ಕಡಲಾಳದ ಅದ್ಬುತ ಕಲಾವಿದ ಚೊಂದೆ ಮೀನು

ಪ್ರಪಂಚದ ಯಾವ ಜೀವಿಗಳೂ ಮೂಕವಲ್ಲ ಅವೆಲ್ಲಕ್ಕೂ ತಮ್ಮದೇ ಅದ ಸಂಭಾಷಣೆ ವಿಶಿಷ್ಟವಾದ ಕಲೆ ಇದೆ ಸ್ಪರ್ಶ, ಧ್ವನಿ, ವಾಸನೆ, ಸಂಜ್ಞೆಗಳು ಅವುಗಳ ಜೀವನ ನಿರ್ವಹಣೆಗೆ ಸಹಕಾರಿಯಾಗಿದೆ ಅವುಗಳು ತಮ್ಮ ಆಹಾರ ಹುಡುಕಾಟಕ್ಕಾಗಲಿ, ಮರಿಗಳ ಪಾಲನೆಗಾಗಲಿ, ಪ್ರೀತಿ ಪ್ರಣಯಗಾಗಲಿ, ಶತ್ರುಗಳಿಂದ ಪಾರಾಗಲಾಗಲಿ, ಹಲವು ವಿಧಗಳಲ್ಲಿ ತಮ್ಮ ಜಾಣ್ಮೆಯನ್ನು ಪ್ರದರ್ಶಿಸುತ್ತದೆ. ಕೆಲವು ಜೀವಜಂತುಗಳು ಪ್ರಣಯ ಸಂಬಂಧ ಬೆಸೆದುಕೊಳ್ಳಲು ಹಲವು ತರದ ವೈಶಿಷ್ಟ್ಯಪೂರ್ಣ ಕಲಾವಂತಿಕೆಯನ್ನು ಪ್ರದರ್ಶನ ಮಾಡುತ್ತದೆ. ಈ ನಿಟ್ಟಿನಲ್ಲಿ ಗಮನಿಸಿದರೆ ಪಫರ್ ಫಿಶ್ ಎಂದು ಅಂಗ್ಲ ಭಾಷೆ ಯಲ್ಲಿ ಕರೆಯಲ್ಪಡುವ ಚೊಂದೆ ಮೀನು ಅಗ್ರ ಪಂಕ್ತಿಯಲ್ಲಿ ರಾರಾಜಿಸಲ್ಪಡುತ್ತದೆ.

ಈ ಚೊಂದೆ ಮೀನು ಶಿಷ್ಟ ಕನ್ನಡದಲ್ಲಿ ಊದುಮೀನು ಎಂದು ಕರೆದರೆ ಗ್ರಾಮ್ಯ ಕನ್ನಡದಲ್ಲಿ ಕಪ್ಪೆ ಮೀನು ,ಚೊಂದಕೆಪ್ಪೆ ಮೀನು ,ಇತ್ಯಾದಿ ಹೆಸರಿನಿಂದ ಕರೆಯುತ್ತಾರೆ ಶತ್ರುಗಳು ಇದರ ಮೇಲೆ ದಾಳಿ ಮಾಡಿದಾಗ, ತನ್ನಿಂತಾನೇ ಇದರ ದೇಹ ಭಾರೀ ಗಾತ್ರದಲ್ಲಿ ಊದಿಕೊಂಡು ಬಿಡುತ್ತದೆ ಶತ್ರುಗಳು ಎಷ್ಟೇ ಪ್ರಯತ್ನ ಪಟ್ಟರೂ ಇವುಗಳನ್ನು ತಿನ್ನಲು ಸಾಧ್ಯವಾಗುವುದಿಲ್ಲ ಪ್ರಮುಖವಾಗಿ ಇವುಗಳ ಹೊಟ್ಟೆ ಭಾಗ ಊದಿಕೊಳ್ಳುವುದರಿಂದ , ಈ ಭಾಗದ ವಿಷಕಾರಿ ಅಂಶದ ಕಮಟು ವಾಸನೆಯಿಂದ ಶತ್ರುಗಳು ಪರಾರಿಯಾಗುತ್ತವೆ. ಸಕಲ ಜೀವಜಂತುಗಳಿಗಿಂತ ಭಿನ್ನವಾಗಿ ಇದರ ಪ್ರಣಯಾಚರಣೆಯ ಪ್ರಕ್ರಿಯೆ ಕಡಲಾಳದ ಮರಳಿನಲ್ಲಿ ವೈಶಿಷ್ಟ್ಯಪೂರ್ಣ ಕಲಾವಂತಿಕೆಯಿಂದ ನೇರವೇರುತ್ತದೆ ಗಂಡು ಚೊಂದೆ ಮೀನು ಹೆಣ್ಣು ಚೊಂದೆ ಮೀನನ್ನು ಆಕರ್ಷಿಸಲು ಕಡಲಾಳದ ಮರಳಿನಲ್ಲಿ ವೃತಾಕಾರದಲ್ಲಿ ಸುಂದರವಾದ ಕಲಾಕೃತಿಯನ್ನು ರಚಿಸುತ್ತದೆ ಈ ಕಲಾಕೃತಿ ಎಷ್ಟೊಂದು ಪರಿಪೂರ್ಣ ವಾಗಿರುವುದೆಂದರೆ, ಇದರ ವಿಸ್ತೀರ್ಣ ಕರಾರುವಾಕ್ಕಾಗಿ ಎರಡು ಮೀಟರ್ ಹೊಂದಿರುತ್ತದೆ ಇಂಜಿನಿಯರಿಂಗ್ ಕೌಶಲ್ಯದ ಈ ಕಲಾಕೃತಿ ರೇಖಾಗಣಿತದ ಸೂತ್ರದಂತೆ ನಿಖರವಾದ ಸುತ್ತಳತೆ ಹೊಂದಿರುತ್ತದೆ ಈ ಚೊಂದೆ ಮೀನು ಹೊಟ್ಟೆಯ ತಳಭಾಗದಲ್ಲಿರುವ ತನ್ನ ಏಕೈಕ ಈಜು ರೆಕ್ಕೆಯನ್ನು ಉಪಯೋಗಿಸಿಕೊಂಡು, ದಿನದ 24 ತಾಸು ಬಿಡುವುದಿಲ್ಲದೇ ಸಮಯ ವ್ಯಯಿಸಿ, ಆರು ದಿನಗಳ ಅವಧಿಯಲ್ಲಿ ಈ ಸುಂದರವಾದ ಕಲಾಕೃತಿಯನ್ನು ರಚಿಸುತ್ತದೆ. ಬಳಿಕ ಈ ಕಲಾಕೃತಿಯನ್ನು ಮತ್ತಷ್ಟೂ ಅಲಂಕೃತಗೊಳಿಸಲು,ಮಳಿವೆಯ ಚಿಪ್ಪು ಗಳನ್ನು ಸೂತ್ತಲೂ ಜೋಡಿಸುತ್ತದೆ.

