ಸುಡುಗಾಡು ತೋಡು ಇದು ಖಾರ್ವಿಕೇರಿ, ಬಹುದ್ದೂರ್ ಷಾ ರಸ್ತೆಯ ಮಧ್ಯ ಭಾಗದಿಂದ ಹಾದು ಹೋಗಿ ರಿಂಗ್ ರೋಡ್ ನಲ್ಲಿರುವ ನದಿಗೆ ಕೊನೆಗೂಳ್ಳುತ್ತದೆ ಇದರಲ್ಲಿ ಗಾಂಧಿ ಮೈದಾನ ಹಾಗು ಮೈಲಾರೇಶ್ವರ ದೇವಸ್ಥಾನ, ಪೋಸ್ಟ್ ಆಫೀಸ್ ರಸ್ತೆಯಿಂದ ನೀರು ಬರುತ್ತದೆ. ಈ ತೋಡು ತೆರೆದಿರುವುದರಿಂದ ಮರದ ರೆಂಬೆ ಕೊಂಬೆಗಳು ಇದರಲ್ಲಿ ಬೀಳುತ್ತವೆ ಇದೆಲ್ಲವೂ ರಿಂಗ್ ರೋಡ್ ನಲ್ಲಿ ನೀರು ಹಾದು ಹೋಗಲು ಹಾಕಿದ್ದ ಪೈಪಿನೊಳಗೆ ಅಡ್ಡವಾಗಿ ಸಿಲುಕುವುದರಿಂದ ಬಹುದ್ದೂರ್ ಷಾ ರಸ್ತೆಯ ಸುಡಗಾಡು ತೋಡು ಬ್ಲಾಕ್ ಆಗಿ ಮಳೆ ನೀರು ಬಹುದ್ದೂರ್ ಷಾ ರಸ್ತೆಯ ಮತ್ತು ಖಾರ್ವಿ ಮೇಲ್ಕೇರಿಯ ನಿವಾಸಿಗಳ ಮನೆಗೆ ನುಗ್ಗಿದು ಅನಾಹುತ ಸೃಷ್ಟಿಯಾಗಿದೆ.
ಈ ಸುಡುಗಾಡು ತೋಡಿನ ಅಸಮರ್ಪಕ ನಿರ್ವಹಣೆಯೇ ಈ ಅನಾಹುತಕ್ಕೆ ಕಾರಣವಾಗಿದ್ದು, ತೋಡಿನ ತುಂಬಾ ಪ್ಲಾಸ್ಟಿಕ್ ಬಾಟಲಿಗಳು, ಇನ್ನಿತರ ತ್ಯಾಜ್ಯ ವಸ್ತುಗಳ ಭಾರೀ ಪ್ರಮಾಣದಲ್ಲಿ ಸಂಗ್ರಹವಾಗಿದ್ದು, ಮಳೆ ನೀರು ಸರಾಗವಾಗಿ ಹರಿಯಲು ತಡೆ ಉಂಟಾಗಿ ಮಳೆನೀರಿನ ಜೊತೆಗೆ ನದಿಯ ನೀರು ಸೇರಿಕೊಂಡು ಸಮೀಪದ ಮನೆಗಳಿಗೆ ನುಗ್ಗಿದೆ. ಕುಂದಾಪುರ ಪುರಸಭೆಗೆ ಈ ಸುಡುಗಾಡು ತೋಡಿನ ಬಗ್ಗೆ ಸ್ಥಳೀಯ ನಿವಾಸಿಗಳು ಹಲವಾರು ಬಾರಿ ಮನವಿ ನೀಡಿದರೂ ಪ್ರಯೋಜನವಾಗಿಲ್ಲ, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿ ಸೂಕ್ತ ವ್ಯವಸ್ಥೆ ಮಾಡುವಂತೆ ಸ್ಥಳೀಯರು ಮನವಿ ಮಾಡಿಕೊಂಡಿದ್ದರು.
ವಿಷಯ ತಿಳಿಯುತ್ತಿದ್ದಂತೆ ರಾತ್ರೋರಾತ್ರಿ ಕುಂದಾಪುರ ತಹಶೀಲ್ದಾರ್ ಶೋಭಾಲಕ್ಷ್ಮಿ, ಪುರಸಭೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಸುಡಗಾಡು ತೋಡಿನ ನೀರು ಸರಾಗವಾಗಿ ಹರಿದು ಹೋಗಲು ಕಾರ್ಯಚರಣೆ ಕೈಗೊಂಡಿದ್ದಾರೆ. ಸ್ಥಳೀಯ ಪುರಸಭೆ ಸದಸ್ಯರಾದ ಚಂದ್ರಶೇಖರ್ ಖಾರ್ವಿ ಹಾಗೂ ಶ್ರೀಯುತ ಸುನಿಲ್ ಖಾರ್ವಿ ಯವರು ಹೆಚ್ಚಿನ ಮುತುವರ್ಜಿ ವಹಿಸಿ ಅಧಿಕಾರಿಗಳನ್ನು ಸಂಪರ್ಕಿಸಿ ತುರ್ತು ಕ್ರಮ ಕೈಗೊಳ್ಳಲು ಶ್ರಮಿಸಿದರು.
ಕುಂದಾಪುರ ಬಹೂದ್ದೂರ್ ಷಾ ರಸ್ತೆಯ ಸುಡಗಾಡು ತೋಡು ಉಕ್ಕೇರಿ ಸ್ಥಳೀಯರ ಮನೆಗೆ ನೀರು ನುಗ್ಗಿದ ಘಟನೆಗೆ ಸಂಬಂಧಿಸಿದಂತೆ ಇಂದು ಉಡುಪಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸುಡಗಾಡು ತೋಡಿನ ಸಮಸ್ಯೆಯನ್ನು ತಕ್ಷಣದಲ್ಲಿ ಪರಿಹರಿಸುವಂತೆ ಮತ್ತು ಪ್ರತಿನಿತ್ಯ ಇಲ್ಲಿ ಸಂಗ್ರಹವಾಗುವ ತ್ಯಾಜ್ಯಗಳನ್ನು ವಿಲೇವಾರಿ ಮಾಡುವಂತೆ ಕುಂದಾಪುರ ಪುರಸಭೆ ಅಧಿಕಾರಿಗಳಿಗೆ ಸೂಚಿಸಿದರು. ಇದೇ ಸಂದರ್ಭದಲ್ಲಿ ಈ ತೋಡಿಗೆ ಹೊಂದಿಕೊಂಡು ಇರುವ ಅಕ್ರಮ ಹಂದಿಸಾಗಣೆ ಶೆಡ್ ನ್ನು ತೆರವುಗೊಳಿಸುವಂತೆ ಸಾರ್ವಜನಿಕರು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರು. ಈ ಹಂದಿ ಸಾಗಣೆ ಶೆಡ್ ನಿಂದ ನೇರವಾಗಿ ಸುಡಗಾಡು ತೋಡಿಗೆ ಹಂದಿತ್ಯಾಜ್ಯವನ್ನು ಬಿಡುತ್ತಿದ್ದು ಸಾಂಕ್ರಾಮಿಕ ರೋಗರುಜಿನಗಳಿಗೆ ಕಾರಣವಾಗುತ್ತಿದೆ ಎಂದು ಸ್ಥಳೀಯರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಬಗ್ಗೆಯೂ ಶೀಘ್ರವೇ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಪುರಸಭಾ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳೊಂದಿಗೆ ಕುಂದಾಪುರ ತಹಶೀಲ್ದಾರ್ ಶೋಭಾಲಕ್ಮಿ,ಕುಂದಾಪುರ ಪುರಸಭೆ ಮುಖ್ಯಾಧಿಕಾರಿ, ಆರೋಗ್ಯ ನೀರಿಕ್ಷಕರು, ಪುರಸಭೆ ಸದಸ್ಯ ಚಂದ್ರಶೇಖರ್ ಖಾರ್ವಿ ಮತ್ತು ಬಿಜೆಪಿ ಮುಖಂಡ ಸುನಿಲ್ ಖಾರ್ವಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸ್ಥಳೀಯರು ಅಪಾರ ಸಂಖ್ಯೆಯಲ್ಲಿ ಹಾಜರಿದ್ದು ತಮ್ಮ ಸಮಸ್ಯೆಯನ್ನು ತೋಡಿಕೊಂಡರು.
ಕುಂದಾಪುರ ನ್ಯಾಯಾಲಯದ ಹಿರಿಯ ನ್ಯಾಯಾಧೀಶರಾದ ಶ್ರೀಯುತ ರಾಜು N ಸಾರ್ ಹಾಗೂ ಶ್ರೀಮತಿ ಮಂಜುಳಾ B ಪ್ರಧಾನ ಸಿವಿಲ್ ನ್ಯಾಯಾಧೀಶರುರವರು ಸುಡುಗಾಡು ತೋಡಿನಿಂದ ಆಗಿರುವ ಅನಾಹುತ ಬಗ್ಗೆ ಮಾಹಿತಿ ಪಡೆದು ಇಂದು ಮಧ್ಯಾಹ್ನ ಸ್ಥಳಕ್ಕೆ ಭೇಟಿ ನೀಡಿದರು. ರಾತ್ರೋರಾತ್ರಿ ಸಂಭವನೀಯ ಅನಾಹುತವನ್ನು ತಪ್ಪಿಸಿದ ಪೌರಕಾರ್ಮಿಕರ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪರಿಸರ ಅಭಿಯಂತರರಾದ ಶ್ರೀ ಗುರುಪ್ರಸಾದ ಶೆಟ್ಟಿ, ಹಿರಿಯ ಆರೋಗ್ಯ ನಿರೀಕ್ಷಕರಾದ ಶ್ರೀ ರಾಘವೇಂದ್ರ ನಾಯ್ಕ್ ಉಪಸ್ಥಿತರಿದ್ದರು.
ವರದಿ:
ಸುಧಾಕರ ಖಾರ್ವಿ
www.kharvionline.com