ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ಪ್ರತಿಭೆ ಇರುತ್ತದೆ. ಸೂಕ್ತ ಅವಕಾಶ ಮತ್ತು ಮಾರ್ಗದರ್ಶನ ಸಿಕ್ಕರೆ ಅರಳುತ್ತದೆ; ಇಲ್ಲದಿದ್ದರೆ ಮುದುಡಿ ಹೋಗುವುದು. ಕೆಲವರಿಗೆ ಅವಕಾಶ ಹುಡುಕಿಕೊಂಡು ಬಂದರೆ, ಇನ್ನು ಕೆಲವರು ಅವಕಾಶವನ್ನು ಹುಡುಕಿಕೊಂಡು ಹೋಗುತ್ತಾರೆ. ಯಕ್ಷಗಾನವೆಂಬ ಗಂಡುಕಲೆಯನ್ನು ಕಲಿಯಬೇಕೆಂಬ ತುಡಿತದಲ್ಲಿ, ಅವಕಾಶಗಳ ಬೆನ್ಹತ್ತಿ, ಯಕ್ಷನಾಟ್ಯವನ್ನು, ಮಾತುಗಾರಿಕೆಯನ್ನು ಕರಗತ ಮಾಡಿಕೊಂಡ ಪ್ರತಿಭೆಯೆಂದರೆ ನಾಗರಾಜ ಖಾರ್ವಿ.
ಸಾಮಾನ್ಯವಾಗಿ ಕರಾವಳಿಯ ಮಕ್ಕಳಿಗೆ ಸಮುದ್ರ, ಮೀನುಗಾರಿಕೆ, ಮೀನುಗಳ ಬಗ್ಗೆ ಆಕರ್ಷಣೆಯಿರುತ್ತದೆ. ಆದರೆ ಇವರನ್ನು ಕೈ ಬೀಸಿ ಕರೆದಿದ್ದು ಯಕ್ಷಗಾನ. ಬಾಲ್ಯದಲ್ಲಿ ಇದ್ದಿಲಿನ ಬಣ್ಣವನ್ನು ಮುಖಕ್ಕೆ ಬಳಿದುಕೊಂಡು ಸ್ನೇಹಿತರ ಜೊತೆಗೂಡಿ ಮಕ್ಕಳಾಟಿಕೆಯ ಯಕ್ಷಗಾನ ಆಡುತ್ತಿದ್ದರು. ಹಿಂದಿನ ದಿನ ಕಂಡ ಯಕ್ಷಗಾನದ ರಕ್ಕಸನ ಪಾತ್ರ, ದೇವಿಯ ಪಾತ್ರದಂತೆ ಅಭಿನಯಿಸುತ್ತಿದ್ದರು. ಮುಂದೊಂದು ದಿನ ಇದೇ ಮಕ್ಕಳಾಟಿಕೆಯ ಆಟ ಜೀವನದ ದಾರಿಯಾವುದೆಂದು ಸ್ವತಃ ಅವರಿಗೇ ತಿಳಿದಿರಲಿಲ್ಲ.
