ದೀಪ ಬದುಕಿನ ಸಂಕೇತ.ಪ್ರತಿಯೊಬ್ಬರಲ್ಲೂ ಅಂತರ್ಗತವಾಗಿರುವ ಜ್ಞಾನದೀವಿಗೆಯನ್ನು ಬೆಳಗಿಸುವ ಹಬ್ಬವೇ ದೀಪಾವಳಿ.ದೀಪಾವಳಿ ಸಂದರ್ಭದಲ್ಲಿ ದೀಪಗಳ ಸಾಲುಗಳು ಕತ್ತಲೆಯಲ್ಲಿ ತೇಜೋಮಯವಾಗಿ ಪ್ರಜ್ವಲಿಸಿದರೆ,ಬಣ್ಣಬಣ್ಣದ ಚಿತ್ತಾಕರ್ಷಕ ಗೂಡುದೀಪಗಳ ಸಾಲು ಬೆಳಕಿನಾಟವನ್ನು ವೈಭವಯುತವಾಗಿ ವಿಜೃಂಭಿಸುವಂತೆ ಮಾಡುತ್ತದೆ.ದೀಪಾವಳಿಯಿಂದ ಹಿಡಿದು ತುಳಸಿ ಹಬ್ಬದ ತನಕ ಮನೆ ಮನೆಯಲ್ಲಿ,ಬೆಳಕಿನಾಟದ ಪ್ರಭೆಯನ್ನು ಉಜ್ವಲಗೊಳಿಸುವ ಗೂಡುದೀಪಗಳಿಗೆ ಪ್ರಾಚೀನ ಪರಂಪರೆಗಳ ಸುಧೀರ್ಘ ಇತಿಹಾಸವಿದೆ.
ಪ್ರಾಚೀನಕಾಲದಲ್ಲಿ ಹಿಂದೂಗಳು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮನೆಯ ಮುಂದೆ ,ಉಪ್ಪರಿಗೆ ಮೇಲೆ ಗೂಡುದೀಪಗಳನ್ನು ತೂಗುಹಾಕುತ್ತಿದ್ದರು.ಪೂರ್ವಜರ ಆತ್ಮಗಳು ಆಕಾಶ ಮಾರ್ಗವಾಗಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಭೂಮಿಗೆ ಬೆಳಕಿನ ಸಹಾಯದಿಂದ ಬರಲು ಗೂಡುದೀಪಗಳನ್ನು ತೂಗುಹಾಕುತ್ತಿದ್ದರು.
ಪರಲೋಕದ ಕತ್ತಲೆಯಲ್ಲಿರುವ ಪೂರ್ವಜರ ಆತ್ಮಗಳು ದೀಪಾವಳಿಯ ಗೂಡುದೀಪಗಳ ಬೆಳಕಿನ ಸಹಾಯದಿಂದ ಭೂಲೋಕಕ್ಕೆ ಬರುತ್ತವೆ ಎಂಬ ಗಾಢವಾದ ನಂಬಿಕೆ ತಲೆತಲಾಂತರದಿಂದ ನಡೆದುಕೊಂಡು ಬಂದಿದೆ.ಈ ಗೂಡುದೀಪಗಳು ಪೂರ್ವಜರ ಆತ್ಮಗಳನ್ನು ಸ್ವಾಗತಿಸಲು ಆಕಾಶದ ಕಡೆಗೆ ಮುಖ ಮಾಡಿ ನಿಲ್ಲುತ್ತದೆ ಎಂಬ ಗಾಢವಾದ ನಂಬಿಕೆ ಇರುವುದರಿಂದ ಇದಕ್ಕೆ ಆಕಾಶ ಗೂಡುಗಳು ಎಂಬ ಹೆಸರು ಬಂತು.
