ಚಾತುರ್ಮಾಸ್ಯ ಗುರುವಂದನೆ ಕಾರ್ಯಕ್ರಮ ಕೊಂಕಣಿ ಖಾರ್ವಿ ಸಮಾಜ ಇವರಿಂದ ಶೃಂಗೇರಿ ಶ್ರೀ ಶಾರದಾಪೀಠದಲ್ಲಿ

ಗುರುವಂದನ ಸಮಿತಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ

ಚಾತುರ್ಮಾಸ್ಯ ಗುರುವಂದನೆ ಕಾರ್ಯಕ್ರಮ ಕೊಂಕಣಿ ಖಾರ್ವಿ ಸಮಾಜ ಇವರಿಂದ ಶೃಂಗೇರಿ ಶ್ರೀ ಶಾರದಾಪೀಠದಲ್ಲಿ (ಆದಿತ್ಯವಾರ, ಜುಲೈ 28, 2024)

|| ಶ್ರೀ ಶಾರದಾ ಗುರುಭ್ಯೋ ನಮಃ ||

ಶ್ರೀ ಶ್ರೀ ಭಾರತಿತೀರ್ಥ ಮಹಾಸ್ವಾಮೀಜಿ ಹಾಗೂ ತತ್ಕರಕಮಲ ಸಂಜಾತರಾದ ಶ್ರೀ ವಿಧುಶೇಖರ ಭಾರತಿ ಸನ್ನಿಧಾನಂಗಳರ ಚಾತುರ್ಮಾಸ್ಯ ವೃತಾಚರಣೆಯ ಪವಿತ್ರ ಸಂದರ್ಭದಲ್ಲಿ ದಿನಾಂಕ 28 ಜುಲೈ 2024 ಆದಿತ್ಯವಾರ ಶೃಂಗೇರಿ ಶ್ರೀ ಶಾರದಾಪೀಠದ ಗುರುಭವನದಲ್ಲಿ ಅಖಿಲ ಭಾರತ ಕೊಂಕಣಿ ಖಾರ್ವಿ ಸಮಾಜ ಬಂಧುಗಳಿಂದ ಪಾರಂಪರಿಕ ಸಾಮೂಹಿಕ ಗುರುವಂದನಾ ಕಾರ್ಯಕ್ರಮ ಕುಂದಾಪುರ ಪ್ರಾಂತೀಯ ಧರ್ಮಾಧಿಕಾರಿ ವೆ| ಮೂ| ಶ್ರೀ ಲೋಕೇಶ ಅಡಿಗ ಹಾಗೂ ಸಹೋದರರು ಮತ್ತು ಉಡುಪಿ ವೆ| ಮೂ| ಶ್ರೀ ವಾಗೀಶ ಶಾಸ್ತ್ರೀ ಇವರ ಮಾರ್ಗದರ್ಶನದಲ್ಲಿ ಬಹಳ ಶೃದ್ಧಾ ಭಕ್ತಿಯಿಂದ ಸಂಪನ್ನಗೊಂಡಿದೆ. ಸುಮಾರು 4000 ಕ್ಕೂ ಮಿಕ್ಕಿದ ಸಂಖ್ಯೆಯಲ್ಲಿ ಸಮಾಜ ಬಂದುಗಳು ಗುರುಗಳ ಅನುಗ್ರಹ ಸಂದೇಶವನ್ನು ಆಲಿಸಿ ಮಂತ್ರಾಕ್ಷತೆಯನ್ನು ಸ್ವೀಕರಿಸಿ ಪಾವನರಾದರು.

