ಶಶಿಯ ಅಂಗಳದಲ್ಲಿ ಚಂದ್ರಯಾನ 3 ಚಾರಿತ್ರಿಕ ಸಾಧನೆಯ ಹೊಸ್ತಿಲಲ್ಲಿ ಭಾರತ

ಸೌರಮಂಡಲದ ಅಧಿಪತಿ ಸೂರ್ಯ.ಚಂದ್ರ ಭೂಮಿಯ ಉಪಗ್ರಹ.ನವಗ್ರಹಗಳಲ್ಲಿ ಒಂದಾದ ಚಂದ್ರ ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿದೆ.ಹುಣ್ಣಿಮೆಯ ಬೆಳದಿಂಗಳ ರಾತ್ರಿಯಲ್ಲಿ ಚಂದ್ರನನ್ನು ವೀಕ್ಷಿಸಿದರೆ ಮೊಲದ ಎರಡು ಕಿವಿಗಳನ್ನು ಹೋಲುವ ರಚನೆ ಮತ್ತು ಅದರ ಸುತ್ತಮುತ್ತ ನೆರಳಿರುವ ಜಾಗ ಸ್ಪಷ್ಟವಾಗಿ ಕಣ್ಣಿಗೆ ಗೋಚರಿಸುತ್ತದೆ.

ಈ ಬಗ್ಗೆ ಹಲವಾರು ಪುರಾಣ ಕಥೆಗಳು ಇವೆಯಾದರೂ ಚಂದ್ರನ ಮೇಲೆ ಮಾನವನ ಹಲವಾರು ಸಂಶೋಧನೆಯ ಬಳಿಕ ನಮ್ಮ ಚಿಂತನೆಗಳಲ್ಲಿ ವ್ಯತ್ಯಾಸಗಳಾಗಿವೆ. ಚಂದ್ರಬಿಂಬದ ಕಪ್ಪು ಭಾಗದ ಕಾರಣ ಮೊಲದಂತೆ ಅದು ಕಾಣುತ್ತದೆಂದು ಭ್ರಮೆ ಅಷ್ಟೇ. ಚಂದ್ರನ ಮೇಲ್ಮೈಲಕ್ಷಣಗಳಲ್ಲಿ ಎರಡು ವಿಭಿನ್ನ ಪ್ರಕಾರವಿದೆ.ಅದರಲ್ಲಿ ಒಂದು ಬೆಟ್ಟಗಳ ಸಾಲಿನ ಏರುಪೇರಾದ ಎತ್ತರದ ಹೈಲ್ಯಾಂಡ್ಸ್.ಇದು ಭೂಮಿಯಿಂದ ನೋಡಿದರೆ ತಿಳಿಬಣ್ಣದಲ್ಲಿ ಗೋಚರಿಸುತ್ತದೆ.ಎರಡನೆಯದು ತಗ್ಗುಪ್ರದೇಶ .ಇದು ಕಪ್ಪುಬಣ್ಣದ ನೆರಳಿನ ಪ್ರದೇಶ.ಇದನ್ನು ಮೇರಿಯಾ ಎಂದು ಕರೆಯುತ್ತಾರೆ.ಲ್ಯಾಟಿನ್ ಭಾಷೆಯಲ್ಲಿ ಮೇರಿಯಾ ಅಂದರೆ ಸಮುದ್ರ.

ಇದುವರೆಗೆ ಚಂದ್ರಯಾನ ಮಾಡಿರುವ ಅಪೋಲೊ ನೌಕೆಗಳು,ಲ್ಯೂನಾ ಲ್ಯಾಂಡರ್ ಗಳು ಇಳಿದಿರುವುದು ಇದೇ ಸ್ಥಳದಲ್ಲೇ.ಚಂದ್ರನ ಮೇಲ್ಮೈಯ ಶಿಲಾ ಮಣ್ಣುಗಳ ಮಾದರಿಯನ್ನು ಇದೇ ಜಾಗದಿಂದ ಸಂಗ್ರಹಿಸಿ ತಂದಿದ್ದಾರೆ. ಹೈಲ್ಯಾಂಡಿನ ಬೆಟ್ಟಗುಡ್ಡಗಳ ಪ್ರದೇಶದಲ್ಲಿ ಚಂದ್ರಯಾನದ ನೌಕೆಗಳು ಇಳಿಯುವುದು ಅಪಾಯಕಾರಿ.ಮೇರಿಯಾ ತಗ್ಗು ಪ್ರದೇಶಗಳಲ್ಲಿ ಅಂತಹ ಸಮಸ್ಯೆ ಬಹಳ ಕಡಿಮೆ.ಇಲ್ಲಿ ಸಂಶೋಧನೆಗೆ ಅಷ್ಟೇನೂ ತೊಡಕಾಗುವುದಿಲ್ಲ.ಆದರೆ ನಮ್ಮ ದೇಶದ ಹೆಮ್ಮೆಯ ವಿಕ್ರಂ ಲ್ಯಾಂಡರ್ ಇದೆಲ್ಲವನ್ನು ಮೀರಿ ಚಂದ್ರನ ಗಾಢಾಂಧಕಾರದ ದಕ್ಷಿಣ ಭಾಗದಲ್ಲಿ ಇಳಿಯವ ಮಹೋನ್ನತ ಸಾಹಸಕ್ಕೆ ಸಿದ್ಧತೆ ನಡೆಸಿರುವುದು ಕಾಲವೂ ಕೂಡಾ ಅಳಿಸಲಾಗದ ಚಾರಿತ್ರಿಕ ದಾಖಲೆ ಬರೆಯಲಿದೆ.

