ಈಜು ಕ್ಷೇತ್ರದ ಮಹಾನ್ ಸಾಧಕ ಗೋಪಾಲ್ ಖಾರ್ವಿ ಕೋಡಿಕನ್ಯಾನ

ಬದುಕು ಛಲವನ್ನು ಕಲಿಸಬೇಕು ಎದುರಾದ ಕಠಿಣ ಕ್ಷಣಗಳನ್ನು ಎದುರಿಸುವ ನರಮಂಡಲ ಹುರಿಗಟ್ಟಬೇಕು ಇಲ್ಲದಿದ್ದರೆ ಏನೂ ಸಾಧಿಸಲು ಸಾಧ್ಯವಿಲ್ಲ ವಿಶ್ವದ ಪರಮೋಚ್ಚ ಗಿನ್ನಿಸ್ ದಾಖಲೆಯಲ್ಲಿ ತನ್ನ ಹೆಸರನ್ನು ದಾಖಲಿಸಿದ ಉಡುಪಿ ಜಿಲ್ಲೆಯ ಈಜುಪಟು ಗೋಪಾಲ ಖಾರ್ವಿಯವರ ಅದ್ಬುತ ಸಾಧನೆಯನ್ನು ಅವಲೋಕಿಸಿದಾಗ ಇಂತಹ ಅಭಿಮತ ಖಂಡಿತಾ ಮೂಡುತ್ತದೆ. ಗೋಪಾಲ ಖಾರ್ವಿಯವರ ಹುಟ್ಟೂರು ಉಡುಪಿ ಜಿಲ್ಲೆಯ ಕೋಡಿಕನ್ಯಾನ ಪಡುವಣದಲ್ಲಿ ಅರಬ್ಬೀ ಸಮುದ್ರ, ಮೂಡಣದಿ ಸ್ವರ್ಣಾ ನದಿಯ ನಡುಮಧ್ಯೆ ವಿರಾಜಮಾನವಾಗಿರುವ ಕೋಡಿಕನ್ಯಾನ ಕಲ್ಪವೃಕ್ಷಗಳ ಚಪ್ಪರದಿಂದ ಅಲಂಕೃತಗೊಂಡಿದೆ ನಡುನೆತ್ತಿಯ ಸೂರ್ಯನ ಕಿರಣಗಳು ಕೂಡಾ ಪ್ರವೇಶಿಸದ ತಂಪಾದ ನೆಲ ಒಂದೆಡೆ ಶರಧಿ, ಇನ್ನೊಂದೆಡೆ ನದಿ ಈ ನೀಲಿಮೆಯ ಹರವುಗಳು ಗೋಪಾಲ ಖಾರ್ವಿಯವರ ಈಜು ಸಾಮ್ರಾಜ್ಯಕ್ಕೆ ಹೃದಯಂಗಮವಾಗಿ ತೆರೆದುಕೊಂಡವು ತಮ್ಮ ತೆಕ್ಕೆಯಲ್ಲಿ ಗೋಪಾಲ ಖಾರ್ವಿಯೆಂಬ ಮಹಾನ್ ಛಲವಂತ ಈಜುಪಟುವನ್ನು ಅಕ್ಕರೆಯಿಂದ ಪೋಷಿಸಿತು.

