ಬದುಕು ನಾವು ಬಯಸಿದಂತೆ ತೆರೆದುಕೊಳ್ಳುವುದಿಲ್ಲ ಆದರೆ ನಮ್ಮೆದುರು ತೆರೆದುಕೊಳ್ಳುವ ಬದುಕಿನಲ್ಲಿ ನಾವು ಅತ್ಯುತ್ತಮ ರೀತಿಯಲ್ಲಿ ಬದುಕಿ ತೋರಿಸಬಹುದು ಎನ್ನುವ ಮಾತಿಗೆ ಸುಂದರ ನಿದರ್ಶನವಾಗಿ ಧಾರವಾಡ ಅಣ್ಣೀಗೇರಿಯಲ್ಲಿ ನೆಮ್ಮದಿಯ ಬದುಕನ್ನು ಕಟ್ಟಿಕೊಂಡು ನೆಲೆಯಾಗಿರುವ ಖಾರ್ವಿ ಸಮಾಜ ಭಾಂಧವರು ಉದಾಹರಣೆಯಾಗಿ ಕಂಗೊಳಿಸುತ್ತಾರೆ.
ಕಠಿಣ ಪರಿಶ್ರಮಿಗಳು, ಛಲವಂತರು ಎಲ್ಲಿ ಬೇಕಾದರೂ ಸಲ್ಲುತ್ತಾರೆ, ಎಲ್ಲಿ ಬೇಕಾದರೂ ಪ್ರಜ್ಞಾಪೂರ್ವಕವಾಗಿ ತಮ್ಮನ್ನು ವಿಧೇಯಿಸಿಕೊಳ್ಳುತ್ತಾರೆ ಎಂದು ಖಾರ್ವಿ ಸಮಾಜ ಭಾಂಧವರು ಸಾಕ್ಷಿಪ್ರಜ್ಞೆಯಾಗಿದ್ದಾರೆ. ಸರಿಸುಮಾರು ಆರವತ್ತು ವರ್ಷಗಳ ಹಿಂದೆ ಅಂದರೆ 1960 ನೇ ಇಸ್ವಿಯಲ್ಲಿ ಕುಂದಾಪುರ ಖಾರ್ವಿಕೇರಿಯ ಭದ್ರಜಿ ಮನೆ ವಿಠ್ಠಲ ಖಾರ್ವಿಯವರು ಹುಬ್ಬಳ್ಳಿ ಕಾಮತ್ ಹೋಟೆಲ್ ಕೆಲಸಕ್ಕೆ ಸೇರಿದರು. ಅಲ್ಲಿ ಹಲವು ವರ್ಷ ಗಳ ದುಡಿಮೆಯ ಬಳಿಕ ತಾವೇ ಏಕೆ ಹೋಟೆಲ್ ತೆರೆಯಬಾರದು ಎಂಬ ಯೋಚನೆ ಅವರ ಮನದಲ್ಲಿ ಮೂಡಿ ಬಂತು. ಕಾಮತ್ ಹೋಟೆಲ್ ಕೆಲಸದ ಅನುಭವ ಮತ್ತು ಏನಾದರೂ ಸಾಧಿಸಬೇಕೆನ್ನುವ ಅವರ ಹಂಬಲ ಯೋಚನೆಗಳಿಗೆ ಇಂಬಾಗಿ ಪರಿಪಕ್ವವಾಗುವ ಕಾಲ ಕೂಡಿ ಬಂತು. ಪರಿಣಾಮವಾಗಿ 1971 ರಲ್ಲಿ ಭದ್ರಜಿ ವಿಠ್ಠಲ ಖಾರ್ವಿ ಅಣ್ಣೀಗೇರಿಯಲ್ಲಿ ಸಣ್ಣದಾದ ಚಾ ತಿಂಡಿ ಹೋಟೆಲ್ ಆರಂಭಿಸಿದರು. ಅವರೊಂದಿಗೆ ಸಹೋದರ ಸೂರ್ಯ ಲಕ್ಮಣ ಖಾರ್ವಿ ಜೊತೆಯಾದರು.
