ನಿತ್ಯ ಬದುಕಿನ ತುತ್ತು ಕೂಳಿಗಾಗಿ ಸಮುದ್ರದಲ್ಲಿ ಜೀವವನ್ನು ಒತ್ತೆ ಹಿಡಿದು ದುಡಿಯುವ ಮೀನುಗಾರರ ಬದುಕು ಇಂದು ತೀವ್ರ ಸಂಕಷ್ಟದಲ್ಲಿದೆ ಧರ್ಮದ ಹೆಸರಿನಲ್ಲಿ ಮೀನುಗಾರರನ್ನು ಪ್ರಚೋದಿಸಿ ರಾಜಕೀಯಕ್ಕಾಗಿ ಬಳಸಿಕೊಂಡ ರಾಜಕಾರಣಿಗಳು ಬಂಡವಾಳಶಾಹಿಗಳ ಅಪವಿತ್ರ ಮೈತ್ರಿ ಗಾಗಿ ಕಾಸರಗೋಡು ವಾಣಿಜ್ಯ ಬಂದರು ಕಾಮಗಾರಿಗೆ ಬೆಂಬಲ ನೀಡುತ್ತಿದ್ದಾರೆ. ಬಾಂಗ್ಲಾ ದೇಶಿಯರನ್ನು ದೇಶದಿಂದ ಓಡಿಸಬೇಡಿ ಎಂದು ಬೊಬ್ಬೆ ಹೊಡೆಯುವ ರಾಜಕಾರಣಿಗಳಿಗೆ ಮೀನುಗಾರರನ್ನು ಒಕ್ಕಲೆಬ್ಬಿಸುವ ಅಮಾನುಷ ದೃಶ್ಯ ಕಣ್ಣಿಗೆ ಬೀಳುವುದಿಲ್ಲ ಮೀನುಗಾರರೆಂದರೆ ನಮ್ಮ ರಾಜಕಾರಣಿಗಳಿಗೆ ಅಷ್ಟು ಸಸಾರ.
ಮಂಗಳೂರಿನಿಂದ ದೂರದ ಕಾರವಾರದ ತನಕ ಸಮುದ್ರ ತೀರವನ್ನು ಅತಿಕ್ರಮಿಸಿಕೊಂಡು ಸಾವಿರಾರು ರೆಸಾರ್ಟ್ ಗಳು ದೊಡ್ಡ ದೊಡ್ಡ ಅಕ್ರಮ ಕಟ್ಟಡಗಳು ತಲೆಯೆತ್ತಿ ನಿಂತಿದೆ ಇವುಗಳನ್ನು ತೆರವುಗೊಳಿಸುವ ಶಕ್ತಿ ನಮ್ಮ ಸರಕಾರಕ್ಕೆ ಇಲ್ಲ ಸರ್ಕಾರದ ಗುರಿ ಏನಿದ್ದರೂ ಅಮಾಯಕ ಬಡ ಮೀನುಗಾರರ ಮೇಲೆ, ಬಡ ಮೀನುಗಾರರು ತಿರುಗಿ ಬೀಳುವುದಿಲ್ಲ ಎಂದು ಗೊತ್ತಿರುವುದರಿಂದಲೇ ನಿರಂತರವಾಗಿ ಮೀನುಗಾರರನ್ನು ದಮನಿಸಲಾಗುತ್ತಿದೆ. 2014 ರಲ್ಲಿ ಕಾರವಾರದಲ್ಲಿ 189 ಮೀನುಗಾರರ ಮನೆಯನ್ನು ಕೆಡವಿ ಹಾಕಿ ಅವರ ಕುಟುಂಬವನ್ನು ಬೀದಿ ಪಾಲು ಮಾಡಲಾಯಿತು ಇದು 2015, 2016, 2018, 2019 ಹೀಗೆ ನಿರಂತರವಾಗಿ ಮುಂದುವರಿಯಿತು ಬಡ ಮೀನುಗಾರರಿಗೆ ನ್ಯಾಯಲಯದಲ್ಲೂ ನ್ಯಾಯ ಸಿಗಲೇ ಇಲ್ಲ ಸೋಲುಗಳು ಸಾವುಗಳು ಮೀನುಗಾರರ ಬದುಕಿನ ನಿತ್ಯ ಸಂಗಾತಿಗಳಾಗಿವೆ.
