KharviFirst…”ನಮ್ಮಿಂದ ನಮ್ಮವರಿಗಾಗಿ”

ನಮ್ಮಿಂದ ನಮ್ಮವರಿಗಾಗಿ

ಶತಶತಮಾನಗಳ ಹಲವು ಸ್ಥಿತ್ಯಂತರಗಳ ಶರಧಿಯನ್ನು ದಾಟಿ ಕೊಂಕಣಿ ಖಾರ್ವಿ ಸಮಾಜ ಹಲವು ಕ್ಷಿತಿಜದೆಡೆಗಳಲ್ಲಿ ತನ್ನನ್ನು ಸಮರ್ಪಿಸಿಕೊಂಡಿದೆ ಹದಿನಾರನೇ ಶತಮಾನದ ಮಧ್ಯಭಾಗದಲ್ಲಿ ಪೋರ್ಚುಗೀಸ್ ಸಾಮ್ರಾಜ್ಯದ ರಾಜಕೀಯ ವಿಪ್ಲವ ಧರ್ಮ ಕ್ಷೋಭೆಗೆ ಕಾರಣವಾಗಿ ಗೋವಾದಿಂದ ವಲಸೆ ಬಂದ ಹಲವು ಕೊಂಕಣಿ ಮಾತನಾಡುವ ಸಮುದಾಯಗಳಲ್ಲಿ ನಮ್ಮ ಸಮುದಾಯವೂ ಒಂದು. ವಿವಿಧ ಕವಲುಗಳಾಗಿ ಹರಡಿಹೋದ ಕೊಂಕಣಿ ಭಾಷಿಕರು ಆಯಾ ಕಡೆಗಳಲ್ಲಿ ನೆಲೆನಿಂತರು ಮೀನುಗಾರಿಕೆ ಕುಲಕಸಬಾದ ನಮ್ಮ ಸಮಾಜ ಕರಾವಳಿ ನದಿಪಾತ್ರ ಮತ್ತು ಸಮುದ್ರ ತೀರಗಳಲ್ಲಿ ನೆಲೆಯೂರಿತು ಕಾಲಗತಿಯಲ್ಲಿ ಮೀನುಗಾರಿಕೆಯಲ್ಲಿ ಬದುಕು ಕಟ್ಟಿಕೊಂಡ ನಮ್ಮ ಸಮಾಜ ಕಠಿಣ ಪರಿಶ್ರಮದ ಮತ್ತು ಕಡುಕಷ್ಟ ಕಾರ್ಪಣ್ಯಗಳಲ್ಲಿ ನಲುಗಿತ್ತು ಮಧ್ಯವರ್ತಿಗಳು ನಮ್ಮ ಸಮಾಜದ ಮೀನುಗಾರರು ಹಿಡಿದು ಬಂದ ಮೀನುಗಳಿಗೆ ಕಡಿಮೆ ಬೆಲೆ ಕಟ್ಟಿ ವ್ಯವಹಾರಗಳ ಪ್ರಕ್ರಿಯೆಗಳಲ್ಲಿ ಅಪಾರ ಲಾಭ ಮಾಡಿಕೊಂಡರೆ, ಮೀನು ಹಿಡಿದು ತಂದ ಮೀನುಗಾರರಿಗೆ ನ್ಯಾಯಯುತ ಬೆಲೆ ಸಿಗುತ್ತಿರಲಿಲ್ಲ ಇಲ್ಲಿ ಶೋಷಣೆ ವಿಜೃಂಭಿಸಿತು.

