ನೀರಿನಲ್ಲಿ ಬಿದ್ದವರ ಜೀವರಕ್ಷಣೆಯ ಮಾತು ಬಂದರೆ ಥಟ್ಟನೆ ನೆನಪಾಗುವುದು ಭಟ್ಕಳ ಬಂದರಿನ ಮೀನುಗಾರ ಸುರೇಶ್ ಬಸವ ಖಾರ್ವಿಯವರ ಅಪ್ರತಿಮ ಸಾಹಸಗಾಥೆ. ನೀರಿನಲ್ಲಿ ಬಿದ್ದವರ ಜೀವರಕ್ಷಣೆ ವಿಷಯಕ್ಕೂ,ಸುರೇಶ್ ಖಾರ್ವಿಯವರಿಗೂ ಅದೆಂಥ ತಾದಾತ್ಮತೆ .
ಸಾವಿನ ಕದ ತಟ್ಟಿದವರನ್ನು ರಕ್ಷಿಸಲು ದೇವರೇ ಕಳುಹಿಸಿದ ಆಪತ್ಭಾಂಧವನೇನು ಎನ್ನುವಷ್ಟು. SSLC ಕಲಿತಿರುವ ಸುರೇಶ್ ಖಾರ್ವಿಯವರಿಗೆ ಕುಲಕಸಬು ಮೀನುಗಾರಿಕೆ ಹೊಟ್ಟೆಪಾಡಿನ ದುಡಿಮೆಯಾಯಿತು. ಮಂಗಳೂರಿನಲ್ಲಿ ಮೀನುಗಾರಿಕೆ ಉದ್ಯೋಗಕ್ಕಾಗಿ ಮಂಗಳೂರಿನಲ್ಲಿ ಇದ್ದಂತ ಸಂದರ್ಭದಲ್ಲಿ ನಡೆದ ಘಟನೆಯೊಂದು ಸುರೇಶ್ ಖಾರ್ವಿಯವರನ್ನು ನಿರಂತರವಾಗಿ ಜನರ ಜೀವರಕ್ಷಣೆಯ ಮಹಾಕಾರ್ಯದಲ್ಲಿ ತೊಡಗಿಕೊಳ್ಳುವಂತೆ ಮಾಡಿತು.
ಇದು ಇಪ್ಪತ್ತೈದು ವರ್ಷಗಳ ಹಿಂದೆ ನಡೆದ ಜೀವರಕ್ಷಣೆಯ ಕಾರ್ಯವಾಗಿದ್ದು, ಅಂದು ಹತ್ತು ಗಂಟೆ ರಾತ್ರಿಯಲ್ಲಿ ಮಂಗಳೂರು ಬಂದರಿನಲ್ಲಿ ಹುಬ್ಬಳ್ಳಿ ಮೂಲದ ವ್ಯಕ್ತಿಯೊಬ್ಬ ನೀರಿನಲ್ಲಿ ಬಿದ್ದು ರಕ್ಷಣೆಗಾಗಿ ಕೂಗುತ್ತಿದ್ದರು. ಆತನಿಗೆ ಈಜು ಬರುತ್ತಿರಲಿಲ್ಲ ದಡೂತಿ ಕಾಯದ ಆ ವ್ಯಕ್ತಿಯನ್ನು ಕಾಪಾಡಲು ಯಾರೂ ಮುಂದಾಗದೇ ಸುಮ್ಮನೆ ನೋಡುತ್ತಿದ್ದರು ಆ ಮಾರ್ಗವಾಗಿ ಹೋಗುತ್ತಿದ್ದ ಸುರೇಶ್ ಖಾರ್ವಿ ತಡಮಾಡದೇ ನೀರಿಗೆ ಧುಮುಕಿ ಆ ವ್ಯಕ್ತಿಯ ಪ್ರಾಣ ರಕ್ಷಣೆ ಮಾಡಿದ್ದರು. ಇದೇ ಸಂದರ್ಭದಲ್ಲಿ ಸುರೇಶ್ ಖಾರ್ವಿಯವರ ಬೋಟಿನ ಕಾರ್ಮಿಕನೊಬ್ಬ ಸಮುದ್ರಕ್ಕೆ ಬಿದ್ದಿದರು ತಕ್ಷಣವೇ ಸುರೇಶ್ ಖಾರ್ವಿಯವರು ಸಮುದ್ರಕ್ಕೆ ದುಮುಕಿ ಅವರನ್ನು ಸಾವಿನ ದವಡೆಯಿಂದ ಪಾರು ಮಾಡಿದ್ದರು ಸುರೇಶ್ ಖಾರ್ವಿಯವರ ಜೀವರಕ್ಷಣೆಯ ಸಾಹಸಗಾಥೆ ಹೆಚ್ಚು ಪ್ರಚಲಿತಕ್ಕೆ ಬಂದದ್ದು 2016 ರ ಭಟ್ಕಳದ ಮೀನುಗಾರರ ದೋಣಿ ಮುಳುಗಿದ ದುರಂತದಲ್ಲಿ. ಅಂದು ಪ್ರಕೃತಿ ಮುನಿದಿತ್ತು ಕುಂಭದ್ರೋಣ ಮಳೆಯೊಂದಿಗೆ ರಣಭೀಕರ ಗಾಳಿ ಬೀಸುತ್ತಿತ್ತು ಭಟ್ಕಳದಿಂದ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ದೋಣಿ ಮುಳುಗಿ ಮೀನುಗಾರರು ಜೀವನ್ಮರಣ ಸ್ಥಿತಿಯಲ್ಲಿದ್ದರು ಎಂಟು ಗಂಟೆಗಳ ಸತತ ಈಜುವಿಕೆಯಿಂದ ಅವರೆಲ್ಲರೂ ಜೀವಶ್ಚವವಾಗಿದ್ದರು ದೈತ್ಯಾಕಾರದ ಕಡಲಲೆಗಳ ಆರ್ಭಟವನ್ನು ಲೆಕ್ಕಿಸದೇ , ರಣಭೀಕರ ಗಾಳಿಯ ಎದುರು ಹೋರಾಟ ಮಾಡುತ್ತಾ, ಕಾರಿರುಳ ರಾತ್ರಿಯಲ್ಲಿ ಅಸಾಮಾನ್ಯ ಧೈರ್ಯ ಸಾಹಸ ಪ್ರದರ್ಶಿಸಿ ತನ್ನ ಜೀವದ ಹಂಗು ತೊರೆದು ಸುರೇಶ್ ಖಾರ್ವಿಯವರು ಸಮುದ್ರಕ್ಕೆ ಹಾರಿ ಒಬ್ಬೊಬ್ಬರನ್ನೇ ತಂದು ಬೋಟಿನಲ್ಲಿ ಹಾಕಿ ರಕ್ಷಣೆ ಮಾಡಿದದರು ಸುರೇಶ್ ಖಾರ್ವಿಯವರ ಈ ಅಸಾಮಾನ್ಯ ಸಾಹಸ ಪ್ರದರ್ಶನದಿಂದ ಎಂಟು ಜನರ ಜೀವ ಉಳಿಯಿತು ಯಾವ ಹಾಲಿವುಡ್ ಸಿನಿಮಾದ ಸಾಹಸ ದೃಶ್ಯಗಳಿಗೂ ಸುರೇಶ್ ಖಾರ್ವಿಯವರ ಸಾಹಸಗಾಥೆ ಕಡಿಮೆ ಇಲ್ಲ ಹಾಲಿವುಡ್ ಸಿನಿಮಾ ದೃಶ್ಯಗಳು ರೀಲ್ ಆದರೆ ಸುರೇಶ್ ಖಾರ್ವಿಯವರ ಸಾಹಸ ರಿಯಲ್.
2021 ರಲ್ಲಿ ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಮುಂಜಾನೆ 5 ಗಂಟೆಗೆ ಮಹಿಳೆಯೊಬ್ಬಳು ಆಕಸ್ಮಿಕವಾಗಿ ನೀರಿಗೆ ಬಿದ್ದಾಗ ಎಲ್ಲರೂ ನಿಂತು ನೋಡುತ್ತಿದ್ದರು ಆ ಮಹಿಳೆ ಕೆಲವೇ ಸೆಕೆಂಡುಗಳಲ್ಲಿ ಉಸಿರು ಚೆಲ್ಲುತ್ತಿದ್ದರು ತಕ್ಷಣವೇ ನೀರಿಗೆ ಹಾರಿ ಸುರೇಶ್ ಖಾರ್ವಿಯವರು ಆ ಮಹಿಳೆಯ ಪ್ರಾಣ ಕಾಪಾಡಿದರು ಹೀಗೆ ಸುರೇಶ್ ಖಾರ್ವಿಯವರು ಇದುವರೆಗೂ ಸುಮಾರು ಹನ್ನೆರಡು ಜನರನ್ನು ತನ್ನ ಪ್ರಾಣದ ಹಂಗು ತೊರೆದು ಕಾಪಾಡಿದ್ದಾರೆ ಇವರ ಜೀವರಕ್ಷಣೆಯ ಅಪ್ರತಿಮ ಕಾರ್ಯಕ್ಕೆ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿ, ಗೌರವಿಸಿದೆ ಸುರೇಶ್ ಖಾರ್ವಿಯವರ ಅಭೂತಪೂರ್ವ ಸಾಹಸಕಾರ್ಯಕ್ಕೆ ಎಲ್ಲಾ ಕಡೆಯಿಂದಲೂ ಪ್ರಶಂಸೆಯ ಮಹಾಪೂರವೇ ಹರಿದು ಬಂದರೂ ಸರಕಾರದ ವತಿಯಿಂದ ಇದುವರೆಗೂ ಯಾವುದೇ ಪ್ರಶಸ್ತಿಗಳು ದೊರಕಿಲ್ಲ. ಅನೇಕ ಗಣ್ಯರು, ಸಂಸ್ಥೆಗಳು, ಸುರೇಶ್ ಖಾರ್ವಿಯವರ ಹೆಸರನ್ನು ರಾಷ್ಟ್ರಪತಿ ಜೀವರಕ್ಷಕ ಪ್ರಶಸ್ತಿಗೆ ಶಿಫಾರಸು ಮಾಡಿದ್ದಾರೆ. ಹಲವಾರು ಜನರ ಪ್ರಾಣ ರಕ್ಷಿಸಿ, ಮರುಜನ್ಮ ನೀಡಿದ ಸುರೇಶ್ ಖಾರ್ವಿಯವರು ನಿಜಕ್ಕೂ ದೇವತಾ ಸ್ವರೂಪಿಗಳು ದೇವರು ತಾನು ಎಲ್ಲಾ ಕಡೆ ಇರಲು ಸಾಧ್ಯವಿಲ್ಲ ಎಂದು ಸುರೇಶ್ ಖಾರ್ವಿಯಂತ ಹೃದಯವಂತರನ್ನು ಧರೆಗೆ ತಂದಿದ್ದಾನೆ ಎಂದರೂ ಅತಿಶಯೋಕ್ತಿಯಾಗುವುದಿಲ್ಲ ಅವರು ಖಂಡಿತಾ ರಾಷ್ಟ್ರಪತಿಗಳ ಜೀವರಕ್ಷಕ ಪ್ರಶಸ್ತಿಗೆ ಅರ್ಹರಾಗಿದ್ದಾರೆ.
ಅಷ್ಟೇನೂ ಎತ್ತರವಲ್ಲದ ಮಟ್ಟಸ ದೇಹ ಸದಾ ಪ್ರೀತಿಯನ್ನೇ ತುಳುಕಿಸುವ ಕಂಗಳಿನ ಸುರೇಶ್ ಖಾರ್ವಿಯವರು ಮೊದಲ ನೋಟಕ್ಕೆ ಆಪ್ತರಾಗುತ್ತಾರೆ ಅವರನ್ನು ಕಂಡಾಗ ಸಕಲ ಜೀವಾತ್ಮರಿಗೂ ಸದಾ ಲೇಸನ್ನೇ ಬಯಸುವವರು ಎಂಬ ಸದಾಭಿಪ್ರಾಯ ಮನದಲ್ಲಿ ಮೂಡಿಬರುತ್ತದೆ. ಇಲ್ಲಿ ಪಡಿಮೂಡಿದ ಲೇಖನವು ಶುದ್ದಾರ್ಥದಲ್ಲಿ ಸುರೇಶ್ ಖಾರ್ವಿಯವರ ಪ್ರಾಮಾಣಿಕ ವ್ಯಕ್ತಿತ್ವದ ನಿಲುಗನ್ನಡಿ. ಜೀವರಕ್ಷಣೆಯ ಅವರ ಸಾಹಸಗಾಥೆಗಳು ನಮ್ಮ ಹೃದಯಕ್ಕೆ ನಾಟುತ್ತದೆ ಮನದ ಕದ ತಟ್ಟಿ ಬೆರಗು ಹುಟ್ಟಿಸುವ ಸುರೇಶ್ ಖಾರ್ವಿಯವರಿಗೆ ಮನಸಾರೆ ಅಭಿನಂದನೆಗಳು. ಅತ್ಯಂತ ಪರಿಶ್ರಮದ ಜೀವಿಯಾಗಿ, ಮೀನುಗಾರಿಕೆ ವೃತ್ತಿ ಮಾಡುತ್ತಿದ್ದರೂ, ಹಲವರ ಜೀವ ಉಳಿಸಿದ ಸುರೇಶ್ ಖಾರ್ವಿಯವರ ಮಾನವೀಯ ಸೇವಾಕೈಂಕರ್ಯಗಳು ಅಭೂತಪೂರ್ವ.ಅವರ ಈ ಮಾನವೀಯ ಸೇವಾಕಾರ್ಯಗಳು ಅವರ ಬದುಕಿಗೆ ಶ್ರೀರಕ್ಷೆಯಾಗಲಿ ಎಂದು ಆಶಿಸುತ್ತೇನೆ.
ಉಮಾಕಾಂತ ಖಾರ್ವಿ ಕುಂದಾಪುರ