ಈ ಸುಂದರ ಕಲಾಕೃತಿಗೆ ಮನಸೋತ ಹೆಣ್ಣು ಚೊಂದೆಮೀನು ಇದರ ವೃತ್ತದೊಳಗೆ ಬಂದು ಗಂಡು ಚೊಂದೆ ಮೀನಿನ ಜೊತೆಗೆ ಪ್ರಣಯಾಚರಣೆಯಲ್ಲಿ ತೊಡಗುತ್ತದೆ ಬಳಿಕ ಇದರಲ್ಲಿ ಸಂತಾನೋತ್ಪತ್ತಿ ಪ್ರಕ್ರಿಯೆ ಜರುಗುತ್ತದೆ ಕಡಲಾಳದಲ್ಲಿ ಚೊಂದೆ ಮೀನುಗಳು ರಚಿಸುವ ಈ ಮರಳಿನ ಸುಂದರ ಕಲಾಕೃತಿಯನ್ನು ಮೊದಲು ಜಪಾನ್ ದೇಶದ ಕಡಲಿನಲ್ಲಿ ಸಾಗರ ವಿಜ್ಞಾನಿಗಳು ಕಂಡುಹಿಡಿದರು ಬಳಿಕ ಫೆಸಿಫಿಕ್ ಸಾಗರದ ಇತರ ದೇಶಗಳ ಕಡಲಿನಲ್ಲಿ ಈ ರಚನೆಗಳನ್ನು ಕಂಡುಹಿಡಿಯಲಾಯಿತು ಕಡಲಾಳದ ಅದ್ಬುತ ಕಲಾವಿದ ಎಂಬ ಖ್ಯಾತಿಗೆ ಚೊಂದೆ ಮೀನು ಪಾತ್ರವಾಯಿತು.

