ಪಂಚಗಂಗಾವಳಿ ಪುಣ್ಯ ನದಿ ತನ್ನ ಚೇತೋಹಾರಿ ಹರವಿನಿಂದ ಪಾವನಗೊಳಿಸಿದ ಪವಿತ್ರ ನೆಲ ಗಂಗೊಳ್ಳಿ ಇಲ್ಲಿನ ಪ್ರತಿಯೊಂದರಲ್ಲೂ ಪರಮಾತ್ಮನ ಸಾನ್ನಿಧ್ಯವಿದೆ ಎಂದು ನಾವೆಲ್ಲರೂ ನಂಬಿದ್ದೇವೆ ಅಂತಹ ಪರಮ ಪುಣ್ಯ ಕ್ಷೇತ್ರವೇ ಗಂಗೊಳ್ಳಿ ಖಾರ್ವಿಕೇರಿ ಶ್ರೀ ಮಹಾಂಕಾಳಿ ದೇವಸ್ಥಾನ, ಪಡುವಣದ ಶರಧಿ ಗರ್ಭದಲ್ಲಿ ಆವಿರ್ಭವಿಸಿ ನೀಲಿಮೆಯ ಹರವಿನಲ್ಲಿ ಪವಡಿಸಿ ಶ್ರೀ ಮಹಾಂಕಾಳಿ ಅಮ್ಮನವರು ಇಲ್ಲಿ ನೆಲೆಯಾಗಿದ್ದಾಳೆ. ಶತಶತಮಾನಗಳ ಹಿಂದೆ ಕಡಲತೀರದಲ್ಲಿ ನಮ್ಮ ಪೂರ್ವಿಕರು ಅಮ್ಮನನ್ನು ಸಣ್ಣದಾದ ಹುಲ್ಲಿನ ಜೋಪಡಿಯಲ್ಲಿ ಶ್ರದ್ಧೆಭಕ್ತಿಯಿಂದ ಪೂಜಿಸಿಕೊಂಡು ಬಂದ್ದಿದರು. ಕಾಲಾನುಗತಿಯಲ್ಲಿ ಅಮ್ಮನವರ ಸಾನ್ನಿಧ್ಯ ಈಗಿರುವ ಸ್ಥಳದಲ್ಲಿ ಹಂಚಿನ ಮಾಡಿನ ರೂಪದಲ್ಲಿ ಸ್ಥಳಾಂತರವಾಯಿತು ಹಂಚಿನ ಮಾಡಿನ ಈ ಕಟ್ಟಡ ಜೀರ್ಣಾವಸ್ಥೆ ತಲುಪಿದ್ದರಿಂದ ಭಕ್ತಾದಿಗಳು ಜೀರ್ಣೋದ್ಧಾರಕ್ಕಾಗಿ ಸಂಕಲ್ಪ ತೊಟ್ಟರು ಭಗವತ್ಭಕ್ತರ ಪರಮ ಸಂಕಲ್ಪಕ್ಕೆ ಜಗನ್ಮಾತೆ ಶ್ರೀ ಮಹಾಂಕಾಳಿ ಅಮ್ಮನವರ ಕಾರಣಿಕ ಶಕ್ತಿಯ ಅನುಗ್ರಹ ಪ್ರಾಪ್ತಿಯಾಗಿ ಕೇವಲ ಏಳೇ ತಿಂಗಳ ಅವಧಿಯಲ್ಲಿ ಸುಮಾರು ಏಳು ಕೋಟಿ ವೆಚ್ಚದಲ್ಲಿ ಭವ್ಯವಾದ ಶಿಲಾಮಯ ನವೀಕೃತ ದೇಗುಲ ನಿರ್ಮಾಣಗೊಂಡಿದೆ. ಇದೀಗ ಶ್ರೀ ಮಹಾಂಕಾಳಿ ಅಮ್ಮನವರ ಈ ದೇಗುಲ ಲೋಕಾರ್ಪಣೆಗೆ ಸಿದ್ಧವಾಗಿದ್ದು ಪರಮ ಪವಿತ್ರ ಕ್ಷಣಗಳಿಗಾಗಿ ಭಕ್ತಜನರು ಕಾಯುತ್ತಿದ್ದಾರೆ.
