀವನದ ಅಮೂಲ್ಯ ಸಮಯದ ಬಹುಭಾಗವನ್ನು ಯಾವುದೇ ಫಲಾಪೇಕ್ಷೆ ಇಲ್ಲದೆ ವ್ಯಯಿಸಿ ಸಮಾಜದ ಉನ್ನತಿಗಾಗಿ ಶ್ರಮಿಸಿದವರು ನನ್ನ ತಂದೆ. ಪ್ರಚಾರವೆಂಬ ಅನಿಷ್ಟದಿಂದ ಬಹು-ಬಹು ದೂರವೇ ಉಳಿದಿದ್ದವರು ನನ್ನ ತಂದೆ.
ಹಾo, ಫಲಾಪೇಕ್ಷೆ ಇಲ್ಲದೆ ಎಂದು ಹೇಳಿದೆನಲ್ಲವೇ? ಅದು ಒಂದು ರೀತಿಯಲ್ಲಿ ಸುಳ್ಳೆನಿಸುತ್ತದೆ! ಹೌದಾ?. ಹೌದು, ಅವರು ಫಲವನ್ನು ಅಪೇಕ್ಷಿಸಿದ್ದರು! ಆದರೆ ಅದು ತಮ್ಮ ಸ್ವಂತಕ್ಕಾಗಿಯೂ ಅಲ್ಲ, ತಮ್ಮ ಕುಟುಂಬ ಸದಸ್ಯರಿಗಾಗಿಯೂ ಅಲ್ಲ. ತಾನು ಸೇರಿದ ತೀರಾ ಬಸವಳಿದ, ಸಾಮಾಜಿಕವಾಗಿಯೂ ಆರ್ಥಿಕವಾಗಿಯೂ ಮಾತ್ರವಲ್ಲದೆ ರಾಜಕೀಯವಾಗಿಯೂ ಹಿಂದುಳಿದ ಶ್ರಮಜೀವಿ ಸಮಾಜವಾದ, ಮೀನುಗಾರಿಕೆ ಕುಲಕಸಬಾಗಿ ಹೊಂದಿದ ಖಾರ್ವಿ ಜನರ ಪ್ರಗತಿಯೆಂಬ ಸಿಹಿಫಲವನ್ನು ಅವರು ಬಯಸಿದ್ದರು. ಅವರು ಅಪೇಕ್ಷಿಸಿದ್ದು ಅದೊಂದೇ ಫಲವನ್ನು ತಮ್ಮ ಏಳೂ ಮಕ್ಕಳಿಗೆ ವಿದ್ಯೆ ಎಂಬ ಕದಿಯಲಾಗದ ಗಂಟು ಕೊಡಿಸಿದ್ದೇ ಅವರ ಹಾಗೂ ತಾಯಿ ಗಂಗಾಬಾಯಿಯ ದೊಡ್ಡ ಕೊಡುಗೆ. ಸಮಾಜದ ಕಟ್ಟಕಡೆಯ ಮನುಷ್ಯರಿಗೂ ಅಭಿವೃದ್ಧಿಯ ಫಲ ಸಿಗಬೇಕೆಂಬ ಸಮಾಜವಾದಿ ಪರಿಕಲ್ಪನೆಗೆ ಬದ್ಧರಾಗಿ ಅದನ್ನು ಸಾಕಾರಗೊಳಿಸಲು ತಮ್ಮದೇ ಆದ ಮಾರ್ಗದಲ್ಲಿ ನಡೆದು ತೋರಿದವರು ನನ್ನ ತಂದೆ.
ಈ ಪ್ರಗತಿ ಸಾಧನೆಗಾಗಿ ಅವರು ಆಯ್ದು ಕೊಂಡಿದ್ದು ಶಿಕ್ಷಣ ಮತ್ತು ಸಂಘಟನೆ ಎಂಬ ಮಹಾ ಅಸ್ತ್ರವನ್ನು, ಶಿಕ್ಷಣವು ಮಾನವ ವಿವೋಚನೆಯ ಒಂದು ಮಹಾನ್ ಸಾಧನ ಎಂದು ಅರಿಸ್ಟಾಟಲ್, ಬುದ್ಧ, ಬಸವ, ಬಿ.ಆರ್ ಅಂಬೇಡ್ಕರ್, ಮಹಾತ್ಮಾ ಗಾಂಧಿ, ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ, ನೆಲ್ಸನ್ ಮಂಡೇಲಾ, ಪಂಪ, ಕುವೆಂಪು…. ಹೀಗೆ ತತ್ವಜ್ಞಾನಿಗಳು, ರಾಜಕೀಯ ಚಿಂತಕರು, ಸಮಾಜ ಸುಧಾರಕರು, ಹೋರಾಟಗಾರರು ವಿವಿಧ ರೀತಿಯಲ್ಲಿ ವಿಶ್ಲೇಷಿಸಿದ್ದಾರೆ. ಆ ಬೆಳಕಿನ ದೊಂದಿ ಹಿಡಿದು ತಮ್ಮ ಸಮಾಜದಲ್ಲಿ ಶಿಕ್ಷಣದ ಬೆಳಕು ಪಸರಿಸಲು ನನ್ನ ತಂದೆ ಅನವರತ ದುಡಿದರು. ತಂದೆಯವರು ತುಂಬಾ ಕಲಿತವರೇನೂ ಅಲ್ಲ. ಆ ಕಾಲದ ಎಸ್.ಎಸ್.ಎಲ್.ಸಿ ಯನ್ನು ಮುಗಿಸಿದವರು. ಆದರೆ ಅವರ ಸಾಮಾಜಿಕ ದೃಷ್ಟಿಯ ಒಳಗಣ್ಣು ಅತ್ಯಂತ ಪ್ರಖರವಾದುದಾಗಿತ್ತು. ಅವರ ಇಂಗ್ಲೀಷ್ ಭಾಷಾ ಪ್ರೌಢಿಮೆ, ಜ್ಞಾನ ಭಂಡಾರ ಯಾವುದೆ ಪದವೀಧರರು, ಸ್ನಾತಕೋತ್ತರ ಪದವೀಧರರನ್ನು ಮೀರಿಸಿದ್ದಾಗಿತ್ತು. ತಮ್ಮ ವೃತ್ತಿ ಜೀವನವನ್ನು ಶಿಕ್ಷಕನಾಗಿ ಆರಂಭಿಸಿದರೂ ಅವರು ಹೆಚ್ಚಾಗಿ ಕಾರ್ಯನಿರ್ವಹಿಸಿದ್ದು ನ್ಯಾಯಾಂಗ ಇಲಾಖೆಯಲ್ಲಿ ಸ್ವಲ್ಪ ಸಮಯ ಮಾರಾಟ ತೆರಿಗೆ ಇಲಾಖೆಯಲ್ಲಿ ಕೆಲಸ. ಶಿಕ್ಷಕ ವೃತ್ತಿಯನ್ನು ಮುಂದುವರಿಸದಿದ್ದರೇನoತೆ, ಅವರು ಜೀವಮಾನ ಪರ್ಯಂತ ಸಾಮಾಜಿಕ ಶಿಕ್ಷಕನಾಗಿ ಕಾಯಕ ನಡೆಸಿದರು. ನರಸಿಂಹ ಆರ್ಕಾಟಿ ಮೊದಲಾದ ಸಮಾನ ಮನಸ್ಕರ ಜೊತೆ ಸೇರಿ ಹಲವು ಸಂಘ-ಸಂಸ್ಥೆಗಳನ್ನು ಸ್ಥಾಪಿಸಿ ತಮ್ಮ ಸಮಾಜದ ಜನರನ್ನು ಜ್ಞಾನದ ಬಲೆಯಲ್ಲಿ ಸೆರೆ ಹಿಡಿಯುವ ಕೆಲಸವನ್ನು ಮಾಡಿದರು. ಒಬ್ಬ ಅಪ್ಪಟ ದೈವಭಕ್ತನಾಗಿದ್ದೂ ಮೌಢ್ಯದ ಜಾಡ್ಯದಿಂದ ಜನರನ್ನು ಹೊರತರಲು ಹೆಣಗಿದರು. ತಮ್ಮ ಶ್ರಮಜೀವಿ ಜನಾಂಗದ ಅಮೂಲ್ಯ ಜಾನಪದ ಸಂಪತ್ತನ್ನು ರಕ್ಷಿಸಲು ಹಾಗೂ ಪ್ರಸಾರ ಮಾಡಲು ಮಾರ್ಗದರ್ಶನ ನೀಡಿದರು.