ಮೀನುಗಾರರು ಬಡವರಾಗೀಯೇ ಉಳಿದರು ಮಧ್ಯವರ್ತಿಗಳ ಜೇಬು ಭರ್ತಿಯಾಯಿತು ಕಾಲಕ್ರಮೇಣ ನಮ್ಮ ಸಮಾಜದ ಮೀನುಗಾರರು ಯಾಂತ್ರೀಕೃತ ದೋಣಿ, ಬೋಟ್ ಗಳನ್ನು ಮಾಡುವುದರ ಮೂಲಕ ಮತ್ತು ಹಲವು ಫಿಶ್ ಪಾರ್ಟಿಗಳು ಹುಟ್ಟಿಕೊಂಡ ಹಿನ್ನೆಲೆಯಲ್ಲಿ ಪರಿಸ್ಥಿತಿ ಸ್ವಲ್ಪ ಮಟ್ಟಿನ ಸುಧಾರಣೆ ಕಂಡಿತು ಇಂದು ಖಾರ್ವಿ ಸಮಾಜ ಹಲವು ಕ್ಷೇತ್ರಗಳಲ್ಲಿ ಹರಡಿಕೊಂಡಿದೆ. ವಾಣಿಜ್ಯ ಉದ್ಯಮ ಸೇರಿದಂತೆ ವಿಭಿನ್ನ ಉದ್ಯಮ ವ್ಯವಹಾರಗಳಲ್ಲಿ ತಕ್ಕ ಮಟ್ಟಿಗೆ ನೆಲೆ ಕಂಡುಕೊಂಡಿದೆ ಆದರೆ ಉದ್ಯಮ ವ್ಯವಹಾರಗಳಲ್ಲಿ ನೆಲೆಗೊಂಡ ನಮ್ಮವರಿಗೆ ಸಮಾಜ ಭಾಂಧವರಿಂದ ಸೂಕ್ತ ಬೆಂಬಲ ಪ್ರೋತ್ಸಾಹ ಸಿಗುತ್ತಿಲ್ಲ ಎಂಬ ಕೊರಗು ಇದೆ.

ನಮ್ಮ ಸಮಾಜ ಭಾಂಧವರು ನಡೆಸಿಕೊಂಡು ಬರುತ್ತಿರುವ ಉದ್ಯಮ ವ್ಯವಹಾರದ ಕೊಡು ಕೊಳ್ಳುವ ಪ್ರಕ್ರಿಯೆಯಲ್ಲಿ ಸಮಾಜ ಭಾಂಧವರು ಸಕ್ರಿಯವಾಗಿ ಪಾಲ್ಗೊಂಡರೆ ಖಂಡಿತಾ ನಮ್ಮ ಸಮಾಜ ಅಭಿವೃದ್ಧಿಯಾಗುತ್ತದೆ. ಇಲ್ಲಿ ಖಾರ್ವಿ ಫಸ್ಟ್ (kharviFirst) ಎಂಬ ಮೂಲಮಂತ್ರ ನಮ್ಮದಾಗಬೇಕಾಗಿದೆ ಪ್ರತಿಯೊಂದು ಸಮಾಜವೂ ತಮ್ಮ ಏಳಿಗೆಗಾಗಿ ಅದರ ವರ್ತುಲದ ಉದ್ಯಮ ವ್ಯವಹಾರಗಳಿಗೆ ಪ್ರೋತ್ಸಾಹ ಬೆಂಬಲ ಸಹಕಾರ ನೀಡಿ ಮುನ್ನಡೆಯುತಿರುವುದನ್ನು ನಾವಿಲ್ಲಿ ಗಮನಿಸಬಹುದಾಗಿದೆ. ಅದೇ ರೀತಿ ನಮ್ಮ ಸಮಾಜ ಭಾಂಧವರ ಉದ್ಯಮ ವ್ಯವಹಾರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಪಾಲ್ಗೊಂಡು ಅವರಿಗೆ ಸಹಕಾರ , ಬೆಂಬಲ, ಪ್ರೋತ್ಸಾಹ ನೀಡಿದರೆ ಸಂಪನ್ಮೂಲ ನಮ್ಮೊಳಗೆ ಕ್ರೋಢೀಕರಿಸಿದಂತಾಗುತ್ತದೆ. .

ಇದಕ್ಕೆ ದೃಡವಾದ ಇಚ್ಛಾಶಕ್ತಿ ಇರಬೇಕು ನಮ್ಮವರಿಗೆ ಬೆಂಬಲ ನೀಡುವ ಪ್ರಕ್ರಿಯೆ ಎಲ್ಲಾ ಕ್ಷೇತ್ರಗಳಲ್ಲೂ ಕಾರ್ಯ ಗತಗೊಳ್ಳಬೇಕಾಗಿದೆ ಇದು ನಮ್ಮ ಸಮಾಜದ ಉತ್ಕರ್ಷಕ್ಕೆ ನಾಂದಿಯಾಗುತ್ತದೆ, ಸಮಾಜ ಭಾಂಧವರು ಖಾರ್ವಿ ಫಸ್ಟ್ ಮೂಲ ಮಂತ್ರದ ಪ್ರಮುಖ ಉದ್ದೇಶವಾದ ನಮ್ಮಿಂದ, ನಮ್ಮವರಿಗಾಗಿ ಎಂಬ ಧ್ಯೇಯ ವಾಕ್ಯ ನಮ್ಮದಾಗಲಿ ,ಖಾರ್ವಿ ಸಮಾಜದ ಅಭಿವೃದ್ಧಿಯ ನಾಗಲೋಟ ಸಾಂಗವಾಗಿ ಮುನ್ನಡೆಯಲಿ ಎಂಬುದೇ ನಮ್ಮ ಕಳಕಳಿ ಮತ್ತು ಹಾರೈಕೆಯಾಗಿರುತ್ತದೆ.

