ಅಖಿಲ ಭಾರತ ಕೊಂಕಣಿ ಖಾರ್ವಿ ಮಹಾಜನ ಸಭಾದ ಪದಾಧಿಕಾರಿಗಳ ಆಯ್ಕೆ
ಕಾರವಾರ: ಅಖಿಲ ಭಾರತ ಕೊಂಕಣಿ ಖಾರ್ವಿ ಮಹಾಜನ ಸಭಾ ಇದರ ಮಹಾಸಭೆ ಹಾಗೂ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಸಂಘದ ಆಡಳಿತ ಕಚೇರಿ ಹೊಸಾಡು – ತ್ರಾಸಿಯ ಕೊಂಕಣಿ ಖಾರ್ವಿ ಭವನದಲ್ಲಿ ರವಿವಾರ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಅಧ್ಯಕ್ಷ ಮೋಹನ್ ಬಾನವಳಿಕರ್ ಪ್ರಾಸ್ತಾವಿಕವಾಗಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಬಳಿಕ ಪ್ರಧಾನ ಕಾರ್ಯದರ್ಶಿ ಕೃಷ್ಣ ತಾಂಡೇಲ ಕುಮಟಾ 2021-22, 2022-23ನೇ ಸಾಲಿನ ವರದಿಯನ್ನು ವಾಚಿಸಿದರು. ಖಜಾಂಚಿ ಜಿ.ಕೆ. ಶಿನ್ಹಾ ಪರಿಶೋಧಿತ ಲೆಕ್ಕಪತ್ರಗಳ ಮಂಡನೆ ಮಾಡಿದರು. ಇದೇ ವೇಳೆ ಅಗಲಿದ ಸಂಘದ ಸದಸ್ಯರಿಗೆ ಶೃದ್ಧಾಂಜಲಿ ಸಲ್ಲಿಸಲಾಯಿತು. ಸಂಘದ 2023-26 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದು ಅಧ್ಯಕ್ಷರಾಗಿ ಮೋಹನ ಬಾನವಳಿಕರ್, ಪ್ರಧಾನ ಕಾರ್ಯದರ್ಶಿಯಾಗಿ ಕೃಷ್ಣ ತಾಂಡೇಲ ಕುಮಟಾ , ಹಿರಿಯ ಉಪಾಧ್ಯಕ್ಷರಾಗಿ ಸೂರ್ಯಕಾಂತ ಸಾರಂಗ ಹೊನ್ನಾವರ, ಕೋಶಾಧಿಕಾರಿಯಾಗಿ ಜಿ.ಕೆ. ಶಿನ್ಹಾ, ಆಂತರಿಕ ಲೆಕ್ಕ ಪರಿಶೋಧಕರಾಗಿ ಆರ್.ಎಸ್. ಖಾರ್ವಿ ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಸದಸ್ಯರು ಆಡಳಿತ ಮಂಡಳಿಯ ಪದಾಧಿಕಾರಿಗಳಾಗಿ ಆಯ್ಕೆಯಾದರು.
ಸಭೆಯಲ್ಲಿ ಸೂರ್ಯಕಾಂತ್ ಸಾರಂಗ ಸ್ವಾಗತಿಸಿದರು. ಅಶೋಕ್ ಕಾಸರಕೋಡ ವಂದಿಸಿದರು.
ವರದಿ: ಗಣೇಶ್ ಮೇಸ್ತ ಸಿದ್ದಾಪುರ