ಈ ಬಾರಿಯ ಮುಂಗಾರು ಹಲವು ಸ್ಥಿತ್ಯಂತರಗಳಿಗೆ ನಾಂದಿ ಹಾಡಿದೆ ಹವಾಮಾನ ವೈಪರೀತ್ಯಗಳ ಕಠಿಣತಮ ಸನ್ನಿವೇಶಗಳನ್ನು ಸೃಷ್ಟಿಸಿದರೂ ಅಂತಿಮವಾಗಿ ಮೀನುಗಾರಿಕೆ ಮತ್ತು ಕೃಷಿ ಕ್ಷೇತ್ರಕ್ಕೆ ಪ್ರಯೋಜನವನ್ನು ಮಾಡಿಕೊಟ್ಟಿರುವುದು ಗಮನಾರ್ಹ ಸಂಗತಿ ಮೀನುಗಾರಿಕೆ ಕ್ಷೇತ್ರಕ್ಕೆ ಮತ್ಸ್ಯ ಸಮೃದ್ಧಿ ಮಾಡಿಕೊಟ್ಟರೆ, ಕೃಷಿ ಕ್ಷೇತ್ರಕ್ಕೆ ಭತ್ತದ ಕೊಯ್ಲು ಕಾರ್ಯಕ್ಕೆ ಒಂದಿಷ್ಟು ಅನುಕೂಲ ಮಾಡಿಕೊಟ್ಟಿದೆ. ದೀಪಾವಳಿ ಹಬ್ಬಕ್ಕೆ ಮೂರು ದಿನ ಮೊದಲು ಮಳೆ ಸ್ಥಗಿತಗೊಂಡಿತ್ತು ಕಳೆದ ಆಗಸ್ಟ್ ತಿಂಗಳಲ್ಲಿ ಸಮುದ್ರದಲ್ಲಿ ತಂಪಾದ ಹೊಗೆನೀರು ಉತ್ಪನ್ನವಾಗಿ ತೀರದಲ್ಲಿ ಮೀನುಗಾರರಿಗೆ ರಾಶಿ ರಾಶಿ ಗೊಬ್ರಾ ಮೀನುಗಳು ಸಿಕ್ಕಿದ್ದವು ಕಳೆದ ಎರಡು ಮೂರು ವಾರಗಳ ಹಿಂದೆ ಮೀನುಗಾರರಿಗೆ ಭರಪೂರ ಬಂಗ್ಡೆಮೀನುಗಳು ಸಿಕ್ಕಿದ್ದವು.
ಇದರ ಬೆನ್ನಲ್ಲೇ ದೀಪಾವಳಿ ಅಮವಾಸ್ಯೆಯ ನಂತರದ ಮೂರ್ನಾಲ್ಕು ದಿನ ವಿಲಕ್ಷಣ ವಿದ್ಯಮಾನವೆಂಬಂತೆ ಮುರ್ಡೇಶ್ವರದಲ್ಲಿ ಸಮುದ್ರ 500ಮೀಟರ್ ಹಿಂದಕ್ಕೆ ಸರಿದು ಯಥೇಚ್ಛವಾಗಿ ಕಡಲ ಮಳಿವೆಗಳು ಮೇಲಕ್ಕೆ ಎದ್ದು ಬಂದವು.ಮಳಿವೆಗಳ ಭರಪೂರ ಸುಗ್ಗಿ.ಮಳಿವೆಗಳನ್ನು ಸಂಗ್ರಹಿಸಲು ಮುರ್ಡೇಶ್ವರ ಕಡಲತೀರದಿಂದ ಅಳ್ವೇಕೋಡಿ ಕಡಲಕಿನಾರೆಯ ತನಕವೂ ನಾಲ್ಕು ಕೀಮೀ ವ್ಯಾಪ್ತಿಯಲ್ಲಿ ನಿರಂತರ ನಾಲ್ಕು ದಿನಗಳ ಕಾಲ ಜನಜಾತ್ರೆ ನೆರೆದಿತ್ತು. ಅಮವಾಸ್ಯೆ ಹುಣ್ಣಿಮೆಯ ಸಂದರ್ಭದಲ್ಲಿ ಮಳಿವೆಗಳು ಕಡಲತಡಿಯಲ್ಲಿ ಸಿಗುವುದು ಸಾಮಾನ್ಯ ಸಂಗತಿಯಾದರೂ ಈ ಪರಿಯಲ್ಲಿ ರಾಶಿ ರಾಶಿ ಮಳಿವೆ ಸಿಗುತ್ತಿರುವುದು ಮತ್ತು ಸಮುದ್ರ 500 ಮೀಟರ್ ಹಿಂದಕ್ಕೆ ಸರಿದಿದ್ದು ಇದೇ ಪ್ರಥಮ ಎನ್ನುತ್ತಾರೆ ಸ್ಥಳೀಯ ಮೀನುಗಾರರು.
