ಕಡಲಾಮೆ ನ್ಯಾಯ ಕೇಳುತ್ತಿದೆ

ಜನ ವಿರೋಧಿ ಹೊನ್ನಾವರ ವಾಣಿಜ್ಯ ಬಂದರು ನಿರ್ಮಾಣ ಕಾಮಗಾರಿ ವಿವಾದ ಮತ್ತೊಂದು ತಿರುವು ಪಡೆದುಕೊಂಡಿದ್ದು ಹೊನ್ನಾವರ ತಾಲೂಕು ಹಸಿಮೀನು ವ್ಯಾಪಾರಸ್ಥರು ಸಲ್ಲಿಸಿದ ಅರ್ಜಿಯ ಮನವಿಯನ್ವಯ ರಾಜ್ಯ ಹೈಕೋರ್ಟ್ ಮಹತ್ವದ ಆದೇಶ ನೀಡಿದ್ದು ಕಾಸರಕೋಡ ಟೊಂಕ ಕಡಲತೀರದಲ್ಲಿ ಬಂದರು ಅಭಿವೃದ್ಧಿ ಕಾಮಗಾರಿಯಿಂದ ಆಮೆಗಳ ಗೂಡು ಕಟ್ಟುವಿಕೆಗೆ ತೊಂದರೆ ಆಗಲಿದೆಯೇ ಎಂಬುದರ ಬಗ್ಗೆ ಅಧ್ಯಯನ ನಡೆಸಲು ಚಿನ್ನೈನ ರಾಷ್ಟ್ರೀಯ ಸುಸ್ಥಿರ ಕರಾವಳಿ ನಿರ್ವಹಣಾ ಕೇಂದ್ರ ವನ್ನು ನೇಮಕ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದೆ.

ಅದೇ ಸಮಯದಲ್ಲಿ ಬಂದರು ಅಭಿವೃದ್ಧಿ ಕಾಮಗಾರಿ ತಡೆ ಆದೇಶವನ್ನು ಯಥಾಸ್ಥಿತಿ ಯಲ್ಲಿಡುವ ಬಗ್ಗೆ ಸ್ಪಷ್ಟವಾಗಿ ಸೂಚಿಸಿದೆ ಮೀನುಗಾರರು ತಮ್ಮ ಮನೆ ಬದುಕು ಸಂರಕ್ಷಣೆ ಜೊತೆಗೆ ಕಾಸರಕೋಡ ಪ್ರದೇಶದ ಕಡಲಾಮೆಗಳನ್ನು ಸಂರಕ್ಷಣೆ ಮಾಡಲು ಟೊಂಕ ಕಟ್ಟಿ ನಿಂತಿದ್ದು ಬಂದರು ಕಾಮಗಾರಿಯಿಂದ ಸರ್ವನಾಶದ ಭೀತಿಯಲ್ಲಿರುವ ಕಡಲಾಮೆಗಳು ಕೂಡಾ ತಮ್ಮ ರಕ್ಷಣೆಗೆ ನ್ಯಾಯಾಲಯದ ಕದ ತಟ್ಟುವಂತಹ ವಿಲಕ್ಷಣ ಸಂದರ್ಭ ಒದಗಿ ಬಂದಿರುವುದು ದುರ್ದೈವದ ಸಂಗತಿಯಾಗಿದೆ.

