ನಮ್ಮ ನೆಲೆಗಾಗಿ ಟೊಂಕ ಕಟ್ಟಿ ನಿಲ್ಲೋಣ ಎಂಬ ಧ್ಯೇಯವಾಕ್ಯದೊಂದಿಗೆ ಪ್ರಸ್ತುತಗೊಂಡ ಶ್ರೀ ಜೈನ ಜಟ್ಟೀಗೇಶ್ವರ ಯುವಕ ಸಮಿತಿ ಕಾಸರಕೋಡು ಟೊಂಕ ಇದರ ಹದಿನಾಲ್ಕನೇ ವರ್ಷದ ವಾರ್ಷಿಕೋತ್ಸವ ಹಲವು ಆಶೋತ್ತರಗಳ ನಿಲುವಿನಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡಿತ್ತು. ಜನವರಿ 14 ಮತ್ತು 15 ರ ಮಕರಸಂಕ್ರಾಂತಿಯ ಶುಭಪರ್ವದಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮ ಕೊಂಕಣಿ ಖಾರ್ವಿ ಸಮಾಜದ ಆಸ್ಮಿತೆಯ ಹೊಸ ಮನ್ವಂತರಕ್ಕೆ ನಾಂದಿ ಹಾಡಿದೆ.
ಎರಡನೇ ದಿನದ ಕಾರ್ಯಕ್ರಮದಲ್ಲಿ ಗೌರವ ಅತಿಥಿಯಾಗಿ ಆಗಮಿಸಿದ್ದ ಖಾರ್ವಿ ಆನ್ಲೈನ್ ಸಂಪಾದಕರಾದ ಕೋಟಾನ್ ಸುಧಾಕರ್ ಖಾರ್ವಿಯವರ ದಿಕ್ಸೂಚಿ ಭಾಷಣ ಸಮಾಜದ ಆಸ್ಮಿತೆಯನ್ನು ಬಡಿದೆಬ್ಬಿಸಿತ್ತು. ಹಿಂದೂ ಧರ್ಮ ಮತ್ತು ದೇಶದ ರಕ್ಷಣೆಗಾಗಿ ನಿರಂತರವಾಗಿ ಹೋರಾಟ ನಡೆಸಿದ ಖಾರ್ವಿ ಸಮಾಜ ಇಂದು ನೆಲೆ ಕಳೆದುಕೊಳ್ಳುವ ಆತಂಕದಲ್ಲಿದೆ. ಛತ್ರಪತಿ ಶಿವಾಜಿಯ ಸೈನ್ಯದಲ್ಲಿ ಸೈನಿಕರಾಗಿ ದೇಶದ್ರೋಹಿಗಳ ವಿರುದ್ಧ ಕೆಚ್ಚೆದೆಯ ಹೋರಾಟ ನಡೆಸಿದ ವೀರಪರಂಪರೆಯ ಹೆಗ್ಗಳಿಕೆಯ ಭವ್ಯ ಇತಿಹಾಸ ಖಾರ್ವಿ ಸಮಾಜಕ್ಕಿದೆ. ಅಂತಹ ಪರಾಕ್ರಮಿ ಸಮಾಜ ಇಂದು ಕರಾವಳಿಯೂದ್ದಕ್ಕೂ ತಮ್ಮ ಮನೆಬದುಕು ಕಳೆದುಕೊಳ್ಳುವ ಆತಂಕದಲ್ಲಿದೆ. ಕಾಸರಕೋಡು ಟೊಂಕ ಇದಕ್ಕೆ ಜ್ವಲಂತ ಸಾಕ್ಷಿಯಾಗಿದ್ದು, ನಮ್ಮ ಸಮಾಜದ ರಾಜಕೀಯ ಪ್ರಾತಿನಿಧ್ಯ ಮತ್ತು ಆರ್ಥಿಕ ಹಿಂದುಳಿವಿಕೆಯೇ ಇದಕ್ಕೆ ಮುಖ್ಯ ಕಾರಣವಾಗಿದೆ. ಇದನ್ನೆಲ್ಲಾ ಮೆಟ್ಟಿ ನಿಂತು ಸಮಾಜ ಸುದೃಡವಾಗಲು ಎಲ್ಲರೂ ಶ್ರಮಿಸಬೇಕು ಎಂದು ಕೋಟಾನ್ ಸುಧಾಕರ್ ಖಾರ್ವಿ ಯವರು ತಮ್ಮ ಸುಧೀರ್ಘ ಭಾಷಣದ ಮೂಲಕ ಸಮಾಜ ಭಾಂಧವರಿಗೆ ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶ್ರೀ ಜಿ.ಜಿ.ಶಂಕರ್ ರವರ ಅದ್ಬುತ ಮಾತುಗಳು ಸಭಿಕರ ಮನಸೂರೆಗೊಂಡಿದೆ, ಕಾಸರಕೋಡು ಟೊಂಕದ ಮೀನುಗಾರರೊಂದಿಗೆ ಸುಮಧುರ ಬಾಂಧವ್ಯ ಇಟ್ಟುಕೊಂಡಿರುವ ಶ್ರೀಯುತರು ಮುಂದಿನ ಜನ್ಮದಲ್ಲಿ ತಾನು ಮೀನುಗಾರನಾಗಿ ಹುಟ್ಟಲು ಬಯಸುತ್ತೇನೆ ಎಂದು ಆಡಿರುವ ಮಾತುಗಳು ಎಲ್ಲರ ಹೃದಯವನ್ನು ನವಿರಾಗಿ ತಟ್ಟಿತ್ತು.
