ಖಾರ್ವಿ ಆನ್ಲೈನ್ ಪ್ರಸ್ತುತ ಪಡಿಸಿರುವ ಖಾರ್ವಿ ಚಿಂತನೆ “ನಿಮ್ಮ ಧ್ವನಿ ಸಮಾಜದ ಧ್ವನಿ” ಪೋಸ್ಟರ್ ನಲ್ಲಿ ಖಾರ್ವಿ ಸಮಾಜ ಎದುರಿಸುತ್ತಿರುವ ಸವಾಲುಗಳು ಮತ್ತು ಸಮಸ್ಯೆಗಳ ಸಮಗ್ರ ಚಿತ್ರಣ ಅಡಕವಾಗಿದೆ.
ಖಾರ್ವಿ ಆನ್ಲೈನ್ ಪ್ರಸ್ತುತ ಪಡಿಸಿರುವ ಖಾರ್ವಿ ಚಿಂತನೆ “ನಿಮ್ಮ ಧ್ವನಿ ಸಮಾಜದ ಧ್ವನಿ” ಪೋಸ್ಟರ್ ನಲ್ಲಿ ಖಾರ್ವಿ ಸಮಾಜ ಎದುರಿಸುತ್ತಿರುವ ಸವಾಲುಗಳು ಮತ್ತು ಸಮಸ್ಯೆಗಳ ಸಮಗ್ರ ಚಿತ್ರಣ ಅಡಕವಾಗಿದೆ. ಇಲ್ಲಿ ಪ್ರಧಾನ ಭೂಮಿಕೆಯಲ್ಲಿ ಕಡಲಲೆಯೊಂದಿಗೆ ಹೋರಾಡಿ ಮೀನು ಹಿಡಿಯುತ್ತಿರುವ ಮೀನುಗಾರರು ಮತ್ತು ಆ ಮೀನುಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿರುವ ಸಮಾಜದ ಮಹಿಳೆಯರ ದೃಶ್ಯ ಚಿತ್ರಣವಿದೆ ಬಿಸಿಲು ಮಳೆಯೆನ್ನದೇ ಮಾರುಕಟ್ಟೆಯಲ್ಲಿ ಮೀನು ಮಾರಾಟ ಮಾಡಿ ತಮ್ಮ ಕುಟುಂಬ ನಿರ್ವಹಣೆ ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತಮ್ಮ ಬದುಕನ್ನೇ ಧಾರೆಯೆರೆಯುವ ಮಹಿಳೆಯರ ದುಡಿಮೆ ಮತ್ತು ಶಿಕ್ಷಣದ ಸಂಕೇತವಾದ ಪುಸ್ತಕದ ಪ್ರತಿರೂಪ ಇಲ್ಲಿ ಅನಾವರಣಗೊಂಡಿದೆ.
ಹಗಲಿರುಳು ಎನ್ನದೇ ದುಡಿದು ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿ ಒಳ್ಳೆಯ ಉದ್ಯೋಗ ದೊರಕುವಂತೆ ಮಾಡಿದ ತಂದೆ ತಾಯಿಗಳನ್ನು ಧಿಕ್ಕರಿಸಿ ನಮ್ಮ ಸಮಾಜದ ಹೆಣ್ಣುಮಕ್ಕಳು ಅಂತರ್ಜಾತಿ ವಿವಾಹ ಜಾಲಕ್ಕೆ ಬಲಿಯಾಗುತ್ತಿರುವ ವಿಷಾದವೂ ಇಲ್ಲಿ ವ್ಯಕ್ತವಾಗಿದೆ. ಆಧುನಿಕ ಸಮಾಜದ ನಾಗಾಲೋಟದ ಅಸಂಗತ ಪ್ರವೃತ್ತಿಯಾದ ಮಾದಕ ದೃವ್ಯ ವ್ಯಸನಕ್ಕೆ ಯುವಕರು ಬಲಿಯಾಗುತ್ತಿರುವ ಕಳವಳಕಾರಿ ಸಂಗತಿಯೂ ಇಲ್ಲಿ ಅಭಿವ್ಯಕ್ತಿಗೊಂಡಿದೆ.
ಸಾಂಪ್ರದಾಯಿಕ ಮೀನುಗಾರಿಕೆಯನ್ನೇ ನೆಚ್ಚಿಕೊಂಡಿರುವ ಖಾರ್ವಿ ಮೀನುಗಾರಿಕೆ ವೃತ್ತಿ ಮೇಲೆ ಆಧುನಿಕ ಅವೈಜ್ಞಾನಿಕ ಮೀನುಗಾರಿಕೆ ಬೀರುತ್ತಿರುವ ದುಷ್ಪರಿಣಾಮದ ಚಿತ್ರಣವೂ ಇದರಲ್ಲಿ ಅಡಕವಾಗಿದೆ ಅಭಿವೃದ್ಧಿಯ ನೆಪದಲ್ಲಿ ಖಾರ್ವಿ ಮೀನುಗಾರರ ಮನೆ ಬದುಕನ್ನು ಸರ್ವನಾಶ ಮಾಡುತ್ತಿರುವ ಕಾಸರಕೋಡು ಟೊಂಕಾ ವಾಣಿಜ್ಯ ಬಂದರು ಬಂಡವಾಳಶಾಹಿಗಳ ಕರಾಳಮುಖ ಇಲ್ಲಿ ರಣಹದ್ದುಗಳ ರೂಪದಲ್ಲಿ ಬಿಂಬಿತವಾಗಿದೆ. ಸಮಾಜದ ದುರ್ಬಲ ನಾಯಕತ್ವದ ಆಂತರಿಕ ಒಳಬೇಗುದಿಯೂ ಇಲ್ಲಿ ಚಿತ್ರಣಗೊಂಡಿದ್ದು, ಸಮಾಜ ಹತ್ತು ಹಲವು ಸಮಸ್ಯೆಗಳಲ್ಲಿ ನಲುಗುತ್ತಿದ್ದಾಗ ಜಾಣಮೌನ ಅನುಸರಿಸುತ್ತಿರುವ ಆಂತರಿಕ ಶಕ್ತಿಗಳಾದ ಸೋ ಕಾಲ್ಡ್ ನಾಯಕರ ಸ್ವಾರ್ಥದ ಪರಾಕಾಷ್ಠೆ ಮತ್ತು ಬಾಹ್ಯ ಶಕ್ತಿಗಳ ನಿರಂತರ ದೌರ್ಜನ್ಯ ನಮ್ಮ ಸಮಾಜವನ್ನು ರಣಹದ್ದುಗಳಂತೆ ಕುಕ್ಕಿ ತಿನ್ನುವಂತಹ ಘಟನೆಗಳು ಇಲ್ಲಿ ಸೂಚ್ಯವಾಗಿ ಚಿತ್ರಣಗೊಂಡಿದೆ
ಒಟ್ಟಾರೆಯಾಗಿ ಖಾರ್ವಿ ಸಮಾಜ ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆ, ಸವಾಲುಗಳ ಸಮಗ್ರ ಚಿತ್ರಣ ಈ ಪೋಸ್ಟರ್ ನಲ್ಲಿ ಪ್ರಾತಿನಿಧಿಕವಾಗಿ ಪ್ರತಿಬಿಂಬಿತವಾಗಿದೆ.
www.kharvionline.com