ಚಿಣಿಕಾರನ ದೋಣಿ (ಚಿನ್ಬೂತ ವಾಡೆ) ಹುಡುಕುತ್ತಾ ಕಾನನದ ಹಾದಿಯಲ್ಲಿ

ಕೊಂಕಣಿ ಖಾರ್ವಿ ಸಮಾಜಕ್ಕೆ ಸುಮಾರು ನಾನೂರು ವರ್ಷಗಳ ಇತಿಹಾಸವಿದೆ ನಮ್ಮ ಫೂರ್ವಜರು ಸಮುದ್ರ ತೀರದ ಮತ್ತು ನದಿ ನಾಗರಿಕತೆಯಲ್ಲಿ ಸೃಷ್ಟಿಸಿದ ವೈಶಿಷ್ಟ್ಯ ಪೂರ್ಣ ಸಂಸ್ಕೃತಿಗಳು ಸೃಜನಶೀಲ ಬದುಕಿನ ಅತಿ ಸಹಜವಾದ ಶಕ್ತ ಅಭಿವ್ಯಕ್ತಿಯಾಗಿ ಕಾಲದ ಪ್ರವಾಹದಲ್ಲಿ ಹರಿದುಕೊಂಡು ಬಂದಿದೆ. ಇದರ ತಲಸ್ಪರ್ಶಿ ಅಧ್ಯಯನ ನಡೆಸಿದಾಗ ಜನಪದ ನಂಬಿಕೆಗಳ ವಿವಿಧ ಮುಖಗಳು ಅಂತರ್ಗತವಾಗಿರುವುದನ್ನು ಮತ್ತು ಅದಕ್ಕೆ ಜೀವಶಕ್ತಿ ಒದಗಿಸಿರುವುದನ್ನು ಗುರುತಿಸಬಹುದಾಗಿದೆ.