ಮೀನುಗಾರಿಕೆ ಪ್ರಧಾನ ವೃತ್ತಿಯಾಗಿರುವ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಮಂಗಳೂರಿನಿಂದ ಕಾರವಾರವರೆಗಿನ ಕರಾವಳಿಯುದ್ದಕ್ಕೂ ವಾಸಿಸುತ್ತಿರುವ ಕೊಂಕಣಿಯನ್ನು ಮಾತೃಭಾಷೆಯನ್ನಾಗಿ ಹೊಂದಿರುವ ಖಾರ್ವಿ ಜನಾಂಗ ಜನಪದ ಸಾಹಿತ್ಯ, ನೃತ್ಯಗಳ ಗಣಿಯೇ ಆಗಿದೆ. ಆಧುನಿಕ ಸಂಸ್ಕೃತಿಯ ದಾಂಗುಡಿಯಲ್ಲಿ ಇವೆಲ್ಲ ಚೆಲ್ಲಾಪಿಲ್ಲಿಯಾಗಿ ನಾಪತ್ತೆಯಾಗುವ ಅಪಾಯ ಅರಿತ ವಾಸುದೇವ ನಾಯ್ಕ್ ಇವರು ಈ ಅಮೂಲ್ಯ ಹಾಡು-ನೃತ್ಯಗಳನ್ನು ಉಳಿಸಿ, ಪ್ರಚುರಪಡಿಸುವಲ್ಲಿ ಅನವರತ ಶ್ರಮ ವಹಿಸಿದ್ದರು. ಅವರ ಪ್ರಯತ್ನಗಳ ಭಾಗವಾಗಿ ಖಾರ್ವಿ ಜನರ ಅನೇಕ ಜನಪದ ಹಾಡುಗಳು ಮತ್ತು ನೃತ್ಯಗಳ ಸಂರಕ್ಷಣೆಯಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ, ದೇಶದ ರಾಜಧಾನಿ ನವದೆಹಲಿಯಲ್ಲೂ ಈ ಅಮೂಲ್ಯ ಪ್ರದರ್ಶಕ ಕಲೆಗಳನ್ನು ಸಾದರಪಡಿಸಲಾಗಿದೆ. ದೂರದರ್ಶನದ ‘ಚಂದನ’ ವಾಹಿನಿಯಲ್ಲೂ ಪ್ರಸಾರವಾಗಿವೆ. ಮೂಲ ಜನಪದ ಕೃತಿಗಳ ಸಂಗ್ರಹ ಒಂದೆಡೆಯಾದರೆ ನನ್ನ ತಂದೆಯವರು ಸ್ವತಃ ಅನೇಕ ಜನಪದ ಸೊಗಡಿನ ಕೊಂಕಣಿ ಹಾಡುಗಳನ್ನು ಬರೆದು ಮೀನುಗಾರರ ಶ್ರಮಜೀವನಕ್ಕೆ ದನಿಯಾಗಿದ್ದಾರೆ. ಭಕ್ತಿಗೀತೆಗಳನ್ನು ಮಾತ್ರವಲ್ಲದೇ ಜಾನಪದ ಹಾಡುಗಳನ್ನೂ ಸುಶ್ರಾವ್ಯವಾಗಿ ಹಾಡುತ್ತಿದ್ದುದು ನನ್ನ ತಂದೆಯವರ ವಿಶೇಷ ಪ್ರತಿಭೆಯಾಗಿತ್ತು.
