ಕರಾವಳಿಯ ಉದ್ದಗಲಕ್ಕೂ ನದಿಪಾತ್ರ ಮತ್ತು ಸಮುದ್ರ ತೀರಗಳಲ್ಲಿ ಹರಡಿಕೊಂಡಿರುವ ಕೊಂಕಣಿ ಖಾರ್ವಿ ಸಮಾಜ ತಮ್ಮ ಮೂಲ ಸಂಸ್ಕೃತಿಯ ಕುಲದೇವತೆಯ ಆರಾಧನೆ, ಶಿಷ್ಟದೇವತೆಗಳ ಉಪಾಸನೆಗಳ ಜೊತೆ ಜೊತೆಗೆ ಸ್ಥಳೀಯ ಪ್ರಾಂತೀಯ ಗ್ರಾಮ ದೈವಗಳನ್ನು ಕೂಡಾ ತಮ್ಮ ತಮ್ಮ ಕುಟುಂಬ ವರ್ಗದ ನಂಬಿದ ದೈವವನ್ನಾಗಿ ವಿಧೇಯಿಸಿಕೊಂಡಿದೆ. ಅವುಗಳಲ್ಲಿ ಶ್ರೀ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ, ಹಾಲಾಡಿ ಮರ್ಲುಚಿಕ್ಕು ಮತ್ತು ಸಾಸ್ತಾನ ಕೋಡಿ ನಾಲ್ಕುಪಾದದ ಹೈಗುಳಿ ಮತ್ತು ಕೋಳೆರಾಯ ಪರಿವಾರ ದೈವಸ್ಥಾನಗಳು ಪ್ರಮುಖವಾದುದು.
ಅದರೊಂದಿಗೆ ಮತ್ತೆ ಕೆಲವು ದೈವ ದೇವರ ಸನ್ನಿಧಿಗಳಾದ ಬಾಳಿಕೆರೆ ಪಂಜುರ್ಲಿ ಪರಿವಾರ ದೈವಸ್ಥಾನ, ಬಸ್ರೂರಿನ ದೇವಿ ದೇವಸ್ಥಾನ, ಯಡಮೊಗೆ ದೈವಸ್ಥಾನಗಳು ಸೇರಿಕೊಂಡಿದೆ. ಕುಂದಾಪುರ ತಾಲೂಕಿನ ಹಾಲಾಡಿ ಶ್ರೀ ಮರ್ಲುಚಿಕ್ಕು ದೈವಸ್ಥಾನದೊಂದಿಗೆ ನಂಬಿದ ಕೊಂಕಣಿ ಖಾರ್ವಿ ಸಮಾಜದ ಕುಟುಂಬಗಳಿಗೆ ತಲೆತಲಾಂತರದ ಅವಿನಾಭಾವ ಸಂಬಂಧಗಳು ಬೆಸೆದುಕೊಂಡಿದ್ದು, ಹಾಲಾಡಿ ನದಿಯ ಪ್ರವಾಹದ ಸಂದರ್ಭದಲ್ಲಿ ತೇಲಿಬಂದ ದೈವಸ್ಥಾನದ ಪರಿಕರಗಳನ್ನು ಹಿಂದಿನ ಕಾಲದಲ್ಲಿ ಮೀನುಗಾರರು ಇತರ ಕಟ್ಟಿಗೆಯ ತುಂಡುಗಳ ಜೊತೆಗೆ ಆಕಸ್ಮಿಕವಾಗಿ ಸಂಗ್ರಹಿಸಿ, ಉಪಯೋಗಿಸಿದ ಘಟನೆಯ ಹಿನ್ನಲೆಯಲ್ಲಿ ಕಥೆ ಅನಾವರಣಗೊಳ್ಳುತ್ತಿದ್ದು, ತದನಂತರ ಹಾಲಾಡಿ ಮರ್ಲುಚಿಕ್ಕು ದೈವಸ್ಥಾನದಲ್ಲಿ ಪೂಜೆ ಹರಕೆ ಸಲ್ಲಿಸಿ ಶಾಶ್ವತವಾಗಿ ನಂಬಿದ ವರ್ಗವಾಗಿ ವಿಧೇಯಿಸಿಕೊಂಡಿದ್ದ ಭಕ್ತಿಪೂರ್ವಕ ಕಥೆ ಹೆಣೆದುಕೊಂಡಿದೆ.