ಸುಮಾರು 2200 ವರ್ಷಗಳ ಹಿಂದೆ ರಚಿತವಾದ ಮಹಾಕವಿ ಕಾಳಿದಾಸನ ಋತುಸಂಹಾರ ಮಹಾಕಾವ್ಯ ಎಲ್ಲ ರೀತಿಯ ಕಲೆ,ಕಲಾವಿದರಿಗೆ ಬಲು ಆತ್ಮೀಯವಾದ ಕಥಾವಸ್ತುಗಳಾಗಿದೆ. ಇದರಲ್ಲಿ ತಿಂಗಳುಗಳ ಅಥವಾ ಋತುಗಳ ಮಹತ್ವ ಮತ್ತು ಸಮಗ್ರ ಸಾರವನ್ನು ಅದ್ಭುತವಾಗಿ ಚಿತ್ರಿಸಲಾಗಿದೆ.ಅಂದಿನಿಂದ ಮುಂದಿನ ಸುಮಾರು 1500 ವರ್ಷಗಳ ಕಾಲಾವಧಿಯಲ್ಲಿ ಋತುಸಂಹಾರ ಬಹುಮುಖ್ಯವಾಗಿ ಚಿತ್ರಕಲೆಯ ವಿಶಿಷ್ಟ ಸ್ವರೂಪವಾದ ಚಿಕಣಿ ಚಿತ್ರಕಲೆಗೆ ಅಪೂರ್ವ ಪ್ರೇರಣೆ ನೀಡಿತು.ರಾಜಸ್ತಾನಿ ಶೈಲಿಯ ಬುಂದೇಲಖಂಡ ಚಿಕಣಿ ಚಿತ್ರಕಲೆಯಲ್ಲಿ ದೀಪಾವಳಿ ಹಬ್ಬದ ಸುಂದರ ವರ್ಣನೆ ಇದೆ. ಆ ವರ್ಣನೆಯ ಸಾಲುಗಳು ಈ ರೀತಿ ಪಡಿಮೂಡುತ್ತದೆ.ಆಗಸದ ಕತ್ತಲನ್ನೋಡಿಸಲು ಗುಡುದೀಪಗಳು ಉರಿದವು.ಮನೆಯೊಳಗಿನ ಕತ್ತಲನ್ನೋಡಿಸಲು ಸಾಲು ದೀಪಗಳು ಬೆಳಗಿದವು.ಮನದೊಳಗಿನ ಕತ್ತಲನ್ನೋಡಿಸಲು ಭಗವಂತನ ನೆನಪಿಸಿದವು.ಆಕಾಶ ಗೂಡುಗಳ ಪ್ರಭೆ ಭೂಮಂಡಲ ಪ್ರಕಾಶಿಸಿತು.
ಕೆಲವು ದಶಕಗಳ ಹಿಂದೆ ಗೂಡುದೀಪಗಳನ್ನು ದೀಪಾವಳಿಹಬ್ಬ ಬರುವ ಎರಡು ಮೂರು ವಾರದ ಮೊದಲು ರಚಿಸಲು ಪ್ರಾರಂಭಿಸುತ್ತಿದ್ದರು.ವಿವಿಧ ಮಾದರಿಯ ಗೂಡುದೀಪಗಳು ದೀಪಾವಳಿ ಹಬ್ಬದ ಸಮಯದಲ್ಲಿ ತೂಗುಹಾಕುತ್ತಿದ್ದರು.ಅಲ್ಲಿ ಸಾಂಪ್ರದಾಯಿಕ ಮನಮೋಹಕ ಲೋಕ ಸೃಷ್ಟಿಯಾಗುತ್ತಿತ್ತು.
ಕಾಲ ಸರಿದಂತೆ ಬಿದಿರು ಮತ್ತು ಬಣ್ಣದ ಪತಾಕೆಯಿಂದ ರಚಿಸುತ್ತಿದ್ದ ಗೂಡುದೀಪಗಳು ನೇಪಥ್ಯಕ್ಕೆ ಸರಿಯಿತು.ಆಧುನಿಕ ವಿನ್ಯಾಸದ ವಿವಿಧ ಶೈಲಿಯ ಆಕರ್ಷಕ ರೇಡಿಮೇಡ್ ಗೂಡುದೀಪಗಳು ಮಾರುಕಟ್ಟೆಗೆ ಲಗ್ಗೆ ಇಟ್ಟವು.ಕಾಲಾಯ ತಸ್ಮೈ ನಮಯಾ.ಕಾಲದ ಜೊತೆಗೆ ನಾವು ಹೊಂದಿಕೊಳ್ಳಲೇ ಬೇಕು.ಪ್ರಸ್ತುತ ಆಧುನಿಕ ವಿನ್ಯಾಸದ ಈ ಗೂಡುದೀಪಗಳು ದೀಪಾವಳಿ ಹಬ್ಬ ಮಾತ್ರವಲ್ಲ,ವಿವಿಧ ಸಮಾರಂಭದ ಆಕರ್ಷಕ ಮತ್ತು ಅಲಂಕಾರಿಕ ಕಮಾನು,ತೋರಣ ಕಟ್ಟಲು ಬಳಕೆಯಾಗುತ್ತಿದೆ.
