ಟೊಂಕಾ ಮೀನುಗಾರರ ಹೋರಾಟಕ್ಕೆ ಅಂಬಿಗರ ಚೌಡಯ್ಯ ಪೀಠದ ಶ್ರೀ ಶಾಂತವೀರ ಭೀಷ್ಮ ಸ್ವಾಮಿಗಳ ಬೆಂಬಲ

ಮೀನುಗಾರರ ಹೋರಾಟಕ್ಕೆ ಹೊಸ ತಿರುವು..

ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಪೀಠ ನರಸೀಪುರ ಹಾವೇರಿ ಇದರ ಪೀಠಾಧಿಪತಿಗಳಾದ ಜಗದ್ಗುರು ಶ್ರೀ ಶಾಂತವೀರ ಭೀಷ್ಮ ಚೌಡಯ್ಯ ಮಹಾಸ್ವಾಮಿಗಳು ಕಾಸರಕೋಡು ಟೊಂಕ ಪ್ರದೇಶಕ್ಕೆ ಇಂದು ಭೇಟಿ ನೀಡಿ ಮೀನುಗಾರರ ಜೊತೆಗೆ ಸಮಾಲೋಚನೆ ನಡೆಸಿದರು. ಉದ್ದೇಶಿತ ಕಾಸರಕೋಡು ಟೊಂಕಾ ಖಾಸಗಿ ವಾಣಿಜ್ಯ ಬಂದರು ನಿರ್ಮಾಣ ಕಾಮಗಾರಿಯಿಂದ ಮೀನುಗಾರರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಮೀನುಗಾರರು ಗುರುವರ್ಯರಿಗೆ ಎಳೆಎಳೆಯಾಗಿ ವಿವರಿಸಿದರು.

ಕಾಸರಕೋಡು ಟೊಂಕಾಕ್ಕೆ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಪೀಠ ನರಸೀಪುರ ಹಾವೇರಿಯ ಜಗದ್ಗುರು ಶ್ರೀ ಶಾಂತವೀರ ಭೀಷ್ಮ ಚೌಡಯ್ಯ ಮಹಾಸ್ವಾಮಿಗಳು ಭೇಟಿ ನೀಡಿ ಮೀನುಗಾರರ ಸಮಸ್ಯೆಯನ್ನು ಆಲಿಸಿದರು. ಖಾಸಗಿ ವಾಣಿಜ್ಯ ಬಂದರು ನಿರ್ಮಾಣದಿಂದ ಇಲ್ಲಿನ ಮೀನುಗಾರರು ತಮ್ಮ ಮನೆ ಬದುಕು ಕಳೆದುಕೊಳ್ಳುವ ಆತಂಕದಲ್ಲಿರುವುದನ್ನು ಶ್ರೀಗಳು ಪ್ರತ್ಯಕ್ಷವಾಗಿ ನೋಡಿದರು ವಿವಾದಿತ ಖಾಸಗಿ ವಾಣಿಜ್ಯ ಬಂದರು ನಿರ್ಮಾಣ ಪ್ರದೇಶದ ಅವಲೋಕನ ನಡೆಸಿದ ಶ್ರೀಗಳು ಕಡಲಾಮೆಗಳು ಮೊಟ್ಟೆ ಇಡುವ ತಾಣವನ್ನು ವೀಕ್ಷಣೆ ಮಾಡಿ ಕಡಲಾಮೆಗಳನ್ನು ರಕ್ಷಣೆ ಮಾಡುತ್ತಿರುವ ಕೊಂಕಣಿ ಖಾರ್ವಿ ಸಮಾಜದವರನ್ನು ಶ್ಲಾಘಿಸಿದರು.