ನಮ್ಮ ಹಿರಿಯರು ತಮ್ಮ ದೈನಂದಿನ ನೋವು ನಲಿವುಗಳನ್ನು, ಅನಿಸಿಕೆ ಅಭಿಪ್ರಾಯಗಳನ್ನು, ನಂಬಿಕೆ ಕಲ್ಪನೆಗಳನ್ನು , ಮೌಖಿಕವಾಗಿ ಹಾಡಿನ ಮೂಲಕ ಕಥೆಯ ಮೂಲಕ ಗಾದೆ ಒಗಟುಗಳ ಮೂಲಕ ತೋಡಿಕೊಂಡರು ಇದು ಆಡು ಮಾತಿಗಿಂತ ಭಿನ್ನವಾಗಿ ವಿಶೇಷ ದ್ವನಿಯನ್ನು,ಶಕ್ತಿಯನ್ನು, ಪರಿಣಾಮವನ್ನು, ಕೂತೂಹಲದ ಹೊಳಹುಗಳನ್ನು ಒಳಗೊಂಡ ಕಾರಣದಿಂದ ಜನ ಮಾನಸದಿಂದ ಅವುಗಳು ಮರೆಯಾಗಲಿಲ್ಲ ಹೀಗಾಗಿ ಅವುಗಳನ್ನು ಮೊದಲು ಹೇಳಿದವರು ಮತ್ತೊಬ್ಬರಿಗೆ ಮಗದೊಬ್ಬರಿಗೆ ಇಡೀ ಸಮುದಾಯಕ್ಕೆ ತಕ್ಕ ಕಂಠ ಮತ್ತು ನಾಲಿಗೆಗಳ ಮೂಲಕ ಅವುಗಳನ್ನು ದಾಟಿಸುತ್ತಾ ಬಂದರು ಈ ದೃಷ್ಟಿಕೋನದಿಂದ ಅವಲೋಕಿಸಿದಾಗ ನಮ್ಮ ಕಣ್ಣಿಗೆ ರಾಚುವುದು ಕರಾವಳಿಯಲ್ಲಿ ಅದರಲ್ಲೂ ನಮ್ಮ ಸಂಸ್ಕೃತಿಯ ನಂಬಿಕೆಯಲ್ಲಿ ಜನಜನಿತವಾಗಿರುವ ಚಿಣಿಕಾರರ ಕಥೆಗಳು ಬಹಳ ಸ್ವಾರಸ್ಯಕರ ಮತ್ತು ಕೂತೂಹಲಕ್ಕೆ ಎಡೆ ಮಾಡಿಕೊಡುವ ಚಿಣಿಕಾರರ ಕಥೆಯಲ್ಲಿ ಪ್ರಮುಖವಾಗಿ ಉಲ್ಲೇಖವಾಗುವ ಚಿಣಿಕಾರರು ನದಿಯಲ್ಲಿ ಮತ್ತು ಸಮುದ್ರದಲ್ಲಿ ಸಂಚರಿಸಲು ಉಪಯೋಗಿಸುತ್ತಿದ್ದರು ಎನ್ನಲಾದ ಚಿಣಿಕಾರರ ದೋಣಿಯ ಬಗ್ಗೆ ಅನ್ವೇಷಣೆಯಲ್ಲಿ ಕಂಡುಕೊಂಡ ನೈಜ ಸಂಗತಿಗಳನ್ನು ಇಲ್ಲಿ ಅನಾವರಣಗೊಳಿಸುತ್ತಿದ್ದೇನೆ. ಇತ್ತೀಚೆಗೆ ಖಾಸಗಿ ಕಾರ್ಯದ ನಿಮಿತ್ತ ಮಲೆನಾಡಿನ ತೀರ್ಥಹಳ್ಳಿಗೆ ಹೋದ ಸಂದರ್ಭದಲ್ಲಿ ಕಾಡುದಾರಿ ಮಧ್ಯೆ ಚಿಣಿಕಾರರ ದೋಣಿ ಎಂದು ಗುರುತಿಸಲ್ಪಡುವ ವಸ್ತು ಕಣ್ಣಿಗೆ ಬಿತ್ತು. ಅದು ಥೇಟ್ ಮೀನುಗಾರರು ಸಮುದ್ರ ಮೀನುಗಾರಿಕೆಗೆ ಉಪಯೋಗಿಸುವ ಪಾತಿ ದೋಣಿ ಅಥವಾ ಮರ್ಗಿಯ ಆಕಾರವನ್ನು ಹೋಲುತ್ತಿತ್ತು ಇದರ ಬಗ್ಗೆ ಕೂತೂಹಲ ಹೆಚ್ಚಾಗಿ ತೀರ್ಥಹಳ್ಳಿ ಯಡೂರಿನ ಸುಲಗೋಡು ಗ್ರಾಮದ ಪರುಶರಾಮ ಎಂಬ ಹೆಸರಿನ ಸ್ಥಳೀಯ ವ್ಯಕ್ತಿಯಲ್ಲಿ ವಿಚಾರಿಸಿದಾಗ ಅವರು ನಮ್ಮನ್ನು ನೇರವಾಗಿ ಅಲ್ಲಿಂದ ಐದು ಕೀ ಮೀ ದೂರದ ತಲಾಶಿ ಎಂಬ ದಟ್ಟ ಕಾಡಿಗೆ ಕರೆದುಕೊಂಡು ಹೋದರು ನಮ್ಮ ಕೂತೂಹಲಕ್ಕೆ ತೆರೆ ಎಳೆಯುವ ಸಂದರ್ಭ ಬಂದೇ ಬಿಟ್ಟಿತು.