ಸಮಾನ ಮನಸ್ಕರೊಂದಿಗೆ ಸೇರಿ ತಮ್ಮ 40ನೇ ವಯಸ್ಸಿನಲ್ಲಿ, ಅಂದರೆ 1969 ರಲ್ಲಿ ಸ್ಥಾಪಿಸಿದ ‘ವಿದ್ಯಾರಂಗ ಮಿತ್ರ ಮಂಡಳಿ’ ಖಾರ್ವಿ ಸಮಾಜದಲ್ಲಿ ಸಾಕ್ಷರತೆ-ಶೈಕ್ಷಣಿಕ ಕ್ರಾಂತಿಗೆ ನಾಂದಿ ಹಾಡಿತು. ತಮ್ಮ ಸಮಾಜದ ಯುವಜನರು ಶಿಕ್ಷಣ ಪಡೆದು ಉದ್ಯೋಗಸ್ಥರಾಗಿ ಸ್ವಾಭಿಮಾನದ ಜೀವನ ಸಾಗಿಸಬೇಕೆಂಬುದು ಅವರ ಮಹದಾಸೆಯಾಗಿತ್ತು. ಅದಕ್ಕಾಗಿ ಬೇಕಾದ ಎಲ್ಲಾ ಪ್ರೋತ್ಸಾಹ-ಮಾರ್ಗದರ್ಶನ ನೀಡುತ್ತಿದ್ದರು. ಇದಕ್ಕಾಗಿ ಧರ್ಮಸ್ಥಳ ಕ್ಷೇತ್ರವೂ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ, ವಿವಿಧ ಜನಾಂಗಗಳ ಸಹಕಾರವನ್ನೂ ಪಡೆದರು. ಅಖಿಲ ಭಾರತ ಕೊಂಕಣ ಖಾರ್ವಿ ಮಹಾಜನ ಸಂಘ ಸ್ಥಾಪನೆಯಲ್ಲಿ ಪಾತ್ರ ವಹಿಸಿದರು. ರಾಜಕೀಯ ಶಕ್ತಿಯೂ ತಮ್ಮ ಜನಾಂಗಕ್ಕೆ ಬೇಕೆಂಬ ಪ್ರೇರಣೆಯಿಂದ ಒಮ್ಮೆ ‘ಮೀನು’ ಚಿಹ್ನೆ ಹೊಂದಿ ವಿಧಾನ ಸಭೆ ಚುನಾವಣೆಗೆ ಸ್ಪರ್ಧಿಸಿದ್ದೂ ಇದೆ. ತಮ್ಮ ಜನರ ಬೆಂಬಲ ಸಿಗಲಿಲ್ಲ ಎನ್ನುವ ಕಾರಣಕ್ಕೆ, ಅಥವಾ ಬೆರೆ ಸಂದರ್ಭಗಳಲ್ಲೂ ನೋವುಂಟಾಗುವ ಪ್ರಕರಣಗಳು ನಡೆದರೂ ಅವರನ್ನು ಯಾವ ಕಾರಣಕ್ಕೂ ನಿರ್ಲಕ್ಷಿಸದೆ ತಮ್ಮ ಸಮಾಜಮುಖಿ ಕೆಲಸವನ್ನು ಮುಂದುವರಿಸಿದರು. ಮಹಾಸ್ವಾಭಿಮಾನಿಯಾಗಿದ್ದ ಅವರೊಬ್ಬ ಅಧ್ಯಯನಶೀಲ ಸಾಮಾಜಿಕ ಕಾರ್ಯಕರ್ತರಾಗಿದ್ದರು. ತಮ್ಮ ಸಮಾಜದ ಮೂಲ, ಅದರ ಹಿಂದುಳಿದಿರುವಿಕೆ ಮೊದಲಾದವುಗಳನ್ನು ಸಾಬೀತುಪಡಿಸಲು ಆಳವಾದ ಅಧ್ಯಯನ ಮಾಡಿ ಅಧಿಕಾರಸ್ಥರ ಮುಂದೆ ಮಂಡಿಸಲು ರಂಗ ಸಜ್ಜುಗೊಳಿಸುತ್ತಿದ್ದರು. ಖಾರ್ವಿ ಜನಾಂಗ ಕುರಿತಾದ ಸ್ಟರಕ್ ವರದಿಯನ್ನು ಜಾಲಾಡಿ ಹುಡುಕಿದ್ದು ಅವರ ಈ ಗುಣಕ್ಕೆ ದೊಡ್ಡ ಸಾಕ್ಷಿ. ಸಂಘ-ಸಂಸ್ಥೆಗಳ ಪರವಾಗಿ ಅವರು ಬರೆದ ಒಂದೊಂದು ಮನವಿ ಪತ್ರವೂ ಒಂದೊಂದು ದಾಖಲೆಯಾಗಬಲ್ಲವು. ಅವುಗಳ ಒಕ್ಕಣಿ ಹಾಗೂ ಅಧ್ಯಯನಪೂರ್ಣ ಅಂಶಗಳು ಹಾಗಿರುತ್ತಿದ್ದವು.
ಭಾರತದ ಸ್ವಾತಂತ್ರ್ಯ ಸಂಗ್ರಾಮದ ಕಾವು ಏರಿದ್ದಾಗ 1945 ರ ಅಸಹಕಾರ ಆಂದೋಲನದ ಸಂದರ್ಭದಲ್ಲಿ ಚಳವಳಿಯಲ್ಲಿ ಪಾಲ್ಗೊಂಡಿದ್ದಕ್ಕಾಗಿ ಸೈಂಟ್ ಮೇರೀಸ್ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿ ಕೆ.ವಿ. ನಾಯ್ಕ್ರನ್ನು ಅನುತ್ತೀರ್ಣಗೊಳಿಸಲಾಯಿತು. ಮುಂದೆ ಅವರು ಗಂಗೊಳ್ಳಿಯ ಎಸ್.ವಿ.ಎಸ್ ಹೈಸ್ಕೂಲ್‌ನಲ್ಲಿ ಎಂಟನೇಯ ತರಗತಿ ಪಾಸ್ ಮಾಡಿ ಅನಂತರ ಕುಂದಾಪುರದ ಬೋರ್ಡ್ ಹೈಸ್ಕೂಲ್‌ನಲ್ಲಿ (ಈಗ ಸರಕಾರಿ ಪದವಿ ಪೂರ್ವ ಕಾಲೇಜ್) ಶಿಕ್ಷಣ ಮುಂದುವರಿಸಿ ಮದ್ರಾಸ್ ಪ್ರಾಂತ್ಯದ ಎಸ್.ಎಸ್.ಎಲ್.