ನಾಗರಾಜ ಖಾರ್ವಿಯವರಿಗೆ ಯಕ್ಷಗಾನದ ಹುಚ್ಚು ಎಷ್ಟಿತ್ತೆಂದರೆ ಒಂಬತ್ತನೆಯ ತರಗತಿ ಮುಗಿದ ತಕ್ಷಣ ಸಿಗಂದೂರು ಮೇಳಕ್ಕೆ ಸೇರಿಕೊಂಡರು. ಯಾವುದೇ ತರಬೇತಿಯಿಲ್ಲದ ಕಾರಣ ಬಾಲಗೋಪಾಲ ವೇಷ ಹಚ್ಚಿ ರಂಗಕ್ಕೆ ಕಳುಹಿಸಿದರು. ಪಕ್ಕದಲ್ಲಿ ಕುಣಿಯುವವನ ಕೆಲವು ಸರಳ ಹೆಜ್ಜೆಗಳನ್ನು ನೋಡಿ ಹೆಜ್ಜೆ ಹಾಕಲು ಪ್ರಾರಂಭಿಸಿದರು. ನಂತರ ಮಂದಾರ್ತಿಯ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದಲ್ಲಿ ರಮೇಶ್ ಗಾಣಿಗರಿಂದ ನಾಟ್ಯವನ್ನು ಅಭ್ಯಾಸ ಮಾಡಿದರು. ಆರು ತಿಂಗಳ ತರಬೇತಿಯ ನಂತರ ಪುನಃ ಸಿಗಂದೂರು ಮೇಳವನ್ನು ಸೇರಿಕೊಂಡು ಸುಮಾರು ಎರಡುವರೆ ವರ್ಷಗಳ ಕಾಲ ಬಡಗಿನ ಬಣ್ಣಗಾರಿಕೆ, ವೇಷಭೂಷಣ, ಕುಣಿತವನ್ನು ಕಲಿತರು.
“ಇರುವುದೆಲ್ಲವ ಬಿಟ್ಟು ಇರದಿರುವುದರೆಡೆಗೆ ತುಡಿವುದೇ ಜೀವನ” ಎಂಬ ಮೊಗೇರಿ ಗೋಪಾಲಕೃಷ್ಣ ಅಡಿಗರ ಮಾತು ಇಂದಿಗೂ ಪ್ರಸ್ತುತ. ಬಡಗು ತಿಟ್ಟಿನಲ್ಲಿ ವೇಷಹಾಕಿ ಕುಣಿಯುತ್ತಲೇ ತೆಂಕಿನತ್ತ ಮನಸ್ಸು ಆಕರ್ಷಿಸತೊಡಗಿತು. ತೆಂಕಿನ ಅಬ್ಬರದ ಕುಣಿತ, ಮಾತಿನ ಶೈಲಿ, ಝಗಮಗಿಸುವ ವೇಷಭೂಷಣದಲ್ಲಿ ತನಗೂ ಪಾಲೊಂದಿರಲಿ ಎಂದು ಆಸೆ ಪಡುತ್ತಿದ್ದರು.
ಕೇರಳ ಕಾಸರಗೋಡಿನ ಪೆರ್ಲದಲ್ಲಿರುವ, ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದಲ್ಲಿ 5 ತಿಂಗಳುಗಳ ಕಾಲ ತರಬೇತಿ ಪಡೆದರು. ಪಡ್ರೆ ಸಬ್ಬಣ್ಣಕೋಡಿ ರಾಮಭಟ್ಟರಿಂದ ತೆಂಕಿನ ನಾಟ್ಯವನ್ನು ಕಲಿತರು. ನಂತರ ಒಂದು ವರ್ಷ ಹೊಸನಗರ ಮೇಳದಲ್ಲಿ ಸೇವೆ ಸಲ್ಲಿಸಿ, ಕಳೆದ ಆರು ವರ್ಷಗಳಿಂದ ಧರ್ಮಸ್ಥಳ ಮೇಳದಲ್ಲಿ ವೇಷಧಾರಿಯಾಗಿದ್ದಾರೆ. ಅಭಿಮನ್ಯು ಕಾಳಗದ ಕರ್ಣ, ಸಾರಥಿ, ದುಶ್ಯಾಸನ, ಚಂದ್ರಾವಳಿ ವಿಲಾಸದ ರಾಧೆ, ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯ ಕಾಳರ್ಕಾಯಿ, ಕುಕ್ಕಿತ್ತಾಯ, ಭಸ್ಮಾಸುರ ಮೋಹಿನಿಯ ಪಾರ್ವತಿ, ದೇವಿ ನೇತ್ರಾವತಿ, ಆದಿಮಾಯೆ, ಮಾಲಿನಿ, ಧೂಮ್ರಾಕ್ಷ ಮುಂತಾದ ಪಾತ್ರಗಳಿಗೆ ಜೀವ ತುಂಬುತ್ತಾರೆ.