ಚಂದ್ರನ ಮೇಲ್ಮೈಯ ಬೆಟ್ಟಗುಡ್ಡಗಳ ಕೊರಕಲು ಪ್ರದೇಶ ಹೈಲ್ಯಾಂಡ್ ಹಲವು ಕೋಟಿ ವರ್ಷಗಳ ಹಿಂದೆ ತೀರಾ ಸಮತಟ್ಟಾದ ಪ್ರದೇಶವಾಗಿತ್ತು.ಉಲ್ಕೆಗಳು ನಿರಂತರವಾಗಿ ಚಂದ್ರನ ನೆಲಕ್ಕೆ ಬಡಿದು,ಬಡಿದೂ ದ್ವಂಸಗೊಳಿಸಿತ್ತು.ಉಲ್ಕೆಗಳು ಅಪ್ಪಳಿಸಿದ ಚಂದ್ರನ ನೆಲದಲ್ಲಿ ಸಹಸ್ರಾರು ಕುಳಿಗಳು ಸೃಷ್ಟಿಯಾಯಿತು.ಇವುಗಳ ಗಾತ್ರ ಎಷ್ಟೆಂದರೆ ಕೆಲವೊಂದು ಕುಳಿಗಳ ಸುತ್ತಳತೆ ನೂರಾರು ಕೀಮೀಗಳನ್ನು ಮೀರುತಿತ್ತು.ಪ್ರಸ್ತುತ ವಿಕ್ರಂ ಲ್ಯಾಂಡರ್ ಇಂತಹ ಕೆಲವು ಕುಳಿಗಳ ಚಿತ್ರವನ್ನು ಕಳುಹಿಸಿಕೊಟ್ಟಿದೆ. ಅಪೋಲೊ ನೌಕೆಗಳು ಈ ಪ್ರದೇಶಕ್ಕೆ ಇಳಿದು ಅನ್ವೇಷಣೆ ಮಾಡಿದಾಗ ಅಚ್ಚರಿ ಕಾದಿತ್ತು.ಇಲ್ಲಿ ಅಲ್ಯುಮಿನಿಯಂ ಅಧಿಕವಾಗಿರುವ ಪ್ಲೇಜೀಯೋ ಕೇಸ್ ಎಂಬ ಖನಿಜದಿಂದಾದ ವಿಶಿಷ್ಟ ಶಿಲೆಗಳು ಪತ್ತೆಯಾಯಿತು.

ಅದೇ ಚಂದ್ರನ ಇನ್ನೊಂದು ಪ್ರದೇಶವಾದ ಮೇರಿಯಾ ತಗ್ಗಿನಲ್ಲಿ ಜ್ವಾಲಾಮುಖಿಗಳು ಭುಗಿಲೆದ್ದು ಲಾವಾರಸ ಸುರಿಸಿದವು. ಅದು ಕ್ರಮೇಣ ಘನೀಕೃತವಾಗಿ ಮೇಗ್ನೀಷಯಂ ಪ್ರಧಾನವಾದ ಚಂದ್ರನ 90 ರಷ್ಟು ಭಾಗದಲ್ಲಿ ಬೆಸ್ಟಾಲ್ ಶಿಲೆಯಾಗಿ ವ್ಯಾಪಿಸಿಕೊಂಡಿತ್ತು. ಇದಲ್ಲದೇ ಸಿಲಿಕಾನ್,ಅಲ್ಯುಮಿನಿಯಂ ಕ್ಯಾಲ್ಸಿಯಂ, ಕಬ್ಬಿಣ,ಟೈಟೇನಿಯಂ ಕ್ರೋಮಿಯನ್ ,ಯಿಟ್ರಿಯಮ್ ,ಜೆರ್ ಕೋನಿಯಮ್ ಅಧಿಕ ಪ್ರಮಾಣದಲ್ಲಿ ಪತ್ತೆಯಾಗಿದೆ.ಅಷ್ಟೇ ಅಲ್ಲ ಭೂಮಿಯಲ್ಲಿ ಅಲಭ್ಯವಾಗಿರುವ ಪೈರಾಕ್ಸಮಾಗ್ನೈಟ್, ಸ್ಪಿನೆಲ್ ಮತ್ತು ಫೇರೋಸ್ಯುಡೋ ಬ್ರುಕೈಟ್ ಎಂಬ ಖನಿಜಗಳು ಕೂಡಾ ಚಂದ್ರನಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಕಂಡು ಬಂದಿದೆ. ಖನಿಜಯುಕ್ತ ಅಗ್ನಿಶಿಲೆಗಳು ಚಂದ್ರನ ಮುಖದಲ್ಲಿ ಐವತ್ತು ಕೀಮೀ ಕಡು ಮಂದದ ಹೊರಕವಚವನ್ನು ರೂಪಿಸಿದೆ. ಒಮ್ಮೊಮ್ಮೆ ಚಂದ್ರಶಿಲೆಗಳು ಕಿತ್ತು ಭೂಮಿಗೆ ಬಿದ್ದ ಘಟನೆಯೂ ಉಂಟು.ಇದನ್ನು ಬಾಹ್ಯಾಕಾಶ ವಿಜ್ಞಾನದ ಪರಿಭಾಷೆಯಲ್ಲಿ ಆಕಾಶದಲ್ಲಿ ಸಂಭವಿಸುವ ಟ್ರಾಫಿಕ್ ಆಕ್ಸಿಡೆಂಟ್ ಎಂದು ಕರೆಯುತ್ತಾರೆ.ನಭೋಮಂಡಳದಲ್ಲಿ ಅಂಡೆಳೆಯುವ ಕಾಯಗಳು ಚಂದ್ರನ ಮುಖವನ್ನು ಘರ್ಷಿಸಿ ಅಲ್ಲಿಂದ ಒಂದಿಷ್ಟು ಚೂರುಗಳನ್ನು ಎಗರಿಸಿಕೊಂಡು ಹೋಗುತ್ತದೆ.ಈ ಸಮಯದಲ್ಲಿ ಅದರ ರಭಸದ ತೀವ್ರತೆ ಚಂದ್ರನ ಗುರುತ್ವಾಕರ್ಷಣ ಶಕ್ತಿಯನ್ನು ಮೀರಿ ಭೂಮಿಯ ಮೇಲೆ ಬಂದು ಬೀಳುತ್ತದೆ.