ಚಿಣಿಕಾರರ ದೋಣಿ ಎಂದು ನಾವು ನಂಬಿದ ಪರಿಕರ ಬಿಳಿ ಹೆಬ್ಬಲೆಸು ಎಂಬ ಬೃಹತ್ ಗಾತ್ರದ ಕಾಡುಮರದ ಹೂವಿನ ಹೊರಭಾಗದಲ್ಲಿ ಹೂವನ್ನು ಆವರಿಸಿಕೊಂಡು ಬೆಳೆಯುವ ರಕ್ಷಾಕವಚ ಇದು ಎಲೆಗಳಿಕ್ಕಿಂತ ಸದೃಢವಾಗಿ ಇರುತ್ತದೆ ಪ್ರತಿಯೊಂದು ಹೂವಿನ ಗೊಂಚಲುಗಳಲ್ಲಿ ನಿಯಮಿತವಾಗಿ ಮೂರೇ ಮೂರು ಇಂತಹ ರಕ್ಷಾಕವಚಗಳು ಇರುತ್ತದೆ ಹೂಗಳು ಕಾಯಿಗಳಾಗಿ ದೊಡ್ಡದಾಗಿ ಬೆಳೆಯುತ್ತಾ ಬಿರಿಯುವ ಸಂದರ್ಭದಲ್ಲಿ ಈ ರಕ್ಷಾಕವಚಗಳು ತಮ್ಮ ಹಿಡಿತವನ್ನು ಸಡಿಲಿಸಿಕೊಂಡು ನೆಲಕ್ಕೆ ಬೀಳುತ್ತದೆ ಹೀಗೆ ಬಿದ್ದ ಇವುಗಳು ಮಳೆನೀರಿನಲ್ಲಿ ಸಮೀಪದ ವಾರಾಹಿ ಹಳ್ಳವನ್ನು ಸೇರಿಕೊಂಡು ವಾರಾಹಿ ನದಿಯ ಮೂಲಕ ಎಡಮೊಗ್ಗೆ ಅಜ್ರಿ ,ಬಸ್ರೂರು ,ಆನಗಳ್ಳಿಯ ಮೂಲಕ ನೆರೆ ನೀರಿನಲ್ಲಿ ಹರಿದು ಬಂದು ಪಂಚಾಗಂಗಾವಳಿಯನ್ನು ಸೇರಿಕೊಂಡು ಅಂತಿಮವಾಗಿ ಕಡಲ ಕಿನಾರೆಯ ವಿವಿಧ ಭಾಗಗಳಲ್ಲಿ ಹರಡಲ್ಪಡುತ್ತದೆ. ಇದು ಮೀನುಗಾರರ ಮರ್ಗಿ ದೋಣಿಯ ಪ್ರತಿರೂಪವಾಗಿದ್ದು ತೀರ್ಥಹಳ್ಳಿ ಯಡೂರು ತಲಾಶಿ ಕಾಡಿನಿಂದ ಸುಮಾರು 88 ಕೀ ಮೀ ದೂರ ಕ್ರಮಿಸಿ ಅಂತಿಮವಾಗಿ ಕರಾವಳಿಯನ್ನು ಸೇರುತ್ತದೆ .

ಈ ಬಿಳಿ ಹೆಬ್ಬಲಸು ಮರವು ಕರ್ನಾಟಕದ ಪಶ್ಚಿಮ ಘಟ್ಟಗಳ ನಿತ್ಯ ಹರಿದ್ವರ್ಣ ಮರವಾಗಿದ್ದು,ಮಲೆನಾಡಿನಲ್ಲಿ ಮುಗಿಲೆತ್ತರಕ್ಕೆ ಬೆಳೆಯುತ್ತದೆ ಜನವರಿ ಏಪ್ರಿಲ್ ತಿಂಗಳಲ್ಲಿ ಹೂಗಳು ಅರಳಿ ಜೂನ್ ತಿಂಗಳಲ್ಲಿ ಕಾಯಿಗಳು ಮಾಗುವುದು ಈ ಸಂದರ್ಭದಲ್ಲಿ ನೆಲಕ್ಕೆ ಬಿದ್ದ ರಕ್ಷಾಕವಚಗಳು ಆಷಾಢ ಮಾಸದ ಕುಂಭದ್ರೋಣ ಮಳೆಯ ನೆರೆ ನೀರಿನಲ್ಲಿ ಹರಿದು ಬಂದು ಕರಾವಳಿಯ ನದಿ ಮತ್ತು ಕಡಲು ಸೇರುವ ಪಯಣ ರೋಚಕ ಮತ್ತು ಕೂತೂಹಲಕಾರಿ ಈ ಬಿಳಿ ಹೆಬ್ಬಲಸು ಕಾಯಿಯ ಬೀಜಗಳ ಜೀವಶಕ್ತಿ ಬಹಳ ಕಡಿಮೆ ಕೃತಕ ಪುನರುತ್ಪತ್ತಿ ಸುಲಭ ಸಾಧ್ಯ ಒಂದು ಕಾಲದಲ್ಲಿ ಧಾರಾಳ ಸಂಖ್ಯೆಯಲ್ಲಿ ಮಲೆನಾಡಿನ ಕಾಡುಗಳಲ್ಲಿ ಕಂಡುಬರುತ್ತಿದ ಹೆಬ್ಬಲಸು ಮರಗಳು ಇಂದು ಕೊಡಲಿಗೆ ಆಹುತಿಯಾಗುತ್ತಿದೆ ಈ ಮರವು ಬೆಂಕಿಕಡ್ಡಿ, ಬೆಂಕಿ ಪೊಟ್ಟಣಗಳ ತಯಾರಿಕೆಗೆ ಬಳಸಲ್ಪಡುತ್ತದೆ ಈ ಮರಕ್ಕೆ ಸ್ಥಳೀಯವಾಗಿ ಕನ್ನಡದಲ್ಲಿ ಬೆಲ್ಪಾಲೆ, ಪಾಲಮನಿ, ಬನಾಟೆ ಮರ ಎಂಬ ವಿವಿಧ ಹೆಸರುಗಳಿವೆ.