ಇಂದು ಭಾರತದ ಮಾರುಕಟ್ಟೆಯಲ್ಲಿ ಚೀನಾದಲ್ಲಿ ತಯಾರಿಸಲ್ಪಟ್ಟ ಅಗ್ಗದ ಗೂಡುದೀಪಗಳು ಭರ್ಜರಿಯಾಗಿ ಮಾರಲ್ಪಡುತ್ತದೆ.ಹಿಂದೊಮ್ಮೆ ಲೋಕಲ್ ಫಾರ್ ವೊಕಲ್ ಎಂಬ ಅಭಿಯಾನ ಶುರುವಾಗಿ ಅಷ್ಟೇ ವೇಗದಲ್ಲಿ ಸ್ಥಬ್ದವಾಯಿತು. ಈ ಗುಡುದೀಪಗಳು ಚೀನಾದ ಝೇಜಿಯಾಂಗ್ ಪ್ರಾಂತ್ಯದ ವೆನ್ ಝೋ ಮತ್ತು ಯೂ ಪಟ್ಟಣಗಳಲ್ಲಿ ತಯಾರಾಗುತ್ತದೆ.ಈ ಪಟ್ಟಣಗಳು ಚೀನಾದ ಮುಖ್ಯ ರಪ್ತು ಕೇಂದ್ರಗಳಾಗಿದ್ದು,ಚೀನಾದ ಅಗ್ಗದ ವಸ್ತುಗಳು ತಯಾರಾಗುವುದು ಬಹುತೇಕ ಇದೇ ಪಟ್ಟಣಗಳಲ್ಲಿ. ಇನ್ನು ನಮ್ಮ ದೇಶದ ದೀಪಾವಳಿಯಂತೆ ಚೀನಾ ದೇಶದ ದೀಪಾವಳಿಯಾದ ಕಂದೀಲು ಹಬ್ಬದ ಕಡೆಗೆ ಸ್ವಲ್ಪ ಗಮನ ಹರಿಸೋಣ.
ಜಗತ್ತಿನ ಇತಿಹಾಸದಲ್ಲಿ ಅಜರಾಮರವಾಗಿರುವ ಭಾರತೀಯ ಸನಾತನ ಸಂಸ್ಕೃತಿಯ ಹಬ್ಬ ಹರಿದಿನಗಳ ಉದಾತ್ತ ಚಿಂತನೆಗಳಿಗೆ ಇಡೀ ಜಗತ್ತೇ ಬೆರಗಾಗಿದೆ.ಭಾರತದ ದೊಡ್ಡ ಹಬ್ಬ ದೀಪಾವಳಿಯಿಂದ ಪ್ರಭಾವಿತಗೊಂಡ ಹಬ್ಬವೆಂದರೆ ಅದು ಚೀನಾ ದೇಶದ ಕಂದೀಲು ಹಬ್ಬ.ಅದು ಚೀನಿಯರ ಬೆಳಕಿನ ಹಬ್ಬ. ಈ ಹಬ್ಬವನ್ನು ಚೀನಾ ಮಾತ್ರವಲ್ಲ,ಸಿಂಗಾಪುರ,ಮಲೇಷ್ಯಾ,ಹಾಂಗ್ ಕಾಂಗ್ ಗಳಲ್ಲೂ ಚೀನಿಯರು ಆಚರಿಸುತ್ತಾರೆ.