ಇದೇ ತೆರನಾದ ಕಥೆ ಹೆಮ್ಮಾಡಿ ಹೋಬಳಿಯ ಬಾಳಿಕೆರೆ ಪಂಜುರ್ಲಿ, ಚಿಕ್ಕು ಪರಿವಾರ ದೈವಸ್ಥಾನವನ್ನು ನಂಬಿದ ಗಂಗೊಳ್ಳಿ ಮತ್ತು ಕುಂದಾಪುರ ಭಾಗದ ಕೆಲವು ನಿರ್ದಿಷ್ಟ ಕುಟುಂಬಗಳ ದೈವಿಕ ಇತಿಹಾಸದಲ್ಲೂ ಪಡಿಮೂಡಿದ್ದು, ಬಾಳಿಕೆರೆ ದೈವಸ್ಥಾನ ಪಂಚಗಂಗಾವಳಿಯ ಪ್ರಮುಖ ನದಿಗಳಲ್ಲಿ ಒಂದಾದ ಚಕ್ರಾನದಿಯ ತೀರದಲ್ಲಿದೆ ಎಂಬುದು ಇಲ್ಲಿ ಉಲ್ಲೇಖನೀಯ ಸಂಗತಿ. ಇದೇ ಜನವರಿ 21 ರಂದು ಹಾಲಾಡಿ ಶ್ರೀ ಮರ್ಲುಚಿಕ್ಕು ದೈವಸ್ಥಾನದ ವಾರ್ಷಿಕ ಗೆಂಡಸೇವೆ ನಡೆಯುತ್ತದೆ ಮತ್ತು ಜನವರಿ 23 ರಂದು ಸಾಸ್ತಾನ ಕೋಡಿ ಶ್ರೀ ನಾಲ್ಕುಪಾದದ ಹೈಗುಳಿ ಪರಿವಾರ ದೈವಗಳ ವಾರ್ಷಿಕ ಗೆಂಡಸೇವೆ ಜರುಗುತ್ತದೆ. ಈ ಎರಡೂ ದೈವಸ್ಥಾನಗಳಿಗೆ ಕೊಂಕಣಿ ಖಾರ್ವಿ ಸಮಾಜದ ಅಸಂಖ್ಯಾತ ಭಕ್ತರು ಅಗಣಿತ ನಂಬಿಕೆಯಿಂದ ನಂಬಿಕೊಂಡು ಬಂದಿರುತ್ತಾರೆ. ಅದರಲ್ಲೂ ಸಾಸ್ತಾನ ಶ್ರೀ ನಾಲ್ಕುಪಾದದ ಹೈಗುಳಿ ದೈವಸ್ಥಾನದ ಕೊಂಕಣಿ ಖಾರ್ವಿ ಸಮಾಜದ ನಂಬಿದ ಕುಟುಂಬ ವರ್ಗ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ವಿಸ್ತರಣೆಯಾಗಿದೆ
ಕೊಂಕಣಿ ಖಾರ್ವಿ ಸಮಾಜದ ಸಮೃದ್ಧ ಜನಪದ ಹಾಡು ಕುಣಿತಗಳು ಮೇಳೈಸುವ ಹೋಳಿಹಬ್ಬದ ಸಂದರ್ಭದಲ್ಲಿ ಪ್ರಸ್ತುತಗೊಳ್ಳುವ ಹೋಳಿ ಹಾಡುಗಳಲ್ಲಿ ಹಾಲಾಡಿ ಕ್ಷೇತ್ರದ ಗೆಂಡಸೇವೆಯ ಪ್ರಸ್ತಾಪವಿದ್ದು, ಹಾಲಾಡಿ ಗೆಂಡ ಹೇಮಾಜಿ ಸೊಂಡ ಎಂದು ಅದು ಪ್ರಾಸಬದ್ದ ವಾಕ್ಯಗಳಲ್ಲಿ ಅದು ಅನಾವರಣಗೊಳ್ಳುತ್ತದೆ. ನಂಬಿದ ಕುಟುಂಬದ ದೈವ ದೇವರುಗಳ ಆರಾಧನೆಯ ಸೈದ್ಧಾಂತಿಕವಾಗಿ ಧಾರ್ಮಿಕ ವಿಧಿಯಾದರೆ, ಅದಕ್ಕೆ ಸಂಬಂಧಿಸಿದ ಕ್ರಿಯಾಭಾಗವೇ ಆಚರಣೆ ಆಗುತ್ತದೆ. ಈ ಹಿನ್ನೆಲೆಯಲ್ಲಿ ಈ ದೈವಸ್ಥಾನಗಳ ವಾರ್ಷಿಕ ಗೆಂಡಸೇವೆ ಮತ್ತಿತರ ಪವಿತ್ರ ದೈವಿಕ ಪ್ರಸ್ತುತಿಯನ್ನು ಮುವತ್ತು ಮುವತೈದು ವರ್ಷಗಳ ಹಿಂದಿನ ಕಾಲಘಟ್ಟದ ಸ್ಮೃತಿಯಲ್ಲಿ ನೆನಪಿಸಿಕೊಂಡರೆ ಅಲ್ಲೊಂದು ಭಕ್ತಿಪ್ರಧವಾದ ಲೋಕ ತೆರೆದುಕೊಳ್ಳುತ್ತದೆ. ಆ ಕಾಲಘಟ್ಟದಲ್ಲಿ ವಾಹನ ಸಂಚಾರ ವಿರಳವಾಗಿದ್ದವು ಈ ದೈವಸ್ಥಾನದ ವಾರ್ಷಿಕ ಜಾತ್ರೆಗೆ ಹೋಗಲು ಎಲ್ಲರೂ ಬಸ್ಸು ಸಾರಿಗೆಯನ್ನು ಅವಲಂಬಿಸಿಕೊಂಡಿದ್ದರು ಮುಖ್ಯವಾಗಿ ಮಾರಣಕಟ್ಟೆ ಮತ್ತು ಹಾಲಾಡಿ ಕ್ಷೇತ್ರದ ವಾರ್ಷಿಕ ಗೆಂಡಸೇವೆಗೆ ಹೋಗುವ ಸಮಾಜದ ಕುಟುಂಬ ವರ್ಗ ಬಸ್ ಮೂಲಕ ಕ್ಷೇತ್ರಕ್ಕೆ ಹೋಗಿ ಅಲ್ಲಿನ ಗದ್ದೆ ಬಯಲಿನಲ್ಲಿ ಟೆಂಟ್ ಹಾಕಿ ,ಕೊರೆಯುವ ಚಳಿಯಲ್ಲಿ ಬೆಂಕಿ ಕಾಯಿಸಿಕೊಂಡು, ಗೆಂಡ ತುಳಿದು ಮರುದಿನ ಬೆಳಿಗ್ಗೆ ಮನೆಗೆ ಮರಳುತ್ತಿದ್ದರು ಎಲ್ಲಿ ಹೋಯಿತು ಆ ಸಂಭ್ರಮದ ದಿನಗಳು? ಕಾಲ ಬದಲಾಗಿದೆ, ಜೊತೆಗೆ ಪ್ರಕೃತಿಯಲ್ಲೂ ಬದಲಾವಣೆಯಾಗಿದೆ ಈಗ ಎಲ್ಲರ ಬಳಿಯೂ ವಾಹನಗಳಿವೆ ಟೆಂಟ್ ಹಾಕಿ ಅಲ್ಲಿ ಉಳಿಯುವ ಪ್ರಮೇಯವೇ ಇಲ್ಲ ಒತ್ತಡದ ಯಾಂತ್ರಿಕ ಬದುಕು ಯಾರಿಗೂ ಪುರುಸೊತ್ತಿಲ್ಲ ಮರುದಿನ ಕೆಲಸಕ್ಕೆ ಹೋಗಬೇಕು ಪ್ರತಿಯೊಬ್ಬರ ಬಳಿ ಈಗ ಬಗೆಬಗೆಯ ವಾಹನಗಳಿವೆ ರಾತ್ರಿಯೇ ಗೆಂಡಸೇವೆ ಮುಗಿಸಿ ಮನೆಗೆ ಮರಳುತ್ತಾರೆ.
ಬೆಂಕಿ ಹಾಕಿ ಚಳಿ ಕಾಯಿಸಲು ಚಳಿ ಕೂಡಾ ಮಾಯಾವಾಗಿದೆ ಪ್ರಾತಃಕಾಲದಲ್ಲಿ ಉರಿಸೆಖೆ ಹಬ್ಬ ಹರಿದಿನಗಳು ಸಂಕೀರ್ಣಗೊಂಡಿದೆ ಆದರೆ ದೈವ ನಂಬಿಕೆಗಳು ಮಾತ್ರ ಸಮಸ್ಥಿತಿಯಲ್ಲಿ ಯಥಾವತ್ತಾಗಿ ಮುಂದುವರಿದಿದೆ ವರ್ಷಕೊಮ್ಮೆಯಾದರೂ ನಂಬಿದ ದೈವಗಳ ಸನ್ನಿಧಿಗೆ ಹೋಗಿ ಪ್ರಾರ್ಥನೆ ಸಲ್ಲಿಸಬೇಕು ಎಂಬ ಅಚಲವಾದ ದೃಡಸಂಕಲ್ಪಗಳು ನಮ್ಮಲ್ಲೆರನ್ನೂ ಕಣ್ಣಿಗೆ ಕಾಣದ ದೈವಿಶಕ್ತಿಗಳು ಶ್ರೀ ರಕ್ಷೆಯಾಗಿ ಕಾಪಾಡುತ್ತದೆ.
