ಮಾದಕ ವ್ಯಸನ ಮಸಣಕ್ಕೆ ದಾರಿ…
ಮಾದಕ ವ್ಯಸನದ ವಿರುದ್ಧದ ದಿನವು “ಅಂತರರಾಷ್ಟ್ರೀಯ” ಸ್ಥಾನಮಾನವನ್ನು ಹೊಂದಿದೆ, ವಿಶ್ವ ಸಂಸ್ಥೆಯಿಂದ ಮಾದಕ ದ್ರವ್ಯಗಳ ಮತ್ತು ಅವುಗಳ ಸಾಗಣೆ ವಿರೋಧಿ ಎಂಬ ದಿನಾಚರಣೆಯನ್ನು ಜೂನ್ -26 ರಂದು ಆಚರಿಸಲಾಗುತ್ತಿದೆ.
ಒಂದು ಸಮಾಜದ ಸಮಗ್ರ ಬೆಳವಣಿಗೆಯನ್ನು ಕುಂಟಿತಗೊಳಿಸಬೇಕಾದರೆ ಅಲ್ಲಿನ ಯುವಜನತೆಯನ್ನು ಮದ್ಯ ಮತ್ತು ಇತರೆ ಮಾದಕ ದ್ರವ್ಯಗಳ ದಾಸನನ್ನಾಗಿಸಿದರೆ ಸಾಕು ಎನ್ನುವ ಮಾತೊಂದಿದೆ. ಇಂದು ಯುವಜನತೆಯೇ ಹೆಚ್ಚಾಗಿ ಮಾದಕ ವ್ಯಸನಗಳ ಚಟಕ್ಕೆ ಜೀವನವನ್ನೇ ಹಾಳು ಮಾಡಿಕೊಂಡಿದ್ದಾರೆ. ಮಕ್ಕಳು ಎಳೆಯ ವಯಸ್ಸಿಗೆ ಇಂತಹ ಚಟಕ್ಕೆ ಮಾರು ಹೋಗಿರುತ್ತಾರೆ. ತನ್ನ ಮಗ ಅಥವಾ ಮಗಳು ಇಂತಹ ಚಟದ ವ್ಯಸನಿಗಳಾಗಿರಲು ಸಾಧ್ಯವೇ ಇಲ್ಲ ಎಂಬ ಅತಿಯಾದ ನಂಬಿಕೆ ತಂದೆ-ತಾಯಿಯರದು. ತನ್ನ ಮಗ ಅಥವಾ ಮಗಳು ಹೈಸ್ಕೂಲ್ ವ್ಯಾಸಂಗ ಮಾಡುತ್ತಿದ್ದಾರೆ ಎಂದ ತಕ್ಷಣ ಅವರ ಮೇಲೆ ಸ್ವಲ್ಪ ನಿಗಾ ಇಡಬೇಕು. ಏಕೆಂದರೆ ಆ ವಯಸ್ಸೇ ಅಂಥದ್ದು. ಹಾದಿ ತಪ್ಪುವುದು ತಪ್ಪಿಸುವವರು ಇರುವುದು ಸರ್ವೇ ಸಾಮಾನ್ಯ. ಹಾಗಾಗಿ ಮಕ್ಕಳೂ ಕೂಡ ಅಷ್ಟೇ ಜಾಗರೂಕರಾಗಿರಬೇಕು.
ಸಾಧ್ಯವಾದಲ್ಲಿ ಮಕ್ಕಳಿಗೆ ತಿಳಿಹೇಳಬೇಕು. ಮಕ್ಕಳೊಂದಿಗೆ ಗೆಳೆಯ ಅಥವಾ ಗೆಳತಿಯ ತರಹದ ಬಾಂಧವ್ಯ ಬೆಳೆಸಿಕೊಂಡರೆ, ಅವರೂ ಕೂಡ ಅವರ ತೊಂದರೆಗಳನ್ನು ಭಯವಿಲ್ಲದೆ ಹೇಳಿಕೊಳ್ಳುತ್ತಾರೆ. ಹೀಗಾದರೂ ಸ್ವಲ್ಪ ಮಟ್ಟಿಗೆ ಮಕ್ಕಳು ಮಾದಕ ದ್ರವ್ಯದ ವ್ಯಸನಿಗಳಾಗದಂತೆ ತಡೆಯಬಹುದು. ಧೂಮಪಾನ, ಆರೋಗ್ಯಕ್ಕೆ ಹಾನಿಕರ ಎಂದು ಬರೆದಿರುವುದನ್ನು ತಿಳಿದೂ ವ್ಯಸನಿಗಳು ಅದರ ಚಟಕ್ಕೆ ಮಾರು ಹೋಗಿರುತ್ತಾರಲ್ಲವೇ? ಆದರೆ ಇದಕ್ಕೆ ಹೆಚ್ಚು ಬಲಿಯಾಗುವುದು ಹದಿಹರೆಯದ ಮಕ್ಕಳು ಮುಂದೆ ಅತೀ ದೊಡ್ಡ ಭವಿಷ್ಯವನ್ನು ಇಟ್ಟುಕೊಂಡು ಆರೋಗ್ಯಕರವಾಗಿ ಬೆಳೆಯಬೇಕಾದ ಈ ಯುವ ಜನಾಂಗದ ಮಕ್ಕಳು ತಮ್ಮ ಆರೋಗ್ಯವನ್ನು ಬೆಳೆಯಬೇಕಾದ ಹರೆಯದಲ್ಲೇ ಹಾಳು ಮಾಡುಕೊಳ್ಳುತ್ತಾ, ಜೊತೆಗೆ ಇಂತಹ ಕೆಟ್ಟ ಚಟಗಳಿಗೆ ಅಂಟಿಕೊಂಡಿರುವುದು ವಿಷಾದಕರ ಸಂಗತಿ.