ಸಮಾಜದ ಕುಲರತ್ನ ಎಂದೇ ಜನಪ್ರಿಯರಾಗಿರುವ ಕಡಲ ವಿಜ್ಞಾನಿ ಶ್ರೀ ಪ್ರಕಾಶ ಮೇಸ್ತಾ ರವರನ್ನು ಉತ್ಸವ ಸಮಿತಿ ಹೃದಯಸ್ಪರ್ಶಿಯಾಗಿ ಸನ್ಮಾನಿಸಿ ಧನ್ಯತೆ ಮೆರೆಯಿತು.ಕಡಲಾಮೆಗಳ ತವರು ಮತ್ತು ಪರಿಸರ ಸೂಕ್ಷ್ಮ ಪ್ರದೇಶವಾಗಿರುವ ಕಾಸರಕೋಡು ಟೊಂಕದ ಬಗ್ಗೆ ವೈಜ್ಞಾನಿಕ ನೆಲೆಯಲ್ಲಿ ವಾದ ಪ್ರಸ್ತುತ ಪಡಿಸಿ ವಾಣಿಜ್ಯ ಬಂದರು ಕಾಮಗಾರಿಗೆ ತಡೆಯಾಜ್ಞೆ ತರುವಲ್ಲಿ ಪ್ರಕಾಶ ಮೇಸ್ತಾರವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬುದು ಇಲ್ಲಿ ಗಮನಾರ್ಹ ಸಂಗತಿಯಾಗಿದೆ.
ಗೌರವ ಅತಿಥಿಗಳಾಗಿ ಆಗಮಿಸಿದ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಜಗದೀಶ್ ಈಶ್ವರ ತಾಂಡೇಲ್ ಈ ಸಂದರ್ಭದಲ್ಲಿ ಮಾತನಾಡಿ ಕಾಸರಕೋಡು ಟೊಂಕದ ಶಾಲೆಗಳಿಗೆ ಹೈಟೆಕ್ ಸ್ಪರ್ಶ ನೀಡಲು ಶಾಲೆಗಳಿಗೆ ಲ್ಯಾಪ್ಟಾಪ್ ಒದಗಿಸುವ ಭರವಸೆ ನೀಡಿದರು.
ಮೀನುಗಾರರ ಜೀವಸೆಲೆ ಕಾಸರಕೋಡು ಟೊಂಕದಲ್ಲಿ ಎರಡು ದಿನ ನಡೆದ ಈ ಕಾರ್ಯಕ್ರಮ ಸಂಗೀತ, ನೃತ್ಯ, ನಾಟಕ ಮುಂತಾದ ಕಲಾಪ್ರಕಾರಗಳಿಂದ ಶೋಭಾಯಮಾನವಾಗಿ ಸಂಪನ್ನಗೊಂಡಿದೆ. ಶ್ರೀ ಜೈನ ಜಟ್ಟೀಗೇಶ್ವರ ಸಮಿತಿ ಟೊಂಕ ವಾರ್ಷಿಕೋತ್ಸವದ ಆಚರಣೆಯ ಮೂಲಕ ಹತ್ತು ಹಲವು ಸಮಾಜಮುಖಿ ಕಾರ್ಯದ ಉತ್ಕರ್ಷಕ್ಕೆ ಮಕರಸಂಕ್ರಾಂತಿಯ ದಿನದಂದು ಶುಭ ನಾಂದಿ ಹಾಡಿದೆ.
www.kharvionline.com
ಸುಧಾಕರ್ ಸರ್ ತಿಳಿಸಿದಂತೆ, ನಮ್ಮ ಸಮುದಾಯಕ್ಕೆ ಬೆಂಬಲವಾಗಿ ಯಾವುದೇ ನ್ಯಾಯಯುತ ಉದ್ದೇಶಕ್ಕಾಗಿ ಕೆಲಸ ಮಾಡುವ ಪ್ರಾಮಾಣಿಕ ಜನರೊಂದಿಗೆ ಖಾರ್ವಿಯನ್‌ಲೈನ್ ತಂಡದ ಸದಸ್ಯರು ಯಾವಾಗಲೂ ನಿಲ್ಲುತ್ತಾರೆ.
ಟೊಂಕೋತ್ಸವ ಕಾರ್ಯಕ್ರಮ ನಿರಂತರವಾಗಿ ಪ್ರತಿ ವರ್ಷ ಇನ್ನೂ ಅದ್ದೂರಿಯಾಗಿ ನಡೆಯಲಿ. ಹಾಗೆ ವರ್ಷಪೂರ್ತಿ ನಮ್ಮ ಸಮುದಾಯದಿಂದ ಸಹಾಯದ ಅಗತ್ಯವಿರುವವರಿಗೆ ಆಸರೆ ನೀಡಲು ಎಲ್ಲಾ ಸಂಪನ್ಮೂಲಗಳೊಂದಿಗೆ ಆಶೀರ್ವದಿಸಲ್ಪಡಲಿ.