ಅಪರೂಪದ ಜೀವವೈವಿಧ್ಯವಾದ ಆಲೀವ್ ರಿಡ್ಲೆ ಜಾತಿಯ ಕಡಲಾಮೆಗಳ ಸುರಕ್ಷಿತ ತವರಾದ ಕಾಸರಕೋಡು ಟೊಂಕ ಕಡಲತೀರ ಅತಿಸೂಕ್ಷ್ಮ ಪರಿಸರವೆಂದು ಅಂತರಾಷ್ಟ್ರೀಯ ಮಟ್ಟದಲ್ಲಿ ದಾಖಲಾಗಿದೆ.ಇಲ್ಲಿ ಸಾವಿರಾರು ಮೀನುಗಾರರು ಮೀನುಗಾರಿಕೆ ವೃತ್ತಿ ಮಾಡಿಕೊಂಡು ಮನೆಬದುಕು ನಡೆಸಿಕೊಂಡು ಬಂದಿರುತ್ತಾರೆ.ಇಂತಹ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಖಾಸಗಿ ವಾಣಿಜ್ಯ ಬಂದರು ನಿರ್ಮಾಣ ಮಾಡಬೇಕೆಂದು ಕಳೆದ ಕೆಲವು ವರ್ಷಗಳಿಂದ ಮೀನುಗಾರರ ಮೇಲೆ ದೌರ್ಜನ್ಯ ನಡೆಸಿ ಕುಹಕ ಪ್ರಯತ್ನ ಮಾಡುತ್ತಿದ್ದಾರೆ.ಈ ವಿವಾದಾಸ್ಪದ ವಿಷಯ ನ್ಯಾಯಲಯದಲ್ಲಿ ಇರುವಾಗಲೇ ಬಂಡವಾಳಶಾಹಿಗಳು ಹಿಂಬಾಗಿಲಿನಿಂದ ಕಾನೂನು ಬಾಹಿರ ಪ್ರಯತ್ನ ಮಾಡುತ್ತಿದ್ದು ಈ ಸಂಚಿನ ಭಾಗವಾಗಿ ನಿನ್ನೆ ಸಿ ಆರ್ ಜೆಡ್ ಅಧಿಕಾರಿಗಳು ಯಾವುದೇ ಪೂರ್ವ ಸೂಚನೆ ನೀಡದೇ ಕಡಲತೀರದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಅನುಮತಿ ನೀಡುವ ಬಗ್ಗೆ ಪರಿಶೀಲನೆ ಮಾಡಲು ಬಂದಿದ್ದರು.ಸ್ಥಳೀಯ ಮೀನುಗಾರರ ತೀವ್ರ ಪ್ರತಿರೋಧದ ಕಾರಣ ಸರ್ವೇ ಕಾರ್ಯ ನಡೆಸದೇ ಮರಳಿದ್ದಾರೆ.
ಪರಿಸರ ಸೂಕ್ಷ್ಮ ಪ್ರದೇಶವಾದ ಕಾಸರಕೋಡು ಟೊಂಕದ ಕಡಲತೀರದಲ್ಲಿ ಕಚ್ಚಾ ರಸ್ತೆ ಮತ್ತು ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಮೊದಲು ಕಡಲ ಪರಿಸರ ಸೌಂರಕ್ಷಣೆಯ ವಿವರವಾದ ಕಾರ್ಯ ಯೋಜನೆ ರಚಿಸದ ಕಾರಣ ಪರಿಸರ ಮಂತ್ರಾಲಯದ ಸಿ ಆರ್ ಜೆಡ್ ತಜ್ಞರ ಸಮಿತಿ ಕಡಲತೀರ ಮೇಲೆ ಯಾವುದೇ ರೀತಿಯ ರಸ್ತೆ ನಿರ್ಮಾಣ ಮಾಡಲು ನಿರಾಕರಿಸಿತ್ತು .ಆದರೆ ತಜ್ಞರ ಸಮಿತಿ ಮೀನುಗಾರರಿಗೆ ಯಾವುದೇ ಸೂಚನೆ ನೀಡದೇ ಖಾಸಗಿ ಬಂದರು ಯೋಜನೆಯ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಏಕಾಏಕಿ ಸರ್ವೇ ಮಾಡಲು ಬಂದಿದೆ.