ಕಠಿಣವಾದ ಪರಿಶ್ರಮದ ದುಡಿಮೆಯ ಗಳಿಕೆಯಲ್ಲಿ ಸ್ವಂತದಾದ ಜಾಗ ಖರೀದಿಸಿ ಸ್ವಲ್ಪ ದೊಡ್ಡ ರೂಪದಲ್ಲಿ ಹೋಟೆಲ್ ಆರಂಭಿಸಿದರು. ಬದುಕು ನೆಲೆಗೊಂಡ ಬಳಿಕ ಮದುವೆ, ಮಕ್ಕಳು ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಹೀಗೆ ಭದ್ರಜಿ ಕುಟುಂಬ ವಿಸ್ತಾರವಾಗಿ, ವಂಶವೃಕ್ಷ ಹಲವು ಕವಲಾಗಿ ಹರಡಿಕೊಂಡಿತು. ಪ್ರಸ್ತುತ ಅಣ್ಣೀಗೇರಿಯಲ್ಲಿ ಖಾರ್ವಿ ಸಮಾಜದ ಎಂಟು ಕುಟುಂಬಗಳು ನೆಲೆಯಾಗಿದ್ದು, ಸುಮಾರು ಆರವತ್ತು ಜನರ ಕೂಡುಕುಟುಂಬಗಳಿವೆ.
ನೆಮ್ಮದಿಯ ಬದುಕು ಅಲ್ಲಿ ನೆಲೆಗೊಂಡಿದೆ ಈ ಕುಟುಂಬದೊಂದಿಗೆ ಸಾಸ್ತಾನ ಕೋಡಿಯ ಕುಟುಂಬವೊಂದು ಅವರೊಂದಿಗೆ ಸೇರ್ಪಡೆಗೊಂಡಿದೆ ಅಷ್ಟೇ ಅಲ್ಲದೇ ಹುಬ್ಬಳ್ಳಿಯ ಪಾಳ ಎಂಬ ಊರಿನಲ್ಲಿ ಖಾರ್ವಿ ಸಮಾಜದ ಸುಮಾರು ಹತ್ತು ಕುಟುಂಬಗಳು ನೆಲೆಯಾಗಿದೆ.
ನಾನು ಉದ್ಯೋಗ ಕಾರ್ಯದ ನಿಮಿತ್ತ ಹುಬ್ಬಳ್ಳಿಯಿಂದ ಉತ್ತರ ಕರ್ನಾಟಕದ ಗುಲ್ಬರ್ಗ ಕಡೆಗೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ನವಲಗುಂದದಲ್ಲಿ ಅಣ್ಣಿಗೇರಿಗೆ ಹೋಗುವ ದಾರಿಯ ಮೈಲುಗಲ್ಲನ್ನು ನೋಡಿ, ಅಣ್ಣೀಗೇರಿಯ ಖಾರ್ವಿ ಸಮಾಜ ಭಾಂಧವರ ನೆನಪಾಗಿ, 18 ಕಿಲೋಮೀಟರ್ ದೂರದ ಅಣ್ಣಿಗೇರಿಗೆ ಪ್ರಯಾಣ ಬೆಳೆಸಿದೆ ಅಲ್ಲಿ ಹೋದಾಗ ನನ್ನನ್ನು ಭಾವನಾತ್ಮಕವಾಗಿ ಬರಮಾಡಿಕೊಂಡು ತಮ್ಮ ಬದುಕಿನ ಎಲ್ಲಾ ವಿವರಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.
