ಕುಂದಾಪುರದ ಪಂಚಗಂಗಾವಳಿಯ ಬಳಿ ನೆಲೆ ನಿಂತಿರುವ ಖಾವಿ೯ ಸಮಾಜದ ಶೇಕಡ 75% ಜನರು ಮೀನುಗಾರಿಕೆ ನಂಬಿ ಇಂದಿಗೂ ಜೀವನ ನಡೆಸುತ್ತಿದ್ದಾರೆ, ತಾಯಿ ಮಹಾಕಾಳಿ ಅಮ್ಮನ ಮೇಲೆ ಇಟ್ಟಿರೋ ನಂಬಿಕೆ ಇಲ್ಲಿಯಾ ಮೀನುಗಾರಿಕೆ ಮಾಡುತ್ತಿರುವ ಜನರಿಗೆ ಇದುವರೆಗೂ ಯಾವ ತೊಂದರೆ ಕೂಡ ಬಂದಿಲ್ಲ. ಅಷ್ಟು ಶ್ರದ್ದಾ ಭಕ್ತಿಯಿಂದ ತಾಯಿ ಮಹಾಕಾಳಿ ಅಮ್ಮನ ಇಲ್ಲಿನ ಜನರು ಆರಾಧಿಸುತ್ತಾರೆ…
ಮಳೆಗಾಲ ಬಂತೆಂದರೆ ಸಾಕು ಹೊಳೆಮೀನು, ಗಾಳದ ಮೀನಿಗೆ ಭಾರೀ ಬೇಡಿಕೆ.ಇದೀಗ ಮಳೆಗಾಲದ ಯಾಂತ್ರಿಕ ಮೀನುಗಾರಿಕೆ ನಿಷೇಧ ಸಂದರ್ಭದಲ್ಲಿ ಮೀನು ಪ್ರಿಯರಿಂದ ಹೊಳೆಯಲ್ಲಿ ಗಾಳ ಹಾಕಿ ಮೀನು ಹಿಡಿಯುವ ಹವ್ಯಾಸ ಮುಂದುವರೆದಿದೆ.
ಕೆಲವರು ಹವ್ಯಾಸಕ್ಕಾಗಿ ಗಾಳ ಹಾಕಿದರೆ ಇನ್ನು ಕೆಲವರು ಜೀವನೋಪಯಕ್ಕಾಗಿ ಗಾಳ ಹಾಕಿ ಮೀನು ಹಿಡಿದು ಮಾರಾಟ ಮಾಡುವುದುದನ್ನು ಕಾಣಬಹುದಾಗಿದೆ.
ಗಾಳವು ಮೀನಿನ ಬಾಯಿಯಲ್ಲಿ ಚುಚ್ಚುವ ಮೂಲಕ ಅಥವಾ, ಹೆಚ್ಚು ಅಪರೂಪವಾಗಿ, ಮೀನಿನ ದೇಹವನ್ನು ಅದರಲ್ಲಿ ಸಿಕ್ಕಿಸಿ ಮೀನು ಹಿಡಿಯಲು ಬಳಸಲಾಗುವ ಒಂದು ಸಾಧನ. ಸಿಹಿನೀರು ಮತ್ತು ಉಪ್ಪುನೀರಿನ ಮೀನುಗಳನ್ನು ಹಿಡಿಯಲು ಮೀನುಗಾರರು ಶತಮಾನಗಳಿಂದ ಗಾಳಗಳನ್ನು ಬಳಸಿದ್ದಾರೆ. ಗಾಳ ದೋಣಿ ಮೀನುಗಾರಿಕೆಗೆ ಹಳೆ ಸಂಪ್ರದಾಯ ಇತಿಹಾಸವಿದೆ. ಆಧುನಿಕತೆಯಲ್ಲಿ ಈ ಗಾಳ ಮೀನುಗಾರಿಕೆ ನಿಧಾನವಾಗಿ ಕಣ್ಮರೆಯಾಗುತ್ತಿವೆ.
ಮೀನುಗಾರಿಕೆಯಿಂದ ಹಣ ಸಂಪಾದನೆ ಮಾಡಿ ದೊಡ್ಡ ದೋಣಿ ಕೊಂಡುಕೊಳ್ಳುವ ಶಕ್ತಿ ಇಲ್ಲದ ಮೀನುಗಾರರು ಈಗಲೂ ಗಾಳ ಮೀನುಗಾರಿಕೆ ಮೂಲಕ ತಮ್ಮ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಪಂಚಗಂಗಾವಳಿ ನದಿ ಬಳಿ ವರ್ಷದ 365 ದಿನವೂ ಗಾಳ ಹಾಕಿ ಮೀನು ಹಿಡಿಯುವ ಸಾಂಪ್ರಾದಾಯವನ್ನು ಇಲ್ಲಿನ ಜನ ಮೊದಲಿನಿಂದಲೂ ನಡೆಸಿಕೊಂಡು ಬರುತ್ತ ಇದ್ದಾರೆ. ಇಂದಿಗೂ ಕೂಡ ಕುಲಕಸಬು ಮೀನುಗಾರಿಕೆ ನಂಬಿಕೊಂಡೆ ತಮ್ಮ ಮಕ್ಕಳನ್ನು ಉನ್ನತ ವ್ಯಾಸಂಗಕ್ಕೆ ಕಳುಹಿಸಿಕೊಡುತ್ತಿದ್ದಾರೆ.
