ಪಂಚಭಾಷೆಯ ಲಿಪಿಗಳಲ್ಲಿ ಬರೆಯಬಹುದಾದ ಜಗತ್ತಿನ ಏಕಮಾತ್ರ ಭಾಷೆಯೆಂದರೆ ಅದು ಕೊಂಕಣಿ ಭಾಷೆ. ಅಷ್ಟೇ ಅಲ್ಲ, ಕೊಂಕಣಿ ಜನಪ್ರಿಯ ಜ್ಯಾತತೀತ ಭಾಷೆ ಕೂಡಾ ಹೌದು. ಸಮೃದ್ಧ ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆಯುಳ್ಳ ಕೊಂಕಣಿ ಭಾಷೆಗೆ 2000 ವರ್ಷಗಳ ಸುಧೀರ್ಘವಾದ ಇತಿಹಾಸವಿದೆ. ಕೊಂಕಣಿ ಭಾಷೆಯ ಉಲ್ಲೇಖವನ್ನು ಶ್ರವಣಬೆಳಗೊಳದ ಗೊಮೊಟೇಶ್ವರನ ಪದತಲದಲ್ಲಿ ಕ್ರಿ.ಶ.982 ರ ಶಾಸನ ಶ್ರೀ ಚಾವುಂಡರಾಜೇ ಕರವಾಲೆಯಲ್ಲಿ ಕಾಣಬಹುದಾಗಿದೆ. ಸ್ವಾತಂತ್ರ್ಯಪೂರ್ವದ ಸಮಯ ಗೋವಾದಲ್ಲಿ ಪೋರ್ಚುಗೀಸ್ ದುರಾಡಳಿತದಲ್ಲಿ ಕೊಂಕಣಿ ಭಾಷೆ ಮತ್ತು ಜನ ನಲುಗಿ ಹೋಗಿದ್ದರು. ಪೋರ್ಚುಗೀಸರ ದಬ್ಬಾಳಿಕೆ ತಾಳಲಾರದೇ ಸಹಸ್ರಾರು ಮಂದಿ ಕರ್ನಾಟಕಕ್ಕೆ ವಲಸೆ ಬಂದು ವಿವಿಧ ಭಾಗಗಳಲ್ಲಿ ನೆಲೆಯಾದರು.
ಸ್ವಾತಂತ್ರ್ಯದ ನಂತರದ ಕಾಲಮಾನದಲ್ಲೂ ಗೋವಾದಲ್ಲಿ ಕೊಂಕಣಿ ಭಾಷೆಯ ಪರಿಸ್ಥಿತಿ ಸರಿಯಿರಲಿಲ್ಲ.ಅಲ್ಲಿ ಮರಾಠಿ ಪ್ರಾಬಲ್ಯವಿತ್ತು. ಕೊಂಕಣಿ ಭಾಷೆ ತನ್ನ ಆಸ್ಮಿತೆಯನ್ನು ಕಳೆದುಕೊಂಡು ನಾಮಾವಶೇಷವಾಗುವ ಸಂದಿಗ್ಧ ಪರಿಸ್ಥಿತಿ ಅಲ್ಲಿ ನಿರ್ಮಾಣವಾಗಿತ್ತು. ಗೋವಾದಲ್ಲಿ ಕೊಂಕಣಿ ಭಾಷೆ ಬಹುಸಂಖ್ಯಾತರ ಭಾಷೆಯಾಗಿದ್ದರೂ ಕೂಡಾ ದಯನೀಯ ಸ್ಥಿತಿಯಲ್ಲಿತ್ತು. ಈ ಸಂದರ್ಭದಲ್ಲಿ ಕೊಂಕಣಿ ಭಾಷೆಯನ್ನು ಗೋವಾದ ಅಧಿಕೃತ ಭಾಷೆಯನ್ನಾಗಿ ಮಾಡಬೇಕೆಂಬ ಹಕ್ಕೊತ್ತಾಯ ಚಳವಳಿ ಆರಂಭವಾಯಿತು.
ಕೊಂಕಣಿ ಭಾಷಾ ಚಳವಳಿ ತೀವ್ರಗೊಂಡು ಹಿಂಸಾತ್ಮಕ ರೂಪ ಪಡೆದುಕೊಂಡ ಪರಿಣಾಮ ಕೆಲವರು ಪ್ರಾಣ ಕಳೆದುಕೊಳ್ಳಬೇಕಾಯಿತು.ಅಂತಿಮವಾಗಿ ಗೋವಾ ಸರ್ಕಾರ 1987 ರಲ್ಲಿ ಕೊಂಕಣಿಯನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡಿತು. ಈ ಬೆಳವಣಿಗೆ ನಡೆದ ಬೆನ್ನಲ್ಲೇ ಕೊಂಕಣಿ ಭಾಷಿಕರ ತೀವ್ರ ಹೋರಾಟದ ಫಲಶೃತಿಯಾಗಿ ಕೇಂದ್ರ ಸರ್ಕಾರ 1992 ರಲ್ಲಿ ಸಂವಿಧಾನದ 8 ನೇ ಪರಿಚ್ಚೇದದಲ್ಲಿ ಕೊಂಕಣಿ ಭಾಷೆಯನ್ನು ಸೇರಿಸಿ ಅಧಿಕೃತ ಮಾನ್ಯತೆ ನೀಡಿತು.