ವಿಚಿತ್ರವೆಂದರೆ ಮುರ್ಡೇಶ್ವರ ದೇಗುಲದ ಎಡಬದಿಯಲ್ಲಿ ಅಂತಹ ಯಾವ ವಿದ್ಯಮಾನ ನಡೆಯದೇ ಸಹಜ ಸ್ಥಿತಿ ಇತ್ತು. ಬದಲಾವಣೆ ಪರಿಸರದ ಮೂಲಭೂತವಾದ ಗುಣ ಇಲ್ಲಿ ಕೆಲವೊಂದು ಬದಲಾವಣೆಗಳು ವೇಗವಾಗಿ ನಿರಂತರ ನಡೆಯುತ್ತಿದ್ದರೆ ಮತ್ತೆ ಕೆಲವು ಬದಲಾವಣೆಗಳು ಉಂಟಾಗಲು ನೂರಾರು ವರ್ಷಗಳು ಬೇಕು ಪ್ರತಿಯೊಂದು ಬದಲಾವಣೆಯ ಪರಿಣಾಮವು ವ್ಯವಸ್ಥೆಯ ಮೇಲಿನ ಇಡಿಯಾಗಿಯೂ ಮತ್ತು ಅದರ ಜೀವಿಗಳ ಮೇಲೆ ಪ್ರತ್ಯೇಕವಾಗಿಯೂ ಆಗುತ್ತಲೇ ಇರುತ್ತದೆ. ಸಮುದ್ರದಲ್ಲಿ ಸಂಭವಿಸುವ ನೈಸರ್ಗಿಕ ಪ್ರಕ್ರಿಯೆಗಳು ಪ್ರಕೃತಿಯ ಪುನಶ್ಚೇತನ ಶಕ್ತಿಯನ್ನು ಮತ್ತು ಧಾರಣ ಶಕ್ತಿಯನ್ನು ಮತ್ಸ್ಯ ಸಮೃದ್ಧಿಯ ರೂಪದಲ್ಲಿ ಅನಾವರಣಗೊಳಿಸಿದೆ ಇದಕ್ಕೆ ಮುಖ್ಯವಾದ ಕಾರಣವೆಂದರೆ ಈ ಬಾರಿ ವಾಡಿಕೆಗಿಂತ 20 ಶೇಕಡಾದಷ್ಟು ಸುರಿದ ಮುಂಗಾರು ಮಳೆ ಈ ಮಹಾಮಳೆ ಭೂಮಿಯ ಒಡಲನ್ನು ಅಸಾಮಾನ್ಯ ರೀತಿಯಲ್ಲಿ ತಂಪಾಗಿಸಿದೆ. ಜೀವಗೋಳವು ಭೂಮಿಯ ಹೊರಪದರವಾಗಿದ್ದು ಜೈವಿಕ ವಸ್ತುಗಳು ಮತ್ತು ಅವುಗಳ ಪರಿಸರವನ್ನು ಹೊಂದಿರುತ್ತದೆ.ಇದು 24 ಕೀಮೀ.ಗಿಂತಲೂ ಕಡಿಮೆ ಆಳವಿದ್ದು ಸಾಗರದ ತಳದಿಂದ ವಾಯುಗೋಳದ ವಿವಿಧ ಸ್ಥರಗಳಲ್ಲಿ ಹಬ್ಬಿರುತ್ತದೆ ಜೀವಿಗಳ ಇರುವಿಕೆ ಕಂಡುಬರುವುದೇ ಇಲ್ಲಿ ಪ್ರಕೃತಿ ವಿಸ್ಮಯಗಳ ಆಗರ ಇಲ್ಲಿ ನಡೆಯುವ ಪ್ರತಿಯೊಂದು ವಿದ್ಯಮಾನಗಳು ಕ್ರಿಯಾಕಾರಣ ಸಂಬಂಧಗಳನ್ನು ಹೊಂದಿರುವುದರಿಂದ ಭೂಮಿಯ ಮೇಲಿನ ಅತ್ಯಂತ ಜವಾಬ್ದಾರಿವುಳ್ಳವರಾದ ನಾವುಗಳು ಪ್ರಕೃತಿಗೆ ವಿಧೇಯರಾಗಿರಬೇಕು.
ಮುರ್ಡೇಶ್ವರ ಸಮುದ್ರ ತೀರದಲ್ಲಿ ನಡೆದ ಈ ವಿದ್ಯಮಾನವನ್ನು ಕೆಲವರು ಸುನಾಮಿಯೊಂದಿಗೆ ಹೋಲಿಕೆ ಮಾಡುತ್ತಿದ್ದಾರೆ 2004 ರಲ್ಲಿ ತಮಿಳುನಾಡು ನಾಗಪಟ್ಟಣಂ ಕಡಲತೀರದಲ್ಲಿ ಸುನಾಮಿ ಸಂಭವಿಸುವ ಕೆಲವೇ ಕ್ಷಣದ ಮೊದಲು ಸಮುದ್ರದ ನೀರು ತುಂಬಾ ಹಿಂದಕ್ಕೆ ಹೋಗಿ ಬಳಿಕ ಅತ್ಯಂತ ವೇಗದಲ್ಲಿ ಮುಂದೆ ಬಂದು ವಿನಾಶಕಾರಿ ಸುನಾಮಿ ಸಂಭವಿಸಿತ್ತು ಆದರೆ ಇದು ಸಮುದ್ರದಲ್ಲಿ ಅಮವಾಸ್ಯೆ ಹುಣ್ಣಿಮೆಯಂದು ಸಂಭವಿಸುವ ನೈಸರ್ಗಿಕ ಪ್ರಕ್ರಿಯೆಯಾಗಿದ್ದು, ಯಾರೂ ಭಯ ಪಡುವ ಅವಶ್ಯಕತೆ ಇಲ್ಲ.
ಉಮಾಕಾಂತ ಖಾರ್ವಿ ಕುಂದಾಪುರ