ಅನುದಾನ ರಹಿತ ಶಾಲಾ ಶಿಕ್ಷಕರ ಬಗ್ಗೆ ಅತೀವ ಬೇಜಾರು ಇದೆ. ಶಿಕ್ಷಕರಾದವರು ತುಸು ಸ್ವಾಭಿಮಾನ ಹೆಚ್ಚೇ ಇರುವಂತವರು. ಎಲ್ಲರಂತೆ ಹೊಟ್ಟೆ ಪಾಡಿಗಾಗಿ ಏನೇನೋ ಕೆಲಸಕ್ಕೆ ಹೋಗಲು ಮನಸ್ಸು ಒಪ್ಪಲ್ಲ. ಹಾಗಂತ ಬದುಕು ಹೇಗೆ!? ಸಿಗುವ ಅಷ್ಟೋ ಇಷ್ಟೋ ಸಂಬಳ ದಲ್ಲಿ ಗೌರವಯುತ ಜೀವನ ನಡೆಸುತ್ತಿದ್ದವರು. ಸಂಬಳ ಎನ್ನುವುದಕ್ಕಿಂತ ಗೌರವಧನ ಎಂಬುವುದೇ ಸರಿ. ಆದರೆ ಅವರಿಗೆ ಅತ್ತ ಶಾಲೆಯೂ ಇಲ್ಲದೆ, ಇತ್ತ ಸಂಬಳವೂ ಇಲ್ಲದೆ ಬದುಕು ಅತಂತ್ರವಾಗಿದೆ.
ಕೇವಲ ಸರಕಾರ ಮಾತ್ರವಲ್ಲ ಆಯಾ ಶಿಕ್ಷಣ ಸಂಸ್ಥೆಗಳು ಇದನ್ನು ಅರಿತು ಪೂರ್ತಿ ಅಲ್ಲದಿದ್ದರೂ ಕನಿಷ್ಟ ಮಾಸಿಕ ಗೌರವಧನ ನೀಡಬಹುದಿತ್ತು. ಕೊರೋನಾಗೂ ಹಿಂದೆ ಕಾಪಿಟೇಶನ್, ಡೊನೇಶನ್, ಬಿಲ್ಡಿಂಗ್ ಫಂಡ್ ಸಂಗ್ರಹಿಸಿ ಶಾಲೆಯನ್ನೆ ಪುಸ್ತಕ, ಯೂನಿಫಾರಂ ಮಾರಾಟದಿಂದ ಸಂಗ್ರಹಿಸಿದ ಹಣದಿಂದ ಕನಿಷ್ಟ ಕನಿಕರ ತೋರಿಸಬಹುದಿತ್ತು.
ಖಾಸಗಿ ಶಾಲೆಗಳ ಶಿಕ್ಷಕರಿಗೋ ವಿಪರೀತ ಎನ್ನುವಷ್ಟು ಪಾಠದ ಬಗೆಗೆ ಒತ್ತಡ. ಮನೆ ಮತ್ತು ಶಾಲೆ ಎರಡನ್ನೂ ನಿಭಾಯಿಸಿ ಜೊತೆಗೆ ಮನೆಪಾಠ ಹೇಳಿ ಬದುಕುತ್ತಿದ್ದ ಸಂಸ್ಕಾರಯುತ ಶಿಕ್ಷಕರ ಗೋಳು ಯಾರಿಗೂ ಕೇಳಲಿಲ್ಲ.
ಕಿಟ್ ಗಾಗಿ ಕೈಚಾಚಲೂ ಆಗದೇ ಅಂಗಡಿಯಲ್ಲಿ ಸಾಲದ ಪಟ್ಟಿ ಬೆಳೆದು ನಿಂತಿದೆ. ಅಂಗಡಿಯಾತನ ಬಾಕಿ ಯಾವಾಗ ಕೊಡುತ್ತಾರೋ ಎಂಬ ಪ್ರಶ್ನಾರ್ಥಕ ನೋಟವೇ ಇರಿದು ಕೊಲ್ಲುವಂತಿರುತ್ತದೆ.
ಈಗ ಸರಕಾರ ರೂ ಐದು ಸಾವಿರ ಪರಿಹಾರ ಘೋಷಿಸಿದೆ. ಯಾವ ವಿಚಾರದಲ್ಲೂ ಸತಾಯಿಸದೇ ಶೀಘ್ರವಾಗಿ ಅವರ ಖಾತೆಗೆ ಬರುವಂತಾಗಲಿ. ಇದರಿಂದಲೇ ಅವರ ಬದುಕು ಬದಲಾಗದಿರಬಹುದು ಕನಿಷ್ಟ ನಮ್ಮನ್ನು ಈಗಲಾದರೂ ಗುರುತಿಸಿದ್ದಾರಲ್ಲ ಎಂಬ ಸಮಾಧಾನ ಆದರೂ ಸಿಗಬಹುದು.
*ನಾ _ಅಭಿಸಾರಿಕೆ*