ಶ್ರೀ ಮಹಾಂಕಾಳಿ ಅಮ್ಮನವರ ನೂತನ ನವೀಕೃತ ಶಿಲಾಮಯ ದೇಗುಲ ಲೋಕಾರ್ಪಣೆ ಮತ್ತು ಬ್ರಹ್ಮಕಲಶೋತ್ಸವು ದಿನಾಂಕ 20-1-2023 ರಿಂದ 28-1-2023 ರ ತನಕ ವೈಭವಪೂರ್ಣವಾಗಿ ನಡೆಯಲಿದೆ. ಈ ಅಮೃತ ಘಳಿಗೆಗಾಗಿ ಭಕ್ತ ಸಮೂಹ ಜಾತಕಪಕ್ಷಿಗಳಂತೆ ಹಾತೊರೆಯುತ್ತಿದ್ದಾರೆ. ಪಡುವಣ ಕಡಲಿನ ಪುಣ್ಯ ನೆಲ ಗಂಗೊಳ್ಳಿ ಈ ಪರಮಪುಣ್ಯ ಸೇವಾಕೈಂಕರ್ಯದಲ್ಲಿ ತನ್ನನ್ನು ವಿಧೇಯಿಸಿಕೊಳ್ಳುವ ಭಾಗ್ಯಪ್ರದ ಸೌಭಾಗ್ಯ ಕೂಡಿಬಂದಿದೆ. ಎಲ್ಲಾ ದಾರಿಗಳು ಶ್ರೀ ಮಹಾಂಕಾಳಿ ಅಮ್ಮನವರ ಸಾನ್ನಿಧ್ಯದತ್ತ ಮುಖ ಮಾಡಿದೆ.
ಭಕ್ತಜನರ ಸಂಕಲ್ಪದಂತೆ ಶ್ರೀ ಮಹಾಂಕಾಳಿ ಅಮ್ಮನವರ ಪರಮ ಅನುಗ್ರಹದಿಂದ ಕೇವಲ ಏಳೇ ತಿಂಗಳಲ್ಲಿ ನವೀಕೃತ ಶಿಲಾಮಯ ದೇಗುಲ ನಿರ್ಮಾಣಗೊಂಡು ಹೊಸ ಇತಿಹಾಸ ಸೃಷ್ಟಿಯಾಗಿದೆ. ಈ ಮಹೋನ್ನತ ಉತ್ಸವ ಸಂಪನ್ನಗೊಳ್ಳುವ ಬೆನ್ನಲ್ಲೇ ಐತಿಹಾಸಿಕ ಮಾರಿಜಾತ್ರೆ ನಡೆಯಲಿದೆ ಮೂರು ದಿನಗಳ ಕಾಲ ಸಂಭ್ರಮ ಉಲ್ಲಾಸಗಳಿಂದ ನಡೆಯುವ ಮಾರಿಜಾತ್ರೆಗೆ ರಾಜ್ಯಾದ್ಯಂತದಿಂದ ಸಹಸ್ರಾರು ಭಕ್ತಾದಿಗಳು ಶ್ರೀ ಕ್ಷೇತ್ರಕ್ಕೆ ಆಗಮಿಸುತ್ತಾರೆ.
ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದ ಭಕ್ತರ ಕಷ್ಟ ಸಂಕಷ್ಟಗಳು ಕ್ಷಣಾರ್ಧದಲ್ಲಿ ದೂರವಾಗಿ ಅವರಲ್ಲಿ ಭಕ್ತಿಯ ನಂಬಿಕೆಯನ್ನು ಸ್ಥಿರವಾಗಿಸಿದಂತಹ ಸಾವಿರಾರು ಭಕ್ತರ ಪರಮ ಪುಣ್ಯ ಕಾರಣಿಕ ಕ್ಷೇತ್ರವೆಂದೇ ಹೆಗ್ಗಳಿಕೆ ಹೊಂದಿರುವ ಗಂಗೊಳ್ಳಿ ಶ್ರೀ ಮಹಾಂಕಾಳಿ ಅಮ್ಮನವರ ನವೀಕೃತ ಶಿಲಾಮಯ ದೇಗುಲ ಲೋಕಾರ್ಪಣೆ ಮತ್ತು ಬ್ರಹ್ಮಕಲಶೋತ್ಸವ ಸಮಾರಂಭದ ಪವಿತ್ರ ಧಾರ್ಮಿಕ ಸಂಭ್ರಮದಲ್ಲಿ ಪಾಲ್ಗೊಂಡು ಪುನೀತರಾಗಲು ಭಕ್ತ ಸಮೂಹ ಕಾದು ನಿಂತಿದೆ. ಜಗನ್ಮಾತೆ ಶ್ರೀ ಮಹಾಂಕಾಳಿ ಅಮ್ಮನವರ ಸಾನ್ನಿಧ್ಯದಲ್ಲಿ ನಡೆಯುವ ಈ ಪುಣ್ಯಪ್ರದ ಕಾರ್ಯಕ್ರಮ ಪಡುವಣ ಕಡಲತಡಿಯಲ್ಲಿ ಹೊಸ ಇತಿಹಾಸ ಬರೆಯಲಿದೆ.
ಶ್ರೀ ಮಹಾಂಕಾಳಿ ಅಮ್ಮನವರ ದಿವ್ಯ ಸಾನ್ನಿಧ್ಯಕ್ಕೆ ಅಜರಾಮರ ಇತಿಹಾಸದ ಹಲವು ಘಟಾನಾವಳಿಗಳಿಗೆ ಸಾಕ್ಷಿಯಾಗಿದೆ. ಈ ಸಾನ್ನಿಧ್ಯ ಹಿಂದೆ ನ್ಯಾಯ ಪಂಚಾಯಿತಿ ಕಟ್ಟೆಯಾಗಿತ್ತು ಇಲ್ಲಿ ನೂರಾರು ಕ್ಲಿಷ್ಟಕರವಾದ ಸಮಸ್ಯೆಗಳು ಸೌಹಾರ್ದ ರೀತಿಯಲ್ಲಿ ಇತ್ಯರ್ಥವಾಗುತ್ತಿತ್ತು ಎಂಬುದನ್ನು ಹಿರಿಯರು ಸ್ಮರಿಸಿಕೊಳ್ಳುತ್ತಾರೆ ಈ ಸಾನ್ನಿಧ್ಯದ ಹಿರಿಮೆಗೆ ಮತ್ತಷ್ಟೂ ಗರಿ ಎಂಬಂತೆ ಕೊಂಕಣಿ ಸಮಾಜದ ಸಂಸ್ಥೆಯಾದ AIKKMS,GFCS ಮುಂತಾದವುಗಳು ಇಲ್ಲಿಂದಲೇ ತಮ್ಮ ಉಗಮದ ಪ್ರಾರಂಭಿಕ ಚಟುವಟಿಕೆಗಳಿಗೆ ಚಾಲನೆ ನೀಡಿದ್ದವು ಎಂಬುದನ್ನು ಹಿರಿಯರು ನೆನಪಿಸಿಕೊಳ್ಳುತ್ತಾರೆ.
ಶ್ರೀ ಮಹಾಂಕಾಳಿ ಅಮ್ಮನವರ ನವೀಕೃತ ಶಿಲಾಮಯ ದೇಗುಲದ ನಿರ್ಮಾಣ ಕಾರ್ಯದ ಶಿಲಾನ್ಯಾಸ ಮಾಡಿದ ಬಳಿಕ ಕರಾವಳಿಯ ತುಂಬಾ ಮತ್ಸ್ಯಸಂಪತ್ತು ಸಮೃದ್ಧ ರೀತಿಯಲ್ಲಿ ವೃದ್ಧಿಯಾದ ಅಪೂರ್ವ ಬೆಳವಣಿಗೆಗಳು ನಡೆದವು ಇದರ ಜೊತೆಗೆ ವಿನಾಶದ ಅಂಚಿನಲ್ಲಿದ್ದ ನೀಲಿಕಲ್ಲುಗಳು ಕಡಲತೀರದಲ್ಲಿ ಸಮೃದ್ಧವಾದರೆ, ಮತ್ತೊಂದೆಡೆ ಪಂಚಗಂಗಾವಳಿಯಲ್ಲಿ ಅಪರೂಪವಾಗಿದ್ದ ಮಳಿವೆಗಳು ವ್ಯಾಪಕ ಪ್ರಮಾಣದಲ್ಲಿ ವೃದ್ಧಿಯಾದ ಘಟನೆಗಳು ಕಂಡುಬಂತು.
ಬರೋಬ್ಬರಿ ಏಳುಕೋಟಿ ವೆಚ್ಚದಲ್ಲಿ, ಕೇವಲ ಏಳೇ ತಿಂಗಳ ಅವಧಿಯಲ್ಲಿ ಶ್ರೀ ಮಹಾಂಕಾಳಿ ಅಮ್ಮನವರ ಭವ್ಯ ಶಿಲಾಮಯ ದೇಗುಲ ನಿರ್ಮಾಣ ಕಾರ್ಯದ ಹಿಂದೆ ಸಹಸ್ರಾರು ಜನರ ತನುಮನಧನ ಸಹಾಯವಿದೆ, ಅಪಾರ ಪರಿಶ್ರಮವಿದೆ ಈ ಭವ್ಯ ದೇಗುಲ ಲೋಕಾರ್ಪಣೆಗೊಳ್ಳುವ ಈ ಶುಭಘಳಿಗೆಯಲ್ಲಿ ಅವರೆಲ್ಲರನ್ನು ಸ್ಮರಿಸಿಕೊಳ್ಳುವುದು ಉಚಿತ.
