ವಿಶ್ವ ಪ್ರಾಣಿ ಕಲ್ಯಾಣ ದಿನಾಚರಣೆಯ ಮಹತ್ವ

ವನ್ಯಪ್ರಾಣಿಗಳಿಂದ ತುಂಬಿದ ಕಾಡು ಮೇಡುಗಳಿರುವರೆಗೆ ಮಾತ್ರ ಮಾನವನ ಪೀಳಿಗೆಗೆ ಭೂಮಿ ಆಶ್ರಯ ನೀಡುತ್ತದೆ ಎಂದು ಸಂಸ್ಕೃತ ಶ್ಲೋಕವೊಂದು ಸಾದರಪಡಿಸುತ್ತದೆ. ಪ್ರಾಣಿಗಳ ಹಕ್ಕುಗಳು,ಕಲ್ಯಾಣ ಮತ್ತು ರಕ್ಷಣೆಯ ತುರ್ತು ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ಅಕ್ಟೋಬರ್ 4 ರಂದು ವಿಶ್ವ ಪ್ರಾಣಿ ಕಲ್ಯಾಣ ದಿನವನ್ನು ಆಚರಿಸಲಾಗುತ್ತದೆ. 1931 ರಲ್ಲಿ ಇಟೆಲಿಯ ಫಾರೆನ್ಸ್ ನಲ್ಲಿ ನಡೆದ ಅಂತರಾಷ್ಟ್ರೀಯ ಪ್ರಾಣಿ ಸಂರಕ್ಷಣಾ ಸಮ್ಮೇಳನದಲ್ಲಿ ಪ್ರತಿವರ್ಷ ಅಕ್ಟೋಬರ್ 4 ನ್ನು ವಿಶ್ವ ಪ್ರಾಣಿ ಕಲ್ಯಾಣ ದಿನವನ್ನಾಗಿ ಆಚರಿಸಲು ನಿರ್ಣಯ ಅಂಗೀಕರಿಸಲಾಯಿತು.ಅಂದಿನಿಂದ ಪ್ರತಿವರ್ಷ 0ct 4 ರಂದು ವಿಶ್ವ ಪ್ರಾಣಿ ಕಲ್ಯಾಣ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಮಾನವನು ಪಳಗಿಸಿ ಸಾಕಿ ಬೆಳೆಸಿದ ಜೀವಿಗಳ ಹೊರತಾಗಿ ಉಳಿದೆಲ್ಲಾ ಜೀವಿಗಳನ್ನು ವನ್ಯಜೀವಿಗಳು ಎಂದು ಪರಿಗಣಿಸಲಾಗಿದೆ. ವಿವಿಧ ಜಾತಿಯ ವನ್ಯಜೀವಿಗಳು ಮತ್ತು ಅವುಗಳ ವಾಸಸ್ಥಾನಗಳ ಮೇಲೆ ಮಾನವರು ನಡೆಸುತ್ತಿರುವ ಅವ್ಯಾಹತ ದಾಳಿಯಿಂದಾಗಿ ಅನೇಕ ಜೀವಿಗಳು ನಶಿಸಿ ಹೋಗಿದೆ.ಇನ್ನು ಕೆಲವು ವಿನಾಶದ ಅಂಚಿನಲ್ಲಿವೆ. ಪ್ರಪಂಚದಾದಂತ್ಯ ಮಾನವ ಚಟುವಟಿಕೆಗಳಿಂದಾಗಿ ವನ್ಯಜೀವಿಗಳು ಬಹಳಷ್ಟು ಪ್ರಮಾಣದಲ್ಲಿ ನಶಿಸಿಹೋಗಿವೆ.ಮಾನವರು ಈ ಜೀವಿಗಳನ್ನು ಲೆಕ್ಕವಿಡಲು ಪ್ರಾರಂಭಿಸಿದಾಗಿನಿಂದ ಸುಮಾರು 120 ಜಾತಿಗಳ ಸಸ್ತನಿಗಳೂ ಮತ್ತು 225 ಜಾತಿಗಳ ಹಕ್ಕಿಗಳು ನಿರ್ನಾಮವಾಗಿವೆ.ಇನ್ನೂ 650 ಜಾತಿಯ ಹಕ್ಕಿಗಳು ಮತ್ತು ಸಸ್ತನಿಗಳು ,ಅಸಂಖ್ಯಾತ ಕೀಟಗಳು,ಸರೀಸೃಪಗಳು,ಪ್ರಾಣಿಗಳು ವಿನಾಶದ ಅಂಚಿನಲ್ಲಿವೆ. ವನ್ಯಜೀವಿಗಳ ಮತ್ತು ವನ್ಯಜೀವಿ ಉತ್ಪನ್ನಗಳು ಕ್ರಮವಾಗಿ ಪ್ರಾಣಿ ಸಂಗ್ರಹಾಲಯಗಳಿಗೆ,ಸಾಕಲು,ಸಂಶೋಧನೆಗೆ ಮತ್ತು ತುಪ್ಪಳ,ಚರ್ಮ,ಗರಿಗಳಿಗೆ ಮ್ಯೂಸಿಯಂಗಳಿಗೆ ಇತ್ಯಾದಿ ಮಾರಾಟದಿಂದಾಗಿ ಅನೇಕ ಜಾತಿಯ ಜೀವಿಗಳ ಸಂಖ್ಯೆ ನಶಿಸಿದೆ.ವನ್ಯಜೀವಿಯೊಂದು ಹೆಚ್ಚೆಚ್ಚು ಅಪರೂಪವಾಗುತ್ತಾ ಹೋದಂತೆಲ್ಲಾ ಕಳ್ಳಬೇಟೆಗಾರರಿಗೆ ಅದು ಹೆಚ್ಚೆಚ್ಚು ಲಾಭದಾಯಕವಾಗುತ್ತದೆ.