ಗುರುಗಳು ಶೃದ್ಧೆ ಮತ್ತು ಭಕ್ತಿ ಎನ್ನುವ ಎರಡು ವಿಷಯವನ್ನು ತಮ್ಮ ಅನುಗ್ರಹ ಭಾಷಣದುದ್ದಕ್ಕೂ ಹೇಳಿ ಶಿಷ್ಯ ವೃಂದದವರಿಗೆ ಜಾಗೃತಗೊಳಿಸಿದರು. ದೇವರು ಮತ್ತು ಗುರುಗಳಿಗೆ ಭಕ್ತಾದಿಗಳ ಹಾಗೂ ಶಿಷ್ಯ ವೃಂದದವರ ಭಕ್ತಿ ಮತ್ತು ಶೃದ್ಧೆ ಇವೆರಡೂ ಸಮರ್ಪಣೆಯಾಗಬೇಕು. ಆವಾಗ ಮಾತ್ರ ದೇವರು ಮತ್ತು ಗುರುಗಳ ಆಶೀರ್ವಾದ ಭಕ್ತಾಧಿಗಳಿಗೆ ಲಭಿಸುತ್ತದೆ, ಮತ್ತು ಗುರುಗಳು ಯಾವಾಗಲೂ ಶಿಷ್ಯ ವೃಂದದವರ ಶೃದ್ಧೆಯನ್ನು ಮತ್ತು ಅವರ ಭಕ್ತಿ ಭಾವವನ್ನು ಅಪೇಕ್ಷಿಸುತ್ತಾರೆ ಮತ್ತು ಸೂಕ್ಷವಾಗಿ ನೋಡುತ್ತಾರೆ ಹಾಗಾಗಿ ಗುರುಗಳ ಪೂರ್ಣಾನುಗ್ರಹವಾಗಬೇಕಾದರೆ ಇವೆರಡನ್ನು ಶಿಷ್ಯರಾದವರು ಸಮರ್ಪಿಸಬೇಕು ಎನ್ನುವ ವಿಚಾರ ಶಿಷ್ಯ ವೃಂದಕ್ಕೆ ಬೋಧಿಸಿದರು. ಸಮಾಜದ ಎಲ್ಲಾ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ಜೊತೆಗೆ ಸಂಸ್ಕಾರಯುತ ಜೀವನದ ಶಿಕ್ಷಣ ನೀಡಬೇಕು ಎಂದು ಬೋಧಿಸಿದರು. ಎಲ್ಲಾ ಭಾಗದ ಉತ್ಕೃಷ್ಠ ಶ್ರೇಣಿಯ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕಾಗಿ ಅಖಿಲ ಭಾರತ ಕೊಂಕಣಿ ಖಾರ್ವಿ ಸಮಾಜದ ಮನವಿಗೆ ರೂ.200000/-ಮೊತ್ತವನ್ನು ಚೆಕ್ ಮೂಲಕ ಗುರುಗಳು ನೀಡಿ ಹರಸಿದರು.

ಈ ಹಿಂದೆ ಪಾರಂಪರಿಕವಾಗಿ ಖಾರ್ವಿ ಸಮಾಜದವರ ಆಯಾಯ ಊರಿನ ಪ್ರದೇಶದ ಪಟೇಲರು ದೇವಸ್ಥಾನದ ಮುಕ್ತೇಸರರು, ಅವಿಭಕ್ತ ಕುಟುಂಬದ ಹಿರಿಯರು ಗುರುಕಾಣಿಕೆಯನ್ನು ಸಲ್ಲಿಸಿ ಪಾದ ಪೂಜೆಯನ್ನು ಮಾಡಿ ಗುರುಗಳಿಗೆ ಸೇವೆ ಸಲ್ಲಿಸಿ ಶಾರದಾ ಮಾತೆಯ ದರ್ಶನ ಪಡೆದು ಮೀನುಗಾರಿಕೆ ಪ್ರತಿಕೂಲ ವಾತಾವರಣದ ಈ ಆಷಾಢ ಮಾಸದ ಸಂದರ್ಭದಲ್ಲಿ ನೆರವೇರಿಸುವ ಪರಿಪಾಠ ಇತ್ತು. ಮುಂದಿನ ದಿನದಲ್ಲಿ ಕಳೆದ ೨೫ ವರ್ಷದಿಂದ ಸಾಮೂಹಿಕವಾಗಿ ಗುರುವಂದನಾ ಕಾರ್ಯಕ್ರಮ ಉತ್ತರ ಕನ್ನಡ ಭಾಗದಿಂದ ಖಾರ್ವಿ ಸಮುದಾಯದವರು ಮಾಡಿಕೊಂಡು ಬರುತ್ತಿದ್ದರಾzರೂ ಕಳೆದ 19 ವರ್ಷಗಳಿಂದ ಗುರುವಂದನಾ ಸಮಿತಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಇದರ ಸಂಘಟನೆಯಲ್ಲಿ ಸಮಾಜದ ಎಲ್ಲಾ ಊರಿನ ಮುಖಂಡರ ಮತ್ತು ಹಿರಿಯರ ಮಾರ್ಗದರ್ಶನದಲ್ಲಿ ಸಾಂಘಿಕವಾಗಿ ನಿರ್ವಹಿಸಿಕೊಂಡು ಬಂದಿರುವುದು ನಮಗೆ ಹೆಮ್ಮೆಯ ವಿಚಾರ. ಅಧಿಕ ಜನಸಾಂದ್ರತೆಯ ನಿಮಿತ್ತವಾಗಿ ಗುರುದರ್ಶನ ಮಾಡುವುದರಲ್ಲಿ ತೊಡಕನ್ನು ಕಂಡ ನಮ್ಮ ಪ್ರಮುಖರು ನಾವು ವಿಂಗಡಣೆಯಾಗಿ ಗುರುದರ್ಶನವನ್ನು ಮಾಡೋಣ ಎನ್ನುವ ವಿಚಾರ ಬಂದಾಗ ಕಳೆದ ನಾಲ್ಕು ವರ್ಷ ಪ್ರತ್ಯೇಕವಾಗಿ ಗುರುದರ್ಶನ ಸಮಿತಿ ಉತ್ತರ ಕನ್ನಡ , ಗುರುವಂದನ ಸಮಿತಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಸಾಮೂಹಿಕ ಗುರುವಂದನಾ ಕಾರ್ಯಕ್ರಮ ಮಾಡಿದ್ದೂ ಉಂಟು. ಈ ಕಾರ್ಯಕ್ರಮದಲ್ಲಿ ಮುಂದಿನ ನಮ್ಮ ಯುವ ಪೀಳಿಗೆ ವಿದ್ಯಾರ್ಥಿಗಳನ್ನು ಕೂಡ ನಾವು ತೊಡಗಿಸಿಕೊಳ್ಳಬೇಕು ಎನ್ನುವ ನಿರ್ಧಾರ ಮಾಡಿ ಅದಿತ್ಯವಾರವನ್ನೇ ಅಪೇಕ್ಷೆ ಪಟ್ಟಾಗ ಈ ಬಾರಿ ಒಟ್ಟಾಗಿ ಆದಿತ್ಯವಾರ ಗುರುದರ್ಶನ ಮಾಡಿಕೊಂಡು ಬಂದೆವು.