ಚೀನಿ ಕ್ಯಾಲೆಂಡರ್ ನ ಮೊದಲ ತಿಂಗಳ ಮೊದಲ ಶುಕ್ಲ ಪಕ್ಷವನ್ನು ಹದಿನೈದು ದಿನಗಳ ಹೊಸವರ್ಷದ ಉತ್ಸವವಾಗಿ ಆಚರಿಸಲಾಗುತ್ತದೆ.ಈ ಉತ್ಸವದ ಕೊನೆಯ ದಿನ ಕಂದೀಲು ಹಬ್ಬ. ಆ ದಿನ ಚೀನೀಯರು ಬೀದಿ ಬೀದಿಗಳಲ್ಲಿ ಚಿತ್ರವಿಚಿತ್ರವಾದ ಕೆಂಬಣ್ಣದ ಕಂದೀಲುಗಳನ್ನು ತೂಗು ಹಾಕುತ್ತಾರೆ. ಮತ್ತು ಬಣ್ಣ ಬಣ್ಣದ ಗೂಡುದೀಪಗಳನ್ನು ತೂಗು ಹಾಕುತ್ತಾರೆ.
ಸಂಭ್ರಮ ಸಡಗರಗಳಿಂದ ಆಚರಿಸಲ್ಪಡುವ ಈ ಕಂದೀಲು ಹಬ್ಬ ಚೀನಿಯರ ದೀಪಾವಳಿ ಎಂದು ಕರೆಸಿಕೊಳ್ಳುತ್ತದೆ. ಮಾನವ ಇತಿಹಾಸದ ಆರಂಭದಿಂದಲೂ ಭಾರತ ಮತ್ತು ಚೀನಾದ ನಡುವೆ ಸಾಕಷ್ಟು ಧಾರ್ಮಿಕ ಮತ್ತು ಸಾಂಸ್ಕೃತಿಕ ವಿನಿಮಯಗಳು ನಡೆದಿದ್ದವು ಎಂಬುದಕ್ಕೆ ಇದು ಅತ್ಯುತ್ತಮ ಸಾಕ್ಷಿಯಾಗಿದೆ.
ಅಂಧಕಾರದ ಆಕಾಶದಲ್ಲಿ ಹೊಳೆಯುತ್ತಿದ್ದ ಅಸಂಖ್ಯ ನಕ್ಷತ್ರಗಳ ಮತ್ತು ಚಂದಿರನ ಗೋಚರವೇ ಈ ಜಗತ್ತಿನಲ್ಲಿ ಮಾನವ ಜೀವಿಗಳು ಆಚರಿಸತೊಡಗಿದ ಮೊದಲ ದೀಪಾವಳಿ ಎಂದು ನಮ್ಮ ಪೂರ್ವಿಕ ಪ್ರಾಜ್ಞರು ನೀಡುವ ವ್ಯಾಖ್ಯಾನ. ಕಾಲ ಗತಿಸಿದಂತೆ,ನಾಗರಿಕತೆ ಬೆಳೆದಂತೆ ಪುರಾಣ ಕಥೆಗಳು,ಜಾನಪದ ಕಥನಗಳು,ಹೊಸ ಹೊಸ ವಿಚಾರಗಳು ದೀಪಾವಳಿ ಹಬ್ಬಕ್ಕೆ ನಾವಿನ್ಯತೆಯ ಮೆರುಗನ್ನು ತಂದುಕೊಟ್ಟವು.
ದೀಪಾವಳಿ ಹಬ್ಬದಲ್ಲಿ ನಮ್ಮೊಳಗೆ ಅಂತರ್ಗತವಾಗಿರುವ ಜ್ಞಾನದೀವಿಗೆಯನ್ನು ಬೆಳಗಿಸಿ ಬದುಕನ್ನು ನೆಮ್ಮದಿಯ ನೆಲೆಯಾಗಿಸುವ ಉದಾತ್ತ ಸಂದೇಶ ಅಡಕವಾಗಿದೆ.ದೀಪಾವಳಿ ಹಬ್ಬ ಈ ಉದಾತ್ತ ಚಿಂತನೆಯ ಕಾರ್ಯರೂಪಕ್ಕೆ ಶುಭ ನಾಂದಿಯಾಗಲಿ .ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.ಬದುಕು ಹೃದಯಂಗಮವಾಗಿ ಸಂಪನ್ನಗೊಳ್ಳಲ್ಲಿ.
ಉಮಾಕಾಂತ ಖಾರ್ವಿ ಕುಂದಾಪುರ.