ಅಣ್ಣೀಗೇರಿ ಕನ್ನಡದ ಆದಿಕವಿ ಪಂಪನ ಜನ್ಮ ಸ್ಥಳವಾಗಿದೆ ಇಲ್ಲಿನ ಶೇಂಗಾ ಎಣ್ಣೆ, ಹತ್ತಿ ಮತ್ತು ಬ್ಯಾಡಗಿ ಮೆಣಸು ಇತ್ಯಾದಿ ತುಂಬಾ ಪ್ರಸಿದ್ಧವಾಗಿದ್ದು, ಶೇಕಡಾ ಆರವತ್ತು ಪ್ರಮಾಣದಲ್ಲಿ ಬ್ಯಾಡಗಿ ಮೆಣಸು ಅಣ್ಣೀಗೇರಿಯಲ್ಲಿ ಬೆಳೆಯಲಾಗುತ್ತದೆ ಹೊಲಗದ್ದೆಗಳ ಕೃಷಿ ಉತ್ಪನ್ನಗಳು,ಇತರ ಕೈಗಾರಿಕೆಗಳು ಈ ಊರಿನ ಜೀವಸೆಲೆಯಾಗಿದೆ. ಇಂದು ಅಣ್ಣೀಗೇರಿಯಲ್ಲಿ ನಮ್ಮ ಸಮಾಜ ಭಾಂಧವರು, ವಿವಿಧ ಉದ್ಯೋಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಸ್ವಂತ ಉದ್ಯೋಗ, ಗ್ಯಾರೇಜ್, ಸರಕಾರಿ ಉದ್ಯೋಗ, ಶಿಕ್ಷಕ ವೃತ್ತಿ, ಮಾನವ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸ್ಥಳೀಯರೊಂದಿಗೆ ಉತ್ತಮ ಭಾಂಧವ್ಯ ಬೆಸೆದುಕೊಂಡಿರುವ ನಮ್ಮ ಸಮಾಜ ಭಾಂಧವರ ಮೆಡಿಕಲ್ ಶಾಪ್ ಒಂದು ಅಣ್ಣೀಗೇರಿಯಲ್ಲಿ ದಿನದ 24 ತಾಸು ಕಾರ್ಯ ನಿರ್ವಹಿಸುತ್ತದೆ.ಸ್ಥಳೀಯ ಜನರು ತಮ್ಮ ಸಣ್ಣಪುಟ್ಟ ಕಾಯಿಲೆ ಕಸಾಲೆಗಳಿಗೆ ಈ ಮೆಡಿಕಲ್ ಶಾಪ್ ನ್ನು ವಿಶ್ವಾಸಪೂರ್ವಕವಾಗಿ ಅವಲಂಬಿಸಿಕೊಂಡಿರುವುದು ನಮ್ಮ ಸಮಾಜ ಭಾಂಧವರ ಸೇವಾ ಕೈಂಕರ್ಯದ ಹಿರಿಮೆಯಾಗಿದೆ.
ಕಲ್ಯಾಣ ಚಾಲುಕ್ಯರ ಕಾಲದ ಶ್ರೀ ಅಮೃತೇಶ್ವರ ದೇಗುಲ ನಮ್ಮ ಸಮಾಜಭಾಂಧವರ ಆರಾಧನಾ ಕೇಂದ್ರವಾಗಿದ್ದು, ಇಲ್ಲಿ ನಡೆಯುವ ಪ್ರತಿಯೊಂದು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಬಹಳ ಶೃದ್ದಾ ಭಕ್ತಿಯಿಂದ ಪಾಲ್ಗೊಳ್ಳುತ್ತಾರೆ. ಅಣ್ಣೀಗೇರಿಯ ಅಮೃತೇಶ್ವರನ ದರ್ಶನ ಮಾಡಿದರೆ ಕಾಶಿ ವಿಶ್ವ ನಾಥನ ದರ್ಶನ ಮಾಡಿದಷ್ಟೇ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆ ಇದೆ. ಕರಾವಳಿಯ ಪಂಚಗಂಗಾವಳಿಯ ತಟದಿಂದ ಬಯಲು ಸೀಮೆಯ ವಿದ್ಯಾಕಾಶಿ ಧಾರವಾಡದ ಅಣ್ಣೀಗೇರಿಯಲ್ಲಿ ಬದುಕು ಕಟ್ಟಿಕೊಂಡು ನೆಲೆಯಾಗಿರುವ ನಮ್ಮ ಸಮಾಜ ಭಾಂಧವರು ತವರೂರನ್ನು ಮಿಸ್ ಮಾಡಿಕೊಳ್ಳುತ್ತಿರುವ ಬಗ್ಗೆ ಭಾವನಾತ್ಮಕವಾಗಿ ಪ್ರತಿಕ್ರಿಯಿಸುತ್ತಾರೆ.