ಎಲ್ಲಾ ಖಾರ್ವಿ ಬಂಧುಗಳು ಗುರುಪೀಠದಡಿ ಒಟ್ಟು ಸಂಘಟಿತರಾಗಿ ಸೇರಿಕೊಂಡಾಗ ಉಭಯ ಬಂಧುಗಳು ಪರಸ್ಪರ ಸಂತೋಷಪಟ್ಟಿದ್ದು, ವಿಚಾರ ವಿನಿಮಯ ಮಾಡಿಕೊಂಡಿದ್ದು, ಸುಖ ಕಷ್ಟವನ್ನು ಹಂಚಿಕೊಂಡಿದ್ದು ಒಂದು ಕಡೆ ಒಳ್ಳೆಯ ವಿಚಾರ ಎನ್ನುವ ಭಾವ ಹೆಚ್ಚಿನವರಿಗೂ ಅನಿಸಿದರೂ, ಕೆಲವೊಮ್ಮೆ ಶಿಸ್ತು ಪಾಲನೆಯಲ್ಲಿ ದೊಡ್ಡ ಕಾರ್ಯಕ್ರಮ ಮಾಡುವಾಗ ಸ್ವಲ್ಪ ಗೊಂದಲಗಳು ಸರ್ವೇಸಾಮಾನ್ಯ ಆದರೂ ಈ ಬಾರಿ ಯಶಸ್ವಿಯಾಗಿ ನೆರವೇರುತ್ತದೆ ಎನ್ನುವ ಆಲೋಚನೆಯಿಂದಲೇ ಗುರುಗಳು ನಮಗೆ ಈ ದಿನಾಂಕವನ್ನೇ ಸೂಚಿಸಿದರಿಂದ ಬಹಳ ಯಶಸ್ವಿಯಾಯಿತು ಎನ್ನುವ ಭಾವ ನಮ್ಮದು. ಅವರ ಅನುಗ್ರಹ ಭಾಷಣದ ವಿಚಾರವಾದ ಗುರುಭಕ್ತಿ ಮತ್ತು ಶೃದ್ಧೆ ಎನ್ನುವ ಎರಡು ಸೂತ್ರವನ್ನು ನಮ್ಮ ಜೀವನದಲ್ಲಿ ಮತ್ತೂ ಅಳವಡಿಸಿಕೊಂಡರೆ ಮುಂದಿನ ದಿನದಲ್ಲಿ ಈ ಗುರುವಂದನಾ ಕಾರ್ಯಕ್ರಮ ಇನ್ನೂ ಯಶಸ್ವಿಯಾಗಿ ಶಿಸ್ತು ಬದ್ಧವಾಗಿ ಅಂದರೆ ಗುರುಗಳಿಂದಲೇ ನಮ್ಮ ಸಮುದಾಯದವರು ಬಹಳ ಸನಾತನನುಯಾಯಿಗಳು ಎಂದು ಕರೆಸಿಕೊಳ್ಳುವ ಸಮಯಕ್ಕೆ ಇನ್ನೂ ಹೆಚ್ಚು ದೂರ ಇಲ್ಲ ಎನ್ನುವುದೇ ನಮ್ಮ ಅಭಿಪ್ರಾಯ. ಅದಕ್ಕಾಗಿ ನಾವೆಲ್ಲರೂ ಒಗ್ಗಟ್ಟಾಗಿ ಮುಂದಿನ ದಿನದಲ್ಲಿ ಇನ್ನೂ ಉತ್ತಮ ರೀತಿಯಲ್ಲಿ ಈ ಕಾರ್ಯಕ್ರಮವನ್ನು ಮಾಡೋಣವಲ್ಲವೇ..?
ಗಂಗೊಳ್ಳಿಯಲ್ಲಿ ನಡೆದ ಗುರುವಂದನಾ ಪೂರ್ವಭಾವಿ ಸಭೆಯಲ್ಲಿ ಭಾಗಿಯಾದ ಪ್ರತಿನಿಧಿಗಳ ಅಭಿಪ್ರಾಯದಂತೆ ಈ ಬಾರಿ ಗುರುಸೇವಕ (ಸ್ವಯಂ ಸೇವಕ) ನಿಯೋಜನೆ ಮಾಡಿ ಶಿಸ್ತು ಪಾಲಿಸುವಲ್ಲಿ ಕೈಜೋಡಿಸೋಣ ಎನ್ನುವ ನಮ್ಮ ಅಭಿಪ್ರಾಯಕ್ಕೆ ಹೆಚ್ಚಿನ ಸಹಕಾರ ಮತ್ತು ಕೈಜೋಡಿಸಿದ್ದು ಗಂಗೊಳ್ಳಿ ಶ್ರೀ ಮಹಾಂಕಾಳಿ ಅಮ್ಮನವರ ದೇವಸ್ಥಾನದ ಆಡಳಿತ ಸಮಿತಿ ಯವರು ಮತ್ತು ಅಲ್ಲಿನ ಮುಖಂಡರು. ಅವರಿಗೆ ವಿಶೇಷವಾಗಿ ಕೃತಜ್ಞತೆ ಮತ್ತು ಅಭಿನಂದನೆ ಹಾಗೂ ಧನ್ಯವಾದವನ್ನು ಗುರುವಂದನಾ ಸಮಿತಿ ಸಮರ್ಪಿಸುತ್ತದೆ.