ಈ ಪ್ರದೇಶ ಆಲೀವ್ ರಿಡ್ಲೆ ಜಾತಿಯ ಕಡಲಾಮೆಗಳು ಮೊಟ್ಟೆ ಇಡುವ ಸುರಕ್ಷಿತ ತಾಣವೆಂದು ದಾಖಲಾಗಿರುವುದು ಖಾಸಗಿ ಬಂದರು ನಿರ್ಮಾಣ ಯೋಜನೆಗೆ ಬಹು ದೊಡ್ಡ ತೊಡಕಾಗಿದ್ದು ಈ ಪ್ರದೇಶದಲ್ಲಿ ಕಡಲಾಮೆಗಳು ಬರುವುದಿಲ್ಲ ಎಂದು ವಿತಂಡವಾದ ಮಂಡಿಸಿದ ಬಂದರು ನಿರ್ಮಾಣ ಯೋಜನೆಯ ಗುತ್ತಿಗೆದಾರರ ಕುಹಕ ಪ್ರಯತ್ನ ವಿಫಲವಾಗಿದೆ.ಕಡಲಾಮೆಗಳು ಮೊಟ್ಟೆ ಇಡುವ ಅವಧಿ ನವೆಂಬರ್ ನಿಂದ ಮಾರ್ಚ್ ಆಗಿದೆ.ಇಲ್ಲಿ ಸಹಸ್ರಾರು ಕಡಲಾಮೆಗಳ ಮೊಟ್ಟೆಗಳು ಮರಿಯಾಗಿ ಕಡಲ ಗರ್ಭ ಸೇರಿದೆ.ಕಡಲಾಮೆಗಳು ಇಲ್ಲಿ ಮೊಟ್ಟೆ ಇಡುವುದಿಲ್ಲ ಎಂದು ನಿರೂಪಿಸಲು ಮಳೆಗಾಲದ ದಿನಗಳಲ್ಲಿ ತಜ್ಞರನ್ನು ಛೂ ಬಿಟ್ಟು ಸರ್ವೇ ಮಾಡಲು ಆಯೋಜಿಸಿರುವುದು ಖಂಡನೀಯ ಸಂಗತಿಯಾಗಿದೆ. ಬಹಳಷ್ಟು ಪ್ರತಿರೋಧವಿದ್ದರೂ ಇಲ್ಲಿ ಶತಾಯಗತಾಯ ಖಾಸಗಿ ವಾಣಿಜ್ಯ ಬಂದರು ನಿರ್ಮಾಣ ಮಾಡಲೇಬೇಕು ಎಂಬ ದುರುದ್ದೇಶದಿಂದ ಇಂತಹ ಕಾನೂನು ಬಾಹಿರ ಕೃತ್ಯಗಳು ಪದೇಪದೇ ನಡೆಯುತ್ತಿದೆ.
ಹೋದೆಯಾ ಪಿಶಾಚಿ ಅಂದರೆ ಬಂದೆ ಗವಾಕ್ಷಿಯಲ್ಲಿ ಎಂಬ ಅರ್ಥಗರ್ಭಿತ ಗಾದೆ ಮಾತು ಕನ್ನಡದಲ್ಲಿದೆ.ಪದೇಪದೇ ವಿವಿಧ ಮಾರ್ಗದಲ್ಲಿ ಬಂದು ತೊಂದರೆ ನೀಡುವವರನ್ನು ಕುರಿತಂತೆ ರಚಿತಗೊಂಡಿರುವ ಈ ಗಾದೆಮಾತು ಉತ್ತರ ಕನ್ನಡ ಜಿಲ್ಲೆಯ ಕಾಸರಕೋಡು ಟೊಂಕದಲ್ಲಿ ಖಾಸಗಿ ವಾಣಿಜ್ಯ ಬಂದರು ನಿರ್ಮಾಣ ಕಾಮಗಾರಿಯ ಬಂಡವಾಳಶಾಹಿಗಳಿಗೆ ಚೆನ್ನಾಗಿ ಅನ್ವಯಿಸುತ್ತದೆ.ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ನಿರ್ಮಾಣ ಕಾರ್ಯ ನಡೆಸಲು ರಾಷ್ಟ್ರೀಯ ಹಸಿರು ಪೀಠದ ನ್ಯಾಯಲಯ ತಡೆಯಾಜ್ಞೆ ನೀಡಿದರೂ ಅದನ್ನು ಧಿಕ್ಕರಿಸಿ ಬಂಡವಾಳಶಾಹಿ ಕಪ್ಪು ದೈತ್ಯರು ಮತ್ತೆ ವಕ್ಕರಿಸಿಕೊಂಡು ತಮ್ಮ ಅಟ್ಟಹಾಸ ಮೆರೆಯುತ್ತಿದ್ದಾರೆ.
ಉಮಾಕಾಂತ ಖಾರ್ವಿ ಕುಂದಾಪುರ.
ಕರ್ನಾಟಕ, ಗೋವಾ ಮತ್ತು ಮುಂಬೈನಾದ್ಯಂತ ಇರುವ ನಮ್ಮ ಎಲ್ಲಾ ಖಾರ್ವಿ ಸಮಾಜ ಸಂಬಂಧಿ ಸಂಘಗಳು ಮತ್ತು ಸಂಸ್ಥೆಗಳಿಗೆ ಖಾರ್ವಿಯನ್‌ಲೈನ್ ಪರವಾಗಿ ಇದು ಪ್ರಾಮಾಣಿಕ ವಿನಂತಿಯಾಗಿದೆ, ದಯವಿಟ್ಟು ಟೊಂಕದಲ್ಲಿ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಲು ಸ್ವಲ್ಪ ಸಮಯ ನೀಡಿ ಮತ್ತು ಅವರನ್ನು ಬೆಂಬಲಿಸಲು ಪ್ರಯತ್ನಿಸಿ.
Destruction is not Development (ವಿನಾಶ ಮಾಡಿ ಅಭಿವೃದ್ಧಿ ಆಗೋಲ್ಲ). ಮತ್ತು ಪ್ರಾಮಾಣಿಕ ಅಭಿವೃದ್ಧಿ ಯೋಜನೆಗಳು ಅಸ್ತಿತ್ವಕ್ಕೆ ಬರಲು 13 ವರ್ಷಗಳನ್ನು ತೆಗೆದುಕೊಳ್ಳುವುದಿಲ್ಲ.