ವನ್ಯಜೀವಿಗಳ ವಿನಾಶಕ್ಕೆ ಮತ್ತೊಂದು ಕಾರಣವು ಇದೆ.ಜೀವಿಗಳನ್ನು ಅವುಗಳ ನೈಸರ್ಗಿಕವಾದ ಭಕ್ಷಕ ಜೀವಿಗಳಲ್ಲಿದ ಪ್ರದೇಶಗಳಿಗೆ ತಂದುಬಿಟ್ಟರೆ ಅವುಗಳು ಕೆಲವೇ ಸಮಯದಲ್ಲಿ ಪರಿಸರಕ್ಕೆ ಹೊಂದಿಕೊಳ್ಳಲು ಆಗದೇ ಸಾಯುತ್ತವೆ.ಉದಾಹರಣೆಗೆ ವಿದೇಶದಿಂದ ತರಲಾದ ಚೀತಾಗಳು ಸಾವನ್ನಪ್ಪುತ್ತಿರುವುದು. ಈ ಹಿಂದೆ ಮೊಗಲ್ ದೊರೆಗಳು ನೂರಾರು ಸಂಖ್ಯೆಯಲ್ಲಿ ಚೀತಾಗಳನ್ನು ಹಿಡಿದು ಪಳಗಿಸಿ ಜಿಂಕೆಗಳ ಬೇಟೆಯಾಡುತ್ತಿದ್ದರ ಬಗ್ಗೆ ಇತಿಹಾಸದಲ್ಲಿ ಉಲ್ಲೇಖವಿದೆ.ಭಾರತದಲ್ಲಿ ಈಗ ಚೀತಾಗಳು ಸಂಪೂರ್ಣ ವಿನಾಶವಾಗಿ ಎಪ್ಪತ್ತು ವರ್ಷಗಳಾದವು. ಆ ಕೊರತೆ ನೀಗಿಸುವ ಸಲುವಾಗಿ ವಿದೇಶದಿಂದ ಆಮದು ಮಾಡಿಕೊಂಡ ಚೀತಾಗಳು ಇಲ್ಲಿನ ಪರಿಸರಕ್ಕೆ ಹೊಂದಿಕೊಳ್ಳಲಾಗದೇ ಚಿಂತಾಜನಕ ರೀತಿಯಲ್ಲಿ ಸಾಯುತ್ತಿರುವುದನ್ನು ಕಾಣಬಹುದು. ಇದರ ಜೊತೆಗೆ ದೇಶದಲ್ಲಿ 9 ತಿಂಗಳ ಅವಧಿಯಲ್ಲಿ 146 ಹುಲಿಗಳು ಸಹಜ ಮತ್ತು ಅಸಹಜ ರೀತಿಯಲ್ಲಿ ಸತ್ತಿದ್ದವೆ ಎಂಬ ಕಳವಳಕಾರಿ ವರದಿಯೂ ಪ್ರಕಟವಾಗಿದೆ.