ಕೊಂಕಣಿ ಖಾರ್ವಿ ಸಮಾಜ ನಂಬಿದ ಕರಾವಳಿಯ ದೈವಸ್ಥಾನಗಳು ಮತ್ತು ವಾರ್ಷಿಕ ಗೆಂಡಸೇವೆಗಳು ಹೊನ್ನಾವರದ ತನಕ ವಿಸ್ತರಣೆಯಾಗಿದೆ
ಕರ್ನಾಟಕ ಕರಾವಳಿಯಲ್ಲಿ ನೆಲೆನಿಂತ ಕೊಂಕಣಿ ಖಾರ್ವಿ ಸಮಾಜ ಬಾಂಧವರು ಕುಂದಾಪುರದ ಒಳನಾಡಿನ ಮಲೆನಾಡು ಪ್ರದೇಶವಾದ ಮಾರಣಕಟ್ಟೆ, ಹಾಲಾಡಿ, ಅರ್ಭಕ ಧಾರಕೇಶ್ವರಿ ದೈವಸ್ಥಾನ ಮಣಿಕಲ್ಲು ಮುಂತಾದ ಪ್ರಮುಖ ದೈವಸ್ಥಾನಗಳ ಪರಂಪರಾನುಗತ ನಂಬಿದ ಭಕ್ತರಾಗಲು ಮತ್ತೊಂದು ಕಾರಣವೂ ಇದೆ ವಾಹನ ಸೌಕರ್ಯಗಳಿಲ್ಲದ ಅಂದಿನ ಕಾಲಘಟ್ಟದಲ್ಲಿ ಖಾರ್ವಿ ಮೀನುಗಾರ ಮಹಿಳೆಯರು ಒಣಮೀನುಗಳನ್ನು ಮಾರಲು ನದಿ ದಾಟಿ, ಕಾಡುಪ್ರದೇಶಗಳನ್ನು ಹಾದು ನಾಡ ಪಡುಕೋಣೆ, ವಂಡ್ಸೆ, ಮಾರಣಕಟ್ಟೆ, ಹಾಲಾಡಿ ಮುಂತಾದ ಕಡೆ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದರು ಹೀಗೆ ಹೋಗುವ ಸಂದರ್ಭದಲ್ಲಿ ಕಾಡುಪ್ರಾಣಿಗಳ ಉಪಟಳವೂ ಇರುತ್ತಿತ್ತು ಅವುಗಳಿಂದ ರಕ್ಷಣೆಗಾಗಿ ಮೀನುಗಾರ ಮಹಿಳೆಯರು ಈ ದೈವಗಳಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದರು ಈ ಪರಿಪಾಠ ಕ್ರಮೇಣ ದೃಡ ನಂಬಿಕೆಯ ನೆಲೆಯಲ್ಲಿ ಖಾರ್ವಿ ಸಮಾಜ ಈ ದೈವಸ್ಥಾನಗಳ ಪರಂಪರಾನುಗತ ಭಕ್ತರಾಗಿ ವಿಧೇಯಿಸಿಕೊಂಡು ಸ್ಥಿರವಾಯಿತು. ಮೀನುಗಾರ ಮಹಿಳೆಯರು ಈ ಕುಂದಾಪುರದ ಒಳನಾಡಿನ ಕಾಡುಪ್ರದೇಶಗಳ ಊರಿನಲ್ಲಿ ಒಣಮೀನು ಮಾರಿ ಅಲ್ಲಿಂದ ಹಣದ ಬದಲಿಗೆ ಭತ್ತವನ್ನು ತೆಗೆದುಕೊಂಡು ಬರುತ್ತಿದ್ದರು. ಈ ಕೊಡುಕೊಳ್ಳುವಿಕೆಯ ಸಾಮಾಜಿಕ ಬಾಂಧವ್ಯವು ಅರೆಮಲೆನಾಡಿನ ಜನರೊಂದಿಗೆ ಶಾಶ್ವತವಾಗಿ ಬೆಸೆದುಕೊಂಡರೆ,ಮತ್ತೊಂದು ಭಾಗವಾಗಿ ಹೊಟ್ಟೆಪಾಡಿನ ವೃತ್ತಿಧರ್ಮದಲ್ಲಿ ದೈವರಕ್ಷಣೆಯ ವರದಾನ ದೊರೆತು ದೈವಸ್ಥಾನಗಳ ಶಾಶ್ವತ ನಂಬಿಕೆಯ ಭಕ್ತ ವರ್ಗವಾಗಿ ವಿಧೇಯಿಸಿಕೊಳ್ಳಲು ಕಾರಣೀಕರ್ತವಾಯಿತು.