ಕೊಂಕಣಿ ಭಾಷೆ ಸಂವಿಧಾನದ ಪರಿಚ್ಚೇದದಲ್ಲಿ ಮಾನ್ಯತೆ ಪಡೆದ ದಿನವಾದ ಆಗಸ್ಟ್ 20 ನೇ ತಾರೀಕನ್ನು ಪ್ರತಿವರ್ಷ ಕೊಂಕಣಿ ಮಾನ್ಯತಾ ದಿನವನ್ನಾಗಿ ಆಚರಿಸಲಾಗುತ್ತದೆ. ಹಲವಾರು ಮಂದಿಯ ಹೋರಾಟ, ತ್ಯಾಗ ಬಲಿದಾನಗಳ ಪ್ರತಿಫಲವಾಗಿ ಕೊಂಕಣಿ ಭಾಷೆ ಸಂವಿಧಾನದ 8 ನೇ ಪರಿಚ್ಚೇದದಲ್ಲಿ ಸೇರ್ಪಡೆಗೊಂಡಿದೆ. ಈ ಸಂದರ್ಭದಲ್ಲಿ ಅವರೆಲ್ಲರನ್ನು ಸ್ಮರಿಸಿಕೊಳ್ಳಬೇಕು. ಕರ್ನಾಟಕದಲ್ಲಿ ಕನ್ನಡ ಕೊಂಕಣಿ ಭಾಷಾ ಭಾಂಧ್ಯವವು ಉತ್ತಮವಾಗಿದೆ. ಕೊಂಕಣಿ ಭಾಷಿಕರ ಕೋರಿಕೆ ಮೇರೆಗೆ ಕರ್ನಾಟಕ ಸರ್ಕಾರವು 1994 ರಲ್ಲಿ ಕೊಂಕಣಿ ಸಾಹಿತ್ಯ ಅಕಾಡೆಮಿ ಸ್ಥಾಪಿಸಿತು. ಜಗತ್ತಿನಾದ್ಯಂತವಿರುವ ಕೊಂಕಣಿ ಭಾಷಿಕರನ್ನು ಒಂದೇ ಸೂರಿನಡಿ ತಂದು ಶೈಕ್ಷಣಿಕ, ಉದ್ಯೋಗಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಏಳಿಗೆ ಸಾಧಿಸಲು 2009 ರಲ್ಲಿ ಮಂಗಳೂರಿನಲ್ಲಿ ವಿಶ್ವಕೊಂಕಣಿ ಕೇಂದ್ರವನ್ನು ಸ್ಥಾಪಿಸಲಾಯಿತು. ಈ ಸಂಸ್ಥೆ ಇಂದು ಕೊಂಕಣಿ ಭಾಷಿಕರ ಅಭುದ್ಯಯಕ್ಕಾಗಿ ಅಭೂತಪೂರ್ವ ಕಾರ್ಯ ಮಾಡುತ್ತಿದೆ.
ಶಿಕ್ಷಣದಲ್ಲಿ ಕೊಂಕಣಿಯನ್ನು ತೃತೀಯ ಭಾಷೆಯನ್ನಾಗಿ ಆಯ್ಕೆ ಮಾಡಲು ಕರ್ನಾಟಕ ಸರ್ಕಾರ ವಿದ್ಯಾರ್ಥಿಗಳಿಗೆ ಅವಕಾಶ ನೀಡಿದೆ. ಕೊಂಕಣಿ ಮಾತೃಭಾಷಿಕ ಸಾಹಿತ್ಯ ಪ್ರತಿಭೆಗಳು ಕನ್ನಡದಲ್ಲಿ ಸಾಹಿತ್ಯ ರಚಿಸಿ ಕನ್ನಡಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರಲ್ಲಿ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಯವರು ಅಗ್ರಗಣ್ಯರು. ಕಾಸರಗೋಡು ಮಂಜೇಶ್ವರದ ಗೋವಿಂದ ಪೈಗಳು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆ ಅವಿಸ್ಮರಣೀಯ.
