ರಾಷ್ಟ್ರೀಯ ಮೀನುಗಾರಿಕೆಗೆ ಹೊಸ ಚೈತನ್ಯ ನೀಡುವ ಅಂಗವಾಗಿ ಕೇಂದ್ರ ಸರ್ಕಾರ ಬ್ಲೂ ರೆವೆಲ್ಯುಶನ್ ಇಂಟಿಗ್ರೇಟಿಡ್ ಡೆವಲಪ್ಮೆಂಟ್ ಮೇನೆಜ್ಮೆಂಟ್ ಆಫ್ ಫಿಶರೀಸ್ ಎಂಬ ಯೋಜನೆಯನ್ನು 2016 ರಲ್ಲಿ ಜಾರಿಗೆ ತಂದಿತ್ತು. ಇದರಲ್ಲಿ ಎರಡನೇ ಬಹುಮುಖ್ಯ ಅಂಶವಾಗಿ ಮೀನುಗಾರರ ತಲಾ ಆದಾಯವನ್ನು ದುಪ್ಪಟ್ಟುಗೊಳಿಸುವ ಯೋಜನೆಯಾದ ಪಂಜರ ಕೃಷಿ ಮೀನುಗಾರಿಕೆಯನ್ನು ಕೈಗೊತ್ತಿಕೊಳ್ಳಲಾಯಿತು. ಈ ಪಂಜರ ಕೃಷಿ ಮೀನುಗಾರಿಕೆ ಬಹು ಹಿಂದೆಯೇ ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿದ್ದರೂ, ಹೆಚ್ಚು ಜನಪ್ರಿಯವಾಗಿರಲಿಲ್ಲ ಕೇಂದ್ರ ಸರ್ಕಾರ ಇದಕ್ಕೆ ನೂತನ ಆವಿಷ್ಕಾರದ ವೈಜ್ಞಾನಿಕ ರೂಪ ಕೊಟ್ಟು ಮೀನುಗಾರರ ತಲಾ ಆದಾಯವನ್ನು ಹೆಚ್ಚಿಸುವ ಮಾರ್ಗಸೂಚಿ ನಡಾವಳಿ ರೂಪಿಸಿ ಪಂಜರ ಕೃಷಿ ಮೀನುಗಾರಿಕೆ ಯೋಜನೆಯನ್ನು ದೇಶಾದ್ಯಂತ ಜಾರಿಗೊಳಿಸಿತು.
ಈ ಪಂಜರ ಕೃಷಿ ಮೀನುಗಾರಿಕೆಯು ಪ್ರಪ್ರಥಮವಾಗಿ ಕಾಂಬೋಡಿಯಾ ದೇಶದಲ್ಲಿ ಪ್ರಾರಂಭಗೊಂಡು, ನಂತರ ಥೈಲ್ಯಾಂಡ್, ಇಂಡೋನೇಷ್ಯಾ, ವಿಯೆಟ್ನಾಂ, ರಷ್ಯಾ ಮತ್ತು ಜಪಾನ್ ದೇಶಗಳಿಗೆ ವಿಸ್ತರಣೆಗೊಂಡಿತು ನಮ್ಮ ದೇಶದಲ್ಲಿ 80 ರ ದಶಕದಲ್ಲಿ ಈ ಪಂಜರ ಕೃಷಿ ಮೀನುಗಾರಿಕೆ ಜಾರಿಗೆ ಬಂದಿತ್ತು.ಪಂಜರದ ಆವರಣದಲ್ಲಿ ಮೀನು ಮರಿಗಳನ್ನು ದೊಡ್ಡ ಗಾತ್ರಕ್ಕೆ ಬೆಳೆಸುವ ಈ ವಿಧಾನವು ಇಂಡೋ ಪೆಸಿಫಿಕ್ ವಲಯದಲ್ಲಿ ಪ್ರಚಲಿತದಲ್ಲಿದ್ದರೂ, ನಮ್ಮ ದೇಶದಲ್ಲಿ ಜನಪ್ರಿಯವಾಗಿರಲಿಲ್ಲ. ನಮ್ಮ ರಾಜ್ಯದಲ್ಲಿ 1980 ರಲ್ಲಿ ತುಂಗಭದ್ರಾ ಜಲಾಶಯದಲ್ಲಿ ಪ್ರಪ್ರಥಮ ಬಾರಿಗೆ ಗೆಂಡೆಮೀನು ಕೃಷಿಯನ್ನು ಪಂಜರದಲ್ಲಿ ಕೈಗೊಳ್ಳಲಾಯಿತು.