ಬಸ್ರೂರಿನ ಬೆತ್ತಲೆ ಪರಮೇಶ್ವರಿ

ಕಾಲಗರ್ಭದಲ್ಲಿ ಅಂಕುರಿಸಲ್ಪಟ್ಟು ಕಹಿಸತ್ಯಗಳ ಅಸಂಗತ ಪ್ರತಿರೂಪವಾದ ಅಸಂಖ್ಯಾತ ಗತಕಾಲದ ಸಂಗತಿಗಳು ನಮ್ಮೆದುರು ಅನಾವರಣಗೊಂಡಿವೆ. ಇದಕ್ಕೆ ಕುಂದಾಪುರ ಬಸ್ರೂರಿನ ದೇವಿ ಅಮ್ಮನವರ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಬೆತ್ತಲೆ ಪರಮೇಶ್ವರಿ ಮೂರ್ತಿ ಅತ್ಯುತ್ತಮ ಉದಾಹರಣೆಯಾಗಿದೆ. ದೇವರ ಗರ್ಭಗುಡಿಯ ಎಡ ಪಾರ್ಶ್ವ ದಲ್ಲಿ ವೀರಭದ್ರ ಮತ್ತು ಬಲ ಪಾರ್ಶ್ವ ದಲ್ಲಿ ಬೆತ್ತಲೆ ಪರಮೇಶ್ವರಿಯ ಗುಡಿಗಳಿವೆ ವೀರಭದ್ರನ ಮೂರ್ತಿಯ ನೇರಕ್ಕೆ ಬೆತ್ತಲೆ ಪರಮೇಶ್ವರಿ ಮೂರ್ತಿ ಯನ್ನು ಪ್ರತಿಷ್ಠಾಪಿಸಿದ್ದಾರೆ ಇದರ ಹಿಂದೆ ಬಹಳ ರೋಚಕ ಕಥೆಯ ಐತಿಹ್ಯ ವಿದ್ದು, ದೇವದಾಸಿಯರ ಹೆಣ್ಣು ಮಕ್ಕಳು ಋತುಮತಿಯರಾದಾಗ ಮಹಾಲಿಂಗೇಶ್ವರನ ಎದುರು ತಾಳಿ ಕಟ್ಟಿಕೊಂಡು ಮಹಾಲಿಂಗೇಶ್ವರನೇ ತನ್ನ ಗಂಡ ಎಂದು ಸ್ವೀಕರಿಸುತ್ತಿದ್ದರು ಆ ಹೆಣ್ಣು ಮಕ್ಕಳ ಶೋಭನ ಪ್ರಸ್ಥದ ದಿನ ವೀರಭದ್ರ ಅವರ ಶೀಲಹರಣ ಮಾಡುತ್ತಿದ ಬೆಳಗಾಗುವುದರೊಳಗೆ ಆ ಹೆಣ್ಣು ಮಕ್ಕಳು ಸಾಯುತ್ತಿದ್ದರು ಹೀಗೆ ಹಲವಾರು ಹೆಣ್ಣು ಮಕ್ಕಳು ಸಾವನ್ನಪ್ಪಿದ್ದರು.

ಈ ದುರ್ಘಟನೆಯಿಂದ ಭಯಭೀತರಾದ ದೇವದಾಸಿಯರ ಮನೆಯವರು ಇದರ ಹಿಂದಿನ ರಹಸ್ಯ ವನ್ನು ತಿಳಿಯಲು ಕೇರಳದ ಅಷ್ಟಮಂಗಲ ಜ್ಯೋತಿಷ್ಯ ರನ್ನು ಕರೆಸಿ ಅಷ್ಟಮಂಗಲ ಪ್ರಶ್ನೆಯನ್ನಿಟ್ಟರು ಆ ಪ್ರಕಾರ ವೀರಭದ್ರನ ಎದುರುಗಡೆ ಒಂದು ಬೆತ್ತಲೆ ಹೆಣ್ಣು ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದರೆ ಆಗ ಅವನು ಅವಳನ್ನೇ ನೋಡುತ್ತಾ ತನ್ನ ಆಸೆ ಪೂರೈಸಿಕೊಳ್ಳುತ್ತಾನೆ ಅಲ್ಲಿಂದ ಹೊರಗೆ ದೇವದಾಸಿ ಹೆಣ್ಣು ಮಕ್ಕಳ ತಂಟೆಗೆ ಹೋಗುವುದಿಲ್ಲ ಎಂದು ಪ್ರಶ್ನಾಮಾರ್ಗ ತಿಳಿದು ಬಂತು ಕೂಡಲೇ ವೀರಭದ್ರನ ಎದುರಿಗೆ ಬೆತ್ತಲೆ ಪರಮೇಶ್ವರಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ವೀರಭದ್ರನ ಕಾಲಿಗೆ ಸರಪಳಿ ಹಾಕಿ ಕಟ್ಟಿ ಹಾಕಿದರು.