ವಂದನೆಗಳೊಂದಿಗೆ

ಸುಧಾಕರ್ ಖಾರ್ವಿ
Editor
www.kharvionline.com

2 thoughts on “KharviFirst…”ನಮ್ಮಿಂದ ನಮ್ಮವರಿಗಾಗಿ”

  1. ಸಮಾಜದ ಅಭಿವೃದ್ಧಿಗೆ ಪರಸ್ಪರ ಸಹಕಾರ ಮನೋಭಾವ ಅತ್ಯಗತ್ಯ. ಖಾರ್ವಿ ಫಸ್ಟ್ ಮೂಲಮಂತ್ರ ನಮ್ಮಿಂದ ನಮ್ಮವರಿಗಾಗಿ ಪ್ರಸ್ತುತ ಪಡಿಸುತ್ತಿರುವ ಸಕಾಲಿಕ ಅಂಶಗಳ ವಿಚಾರಗಳು ಉತ್ತಮವಾಗಿ ಲೇಖನದಲ್ಲಿ ಮೂಡಿ ಬಂದಿದೆ. ಧನ್ಯವಾದಗಳು👌👍👍👌🙏

  2. kharvifirst ಶೀರ್ಷಿಕೆಯೊಂದಿಗೆ ನಿಮ್ಮಲೇಖನ ಉತ್ತಮವಾಗಿ ಮೂಡಿ ಬಂದಿದೆ. ಧನ್ಯವಾದಗಳು.

    ಒಂದು ದೇಶ ಅಭಿವೃದ್ಧಿ ಹೊಂದಬೇಕಾದರೆ ದೇಶದಲ್ಲಿರುವ ಪ್ರತಿಯೊಂದು ಸಮುದಾಯ ಅಭಿವೃದ್ಧಿ ಹೊಂದಬೇಕು. ಎಲ್ಲಾ ಸಮಾಜದವರು ತಮ್ಮ ತಮ್ಮ ಸಮುದಾಯದ ಪ್ರಗತಿಗಾಗಿ ಶ್ರಮಿಸುತ್ತಿದ್ದಾರೆ.
    ನಮ್ಮ ಸಮಾಜದ ಹಲವಾರು ಸಂಘ ಸಂಸ್ಥೆಗಳು ಕೂಡ ಈ ನಿಟ್ಟಿನಲ್ಲಿ ತುಂಬಾ ವರ್ಷಗಳಿಂದ ಕಾರ್ಯ ಪ್ರವರ್ಥರಾಗಿದ್ದಾರೆ. ಖಾರ್ವಿ ಸಮಾಜದ ಪ್ರಗತಿಗಾಗಿ ಶ್ರಮಿಸುತ್ತಿರುವ ಎಲ್ಲಾ ಸಂಘ ಸಂಸ್ಥೆಗಳಿಗೆ ಈ ಸಂದರ್ಭದಲ್ಲಿ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇನೆ.

    ಶೀಘ್ರಗತಿಯಲ್ಲಿ ಒಂದು ಸಮಾಜ ಅಭಿವೃದ್ದಿ ಹೊಂದಬೇಕಾದರೆ ಎಲ್ಲಾರೂ ಒಗ್ಗಟ್ಟಿನಲ್ಲಿ ಮುಂದುವರಿಯುವ ಅವಶ್ಯಕತೆ ಇದೆ. ಮುಂದಿನ ದಿನಗಳಲ್ಲಿ ಖಾರ್ವಿ ಸಮಾಜದ ಹಿರಿಯರು, ವಿದ್ಯಾವಂತರು, ಬುದ್ದಿಜೀವಿಗಳು, ಸಮಾಜ ಸೇವಕರು ಒಗ್ಗಟ್ಟಿನಲ್ಲಿ ಸೇವೆ ಸಲ್ಲಿಸುವ ಮೂಲಕ ಖಾರ್ವಿ ಸಮಾಜವನ್ನು ಒಂದು ಮಾದರಿ ಸಮಾಜವನ್ನಾಗಿಸಲು ಸಾದ್ಯ.

Leave a Reply

Your email address will not be published. Required fields are marked *