ಗಾಳ ಮೀನುಗಾರಿಕೆಯಲ್ಲಿ ಸಾಕಷ್ಟು ಪರಿಣತೆಯನ್ನು ಹೊಂದಿದ ಶೀನ ಖಾವಿ೯ ಕೆಳಕೇರಿ, ಗೋಪಾಲ್ ಖಾವಿ೯ ಬಿ. ಎಸ್. ರೋಡ್ , ವಾಸುದೇವ ಖಾವಿ೯, ಶೇಖರ ಖಾವಿ೯, ಜಿ ಬಾಬು ಖಾವಿ೯, ಆನಂದ್ ಸಾರಂಗ್, ಚಂದ್ರ ಖಾವಿ೯, ದೇವದಾಸ ಖಾವಿ೯ ಅವರುಗಳು ಕಳೆದ ಕೆಲವು ವರ್ಷಗಳಿಂದ ಪಂಚಗಂಗಾವಳಿ ನದಿ ತೀರದಲ್ಲಿ ತಮ್ಮ ಸಾಂಪ್ರದಾಯಿಕ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಗಾಳ ಮೀನುಗಾರಿಕೆಗೆ ಬೇಕಾದ ಅಗತ್ಯವಾದ ಆಹಾರವನ್ನು ತರಲು ಸುಮಾರು ಹತ್ತು ಹದಿನೈದು ಕಿಲೋಮೀಟರ್ ದೂರದ ಹೆಮ್ಮಾಡಿ, 30 ಮುಡಿಯವರೆಗೆ ಹೋಗಿ ಅಲ್ಲಿಂದ ಆಳವಾದ ಕೆಸರಿನಿಂದ ಎರೆಹುಳವನ್ನು ತಂದು ಜೋಪಾನವಾಗಿ ಶೇಖರಣೆ ಮಾಡುವುದೇ ತುಂಬಾ ಕಷ್ಟದ ಕೆಲಸವಾಗಿರುತ್ತದೆ.
ಗಾಳ ಹಾಕುವುದು ಅಷ್ಟು ಸುಲಭದ ಕೆಲಸ ಅಲ್ಲ ಅದಕ್ಕೆ ಮೀನು ಸಿಗುವವರೆಗೂ ತಾಳ್ಮೆ ಇರಬೇಕು ಹಾಗೇ ಕಾಯಬೇಕು, ಅಂತ ಆತ್ಮವಿಶ್ವಾಸ ಇದ್ದರೆ ಮಾತ್ರ ಇದರಲ್ಲಿ ಯಶಸ್ಸು ಸಾಧಿಸಲು ಸಾಧ್ಯ.
ಎಲ್ಲ ಸಮಯದಲ್ಲಿ ಗಾಳಕ್ಕೆ ಮೀನು ಹಿಡಿಯುವುದಿಲ್ಲ. ನೀರಿನ ಇಳಿತ ಭರತವನ್ನು ಅವಲಂಬಿಸಿರುತ್ತದೆ. ನೀರು ಇಳಿತದಿಂದ ಭರತವಾಗುವಾಗ ಮತ್ತು ಭರತದಿಂದ ಇಳಿತವಾಗುವ ಸಮಯದಲ್ಲಿ ಮೀನುಗಳು ಆಹಾರ ಅರಸುತ್ತಾ ಬಳಿ ಬರುತ್ತದೆ. ಈ ಸಮಯದಲ್ಲಿ ಹೆಚ್ಚು ಮೀನು ಗಾಳಕ್ಕೆ ಬೀಳುತ್ತದೆ. ನೀರು ಬಿಸಿಯಾಗಿದ್ದರೆ ಉತ್ತಮ ತಣ್ಣಗಿದ್ದರೆ ಮೀನು ಹತ್ತಿರ ಬರುವುದಿಲ್ಲ ಎನ್ನುತ್ತಾರೆ ಗಾಳದ ಅನುಭವಿ ಗೋಪಾಲ್ ಖಾವಿ೯, ಬಿ ಎಸ್ ರೋಡ್ ಅವರು.
ಮುಂದೆಯೂ ಕೂಡ ಇವರ ಕುಲಕಸಬು ತಾಯಿ ಆಶಿ೯ವಾದದಿಂದ ಒಳ್ಳೆಯ ರೀತಿ ಸಾಗಲಿ ಎಂದು ಹಾರೈಸುವ.
ಚೇತನ್ ಯುವಾ✍
www.kharvionline.com