ಇದು ದಕ್ಷಿಣ ಭಾರತದಲ್ಲೇ ಅತಿದೊಡ್ಡ ಹಾಗೂ ನೈಸರ್ಗಿಕ ಮತ್ಸ್ಯ ಸಂಪನ್ಮೂಲಗಳ ವೃದ್ಧಿಯ ಯಶಸ್ವಿ ಯೋಜನೆಗಳಿಗೆ ನಾಂದಿ ಹಾಡಿತು. ಹೈದರಾಬಾದಿನ ರಾಷ್ಟ್ರೀಯ ಮೀನುಗಾರಿಕಾ ಅಭಿವೃದ್ಧಿ ನಿಗಮ ಮತ್ತು ಕೇಂದ್ರೀಯ ಮೀನುಗಾರಿಕಾ ಸಂಶೋಧನಾ ಸಂಸ್ಥೆಯ ಸಹಯೋಗದಲ್ಲಿ ಈ ಯೋಜನೆ ನಮ್ಮ ಕರಾವಳಿ ಜಿಲ್ಲೆಯಲ್ಲೂ ಅನುಷ್ಠಾನಗೊಂಡಿತು.
ಕುಂದಾಪುರ ಪಂಚಗಂಗಾವಳಿ ನದಿತೀರದಲ್ಲಿ ಸ್ಥಳೀಯ ಮೀನುಗಾರರು ಪಂಜರ ಕೃಷಿ ಮೀನುಗಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು,ಇಂದು ಸುಮಾರು 115 ಕ್ಕೂ ಹೆಚ್ಚು ಮೀನು ಕೃಷಿ ಪಂಜರಗಳು ಪಂಚಗಂಗಾವಳಿ ನದಿತೀರದಲ್ಲಿದೆ ಇದರಲ್ಲಿ ಅತ್ಯುತ್ತಮ ಮೀನು ತಳಿಯಾದ ಕುರುಡೆ ಮೀನುಗಳನ್ನು ಸಾಕಲಾಗುತ್ತಿದೆ ಕುರುಡೆ ಮೀನುಗಳ ಮರಿಗಳನ್ನು ಆಂಧ್ರಪ್ರದೇಶದಿಂದ ತರಿಸಲಾಗುತ್ತಿದ್ದು ,3 ರಿಂದ 4 ಇಂಚಿನ ಮರಿಗಳನ್ನು 4 ತಿಂಗಳ ಅವಧಿಯಲ್ಲಿ 6×4 ಅಡಿ ವಿಸ್ತೀರ್ಣದ ಪಂಜರದಲ್ಲಿ ಸಾಕುತ್ತಾರೆ. ದೊಡ್ಡದಾದ ಬಳಿಕ ಈ ಮೀನುಗಳನ್ನು 10×20 ಅಡಿ ವಿಸ್ತೀರ್ಣದ ಪಂಜರಗಳಿಗೆ ವರ್ಗಾಯಿಸಲಾಗುತ್ತದೆ ಈ ಮೀನುಗಳಿಗೆ ದಿನಂಪ್ರತಿ ಎರಡು ಬಾರಿ ಆಹಾರವನ್ನು ಕೊಡಬೇಕಾಗುತ್ತದೆ. ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಸಿಗುವ ಮೀನು ಅಥವಾ ನದಿಯಲ್ಲಿ ಸಿಗುವ ಇತರ ಸಣ್ಣಪುಟ್ಟ ಮೀನುಗಳನ್ನು ಇವುಗಳಿಗೆ ಆಹಾರವನ್ನಾಗಿ ಕೊಡಲಾಗುತ್ತದೆ. ಈ ಕುರುಡೆ ಮೀನುಗಳ ಬೆಳವಣಿಗೆ ಅವಧಿ ಹದಿನೆಂಟು ತಿಂಗಳಾಗಿದ್ದು ,ಈ ಅವಧಿ ಪೂರ್ಣ ಗೊಂಡಾಗ ಒಂದೊಂದು ಮೀನುಗಳು ತಲಾ ಎರಡರಿಂದ ಮೂರು ಕೆ ಜಿ ತೂಗುತ್ತದೆ. ಮೀನುಗಳನ್ನು ಆಹಾರ ನೀಡಿ ಬೆಳೆಸುವ ಈ ಅವಧಿಯು ತುಂಬಾ ಪರಿಶ್ರಮದಾಯಕವಾಗಿದ್ದು ,ಕಣ್ಣಲ್ಲಿ ಕಣ್ಣಿಣ್ಣು ಮೀನುಗಳನ್ನು ಆರೈಕೆ ಮಾಡಬೇಕಾಗುತ್ತದೆ ಪಂಜರ ನಿರ್ಮಾಣ ಮಾಡುವ ಪ್ರಾರಂಭಿಕ ಹಂತದಲ್ಲಿ ಒಂದೊಂದು ಪಂಜರಕ್ಕೆ ತಲಾ ಒಂದು ಲಕ್ಷ ರೂಪಾಯಿ ಖರ್ಚು ಬೀಳುತ್ತದೆ. ಮೀನುಮರಿಗಳು ಪಂಜರದಿಂದ ತಪ್ಪಿಸಿಕೊಂಡು ಹೋಗದಂತೆ ಸೂತ್ತಲೂ ಸೂಕ್ಷ್ಮ ಕಣ್ಣಿನ ಬಲೆ ಹಾಕಲಾಗುತ್ತದೆ. ಪಂಜರ ತೇಲಲು ಸಮೃದ್ಧ ನೀರಿನ ವ್ಯವಸ್ಥೆ ಇರಬೇಕು.
ನೀರಿನಲ್ಲಿ ಪಂಜರ ತೇಲುವಂತೆ ಮಾಡಲು ಪೈಬರ್ ಬ್ಯಾರಲ್ ಗಳನ್ನು ಬಳಸಲಾಗುತ್ತದೆ ಪ್ರಾರಂಭಿಕ ಹಂತದಲ್ಲಿ ಒಂದುವರೆ ಸಾವಿರ ಕುರುಡೆ ಮೀನು ಮರಿಗಳನ್ನು ಪಂಜರದಲ್ಲಿ ಬಿಡಲಾಗುತ್ತದೆ ಇದರಲ್ಲಿ ಕೆಲವೊಂದು ಮೀನು ಮರಿಗಳು ನಾನಾ ಕಾರಣಗಳಿಂದಾಗಿ ಸಾವಿಗೀಡಾಗುವ ಸಂಭವವಿರುತ್ತದೆ. ಎರಡನೇ ಹಂತದಲ್ಲಿ ಪಂಜರವನ್ನು ದೊಡ್ಡ ಪ್ರಮಾಣದಲ್ಲಿ ವಿಸ್ತರಣೆ ಮಾಡಲಾಗುತ್ತದೆ ಹದಿನೆಂಟು ತಿಂಗಳ ಬಳಿಕ ಮೀನು ದೊಡ್ಡದಾಗಿ ಕೊಯ್ಲಿಗೆ ಬಂದಾಗ ಸರಿಸುಮಾರು ಒಂದು ಸಾವಿರದಿಂದ ಎರಡು ಸಾವಿರ ಕೆಜಿ ತನಕ ಇಳುವರಿ ಸಿಗುತ್ತದೆ. ಈ ಮೀನು ಕೃಷಿಯಲ್ಲಿ ತುಂಬಾ ರಿಸ್ಕ್ ಇರುತ್ತದೆ ಕಳೆದ ವರ್ಷ ಇಲ್ಲಿ ಪಂಜರದಲ್ಲಿ ಬೆಳೆಸಲಾದ ಕುರುಡೆ ಮೀನುಗಳು ಸಾವಿರಾರು ಪ್ರಮಾಣದಲ್ಲಿ ಸತ್ತು ಮೀನುಗಾರರು ಅಪಾರವಾದ ನಷ್ಟ ಅನುಭವಿಸಿದ್ದರು ನೀರಿನ ಲವಣಾಂಶ ಕೊರತೆ, ಸಮುದ್ರ ನೀರಿನ ಬಣ್ಣದ ವ್ಯತ್ಯಾಸ, ಮತ್ತು ಕಲುಷಿತ ನೀರು ನದಿನೀರಿನಲ್ಲಿ ಸೇರ್ಪಡೆ ಸೇರಿದಂತೆ ಹಲವಾರು ಕಾರಣಗಳಿಂದಾಗಿ ಪಂಜರದ ಮೀನುಗಳು ಸಾವಿಗೀಡಾಗಿದ್ದವು.
ಅಂದಿನ ಮೀನುಗಾರಿಕೆ ಸಚಿವ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರು ಸ್ಥಳಕ್ಕೆ ಭೇಟಿ ನೀಡಿ ಮೀನುಗಾರರಿಗೆ ಸರ್ಕಾರದಿಂದ ಎಲ್ಲಾ ರೀತಿಯ ಸಹಾಯ ನೀಡುವ ಭರವಸೆ ನೀಡಿದ್ದರು ಪಂಜರ ಕೃಷಿ ಮೀನು ಪಾಲನೆಯಲ್ಲಿ ಸಕಾಲಿಕ ನೀರಿನ ನಿರ್ವಹಣೆ, ಪಂಜರದ ಬಲೆಗೆ ಅಂಟಿಕೊಳ್ಳುವ ತ್ಯಾಜ್ಯ ವಸ್ತುಗಳನ್ನು ತೆಗೆದು ಹಾಕುವುದು ಇತ್ಯಾದಿ ಪ್ರಮುಖ ಸಮಸ್ಯೆಯಾಗಿದೆ. ಕರ್ನಾಟಕದಲ್ಲಿ ಸ್ಥಳಾವಕಾಶದ ಅಭಾವ ಹಾಗೂ ಪ್ರಸ್ತುತ ಮರಿ ಉತ್ಪಾದನೆಗೆ ಆಳವಡಿಸಿಕೊಂಡಿರುವ ವಿಧಾನಗಳು ಸಮರ್ಪಕವಾಗಿಲ್ಲವಾದರಿಂದ ನಿರೀಕ್ಷಿತ ಮಟ್ಟದ ಮೀನು ಉತ್ಪಾದನೆಯನ್ನು ಪಡೆಯಲು ಸಾಧ್ಯವಾಗಿಲ್ಲ. ಆಂಧ್ರಪ್ರದೇಶದ ರೈತರು ಮೀನು ಕೃಷಿಯ ವಾಣಿಜ್ಯ ಪ್ರಾಮುಖ್ಯತೆಯನ್ನು ಮನಗಂಡು ಸುಮಾರು ಆರವತ್ತು ಸಾವಿರ ಹೆಕ್ಟೇರ್ ನಷ್ಟು ಭತ್ತದ ಗದ್ದೆಗಳನ್ನು ಇತ್ತೀಚಿನ ದಶಕಗಳಲ್ಲಿ ಮೀನು ಮತ್ತು ಸಿಗಡಿ ಕೃಷಿಗೆ ಆಳವಡಿಸಿಕೊಂಡಿದ್ದಾರೆ ಪ್ರಸ್ತುತ ಅಲ್ಲಿ ಮೀನು ಸಾಕಾಣೆಗಿಂತ ಮೀನು ಮರಿ ಪಾಲನೆ ಲಾಭದಾಯಕವೆನಸಿದೆ ಹಾಗಾಗಿ ಆಂಧ್ರಪ್ರದೇಶದಿಂದ ಎಲ್ಲಾ ಜಾತಿಯ ಮೀನು ಮರಿಗಳು ಕರ್ನಾಟಕ ಸೇರಿದಂತೆ ದೇಶಾದ್ಯಂತ ಪೂರೈಕೆಯಾಗುತ್ತಿದೆ.