ವಿಶೇಷವಾಗಿ ಆಯಾಯ ಊರಿನ ಕೊಂಕಣಿ ಖಾರ್ವಿ ಸಮಾಜದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಆಯಾಯ ಊರಿಗೆ ಸಂಬಂಧಪಟ್ಟ ದೇವಸ್ಥಾನದ ಆಡಳಿತ ಮಂಡಳಿಯವರು ಬಹಳ ಜವಾಬ್ದಾರಿಯನ್ನು ಹೊತ್ತುಕೊಂಡು ಈ ಕಾರ್ಯಕ್ರಮವನ್ನು ಬಹಳ ಯಶಸ್ವಿಯಾಗಿ ಚಂದಗಾಣಿಸಿ ಕೊಟ್ಟಿದ್ದಾರೆ. ಅವರಿಗೂ ಕೂಡ ಧನ್ಯವಾದಗಳನ್ನು ಸಮರ್ಪಿಸುತ್ತೇವೆ.

ಪ್ರಾಕೃತಿಕವಾಗಿ ಪ್ರತಿಕೂಲ ವಾತಾವರಣದ ನಿಮಿತ್ತ ಅನಾಹುತಗಳು ಘಟಿಸಿದರೆ, ಶೃಂಗೇರಿ ಪ್ರಯಾಣದಲ್ಲಿ ಆಕಸ್ಮಿಕ ತೊಡಕಾದರೆ ನಾವು ಸಿದ್ದರಿರಬೇಕು ಎನ್ನುವ ಸಾಮಾಜಿಕ ಪ್ರಜ್ಞೆಯಿಂದ ಆಂಬುಲೆನ್ಸ್ ಸೇವೆಯನ್ನು ಆಗುಂಬೆಯಲ್ಲಿ ವ್ಯವಸ್ಥೆಯನ್ನು ಮಾಡಿದ ಖಾರ್ವಿ ಆನ್‌ಲೈನ್ಸ್ ಇದರ ಸಂಘಟಕರಿಗೆ ನಮ್ಮೀ ಸಮಿತಿಯ ಪರವಾಗಿ ತುಂಬುಹೃದಯದ ಧನ್ಯವಾದವನ್ನು ಸಮರ್ಪಿಸುತ್ತಾ ಮುಂದೆಯೂ ಸಹ ನಿಮ್ಮ ಸಹಕಾರ ನಿರಂತರವಾಗಿಸುವ ಯೋಗ ಭಾಗ್ಯ ಭಗವಂತ ನಿಮ್ಮ ಟೀಮ್‌ಗೆ ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತಾ.

,ನಮ್ಮ ಸಮಿತಿಯ ಎಲ್ಲಾ ಸದಸ್ಯರು ಮತ್ತು ಆಯಾಯ ಊರಿನ ಪ್ರತಿನಿಧಿಗಳಿಗೆ ವಿಶೇಷವಾಗಿ ಕೃತಜ್ಞತೆಯನ್ನು ಸಲ್ಲಿಸುತ್ತೇವೆ.

ಎಲ್ಲರಿಗೂ ಶುಭವಾಗಲಿ, ಸರ್ವೇ ಜನಃ ಸುಖಿನೋ ಭವಂತು. ಪ್ರಾಂತೀಯ ಧರ್ಮಾಧಿಕಾರಿ ವಿದ್ಯಾರ್ಥಿವೇತನಕ್ಕಾಗಿ ಆಶೀರ್ವಾದರೂಪವಾಗಿ ಮಂತ್ರಾಕ್ಷತೆಬೇಕು ಎನ್ನುವ ರನ್ನು ಅಷಾಢ ಏಕಾದಶಿಯಂದು ಗಂಗೊಳ್ಳಿಯಲ್ಲಿ ನಡೆದ ಸಭೆಯ ನಿರ್ಣಯದಂತೆ. 28 ಜುಲೈ 2.30ಕ್ಕೆ ಶೃಂಗೇರಿ ಅಕ್ಷರಾಭ್ಯಾಸ ಮಂಟಪದಲ್ಲಿ ಅವಲೋಕನ ಸಭೆ ಪ್ರಾರಂಭಗೊಂಡಿದ್ದು, ಅಲ್ಲಿ ಸಾಕಷ್ಟು ಸದಸ್ಯರ ಗೈರನ್ನು ಅವಲೋಕಿಸಿ ಸಭೆಯನ್ನು ಮುಂದಿನ ದಿನದಲ್ಲಿ ಮಾಡುವುದೆಂದು ನಿರ್ಧರಿಸಿದ್ದೇವೆ ಆದರೆ ಗಂಗೊಳ್ಳಿ ಸಭೆಯ ನಿರ್ಣಯದಂತೆ ನಾವು ಸಭೆಯ ನಡಾವಳಿಕೆಯನ್ನು ಬದಿಗೆ ಸರಿಸಿ ಸಭೆಯ ನಿರ್ಣಯವನ್ನು ಪಾಲಿಸದೇ ಇರುವುದು ವಿಷಾಧವೆನಿಸುತ್ತದೆ.

ಮುಂದಿನ ಒಳ್ಳೆಯ ದಿನಗಳಲ್ಲಿ ಒಳ್ಳೆಯ ನಿರ್ಧಾರ ರೂಪಿಸುವ ಶಕ್ತಿ ತಾಯಿ ಜಗನ್ಮಾತೆ ಎಲ್ಲರಿಗೂ ನೀಡಲಿ ಎಂದು ಪ್ರಾರ್ಥಿಸುತ್ತೇವೆ.

ದೇವ್ ಭರೇ ಕರೋ..

ಅಧ್ಯಕ್ಷರು ಮತ್ತು ಕಾರ್ಯದರ್ಶಿ
ಹಾಗೂ ಸರ್ವ ಪದಾಧಿಕಾರಿಗಳು
ಗುರುವಂದನ ಸಮಿತಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ

ವರದಿ: ಸುರೇಶ್ ಖಾರ್ವಿ ,ಕೋಡಿ

Leave a Reply

Your email address will not be published. Required fields are marked *