ಬಹುಮುಖ್ಯವಾಗಿ ರಸ್ತೆ ಸೇತುವೆ ಸಂಪರ್ಕವಿರದ ಅಂದಿನ ಕಾಲಘಟ್ಟದಲ್ಲಿ ಗಂಗೊಳ್ಳಿಯಿಂದ ಅತ್ಯಧಿಕ ಸಂಖ್ಯೆಯಲ್ಲಿ ಮಹಿಳಾ ಮೀನುಗಾರರು ದೋಣಿಯಲ್ಲಿ ಗುಲ್ವಾಡಿಗೆ ಬಂದು ಅಲ್ಲಿಂದ ತಲೆಹೊರೆಯಲ್ಲಿ ಒಣಮೀನುಗಳನ್ನು ಹೊತ್ತುಕೊಂಡು ಕಾಲ್ನಡಿಗೆಯಲ್ಲಿ ಮುಂದೆ ನೇರಳಕಟ್ಟೆ, ಅಜ್ರಿ, ಬಾಂಡ್ಯ, ವಂಡ್ಸೆ, ಸಿದ್ದಾಪುರ, ಮಾರಣಕಟ್ಟೆ, ಹಾಲಾಡಿ ಮುಂತಾದ ಪ್ರದೇಶಗಳಲ್ಲಿ ಮೀನು ಮಾರಾಟ ಮಾಡುತ್ತಿದ್ದರು ಕಾಡುಗಳು ಸಮೃದ್ಧವಾಗಿದ್ದ ಆ ಕಾಲದಲ್ಲಿ ಅನೇಕ ಕ್ರೂರ ಪ್ರಾಣಿಗಳು ಎದುರಾಗುತ್ತಿದ್ದವು ಈ ಸಂದರ್ಭದಲ್ಲಿ ರಕ್ಷಣೆಗಾಗಿ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರನಿಗೆ, ಹಾಲಾಡಿ ಮರ್ಲುಚಿಕ್ಕು ಅಮ್ಮನವರಿಗೆ ಈ ಮಹಿಳಾ ಮೀನುಗಾರರು ಪ್ರಾರ್ಥನೆ ಮಾಡಿ ಕಾಡುಪ್ರಾಣಿಗಳಿಂದ ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸದಂತೆ ಹರಕೆ ಹೇಳಿಕೊಳ್ಳುತ್ತಿದ್ದರು.
ಹೀಗೆ ದೈವಗಳಿಗೆ ಹೇಳಿಕೊಂಡ ಹರಕೆಗಳು ಫಲಪ್ರದವಾಗಿ ಮಹಿಳಾ ಮೀನುಗಾರರ ಹೊಟ್ಟೆಪಾಡಿನ ಬದುಕು ನಿರ್ವಿಘ್ನವಾಗಿ ಸಾಗುತ್ತಿತ್ತು ಕೃತಜ್ಞತಾಪೂರ್ವಕವಾಗಿ ಅವರು ದೈವಸಂಪ್ರೀತಿಗಾಗಿ ಹೇಳಿಕೊಂಡ ಹರಕೆಗಳನ್ನು, ಪೂಜೆಗಳನ್ನು ಭಕ್ತಿಯಿಂದ ಸಲ್ಲಿಸುತ್ತಿದ್ದರು ಈ ಪವಿತ್ರ ಧಾರ್ಮಿಕ ಪ್ರಸ್ತುತಿಯ ನಂಟು ದೈವಗಳೊಂದಿಗೆ ದೃಡತೆಯ ನಂಟಾಗಿ ರೂಪುಗೊಂಡಿತ್ತು ಖಾರ್ವಿ ಸಮಾಜದ ಕುಟುಂಬ ವರ್ಗಗಳ ಪರಮ ನಂಬಿಕೆಯ ತಾಣವಾಗಿ ತಲೆತಲಾಂತರಗಳಿಂದ ಈ ದೈವಸ್ಥಾನಗಳು ಸ್ಥಿರಗೊಂಡವು.
ಉಮಾಕಾಂತ ಖಾರ್ವಿ, ಕುಂದಾಪುರ