ಚಂದ್ರನನ್ನು ನಿರಂತರವಾಗಿ ಅಪ್ಪಳಿಸುತ್ತಿದ್ದ ಉಲ್ಕೆಗಳು ಸುಮಾರು 350 ವರ್ಷಗಳ ಹಿಂದೆ ಸ್ವಲ್ಪ ಮಟ್ಟಿಗೆ ತಮ್ಮ ಆಕ್ರಮಣವನ್ನು ನಿಲ್ಲಿಸಿದವು ಎಂದು ಬಾಹ್ಯಾಕಾಶ ವಿಜ್ಞಾನಿಗಳು ಹೇಳುತ್ತಾರೆ. ಚಂದ್ರ ಕಬ್ಬಿಣಯುಕ್ತ ಘನಗೋಳ.ಅಲ್ಲಿ ವಾತಾವರಣ ಇಲ್ಲ.ಶಬ್ದವೂ ಇಲ್ಲ.50 kg ತೂಕದ ವ್ಯಕ್ತಿ ಚಂದ್ರನ ಮೇಲೆ ಕೇವಲ 8kg ತೂಗುತ್ತಾನೆ.ಚಂದ್ರನ ಒಂದು ದಿನದ ಅವಧಿ ಭೂಕಾಲಮಾನದ 27 ರಿಂದ 29 ದಿನಗಳು. ವಿಕ್ರಂ ಲ್ಯಾಂಡರ್ ನಿಂದ ಹೊರಬರುವ ಪ್ರಗ್ಯಾನ್ ರೋವರ್ ಒಂದು ದಿನ ಚಂದ್ರನ ಅಂಗಳದಲ್ಲಿ ಕಾರ್ಯ ನಿರ್ವಹಿಸಲಿದೆ ಎಂದು ಹೇಳಲಾಗಿದೆ.

ನಮ್ಮ ವಿಜ್ಞಾನಿಗಳ ಅಭೂತಪೂರ್ವ ಪರಿಶ್ರಮದ ಫಲವಾಗಿ ಶಶಿಯ ಅಂಗಳದಲ್ಲಿ ಚಂದ್ರಯಾನ ಸಂಪನ್ನಗೊಳ್ಳುವ ಎಸಮಯಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ ಉಳಿದಿದೆ.ಇಂದು ಆಗಸ್ಟ್ 23 ರ ಸಂಜೆ 6.23 ಕ್ಕೆ ಮೂಹೂರ್ತ ನಿಗದಿ ಪಡಿಸಲಾಗಿದೆ.ಈ ಚಾರಿತ್ರಿಕ ವಿಕ್ರಮ ವನ್ನು ಜಗತ್ತು ವೀಕ್ಷಿಸಲು ಇಸ್ರೋ ನೇರ ಪ್ರಸಾರದ ಅವಕಾಶ ಕಲ್ಪಿಸಿದೆ.ಇಡೀ ಜಗತ್ತೇ ಭಾರತದತ್ತ ಬೆರಗುಗಣ್ಣಿನಿಂದ ನೋಡುತ್ತಿದೆ.ಚಂದ್ರಯಾನ 3 ಯಶಸ್ವಿಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ.

kharvionline.com

Leave a Reply

Your email address will not be published. Required fields are marked *