ಕಣ್ಮರೆಯಾಗುತ್ತಿವೆ ಪಾತಿ (ಮರ್ಗಿ)
ತಂತ್ರಜ್ಞಾನ ಆವಿಷ್ಕಾರದ ಹೊಸ ಗಾಳಿ ಕಡಲ ಮಕ್ಕಳ ಪಾರಂಪರಿಕತೆಗೆ ಕಂಟಕವಾಯಿತೇ ಎನ್ನುವ ಪ್ರಶ್ನೆ ಉದ್ಭವವಾಗುತ್ತಿದೆ. ಉದ್ಯಮೀಕರಣದ ಪ್ರಭಾವದಿಂದ ಸಾಂಪ್ರದಾಯಿಕ ಮೀನುಗಾರಿಕೆಗೆ ತ್ರಾಣವಿಲ್ಲ. ಆಳ ಸಮುದ್ರ ಮೀನುಗಾರಿಕೆಗೆ ಸಾಂಪ್ರದಾಯಿಕ ಮೀನುಗಾರಿಕೆ ದೋಣಿಗಳು, ಆಧುನಿಕ ಗಿಲ್ನೆಟ್ ಹೀಗೆ 4 ಹಂತದ ಸಾಂಪ್ರದಾಯಿಕ ದೋಣಿಗಳು ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತವೆ. ಆದರೆ ಒಬ್ಬರೇ ನಡೆಸುವ ಚಿಕ್ಕದಾದ ಪಾತಿ ದೋಣಿಯ ವೈಶಿಷ್ಟ್ಯತೆಯೇ ವಿಭಿನ್ನ. ಪಾತಿ ದೋಣಿ ಮೀನುಗಾರಿಕೆಗೆ ಹಳೆ ಸಂಪ್ರದಾಯ ಇತಿಹಾಸವಿದೆ. ಆಧುನಿಕತೆಯಲ್ಲಿ ಈ ಪಾತಿ ದೋಣಿಗಳು ನಿಧಾನವಾಗಿ ಕಣ್ಮರೆಯಾಗುತ್ತಿವೆ.
ಮೀನುಗಾರಿಕೆಯಿಂದ ಹಣ ಸಂಪಾದನೆ ಮಾಡಿ ದೊಡ್ಡ ದೋಣಿ ಕೊಂಡುಕೊಳ್ಳುವ ಶಕ್ತಿ ಇಲ್ಲದ ಮೀನುಗಾರರು ಈಗಲೂ ಪಾತಿ ದೋಣಿ ಮೂಲಕ ತಮ್ಮ ಜೀವನ ನಿರ್ವಹಣೆ ಮಾಡುತ್ತಿದ್ದಾರೆ.
ಕುಟುಂಬ ನಿರ್ವಹಣೆಗೆ ಜೀವದ ಹಂಗು ತೊರೆದು ಪಾತಿ ದೋಣಿ ಮೂಲಕ ಮೀನುಗಾರಿಕೆ ಮಾಡುವ ಮೀನುಗಾರರ ಸ್ಥಿತಿ ನಿಜವಾಗಿಯೂ ಶೋಚನೀಯವಾಗಿದೆ. ವರ್ಷದ 365 ದಿನವೂ ಪಾತಿ ದೋಣಿ ಮೂಲಕ ಮೀನುಗಾರಿಕೆ ನಡೆಸಲಾಗುತ್ತದೆ. ಅತ್ಯಂತ ಕಷ್ಟದಾಯಕವಾದರೂ ಬಡ ಮೀನುಗಾರರಿಗೆ ಇದು ಅನಿವಾರ್ಯ. ಮೀನುಗಾರಿಕೆಯನ್ನೆ ಜೀವನದ ಕಸಬನ್ನಾಗಿ ಇಟ್ಟುಕೊಂಡಿರುವ ಬಡ ಮೀನುಗಾರರು ಹವಾಮಾನದ ವೈಪರಿತ್ಯದ ನಡುವೆಯೂ ಜೀವದ ಹಂಗು ತೊರೆದು ಮೀನುಗಾರಿಕೆಗೆ ತೆರಳುತ್ತಾರೆ. ಅರಬ್ಬಿ ಸಮುದ್ರ, ನದಿಯಲ್ಲಿ ಈ ಪಾತಿ ದೋಣಿಗಳು ಅಲ್ಲಲ್ಲಿ ಮೀನುಗಾರಿಕೆಗೆ ಸಂಚರಿಸುತ್ತಿರುವುದು ಕಂಡು ಬರುತ್ತಿದೆ.