ಅಂದಿನಿಂದ ದೇವದಾಸಿ ಹೆಣ್ಣು ಮಕ್ಕಳು ಸಾಯುವುದು ನಿಂತುಹೋಯಿತು ಎಂದು ಈ ಸ್ಥಳದ ಜನಜನಿತ ಪ್ರತೀತಿ ಪ್ರಸ್ತುತ ವೀರಭದ್ರನ ಮೂರ್ತಿಯ ಕಾಲಿಗೆ ಹಾಕಿರುವ ಸರಪಳಿಯನ್ನು ಕಾಣಬಹುದಾಗಿದೆ ಬೆತ್ತಲೆ ಪರಮೇಶ್ವರಿ ವಿಗ್ರಹಕ್ಕೆ ವಿಶೇಷ ಸಂದರ್ಭದಲ್ಲಿ ಸೀರೆಯುಡಿಸಿ ಅಲಂಕಾರ ಮಾಡುತ್ತಾರೆ ಈ ದೇವಿ ಅಮ್ಮನ ದೇವಸ್ಥಾನದಲ್ಲಿ ಆರವತ್ತು ವರ್ಷ ಗಳಿಗೊಮ್ಮೆ ಮಾರಿಹಬ್ಬ ಮತ್ತು ಹದಿನೈದು ವರ್ಷಗಳಿಗೊಮ್ಮೆ ಸಣ್ಣ ಮಾರಿಹಬ್ಬವನ್ನು ಮಾಡುತ್ತಾರೆ ಕುಂದಾಪುರದ ಇತಿಹಾಸದಲ್ಲಿ ಬಸ್ರೂರಿಗೆ ವಿಶಿಷ್ಟ ಸ್ಥಾನಮಾನವಿದ್ದು ಪ್ರಾಚೀನ ಕಾಲದಲ್ಲಿ ಬಸ್ರೂರನ್ನು ವಸುಪುರ ಎಂದು ಕರೆಯಲಾಗುತ್ತಿತ್ತು ದಕ್ಷಿಣ ಕನ್ನಡ ಜಿಲ್ಲೆಯನ್ನು ಒಂದುವರೆ ಸಹಸ್ರ ವರ್ಷಗಳ ಕಾಲ ಆಳಿದ ಆಳುಪ ಅರಸರ ಸಾಮ್ರಾಜ್ಯದಲ್ಲಿ ಬಸ್ರೂರು ಪ್ರಮುಖ ವಾಣಿಜ್ಯ ಬಂದರು ಆಗಿತ್ತು ಎಂದು ಇತಿಹಾಸದ ದಾಖಲಾತಿ ಇದೆ.

ಆಗ ಪಂಚಗಂಗಾವಳಿ ನದಿ ಹರವು ವಿಸ್ತಾರ ಮತ್ತು ಆಳವಾಗಿ ಬಸ್ರೂರು ಪ್ರಮುಖ ಬಂದರು ಪ್ರದೇಶವಾಗಿ ಮೆರೆದಿತ್ತು ಆ ಕಾಲದಲ್ಲಿ ಮಂಗೋಲಿಯಾ, ಚೈನಾ ಮತ್ತು ಬೇರೆ ಬೇರೆ ದೇಶಗಳಿಂದ ಜನರು ವ್ಯಾಪಾರಕ್ಕಾಗಿ ಬಸ್ರೂರಿಗೆ ಬರುತ್ತಿದ್ದರು ಎಂಬುದ್ದಕ್ಕೆ ಪುರಾವೆಯಾಗಿ ಇಲ್ಲಿನ ವಿಲಾಸಕೇರಿ ಪ್ರದೇಶದಲ್ಲಿ ಕುರುಹುಗಳು ಸಿಗುತ್ತದೆ ಬೆತ್ತಲೆ ಪರಮೇಶ್ವರಿ ಮೂರ್ತಿ ಸ್ಥಾಪನೆಯ ಐತಿಹ್ಯ ವನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ದೇವದಾಸಿಗಳನ್ನು ಶೋಷಣೆ ಮಾಡುತ್ತಿದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ದುಷ್ಕ್ರತ್ಯಗಳನ್ನು ಮರೆಮಾಚಲು ವೀರಭದ್ರನ ಕಥೆಯನ್ನು ಸೃಷ್ಟಿ ಮಾಡಿರಬಹುದು ಎಂಬ ಸಂದೇಹಗಳು ವ್ಯಕ್ತವಾಗುತ್ತದೆ ಏನೇ ಇರಲಿ ಇತಿಹಾಸ ಕುರುಡಲ್ಲ ಅದು ಇತರರ ಕುರುಡುತನವನ್ನು ಸಹಿಸುವುದೂ ಇಲ್ಲ.

ಉಮಾಕಾಂತ ಖಾರ್ವಿ ಕುಂದಾಪುರ

Leave a Reply

Your email address will not be published. Required fields are marked *