ಕೊಂಕಣಿ ಖಾರ್ವಿ ಸಮಾಜದ ಸಂಸ್ಕೃತಿ ಪರಂಪರೆಯ ಹೆಗ್ಗುರುತಾದ ಹೋಳಿಹಬ್ಬದ ಆರುದಿನಗಳ ಆಚರಣೆ ಬಣ್ಣದ ಓಕುಳಿಯಾಟದ ಅದ್ದೂರಿ ಮೆರವಣಿಗೆಯೊಂದಿಗೆ ಸಂಪನ್ನಗೊಂಡಿತು. ಓಕುಳಿಯ ದಿನ ಶ್ರೀ ಮಹಾಕಾಳಿ ಅಮ್ಮನವರಿಗೆ ಬಣ್ಣ ಲೇಪಿಸಿದ ಬಳಿಕ ಜನರು ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮ ಉಲ್ಲಾಸಗಳಿಂದ ನಲಿದಾಡಿದರು. ಊರಿನ ಜನರು ಮಾತ್ರವಲ್ಲ ವಿದೇಶಿಯರು ಕೂಡಾ ಹೋಳಿಯ ಓಕುಳಿ ಮೆರವಣಿಗೆಯಲ್ಲಿ ಬಣ್ಣ ಬಳಿದುಕೊಂಡು ಗೆಜ್ಜೆ ಹಾಕಿದ್ದು ವಿಶೇಷ ಸಂಗತಿ.
ಹೋಳಿಹಬ್ಬ ಸಂಭ್ರಮ ಉಲ್ಲಾಸಗಳಿಂದ ಸಂಪನ್ನಗೊಂಡ ಈ ಸಂದರ್ಭದಲ್ಲಿ ಹೋಳಿಮನೆಯ ಸಾಂಪ್ರದಾಯಿಕ ಕಾರ್ಯಕ್ರಮ ಮತ್ತು ಇತರ ಎಲ್ಲಾ ಕಾರ್ಯಕ್ರಮಗಳಲ್ಲಿ ಸಹಕಾರ ನೀಡಿದ ಕೊಂಕಣಿ ಖಾರ್ವಿ ಸಮಾಜ ಭಾಂದವರಿಗೆ ಹೃದಯಸ್ಪರ್ಶಿ ನಮನಗಳನ್ನು ಸಲ್ಲಿಸುತ್ತೇನೆ. ಹೋಳಿಮನೆಯ ಪ್ರತಿಯೊಂದು ಕೆಲಸಗಳಲ್ಲಿ ಜತೆಗೆ ನಿಂತು ಅಭೂತಪೂರ್ವ ಯಶಸ್ಸಿಗೆ ಕಾರಣೀಕರ್ತರಾದ ತಮಗೆಲ್ಲರಿಗೂ ಇನ್ನೊಮ್ಮೆ ಸಾವಿರದ ನಮನಗಳು. ಹೋಳಿಮನೆಯ ಕಾರ್ಯಕ್ರಮದಲ್ಲಿ ಇತರ ಸಮಾಜದ ಜನರು ಕೂಡಾ ಸಕ್ರಿಯವಾಗಿ ಪಾಲ್ಗೊಂಡು ನಮ್ಮನ್ನು ಹರಸಿದ್ದಾರೆ. ಅವರಿಗೂ ಕೂಡಾ ತುಂಬು ಹೃದಯದ ಧನ್ಯವಾದಗಳು. ಶ್ರೀ ಮಹಾಕಾಳಿ ದೇವಸ್ಥಾನ ಆಡಳಿತ ಮಂಡಳಿ, ಸಮಾಜದ ಮೂರು ಮೊಕ್ತೇಸರರು, ಕೊಂಕಣಿ ಖಾರ್ವಿ ಮಹಾಜನ ಸಂಘದ ಕಾರ್ಯದರ್ಶಿ ಶ್ರೀ ಕೃಷ್ಣ ತಾಂಡೇಲ್ , ಶ್ರೀ ನಮೋ ರಾಘವೇಂದ್ರ ಖಾರ್ವಿಯವರಿಗೂ ಮತ್ತು ಪ್ರತ್ಯಕ್ಷವಾಗಿ, ಪರೋಕ್ಷವಾಗಿಯೂ ಹೋಳಿಮನೆಯವರಿಗೆ ಸಹಕಾರ ನೀಡಿದ ಎಲ್ಲರಿಗೂ ಕೋಟಿ ಕೋಟಿ ವಂದನೆಗಳನ್ನು ಸಮರ್ಪಿಸುತ್ತೇನೆ.
ಹೋಳಿಮನೆ ಕಾರ್ಯಕ್ರಮದ ವಿಶೇಷ ಸಂಗತಿಯೆಂಬಂತೆ ಅನೇಕ ಊರುಗಳಿಂದ ಕೊಂಕಣಿ ಖಾರ್ವಿ ಸಮಾಜ ಬಾಂಧವರು ಭೇಟಿ ನೀಡಿ ಹೋಳಿ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಗಂಗೊಳ್ಳಿ ಶ್ರೀ ಮಹಾಕಾಳಿ ದೇವಸ್ಥಾನ ಆಡಳಿತ ಮಂಡಳಿ, ಜೀರ್ಣೋದ್ಧಾರ ಸಮಿತಿ, ಗಂಗೊಳ್ಳಿಯ ಸಮಾಜ ಬಾಂಧವರು, ಕಂಚಗೋಡು ಶ್ರೀ ರಾಮ ಮಂದಿರ ಆಡಳಿತ ಮಂಡಳಿಯ ಸದಸ್ಯರು, ಭಟ್ಕಳದ ಸಮಾಜ ಬಾಂಧವರು, ಹೊನ್ನಾವರ, ಕಾಸರಕೋಡು ಟೊಂಕದ ಕೊಂಕಣಿ ಖಾರ್ವಿ ಸಮಾಜ ಬಾಂಧವರು, ಸಾಸ್ತಾನ ಕೊಡಿತಲೆ, ಮಂಗಳೂರು ಬೆಂಗ್ರೆ, ಬೆಂಗಳೂರು, ಮುಂಬೈ ಸಮಾಜ ಬಾಂಧವರು ಕೂಡಾ ಆಗಮಿಸಿ ಖುಷಿ ಪಟ್ಟಿದ್ದಾರೆ. ಸಂಭ್ರಮಿಸಿದ್ದಾರೆ.ಅವರೆಲ್ಲರಿಗೂ ಹೃದಯಂತರಾಳದ ಅನಂತ ನಮನಗಳನ್ನು ಸಮರ್ಪಿಸುತ್ತೇನೆ.