ಸಮುದ್ರದಲ್ಲಿಈ ದೋಣಿಗಳು ಸಂಚರಿಸುವಾಗ ಮೀನುಗಾರನ ಸಾಹಸದ ಅರಿವಾಗುತ್ತದೆ. ಪ್ರಕೋಪಗಳು ಆಕಸ್ಮಿಕವಾಗಿ ಬಂದೆರಗುವ ಆತಂಕದ ನಡುವೆಯೂ ಮೀನುಗಾರ ದಿಟ್ಟತನ ತೋರುವುದು ಸಂಸಾರದ ಜವಾಬ್ದಾರಿಯ ಅರಿವು ಮೂಡಿಸುತ್ತದೆ. ಇಷ್ಟೊಂದು ಸಾಹಸಪಟ್ಟು ಮೀನುಗಾರಿಕೆ ನಡೆಸುವ ಮೀನುಗಾರರಿಗೆ ಇಂದು ನಿರೀಕ್ಷಿತ ಪ್ರಮಾಣದಲ್ಲಿ ಮೀನು ಸಿಗುವುದು ಕಷ್ಟ.ಆದರೂ ಮೀನುಗಾರ ಮೀನುಗಾರಿಕೆಯಿಂದಲೇ ಸಂಸಾರ ನಡೆಸಿಕೊಂಡು ಬಂದಿರುವುದು ಸಂತಸದ ಸಂಗತಿ. ಈ ದೋಣಿಗಳ ಮೂಲಕ ಮೀನುಗಾರಿಕೆ ನಡೆಸುವ ಮಳೆಗಾಲದಲ್ಲಿ ಅನೇಕ ಬಾರಿ ಅವಘಡ ಸಂಭವಿಸಿ ಸಾವು, ನೋವು ಆಗಿದ್ದುಂಟು. ಆದರೂ ಕುಟುಂಬದ ಜವಾಬ್ದಾರಿ ಮೀನುಗಾರರನ್ನು ಕೈಚೆಲ್ಲಿ ಕುಳಿತುಕೊಳ್ಳಲು ಬಿಡುತ್ತಿಲ್ಲ.
ಮೀನುಗಾರರು ತಮ್ಮ ಸುರಕ್ಷ ತೆಯ ಬಗ್ಗೆ ಗಮನವಿಡಬೇಕು ಈ ಅವಧಿಯಲ್ಲಿ ಮೀನಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಹೆಚ್ಚು ಮೀನು ಹಿಡಿಯಲು ಹಂಬಲಿಸಿ ಕೆಲ ಮೀನುಗಾರರು ತಮ್ಮ ಪ್ರಾಣವನ್ನು ಅಪಾಯಕ್ಕೆ ಒಡ್ಡುವ ಸಾಧ್ಯತೆಗಳಿರುತ್ತದೆ. ಆದ್ದರಿಂದ ಮೀನುಗಾರಿಕೆ ಮಾಡುವ ಪಾತಿ ದೋಣಿಗಳು ಕಡ್ಡಾಯವಾಗಿ ಪರ್ಯಾಪ್ತ ಜೀವರಕ್ಷ ಣಾ ಸಾಧನಗಳಾದ ಲೈಫ್ಜಾಕೆಟ್ ಮತ್ತು ಲೈಫ್ಬಾಯ್ಗಳನ್ನು ಹೊಂದಿರಬೇಕು ಮತ್ತು ಮೀನುಗಾರರು ಅವುಗಳನ್ನು ಬಳಸಿ ಮೀನುಗಾರಿಕೆ ಮಾಡುವುದು ಅನಿವಾರ್ಯವಾಗಿದೆ
ಧಾವಂತದ ಮೀನುಗಾರಿಕೆಯ ಫಲವಾಗಿ ಸಾಂಪ್ರದಾಯಿಕ ಬಲೆಯ ವೃತ್ತಿ ಮಾಸಿ ಹೋಗುತ್ತಿದೆ. ಚಿಕ್ಕದಾದ ಪಾತಿ ದೋಣಿ ಒಬ್ಬನೇ ನಡೆಸಿಕೊಂಡು ಹೋಗುತ್ತಾನೆ.
ಚಿಕ್ಕದಾದ ಬಲೆಯ ಮೂಲಕ ಹಾಗೂ ಗಾಳ ಹಾಕಿ ಮೀನು ಹಿಡಿಯಲಾಗುತ್ತದೆ. ಆದರೆ ದೊಡ್ಡ ಸಾಂಪ್ರದಾಯಿಕ ದೋಣಿಗಳಿಗೆ ಸರಕಾರ ಸೀಮೆ ಎಣ್ಣೆಗೆ ಸಬ್ಸಿಡಿ ಹಾಗೂ ಉಳಿದ ಸವಲತ್ತು ನೀಡುತ್ತಿದೆ. ಆದರೆ ಪಾತಿ ದೋಣಿಗೆ ಯಾವ ಸೌಲಭ್ಯವೂ ನೀಡುತ್ತಿಲ್ಲ. ಮೀನುಗಾರಿಕೆಗೆ ಹಗಲು ಇರುಳೆನ್ನುವ ಕಾಲವೇ ಕಿರಿದಾಯ್ತು. ಇದರಿಂದ ಬಸವಳಿದವರು ಸಾಂಪ್ರದಾಯಿಕ ಮೀನುಗಾರರು, ಪಾತಿ ದೋಣಿ ದಡದಲ್ಲೇ ಉಳಿಯಿತು.
ಸರಕಾರಿ ವ್ಯವಸ್ಥೆಯಲ್ಲಿ ಹಲವು ಹಂತದಲ್ಲಿ ಕೋಟಿಗಟ್ಟಲೆ ಹಣ ಸೊರಗಿ ಹೋಗುತ್ತಿದೆ. ಆದರೆ ತನ್ನ ಕುಟುಂಬ ನಿರ್ವಹಣೆಗೆ ಬದುಕಿನ ಹಂಗು ತೊರೆದು ಮೀನುಗಾರಿಕೆಗೆ ತೆರಳುವ ಮೀನುಗಾರನ ಸಮಸ್ಯೆಗಳನ್ನು ಸರಕಾರ ಗಮನಿಸಿ ಸೌಕರ್ಯ ಒದಗಿಸಬೇಕಾಗಿದೆ.
ಸುಧಾಕರ್ ಖಾರ್ವಿ
www.kharvionline.com