ಕಾಲ ಗತಿಸಿದಂತೆ ಚುನಾವಣೆ ಹತ್ತಿರ ಬಂದಾಗ ಎಲ್ಲವನ್ನೂ ಮರೆಯುತ್ತೇವೆ. ಮೀನುಗಾರರ ಕೇರಿಗೆ ರಾಜಕಾರಣಿಗಳು ಮೀನು ವಾಸನೆ ಸಹಿಸುತ್ತಾ ಕೆಸರು ಗಿಸರು ಮೆಟ್ಟುತ್ತಾ ಮತ ಕೇಳಲು ಬರುತ್ತಾರೆ ನಾವು ಮರುಳಾಗಿ ಮತ ಕೊಟ್ಟು ಅವರನ್ನು ಗೆಲ್ಲಿಸಿ ಅವರ ಫಲ್ಲಕ್ಕಿ ಹೊರುತ್ತೇವೆ ಇದೇ ನಮ್ಮ ಹಣೆಬರಹ ಗೆದ್ದ ರಾಜಕಾರಣಿಗಳು ನಾವು ಸತ್ತರೂ ತಿರುಗಿ ನೋಡುವುದಿಲ್ಲ ಹೊನ್ನಾವರ ಕಾಸರಗೋಡಿನಲ್ಲಿ ನಡೆಯುತ್ತಿರುವುದು ಇದೇ ಹೊಲಸು ರಾಜಕೀಯ.
ಮೀನುಗಾರರನ್ನು ಬಲವಂತವಾಗಿ ಒಕ್ಕಲೆಬ್ಬಿಸುವ ಕುಹಕ ಹುನ್ನಾರಗಳಿಗೆ ಶಕ್ತಿ ಬಂದಿರುವುದು ನಮ್ಮ ದೌರ್ಬಲ್ಯ ಗಳಿಂದ ನಮ್ಮ ರಾಜ್ಯದಲ್ಲಿ ಕಡಲತಡಿಯ ಮತ್ತು ಒಳನಾಡಿನ ಮೀನುಗಾರಿಕೆ ಯನ್ನು ಕುಲಕಸಬು ಮಾಡಿಕೊಂಡಿರುವ ಸುಮಾರು 36 ಮೀನುಗಾರರ ಪಂಗಡಗಳಿವೆ ಸಂಕಷ್ಟದ ಈ ಸಮಯದಲ್ಲಿ ಎಲ್ಲರೂ ಒಂದಾಗಿ ಹೋರಾಟ ಮಾಡಬೇಕಾಗಿದೆ ಇಂದು ಕಾಸರಗೋಡು ಮೀನುಗಾರ ಬಂಧುಗಳಿಗೆ ಬಂದ ಪರಿಸ್ಥಿತಿ ನಾಳೆ ನಮಗೂ ಬರಬಹುದು ಬಡ ಮೀನುಗಾರರ ಮನೆಮಠ ಗಿಡಮರಗಳನ್ನು ನಾಶಗೊಳಿಸಿ ಸರ್ವನಾಶಕ್ಕೆ ಹವಣಿಸುತ್ತಿರುವ ಹೃದಯ ಹೀನ ಅಧಿಕಾರಿಗಳ ಮತ್ತು ರಾಜಕಾರಣಿಗಳ ವಿರುದ್ಧ ಪ್ರಬಲ ಹೋರಾಟ ರೂಪುಗೊಳ್ಳಬೇಕಾಗಿದೆ.
ಉಮಾಕಾಂತ ಖಾರ್ವಿ ಕುಂದಾಪುರ