ಸ್ಥಳೀಯ ಜೈನ ಜಟ್ಟಿಗೇಶ್ವರ ದೇವಸ್ಥಾನದ ವಠಾರದಲ್ಲಿ ಶ್ರೀಗಳನ್ನು ಮೀನುಗಾರರು ಬಹಳ ಆತ್ಮೀಯವಾಗಿ ಬರಮಾಡಿಕೊಂಡು ಸನ್ಮಾನಿಸಿದರು ಬಳಿಕ ಮಾತನಾಡಿದ ಪೂಜ್ಯರು, ವಿವಾದಿತ ಈ ವಾಣಿಜ್ಯ ಬಂದರು ನಿರ್ಮಾಣದಿಂದಾಗಿ ಅತಂತ್ರರಾಗುವ ಮೀನುಗಾರರ ಅಹವಾಲುಗಳನ್ನು ಮೀನುಗಾರಿಕಾ ಮಂತ್ರಿಗಳಾದ ಮಂಕಾಳ ವೈದ್ಯರಿಗೆ ಮನವರಿಕೆ ಮಾಡಿ, ರಾಜ್ಯದ ಮುಖ್ಯಮಂತ್ರಿಗಳ ಬಳಿ ಚುನಾವಣೆ ಮುಗಿದ ಬಳಿಕ ನಿಯೋಗ ಕರೆದುಕೊಂಡು ಹೋಗಲು ತಾನು ನೇತೃತ್ವ ವಹಿಸುವುದಾಗಿ ಹೇಳಿದ್ದಾರೆ ಮೀನುಗಾರರ ಹಿತರಕ್ಷಣೆಗೆ ತಾನು ಸದಾಕಾಲವೂ ಬದ್ಧರಾಗಿರುತ್ತೇನೆ ಎಂದು ತಿಳಿಸಿದ ಶ್ರೀಗಳು ಕೊಂಕಣಿ ಖಾರ್ವಿ ಸಮಾಜದ ಜೊತೆಗೆ ನಿರಂತರವಾಗಿ ನಿಕಟ ಸಂಪರ್ಕದಲ್ಲಿ ಇರುವುದಾಗಿ ತಿಳಿಸಿರುತ್ತಾರೆ.

ಕಾಸರಕೋಡು ಟೊಂಕಾದಲ್ಲಿ ಬಲವಂತವಾಗಿ ರಸ್ತೆ ನಿರ್ಮಾಣ ಮಾಡುವ ಸಂದರ್ಭದಲ್ಲಿ ಮೀನುಗಾರರು ಮತ್ತು ಮಹಿಳೆಯರ ಮೇಲೆ ನಡೆದ ಪೋಲೀಸ್ ದೌರ್ಜನ್ಯ ಮತ್ತು ಸುಳ್ಳು ಪ್ರಕರಣ ದಾಖಲಿಸಿ ಜೈಲಿಗೆ ತಳ್ಳಿದ ಘಟನೆಯನ್ನು ಶ್ರೀಗಳು ಕಠಿಣವಾಗಿ ಖಂಡಿಸಿದ್ದಾರೆ.

ಕಾಸರಕೋಡು ಟೊಂಕಾದಲ್ಲಿ ಶ್ರೀಗಳಿಗೆ ಅಭೂತಪೂರ್ವ ಸ್ವಾಗತ ದೊರಕಿದ್ದು, ಮೀನುಗಾರ ಹೋರಾಟಗಾರರಾದ ರಾಜೇಶ್ ತಾಂಡೇಲ್, ರಾಜು ತಾಂಡೇಲ್, ಖಾರ್ವಿ ಆನ್ಲೈನ್ ಸಂಪಾದಕರಾದ ಸುಧಾಕರ್ ಖಾರ್ವಿಯವರು ಮತ್ತಿತರ ಮೀನುಗಾರರು, ಅಪಾರ ಸಂಖ್ಯೆಯಲ್ಲಿ ಮಹಿಳೆಯರು ಉಪಸ್ಥಿತರಿದ್ದರು. ಸ್ಥಳೀಯ ಮುಸ್ಲಿಂ ಸಮಾಜದ ಮೀನುಗಾರರು ಕೂಡಾ ಉಪಸ್ಥಿತರಿದ್ದರು.

www.kharvionline.com

Leave a Reply

Your email address will not be published. Required fields are marked *