ಕೇಂದ್ರ ಸರ್ಕಾರದ ಪರಿಸರ ಮತ್ತು ಅರಣ್ಯ ಮಂತ್ರಾಲಯದ ಅಡಿಯಲ್ಲಿ ಬರುವ ಚಿನ್ನೈನ ರಾಷ್ಟ್ರೀಯ ಸುಸ್ಥಿರ ಕರಾವಳಿ ನಿರ್ವಹಣಾ ಕೇಂದ್ರಕ್ಕೆ ಈ ಹಿಂದೆ ಕರ್ನಾಟಕ ರಾಜ್ಯದ CRZ ನಕ್ಷೆ ಸಿದ್ಧ ಮಾಡುವ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ವಹಿಸಿತ್ತು 2011 ರಲ್ಲಿ ತಿದ್ದುಪಡಿ ಮಾಡಲಾದ CRZ ಕಾಯ್ದೆಗೆ ಸಂಬಂಧಿಸಿದಂತೆ ಏಳು ವರ್ಷಗಳ ನಂತರ 2018 ರಲ್ಲಿ ನಕ್ಷೆ ಅನುಮೋದನೆಯಾಯಿತು ಹೊಸ ನಕ್ಷೆ ಬಂದ ಒಂದೇ ವರ್ಷಕ್ಕೆ ಕಡಲ ತೀರದಲ್ಲಿ ಪ್ರವಾಸೋದ್ಯಮಕ್ಕೆ ಅನುಕೂಲವಾಗಿಲ್ಲ ಎಂಬ ಬಂಡವಾಳ ಶಾಹಿಗಳ ಒತ್ತಡದಿಂದ ಮತ್ತೆ ತಿದ್ದುಪಡಿ ಮಾಡಲಾಯಿತು ಈ ಸಂದರ್ಭದಲ್ಲಿ ಆಡಳಿತ ವ್ಯವಸ್ಥೆ ತನಗೆ ಬೇಕಾದ ರೀತಿಯಲ್ಲಿ ಕಾಯ್ದೆಯನ್ನು ಬಳಸಿಕೊಳ್ಳುತ್ತದೆ ಎಂಬ ಆರೋಪಗಳು ಪರಿಸರ ಹೋರಾಟಗಾರರಿಂದ ಕೇಳಿ ಬಂತು ಈ ಆರೋಪ ಸಮರ್ಪಕವಾಗಿದ್ದು, ಧನಿಕ ಬಂಡವಾಳ ಶಾಹಿಗಳ ಅನುಕೂಲಕ್ಕಾಗಿ ಆಳುವ ಪ್ರಭುಗಳು ಮೀನುಗಾರರ ಹಿತರಕ್ಷಣೆಯನ್ನು ಬಲಿ ಕೊಟ್ಟು ಸಮುದ್ರ ತೀರಗಳನ್ನು ಮಾರಿಕೊಳ್ಳುತ್ತದೆ ಎಂಬುದು ಈಗ ದೃಡೀಕೃತಗೊಂಡಿದೆ.

ಹೊನ್ನಾವರ ಕಾಸರಕೋಡ ಕಡಲತೀರ ಅನಾದಿಕಾಲದಿಂದಲೂ ಕಡಲಾಮೆಗಳ ಗೂಡು ಕಟ್ಟುವಿಕೆಗೆ ಪ್ರಶಸ್ತ್ಯ ಸ್ಥಳವಾಗಿದೆ ಅಪರೂಪದ ಆಲೀವ್ ರಿಡ್ಲೆ ಪ್ರಭೇಧದ ಕಡಲಾಮೆಗಳು ಇಲ್ಲಿ ಫೆಬ್ರವರಿ ತಿಂಗಳಿನಿಂದ ಮೊಟ್ಟೆ ಇಡಲು ಸಾವಿರಾರು ಮೈಲು ದೂರದ ಕಡಲಿನಿಂದ ಬರುತ್ತವೆ ಜೂನ್ ತಿಂಗಳಲ್ಲಿ ಬಹುತೇಕ ಮೊಟ್ಟೆಗಳು ಮರಿಯಾಗಿ ಸಮುದ್ರ ಸೇರುತ್ತವೆ ಈ ಪ್ರಕ್ರಿಯೆ ಹಲವಾರು ವರ್ಷ ಗಳಿಂದಲೂ ನಡೆದುಕೊಂಡು ಬಂದಿದ್ದು, ಸ್ಥಳೀಯ ಮೀನುಗಾರರು ಅಪಾರ ಶ್ರಮ ವಹಿಸಿ ಕಡಲತಡಿಯ ಮರಳಿನಲ್ಲಿ ಕಡಲಾಮೆಗಳು ಹೊಂಡ ತೋಡಿ ಮೊಟ್ಟೆ ಇಟ್ಟ ಮೇಲೆ ಹಗಲಿರುಳು ಕಾವಲು ನಿಂತು ಅರಣ್ಯ ಇಲಾಖೆಯ ಸಹಯೋಗದಿಂದ ಕಡಲಾಮೆ ಮೊಟ್ಟೆಗಳು ಮರಿಗಳಾಗಿ ಕಡಲು ಸೇರುವ ತನಕ ಮುತುವರ್ಜಿ ವಹಿಸಿಕೊಳ್ಳುತ್ತಾರೆ.