ಈಜು, ಕ್ರಿಕೆಟ್ ಮತ್ತು ಇತರ ಕ್ರೀಡೆಗಳಲ್ಲಿ ಪ್ರಾವೀಣ್ಯತೆ ಸಾಧಿಸಿರುವ ಗೋಪಾಲ್ ಖಾರ್ವಿಯವರ ಬಹುಮುಖ ಪ್ರತಿಭೆಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಸಂದಿವೆ ಮುಖ್ಯವಾಗಿ ಇವರ ಈಜುವಿಕೆಯಲ್ಲಿ ಅಸಾಧಾರಣ ಮತ್ತು ಅದ್ಬುತ ಸಾಧನೆಯ ಚೈತ್ರಯಾತ್ರೆ ದಿಗ್ವಿಜಯ ಸಾಧಿಸಿದೆ ಇದರ ಐತಿಹಾಸಿಕ ಮೈಲಿಗಲ್ಲಾಗಿ ಮಲ್ಪೆ ಸಮುದ್ರ ತೀರದಲ್ಲಿ ಕೈಕಾಲುಗಳಿಗೆ ಸರಪಳಿ ಬಿಗಿದು 3.71 ಕೀಮೀ ದೂರವನ್ನು ಬೃಹತ್ ಅಲೆಗಳ ಸಂಕಷ್ಟದ ನಡುವೆ ಕೇವಲ 2 ಗಂಟೆ 43 ನಿಮಿಷ 35 ಸೆಕೆಂಡ್ ಗಳಲ್ಲಿ ಈಜಿ ಗಿನ್ನಿಸ್ ದಾಖಲೆ ನಿರ್ಮಿಸಿದ್ದಾರೆ. 2003 ಡಿಸೆಂಬರ್ 1 ರಂದು ನಡೆದ ಗೋಪಾಲ್ ಖಾರ್ವಿಯವರ ಅದ್ಬುತ ಸಾಧನೆ ಅಚ್ಚಳಿಯದ ದಾಖಲೆಯಾಗಿ ಉಳಿದಿದೆ. ಇದಕ್ಕೂ ಮುನ್ನ ಅವರು 2009 ರಲ್ಲಿ ಸೈಂಟ್ ಮೇರಿಸ್ ದ್ವೀಪದಿಂದ ಮಲ್ಪೆ ಕಡಲಕಿನಾರೆಯ ತನಕ 15 ಕೀಮೀ ದೂರವನ್ನು 3 ಗಂಟೆ 26 ನಿಮಿಷ 40 ಸೆಕೆಂಡ್ ಗಳಲ್ಲಿ ಕೈಕಾಲುಗಳಿಗೆ ಹಿಂದಿನಿಂದ ಕೋಳ ಬಿಗಿದುಕೊಂಡು ಸಮುದ್ರದಲ್ಲಿ ಈಜಿ ಲಿಮ್ಕಾ ನ್ಯಾಷನಲ್ ರೆಕಾರ್ಡ್ ಸ್ಥಾಪಿಸಿದ್ದರು. 2004 ರಲ್ಲಿ ಮಲ್ಪೆ ಕಡಲತೀರದಿಂದ ಗಂಗೊಳ್ಳಿ ಕಡಲತೀರದ ತನಕ ಸುಮಾರು 80 ಕೀಮೀ ದೂರವನ್ನು 11.30 ಗಂಟೆಯ ಅವಧಿಯಲ್ಲಿ ಈಜಿ ಗುರಿ ತಲುಪಿದ್ದರು.