ಸಾಮಾನ್ಯವಾಗಿ ಈ ಚೊಂದೆ ಮೀನುಗಳು ನದಿ ಮತ್ತು ಕಡಲಿನ ಉಭಯವಾಸಿಗಳಾಗಿದ್ದರೂ,ಹೆಚ್ಚಿನ ಪ್ರಭೇಧಗಳು ಕಡಲಿನಲ್ಲಿ ಕಂಡುಬರುತ್ತದೆ ಇದರಲ್ಲಿ 120 ಕ್ಕೂ ಹೆಚ್ಚು ಪ್ರಭೇದಗಳು ಇದ್ದು ಕೆಲವೊಂದು ಜಾತಿಯ ಚೊಂದೆ ಮೀನುಗಳು ತೀವ್ರ ವಿಷಕಾರಿಯಾಗಿದ್ದು, ಸೈನೈಡ್ ವಿಷಕ್ಕಿಂತ ಸಾವಿರ ಪಟ್ಟು ವಿಷವನ್ನು ಹೊಂದಿರುತ್ತದೆ. ಚೊಂದೆ ಮೀನು ಜಪಾನೀಯರ ಅಚ್ಚುಮೆಚ್ಚಿನ ಆಹಾರವಾಗಿದ್ದು,ಚೊಂದೆ ಮೀನಿನ ಉದರಭಾಗದ ವಿಷಕಾರಿ ಭಾಗಗಳನ್ನು ಬಾಣಸಿಗರು ಅತ್ಯಂತ ಜಾಣ್ಮೆಯಿಂದ ತೆಗೆದು ರುಚಿಕರವಾದ ಖಾದ್ಯಗಳನ್ನು ತಯಾರಿಸುತ್ತಾರೆ. ಇದಕ್ಕೆ ಜಪಾನ್ ದೇಶದಲ್ಲಿ ವಿಶೇಷ ಬೇಡಿಕೆ ಇರುತ್ತದೆ ವಿಶೇಷ ತರಬೇತಿ ಪಡೆದ ಬಾಣಸಿಗರನ್ನು ಇಲ್ಲಿ ಬಳಸಿಕೊಳ್ಳಲಾಗುತ್ತದೆ ಕೆಲವು ವರ್ಷಗಳ ಹಿಂದೆ ಮೀನುಬಲೆಗೆ ಚೊಂದೆ ಮೀನು ಸಿಕ್ಕಿದರೆ ಅದನ್ನು ತೆಗೆದು ಬಿಸಾಡುತ್ತಿದ್ದರು ಈಗ ಹಾಗಿಲ್ಲ ಅದಕ್ಕೂ ಡಿಮಾಂಡ್ ಬಂದಿದೆ ಫಿಶ್ ಮಿಲ್ ಗಳು ಈ ಚೊಂದೆ ಮೀನುಗಳನ್ನು ಖರೀದಿಸಿ ಅದರ ವಿಷಕಾರಿ ಭಾಗಗಳನ್ನು ಶುಚಿಗೊಳಿಸಿ ಹೊರದೇಶಗಳಿಗೆ ರಪ್ತು ಮಾಡುತ್ತದೆ ಹಾಗಾಗಿ ಚೊಂದೆ ಮೀನುಗಳನ್ನು ನಿರುಪಯುಕ್ತ ಜಲಚರ ಎಂದು ಬಿಸಾಡುವಂತ್ತಿಲ್ಲ ತನ್ನ ವಿಶಿಷ್ಟದಾಯಕ ರಕ್ಷಣಾ ತಂತ್ರಗಳಿಂದ ಬದುಕಿಗಾಗಿ ಹೋರಾಟ ನಡೆಸುವ ಅಪರೂಪದ ಚೊಂದೆ ಮೀನುಗಳು ಈ ಸೃಷ್ಟಿಯ ಅದ್ಬುತ ಸೃಜನಶೀಲ ಕಲಾವಿದ ಎಂಬ ಖ್ಯಾತಿಗೆ ಪಾತ್ರವಾಗಿದೆ.

ಈ ಚೊಂದೆ ಮೀನುಗಳನ್ನು ಕೃತಕವಾಗಿ ಸಾಕುವ ಜಪಾನ್ ದೇಶದ ಸಾಗರ ವಿಜ್ಞಾನಿಗಳ ಸಂಶೋಧನೆ ಯಶಸ್ವಿಯಾಗಿದೆ ಅಲ್ಲಿ ಬೃಹತ್ ಪ್ರಮಾಣದಲ್ಲಿ ಚೊಂದೆ ಮೀನುಗಳನ್ನು ಉತ್ಪಾದಿಸುವ ಪ್ರಕ್ರಿಯೆ ದೊಡ್ಡ ಉದ್ಯಮವಾಗಿ ಬೆಳೆದಿದೆ ನೀರಿನಿಂದ ತೆಗೆದ ಬಳಿಕವೂ ಚೊಂದೆ ಮೀನುಗಳು ಹಲವು ಗಂಟೆಗಳ ಕಾಲ ಬದುಕುಳಿಯುವ ಸಾಮರ್ಥ್ಯ ಹೊಂದಿದ್ದು, ಕಡಲಾಳದ ಕುದಿಬಿಂದುವಿನ ಉಷ್ಣತೆಯ ತಾಪಮಾನದಲ್ಲೂ ಬದುಕಿ ಉಳಿಯುವ ಅವುಗಳ ಸಾಮರ್ಥ್ಯ ನಮ್ಮೆಲ್ಲರನ್ನು ನಿಬ್ಬೆರಗಾಗಿಸುತ್ತದೆ.

ಉಮಾಕಾಂತ ಖಾರ್ವಿ ಕುಂದಾಪುರ

Leave a Reply

Your email address will not be published. Required fields are marked *