ಹಾಯಿದೋಣಿ ಕಮಲ

ಹೊರಗೆ ಕುಳಿರ್ಗಾಳಿಯ ಜಡಿಮಳೆ ಮನದೊಳಗೆ ಹಳೆ ನೆನಪುಗಳ ಸರಮಾಲೆ ಹೀಗೆ ನೆನಪಾದವಳೇ ತೊಂಬತ್ತರ ದಶಕದ ಮೀನುಗಾರ ಮಹಿಳೆ ಬಸ್ರೂರಿನ ಕಮಲ

ಕಡುಬಡತನದ ಕುಟುಂಬದಲ್ಲಿ ಹುಟ್ಟಿದ ಕಮಲ ಅನಕ್ಷರಸ್ಥೆ ಬಾಲ್ಯ ದಲ್ಲಿಯೇ ದುಡಿಮೆಯ ನೊಗಕ್ಕೆ ಹೆಗಲು ಕೊಟ್ಟವಳು ತಂದೆಯೊಡನೆ ಬಸ್ರೂರು ಹೊಳೆಯಲ್ಲಿ ಮೀನು ಹಿಡಿಯುತ್ತಿದ್ದ ಆಕೆಗೆ ದೋಣಿ ಚಾಲನೆ ಈಜುವಿಕೆಯ ವಿದ್ಯೆಗಳು ಕರಗತವಾಗಿದ್ದವು ಕ್ರಮೇಣ ಬಸ್ರೂರಿನಿಂದ ದೋಣಿಯಲ್ಲಿ ಗಂಗೊಳ್ಳಿಗೆ ಬಂದು ಮೀನು ಖರೀದಿಸಿ ಮರಳಿ ಬಸ್ರೂರಿನ ಮೀನು ಪೇಟೆಯಲ್ಲಿ ಮೀನು ವ್ಯಾಪಾರದಲ್ಲಿ ತನ್ನನ್ನು ತೊಡಗಿಸಿಕೊಂಡಳು ಮನೆಯ ಕಡು ಬಡತನ ಆಕೆಯನ್ನು ಈ ಉದ್ಯೋಗದ ಅನಿವಾರ್ಯ ತೆಗೆ ಶಾಶ್ವತವಾಗಿ ನೆಲೆಯೂರುವಂತೆ ಮಾಡಿತ್ತು ನಿತ್ಯ ಬದುಕಿನ ತುತ್ತು ಕೂಳಿಗಾಗಿ ಬಸ್ರೂರಿನಿಂದ ಹನ್ನೆರಡು ಕೀ ಮೀ ದೂರದಲ್ಲಿರುವ ಗಂಗೊಳ್ಳಿ ಗೆ ಏಕಾಂಗಿಯಾಗಿ ಹಾಯಿದೋಣಿಯಲ್ಲಿ ಪಂಚಗಂಗಾವಳಿಯಲ್ಲಿ ಕ್ರಮಿಸುವ ಆಕೆಯ ಸಾಹಸಕ್ಕೆ ಜನ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತಿದ್ದರು ಅಸಾಮಾನ್ಯ ಧೈರ್ಯ ಶಾಲಿಯಾದ ಕಮಲ ಬಿಸಿಲು ಮೇಲೇರುತ್ತಿದ್ದಂತೆ ಹಾಯಿದೋಣಿಯಲ್ಲಿ ಗಂಗೊಳ್ಳಿ ಬಂದರಿನಲ್ಲಿ ಬೋಟ್ ನಿಂದ ಮೀನು ಖರೀದಿಸಿ ಸುಡು ಬಿಸಿಲಿನ ಪ್ರಖರತೆಯ ನಡುವೆ ಬಸ್ರೂರು ತಲುಪುವಾಗ ಕೆಲವೊಮ್ಮೆ ಮದ್ಯಾಹ್ನ ಎರಡು ಗಂಟೆ ದಾಟುತ್ತಿತ್ತು ಅಲ್ಲಿ ಬಸ್ರೂರು ಪೇಟೆಯಲ್ಲಿ ಹಸಿ ಮೀನು ಮಾರಿ ಉಳಿಯುವ ಮೀನುಗಳನ್ನು ಒಣಗಿಸಿ ಮಳೆಗಾಲದಲ್ಲಿ ಕುಂದಾಪುರ ಸಂತೆ ಬೈಂದೂರು ಸಂತೆ ಹಾಲಾಡಿ ವಂಡ್ಸೆ ಸಂತೆಗಳಲ್ಲಿ ಮಾರುತಿದ್ದ ಆಕೆ ಕ್ರಿಯಾಶೀಲತೆಯ ದುಡಿಮೆಗೆ ಹೆಸರಾಗಿದ್ದಳು.

ಕುಂದಾಪುರದಿಂದ ಗಂಗೊಳ್ಳಿ ಬಂದರಿಗೆ ದೋಣಿಯಲ್ಲಿ ಸಾಗುವುದೆಂದರೆ ಆ ಕಾಲದಲ್ಲಿ ಜೀವವನ್ನು ಕೈಯಲ್ಲಿ ಇಟ್ಟುಕೊಂಡು ಪಯಣಿಸುವ ಅನುಭವ ಮೀನು ಖಾಲಿ ಮಾಡಿಕೊಂಡು ಮ್ಯಾಂಗನೀಸ್ ರೋಡ್ ಗೆ ಹೋಗುವ ಧಾವಂತದಲ್ಲಿ ಶರವೇಗದಲ್ಲಿ ಧಾವಿಸುವ ಬೋಟ್ ಗಳು ಕಡಲಿನಿಂದ ಬಂದರಿಗೆ ಮೀನು ತುಂಬಿಸಿಕೊಂಡು ಬರುವ ಬೋಟ್ ಗಳನ್ನು ತಪ್ಪಿಸಿಕೊಂಡು ಬರುವುದು ಸಾಹಸಮಯ ದಂಡಯಾತ್ರೆಯಾಗಿತ್ತು ಅಷ್ಟೇ ಅಲ್ಲದೇ ಸರಿಸುಮಾರು ಐವತ್ತು ಅಡಿಗಿಂತಲೂ ಆಳವಾಗಿರುವ ಗಂಗೊಳ್ಳಿ ನದಿಯಲ್ಲಿ ಹುಟ್ಟು ಹಾಕುವುದು ಸಾಮಾನ್ಯ ಸಂಗತಿಯಾಗಿರಲಿಲ್ಲ ಈ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತು ಕಮಲ ತನ್ನ ಕುಟುಂಬದ ಸ್ಥಿರತೆಗಾಗಿ ಹಗಲಿರುಳು ಪ್ರಾಣವನ್ನು ಒತ್ತೆ ಇಟ್ಟುಕೊಂಡು ದುಡಿಯುತ್ತಿದ್ದಳು.

ಕಾಲ ಗತಿಸಿದಂತೆ ಮೀನುಗಾರಿಕೆ ಕ್ಷೇತ್ರದಲ್ಲಿ ಹಲವು ಬದಲಾವಣೆಗಳು ಕಂಡು ಬಂದು ಮೀನುಗಾರ ಮಹಿಳೆಯರಿಗೆ ಬೋಟ್ ನಿಂದ ನೇರವಾಗಿ ಮೀನು ಸಿಗುವುದು ನಿಂತು ಹೋಯಿತು ಮೀನುಗಳನ್ನು ಸಾರಾಸಗಟಾಗಿ ಖರೀದಿಸುವ ಮೀನು ಪಾರ್ಟಿ ಗಳು ಹೆಚ್ಚಾದವು ಹರಾಜು ಪ್ರಕ್ರಿಯೆಗಳಿಗೆ ಚಾಲನೆ ದೊರಕಿತು. ಫಿಶ್ ಮಿಲ್ ಗಳಿಗೆ ಮೀನು ಹೋಗಲು ಆರಂಭವಾಯಿತು ಇದರ ಜೊತೆಗೆ ಜನರ ಮನೆ ಬಾಗಿಲಿಗೆ ಪ್ರೆಶ್ ಮೀನುಗಳು ಮಾರಾಟಕ್ಕೆ ಬರಲು ಆರಂಭವಾಯಿತು ಮೀನುಗಾರ ಮಹಿಳೆಯರಿಗೆ ನೇರವಾಗಿ ಮೀನು ಸಿಗುವುದು ನಿಂತು ಹೋಯಿತು.