ಕೊಂಕಣಿ ಖಾರ್ವಿ ಸಮಾಜದ ಪ್ರಥಮ ಮತ್ತು ಏಕೈಕ ವೃತ್ತಿನಿರತ ಯಕ್ಷಗಾನ ಕಲಾವಿದರೆಂದರೆ ನಾಗರಾಜ ಖಾರ್ವಿಯವರು. ಬಾಲ್ಯದಲ್ಲಿ ಕಂಡ ಕನಸನ್ನು ಇಂದು ಸಾಕಾರಗೊಳಿಸಿಕೊಂಡಿದ್ದಾರೆ. ಇಂದು ಯಕ್ಷಗಾನವೇ ಅವರ ಜೀವನವಾಗಿದೆ. ಕುಲಕಸುಬನ್ನು ಬಿಟ್ಟು, ವಿದ್ಯಾಭ್ಯಾಸವನ್ನು ಅರ್ಧದಲ್ಲಿ ಮೊಟಕುಗೊಳಿಸಿ, ಮನೆಯವರ ಬುದ್ಧಿ ಮಾತಿಗೆ ಕಿವಿಗೊಡದೆ ಯಕ್ಷಗಾನ ಕಲಿಯುತ್ತೇನೆಂದು ಮನೆಯಿಂದ ಹೊರಟವರು, ಇಂದು ಯಕ್ಷಮಾತೆಯ ಆರಾಧಕರಾಗಿದ್ದಾರೆ. ಹುಟ್ಟೂರಾದ ಕಂಚುಗೋಡು, ತ್ರಾಸಿಯ ಹೆಸರನ್ನು ಕರಾವಳಿಯ ಉದ್ದಕ್ಕೂ ಪಸರಿಸುವಲ್ಲಿ ನಿರತರಾಗಿದ್ದಾರೆ.
ಆರು ತಿಂಗಳ ಮೇಳದ ತಿರುಗಾಟ ಮುಗಿದ ಕೂಡಲೇ ಯಕ್ಷಗಾನ ಕಲಾವಿದರ ಜೀವನ ನಿರ್ವಹಣೆಯೂ ಅಷ್ಟಕಷ್ಟೆ. ದೊಡ್ಡ ದೊಡ್ಡ ಕಲಾವಿದರು ವಿಡಿಯೋ ರೆಕಾರ್ಡಿಂಗ್, ತಾಳಮದ್ದಳೆಗಳಲ್ಲಿ, ಮೇಳವಲ್ಲದ ಕೂಡಾಟಗಳಲ್ಲಿ, ಅತಿಥಿ ಕಲಾವಿದರಾಗಿ ತೊಡಗಿಕೊಂಡಿರುವಾಗ, ಸಣ್ಣ ಕಲಾವಿದರು ಚಿಕ್ಕ ಮೇಳದ ಮೂಲಕ ಮನೆಮನೆ ಯಕ್ಷಗಾನದತ್ತ ಮುಖ ಮಾಡುತ್ತಾರೆ. ಅಂತೆಯೇ ನಾಗರಾಜ ಖಾರ್ವಿ ಮತ್ತು ಶರತ್ ತೀರ್ಥಹಳ್ಳಿಯವರು ಸೇರಿ ಶ್ರೀ ಮಹಾಗಣಪತಿ ಚಿಕ್ಕ ಮೇಳ, ಕಂಚುಗೋಡು ಎಂಬ ಹೆಸರಿನಲ್ಲಿ ಮನೆ ಮನೆಯ ಯಕ್ಷಗಾನದಲ್ಲಿ ತೊಡಗಿಕೊಳ್ಳುತ್ತಾರೆ. ಈಗಂತು ಯಕ್ಷಗಾನ ಇಲ್ಲದೆ ಕಲಾವಿದರೆಲ್ಲರೂ ದಿಕ್ಕೆಟ್ಟು ಕೂತಿದ್ದಾರೆ. ಕಲಾರಾಧನೆ, ಸಾಹಿತ್ಯದಲ್ಲಿ ತೊಡಗಿಕೊಂಡವರಿಗೆ ಜೀವನ ನಿರ್ವಾಹಣೆ ಕಷ್ಟವೆಂಬುದು ಪುನಃ ಪುನಃ ಸಾಬೀತಾಗುತ್ತಲೇ ಇದೆ. ಈ ಕೊರೊನಾ ಕಷ್ಟ ಕಾಲ ಇದಕ್ಕೆ ಮತ್ತಷ್ಟು ಪುಷ್ಟಿ ನೀಡಿತು.