ಪ್ರಸ್ತುತ ಬಂದರು ನಿರ್ಮಾಣ ಪ್ರಕ್ರಿಯೆಯಿಂದಾಗಿ ಕಡಲಾಮೆಗಳ ನೈಸರ್ಗಿಕ ಆವಾಸಸ್ಥಾನಕ್ಕೆ ಧಕ್ಕೆ ಉಂಟಾಗಿದ್ದು ಕಾಸರಕೋಡ ಕಡಲತೀರದಲ್ಲಿ ಕಂಡು ಬರುವ ವಿಶಿಷ್ಟ ಪ್ರಭೇಧದ ಕಡಲಾಮೆಗಳು ಸರ್ವನಾಶದ ಅಂಚಿನಲ್ಲಿದೆ ಬಂಡವಾಳ ಶಾಹಿ ಧೂರ್ತರ ಧೂರ್ತತನಕ್ಕೆ ಕೇವಲ ಮನುಷ್ಯರು ಮಾತ್ರವಲ್ಲ ಸಾಗರದ ಜೀವವೈವಿಧ್ಯಗಳು ನಾಶವಾಗುತ್ತಿದೆ ಕಾಸರಕೋಡ ಟೊಂಕ ಕಡಲತೀರ ಕಡಲಾಮೆಗಳ ನೈಸರ್ಗಿಕ ಆವಾಸಸ್ಥಾನವಾಗಿದ್ದು, ಕಡಲಾಮೆಗಳ ಸಂರಕ್ಷಣೆ ಜೊತೆಗೆ ಪೂರಕ ವಾತಾವರಣ ನಿರ್ಮಿಸಿ ಈ ಪ್ರದೇಶವನ್ನು ಕಡಲಾಮೆ ರಕ್ಷಣಾ ವಲಯವನ್ನಾಗಿ ಘೋಷಣೆ ಮಾಡಬೇಕು ಎಂಬುದಾಗಿ ಪರಿಸರ ವಿಜ್ಞಾನಿ ಕಡಲ ಜೀವಶಾಸ್ತ್ರಜ್ನ ಡಾ. ಪ್ರಕಾಶ ಮೇಸ್ತ ನಿರಂತರವಾಗಿ ಸರ್ಕಾರವನ್ನು ಆಗ್ರಹಿಸುತ್ತಲೇ ಬಂದಿದ್ದು ಅವರ ಕೂಗು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿಧ್ವನಿಸಿದೆ.

ಕಡಲಾಮೆಗಳು ಮೀನುಗಾರರ ಮಿತ್ರ ಎಂದು ಕರೆಯಲ್ಪಡುತ್ತಿದು, ಇದು ಮುಖ್ಯವಾಗಿ ಮೀನುಗಾರರ ಶತ್ರುವಾದ ಜೆಲ್ಲಿ ಫಿಶ್ ಗಳನ್ನು ಆಹಾರವನ್ನಾಗಿ ಸೇವಿಸುತ್ತದೆ ಅಷ್ಟೇ ಅಲ್ಲದೇ ಬಂಗುಡೆ ಬೈಗೆ ಮುಂತಾದ ಮೀನುಗಳ ಸಂಖ್ಯೆಯಲ್ಲಿ ಇಳಿಮುಖವಾಗಲು ಜೆಲ್ಲಿ ಫಿಶ್ ಮುಖ್ಯ ಕಾರಣವಾಗಿದ್ದು ಆ ಮೀನುಗಳ ಜೊತೆಯಲ್ಲಿ ಇದ್ದು ಈ ಜೆಲ್ಲಿ ಫಿಶ್ ಗಳು ಅವುಗಳನ್ನು ಭಕ್ಷಿಸುತ್ತದೆ ಆಮೆ ಸಂತತಿ ಹೆಚ್ಚಾಗಿರುವ ಪ್ರದೇಶದ ಕಡಲಿನಿಂದ ಜೆಲ್ಲಿ ಫಿಶ್ ದೂರಕ್ಕೆ ವಲಸೆ ಹೋಗುತ್ತದೆ ಇದೇ ಕಾರಣದಿಂದ ಪಾಶ್ಚಿಮಾತ್ಯ ರಾಷ್ಟ್ರಗಳು ತಮ್ಮ ಕಡಲಿನ ವಿವಿಧ ಪ್ರದೇಶಗಳಲ್ಲಿ ಆಮೆ ಸಂರಕ್ಷಣಾ ವಲಯವನ್ನು ಘೋಷಿಸಿಕೊಂಡಿದ್ದು ನಮ್ಮ ದೇಶದಲ್ಲಿ ಕಡಲಾಮೆಗಳ ಸಂರಕ್ಷಣಾ ವಲಯ ಘೋಷಿತವಾದರೆ ಅವುಗಳ ಸಂತತಿ ವೃದ್ಧಿಯಾಗಿ, ಮೀನುಗಾರರ ಮತ್ತು ಮೀನುಗಳ ಶತ್ರುವೆಂದು ಪರಿಗಣಿಸಲ್ಪಟ್ಟಿರುವ ಜೆಲ್ಲಿ ಫಿಶ್ಗಳ ಸಂತತಿ ಕಡಿಮೆಯಾಗಿ ಮೀನುಗಾರರಿಗೆ ಭರಪೂರ ಮೀನು ಸಿಗುವ ಸಾಧ್ಯತೆ ಹೆಚ್ಚಾಗುತ್ತದೆ ನಮ್ಮ ಹಿಂದೂ ಧರ್ಮ ದಲ್ಲಿ ಆಮೆಗೆ ಪೂಜ್ಯನೀಯ ಸ್ಥಾನವಿದ್ದು, ಎಷ್ಟೋ ಜನರನ್ನು ರಕ್ಷಿಸಿದ ಉಲ್ಲೇಖವಿದೆ. ಕೂರ್ಮಾವಾತರದಲ್ಲಿ ಇದು ಅನಾವರಣಗೊಂಡಿದೆ.