ಖಾರ್ವಿ ಆನ್ಲೈನ್ ಅಣ್ಣೀಗೇರಿ ಸಮಾಜ ಭಾಂಧವರನ್ನು ಗುರುತಿಸಿ ತಮ್ಮನ್ನು ಸಮಾಜದ ಮುಖ್ಯ ವಾಹಿನಿಯಲ್ಲಿ ವಿಧೇಯಿಸಿಕೊಳ್ಳುವ ಪರಿ ಅವರ ಸಂಭ್ರಮ ಖುಷಿಗೆ ಕಾರಣವಾಗಿದೆ ಪರವೂರಿನಲ್ಲಿ ಬದುಕು ಕಟ್ಟಿಕೊಳ್ಳುವುದು ಸಾಮಾನ್ಯ ಸಂಗತಿಯಲ್ಲ. ಬಾಳಿ ಬದುಕುವ ಸಾಮರ್ಥ್ಯ ವಿರಬೇಕು. ದೃಡತೆ, ಆತ್ಮವಿಶ್ವಾಸವಿರಬೇಕು ಇವೆಲ್ಲವನ್ನೂ ಅಣ್ಣೀಗೇರಿಯ ನಮ್ಮ ಸಮಾಜ ಭಾಂಧವರು ಸಿದ್ದಿಸಿಕೊಂಡಿದ್ದಾರೆ. ಜೀವನ್ಮುಖಿ ಪಯಣದ ಹಾದಿಯಲ್ಲಿ ಪ್ರಕಾಶಮಾನವಾಗಿ ಬೆಳಗುತ್ತಿದ್ದಾರೆ ಇತರರಿಗೂ ಆದರ್ಶಪ್ರಾಯರಾಗಿದ್ದಾರೆ ಪಡುವಣದ ಪಂಚಗಂಗಾವಳಿ ತಟದಿಂದ ಬಯಲುಸೀಮೆಯ ಅಮೃತೇಶ್ವರನ ಮಮತೆಯ ಮಡಿಲಲ್ಲಿ ಹನಿಹನಿಗೂಡಿ ಬೆಳೆದು ಮುಂಗಾರ ಮುಗಿಲಾಗಿ ಮೈದಳೆದು ಜೀವಜೀವನದ ಉತ್ಥಾನಗತಿಯಲ್ಲಿ ಸಾಗುತ್ತಿರುವ ಅಣ್ಣೀಗೇರಿಯ ಖಾರ್ವಿ ಸಮಾಜ ಭಾಂಧವರಿಗೆ ಖಾರ್ವಿ ಆನ್ಲೈನ್ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತದೆ.
ತಮ್ಮೆಲ್ಲರ ಬದುಕು ತಾಯಿ ಶ್ರೀ ಮಹಾಕಾಳಿಯ ಕೃಪೆಯಿಂದ ಸಂಪನ್ನಗೊಳ್ಳಲ್ಲಿ.
ಸುಧಾಕರ್ ಖಾರ್ವಿ
Editor
www.kharvionline.com
ಇದೊಂದು ಹೃದಯ ಸ್ಪರ್ಶಿ ಮಾಹಿತಿ… ಸಾಧನೆಗೆ ಸೀಮೆ ಇಲ್ಲ ಬದುಕಲು ಬಲ್ಲವನಿಗೆ ಹಲವು ದಾರಿ ಎಂಬುದು ಅಣ್ಣಿಗೇರಿಯಲ್ಲಿ ನೆಲೆಸಿರುಬರ್ವa ನಮ್ಮ ಸಮಜ ಭಾಂದವರನ್ನು ನೋಡಿ ತಿಳಿಯುತ್ತದೆ.