ಆಧುನಿಕ ಸೌಕರ್ಯಗಳ ನಾಗಲೋಟ ಪ್ರಕ್ರಿಯೆ ಮೀನುಗಾರಿಕೆ ಕ್ಷೇತ್ರವನ್ನು ಬೇರೊಂದು ದಿಕ್ಕಿನಲ್ಲಿ ಕರೆದೊಯ್ದ ಪರಿಣಾಮ ಕಮಲನಂತಹ ಕಷ್ಟ ಸಹಿಷ್ಣು ಮಹಿಳೆಯರಿಗೆ ನಿರುದ್ಯೋಗ ಸಮಸ್ಯೆ ಸೃಷ್ಟಿ ಯಾಗಿ ಕಮಲ ಮೀನುಗಾರಿಕೆ ಕ್ಷೇತ್ರಕ್ಕೆ ವಿದಾಯ ಹೇಳಬೇಕಾದ ಅನಿವಾರ್ಯತೆ ಉಂಟಾಯಿತು ಹಾಯಿದೋಣಿಯಲ್ಲಿ ನಡುನಡುವೆ ಗಾಂಭೀರ್ಯ ದಿಂದ ಪಂಚಗಂಗಾವಳಿಯ ನೀರನ್ನು ಸೀಳುತ್ತಾ ಬರುತ್ತಿದ್ದ ಕಮಲಳ ಪಯಣ ಕಾಲಕ್ರಮೇಣ ನಿಂತು ಹೋಗಿ ಮತ್ತೆ ಕಮಲ ಕಾಣಸಿಗಲೇ ಇಲ್ಲ ಆಕೆಯ ಧೈರ್ಯ ಸಾಹಸಗಳು ವೃತ್ತಿ ನೈಪುಣ್ಯತೆಗಳು ಇಂದಿಗೂ ಕಣ್ಣಿಗೆ ಕಟ್ಟಿ ದಂತಿದೆ

ಬಡತನದಲ್ಲಿ ಹುಟ್ಟಿ ಬೆಳೆದು ಸಾಮಾನ್ಯ ರಲ್ಲಿ ಅಸಾಮಾನ್ಯ ಳಾಗಿ ಬಾಳಿ ಬದುಕಿದ ಕಮಲಳ ಜೀವನ್ಮುಖಿ ಪಯಣ ಎಲ್ಲರಿಗೂ ಸ್ಪೂರ್ತಿ ದಾಯಕವಾಗಿದೆ ಮಹಿಳೆ ಸ್ವತಂತ್ರವಾಗಿ ಬೆಳೆದು ತನ್ನ ವ್ಯಕ್ತಿತ್ವ ರೂಪಿಸಿಕೊಳ್ಳಲು ಪರಿಸರ ಪರಿಸ್ಥಿತಿಗಳು ತುಂಬಾ ಕಾರಣವಾಗುತ್ತದೆ ಇದರೊಂದಿಗೆ ದುಡಿವ ಹಕ್ಕು ಅಂದರೆ ಆರ್ಥಿಕ ಹಕ್ಕು ಮಹಿಳೆಗೆ ಚಿರಸ್ಥಾಯಿ ಸ್ಥಾನವನ್ನು ಕೊಡಬಲ್ಲದು ಎಂಬುದಕ್ಕೆ ಕಮಲ ಉತ್ತಮ ಉದಾಹರಣೆಯಾಗಿದೆ ನೆನಪುಗಳ ಮೆರವಣಿಗೆ ಇಲ್ಲೀಗೆ ನಿಲ್ಲುವುದಿಲ್ಲ ಅದು ವಿವಿಧ ರೂಪಗಳಲ್ಲಿ ಅನಾವರಣಗೊಳ್ಳುತ್ತದೆ.

ಉಮಾಕಾಂತ ಖಾರ್ವಿ ಕುಂದಾಪುರ

Leave a Reply

Your email address will not be published. Required fields are marked *