ಜೀವವೈವಿಧ್ಯ ಗಳ ಸಂರಕ್ಷಣೆ ಕುರಿತಂತೆ ನಮ್ಮ ದೇಶದ ಮತ್ತು ಅಂತರಾಷ್ಟ್ರೀಯ ಕಾನೂನುಗಳಿವೆ 1972 ರ ನಮ್ಮ ದೇಶದ ಜೀವವೈವಿಧ್ಯಗಳ ಸಂರಕ್ಷಣಾ ಕಾಯಿದೆಯ ಪ್ರಕಾರ ಕಡಲಾಮೆಗಳು ಕೂಡಾ ಸೇರಿವೆ ಮಾನವ ಚಟುವಟಿಕೆಗಳು ತಮ್ಮ ಸೂಕ್ತವಲ್ಲದ ತಾಂತ್ರಿಕತೆ ಮತ್ತು ತಾವುಂಟು ಮಾಡುವ ಮಾಲಿನ್ಯಗಳ ಮೂಲಕ ಸಾಗರ ಪರಿಸರ ವ್ಯವಸ್ಥೆಗಳ ಉತ್ಪಾದಕತೆ ಮತ್ತು ನಿರಂತರತೆಯನ್ನು ತುಂಬಾ ತೀವ್ರವಾಗಿ ಘಾಸಿಗೊಳಿಸಿದೆ ಮುಖ್ಯ ವಾಗಿ ಇದರ ಪರಿಣಾಮ ಗೋವಾದಲ್ಲಿ ನಿರ್ಮಿಸಲಾದ ಖಾಸಗಿ ವಾಣಿಜ್ಯ ಬಂದರು ಪ್ರದೇಶದಲ್ಲಿ ನದಿ ಮತ್ತು ಕಡಲತೀರಗಳು ಸಂಪೂರ್ಣ ಹದಗೆಟ್ಟಿದ್ದು ಮೀನು ಮತ್ತು ಇತರ ಜೀವವೈವಿಧ್ಯ ಗಳು ಕಣ್ಮರೆಯ ಅಂಚಿನಲ್ಲಿವೆ ಕರ್ನಾಟಕದಲ್ಲೂ ಅಂತಹುದೇ ಪರಿಸ್ಥಿತಿ ವಾಣಿಜ್ಯ ಬಂದರು ನಿರ್ಮಾಣದಿಂದ ಸಂಭವಿಸುವ ಸಾಧ್ಯತೆ ಇದೆ ಜೀವವೈವಿಧ್ಯತೆಯನ್ನು ಕಾಪಾಡಿಕೊಳ್ಳುವುದಕ್ಕಾಗಿ ಗುರುತಿಸಲ್ಪಡುವ ಪ್ರದೇಶವನ್ನು ಕಾಯ್ದಿರಿಸಲಾದ ಜೀವಗೋಳ ಎಂದು ಹೇಳಲಾಗುತ್ತದೆ ಇದರ ಮುಖ್ಯ ಉದ್ದೇಶಗಳೆಂದರೆ, ಅವುಗಳ ನೈಸರ್ಗಿಕ ಪರಿಸರ ವ್ಯವಸ್ಥೆಯೊಳಗೆ ಮೂಲ ಅನುವಂಶಿಕ ಸಂಪನ್ಮೂಲಗಳನ್ನು ಸಂರಕ್ಷಣೆ ಮಾಡುವುದು ಈ ಕಾರ್ಯ ಮೊದಲು ಕಾಸರಕೋಡ ಬಂದರು ಪ್ರದೇಶದಲ್ಲಿ ಆಗಬೇಕಾಗಿದೆ ಇಲ್ಲದಿದ್ದರೆ ಅಪರೂಪದ ಕಡಲಾಮೆ ಪ್ರಭೇಧವೊಂದು ವಾಣಿಜ್ಯ ಬಂದರು ನಿರ್ಮಾಣ ಕಾಮಗಾರಿಯಿಂದ ಸಂಪೂರ್ಣ ನಶಿಸುವ ಸಾಧ್ಯತೆ ಇದೆ.