ಅಣ್ಣೀಗೇರಿಯ ಅಮೃತೇಶ್ವರನ ಪುಣ್ಯ ಭೂಮಿಯಲ್ಲಿ, ಅನನ್ಯತೆಯ ಮಣ್ಣಿನಲ್ಲಿ ಶ್ರೀಗಂಧದಂತೆ ತೇಯ್ದು ಸಾಧನೆಯ ಪರಿಮಳ ಸೂಸುತ್ತಿರುವ ಖಾರ್ವಿ ಸಮಾಜಭಾಂಧವರಿಗೆ ಹೃದಯಸ್ಪರ್ಶಿ ವಂದನೆಗಳು.ಪಡುವಣಕಡಲಿನ ತಟದಿಂದ ಬಯಲುಸೀಮೆಯಲ್ಲಿ ನೆಲೆಗೊಂಡು ,ನೆಮ್ಮದಿಯ ಬದುಕನ್ನು ಕಟ್ಟಿಕೊಂಡು,ಸಮಾಜದ ಹೆಸರನ್ನು ಸೂರ್ಯ ಕಾಂತಿಯಂತೆ ಪ್ರಕಾಶಿಸುತ್ತಿರುವ ಅಣ್ಣೀಗೇರಿಯ ಖಾರ್ವಿ ಸಮಾಜ ಭಾಂಧವರಿಗೆ ಅಭಿನಂದನೆಗಳು.ಈ ನಮ್ಮ ಬಂಧುಗಳನ್ನು ಪರಿಚಯ ಮಾಡಿಕೊಡುವುದರ ಮೂಲಕ ಖಾರ್ವಿ ಆನ್ಲೈನ್ ಸಾರ್ಥಕತೆ ಪಡೆದುಕೊಂಡಿದೆ.ಧನ್ಯವಾದಗಳು👍👌👍👌👍👌👋👋👋👋👋🙏🙏🙏🙏🙏
ಗೌರವಯುತವಾಗಿ ಜಗತ್ತಿನಾದ್ಯಂತ ಇರುವ ಖಾರ್ವಿ ಸಮಾಜಕ್ಕೆ ಅಣ್ಣಿಗೇರಿ ಯಲ್ಲಿ ನೆಮ್ಮದಿಯ ಜೀವನ ಸಾಗಿಸುತ್ತಿರುವ ನಮ್ಮನ್ನು ಪರಿಚಯಿಸಿದ್ದಕ್ಕೆ ಅನಂತ ಕೃತಜ್ಞತೆಗಳು.. ಖಾರ್ವಿ ಸಮಾಜವನ್ನು ಒಗ್ಗೂಡಿಸುವ ನಿಮ್ಮ ಈ ವಿನೂತನ ಪ್ರಯತ್ನ ಶ್ಲಾಘನೀಯ. ನಿಮ್ಮ ವರದಿ ಶೈಲಿ ಉತ್ತಮವಾಗಿದೆ. ನಿಮ್ಮ ಈ ಪ್ರಯತ್ನ ನಿರಂತರವಾಗಿ ಯಾವುದೇ ಅಡೆತಡೆ ಇಲ್ಲದೆ ಸಾಗಲಿ ಎಂದು ಹಾರೈಸುವೆ.
ಇದೊಂದು ವಿಶೇಷ ಮಾಹಿತಿ. ಖಾರ್ವಿ ಆನ್ ಲೈನ್ ಮೂಲಕ ನಮ್ಮವರನ್ನು ಬೆಸೆಯುವ ಈ ಕೆಲಸ ಶ್ಲಾಘನೀಯ. ಪಂಪನ ಹುಟ್ಟೂರಿನಲ್ಲಿ ಬದುಕು ಕಟ್ಟಿಕೊಂಡಿರುವ ಅವರ ಸಾಹಸಗಾಥೆ ಕೇಳಿ ತುಂಬಾ ಖುಷಿಯಾಯಿತು. ಇಂತಹ ಅಪರೂಪದ ಲೇಖನಗಳು ನಮ್ಮ ಸಮಾಜದ ಕುರಿತಾದ ಹೆಚ್ಚಿನ ಮಾಹಿತಿ ಒದಗಿಸುತ್ತದೆ. 🙏🙏🙏🙏🙏
ಸಮಾಜದ ಬಗ್ಗೆ, ಸಮಾಜದ ಜನರ ಬಗ್ಗೆ ಕಾಳಜಿ ಇದ್ದಾಗ ನಮ್ಮ ಸಮಾಜದಿಂದ ದೂರವಾಗಿ ಪರ ಊರಿನಲ್ಲಿ ಉಳಿದ ಜನರನ್ನು ಸಂದಿಸುವ ಅವಕಾಶ ಲಭಿಸುತ್ತದೆ. ಅಷ್ಟು ದೂರ ನಮ್ಮ ಜನರನ್ನು ಭೇಟಿಯಾಗಿ ಮಾತನಾಡಿಸಿದ ಸುಧಾಕರ ಕೊಟಾನ್ ರವರಿಗೆ ಧನ್ಯವಾದಗಳು
Namma samajada “”Sneha setu KHARVI ONLINE””,DHANYAVADaGALU.👍