ಸಿಯಲ್ಲಿ ತೇರ್ಗಡೆಯಾದರು. ‘ಬೆಳೆಯ ಸಿರಿ ಮೊಳಕೆಯಲ್ಲಿ’ ಎನ್ನುವಂತೆ ಮಿಶನರಿ ಗುಂಪಿನ ಕೆರೆಟ್ ಕುಟುಂಬ ನಡೆಸುತ್ತಿದ್ದ ವಿಕ್ಟೋರಿಯಾ ಎಲಿಮೆಂಟರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುತ್ತಿದ್ದಾಗಲೇ ಇವರು ಶಾಲಾ ಮುಂಖಡನಾಗಿ ಮನೆಮನೆಗೆ ತೆರಳಿ ಖಾರ್ವಿ ಸಮಾಜದ ಮಕ್ಕಳನ್ನು ಶಾಲೆಗೆ ಕರೆತರುತ್ತಿದ್ದರು ಎಂಬುದು ಗಮನಾರ್ಹ ಸಂಗತಿ. ಶಿಕ್ಷಿತರಲ್ಲದಿದ್ದರೂ ಶಿಕ್ಷಣದ ಮಹತ್ವದ ಅರಿವಿದ್ದ ಅಜ್ಜ ಕೆ. ಮಂಜುನಾಥ ನಾಯ್ಕರ ಪ್ರೇರಣೆ-ಪ್ರಭಾವ ನನ್ನ ತಂದೆಯವರ ಮೇಲಿದ್ದುದ್ದು ಸುಸ್ಪಷ್ಟ ತಮ್ಮ ತಂದೆ ಮಂಜುನಾಥ ನಾಯ್ಕರು ಆರಂಭಿಸಿದ್ದ ‘ಶ್ರೀಕೃಷ್ಣ ಎಲಿಮೆಂಟರಿ ಶಾಲೆ’ಯ ಪುನರುಜ್ಜೀವನಕ್ಕೆ ಇವರು ಶ್ರಮಿಸಿದರು. 1960 ರಲ್ಲಿ ಉಪ್ಪಿನಕುದ್ರು ದೇವರಾಯ ಉಡುಪರ ನೇತೃತ್ವದಲ್ಲಿ ಖಾರ್ವಿಕೇರಿಯಲ್ಲಿ ಫಶರೀಸ್ ಶಾಲೆಯ ಸ್ಥಾಪನೆಯಲ್ಲಿ ಇವರು ಪ್ರಮುಖ ಪಾತ್ರ ವಹಿಸಿದರು ಎನ್ನುವುದನ್ನು ವಿದ್ಯಾರಂಗ ಮಿತ್ರಮಂಡಳಿಯ ಬೆಳ್ಳಿಹಬ್ಬದ ಸ್ಮರಣ ಸಂಚಿಕೆ ‘ಖಾರ್ವಿ ಚಿಂತನ’ ದಾಖಲಿಸಿದೆ. ಈ ಶಾಲೆ ಪ್ರಸ್ತುತ ಉಡುಪಿ ಜಿಲ್ಲಾ ಪಂಚಾಯತ್ ಆಡಳಿತಕ್ಕೆ ಸೇರಿ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕೃಪಾಭವನದಲ್ಲಿ ಕಾರ್ಯನಿರ್ವಹಿಸುತ್ತಿದೆ. ನಾವೂ ಏಳೂ ಜನ ಅಣ್ಣ-ತಮ್ಮ-ತಂಗಿಯರಲ್ಲಿ ‘ಅಕ್ಷರ’ದ ಮೊದಲ ಬೀಜ ಬಿತ್ತನೆಯಾಗಿದ್ದು ಇದೇ ಶಾಲೆಯಲ್ಲಿ ಎನ್ನುವುದು ಹೆಮ್ಮೆಯ ಸಂಗತಿ.
ಸ್ವಾತಂತ್ರ್ಯ ಹೋರಾಟದ ಪರ್ವ ಕಾಲದಲ್ಲಿ ಸಾಮಾಜಿಕ ಕಳಕಳಿಯನ್ನು ಮೇಳೈಸಿಕೊಂಡಿದ್ದ ಇವರ ಮೇಲೆ ಗಾಂಧಿವಾದದ ಪ್ರಭಾವ ದಟ್ಟವಾಗಿ ಬೀರಿದ್ದು ಸಹಜವಾಗಿಯೇ ಇತ್ತು. ಅಹಿಂಸೆ, ಶಿಕ್ಷಣ ಪ್ರಸಾರ, ಮದ್ಯಪಾನ-ವಿರೋಧಿ, ಪ್ರಾಣಿಬಲಿ-ವಿರೋಧಿ ನಿಲವುಗಳನ್ನು ಮೈಗೂಡಿಸಿಕೊಂಡು ಅವುಗಳ ಸಾಕಾರಕ್ಕೆ ಅಹರ್ನಿಶಿ ದುಡಿದಿದ್ದರ ಹಿಂದೆ ಅದರ ಪ್ರೇರಣೆಯೂ ಖಂಡಿತಕ್ಕೂ ಇದೆ.
ನ್ಯಾಯಾಂಗ ಇಲಾಖೆಯಲ್ಲಿನ ಕಾರ್ಯ ನಿರ್ವಹಣೆಯ ಅವಕಾಶ ಹಾಗೂ ಅನುಭವವನ್ನು ತಮ್ಮ ಸಮಾಜದವರ ಭೂಹೀನತೆಯ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಬಳಸಿಕೊಂಡು ಸಮಾಜ ಬಾಂಧವರ ಆರ್ಥಿಕ ಸಬಲತೆಗೆ ಶ್ರಮಿಸಿದರು. ಮಾತೃ ಭಾಷೆ ಕೊಂಕಣಿ ಬಗೆಗಿನ ನನ್ನ ತಂದೆಯವರ ಪ್ರೀತಿ-ಕಾಳಜಿಯೂ ಅನನ್ಯವಾದುದು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ನಡೆಸಿದ್ದ ಅಂಚೆ ಕಾರ್ಡಿನಲ್ಲಿ ಕೊಂಕಣಿ ಕವನ ರಚನೆ ಸ್ಪರ್ಧೆಯಲ್ಲಿ 73ರ ಇಳಿ ವಯಸ್ಸಿನಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಗಳಿಸಿದ್ದು ಇದಕ್ಕೊಂದು ಅಪರೂಪದ ಉದಾಹರಣೆಯಾಗಿದ್ದು ಅವರ ಜೀವನ ಪ್ರೀತಿಗೂ ದೃಷ್ಟಾಂತವಾಗಿ ನಿಲ್ಲತ್ತದೆ. ಬೆಂಗಳೂರಿನಿಂದ ಪ್ರಕಟವಾಗುತ್ತಿದ್ದ ‘ಕೊಂಕಣಿ ಸೌರಭ್’ ಕೊಂಕಣಿ ತ್ರೈಮಾಸಿಕದ ಗೌರವ ಸಂಪಾದಕರಾಗಿದ್ದರು. ‘ಪಂಚ್ಕಾದಾಯಿ’, ‘ಕೊಂಕಣಿ ಸೌರಭ್’ ಅಲ್ಲದೇ ಹಲವು ಸ್ಮರಣ ಸಂಚಿಕೆಗಳಲ್ಲಿ ಇವರ ಕೊಂಕಣಿ, ಕನ್ನಡ ಗೀತೆಗಳು ಪ್ರಕಟವಾಗಿವೆ. ಇವರು ಬರೆದ ‘ವಿದ್ಯಾರಂಗ ಉದಯ ತರಂಗ’ ಹಾಡು ವಿದ್ಯಾರಂಗ ಮಿತ್ರ ಮಂಡಳಿಯ ಧ್ಯೇಯಗೀತೆ ಆಗಿರುವುದು ಹೆಮ್ಮೆಯ ಸಂಗತಿ. ಕರ್ನಾಟಕ ಸರಕಾರದ ಕೊಂಕಣಿ ಭಾಷಾ ಪಠ್ಯದಲ್ಲೂ ಇವರ ಕೃತಿಗೆ ಸ್ಥಾನ ದೊರಕಿರುವುದು ಇವರ ಕೊಂಕಣಿ ಸಾಹಿತ್ಯ ಪ್ರೌಢಿಮೆಗೆ ಹಿಡಿದ ಕನ್ನಡಿಯಾಗಿದೆ. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ತಾನಾಗಿಯೇ ಮುಂದೆ ಬಂದು 2008 ರಲ್ಲಿ ಜೀವಮಾನ ಸಾಧನೆಗಾಗಿ ನೀಡಿದ ‘ಲೋಕವೇದ’ ಪ್ರಶಸ್ತಿಯೇ ಇವರು ಗಳಿಸಿದ ಏಕೈಕ ಪ್ರಶಸ್ತಿ. ಇಂಥ ಪ್ರಶಸ್ತಿ-ಪುರಸ್ಕಾರಗಳಿಗೆ ಎಂದೂ ಹಾತೊರೆಯದ, ಅಕ್ಷರಶಃ ಎಲೆಮರೆ ಕಾಯಿಯಂತೆ ಪ್ರಾಂಜಲ ಮನಸ್ಸಿನಿಂದ ಕೆಲಸ ನಿರ್ವಹಿಸಿದ ನನ್ನ ತಂದೆ 15.06.2009 ರಂದು ನಿಧನರಾದರು. ಅವರು ಜನಿಸಿದ್ದು 11.02.1929 ರಂದು ಕೆ. ಮಂಜುನಾಥ ನಾಯ್ಕ್ ಮತ್ತು ಪಾರ್ವತಿ ಬಾಯಿಯವರ ಐವರು ಮಕ್ಕಳಲ್ಲಿ ಇವರು ಹಿರಿಯರು. ಅಲ್ಲಿಂದಾಚೆ ತಮಗೆ ಸಾಮಾಜಿಕ ಪ್ರಜ್ಞೆ ಬಂದಾಗಿನಿಂದಲೂ ನಿಷ್ಕಲ್ಮಶ ಮನಸ್ಸಿನಿಂದ ತಾನು ಹುಟ್ಟಿದ ಸಮಾಜಕ್ಕೆ ಏನನ್ನಾದರೂ ಮಾಡಬೇಕೆಂಬ ತುಡಿತದಿಂದ ತನು-ಮನ-ಧನಗಳಿಂದ ದುಡಿಯುತ್ತಲೇ ಇದ್ದರು ದೇಹದಲ್ಲಿ ಶಕ್ತಿ ಇರುವವರೆಗೆ.
ತಂದೆಯವರು ಯಾವತ್ತೂ ಪ್ರಚಾರದ ಗೀಳಿನಿಂದ ದೂರವೇ ಇದ್ದವರು. ಅಧಿಕಾರದ ವ್ಯಾಮೋಹಕ್ಕೂ ಒಳಗಾದವರಲ್ಲ. ಸ್ವತಃ ತಾವೇ ಸ್ಥಾಪಿಸಿದ ಸಂಘ-ಸಂಸ್ಥೆಗಳಲ್ಲೂ ಅವರು ಯಾವತ್ತೂ ಪದಾಧಿಕಾರಿಯಾದವರಲ್ಲ. ತಾನೊಬ್ಬ ಸರಕಾರಿ ನೌಕರ ಎಂಬುದು ಅದಕ್ಕೆ ಒಂದು ಕಾರಣವಾದರೆ ತರುಣರು ನಾಯಕತ್ವ ಗುಣ ಬೆಳೆಸಿಕೊಳ್ಳಬೇಕೆಂಬ ಹಂಬಲದಿ೦ದ ಅವರು ಹಾಗೆ ಮಾಡಿದರು. ಸರಕಾರಿ ನೌಕರರಾದರೂ ಸಾಮಾಜಿಕ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ಸಕ್ರಿಯವಾಗಿ ಗುರುತಿಸಿಕೊಳ್ಳುವುದು ತಪ್ಪೇನೂ ಇಲ್ಲ. ಆದರೂ ತಂದೆಯವರು ತಮ್ಮ ಜೀವಿತಾವಧಿಯಲ್ಲಿ ಯಾವತ್ತೂ ಪದಾಧಿಕಾರಿಯಾಗದೆ ಸಂಘ-ಸಂಸ್ಥೆಗಳ ಚೇತನವಾಗಿ ಉಳಿದರು. “ಮಂದಿಯ ಕೈ ಚಪ್ಪಾಳೆ, ವೃತ್ತಪತ್ರಿಕೆಗಳ ಅಗ್ಗದ ಸ್ತುತಿ, ಬಿರುದು ಬಾವಲಿಗಳ ವ್ಯಾಮೋಹ-ಇವುಗಳಿಗೆ ವಶನಾಗದೆ, ತಾನು ಹಿಡಿದ ಕೆಲಸವನ್ನು ಪಟ್ಟು ಹಿಡಿದು ನಿಃಶಬ್ದವಾಗಿ ಮಾಡುವಾತನೇ ನಿಜವಾದ ಕರ್ಮಯೋಗಿ” ಎಂದು ಕುವೆಂಪು ಹೇಳಿರುವ ರೀತಿಯಲ್ಲಿ ನಿಜ ಅರ್ಥದಲ್ಲಿ ಕರ್ಮಯೋಗಿ ಆಗಿದ್ದವರು ನನ್ನ ತಂದೆಯವರು. ನನ್ನ ಅಣ್ಣ ಕೆ.ವಿ.ವಿಜಯಕುಮಾರ್ ತಂದೆ ಸ್ಥಾಪಕರಾಗಿರುವ ವಿದ್ಯಾರಂಗ ಮಿತ್ರಮಂಡಳಿಯ ಅಧ್ಯಕ್ಷನಾಗಿ ಹಾಗೂ ತಮ್ಮ ಕೆ.ವಿ. ಸಂಜಯಕುಮಾರ್ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದು ನಮಗೆ ಹೆಮ್ಮೆಯೆನಿಸುತ್ತದೆ.