ವನ್ಯಜೀವಿಗಳ ನೆಲೆ ಸಾಮಾನ್ಯವಾಗಿ ಅರಣ್ಯಗಳು.ನಾಗರಿಕತೆಯ ಮೊದಲು ಆದಿಮಾನವನು ವನ್ಯಪ್ರಾಣಿಗಳೊಂದಿಗೆ ಬೆಳೆದು ಬಂದ ಜೀವಿ.ನಾಗರಿಕತೆಯ ಮೊದಲ ಹೆಜ್ಜೆ ಕೃಷಿ.ಅಲ್ಲಿಂದ ಅರಣ್ಯ ನಾಶ ಆರಂಭ. ಕೃಷಿಯ ಉಗಮವಾದದು ಹತ್ತು ಹದಿನೈದು ಸಾವಿರ ವರ್ಷಗಳ ಹಿಂದೆ.ಕಾಡು ಕಡಿದು ,ಸುಟ್ಟು ಬೂದಿ ಮಾಡಿ ಅದರ ಸಾರದಿಂದ ಒಂದೆರಡು ವರ್ಷ ಕುಮರಿ ಬೇಸಾಯ ಮಾಡಿ ಭೂಮಿ ಸಾರಹೀನವಾದಾಗ,ಇನ್ನೊಂದು ಕಡೆ ಕಾಡು ಕಡಿಯುವುದು ಮೊದಲು ಹುಟ್ಟಿದ ಕೃಷಿ ಪದ್ಧತಿ.ಕಾಲ ಕ್ರಮೇಣ ಸುತ್ತಮುತ್ತಲಿನ ಕಾಡು ಬರಿದಾಗಿ ವನ್ಯಜೀವಿಗಳು ತಮ್ಮ ನೆಲೆಗಳನ್ನು ಕಳೆದುಕೊಳ್ಳತೊಡಗಿತು. ಬೇಟೆಗಾಗಿ,ಚರ್ಮಕ್ಕಾಗಿ ವನ್ಯಮೃಗಗಳ .ಆಹಾರಕ್ಕಾಗಿ ಸಸ್ಯಹಾರಿ ಪ್ರಾಣಿಗಳ ಪಕ್ಷಿಗಳ ನಾಶ.ಇವೆಲ್ಲದರ ಪರಿಣಾಮವಾಗಿ ಪ್ರಕೃತಿಯ ಸಮತೋಲನ ಏರುಪೇರು. ಪ್ರಸ್ತುತ ದಿನಗಳಲ್ಲಿ ಕಾಡುಪ್ರಾಣಿಗಳ ಮತ್ತು ಮನುಷ್ಯರ ನಡುವಿನ ಸಂಘರ್ಷ ತಾರಕಕ್ಕೇರಿದೆ.ಕಾಡಿನ ಸಸ್ಯಹಾರಿ ಪ್ರಾಣಿಗಳನ್ನು ಮನುಷ್ಯ ಬೇಟೆಯಾಡಿ ತಿಂದು ಮುಗಿಸಿರುವುದರಿಂದ ಚಿರತೆ,ಹುಲಿಯಂತಹ ಪ್ರಾಣಿಗಳು ನಾಡಿಗೆ ಆಹಾರವನ್ನು ಅರಸುತ್ತಾ ಬರುತ್ತವೆ.ಕಾಡು ಹಂದಿಗಳು ರೈತರ ಹೊಲಗಳಿಗೆ ದಾಂಗುಡಿಯಿಡುತ್ತಿವೆ.ಕಾಡಂಚಿನ ಊರುಗಳಲ್ಲಿ ಆನೆಗಳು ದಾಳಿ ಇಡುತ್ತವೆ.ಇವೆಲ್ಲ ಕಾಡುನಾಶ ಮತ್ತು ಸಸ್ಯಹಾರಿ ಪ್ರಾಣಿಗಳ ನಾಶದ ಪರಿಣಾಮಗಳು.