ಇವರ ಅಪ್ರತಿಮ ಮತ್ತು ಅದ್ಬುತ ಸಾಧನೆಗಾಗಿ 2005 ರಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಮತ್ತು 2010 ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳು ಸಂದಿದೆ. ಕರ್ನಾಟಕದ ಶ್ರೇಷ್ಠ ಪ್ರಶಸ್ತಿಗಳು ಗೋಪಾಲ್ ಖಾರ್ವಿಯವರಿಗೆ ಸಂದಿರುವುದು ನಿಜಕ್ಕೂ ಹೆಮ್ಮೆಯ ವಿಚಾರವಾಗಿದೆ. ಸಮುದ್ರದಲ್ಲಿ ಬೀಸೋ ಗಾಳಿಯ ನಡುವೆ ದೈತ್ಯಾಕಾರದ ಕಡಲಲೆಗಳ ಆರ್ಭಟಕ್ಕೆ ಎದೆಯೊಡ್ಡಿ ಈಜುವುದು ಸಾಮಾನ್ಯದ ಮಾತಲ್ಲ. ಅದರಲ್ಲೂ ಕೈಕಾಲುಗಳಿಗೆ ಬೆನ್ನ ಹಿಂದೆ ಸರಪಳಿ ಬಿಗಿದು ಸಮುದ್ರದಲ್ಲಿ ಈಜುವುದೆಂದರೆ ಅದೊಂದು ಅಸಾಮಾನ್ಯ ಸಂಗತಿ. ಈ ಅದ್ಬುತ ಸಾಧನೆಗೆ ಧೈರ್ಯ, ಏಕಾಗ್ರತೆ, ನಿರಂತರ ಪ್ರಯತ್ನವಿರಬೇಕು. ಗೋಪಾಲ್ ಖಾರ್ವಿಯವರ ಅಭೂತಪೂರ್ವ ಸಾಧನೆಯನ್ನು ಮನಗಂಡ ಕರ್ನಾಟಕದ ಸರಕಾರವು ಕರ್ನಾಟಕದ ಕೊಂಕಣಿ 9 ನೇ ತರಗತಿಯ ಶಾಲಾ ಪಠ್ಯಪುಸ್ತಕದಲ್ಲಿ ಜೀವನ ಚರಿತ್ರ ಗೋಪಾಲ್ ಖಾರ್ವಿ ಎಂಬ ಪಾಠವನ್ನು ಪ್ರಕಟಿಸಿದೆ. ಇದು ಅವರ ಸಾಧನೆಗೆ ಸಂದ ಅತ್ಯುನ್ನತ ಸಾರ್ವಕಾಲಿಕ ಗೌರವವಾಗಿದೆ. ಸಾಧಕನೊಬ್ಬನು ಗುರಿ ತಲುಪಬೇಕಾದರೆ ತನ್ನೊಂದಿಗೆ ತಾನೇ ಸೆಣಸುವ, ತನ್ನಸಾಮಾನ್ಯತೆಯನ್ನು ಮೀರುವ, ತನ್ನ ಆಳದ ವ್ಯಕ್ತಿತ್ವದ ಸಂಪತ್ತನ್ನು ಬಳಸಿಕೊಳ್ಳುವ ಶಕ್ತಿಯನ್ನು ಪಡೆದಿರಬೇಕು. ಇದನ್ನು ತಿಳಿದರೆ ಆತನ ಸಾಧನೆ ಪ್ರಜ್ವಲಿಸುತ್ತದೆ. ಗೋಪಾಲ್ ಖಾರ್ವಿಯವರು ಈ ಮಾತುಗಳಿಗೆ ಉತ್ತಮ ಉದಾಹರಣೆಯಾಗುತ್ತಾರೆ.

ಗಿನ್ನಿಸ್ ದಾಖಲೆ ವೀರ ಗೋಪಾಲ್ ಖಾರ್ವಿಯವರಿಗೆ ಭಾರತ ಮತ್ತು ಅಮೆರಿಕನ್ ವಿಶ್ವವಿದ್ಯಾಲಯವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳಾದ BEST SPORTS ACHIVER AWARD ಮತ್ತು CERTIFICATE OF EXCELLENCE AWARD ನೀಡಿ ಗೌರವಿಸಿದೆ ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾದ ಶ್ರೀ ರಾಮದಾಸ್ ರವರು ಏಪ್ರಿಲ್ 26 ರಂದು ನವದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ಪ್ರಶಸ್ತಿಯನ್ನು ಗೋಪಾಲ್ ಖಾರ್ವಿಯವರಿಗೆ ನೀಡಿ ಗೌರವಿಸಿದರು.

ಗೋಪಾಲ್ ಖಾರ್ವಿಯವರು ಸಣ್ಣ ವಯಸ್ಸಿನಲ್ಲೇ ಅಪ್ರತಿಮ ಸಾಧನೆಗೈದವರು. ಅವರ ಸಾಧನೆ ಅಳಿಸಲಾಗದ ಹೆಜ್ಜೆಗುರುತುಗಳಾಗಿ ಪಠ್ಯಪುಸ್ತಕದಲ್ಲಿ ಪಡಿಮೂಡಿದೆ. ಅವರ ಸ್ಪೂರ್ತಿದಾಯಕ ವ್ಯಕ್ತಿತ್ವ ಎಲ್ಲರಿಗೂ ಆದರ್ಶಪ್ರಾಯವಾಗಿದೆ. ಕೊಂಕಣಿ ಖಾರ್ವಿ ಸಮಾಜದ ಹಿರಿಮೆಯನ್ನು ಮುಗಿಲೆತ್ತರಕ್ಕೆ ಹಾರಿಸಿದ ಗೋಪಾಲ್ ಖಾರ್ವಿಯವರಿಗೆ ಖಾರ್ವಿ ಆನ್ಲೈನ್ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತದೆ.

ಸುಧಾಕರ್ ಖಾರ್ವಿ
Editor
www.kharvionline.com

Leave a Reply

Your email address will not be published. Required fields are marked *