ಮೂಢನಂಬಿಕೆಗಳು, ಪ್ರಾಣಿ ಬಲಿ ಆಚರಣೆ ಬಗ್ಗೆ ತಂದೆಯವರಲ್ಲಿ ಅದೆಷ್ಟು ಸಿಟ್ಟಿತ್ತೆಂದರೆ ಬಲಿ ಪದ್ಧತಿ ಬೆಳೆದುಬಂದ ಬಗೆಯನ್ನು ವಿವರಿಸಿ ನಾನು ಬರೆದು ಅದಾಗಲೇ ಪ್ರಕಟವಾದ ಲೇಖನವೊಂದನ್ನು ಸ್ವತಃ ಒಂದು ದೇವಸ್ಥಾನದ ವಾರ್ಷಿಕ ಸಂಚಿಕೆಯಲ್ಲಿ ಪ್ರಕಟವಾಗುವಂತೆ ನೋಡಿಕೊಂಡಿದ್ದರು. ಅದು ಅವರ ಕೆಚ್ಚು ಹಾಗೂ ಧೈರ್ಯವಾಗಿತ್ತು. ನಾವು ಎಲ್ಲಾ ಏಳು ಮಂದಿ ಅಣ್ಣ-ತಮ್ಮಂದಿರು ಹಾಗೂ ತಂಗಿಯರು ಬಹುತೇಕವಾಗಿ ಪ್ರಾಥಮಿಕ ಶಿಕ್ಷಣ ಪಡೆದಿದ್ದು ಶಾಲೆಯಲ್ಲಿ. ಅಲ್ಲೇ ಸಮೀಪದಲ್ಲಿದ್ದ ಕೋರ್ಟ್ಗೆ ತಂದೆಯವರು ಪ್ರತಿದಿನ ನಡೆದು ಹೋಗುತ್ತಿದ್ದುದನ್ನು ನಾನು ಆರನೇ ತರಗತಿಯಲ್ಲಿದ್ದಾಗ ಕೊಠಡಿಯಿಂದ ನೋಡುತ್ತಿದ್ದೆ. ಊಟದ ಬಿಡುವಿನ ವೇಳೆಯಲ್ಲಿ ಅಪ್ಪನನ್ನು ನೋಡಿಕೊಂಡು ಬರೋಣವೆಂದು ಆಗೊಮ್ಮೆ ಈಗೊಮ್ಮೆ ನಾನು, ಅಣ್ಣ ಅಥವಾ ಯಾರಾದರೂ ತಮ್ಮನ ಜೊತೆ ಕೋರ್ಟ್ಗೆ ಹೋದರೆ ಅಲ್ಲಿ ಅವರನ್ನು ಹುಡುಕುವುದೇ ದುಸ್ತರವಾಗುತ್ತಿತ್ತು. ಯಾಕೆಂದರೆ ಅವರು ಸದಾ ಫೈಲ್‌ಗಳಲ್ಲಿ ಮಗ್ನವಾಗಿರುತ್ತಿದ್ದರು. ಹೆಚ್ಚಾಗಿ ತಮ್ಮ ಸಮಾಜಕ್ಕೆ ಸೇರಿದ ಬಡಜನರಿಗೆ ಸಂಬ೦ಧಿಸಿದ ಭೂಸುಧಾರಣೆ ಸಂಬ೦ಧಿ ಕಡತಗಳನ್ನು ಹುಡುಕಿ ಅವುಗಳ ಸೂಕ್ತ ವಿಲೇವಾರಿಗಾಗಿಯೇ ಅವರು ಬಿಡುವಿನ ವೇಳೆಯನ್ನು ಕಳೆಯುತ್ತಿದ್ದರು. ಅದು ಅವರ ಸಾಮಾಜಿಕ ಬದ್ಧತೆಯ ದ್ಯೋತಕವಾಗಿತ್ತು. ತಳ ಸಮುದಾಯದ ಶ್ರಮಜೀವಿ ಸಮಾಜಕ್ಕೆ ಅಸ್ಮಿತೆ ಕೊಡಿಸಲು ನಿರಂತರ ಶ್ರಮಿಸಿದರು. ಹೀಗೆ ನನ್ನ ತಂದೆಯವರ ಸಾಮಾಜಿಕ ಕಾಳಜಿ, ಬ್ದಧತೆ ಬಗ್ಗೆ ಹೇಳುತ್ತಲೇ ಹೋಗಬಹುದು. ಊಟ-ತಿಂಡಿ-ನಿದ್ದೆಯನ್ನೂ ಮರೆತು ಅವರು ಕಾರ್ಯ ನಿರ್ವಹಿಸುತ್ತಿದ್ದರು ಎನ್ನುವ ಒಂದೇ ಸಾಲಿನಲ್ಲಿ ಅವರ ಈ ಗುಣವನ್ನು ಹಿಡಿದಿಡಬಹುದಾಗಿದೆ.
ನನ್ನಲ್ಲೇನಾದರೂ ಒಂಚೂರು ಸಾಮಾಜಿಕ ಕಾಳಜಿ ಎನ್ನುವುದು ಏನಾದರೂ ಇದ್ದಲ್ಲಿ ಅದು ತಂದೆಯವರ ಬಳುವಳಿಯೇ ಹೌದು. ಅವರ ಸಾಮಾಜಿಕ ಚಟುವಟಿಕೆಗಳನ್ನು ಬಾಲ್ಯದಿಂದಲೂ ಕಾಣುತ್ತಿದ್ದ ನನಗೆ ಅವರೇ ಪ್ರೇರಕ ಶಕ್ತಿ.ಮೇಣದ ಬತ್ತಿಯಂತೆ ತಾನು ಉರಿದು ಸುತ್ತಲಿನವರಿಗೆ ಬೆಳಕು ನೀಡುತ್ತಿದ್ದ ನನ್ನ ತಂದೆ ನಮ್ಮೆಲ್ಲರ ಹೃದಯದಲ್ಲಿ ವಿರಾಜಮಾನರಾಗಿದ್ದಾರೆ. ಹಾಗಂತ, ನಮ್ಮ ತಂದೆಯವರಿಗಿಂತ ಮುನ್ನ ಖಾರ್ವಿ ಸಮಾಜದಲ್ಲಿ ಸಾಮಾಜಿಕ ಕಾಳಜಿ ಯಾರಲ್ಲೂ ಇದ್ದಿರಲಿಲ್ಲ ಎಂದಾಗಲೀ ಆನಂತರದಲ್ಲಿ ಸಮಾಜದಲ್ಲಿ ಆದ ಬದಲಾವಣೆಗಳಿಗೆ ತಂದೆಯವರೊಬ್ಬರೇ ಕಾರಣರೆಂದು ಹೇಳುವುದಾಗಲೀ ನನ್ನ ಉದ್ದೇಶವಲ್ಲ. ಆದರೆ ಸಾಮಾಜಿಕ ಕಾಳಜಿಗೊಂದು ಮೂರ್ತರೂಪ ಕೊಟ್ಟು ಅರವಿನ ದಿಗಂತನವನ್ನು ವಿಸ್ತರಿಸುವಲ್ಲಿ ಅವರ ಪಾತ್ರ ಅಪಾರವಾದುದು, ಅನನ್ಯವಾದುದು ಎನ್ನುವುದು ಮಾತ್ರ ಅಲ್ಲಗಳೆಯಲಾಗದ ಸಂಗತಿ. ಸಾಮಾಜಿಕ ಕಾರ್ಯ ಎಂಬುದಕ್ಕೆ ಜೀವಂತ ಪರ್ಯಾಯ ಪದದಂತಿದ್ದ ಅವರು ಹಚ್ಚಿದ ಜ್ಞಾನದ ಹಣತೆಯಲ್ಲಿ ಜೀವನದ ಬೆಳಕನ್ನು ಕಂಡವರು, ಅವರ ಇತರೆ ಕಾರ್ಯ, ಮಾರ್ಗದರ್ಶನಗಳಿಂದ ನೆರವು ಪಡೆದವರು ಆದಿಯಾಗಿ ಎಲ್ಲರೂ ಅವರನ್ನು ನೆನೆಸುತ್ತಾ ಆ ದೀಪದ ಬೆಳಕು ಅದರಂತೆ ಮುಂದಕ್ಕೊಯ್ಯುವುದೇ ಅವರಿಗೆ ಸಲ್ಲಿಸುವ ಗೌರವವಾಗುತ್ತದೆ.
ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ ಎನ್ನುವುದು ಇದಕ್ಕೆ ತಾನೆ?. ಆರಂಭದಲ್ಲೇ ಹೇಳಿರುವಂತೆ, ಅವರ ಋಣವನ್ನು ತೀರಿಸಲಿಕ್ಕಾಗಿ ಅವರ ಜಾನಪದ ಸೊಗಡಿನ ಕೊಂಕಣಿ ಕವನಗಳನ್ನು ಹಾಗೂ ಬೆರಳೆಣಿಕೆಯ ಕನ್ನಡ ಕವನಗಳನ್ನು ದಾಖಲಿಸಬೇಕು ಎಂಬ ಹಂಬಲ ಅನೇಕ ವರ್ಷಗಳಿಂದ ನನ್ನಲ್ಲಿತ್ತು. ಇಂಥದ್ದೊಂದು ಕೃತಿಗೆ ಅವರು ಅತ್ಯಂತ ಅರ್ಹರು. ಈ ಮೂಲಕವಾದರೂ ಅವರ ನೆನಪನ್ನು ಅಕ್ಷರ ರೂಪದಲ್ಲಿ ದಾಖಲಿಸುವುದು ಅಗತ್ಯ ಎಂದು ಭಾವಿಸಿ ಇದನ್ನು ಅವರ ಆತ್ಮೀಯ ಬಳಗಕ್ಕೆ ಸೇರಿದವರಾದ ಪ್ರೊ. ಎ.ವಿ. ನಾವಡ ಮತ್ತು ಡಾ.ನಾ ಡಿಸೋಜರಲ್ಲಿ ವಿವರಿಸಿದಾಗ ಇಬ್ಬರೂ ಪ್ರೀತಿಯಿಂದ ಒಪ್ಪಿ ಲೇಖನಗಳನ್ನು ಬರೆದುಕೊಟ್ಟರು. ಶಿಪಾಯಿ ಗಣಪತಿ ಚಿಕ್ಕಪ್ಪ ಕೂಡ ಲೇಖನವನ್ನು ಕೊಟ್ಟರು. ತಂಗಿ ಕೆ.ವಿ ವೀಣಾಕುಮಾರಿ ಕೂಡ ಲೇಖನ ಬರೆದಿದ್ದಾಳೆ.
ತಂದೆಯವರ ಕವನಗಳನ್ನು ಪುಸ್ತಕ ರೂಪದಲ್ಲಿ ತರಬೇಕೆಂದು ನಿರ್ಧರಿಸಿದಾಗ ಎದುರಾದ ದೊಡ್ಡ ಪ್ರಶ್ನೆ ಅವುಗಳು ಸಿಗುತ್ತವೆಯೇ ಎನ್ನುವುದು. ಆಗಲೇ ಹೇಳಿರುವಂತೆ ಅವರು ಪ್ರಚಾರ ಪ್ರಿಯರಲ್ಲ. ಹಾಗಾಗಿ ಬರಹಗಳನ್ನು ಸರಿಯಾಗಿ ಇಟ್ಟಿದ್ದಾರೋ ಇಲ್ಲವೋ ಎಂಬ ಚಿಂತೆ ಸಹಜವಾಗಿಯೇ ಕಾಡಿತ್ತು. ಆದರೆ ಅಚ್ಚರಿ ಎನ್ನುವಂತೆ ಅವರು ತಮ್ಮ ಎಲ್ಲಾ ಕವನಗಳನ್ನು ಒಂದು ಪುಸ್ತಕದಲ್ಲಿ ಬರೆದಿಟ್ಟಿದ್ದು ಅದನ್ನು ಸೋದರ ಸಂಜು (ಕೆ.ವಿ. ಸಂಜಯಕುಮಾರ್) ಹುಡುಕಿ ಕೊಟ್ಟಿದ್ದಾನೆ. ಮನುಷ್ಯ ಬದುಕಿದ್ದಾಗಿನದಕ್ಕಿಂತ ಅವರು ನಮ್ಮಿಂದ ದೂರವಾದಾಗ ಅವರ ಮಹತ್ವ ಅರಿವಾಗುತ್ತದೆ ಎಂಬ ಮಾತು ತಂದೆಯವರ ವಿಚಾರದಲ್ಲೂ ನಿಜವಾಯಿತು ಅನಿಸುತ್ತದೆ. ಅವರು ಬದುಕಿದ್ದಾಗಲೇ ಕೃತಿಯನ್ನು ತಂದಿದ್ದರೆ ಚೆನ್ನಾಗಿತ್ತು ಎಂಬ ವಿಷಾದ ಈಗ ಕಾಡುತ್ತದೆ. ಅವರ ನಿಧನದ ನಂತರದಲ್ಲಿ ಪ್ರಕಟಿಸಬೇಕೆಂದು ಹೊರಟರೂ ಕಾರಣಾಂತರಗಳಿಂದ ಸಾಧ್ಯವಾಗಿರಲಿಲ್ಲ. ಇದಕ್ಕಾಗಿ ‘ಸಾರಿ ಬಾಪ್ಪಾ’ ಅನ್ನುವಾಗಲೇ, ‘ಬೆಟರ್ ಲೇಟ್ ದ್ಯಾನ್ ನೆವರ್’ ಎಂಬ ನುಡಿಯಂತೆ ಈಗಲಾದರೂ ಇದನ್ನು ಹೊರತರಲು ಸಾಧ್ಯವಾಗುತ್ತಿರುವುದಕ್ಕೆ ಸಂತೋಷವಿದೆ. ಅಪ್ಪ ಬದುಕಿದ್ದಿದ್ದರೆ ಈಗ 90 ವರ್ಷ ತುಂಬುತ್ತಿತ್ತು. 80 ವರ್ಷಗಳ ತುಂಬು ಜೀವನವನ್ನು ಅರ್ಥಪೂರ್ಣವಾಗಿ ಬದುಕಿದ ಅವರಿಗೆ ಇದು ಅಕ್ಷರಶಃ ಅಕ್ಷರ ನಮನ. ತಂದೆಯವರು ನಿಧನರಾಗಿ ಒಂದು ದಶಕ ತುಂಬುತ್ತಿರುವ ವರ್ಷ (2019), ಅವರ ಮಾನಸ ಶಿಶು ‘ವಿದ್ಯಾರಂಗ ಮಿತ್ರಮಂಡಳಿ’ಯ ಸುವರ್ಣ ಮಹೋತ್ಸವ ವರ್ಷವೂ ಹೌದು. ಇಂಥದ್ದೊಂದು ವಿಶೇಷ ವರ್ಷದಲ್ಲಿ ಈ ಕೃತಿ ಪ್ರಕಟವಾಗುತ್ತಿರುವುದು ಕಾಕತಾಳೀಯವಾದರೂ ಇದೊಂದು ಸಾರ್ಥಕ ಸಂದರ್ಭವೆಂದು ಭಾವಿಸಬಹುದಾಗಿದೆ.