ವನ್ಯಜೀವಿಗಳು ಸೌಂದರ್ಯಾತ್ಮಕ,ಮನರಂಜನೀಯ ಮತ್ತು ಆರ್ಥಿಕ ಮೌಲ್ಯಗಳನ್ನು ಹೊಂದಿವೆ.ಅವುಗಳು ಪರಿಸರದ ಸಮತೋಲನ ಕಾಪಾಡುವುದರ ಜೊತೆಗೆ ಪ್ರವಾಸೋದ್ಯಮದ ಬೆಳವಣಿಗೆಗೆ ಸಹಾಯಕವಾಗುವುವು.ಸಮುದ್ರದ sea urchin ಜೀವಿಯಿಂದ ಮಾನವನ ಭ್ರೂಣದ ಬಗೆಯ ಅರಿವು,ಕೆಲವು ಮರುಳುಗಾಡಿನ ಕಪ್ಪೆಗಳಿಂದ ಮಾನವ ಜಾತಿಯಲ್ಲಿನ ಗರ್ಭ ಕಟ್ಟುವ ಬಗೆ ಅರಿವು,ಕೆಲವು ಜಾತಿಯ ಕಪಿಗಳಿಂದ ಮಾನವನ ರಕ್ತದ ಬಗ್ಗೆ ಮಾಹಿತಿ,ಜಿಂಕೆಗಳ ಕೊಂಬಿನಿಂದ ನೈಸರ್ಗಿಕ ಪರಿಸರವು ವಿದ್ಯುತ್ ವಿಕಿರಣ ಕ್ರಿಯಾಶಕ್ತಿಯ ಫಲವಾಗಿ ಮಲಿನಗೊಳ್ಳುವ ಮಟ್ಟ,ಕೆಲವು ಪ್ರಾಣಿಗಳ ವರ್ತನೆಯಿಂದ ಮಾನವನ ಮಾನಸಿಕ ಸ್ಥಿರತೆ ವೈವಿಧ್ಯತೆಗಳ ಬಗೆ ಮಾಹಿತಿ.ಹೀಗೆ ಹಲವಾರು ಚಾರಿತ್ರಿಕ ವೈಜ್ಞಾನಿಕ ಸಂಶೋಧನೆಗಳಿಗೆ ವನ್ಯಜೀವಿಗಳು ಪರೋಕ್ಷವಾಗಿ ಮತ್ತು ಅಪರೋಕ್ಷವಾಗಿ ನೆರವಾಗಿದೆ.ಪಕ್ಷಿಗಳು ಹಾನಿಕಾರಕ ಕ್ರಿಮಿಕೀಟಗಳ ನಾಶಕ್ಕೆ,ಶೌಚಾ ನಿರ್ಮೂಲನಕ್ಕೆ,ಪರಾಗ ದಾನಕ್ಕೆ,ಬೀಜ ವ್ಯಾಪನೆಗೆ ಮನುಷ್ಯನಿಗೆ,ಪರಿಸರಕ್ಕೆ ನೆರವಾಗಿದೆ. ಜೀವಗೋಳದಲ್ಲಿನ ಪ್ರತಿಯೊಂದು ಜೀವಿಗೂ ತನ್ನದೇ ಅವಶ್ಯಕತೆಗಳಿರುತ್ತದೆ.ಮಾನವರು ಇತರ ಜೀವಿಗಳ ಅವಶ್ಯಕತೆಗಳನ್ನು ಕಂಡು ಗೌರವಿಸಬೇಕು.ಭೂಮಿ ಮತ್ತು ಅದರ ಮೇಲಿನ ಎಲ್ಲ ಜೀವಿಗಳೆಡೆಗೂ ಗೌರವ ಹೊಂದಿರುವ ಬದುಕು ನಮ್ಮದಾಗಬೇಕು.

ಎಲ್ಲ ಜೀವಿಗಳು ,ಮಾನವ ಪ್ರಾಣಿ ಮತ್ತು ಸಸ್ಯ ಪವಿತ್ರವಾದವು,ಮತ್ತು ಒಂದಕ್ಕೆ ಆಘಾತವಾದಾಗ ಇನ್ನೊಂದು ತತ್ತರಿಸುತ್ತದೆ ಎಂಬುದನ್ನು ಭಾರತೀಯ ಪರಂಪರೆ ನಮಗೆ ಕಲಿಸಿದೆ.ವನ್ಯಜೀವಿ ಮತ್ತು ಅರಣ್ಯ ಸಂರಕ್ಷಣೆಯು ಈ ಪರಿಕಲ್ಪನೆಯನ್ನೇ ಆಧರಿಸಿದೆ.ನೈಸರ್ಗಿಕ ಅರಣ್ಯಗಳು ಮತ್ತು ವನ್ಯಜೀವಿಗಳು ಪ್ರಕೃತಿದತ್ತ ವರಗಳು.ಇವುಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ.

ಉಮಾಕಾಂತ ಖಾರ್ವಿ ಕುಂದಾಪುರ.

Leave a Reply

Your email address will not be published. Required fields are marked *