ಶತಶತಮಾನಗಳ ಇತಿಹಾಸದಲ್ಲಿ ಶರಾವತಿ ನದಿ ತನ್ನ ಹರಿವಿನ ಪಥವನ್ನು ಬದಲಾಯಿಸಿದ ಉದಾಹರಣೆಗಳಿಲ್ಲ ಆದರೆ ಇದೀಗ ಇಲ್ಲಿ
ನಾಡಿಗೆ ಬೆಳಕು ನೀಡುವ ,ಲಕ್ಷಾಂತರ ಜನರ ಬದುಕಿನ ಜೀವಸಂಜೀವಿನಿ ನದಿ ಶರಾವತಿಗೆ ಮಹಾಕಂಟಕವೊಂದು ಎದುರಾಗಿದೆ. ಶರಾವತಿ ನದಿ ನೀರನ್ನು ಬೆಂಗಳೂರು ಮತ್ತು ಪೂರ್ವ ಕರ್ನಾಟಕ ಪ್ರದೇಶಗಳಿಗೆ ಒಯ್ಯುವ ಯೋಜನೆಯ ಸಮೀಕ್ಷೆ ನಡೆಯುತ್ತಿದ್ದು, ಈ ಯೋಜನೆ ಕಾರ್ಯಗತಗೊಂಡರೆ ಶರಾವತಿ ನದಿ ಬರಡಾಗಿ ಲಕ್ಷಾಂತರ ಜನರ ಬದುಕು ಸಂಕಷ್ಟಕ್ಕೀಡಾಗುತ್ತದೆ.ಶರಾವತಿ ನದಿ ಪಾತ್ರದಲ್ಲಿ ಸಮೃದ್ಧ ಕೃಷಿಕಾರ್ಯಗಳು,ಮೀನುಗಾರಿಕೆ, ಪ್ರವಾಸೋದ್ಯಮ ಚಟುವಟಿಕೆಗಳು ನೆಲೆಗೊಂಡಿದೆ. ಲಕ್ಷಾಂತರ ಜನರು ಪರೋಕ್ಷವಾಗಿ ಮತ್ತು ಅಪರೋಕ್ಷವಾಗಿ ಬದುಕು ಕಟ್ಟಿಕೊಂಡಿದ್ದಾರೆ ವ್ಯರ್ಥವಾಗಿ ಸಮುದ್ರ ಸೇರುವ ಶರಾವತಿ ನೀರನ್ನು ಬೆಂಗಳೂರಿಗೆ ಒಯ್ಯುತ್ತೇವೆ ಎಂಬ ವಿತಂಡವಾದ ಮಂಡಿಸುವ ಪಂಡಿತರಿಗೆ ಸ್ವಲ್ಪವೂ ಸಾಮಾನ್ಯ ಜ್ಞಾನವಿಲ್ಲ.ಮೀನುಗಳ ಮುಖ್ಯ ಆಹಾರವಾಗಿರುವ ಪಾಚಿ ಶೈವಲಗಳ ಉತ್ಪಾದನೆ ಮತ್ತು ಬೆಳವಣಿಗೆಯಾಗುವುದು ಮುಂಗಾರು ಸಮಯದ ನದಿ ಪ್ರವಾಹದ ಪೋಷಕಾಂಶ ಭರಿತ ನೀರಿನಿಂದ ಎಂಬುದು ಉಲ್ಲೇಖನೀಯ.
ಎರಡನೇಯದಾಗಿ ಮುಂಗಾರು ಸಮಯದಲ್ಲಿ ಸಮುದ್ರದಲ್ಲಿ ಕಾಂಟಿನೆಂಟಲ್ ಶೆಲ್ಫ್ ಖಂಡದಂಚಿನ ಅಟ್ಟಣಿಗೆಯ ತಳದ ನೀರಿನ ಬುಗ್ಗೆ ಮೇಲೆದ್ದು ಬರುತ್ತದೆ.ಈ ನೀರಿನಲ್ಲಿ ಪುನಾರುತ್ಪಾದಿತ ಪೋಷಕಾಂಶಗಳು ಸಮೃದ್ಧವಾಗಿರುತ್ತದೆ.ಇದು ಕಡಲಂಚಿನ ಜಲರಾಶಿಯ ಪೋಷಕಾಂಶ ಖಜಾನೆಗೆ ಮಹತ್ವದ ಕೊಡುಗೆ ನೀಡುತ್ತದೆ.
ಇವೆರಡೂ ಮೂಲಗಳು ಸೇರಿ ಮುಂಗಾರು ಋತುವಿನಲ್ಲಿ ಕರಾವಳಿ ತೀರದ ನೀರಿನ ಪೋಷಕಾಂಶ ಮಟ್ಟವನ್ನು ಋತುಮಾನದ ಗರಿಷ್ಠಕ್ಕೇರಿಸುತ್ತದೆ. ಬೆಂಗಳೂರಿಗೆ ನೀರು ಪೂರೈಕೆ ನೆಪದಲ್ಲಿ ಶರಾವತಿ ನದಿಯ ನೀರನ್ನು ತಡೆಗಟ್ಟುವ ಯೋಜನೆ ಕಾರ್ಯಗತಗೊಂಡರೆ ಸಮುದ್ರದ ನೀರು ಶರಾವತಿ ಹೀನ್ನೀರು ಪ್ರದೇಶವನ್ನು ವ್ಯಾಪಿಸಿ, ಕೃಷಿ ಪ್ರದೇಶಗಳು ಸಂಪೂರ್ಣ ಲವಣಭರಿತವಾಗಲಿದೆ ಮುಂದೆ ಸಂಭವಿಸಲಿರುವ ದುರಂತ ಊಹಿಸಲು ಅಸಾಧ್ಯ.
ಜೀವವೈವಿಧ್ಯಗಳ ನೈಸರ್ಗಿಕ ಆವಾಸ ಸ್ಥಳಗಳನ್ನು ಧಂಸ್ವ ಮಾಡುವುದು ಇಲ್ಲವೇ ಮಾರ್ಪಾಡು ಮಾಡುವುದು ಪರಿಸರದ ಮೇಲೆ ಮಾನವ ಮಾಡುವ ಅತಿ ದೊಡ್ಡ ದೌರ್ಜನ್ಯ. ಈ ದೌರ್ಜನ್ಯ ಗಳ ಉದಾಹರಣೆಗಳು ಬೆನ್ನು ಬೆನ್ನಿಗೆ ಕಂಡುಬಂದಿದೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕೆ? ಮಾನವರು ತಾವು ಪರಿಸರದ ಮೇಲೆ ಉಂಟುಮಾಡುತ್ತಿರುವ ಕೆಟ್ಟ ಪರಿಣಾಮಗಳನ್ನು ಕಡಿಮೆಗೊಳಿಸಲು ಮತ್ತು ತೊಡೆದು ಹಾಕಲು ಸಾಧ್ಯ ವಿದೆ. ಆದರೆ ಹೃದಯಹೀನ, ಕ್ರೌರ್ಯವನ್ನೇ ಬದುಕಿನ ಸಿದ್ದಾಂತ ಮಾಡಿಕೊಂಡಿರುವ ದಾನವರಿಗೆ ಇದೆಲ್ಲ ಅರ್ಥ ವಾಗುವುದು ಹೇಗೆ?
ಉಮಾಕಾಂತ ಖಾರ್ವಿ, ಕುಂದಾಪುರ