ಶ್ರೀ ಮಹಾಂಕಾಳಿ ದೇಗುಲದ ಜೀರ್ಣೋದ್ಧಾರ ಸಮಿತಿಯವರು, ಆಡಳಿತ ಮಂಡಳಿ, ಆರು ಜನ ಪಟೇಲರು, ಹನ್ನೆರಡು ಜನ ಮೊಕ್ತೇಸರರು, ಮಹಾಂಕಾಳಿ ಮಹಿಳಾ ಸಮಿತಿ, ಹತ್ತು ಸಮಸ್ತರು ಇದರಲ್ಲಿ ಪ್ರಮುಖರಾಗಿದ್ದಾರೆ. ಜನಸಾಮಾನ್ಯರಿಂದಲೇ ಕೂಡಿದ್ದ ಉತ್ಸಾಹಿ ಕ್ರೀಯಾಶೀಲ ಜೀರ್ಣೋದ್ಧಾರ ಸಮಿತಿಯವರು ನವೀಕೃತ ಶಿಲಾಮಯ ದೇಗುಲದ ನಿರ್ಮಾಣ ಕಾರ್ಯದಲ್ಲಿ ಪ್ರಧಾನ ಭೂಮಿಕೆಯಲ್ಲಿ ತಮ್ಮನ್ನು ವಿಧೇಯಿಸಿಕೊಂಡು ದೇಗುಲ ನಿರ್ಮಾಣ ಕಾರ್ಯದ ಅವಶ್ಯಕ ಆರ್ಥಿಕ ಸಂಪನ್ಮೂಲದ ಕ್ರೋಢೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿದರು.
ತಮ್ಮ ಕೆಲಸ ಕಾರ್ಯಗಳನ್ನೆಲ್ಲಾ ಬಿಟ್ಟು ಹಗಲಿರುಳು ಊರು ಪರವೂರು ಸುತ್ತಿ ಅಪಾರ ಪರಿಶ್ರಮಪಟ್ಟ ಜೀರ್ಣೋದ್ಧಾರ ಸಮಿತಿಯ ಸೇವಾ ಕೈಂಕರ್ಯಗಳನ್ನು ಎಷ್ಟು ಹೊಗಳಿದರೂ ಸಾಲದು. ಸಮಾಜದ ಹತ್ತುಸಮಸ್ತರ, ಪಟೇಲರ, ಮೊಕ್ತೇಸರರರ, ದೇಗುಲದ ಆಡಳಿತ ಮಂಡಳಿಯ ಮಾರ್ಗದರ್ಶನದಲ್ಲಿ ದೇಗುಲ ನಿರ್ಮಾಣದ ಸತ್ಕಾರ್ಯದಲ್ಲಿ ತೊಡಗಿಸಿಕೊಂಡ ಜೀರ್ಣೋದ್ಧಾರ ಸಮಿತಿಗೆ ಶ್ರೀ ಅಮ್ಮನವರು ಅದಮ್ಯ ಶಕ್ತಿಯನ್ನು ನೀಡಿ ತೊಡಗಿಸಿಕೊಂಡ ಕಾರ್ಯದಲ್ಲಿ ಸಿದ್ದಿ ಪ್ರಾಪ್ತಿಯಾಗುವಂತೆ ಮಾಡಿದವು.
ಲಕ್ಷಾಂತರ ಭಕ್ತರ ಅಧಿದೇವತೆ ಮತ್ತು ಕೊಂಕಣಿ ಖಾರ್ವಿ ಸಮಾಜದ ಆರಾಧ್ಯ ದೇವತೆ ಶಕ್ತಿಸ್ವರೂಪಿಣಿ ಶ್ರೀ ಮಹಾಂಕಾಳಿ ಅಮ್ಮನವರ ನವೀಕೃತ ಶಿಲಾಮಯ ದೇಗುಲದ ಸಕಲ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಅತ್ಯಂತ ಯಶಸ್ವಿಯಾಗಿ ಸಂಪನ್ನವಾಗಲಿ ಎಂದು ಖಾರ್ವಿ ಆನ್ಲೈನ್ ಶುಭ ಹಾರೈಸುತ್ತದೆ.
ಸುಧಾಕರ್ ಖಾರ್ವಿ
Editor
www.kharvionline.com