ಮಾದಕ ವಸ್ತುಗಳು ತುಂಬಾ ಕಡೆಗಳಲ್ಲಿ ಕಳ್ಳಸಾಗಾಣಿಕೆಯಾಗುತ್ತಿವೆ. ಪೋಲಿಸರು ಕಂಡು ಹಿಡಿದು ವಶಕ್ಕೆ ತೆಗೆದುಕೊಂಡರೂ ಸಹ ಕೆಲವೊಮ್ಮೆ ಕೈಗೆ ಸಿಗದೆ ಉಳಿದು ಬಿಡುತ್ತದೆ. ತಮ್ಮ ಮಕ್ಕಳು ಮಾದಕ ದ್ರವ್ಯದ ವ್ಯಸನಿಗಳಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ ಸಂದರ್ಭದಲ್ಲಿ ತಂದೆ-ತಾಯಿಗಳು ತಮ್ಮ ಮಕ್ಕಳಿಗೋಸ್ಕರ ಬಿಡಿಸಿಕೊಂಡು ಬರುತ್ತಾರೆ. ಇದರಿಂದ ತಮಗಾಗಿರುವ ಅವಮಾನಕ್ಕಿಂತ ಹೆಚ್ಚಾಗಿ ತಂದೆ-ತಾಯಿಗಳಿಗೆ ಮಕ್ಕಳ ಬಗ್ಗೆ ಬೇಸರ, ಹತಾಶೆ ಮತ್ತು ನೋವುಂಟಾಗುತ್ತದೆ.
ಹೆತ್ತವರ ಮನಸ್ಸಿಗೆ ನೋವುಂಟಾಗುತ್ತದೆ. ಹೆತ್ತವರ ಮನಸ್ಸಿಗೆ ನೋವುಂಟು ಮಾಡದೆ ಅವರನ್ನು ಸಂತೋಷವಾಗಿ ನೋಡಿಕೊಳ್ಳುವುದು ಮಕ್ಕಳ ಅತಿ ದೊಡ್ಡ ಜವಾಬ್ಧಾರಿ ಹಾಗೂ ಕರ್ತವ್ಯವಾಗಿದೆ.
ಗಾಂಜಾ, ಅಫೀಮು ಚರಸ್ ನಂತಹ ಮಾದಕ ವಸ್ತುಗಳ ಶೇಖರಣೆ, ಬಳಕೆ, ಸಾಗಾಣಿಕೆ ಹಾಗೂ ಉತ್ಪಾದನೆ ಶಿಕ್ಷಾರ್ಹ ಅಪರಾಧ ಎನ್ನುವುದನ್ನು ಯುವ ಜನತೆ ಮನದಟ್ಟು ಮಾಡಿಕೊಳ್ಳಬೇಕು. ಇಂತಹ ಅಪರಾದಕ್ಕೆ ಗರಿಷ್ಠ 10 ವರ್ಷಗಳ ಸೆರೆವಾಸ ಹಾಗೂ ಭಾರೀ ದಂಡ ವಿಧಿಸಲಾಗುತ್ತದೆ. ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಯುವಕರೇ ಮುಂದಾಗಬೇಕು.
ಇಂದಿನ ಯುವ ಜನಾಂಗ ಆರಂಭದಲ್ಲಿ ಸಂತೋಷ ವಿನೋದಕ್ಕಾಗಿ ಮಾದಕ ದ್ರವ್ಯ ಸೇವನೆ ಆರಂಭಿಸುತ್ತಾರೆ. ಅದು ಚಟವಾಗಿ ಬದುಕನ್ನೇ ನಾಶ ಮಾಡುವ ಮಟ್ಟಕ್ಕೆ ಬೆಳೆದು ನಿಲ್ಲುತ್ತದೆ. ಹಾಗಾಗಿ ಯುವಜನತೆ ಜಾಗೃತರಾಗಿರಬೇಕು ಉತ್ತಮ ನಾಗರಿಕರಾಗಲು ಮಕ್ಕಳು ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು.
www.kharvionline.com