ಭೂಮಿಯ ಮೇಲಿನ ಜೀವವೈವಿಧತೆಯನ್ನು ಕಾಪಾಡಿಕೊಳ್ಳುವ ಮೂಲಕ ಆಹಾರ, ಔಷಧಿ ಮತ್ತು ಇತರ ಅವಶ್ಯ ವಸ್ತುಗಳ ಹೊಸ ಮೂಲಗಳನ್ನು ಅಭಿವೃದ್ಧಿಗೊಳಿಸುವ ಮತ್ತು ಈಗಿರುವ ಮೂಲಗಳನ್ನು ಸುಧಾರಿಸುವ ದೊಡ್ಡ ಸಾಧ್ಯತೆಗಳಿವೆ ಆದರೆ ಆಳುವ ಪ್ರಭುಗಳು ಖಾಸಗಿ ವಾಣಿಜ್ಯ ಬಂದರು ನಿರ್ಮಾಣ ಯೋಜನೆ ಮೂಲಕ ನೈಸರ್ಗಿಕ ಪರಿಸರ ವ್ಯವಸ್ಥೆಯನ್ನು ಸರ್ವನಾಶ ಮಾಡಲು ಹೊರಟಿದ್ದಾರೆ. ಸರ್ವರ ಬದುಕಿಗೆ ಕೊಳ್ಳಿ ಇಡಲು ಕ್ಷಣಗಣನೆ ಆರಂಭವಾಗಿದೆ ಕೊನೆಯದಾಗಿ ಬಹು ಮುಖ್ಯ ವಾದ ವಿಷಯವನ್ನು ಹೇಳಲು ಬಯಸುತ್ತೇನೆ 2016 ರಲ್ಲಿ ಅನುಷ್ಠಾನಗೊಳಿಸಿದ ಮೀನುಗಾರಿಕೆಯನ್ನು ಉನ್ನತಿಕರಿಸುವ ನೀಲಿಕ್ರಾಂತಿ ಸಾಗರ ಮೀನುಗಾರಿಕೆ ಅಭಿವೃದ್ಧಿ ಯೋಜನೆಯಲ್ಲಿ ಎರಡು ಬಹು ಮುಖ್ಯ ಅಂಶಗಳಿದ್ದು ಅದರಲ್ಲಿ ಒಂದು ಕಡಲತಡಿಯಲ್ಲಿ ಮೀನುಗಾರಿಕಾ ಬಂದರುಗಳನ್ನು ಅಭಿವೃದ್ಧಿ ಪಡಿಸಿ ಮೀನುಗಾರಿಕೆಯನ್ನು ವಿಶ್ವ ದರ್ಜೆಗೆ ಏರಿಸುವುದು ಮತ್ತು ಕಡಲಿನ ಜೀವವೈವಿಧ್ಯ ಗಳನ್ನು ಸಂರಕ್ಷಣೆ ಮಾಡುವುದು. ವಿಪರ್ಯಾಸವೆಂದರೆ ಸದ್ಯ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ ಈ ಯೋಜನೆಯ ಮುಖ್ಯ ಉದ್ದೇಶ ಮೀನುಗಾರರ ಮತ್ತು ಕಡಲ ಜೀವವೈವಿಧ್ಯಗಳ ವ್ಯವಸ್ಥಿತ ಮಾರಣಹೋಮ ಎಂಬುದರಲ್ಲಿ ಯಾವ ಸಂಶಯವೂ ಇಲ್ಲ.

ಉಮಾಕಾಂತ ಖಾರ್ವಿ ಕುಂದಾಪುರ

Leave a Reply

Your email address will not be published. Required fields are marked *