ಹೊನ್ನಾವರದ ಕನ್ನಡ ಸಂಘದ ಹೆಚ್ಚಿನ ಪಧಾದಿಕಾರಿಗಳು ಮಾತೃಭಾಷಿಕ ಕೊಂಕಣಿಗರು ಎಂಬುದು ಉಲ್ಲೇಖನೀಯ ಸಂಗತಿಯಾಗಿದೆ. ಜ್ಯಾತತೀತ ಭಾಷೆಯಾಗಿರುವ ಕೊಂಕಣಿ ಹಿಂದೂಗಳ, ಕ್ಯಾಥೋಲಿಕ್ ಕ್ರಿಶ್ಚಿಯನ್ನರ ಮತ್ತು ಭಟ್ಕಳದ ನವಾಯತಿ ಮುಸ್ಲಿಮರ ಮಾತೃಭಾಷೆಯಾಗಿದೆ. ಈ ಎಲ್ಲಾ ಸಮಾಜದ ಕೊಂಕಣಿ ಜನಪದ ಸಂಸ್ಕೃತಿ ಸಮೃದ್ಧವಾಗಿದ್ದು ಅನನ್ಯತೆಯಿಂದ ಕೂಡಿದೆ. ಕೊಂಕಣಿ ಖಾರ್ವಿ ಸಮಾಜದ ಹೋಳಿ ಕುಣಿತದ ಹಾಡುಗಳು ಜನಪದ ಸಾಹಿತ್ಯದಿಂದ ಸಮೃದ್ಧಗೊಂಡಿದ್ದು ಸಂಗೀತಕ್ಕೆ ಪೂರಕವಾಗಿದೆ.
ಕೊಂಕಣಿ ಭಾಷೆಗೆ ಶತಶತಮಾನಗಳ ವೈಭವೋಪೇತ ಇತಿಹಾಸವಿದೆ. ಪರಕೀಯರ ದಬ್ಬಾಳಿಕೆಯ ನಡುವೆಯೂ ಬೆಳೆಸಿಕೊಂಡು ಬಂದಿರುವ ಕೊಂಕಣಿ ಭಾಷಿಗರ ಜೀವನ ಪದ್ಧತಿ, ಆಚಾರ ವಿಚಾರ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಜಾಗತೀಕರಣದ ಇಂದಿನ ಕಾಲಘಟ್ಟದಲ್ಲಿ ಜತನದಿಂದ ಕಾಪಾಡಿಕೊಂಡು ಹೋಗುವ ಅನಿವಾರ್ಯತೆ ಸೃಷ್ಟಿಯಾಗಿದೆ. ಜ್ಯಾತತೀತ ಭಾಷೆಯಾಗಿರುವ ಕೊಂಕಣಿ ಸಮುದಾಯದಿಂದ ಸಮುದಾಯಕ್ಕೆ ಪ್ರಾಂತ್ಯದಿಂದ ಪ್ರಾಂತ್ಯಕ್ಕೆ ವ್ಯತ್ಯಾಸವಾಗುತ್ತಿದ್ದರೂ ಅದರ ಗೇಯತೆ ಮತ್ತು ಕಾವ್ಯಾತ್ಮಕತೆಗಳು ಅನನ್ಯತೆಯಿಂದ ಕೂಡಿದೆ. ಭಾರತೀಯ ಸಂಸ್ಕೃತಿ ಪರಂಪರೆಗಳನ್ನೆಲ್ಲಾ ತನ್ನೊಡಲಲ್ಲಿ ತುಂಬಿಕೊಂಡಿರುವ ಕೊಂಕಣಿ ಭಾಷೆಯ ಆಸ್ಮಿತೆಯನ್ನು ಆಗಸ್ಟ್ 20 ಕ್ಕೆ ಸೀಮಿತವಾಗಿಸದೇ ನಿತ್ಯ ನಿರಂತರವಾಗಿ ಜಗದಗಲ ಪ್ರಜ್ವಲಿಸಬೇಕಾಗಿದೆ.
ಕೊಂಕಣಿ ಖಾರ್ವಿ ಸಮಾಜದ ಹಿರಿಯ ಚೇತನ ನಿವೃತ್ತ ಪೋಸ್ಟ್ ಮಾಸ್ಟರ್ ಬ್ರಹ್ಮಾವರ ಮಾಧವ ಖಾರ್ವಿಯವರು ಕೊಂಕಣಿ ಭಾಷೆಯ ಬಗ್ಗೆ ನಿರಂತರವಾಗಿ ಅಭಿಯಾನ ನಡೆಸುತ್ತಿದ್ದಾರೆ. ಕೊಂಕಣಿ ಭಾಷೆಯ ಬಗ್ಗೆ ಅವರ ಅಭಿಯಾನ ಶ್ಲಾಘನೀಯ.
ಸುಧಾಕರ್ ಖಾರ್ವಿ
Editor
www.kharvionline.com