ನಾನು ಗಮನಿಸಿದಂತೆ ನಾಗರಾಜ ಖಾರ್ವಿಯವರಲ್ಲಿ ಅದ್ಭುತ ನಾಟ್ಯಗಾರಿಕೆ ಇದೆ. ವಿಭಿನ್ನ ಮತ್ತು ಶಕ್ತಿಯುತವಾದ ಇವರ ದಿಗಣ(ಗಿರ್ಕಿ)ವನ್ನು ನೋಡುವುದೇ ಚಂದ. ಇತ್ತೀಚಿಗೆ ಅರ್ಥಗಾರಿಕೆಯೂ ಚೆನ್ನಾಗಿದೆ. ಹತ್ತು ವರ್ಷಗಳ ಇವರ ಯಕ್ಷಯಾನದಲ್ಲಿ ಸಾಕಷ್ಟು ಏಳುಬೀಳು ಕಂಡಿದ್ದಾರೆ. ದಿನೇದಿನೇ ಪರಿಪಕ್ವತೆಯನ್ನು ಗಳಿಸುತ್ತಿದ್ದಾರೆ. ಎಲ್ಲಾ ಕಷ್ಟ ನಷ್ಟಗಳ ನಡುವೆಯೂ ಇಷ್ಟ ಪಟ್ಟು ಸಿದ್ಧಿಸಿಕೊಂಡ ಯಕ್ಷಗಾನ ಕಲೆಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ನಮ್ಮ ಪ್ರೋತ್ಸಾಹ ಅವರಿಗಿದ್ದರೆ ಖಂಡಿತ ಅವರೋರ್ವ ಉತ್ತಮ ಕಲಾವಿದರಾಗುವುದರಲ್ಲಿ ಸಂದೇಹವಿಲ್ಲ.
ನಾಖಾರ್ವಿ ಕಂಚುಗೋಡು
ಶ್ರೀ ನಾಗರಾಜ್ ಖಾರ್ವಿಯವರು ವೃತ್ತಿನಿರತ ಯಕ್ಷಗಾನ ಕಲಾವಿದರೆಂದು ತಿಳಿದು ಬಹಳ ಸಂತೋಷವಾಯಿತು , ಅವರಿಗೆ ಕಲಾ ಸರಸ್ವತಿಯ ಪೂರ್ಣ ಅನುಗ್ರಹವಾಗಲಿ.
ಖಾರ್ವಿ ಸಮಾಜದಲ್ಲಿ ವೃತ್ತಿ ನಿರತ ಯಕ್ಷಗಾನ ಕಲಾವಿದರಿದ್ದಾರೆ ಎಂದು ತಿಳಿದು ತುಂಬಾ ಸಂತೋಷವಾಯಿತು. ಶ್ರೀಯುತ ನಾಗರಾಜ ಖಾರ್ವಿ ಯವರ ಮುಂದಿನ ಜೀವನ ಉಜ್ವಲವಾಗಲೆಂದು ಶುಭ ಹಾರೈಕೆ.