ಪುಸ್ತಕ ತರುವ ವಿಚಾರವಾಗಿ ಒಕ್ಕೊರಲಿನಿಂದ ಸಹಮತ ನೀಡಿ ಸಹಕರಿಸಿದ ಅಣ್ಣ ಕೆ.ವಿ. ವಿಜಯಕುಮಾರ್, ತಮ್ಮಂದಿರಾದ ಕೆ.ವಿ ವಿವೇಕ್ (ವಿಕ್ಕಿ), ಕೆ.ವಿ ಅಶೋಕಕುಮಾರ್, ಕೆ.ವಿ. ಸಂಜಯಕುಮಾರ್, ತಂಗಿಯರಾದ ಕೆ.ವಿ. ಉಷಾಕುಮಾರಿ, ಕೆ.ವಿ ವೀಣಾಕುಮಾರಿ, ಬಾವಂದಿರಾದ ನೃತ್ಯ ವಿದ್ವಾನ್ ಎಸ್, ಎಮ್ ಸುಧೀರ್ ಮತ್ತು ಕುಂದಾಪುರ ಪುರಸಭೆ ಸದಸ್ಯ ಎಚ್.ಎನ್.ಚಂದ್ರಶೇಖರ್ ಖಾರ್ವಿ ಇವರಿಗೆ ಧನ್ಯವಾದಗಳು. ನನ್ನ ಕಾರ್ಯದಲ್ಲಿ ಸಹಕರಿಸಿದ ಪತ್ನಿ ಮಮತಾ ಕುಂದಾಪುರ, ಮಗ ದೀಪಕ್ ಕುಂದಾಪುರ ಹಾಗೂ ಮಗಳು ದೀಪ್ತಿ ಕುಂದಾಪುರ ಇವರಿಗೂ ನನ್ನ ಧನ್ಯವಾದಗಳು. ಆಪ್ತ ಲೇಖನಗಳನ್ನು ನೀಡಿದ ಪ್ರೊ. ಎ.ವಿ ನಾವಡ, ಡಾ.ನಾ. ಡಿಸೋಜ, ಜಿ.ಗಣಪತಿ ಶಿಪಾಯಿ ಮತ್ತು ಸಹೋದರಿ ವೀಣಾ ಇವರಿಗೂ ಧನ್ಯವಾದಗಳು. ಇನ್ನು ತಾಯಿ ಗಂಗಾಬಾಯಿಯನ್ನು ನೆನೆಯದೇ ಇರಲು ಸಾಧ್ಯವೇ?. ತಂದೆಯವರು ತಮ್ಮ ಸಾಮಾಜಿಕ ಕಾರ್ಯಬಾಹುಳ್ಯದಿಂದಾಗಿ ‘ಕುಟುಂಬದೊಳಗಿದ್ದೂ ಹೊರಗಿದ್ದಂತೆ ಇದ್ದಾಗ’ ಆರ್ಥಿಕವಾಗಿಯೂ ಕೌಟುಂಬಿಕವಾಗಿಯೂ ಅನೇಕ ಕೌಟುಂಬಿಕ ಸಂಕಷ್ಟ, ತಾಪತ್ರಯ, ಕಿರಿಕಿರಿಗಳ ನಡುವೆಯೂ ದೊಡ್ಡ ಕುಟುಂಬವನ್ನು ಸಲಹಿದ ಆ ಮಹಾಮಾತೆಗೆ ಹೃದಯಪೂರ್ವಕ ನಮನಗಳು.
ಕೃತಿಯ ಯೋಜನೆ ಬಗ್ಗೆ ಹೇಳುತ್ತಲೇ ಇದನ್ನು ಪ್ರಕಟಿಸಲು ಒಪ್ಪಿದ ಆತ್ಮೀಯ ಗೆಳೆಯರೂ ಆದ ‘ಜನಪ್ರತಿನಿಧಿ ಪ್ರಕಾಶನ’ದ ಸುಬ್ರಹ್ಮಣ್ಯ ಪಡುಕೋಣೆ ಇವರಿಗೂ ಕೃತಜ್ಞತೆಗಳು.
ವಿಶ್ವ ಕುಂದಾಪುರ
ಕೋಲಾರ
ಖಾರ್ವಿ ಸಮಾಜದ “ಜ್ಞಾನ ಭಂಡಾರ” ಶ್ರೀ ವಾಸುದೇವ್ ನಾಯ್ಕ್ ರವರಿಗೆ ಪ್ರಣಾಮಗಳು,,,
ವಾಸುದೇವ ಮಾವ ಅವರ ಬಗ್ಗೆ ಓದಿ ತುಂಬಾ ಸಂತೋಷವಾಯ್ತು. ಅವರು ನಮಗೆಲ್ಲಾ ಸದಾ ಬೆಳಕಾಗಿದ್ದರು. ನನಗೆ ತಿಳಿಯದ ಅವರ ಅದೆಷ್ಟೋ ಸಾಧನೆ ಹಾಗೂ ಸಮಾಜಮುಖಿ ಕೆಲಸಗಳನ್ನು ಈ ಲೇಖನ ಓದಿ ತಿಳಿದುಕೊಂಡೆ. ಪುಸ್ತಕ ಬಿಡುಗಡೆಗೆ ಶುಭಾಶಯ.