ಇಂದು ಆಂಧ್ರಪ್ರದೇಶ ಇಡೀ ರಾಷ್ಟ್ರದಲ್ಲೇ ಸಾಗರ ನದಿ ಮತ್ತು ಒಳನಾಡು ಮೀನುಗಾರಿಕೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಕುಂದಾಪುರ ಪಂಚಗಂಗಾವಳಿ ನದಿತೀರದಲ್ಲಿ ಎಂಬತ್ತರ ದಶಕದಲ್ಲಿ ಹೈದರಾಬಾದ್ ಮೂಲದ ಮೀನುಗಾರಿಕಾ ಸಂಸ್ಥೆಯೊಂದು ಸ್ಥಳೀಯ ಮೀನುಗಾರರು ಹಿಡಿದ ಜೀವಂತ ಕುಂದಾಪುರ ಕಾಣೆ ಅಥವಾ ಕಂಡಿಕೆ ಮೀನುಗಳಿಗೆ ಹಾರ್ಮೋನ್ ಇಂಜೆಕ್ಷನ್ ನೀಡಿ ಬೆಳವಣಿಗೆಯನ್ನು ವೃದ್ಧಿಸುವ ಮತ್ತು ಲಿಂಗವನ್ನು ಪರಿವರ್ತನೆ ಮಾಡುವ ತಾಂತ್ರಿಕ ಪ್ರಯೋಗವನ್ನು ಕೈಗೊಂಡಿತ್ತು. ಆದರೆ ಈ ಪ್ರಯೋಗದಲ್ಲಿ ಅವರಿಗೆ ನಿರೀಕ್ಷಿತ ಯಶಸ್ಸು ದೊರಕಲಿಲ್ಲವಾದ್ದರಿಂದ ಆ ಕಾರ್ಯಕ್ರಮ ಅಲ್ಲೀಯೇ ಸ್ಥಗಿತಗೊಂಡಿತು.ಭಾರತ ಸರ್ಕಾರದ ಕೃಷಿ ಮಂತ್ರಾಲಯ, ರಾಷ್ಟ್ರೀಯ ಮೀನುಗಾರಿಕಾ ನಿಗಮ ಮೀನುಗಾರರ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಯನ್ನು ಉತ್ತಮಗೊಳಿಸಲು ಮೀನುಗಾರಿಕಾ ವಿಸ್ತರಣಾ ಕಾರ್ಯಕ್ರಮಗಳನ್ನು ಸಂಯೋಜಿಸುತ್ತಾ,ಬಂದಿದೆ. ಇದರ ಜೊತೆಗೆ ರಾಜ್ಯ ಸರ್ಕಾರ ಕೂಡಾ ಮೀನುಗಾರಿಕಾ ವಿಸ್ತರಣಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದ್ದು ಮೀನುಗಾರರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿದೆ.
ಉಮಾಕಾಂತ ಖಾರ್ವಿ ಕುಂದಾಪುರ