ತಮ್ಮ ವಿವೇಚನೆಗೆ ಮೀರಿದ ಸಂಗತಿಗಳಿಗೆ ಅತಿಮಾನುಷತೆಯನ್ನು ಆರೋಪಿಸುವುದು ಜನಪದರ ವಿಶಿಷ್ಟ ಗುಣ. ತಾವು ಸಂಗ್ರಹಿಸಿದ ವಿವಿಧ ಕಥೆಗಳಲ್ಲಿನ ವೈವಿಧ್ಯಮಯ ಘಟನೆಗಳಿಗೆ ಸುಸಾಂಗತ್ಯವನ್ನು ಕಲ್ಪಿಸಿ ಕೂತೂಹಲಕಾರಿಯಾಗಿ, ಸ್ವಾರಸ್ಯಕರವಾಗಿಯೂ, ಅನಾವರಣಗೊಳಿಸುವ ಸೃಜನಶೀಲತೆಯ ಕಲೆ ನಮ್ಮ ಪೂರ್ವಜರಿಗೆ ಅಭೂತಪೂರ್ವವಾಗಿ ಸಿದ್ದಿಸಿರುವುದು ಕಂಡುಬರುತ್ತದೆ ಜನಪದ ನಂಬಿಕೆಯ ಸಂವೇದನೆಯನ್ನು ಅತ್ಯಂತ ದಟ್ಟವಾಗಿ ಅಭಿವ್ಯಕ್ತಿಸುವ ಮೂಲಕ ವಿಭಿನ್ನವಾದ ವಿಶಿಷ್ಟ ಕಥನಲೋಕವನ್ನು ನಮ್ಮ ಮುಂದೆ ತೆರೆದಿಟ್ಟು ನಮ್ಮ ಹಿರಿಯರು ಅದರ ಅನ್ವೇಷಣೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರಣೆ ನೀಡಿದ್ದಾರೆ. ಅಂತೂ ಇಂತೂ ಬಹಳ ದಿನಗಳಿಂದ ಮನಸ್ಸಿನಲ್ಲಿ ಕೊರೆಯುತ್ತಿದ್ದ ಚಿಣಿಕಾರರ ದೋಣಿಯ ಬಗ್ಗೆ ಸ್ಪಷ್ಟ ಉತ್ತರ ಸಿಕ್ಕಿದೆ ಅದೂ ಕೂಡಾ ಅನೀರಿಕ್ಷಿತವಾಗಿ ಚಿಣಿಕಾರರಿಗೆ ಪ್ರಿಯವೆಂದು ಹೇಳಲಾದ ಆಷಾಡ ಮಾಸದಲ್ಲಿ ಎಂಬುದು ಇಲ್ಲಿ ಗಮನಾರ್ಹ ಸಂಗತಿಯಾಗಿದೆ .

ಸುಧಾಕರ್ ಖಾರ್ವಿ
www.kharvionline.com

4 thoughts on “ಚಿಣಿಕಾರನ ದೋಣಿ (ಚಿನ್ಬೂತ ವಾಡೆ) ಹುಡುಕುತ್ತಾ ಕಾನನದ ಹಾದಿಯಲ್ಲಿ

  1. ಕೌತುಕ ಪೂರ್ಣ ವಿಷಯ. ಅರ್ಥ ಗರ್ಭಿತ ಪ್ರಸ್ತುತಿ.ನಂಬಿಕೆಯ ಮೇಲೆ ಕ್ಷಕಿರಣ

Leave a Reply

Your email address will not be published. Required fields are marked *